ಶುಕ್ರವಾರ, ಮೇ 16, 2014

ಸುಂದರ ಸುಂದರ ಜೀವ(ನ)ವಿದೂ....

    "ಅಯ್ಯೋ....,ಶೀಲಕ್ಕಾ, ಈ ಪ್ರಾಯದಲ್ಲೂ ಡ್ರೆಸ್ ಮಾಡೋದ್ರಲ್ಲಿ ಎಷ್ಟು ಕಾಳಜಿ ನಿಂಗೆ....?"ಮದುವೆಯೊಂದಕ್ಕೆ ನಾನು ರೆಡಿಯಾಗ್ತಾ ಇರೋವಾಗ ಪಕ್ಕದಲ್ಲೇ ಇದ್ದು ನನ್ನನ್ನೇ ಗಮನಿಸುತ್ತಿದ್ದ ನನ್ನ ಕಸಿನ್ ಹಾಕಿದ ಪ್ರಶ್ನೆಯಾಗಿತ್ತದು. ಆ ಕ್ಷಣದಲ್ಲಿ ನನಗೇನನಿಸಿತ್ತು ಗೊತ್ತಾ? 'ಇಡೀ ಸ್ತ್ರೀ ಕುಲದ ಅನಿಸಿಕೆಯನ್ನು ಇವಳು ಧ್ವನಿಸಿದಳೇ....?'ಹೀಗೆ ಅನ್ನಿಸಲೂ ಕಾರಣವಿಲ್ಲದಿಲ್ಲ. ನಮ್ಮ ಜಮಾನಾದ ಅಂದರೆ ಈಗ ನಡುಹರೆಯದ ಆಚೀಚೆ ನಿಂತಿರುವ ಶೇಕಡಾ ಎಪ್ಪತ್ತೈದು ಹೆಂಗಸರನ್ನೂ ಸೂಕ್ಷ್ಮವಾಗಿ ಗಮನಿಸಿ ನೋಡಿ,
ನಮಗೆ  ಮದುವೆಯಾಯ್ತು...   ಮಕ್ಕಳೂ ಆದುವು .....  ಮಕ್ಕಳು ದೊಡ್ಡವರಾಗಿ ಅವರಿಗೂ ಮದುವೆಯಾಯ್ತು, ಇನ್ನೇನು ಒಂದೆರಡು ವರ್ಷಕ್ಕೆನಾವು  ಆಜ್ಜಿಯೂ ಆಗೋದೆ.... ನಾವಿನ್ನು ಹೇಗಿದ್ದರೇನು...?ಯಾರು ನೋಡಿದರೆಷ್ಟು... ಬಿಟ್ಟರೆಷ್ಟು.....?ಒಟ್ಟಿನಲ್ಲಿ ಜೀವನ ಕಳೆದರಾಯ್ತು...' ಎನ್ನುವ 'ಅಭಾವ ವೈರಾಗ್ಯಭಾವ'ವನ್ನು  ಅವರ ನೋಟಗಳು, ಮಾತುಗಳು,  ನಡೆನುಡಿಗಳು ಹೊರ ಚೆಲ್ಲುತ್ತಿರೋದನ್ ಗಮನಿಸಿದ್ದೀರಾ? ಒಂದು ಉದಾಹರಣೆ ನೋಡಿ,
ನಾನು ಹೋಗಿದ್ದ ಮದುವೆಗೆ ಆಕೆಯೂ ಬಂದಿದ್ದಳು. ನಮ್ಮದು ಕಾಲೇಜು ದಿನಗಳ ಪರಿಚಯ. ನಾನು ಡಿಗ್ರಿ ಕೊನೆಯ ವರ್ಷದಲ್ಲಿದ್ದಾಗ ಅವಳು ಪಿ. ಯು. ಕೊನೆಯ ವರ್ಷದಲ್ಲಿದ್ದಳು.ನಮ್ಮ ಲಾಂಗ್ವೇಜ್ ಕ್ಲಾಸು ಅವಳ ಕ್ಲಾಸಿನ ಪಕ್ಕದಲ್ಲೇ ಇರುವ ಕ್ಲಾಸ್ ರೂಮಲ್ಲಿ ನಡೆಯುತ್ತಿತ್ತು.   ರಟ್ಟೆಗಾತ್ರದ ಮಂಡಿಮುಟ್ಟುವ ಆಕೆಯ ಜಡೆ,ದಿನಾಲೂ ಆ ಜಡೆಯನ್ನಲಂಕರಿಸುತ್ತಿದ್ದ ಬಣ್ಣ ಬಣ್ಣದ ಗುಲಾಬಿ ಹೂಗಳು ನನ್ನನ್ನು ಆಕೆಯೆಡೆಗೆ ಸೆಳೆಯುವಂತೆ ಮಾಡಿದ್ದುವು. ಸಿಂಗಾರಿ ಪುಟ್ಟಕ್ಕನಂತೆ ದಿನಾಲೂ ನೀಟಾಗಿ ಬರುತ್ತಿದ್ದವಳನ್ನು ನಾನು ತುಂಬಾ ಇಷ್ಟಪಟ್ಟಿದ್ದೆ. ನನ್ನ ಮದುವೆಯ ನಂತರ ನಮ್ಮ ನಡುವಿನ ಸಂಪರ್ಕ ತಪ್ಪಿ ಹೋಗಿತ್ತು. ಮೂವತ್ತು ವರ್ಷಗಳ ನಂತರ ಆ ಮದುವೆಯಲ್ಲಿ ನಾವು ಅಕಸ್ಮಾತ್ ಆಗಿ ಭೇಟಿಯಾದೆವು. ಅವಳೇ ನನ್ನ ಪಕ್ಕಕ್ಕೆ ಬಂದು ಮಾತನಾಡಿಸಿದ್ದಳು,
"ಶೀಲಕ್ಕಾ...,ನಾನು ಪುಷ್ಪಾ.... ನೆನಪಾಗಲಿಲ್ಲವಾ....? ನೀವು ಈಗಲೂ ಹಾಗೇ ಇದ್ದೀರಾ....ಒಂಚೂರು ದಪ್ಪಗಾಗಿದ್ದೀರಾ.... ಅಷ್ಟೇ..."
 ಅದುವರೆಗೂ ಅವಳನ್ನು ಗುರುತಿಸಲು ವಿಫಲಳಾಗಿ ಗಲಿಬಿಲಿಗೊಂಡಿದ್ದ ನಾನು  ಅವಳು ನಗುವಾಗ  ಫಕ್ಕನೆ ಫ್ಲ್ಯಾಶ್ಬ್ಯಾಕಿಗೆ  ಹೋದೆ. ಆಕೆಯ ದಂತಪಂಕ್ತಿಯ ಮೇಲಿನ ಸಾಲಿನ ಬಲಬದಿಗೆ ಒಂದು ಗೊಗ್ಗೆ ಹಲ್ಲಿತ್ತು. ಅಂದು ಅದು ಅವಳ ಬ್ಯೂಟಿ  ಸ್ಪಾಟ್  ಕೂಡಾ ಆಗಿತ್ತು. ಆ ಹಲ್ಲು ಈಗಲೂ ಹಾಗೇ ಇತ್ತಾದುದರಿಂದ ಇವಳು 'ಅವಳೇ ' ಎಂದು ಒಪ್ಪಿಕೊಳ್ಳದೆ ವಿಧಿಯಿರಲಿಲ್ಲ. ಅಂದಿನ ಅರಳುಮಲ್ಲಿಗೆ ಪುಷ್ಪಳಿಗೂ ಇಂದಿನ ಒಣ ಸಂಪಿಗೆಯಂತಿರುವ  ಪುಷ್ಪಳಿಗೂ ಅರ್ಥಾರ್ಥ ಸಂಬಂಧವಿರಲಿಲ್ಲ.  ಸಿಲ್ಕ್ ಸೀರೆಯನ್ನೇನೋ ಉಟ್ಟಿದ್ದಳು.  ಆದರೆ ಇಸ್ತ್ರಿ ಮಾಡಿರಲಿಲ್ಲ,  ರವಿಕೆಯ ಒಳಗಿರಬೇಕಾದ ಪುಟ್ಟೆಜಮಾನ್ರು ಭುಜದ ಮೇಲ್ಭಾಗದಲ್ಲಿ ವಿರಾಜಮಾನರಾಗಿದ್ರು!ಸೆರಗಿಗೆ ಪಿನ್ ಮಾಡಿರಲಿಲ್ಲವಾದುದರಿಂದ ಹೊಟ್ಟೆ, ಸೊಂಟದ ಟಯರುಗಳು ನನ್ನನ್ನು ನೋಡಿ 'ಹಾಯ್' ಎಂದುವು. ಕೊರಳನ್ನಲಂಕರಿಸಿದ್ದ  ಮೂರ್ನಾಲ್ಕು ಭರ್ಜರಿ ಸರಗಳ ಮೇಳದಿಂದಾಗಿ ಅವುಗಳ ನಿಜ ರೂಪ ಮರೆಯಾಗಿ ಹೋಗಿದ್ದುವು. ಅಂದು ಕರಿ ನಾಗರದಂತಿದ್ದ ಜಡೆ ಇಂದು ಕರಿಬೆಕ್ಕಿನ ಸುಟ್ಟ ಬಾಲದಂತಾಗಿ ಹೋಗಿತ್ತು. ಘಂಟೆಗಳ ಕಾಲ ಬಿಸಿಲಲ್ಲಿ ನಿಂತು ಬಂದವಳಂತೆ ಮುಖ ಬಸವಳಿದು ಹೋಗಿತ್ತು. ಕೈಕಾಲುಗಳು ಬರ ಬಿದ್ದ ಭೂಮಿಯಂತೆ ನಿಸ್ತೇಜವಾಗಿದ್ದುವು. 
ಎಷ್ಟೋ ಹೊತ್ತು ಪಟ್ಟಾಂಗ ಹೊಡೆದೆವು. ಅವಳಿಗೆ  ಹಳ್ಳಿ ಜೀವನವನ್ನು ಹಳಿಯುವುದರಲ್ಲಿರುವ  ಉತ್ಸಾಹ ಬೇರೆ       
ವಿಷಯಗಳಲ್ಲಿದ್ದಂತೆ  ಕಾಣಲಿಲ್ಲ. ಕೇಳುವಷ್ಟೂ ಕೇಳಿ ಕೊನೆಗೆ ತಡೆಯಲಾರದೆ ಹೇಳಿಯೇ ಬಿಟ್ಟೆ, 
"ಅಲ್ವೇ  ಪುಷ್ಪಾ...,ಆವತ್ತು ಅಷ್ಟು ನೀಟಾಗಿದ್ದೋಳು ಈಗ ಹಳ್ಳೀಲಿ ಇದ್ದೀಯಾ ಅನ್ನೋ ಒಂದೇ ಕಾರಣಕ್ಕಾಗಿ ಈ ತರಾ ಹರಿಗಿಣಿ ಮಲ್ಲಕ್ಕನ ಹಾಗೆ ಇರೋದಾ...? ಹಳ್ಳಿಯ ಜೀವನವನ್ನ ನಾನು ಕಂಡರಿಯದವಳೇ...?ಈಗ ಸಿಟಿ ಮನೆಗಳಲ್ಲಿರೋದಕ್ಕಿಂತ ಜಾಸ್ತಿ ಸೌಕರ್ಯಗಳು ಹಳ್ಳಿ ಮನೆಗಳಲ್ಲಿರುತ್ತೆ...."ನನ್ನ ಮಾತಿನ್ನೂ ಪೂರ್ತಿಯಾಗುವ ಮೊದಲೇ ಬಡಬಡಿಸತೊಡಗಿದಳು,
"ಅಯ್ಯೋ...,ನಿಮ್ಗೇನು ಶೀಲಕ್ಕಾ..., ಪೇಟೆ ಜೀವನಾ....,ಹಸುಕರುಗಳೇ....?ತೋಟ ಗದ್ದೆಗಳೇ....?ಮನ ಬಂದಾಗ 'ಬಸವ ಎದ್ದ, ಬಾಲ ಬೀಸಿದ' ಎಂಬಂತೆ ಎಲ್ಲಿಗೆ ಬೇಕಾದರೂ ಹೋಗಿಬಿಡಬಹುದು. ನನಗಾದರೋ....?ಆಳುಕಾಳುಗಳಿಗೆ ಕೊಟ್ಟೂ.... ಅತ್ತೆ ಮಾವಂಗೆ ಸಪ್ಪೆ ಅಡುಗೆ, ಇವರಿಗೆ,ಮಕ್ಕಳಿಗೆ ಸಾದಾ ಅಡುಗೆ ಮಾಡಿಟ್ಟೂ.... ನಾಯಿ ಬೆಕ್ಕುಗಳಿಗೆ ಹಾಕೀ...,ಹಸುಗಳ ಹುಲ್ಲೂ ಅಕ್ಕಚ್ಚ್ಚೂ ಎಲ್ಲಾ ಆಗಿ ಹೊರಡೋವಾಗಾ.... ನಮ್ಮ ಹೆಣ ಬಿದ್ದೋಗಿರುತ್ತೆ. ಸೀರೇನೋ... ಚಿನ್ನಾನೋ... ಏನೋ ಒಂದಷ್ಟು ಮೈಮೇಲೆ ಹೇರಿಕೊಂಡ್ರೆ ಸಾಕಾಗಿದೆ. ಸಾಕಪ್ಪಾ ಈ ಜೀವನಾ....ಅಷ್ಟಕ್ಕೂ ಇನ್ನೂ ನನ್ನನ್ನು ಯಾರು ನೋಡ್ತಾರೆ ಹೇಳಿ...?ನಮ್ಮ ಕಾಲ ಎಲ್ಲಾ ಆಗೋಯ್ತು..... " ಹೀಗೇ ಸಾಗಿತ್ತು ಅವಳ ವಾಗ್ಝರಿ!ಇವಳೊಡನೆ ಮಾತನಾಡಿ ಸುಖವಿಲ್ಲ ಎಂದುಕೊಂಡು ಮೆಲ್ಲನೆ ಅಲ್ಲಿಂದ ಜಾರಿಕೊಂಡೆ. 
ಇಲ್ಲಿ ಅವಳಿಗೆ ತೊಂದರೆ ಎದುರಾದದ್ದು ಆಳುಕಾಳುಗಳಿಂದಲೂ ಅಲ್ಲ, ಅತ್ತೆ ಮಾವಂದಿರ ಕಡೆಯಿಂದಲೂ ಅಲ್ಲ, ನಾಯಿ ಬೇಕ್ಕುಗಳೇನು ಇವಳ ಬಳಿ ಬಂದು ತಮಗೆ ಪಂಚ ಭಕ್ಷ್ಯ ಪರಮಾನ್ನ ಮಾಡಿ ಇಕ್ಕಿದ ಮೆಲೆಯೇ ನೀನು ಹೊರಗೆ ಹೋಗು ಎನ್ನುತ್ತಾವೆಯೇ? ಅಷ್ಟಕ್ಕೂಇವು ಯಾವುದೂ ನಿಜವಾದ ಕಾರಣಗಳೇ ಅಲ್ಲ. 'ಇನ್ನು ನಮ್ಮನ್ನು ಯಾರು ನೊಡಿದರೆಷ್ಟು ...? ಬಿಟ್ಟರೆಷ್ಟು?' ಅನ್ನೋ ಆ ಮೆಂಟಾಲಿಟಿ ಇದೆಯಲ್ಲಾ ಅದುವೇ ಈ ಎಲ್ಲ ಅಸಂಬದ್ಧ ಪ್ರಲಾಪಕ್ಕೆ ಕಾರಣ. 
ನಮ್ಮ  ಒಂದು ದೊಡ್ಡ ದೌರ್ಬಲ್ಯವೇನೆಂದರೆ ಮದುವೆಯಾದ ಕ್ಷಣದಿಂದಲೇ ನಮ್ಮ ವ್ಯಕ್ತಿತ್ವವನ್ನು ಮರೆತುಬಿಡುವುದು. ಮಕ್ಕಳಾದ ಮೇಲಂತೂ.... ಉಸ್ಸಪ್ಪಾ .... ಅರೆಜೀವವಾಗಿಹೋದೆ... ಈ ಮಕ್ಕಳು ಬೆಳೆದು ದೊಡ್ಡವರಾದರೆ ಸಾಕಾಗಿದೆ.... ಸಂಸಾರವೂ ಸಾಕು, ಈ ಜೀವನವೂ ಸಾಕು ಎಂಬಂತೆ ಕುಸಿದು ಕುಳಿತವರು ನಾವು. ಶರೀರದ ಕಡೆಗೆ ನಿರ್ಲಕ್ಷ್ಯ, ವೇಷಭೂಷಣಗಳ ಬಗ್ಗೆ ಅಸಡ್ಡೆ,ವೈಯಕ್ತಿಕ ಒಪ್ಪ ಓರಣದ ಬಗ್ಗೆ ಜಾಣ ಕುರುಡು...., ಇಂತಹ  ಹಲವು ಸ್ವಯಂಕೃತಾಪರಾಧಗಳಿದ್ದರೂ ಅವುಗಳನ್ನು ಒಪ್ಪಿಕೊಳ್ಳದೆ ನಮ್ಮ ಕುಟುಂಬದ ಸದಸ್ಯರೊಂದಿಗೆ ನಮಗಿರುವ ಜವಾಬ್ದಾರಿಗಳನ್ನೇ ಕುಂಬಳಕಾಯಷ್ಟು ಹಿಗ್ಗಿಸಿ ಹೇಳುತ್ತಾ ನಮ್ಮೆಲ್ಲಾ ಕುಂದು ಕೊರತೆಗಳಿಗೆ ಅವರೇ ಕಾರಣ ಎಂದು ಬಿಟ್ಟು ನಿರಾಳರಾಗಿಬಿಡುತ್ತೇವೆ.
ಮನಸ್ಸಿದ್ದರೆ ಮಾರ್ಗವೂ ಇದೆ. ನಮ್ಮ ವಯಸ್ಸಿನ ಪ್ರತಿ ಹಂತಕ್ಕೂ ಅದರದ್ದೇ ಆದ ಡಿಗ್ನಿಟಿ ಇದೆ.'ಇನ್ನು ನಮಗೆ ಆಗಬೇಕಾದುದೇನೂ ಇಲ್ಲ ...' ಎಂಬ ದೃಷ್ಟಿಕೋನವೇ ಸರಿ ಅಲ್ಲ. ನಾವು ಇನ್ನೊಬ್ಬರಿಗೆ ಬೇಕಾಗಿ ಬುದುಕುತ್ತಾ ಇಲ್ಲ. ನಮ್ಮ ಬದುಕು,ನಮ್ಮ ದೇಹ, ನಮ್ಮ ಮನಸ್ಸು,ಅದರೊಳಗಿನ ಭಾವನೆಗಳು ಎಂದಿದ್ದರೂ ನಮ್ಮವೇ. ಉಕ್ಕುವ ಯೌವ್ವನ ಇದ್ದರೆ  ಮಾತ್ರ  ಜೀವನದಲ್ಲಿ ಸುಖ, ಸಂತೋಷ ಎಲ್ಲಾ.... ಅದು ಮುಗಿದೊಡನೆ ಎಲ್ಲವೂ ಮುಗಿದಂತೆ... ಇನ್ನು ಹೇಗೋ ಒಟ್ಟಿನಲ್ಲಿ ಆಯಸ್ಸು ಮುಗಿದರಾಯ್ತು  ಎಂದುಕೊಳ್ಳುವ ಬದಲು ಕೆಲವು ವಿಷಯಗಳಲ್ಲಿ  ನಮ್ಮನ್ನು  ನಾವೇ  ಪಳಗಿಸಿಕೊಳ್ಳಲು ಕಲಿಯಬೇಕು.ಮುಂಜಾನೆ ಎದ್ದು ಮನೆಯ ಸದಸ್ಯರಿಗಾಗಿ ಅಡುಗೆ ತಿಂಡಿ ಮಾಡುವುದು ಎಷ್ಟು ಕಡ್ಡಾಯವೋ ಒಂದರ್ಧ ಘಂಟೆ ಮೊದಲೇ ಎದ್ದು ವ್ಯಾಯಾಮ,ಯೋಗ, ಧ್ಯಾನ ಇತ್ಯಾದಿಗಳನ್ನು ಮಾಡುವುದೂ ಅಷ್ಟೇ ಕಡ್ಡಾಯವೆಂದು ಮನಸ್ಸಿಗೆ ತಾಕೀತು  ಮಾಡಿಕೊಳ್ಳಬೇಕು, ಈಗ ಎಷ್ಟೆಷ್ಟು ಚಿಕ್ಕ ಊರುಗಳಲ್ಲೂ ಬ್ಯೂಟಿಪಾರ್ಲರುಗಳಿರುತ್ತವೆ. ತಿಂಗಳಿಗೊಮ್ಮೆಯೋ ಎರಡು ತಿಂಗಳಿಗೊಮ್ಮೆಯೋ ಅಲ್ಲಿಗೆ ಭೇಟಿ ನೀಡುವುದಕ್ಕೂ ಆದ್ಯತೆ ಇರಲಿ. 'ಮನೆಕೆಲಸಗಳೆಡೆಯಲ್ಲಿ ಯಾವುದಕ್ಕೂ ಬಿಡುವೇ ಇಲ್ಲಾ....ಉಸಿರಾಡಲೂ ಟೈಮೇ ಇಲ್ಲಾ...'ಎಂದೆಲ್ಲಾ ಗೊಣಗುತ್ತಲೇ ಘಂಟೆಗಳ ಕಾಲ ಟಿ. ವಿ.  ಸೀರಿಯಲುಗಳನ್ನು ನೋಡುತ್ತಿರುತ್ತೇವೆ,  ಅಲ್ವೇ...?ಮದುವೆಗೆ ಮೊದಲು ನಮಗೆ ಹಲವು ಹವ್ಯಾಸಗಳಿರುತ್ತವೆ. ಉದಾ:-ಹೊಲಿಗೆ,ಬರವಣಿಗೆ,ನೃತ್ಯ, ಸಂಗೀತ ಇತ್ಯಾದಿ. ಮದುವೆಯ ನಂತರ ಅದರ ಬಗ್ಗೆ ಯಾರಾದರೂ ಮಾತನಾಡಿದರೆ 'ಹಾಗೆಂದರೇನು?' ಎಂಬಂತೆ ಮುಖ ಮಾಡಿ ಬಿಮ್ಮನೆ ಕುಳಿತುಕೊಳ್ಳುತ್ತೇವೆ. ('ಅಯ್ಯಪ್ಪ.... ,ಈ ಹೆಂಗಸು ಏನು ಹೇಳ್ತಿದ್ದಾಳೆ ?ನಮ್ಮ ಕಷ್ಟ ನಮಗೇ ಗೊತ್ತು.ಕಾಗದ ಪೆನ್ನು ಹಿಡಿದುಕೊಂಡು ರೀಲುಗಟ್ಟಲೆ ಬರೆಯುವ ಹಾಗಲ್ಲ ಅದು'ಎಂದುಕೊಳ್ಳಬೇಡಿ. ನಾನೂ ನನ್ನ ಗಂಡ,ಮನೆ,ಮಕ್ಕಳು,ಆಸ್ತಿ ಇತ್ಯಾದಿಗಳ ಜವಾಬ್ದಾರಿಗಳನ್ನು ನಿಭಾಯಿಸಿಕೊಂಡೇ ನನ್ನ ಹವ್ಯಾಸಗಳನ್ನೂ ಉಳಿಸಿಕೊಂಡಿದ್ದೀನಿ.)ಇನ್ನೊಂದು ಮುಖ್ಯವಾದ ವಿಷಯವನ್ನು  ನಾವು ಅರಿತಿರಬೇಕು.  ಮಾನವನೆಂದರೆ  ಮೂಲತ: ಅವನು ಅಭ್ಯಾಸದ ಬಲಿಪಷು. ಯಾವುದೇ ಅಭ್ಯಾಸವಿರಲಿ ಸತತವಾಗಿ ಮೂರುವಾರಗಳ ಕಾಲ ಹಠ ಹಿಡಿದಂತೆ ಮಾಡಿನೋಡಿ. ಮುಂದೆ ನಿಮ್ಮ ಮನಸ್ಸು ಚಂಡಿ ಹಿಡಿಯುದಿಲ್ಲ. ಸಾಧು ಹಸುವಿನಂತೆ ನೀವು ಒಯ್ದಲ್ಲಿಗೆ ಬರುತ್ತೆ. 
 ನಾವು ಪ್ರತಿಯೊಬ್ಬರೂ ಹೇಮಾಮಾಲಿನಿಯೋ ಶ್ರೀದೇವಿಯೋ ಆಗಬೇಕಿಲ್ಲ. ಆದರೆ ನಾಲ್ಕು ಮಂದಿ ನಮ್ಮನ್ನು ಗಮನಿಸುವಾಗ ನಮ್ಮ ಆತ್ಮ ವಿಶ್ವಾಸ ವೃದ್ಧಿಯಾಗುವಂತಹ ಮಾತುಗಳು ಅವರಿಂದ ಬಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ?ಉದಾ ಹರಣೆ ಹೇಳುವುದಿದ್ದರೆ ಐವತ್ತರ ಆಸುಪಾಸಿನ ಮಹಿಳೆಯೋರ್ವಳು ಸಮಾರಂಭವೊಂದರಲ್ಲಿರುವಾಗ  'ಒಹ್... ಆಕೆ ಎಷ್ಟು   ಡಿಗ್ನಿಫೈಡ್ ಇದ್ದಾರಲ್ಲ?' ಎಂಬ ಮೆಚ್ಚುಗೆಯ ನುಡಿ ಸರೀಕರಿಂದ  ಕೇಳುವಾಗ ಆಕೆಗೆಷ್ಟುಸಂತಸವಾಗಬಹುದು?ಊಹಿಸಿ ನೋಡಿ. ಇಂತಹ ಹಲವು ಪುಟ್ಟ ಪುಟ್ಟ ಜೇನ್ನುಡಿಗಳೇ ಅಲ್ಲವೇ ನಮ್ಮ ಲೈಫ಼ನ್ನ ಲೈವ್ಲಿಯಾಗಿರಿಸುವುದು?ನಮ್ಮನ್ನು ನಾವು ಸಮಾಜದೆದುರು ಹೇಗೆ ಪ್ರೆಸೆಂಟ್ ಮಾಡ್ತೀವಿ ಅನ್ನೋದರ ಮೇಲೆ ನಮ್ಮ ಡಿಗ್ನಿಟಿ ಅಡಗಿರುತ್ತೆ.  ಯೌವ್ವನ ಕಾಲವು  ಧುಮ್ಮಿಕ್ಕುವ ಜಲಪಾತವಾದರೆ  ನಡು ಹರೆಯವೆನ್ನುವುದು ಪ್ರಶಾಂತವಾದ ಸಾಗರದಂತೆ. ನೆನಪಿಡಿ ಸಾಗರವೆಂದೂ ಜಲಪಾತವಾಗಲಾರದು. ಸಾಗರದ ಡಿಗ್ನಿಟಿ ಇರುವುದೇ ಅದರ ಗಂಭೀರತೆಯಲ್ಲಿ. ಸೋ... ನಾವೂ ಅದನ್ನು ನೆನಪಿಟ್ಟುಕೊಂಡು ವೇಷಭೂಷಣ,ನಡೆನುಡಿಯನ್ನು ರೂಡಿಸಿಕೊಳ್ಳಬೇಕು. ನಾನು ಆ ಪ್ರಯತ್ನದಲ್ಲಿರುವಾಗಲೇ ನನ್ನ ಕಸಿನ್ ಮೇಲಿನಂತೆ ಉದ್ಗರಿಸಿದ್ದು.
ಇನ್ನೊಂದು ವಿಷಯ ನೀವು ಗಮನಿಸಿದ್ದೀರಾ?ಇಂದಿನ ಯುವತಿಯರು ಮದುವೆಯಾದ ಬಳಿಕವೂ slim & trim, fresh& beauty ಆಗಿರಲು ಏನೆಲ್ಲಾ ಕಸರತ್ತು ಮಾಡ್ತಿರ್ತಾರೆ, ಗೊತ್ತಲ್ಲ?ಅಂತಹ ಮಕ್ಕಳ ಅಮ್ಮಂದಿರಾದ ನಾವು  ಅವರನ್ನು ನೋಡಿಯಾದರೂ  ಅಲ್ಪ ಸ್ವಲ್ಪ  ಪಾಠ ಕಲಿಯಬೇಡವೇ?ನಾವು neat & tidy ಆಗಿರೋದನ್ನ ನಮ್ಮ  ಮಕ್ಕಳು ಖಂಡಿತಕ್ಕೂ ಇಷ್ಟಪಡ್ತಾರೆ ಅನ್ನೋದು ನನ್ನ ಸ್ವಂತ ಅನುಭವವೂ ಹೌದು. ನಾನು ಚಿಕ್ಕದಿರೋವಾಗ ನನ್ನ ಅಜ್ಜಿ ಹೊಸ ತಲೆಮಾರಿನ ಹೆಂಗಸರನ್ನು ಈ ರೀತಿ ವಿಶ್ಲೇಶಿಸುತ್ತಿದ್ದರು,
'ಒಂದು ಹೆತ್ತಳು.... ಜಗ್ಗು ಬಿದ್ದಳು,
ಎರಡು ಹೆತ್ತಳು.... ಮುದುಕಿಯಾದಳು, 
ಮೂರು ಹೆತ್ತಳು..... ಸತ್ತಳು'.ಅಂದರೆ ಮಾಡರ್ನ್ ಹೆಂಗಸರು ತೀರಾ ಡೆಲಿಕೇಟ್ ಎನ್ನುವುದು ಅವರ ಮಾತಿನ ಮರ್ಮವಾಗಿತ್ತು.ನಾವು ಅದನ್ನು ಹೀಗೆ ಮಾಡಿಕೊಳ್ಳೋಣ, 
'ಒಂದು ಹೆತ್ತೆವು.... ಪ್ರೌಢರಾದೆವು,
ಎರಡು ಹೆತ್ತೆವು.... ಮಹಿಳೆಯಾದೆವು,
ಮೂರು ಹೆತ್ತರೇ... ಮೂರ್ಲೋಕ ಅರಿತೇವು'.



               

           

4 ಕಾಮೆಂಟ್‌ಗಳು: