"...... ನಾಳೆ ನನ್ನ ಸ್ನೇಹಿತೆ ಬೀನಾ ಮನೆಯಲ್ಲಿ ಪೈಂಟಿಂಗ್ ಎಕ್ಸಿಬಿಷನ್ ಇದೆ. ನೀನೂ ಬಾ..... ಜೊತೆಯಲ್ಲಿ ಹೋಗಿ ನೋಡಿ ಬರೋಣ..."ಎಂದು ಮಂಗಳೂರಿನ ಗೆಳತಿ ಉಷಾಗೆ ಕರೆ ಮಾಡಿ ಹೇಳಿದೆ. ಕಲೆ, ಕಲಾವಿದರ ಬಗ್ಗೆ ಅಪಾರ ಆಸಕ್ತಿ, ಗೌರವ ಇಟ್ಟುಕೊಂಡಿದ್ದ ಆಕೆ ತಕ್ಷಣ ಒಪ್ಪಿದಳು. ಬೀನಾ ದಕ್ಷಿಣ ಕೇರಳದಿಂದ ಕಾಸರಗೋಡಿಗೆ ಬಂದು ನೆಲೆಸಿದವಳು. ಎರಡು ವರ್ಷಗಳ ಹಿಂದೆ ನಮ್ಮೂರಿನ ಮುನಿಸಿಪಲ್ ಲೈಬ್ರೆರಿಯಲ್ಲಿ ನಮ್ಮದು ಮೊದಲ ಭೇಟಿಯಾಗಿತ್ತು. ಸಮಾನ ಆಸಕ್ತಿಗಳಿರುವ ನಾವು ಯಾವಾಗಲಾದರೊಮ್ಮೆ ಲೈಬ್ರೆರಿಯ ಹೊರಗಿನ ಕಲ್ಲುಬೆಂಚಿನ ಮೇಲೆ ಒಂದರ್ಧ ಘಂಟೆ ಕುಳಿತು ವಿಚಾರ ವಿನಿಮಯ ಮಾಡಿಕೊಳ್ಳುವ ಅಭ್ಯಾಸವಿತ್ತು. ಅವಳು ರಚಿಸಿದ ವ್ಯಕ್ತಿಚಿತ್ರಗಳ ಫೋಟೋಗಳನ್ನ ನನಗೆ ತೋರಿಸುತ್ತಿದ್ದಳು. ಅವುಗಳಲ್ಲಿ ಬಳಸಿದ ಬಣ್ಣಗಳ ಸಂಯೋಜನೆ, ಭಾವನೆಗಳ ಅಭಿವ್ಯಕ್ತಿ,ಆಂಗಿಕ ಭಾಷೆಗಳ ನಿಖರತೆಗಳು ಅತ್ಯಂತ ನೈಜವಾಗಿ ಮೂಡಿ ಬಂದಿದ್ದುವು. ಪೈಂಟಿಂಗ್ ಬಗ್ಗೆ ಅವಳು ಮಾತನಾಡುತ್ತಿದ್ದರೆ ನನ್ನ ಮೈಯೆಲ್ಲಾ ಕಿವಿಗಳಾಗುತ್ತಿದ್ದುವು. ತನ್ನ ರಚನೆಗಳನ್ನೆಲ್ಲಾ ಒಗ್ಗೂಡಿಸಿ ಒಂದು ಎಕ್ಸಿಬಿಶನ್ ಏರ್ಪಡಿಸುವ ಉದ್ದೇಶವಿದೆ ಎಂದೂ ಹೇಳಿದ್ದಳು.ಕೆಲವು ದಿನಗಳಿಂದ ನಾನು ಲೈಬ್ರೆರಿಗೆ ಹೋಗಿರಲಿಲ್ಲವಾದುದರಿಂದ ಮೊನ್ನೆ ಅವಳೇ ನಮ್ಮ ಮನೆಗೆ ಬಂದು ಏಕ್ಸಿಬಿಶನ್ನಿನ ಕರೆಯೋಲೆ ಕೊಟ್ಟು ಕಲೆಯಲ್ಲಿ ಆಸಕ್ತಿ ಇರುವವರನ್ನೂ ಜೊತೆಯಲ್ಲಿ ಕರೆದುತರಬೇಕೆಂದು ಒತ್ತಾಯ ಪೂರ್ವಕ ಹೇಳಿ ಹೋಗಿದ್ದಳು.
ಯಾವುದೇ ಕಲೆಯನ್ನಾದರೂ ಮನ:ಪೂರ್ವಕ ಆಸ್ವಾದಿಸಬೇಕೆಂದರೆ ಅವಸರ ಸಲ್ಲದು. ಅದರಲ್ಲೂ ಚಿತ್ರಕಲೆಯಲ್ಲಿರುವ ಸೂಕ್ಷ್ಮ,ಅಂತರ್ಗತ ವಿವರಗಳು, ಭಾವನೆಗಳು ಇತ್ಯಾದಿಗಳನ್ನು ಅರ್ಥೈಸಿ ಮುದಗೊಳ್ಳಬೇಕಾದರೆ ಸಮಯದ ಪರಿಮಿತಿಯನ್ನು ಹಾಕಿಕೊಳ್ಳಲೇಬಾರದು. ಆದುದರಿಂದಲೇ ಉಷಾಗೆ ಬೆಳಗ್ಗೆಯೇ ನಮ್ಮ ಮನೆಗೆ ಬರಬೇಕೆಂದು ತಾಕೀತು ಮಾಡಿದ್ದೆ.ಎಂಟು ಘಂಟೆಯ ಹೊತ್ತಿಗೆ ಅವಳು ನಮ್ಮಮನೆಗೆ ತಲುಪಿದಳು. ಬೇಗ ಬೇಗನೇ ಕಾಫಿ ತಿಂಡಿ ಪೂರೈಸಿ ಹೊರಟೆವು. ಬೀನಾ ಮನೆಯಲ್ಲಿ ಜನಸಂದಣಿ ಸೇರುವ ಮೊದಲೇ ನಾವು ಅಲ್ಲಿರಬೇಕೆಂಬುದು ನನ್ನ ಮನದಿಂಗಿತವಾಗಿತ್ತು. ಮಾತ್ರವಲ್ಲ ಉಷಾ ಮಂಗಳೂರಿಗೆ ವಾಪಾಸಾಗುವಾಗ ರಾತ್ರಿಯಾಗಬಾರದಲ್ಲ? ಬೀನಾ ಅಪ್ಪಟ ಮಲೆಯಾಳಿಯಾಗಿದ್ದರೆ ಉಷಾ ಅಚ್ಚ ಕನ್ನಡತಿ. ಬೀನಾ ನಮ್ಮೂರಿಗೆ ಬಂದು ಐದಾರು ವರ್ಷಗಳಾದರೂ ಕನ್ನಡ ಕಲಿತಿರಲಿಲ್ಲ. ಉಷಾಗೆ ಮಲೆಯಾಳಂ ಕಲಿಯುವ ಅಗತ್ಯವೇ ಇರಲಿಲ್ಲ. ಬೀನಾಳ ವಿಶೇಷತೆ ಏನೆಂದರೆ ಇಂಗ್ಲಿಷ್ ಸಾಹಿತ್ಯದ ಪದವೀಧರೆಯಾಗಿದ್ದರೂ ಅವಳೆಂದೂ ಇಂಗ್ಲಿಷಲ್ಲಿ ಮಾತನಾಡಲು ಉತ್ಸಾಹ ತೋರಿಸುತ್ತಿರಲಿಲ್ಲ. ಉಷಾ,ಬೀನಾರ ನಡುವೆ ಭಾಷಾ ಸಮಸ್ಯೆ ಉಂಟಾದರೆ....?ಎಂಬುದೊಂದು ಚಿಕ್ಕ ಅಳುಕು ನನ್ನ ಮನದಲ್ಲಿ ಇದ್ದೇ ಇತ್ತು. ಆದರೇನಂತೆ....?ದುಭಾಷಿಯ ಪಾತ್ರಕ್ಕೆ ನಾನಿದ್ದೇನಲ್ಲ ಎಂದುಕೊಂಡೆ. ಅಷ್ಟಕ್ಕೂ ಕಲೆಗೆ ದೇಶ ಭಾಷೆಗಳ ಹಂಗೇಕೆ...? ಎಂದು ನನ್ನನ್ನೇ ನಾನು ಸಮಾಧಾನಿಸಿಕೊಂಡೆ. ನಮ್ಮ ಮನೆಯಿಂದ ಬೀನಾ ಮನೆಯವರೆಗೂ ಉಷಾಳೊಡನೆ ಆಕೆಯ ಪೈಂಟಿಂಗುಗಳ ಬಗ್ಗೆ ಹೊಗಳಿದ್ದೇ ಹೊಗಳಿದ್ದು. ಆಕೆಯ ಕಲಾ ಪ್ರದರ್ಶನವನ್ನು ನೋಡದಿದ್ದರೆ ಜೀವನವೇ ವ್ಯರ್ಥ ಎನ್ನುವ ಭಾವನೆ ಉಷಾಳಲ್ಲೂ ಮೂಡಿರಬೇಕು. ಅತ್ಯುತ್ಸಾಹದಿಂದ ನನ್ನೊಂದಿಗೆ ಹೆಜ್ಜೆ ಹಾಕಿದಳು."
ಬೀನಾ ನಮ್ಮನ್ನು ಆದರದಿಂದ ಬರಮಾಡಿಕೊಂಡಳು. ಉಷಾ ಬೀನಾರ ಪರಸ್ಪರ ಪರಿಚಯ ನನ್ನ ಮಧ್ಯಸ್ತಿಕೆಯಲ್ಲಿ ನಡೆಯಿತು. " ನೀ ಇವರೇ ವಿಳಿಚ್ಚುಗೊಂಡು ರಾವಿಲನ್ನೇ ವನ್ನದು ವಳರೆ ನನ್ನಾಯಿ....ಪೈಂಟಿಂಗ್ಸ್ ಒಕ್ಕೆ ಸಾವಗಾಷಮಾಯಿ ನೋಕಾಮಲ್ಲೊ ...? ಒರು ಮಿನಿಟ್ ಇರಿಕ್ಕೂ..... ನಾನ್ ಇಪ್ಪೋ ವೆರಾಂ....." (ನೀನು ಇವರೊಂದಿಗೆ ಬೆಳಗ್ಗೆಯೇ ಬಂದುದು ಬಹಳ ಒಳ್ಳೆಯದಾಯಿತು. ಪೈಂಟಿಂಗ್ಸ್ ಗಳನ್ನ ನಿಧಾನಕೆ ನೋಡಬಹುದಲ್ಲ.... ಒಂದು ನಿಮಿಷ ಕುಳಿತಿರಿ.... ಈಗ ಬಂದೆ...)
ಎನ್ನುತ್ತಾ ಒಳ ನಡೆದಳು. ದಾರಿ ತಪ್ಪಿ ಕಂಗೆಟ್ಟ ಮಗುವಿನ ಮುಖಭಾವದಲ್ಲಿ ಕುಳಿತಿದ್ದ ಉಷಾಳನ್ನು ನೋಡಿ ಅಯ್ಯೋ ಎನಿಸಿತು. ಬೀನಾ ಹೇಳಿದುದನ್ನು ಭಾಷಾಂತರಿಸಿ ಹೇಳಿ ಮುಗಿಸುವುದರೊಳಗೆ ಬೀನಾ ಹೊರಬಂದಳು. ಆಕೆಯ ಕೈಯ್ಯಲ್ಲಿ ಬಾಳೆಲೆಯ ಚೂರೊಂದಿತ್ತು.
'ದೇವಸ್ಥಾನಕ್ಕೆ ಹೋಗಿ ಪುಷ್ಪಾಂಜಲಿ ಮಾಡಿಸಿ ಬಂದೆ.....ಒಳ್ಳೆಯ ಕೆಲಸವೊಂದರ ಪ್ರಾರಂಭಕ್ಕೆ ದೇವರ ಆಶೀರ್ವಾದವೂ ಬೇಕಲ್ಲಾ...? ನೀವು ಬೆಳೆಗ್ಗೆಯೇ ಬಂದೀರಾದುದರಿಂದ ನಿಮಗೂ ಪ್ರಸಾದ ಸಿಕ್ಕುವಂತಾಯ್ತು.... ತಗೊಳ್ಳಿ ..... ತಗೊಳ್ಳಿ..."
ಎಂದು ಅವಳು ಮಲೆಯಾಳಂ ಭಾಷೆಯಲ್ಲಿ ಹೇಳಿದುದನ್ನು ಉಷಾಗೆ ಕನ್ನಡದಲ್ಲಿ ಹೇಳಿದೆ.
ದೈವ ಭಕ್ತೆ ಉಷಾ ಸುಪ್ರಸನ್ನಳಾಗಿ ಬೀನಾ ಚಾಚಿ ಹಿಡಿದ ಪ್ರಸಾದದಿಂದ ಗಂಧ,ಕುಂಕುಮವನ್ನು ಆಯ್ದು ಹಣೆಗಿಟ್ಟುಕೊಂಡಳು.
ಇನ್ನೇನು ಆ ಬಾಳೆಲೆಯಿಂದ ಹೂವೊಂದನ್ನು ಆರಿಸಿಕೊಳ್ಳಬೇಕೆಂದಿರುವಾಗಲೇ ಬೀನಾ ತಾನೇ ತುಲಸಿಕುಡಿಯೊಂದನ್ನು (ಅದೂ ಹೂವು ಸಮೇತವಾಗಿರುವ) ಆಯ್ದು ಉಷಾ ಕೈಗಿತ್ತಳು. ('ಛೆ...... ಇದೇನಾಗಿ ಹೋಯ್ತು......? ಉಷಾಳನ್ನು ಕರೆತಂದುದು ತಪ್ಪಾಯಿತೇನೋ.....?.' ಎಂದುಕೊಂಡೆ) ಕಳ್ಳ ನೋಟದಿಂದ ಉಷಾ ಮುಖವನ್ನು ಗಮನಿಸಿದೆ. ಅವಳ ಮುಖವಾದರೋ ಬೀನಾ ಉಟ್ಟ ಕೇರಳ ಸೀರೆಯ ಬಣ್ಣಕ್ಕೆ ತಿರುಗಿತ್ತು.ಆಗಲೇ ಕಣ್ಣಂಚಿನಲ್ಲಿ ನೀರು ಮಡುಗಟ್ಟತೊಡಗಿತ್ತು. ಇಲ್ಲಿ ಆದ ಪ್ರಮಾದವಾದರೂ ಏನು ಗೊತ್ತೇ? ಮಲೆಯಾಳಿ ಹೆಂಗಸರು ಪ್ರಸಾದ ರೂಪದಲ್ಲಿ ತುಳಸೀದಳ ದೊರೆತರೆ ಅದು ತಮ್ಮ ಭಾಗ್ಯವೆಂದು ತಿಳಿಯುತ್ತಾರೆ. ಶುಭ ಸಂದರ್ಭಗಳಲ್ಲಂತೂ ತಮ್ಮ ಮುಡಿಯಲ್ಲಿ ತುಳಸಿ ಕುಡಿಯೊಂದನ್ನು ಸಿಗಿಸಿಯೇ ಇರುತ್ತಾರೆ. ಅದೇ ನಮ್ಮ ದಕ್ಷಿಣ ಕನ್ನಡದಲ್ಲಿ ಮುತ್ತೈದೆಯರು ತುಳಸಿದಲವನ್ನು ಮುಡಿಯುವುದೇ ಇಲ್ಲ. ಅದು ಅಮಂಗಳಕರವೆಂಬ ಪರಿಗಣನೆ ಎಷ್ಟೋ ಕಾಲದಿಂದ ಆಚಾರವಾಗಿ ನಡೆದುಕೊಂಡು ಬಂದಿದೆ. ಹಾಗಿರುವಾಗ ದೇವರಲ್ಲಿ ಅಪರಿಮಿತ ಶ್ರಧ್ಧೆ ,ಭಕ್ತಿ ಇರುವ ಉಷಾಗೆ ಬೆಳ್ಳಂ ಬೆಳಗ್ಗೆ ಪ್ರಸಾದವೆಂದು ತುಳಸಿ ಕೊಟ್ಟರೆ ಹೇಗಾಗಬೇಡ?(ನಮ್ಮಲ್ಲಿ ಕೆಲವು ಕಡೆ ಪೂಜೆಗೂ ಹೂವು ಇರುವ ತುಳಸಿಯನ್ನು ಉಪಯೋಗಿಸುವುದಿಲ್ಲ ) 'ಎಲ್ಲಾ ಬಿಟ್ಟ ಭಂಗಿ ನಟ್ಟ ಎಂಬಂತೆ ಇವಳ ಮನೆಗೆ ಬಂದು ಇಂತಹ ಅಪಶಕುನವನ್ನು ಮೈಮೇಲೆ ಎಳೆದು ಹಾಕಿಕೊಂಡಂತಾಯಿತಲ್ಲಾ' ಎಂಬ ಮುಖಭಾವದೊಂದಿಗೆ ಉಷಾ ಚಡಪಡಿಸುತ್ತಿದ್ದರೆ ಪ್ರಸಾದದಲ್ಲಿ ಅತ್ಯುತ್ತಮವಾದುದನ್ನು ಅತಿಥಿಗೆ ಕೊಟ್ಟೆ ಎನ್ನುವ ಕೃತಾರ್ಥ ಭಾವ ಬೀನಾಳ ಮುಖದಲ್ಲಿ! ಉಷಾಗೆ ಮಲೆಯಾಳಿಗಳ ಆಚಾರಗಳನ್ನು ಮನದಟ್ಟು ಮಾಡಿಸಿ ಆಕೆಯ ಕಣ್ಣಂಚಿನ ನೀರನ್ನಿಂಗಿಸಿ ಬೀನಾಗೆ ಪರಿಸ್ತಿತಿಯನ್ನು ವಿವರಿಸುವಷ್ಟರಲ್ಲಿ
ನನ್ನ ಗಂಟಲ ನೀರು ಆರಿಹೋಗಿತ್ತು!ನಮ್ಮ ಆಚಾರಗಳ ಬಗ್ಗೆ ಕೇಳಿ ತಿಳಿದ ಬೀನಾ ಮುಖದಲ್ಲಿ ಯು.ಎಫ್ .ಓ. ಗಳ ಕಥೆ
ಕೇಳುವಂತಹ ಭಾವವಿತ್ತು!
"ಬೀನಾ.....,ಎಲ್ಲಿ ನಿನ್ನ ಎಕ್ಸಿಬಿಶನ್ ನೋಡೋಣ್ವಾ.....?" ಎನ್ನುತ್ತಾ ನಾನೇ ಆಕೆಯನ್ನು ಎಚ್ಚರಿಸಬೇಕಾಯ್ತು . ಬೀನಾ
ನಮ್ಮಿಬ್ಬರನ್ನೂ ಮಹಡಿಗೆ ಕರೆದೊಯ್ದಳು. ಟೆರೇಸಲ್ಲಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದಳು.
"ಏರೆಂಜ್ಮೆಂಟ್ ಬಹಳ ಚೆನ್ನಾಗಿದೆ..."ನಾನು ಹೇಳಿದಾಗ ಉಷಾ ಅನ್ಯಮನಸ್ಕಳಾ ಗಿಯೇ ಇದ್ದಳು. ಬಿಸಿಲು ಬೀಳದಂತೆ ಟೆರೇ
ಸಿನ ಮೇಲ್ಭಾಗಕ್ಕೆ ಛಾವಣಿ ಹೊದೆಸಿದ್ದರು. ಹೊರಗಿನಿಂದ ಬೀಸಿ ಬರುತ್ತಿದ್ದ ತಂಗಾಳಿ,ಬಿಸಿಲು ಮಚ್ಚಿನ ಮೂಲೆಗಳಲ್ಲಿಟ್ಟ ದೊಡ್ಡ ದೊಡ್ಡ ಹೂ ಕುಂಡಗಳು, ಮಧ್ಯಭಾಗದಲ್ಲಿ ಮಾತ್ರ ವಿಶಿಷ್ಟ ವಿನ್ಯಾಸದಲ್ಲಿ ಅಣಿಗೊಳಿಸಿದ ಚಿತ್ರಪಟಗಳು ಬೀನಾಳ ಉತೃಷ್ಟ ಅಭಿರುಚಿಯನ್ನು ಎತ್ತಿತೋರಿಸುವಂತಿದ್ದುವು. ಮರವೊಂದನ್ನು ಆತು ನಿಂತು ಯಾರನ್ನೋ ನಿರೀಕ್ಷಿಸುವಂತೆ ಕಾತರದಿಂದ ನಿಂತಿದ್ದ ಯುವತಿಯೋರ್ವಳ ಭಾವಚಿತ್ರವನ್ನು ನಾನು ತುಂಬಾ ಮೆಚ್ಚಿದೆ. ಬೀನಾ ತನ್ನ ಪ್ರತಿಯೊಂದು ರಚನೆ, ಅದರ ಹಿನ್ನೆಲೆ ಇತ್ಯಾದಿಗಳ ಬಗ್ಗೆ ಭಾವಪೂರ್ಣವಾಗಿ ಮಾತನಾಡುತ್ತಿದ್ದರೆ ಉಷಾ ಮೌನವಾಗಿ ಒಂದೊಂದೇ
ಚಿತ್ರಗಳನ್ನು ನೋಡುತ್ತಾ ಟೆರೇಸಿನ ಇನ್ನೊಂದು ಬದಿಗೆ ಹೋದಳು.
"ಏ.... ಸುಮ್ಮೀ..... ನೋಡೇ.... ಎಂಥಾ ಚಂದದ ಮೊಲಗಳು..... ಒಂದಲ್ಲ....,ಎರಡಲ್ಲ...,ಮೂರು ಕಣೇ....., ಒಹ್.... ಎಷ್ಟೊಂದು ಬಿಳಿ ಬಿಳಿ..... ಮುದ್ದು ಮುದ್ದು ......"ಉಷಾ ಕಿರುಚಿದಂತೆ ಕೂಗಿ ಹೇಳಿದಾಗ ನಾನೂ ಅತ್ತ ಕಡೆಗೆ ಧಾವಿಸಿದೆ. ಹತ್ತಿಯ ಪುಟ್ಟ ಮೂಟೆಗಳು ನಮ್ಮೆಡೆಗೆ ಉರುಳಿ ಬರುತ್ತಿರುವಂತೆ ತೋರುತ್ತಿತ್ತು. ಇದುವರೆಗೂ ಇವು ಎಲ್ಲಿದ್ದುವೋ...?
ಸುಂದರ, ಸ್ವಚ್ಛ,ಸುಕೋಮಲ ಪ್ರಾಣಿಗಳು ಉಷಾಳ ದು:ಖವನ್ನು ಹೊಡೆದೋಡಿಸಿದ್ದುವು. ಪ್ರಾಣಿಪ್ರಿಯೆ ಉಷಾ ಆಗಲೇ ಮೊಲಗಳನ್ನು ಎತ್ತಿಮುದ್ದಿಸಲು ತಯಾರಾಗಿದ್ದಳು. ಮೊಲಗಳ ಬಗ್ಗೆ ಕೇಳಲೆಂದು ಬೀನಾ ಕಡೆಗೆ ತಿರುಗಿದೆ.ಅವಳು ಒಂಥರಾ ಮುಖ ಮಾಡಿ ನಿಂತಿದ್ದಳು. ಅವಳ ಮುಖಭಾವ ಹೇಗಿತ್ತು ಎಂದರೆ ಸದ್ಗ್ರುಹಿಣಿಯೋರ್ವಳು ಪ್ರಮಾದವಶಾತ್ ವಯಸ್ಕರ ಚಿತ್ರ ಪ್ರದರ್ಶನವಾಗುತ್ತಿರುವ ಸಿನೆಮಾಹಾಲಿಗೆ ಪ್ರವೇಶಿಸಿದರೆ ಹೇಗಿರುತ್ತಿತ್ತೋ ಹಾಗಿತ್ತು! 'ಇದೇನಾಯ್ತಪ್ಪಾ ಇವಳಿಗೆ...?'ಎಂದುಕೊಳ್ಳುತ್ತಿರುವಾಗಲೇ ಉಷಾ ಪುನ: ಗಟ್ಟಿ ಧ್ವನಿಯಲ್ಲಿ ಹೇಳಿದಳು,
"ಸುಮ್ಮೀ.... ಅಬ್ಬಾ.... ಈ ಮೊಲ ಎಷ್ಟು ಸ್ಮಾರ್ಟ್ ಇದೆ ಗೊತ್ತಾ...?ನಾನು ಎತ್ತಿಕೊಳ್ಳುವಷ್ಟರಲ್ಲೇ ನನ್ನ ಹೆಗಲೇರಿ ಬಿಟ್ಟಿದೆ
ನೋಡು....,"
ಆಗ ಫಕ್ಕನೆ ನನ್ನ ತಲೆಯೊಳಗಿನ ಬಲ್ಬ್ ಉರಿಯಿತು. ಸ್ವಲ್ಪ ಮೊದಲು ಆಚಾರಗಳ ಭಿನ್ನತೆಯಿಂದಾಗಿ ಉಷಾ ಮುದುಡಿಹೋಗಿದ್ದಳು. ಈವಾಗ ಭಾಷೆಯ ಸಮಸ್ಯೆಯಿಂದಾಗಿ ಬೀನಾ ಮುಜುಗರಕ್ಕೊಳಗಾಗಿದ್ದಳು. ಓದುಗರೇ...., ಆಗಿದ್ದೇನು ಗೊತ್ತಾ...?ಸ್ತನಗಳಿಗೆ ಮಲೆಯಾಳಂ ಭಾಷೆಯಲ್ಲಿ 'ಮೊಲ' ಎನ್ನುತ್ತಾರೆ. ಮೊಲ ಎನ್ನುವ ಪ್ರಾಣಿಗೆ 'ಮೊಯಿಲ್' ಎನ್ನುತ್ತಾರೆ . ( ಈಗ ನಿಮಗನಿಸುವುದಿಲ್ಲವೇ ನನ್ನ ಪಾಡು ಯಾರಿಗೂ ಬರಬಾರದು ಎಂದು?)ನಾನು ಪುನ:ಅವರಿಬ್ಬರ ನಡುವಿನ ಸೇತುವೆಯಾದೆ. ಮನಸಾರೆ ನಕ್ಕ ಬೀನಾ ನಮಗೆ ಟೀ ಮಾಡಲೆಂದು ಕೆಳಕ್ಕೆ ಹೋದಳು. ಹಿಂದೆಂದಿಗಿಂತಲೂ ಆ ಹೊತ್ತಿನಲ್ಲಿ ನನಗೆ ಟೀ ಖಂಡಿತಕ್ಕೂ ಬೇಕಾಗಿತ್ತು.
"ನಿನ್ನ ಮಲೆಯಾಳೀ ಗೆಳತಿಯರ ಸಹವಾಸವೇ ನನಗೆ ಬೇಡ ಮಾರಾಯ್ತೀ..... ಟೀ....,ಕಾಫೀ... ಏನಿದ್ರೂ ಮನೆಯಲ್ಲಿ ..." ಎನ್ನುತ್ತಾ ಉಷಾ ಹೊರಡಲು ಅವಸರಿಸಿದಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ