ನಾಗರಾಜನ ಸಾರಥ್ಯದಲ್ಲಿ ಹಬ್ಬಗಳ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ಎದುರ್ಗೊಳ್ಳಲು ಏನೇನು ತಯಾರಿ ಮಾಡ್ಕೊಂಡ್ರಿ.....? ಹಲಸಿನ season ಕೊನೆಯಾಗ್ತಾ ಇದೆಯಲ್ಲ....? ಮುಂದಿನ ವರ್ಷದವರೆಗೂ ಹಲಸಿನ ಸವಿ ನೆನಪಲ್ಲುಳಿಯುವಂತಹ ಈ ವಿಶೇಷ ಪಾಯಸ ಮಾಡಿಬಿಡಿ. ಕೇರಳ ಶೈಲಿಯ ಈ ಪ್ರಥಮಮ್ ಹಲಸಿನ ಹಣ್ಣು ಹಿಡಿಸದವರಿಗೂ ಬಹಳ ಇಷ್ಟವಾಗುತ್ತೆ. ಇಲ್ಲಿದೆ ನೋಡಿ ರೆಸಿಪಿ.
ಬೇಕಾಗುವ ಸಾಮಾಗ್ರಿಗಳು:- ಹಲಸಿನಹಣ್ಣಿನ ಸೊಳೆ ಎರಡು ಕಪ್, ಬೆಲ್ಲದಪುಡಿ ಒಂದು ಕಪ್, ದಪ್ಪ ತೆಂಗಿನ ಹಾಲು ಎರಡು ಕಪ್, ಒಣ ಕೊಬ್ಬರಿ ಚೂರುಗಳು ಎರಡು ಚಮಚ, ಒಣ ಶುಂಟಿ ಪುಡಿ ಎರಡು ಚಮಚ, ಕರಿಮೆಣಸಿನ ಪುಡಿ ಒಂದು ಚಮಚ, ತೆಂಗಿನ ಎಣ್ಣೆ ಎರಡು ಚಮಚ, ತುಪ್ಪ ನಾಲ್ಕು ಚಮಚ,ಚಿಟಿಕೆ ಉಪ್ಪು.
ವಿಧಾನ:- ಆಯ್ದ ಸೊಳೆಗಳನ್ನುmixiಯಲ್ಲಿ ಕ್ರಶ್ ಮಾಡಿಕೊಂಡು ಬೆಲ್ಲದಪುಡಿಯೊಂದಿಗೆ ಬೆರೆಸಿ ಒಂದು ಬಾಣಲೆಯಲ್ಲಿ ಹಾಕಿ ಬೆಂಕಿಯ ಮೇಲೆ ಇಡಿ. ಇದಕ್ಕೆ ತೆಂಗಿನ ಎಣ್ಣೆ ಸೇರಿಸಿ ಕಾಯಿಸಿ. ಆಗಾಗ ಕೈಯ್ಯಾಡಿಸುತ್ತಾ ಇರಿ. ಎರಡೂ ವಸ್ತುಗಳಿಂದ ನೀರಿನ ಅಂಶ ಸಂಪೂರ್ಣ ಆರಿ ಇವುಗಳು ಒಂದೇ ಮುದ್ದೆಯಾಗಬೇಕು. ಇದನ್ನು ಪಾತ್ರೆಯೊಂದರಲ್ಲಿ ಹಾಕಿ ಮೊದಲು ತೆಳ್ಳಗಿನ ತೆಂಗಿನ ಹಾಲಿನೊಂದಿಗೆ ಚೆನ್ನಾಗಿ ಮಿಶ್ರ ಮಾಡಿ. ಚಿಟಿಕೆ ಉಪ್ಪು ಹಾಕಿ. ನಂತರ ದಪ್ಪ ತೆಂಗಿನ ಹಾಲು ಹಾಕಿ ಕುದಿಸಿ. ಕೊಬ್ಬರಿ ಚೂರುಗಳನ್ನು ತುಪ್ಪದಲ್ಲಿ ಕಂದು ಬಣ್ಣಕ್ಕೆ ಹುರಿದು ಸೇರಿಸಿ. ಶುಂಟಿ, ಕರಿಮೆಣಸಿನ ಪುಡಿಗಳನ್ನೂ ಹಾಕಿ.ಈ ಪಾಯಸಕ್ಕೆ ಏಲಕ್ಕಿ ಪುಡಿ ಹಾಕುವ ಅಗತ್ಯವಿಲ್ಲ. ಕುಡಿಯಲು ಕೊಡುವಾಗ ಬಿಸಿ ಬಿಸಿ ಪಾಯಸದ ಮೇಲಕ್ಕೆ ಒಂದು ಚಮಚ ತುಪ್ಪ ಸೇರಿಸಿ ಕೊಡಿ.
ಕಿವಿಮಾತು:-ಸೊಳೆಗಳನ್ನು ಬೆಲ್ಲದ ಪುಡಿಯೊಂದಿಗೆ ಕಾಯಿಸುವಾಗ nonstick ಬಾಣಲೆ ಅಥವಾ ಅಲ್ಯುಮಿನಿಯಂ ಬಾಣಲೆ ಉಪಯೋಗಿಸಿದರೆ ತಳಹಿಡಿಯುವ ಭಯವಿಲ್ಲ.(ತೆಂಗಿನ ಎಣ್ಣೆ ತಳ ಹಿಡಿಯುವುದನ್ನು ನಿಧಾನಗೊಳಿಸುತ್ತದೆ) ಈ ಪ್ರಥಮಮ್ ನೀರಾಗಿರಬಾರದು.ನೇಂದ್ರಬಾಳೆ ಹಣ್ಣಿನಿಂದಲೂ ಇದೇ ರೀತಿಯ ಪಾಯಸ ತಯಾರಿಸಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ