ಭಾನುವಾರ, ಆಗಸ್ಟ್ 3, 2014

ಹೇಳಿದ್ದು...... ಕೇಳಿದ್ದು..... !(ಲಘು ಬರಹ )

ಬ್ಲಾಗ್ ರಚಿಸಬೇಕೆಂಬ ಆಸೆ ಮನದಲ್ಲಿ ಮೊಳಕೆಯೊಡೆದುದನ್ನು ಗೆಳತಿಯೊಡನೆ  ಹೇಳಿಕೊಂಡಿದ್ದೇ ತಡ, ಅವಳದ್ದು ಒಂದೇ ವರಾತ,"ನನ್ನ instituteಗೆ ಬಾ... ನಿನ್ನಬ್ಲಾಗನ್ನ ನಿನ್ನ  ಕೈಯ್ಯಲ್ಲೇ ಮಾಡಿಸಿ ಕೊಡ್ತೀನಿ..." ಸರಿ ಅದೂ ಒಂದು ಪ್ರಯೋಗ ಮಾಡಿ ನೋಡೋಣ ಎಂದುಕೊಂಡೆ.  ಹಾಗೆ  computer institution ಹಾದಿಯಲ್ಲಿ ನನ್ನ ದಂಡಯಾತ್ರೆ ಶುರುವಾಯಿತು (ಸದ್ಯ.... ಅದು ದಂಡವಾಗಲಿಲ್ಲ).  ಬ್ಲಾಗ್ ರಚನೆಯಾಯ್ತೋ ಮತ್ತೆ ಪುನಃ ಅವಳೇ ಸಲಹೆ ಮುಂದಿಟ್ಟಳು,
"ಬ್ಲಾಗಲ್ಲಿ ಫೋಟೋಗಳನ್ನ ಹಾಕೋವಾಗ ಎಡಿಟ್ ಮಾಡೋಕೆ, ಬದಲಾವಣೆ ಮಾಡೋಕೆ, ಸ್ಪೆಶಲ್ ಇಫ಼ೆಕ್ತ್ಸ್ ಕೊಡೋಕೆ ಎಲ್ಲ Adobe Photoshop ತುಂಬಾ ಅಗತ್ಯ. ಅದನ್ನೂ ಕಲಿತುಕೋ .... ಜಸ್ಟ್ ಹತ್ತು ಹದಿನೈದು ಕ್ಲಾಸುಗಳಲ್ಲಿ ಮುಗಿಸಿಕೊಡ್ತೀನಿ...." ಎಂದಳು.  ಸರಿ ಅದಕ್ಕೂ ತಲೆ ಹಾಕಿದೆ.  ಬೇರೆಲ್ಲಾ ಜವಾಬ್ದಾರಿಗಳೊಂದಿಗೆ ಇದನ್ನೂ ನಿಭಾಯಿಸುವ ಹೊತ್ತಿಗೆ ನನ್ನ ಕ್ಲಾಸುಗಳು ಪೂರ್ಣಗೊಂಡು ಪರೀಕ್ಷೆ ಬರೆಯಲು ಮೂರು ತಿಂಗಳೇ ಹಿಡಿಯಿತು. (ಆದರೇನಂತೆ ಹೊಸ ವಿದ್ಯೆಯೊಂದನ್ನು ಕಲಿತ ಹುಮ್ಮಸ್ಸಿನೆದುರು ಅದೆಲ್ಲ ಯಾವ ಲೆಕ್ಕ?) ಕೆಲವೊಂದು ದಿವಸಗಳಲ್ಲಿ ಕ್ಲಾಸಿಗೆ ಹೋಗುವ ಹೊತ್ತಿಗೆ ನಾನು ಯಾವಾಗಲೂ ಕುಳಿತುಕೊಳ್ಳುವ  computer ಮುಂದೆ ಇನ್ಯಾರೋ ಇರುತ್ತಿದ್ದರು. ಅವರು ಅಲ್ಲಿಂದ ಏಳುವವರೆಗೆ ನಾನು ಮಾಡುವುದಾದರೂ ಏನು...?ಸುಮ್ಮನೆ ಕುಳಿತು ಪ್ರತಿಯೊಬ್ಬರನ್ನೂ ಗಮನಿಸುತ್ತಿದ್ದೆ, ಒಂದು ವಿಷಯ ಮೊದಲೇ ಹೇಳಿಬಿಡುತ್ತೇನೆ. ಸಾಧಾರಣ ಶಾಲೆಗಳಲ್ಲಿ scene ಹೇಗಿರುತ್ತೆ ಅಂದರೆ ಇಪ್ಪತ್ತೈದರ ಆಚೆಗಿನ, ಐವತ್ತೈದರ ಈಚೆಗಿನ ಶಿಕ್ಷಕರೂ  ಹದಿನೈದರೊಳಗಿನ ವಿದ್ಯಾರ್ಥಿಗಳೂ  ಇರುತ್ತಾರೆ .. ... ಹೌದು ತಾನೆ ..? ಆದರೆ computer school ಗಳಲ್ಲಿ ದೃಶ್ಯ ನೇರ ಉಲ್ಟಾ ಆಗಿರುತ್ತೆ! ಶಿಕ್ಷಕರು ನಮ್ಮ  (ಅಂದರೆ  ವಿದ್ಯಾರ್ಥಿಗಳ)ಮಕ್ಕಳ ವಯಸ್ಸೋ ಮೊಮ್ಮಕ್ಕಳ ವಯಸ್ಸಿನವರೋ ಆಗಿರುತ್ತಾರೆ. ಸೋ.... ಅವರು ನಮ್ಮನ್ನು ಸರ್.... ಮ್ಯಾಡಂ ಇತ್ಯಾದಿ ಕರೆಯುತ್ತಾರೆ. ನಾವು ಅವರ ಹೆಸರು ಹಿಡಿದು ಕರೆಯುತ್ತೇವೆ! ಇಂತಿಪ್ಪ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಸಂಭಾಷಣೆಗಳನ್ನು ಕೇಳುವುದೆಂದರೆ(ಬೇಕಾದರೆ ನನ್ನದು ಅಧಿಕ ಪ್ರಸಂಗವೆನ್ನಿ) ನನಗಾಗ ನಾಲ್ಕು ಕಿವಿ! ಅವುಗಳ ಕೆಲವು ಸ್ಯಾಂಪಲ್ಗಳು ಇಲ್ಲಿವೆ ನೋಡಿ.
ವಿದ್ಯಾರ್ಥಿ ( ವೃತ್ತಿಯಲ್ಲಿ ಅವರೋರ್ವ ಪೋಲಿಸ್ ಆಫಿಸರ್ )ಶಿಕ್ಷಕಿಯೊಡನೆ: "ಸರಿತಾ ಅವರೇ  .., ನಾನು ಈ ಕ್ಲಾಸಿಗೆ join ಆದದ್ದು ಯಾಕೆ ಗೊತ್ತಾ....?"
ಶಿಕ್ಷಕಿ :      "ಗೊತ್ತಿಲ್ಲ..., ಯಾಕೆ ಸರ್...?"
ವಿ.    :      " ನಮ್ಮ ಕಸ್ಟಡಿಯಲ್ಲಿರೋ  ಕೈದಿಗಳು ಭಾರಿ ಚಾಲಕಿಗಳಿದ್ದಾರೆ ನೋಡಿ..... 'computer ಭಾಷೆ'ಯಲ್ಲಿ  ಗುಟ್ಟಾಗಿ ಏನೇನೋ  ಮಾತ್ನಾಡ್ತಾ ಇರ್ತಾರೆ. ಅದನ್ನ ನಾವು ತಿಳ್ಕೊಂ ಬಿಟ್ರೆ ಜೈಲಿನಿಂದ ಪರಾರಿಯಗೋ ಕೈದಿಗಳ ಸಂಖ್ಯೆಯಲ್ಲಿ ಇಳಿಮುಖವಾಗಬಹುದೇನೊ ಎಂಬ ದೂರದ ಆಸೆ.... ಅದಕ್ಕಾಗಿ ಇಲ್ಲಿ ಬಂದೆ. ಎಷ್ಟು ದಿವಸ ಬೇಕಾಗುತ್ತೆ computer ಕಲಿಯಲು...?"
  ಶಿಕ್ಷಕಿ(ಅತ್ಯುತ್ಸಾಹದಿಂದ ):" ಒಂದೇ ವಾರದಲ್ಲಿ ನಿಮ್ಮನ್ನು ತಯಾರು ಮಾಡಿ ಬಿಡ್ತೀವಿ ಸರ್... "
                                   ಒಂದು ವಾರ ಶ್ರದ್ಧೆಯಿಂದ ಅಭ್ಯಾಸ ಮಾಡಿದ ಅವರು ಮುಂದಿನ ಕ್ಲಾಸಿಗೆ ಬರುವಾಗ  ಹ್ಯಾಪು                                          ಮೋರೆ ಹಾಕ್ಕೊಂಡಿದ್ರು. 
ಶಿ ಕ್ಷಕಿ:  ಏನ್ಸಾರ್.... ಮೊದಲಿದ್ದ ಉತ್ಸಾಹನೇ ಇಲ್ಲಾ....?"
ವಿದ್ಯಾರ್ಥಿ:ಅಯ್ಯೋ... ಏನು ಹೇಳಲಿ...?ನಿನ್ನೆ ಆ ಸೂ... ನನ್ಮಕ್ಳು ಅಡಗಿಸಿಟ್ಟಿದ್ದ ಲ್ಯಾಪ್ ಟಾಪನ್ನ ಹಿಡಿದುಬಿಟ್ಟೆವು. ಇಲ್ಲಿ ಕಲಿತ ವಿದ್ಯೇನೆಲ್ಲಾ ಅದರ ಮೇಲೆ ಪ್ರಯೋಗಿಸಿದಾಗ ಗೊತ್ತಾಗಿದ್ದೇನೆಂದರೆ ಅದರೊಳಗೆ ಅವರೇನೂ ಉಳಿಸಿಲ್ಲ....!!ಇವತ್ತು ನೋಡಿದ್ರೆ ಆ  ರಾಸ್ಕಲ್ಸ್ ಭಾಷೇನೇ ಬೇರೆ ಆಗ್ಬಿಟ್ಟಿದೆ.... ನಮ್ಮ spy agent ಹೇಳಿದ್ದೇನೆಂದರೆ ಅವುಗಳು ಅದೇನೊ androids.... Whats appಅಂತೆಲ್ಲಾ ಮಾತ್ನಾಡ್ತಿದ್ದುವಂತೆ......! ಹಾಗಂದ್ರೇನು ಸರಿತಾ ಅವರೇ.... ?"
ಈಗ ಹ್ಯಾಪು ಮೋರೆ ಹಾಕುವ ಸರದಿ ಸರಿತಾದಾಗಿತ್ತು!                     
                                                             **************
ವಿದ್ಯಾರ್ಥಿನಿ (ಗೃಹಿಣಿ)ಶಿಕ್ಷಕಿಯೊಡನೆ: "ಶಿಲ್ಪಾ... .. , ನನ್ಗೆ ಇದ್ದಕ್ಕಿದ್ದಂತೆ ಎದೆ ಡಬ ಡಬಾಂತ  ಹೊಡ್ಕೊಳ್ಳುತ್ತೆ. ಅದಕ್ಕಾಗಿ ನಿನ್ನೆ ನಾನು ಡಾಕ್ಟರ್ ಬಳಿ consultation ಗೆ ಹೋಗಿದ್ದೆ, ಅವರು ಏನು ಹೇಳಿದ್ರು ಗೊತ್ತಾ...? 'ನಿಮಗೆ ಯಾವ ಕಾಯಿಲೇನೂ ಇಲ್ಲ. ಚಿಕ್ಕ ಚಿಕ್ಕ ಕಾರಣಗಳಿಗೆ tension ತಗೋಬೇಡಿ. ಒಳ್ಳೊಳ್ಳೆ ಹವ್ಯಾಸಗಳಲ್ಲಿ ಮನಸ್ಸನ್ನ ತೊಡಗಿಸಿಕೊಳ್ಳಿ .... ಆಗ ತನ್ನಿಂದ ತಾನಾಗಿಯೇ ನೀವು ಅಂದುಕೊಂಡ ಕಾಯಿಲೆಗಳೆಲ್ಲವೂ ದೂರವಾಗಿಬಿಡುತ್ತೆ...'ಅಂದರು.  ಇದು computer literates ಕಾಲ ಅಲ್ವೇ....?ಸೋ ನಾನೂ ಅದನ್ನು ಅಭ್ಯಾಸ ಮಾಡೋಣಾ ..... ಅಂತ ಬಂದಿದೀನಿ...."
ಶಿಕ್ಷಕಿ:"ಬಹಾಳ ಒಳ್ಳೆ ಕೆಲ್ಸ ಮಾಡಿದ್ರಿ ಮ್ಯಾಡಂ.... computer ಗೊತ್ತಿದ್ರೆ ಇಡೀ ಲೋಕವೇ ನಿಮ್ಮ ಕೈಯ್ಯೊಳಗೆ ಬಂತೆಂದೇ ಲೆಕ್ಕ...ಬ್ಯಾಂಕ್, ಪರ್ಚೆಸ್, ಹೆಲ್ತ್ ಕೇರ್, ಟ್ರಾವೆಲ್ ಹೀಗೆ ಎಲ್ಲವನ್ನೂ ಕುಳಿತಲ್ಲೇ ಮಾಡೋಕೆ ಸಾಧ್ಯ... ಹತ್ತು ದಿವಸಗಳಲ್ಲಿ ನೀವು ಬೇರೆಯೇ ವ್ಯಕ್ತಿಯಾಗ್ಬಿಡ್ತೀರಾ.... (ಒಳಕ್ಕೆ ಬರುವಾಗ ಕಪ್ಪಿಟ್ಟು ಹೋಗಿದ್ದ ವಿದ್ಯಾರ್ಥಿನಿಯ ಮುಖ ಈಗ ನಸುಗುಲಾಬಿ ಬಣ್ಣಕ್ಕೆ ತಿರುಗಿ ನಳನಳಿಸಿತು) computer basics ಅಂದ್ರೆ Microsoft office,Word ಇತ್ಯಾದಿಗಳನ್ನ ಮೊದಲು ಕಲಿಯೋಣ...... "
ಎರಡು  ಕ್ಲಾಸುಗಳ ನಂತರ ಆ ವಿದ್ಯಾರ್ಥಿನಿಯ ಮುಖ ಪುನ: ಸ್ವಲ್ಪ ಸ್ವಲ್ಪವಾಗಿ ಕಪ್ಪು ಬಣ್ಣಕ್ಕೆ ತಿರುಗತೊಡಗಿತ್ತು. ಒಂದು ದಿನ ಆಕೆ ಮೆಲು ಧ್ವನಿಯಲ್ಲಿ (ನನಗೆ ಕೇಳಿಸದಷ್ಟು ಮೆಲುವಲ್ಲ!) ಶಿಲ್ಪಾ ಬಳಿ ಹೇಳುವುದು ಕೇಳಿಸಿತು,
"ಶಿಲ್ಪಾ..., ಮನೆಯಲ್ಲಿ ಒಂಟಿಯಾಗಿದ್ರೆ ಎದೆ ಹೊಡ್ಕೊಳ್ಳುತ್ತೆ ಅಂತ ಇಲ್ಲಿಗೆ ಬರೋಕೆ ಶುರು ಮಾಡ್ದೆ.... ಎರಡು ದಿವ್ಸ ಎಲ್ಲ ಸರಿಯಾಗೇ ಇತ್ತು.... ನೀವು ಮೌಸ್... ಕರ್ಸರ್.... ಲೆಫ್ಟ್  ಕ್ಲಿಕ್  ರೈಟ್  ಕ್ಲಿಕ್ .... ಟೂಲ್ ಬಾರ್ .... ಸಿ.ಪಿ.ಯು.... ಯು.ಪಿ.ಯೆಸ್..... ಇದೆಲ್ಲಾ  ಹೇಳೋಕೆ ಶುರು ಮಾಡಿದ್ರಲ್ಲಾ ಆಗ ತಲೆ ಸಣ್ಣಗೆ ಚಿಟಿ ಚಿಟಿ ಎನ್ನತೊಡಗಿತ್ತು ... ಇನ್ನು ಅದೇನೋ ಮೈಕ್ರೋ.... ಒಫಿಸ್..... ವರ್ಡ್.... ಅಂತ ಎನೇನೋ ಹೇಳಿದ್ರಲ್ಲಾ.... ನಿನ್ನೆಯಿಂದ ಪುನ: ಎದೆ ಡಬ ಡಬಾ ಅನ್ನೋಕೆ ಶುರುವಾಗಿದೆ ನೋಡಿ ... ಇನ್ನೂ ನಿಂತಿಲ್ಲ.... ನಾನು ಮನೆಯಲ್ಲಿ ಸ್ವಲ್ಪ ದಿವಸ ರೆಸ್ಟ್ ತಗೊಂಡು ಆಮೇಲೆ ಕ್ಲಾಸಿಗೆ ಬರ್ಲಾ...?"
                                                                   **********
ನಡು ವಯಸ್ಸಿನ ವಿದ್ಯಾರ್ಥಿ ಶಿಕ್ಷಕನೊಡನೆ:"ಸುರೇಶ್ ಮಾಷ್ಟ್ರೆ....., ನನ್ನ ಮಗಳ ಫೋಟೋ ಒಂದು ಸ್ಕ್ಯಾನಿಂಗ್ ಮಾಡ್ಬೇಕಾಗಿತ್ತು...... ಹುಡುಗನ ಮನೆಯೋರಿಗೆ ಕಳ್ಸೋದಿತ್ತು.... "
ಶಿಕ್ಷಕ: ಖಂಡಿತ ಮಾಡೋಣ ಸಾರ್ .... ಫೋಟೋದೊಂದಿಗೆ ಅವರ ಇ ಮೇಲ್ ಅಡ್ರೆಸ್ ಕೊಡಿ ಸಾರ್...."
ವಿದ್ಯಾರ್ಥಿ:ಅಯ್ಯೋ .... ಅವರು ತುಂಬಾ ಗಟ್ಟಿ ಪಾರ್ಟಿ ಮಾಷ್ಟ್ರೆ..... ಅಡ್ರೆಸ್ಸು, ಮೇಲು ಎಲ್ಲಾ ಏನೂ ಬೇಡ.... ಹುಡುಗನ ತಂದೇದ್ದು ಹೆಸರು ಹಾಕ್ಬಿಟ್ಟು ಊರಿನಹೆಸರು ಹಾಕ್ಬಿಡಿ ಅಷ್ಟೇ ..... ನೆಕ್ಸ್ಟ್ ಪೋಸ್ಟಲ್ಲೇ ಅದು ಧಾರಾಳವಾಗಿ ಅಲ್ಲಿ ಮುಟ್ಟಿಬಿಡುತ್ತೆ ...."
                                                                  **********
ವಿದ್ಯಾರ್ಥಿ(ವೃತ್ತಿಯಲ್ಲಿ ವೈದ್ಯರು) ಶಿಕ್ಷಕಿಯೊಡನೆ:"ಸರಿತಾ..... ಇವತ್ಯಾಕೋ computer ತುಂಬಾ ಸ್ಲೋ ಇದೆಯಲ್ಲಾ...?"
ಶಿಕ್ಷಕಿ :"ಹೌದು ಸಾರ್.... ವೈರಸ್ ಅಟ್ಯಾಕ್ ಆಗಿದೆ ಅನ್ಸುತ್ತೆ...."
ವಿದ್ಯಾರ್ಥಿ: "ಹೌದು... ಹೌದು... ಅದೇ ಇರ್ಬೇಕು.... ಈಗ ಮಳೆಗಾಲ ನೋಡಿ... ವೈರಸ್ಸು, ಬ್ಯಾಕ್ಟೀರಿಯಾಗಳೆಲ್ಲ ಫಕ್ಕನೆ ಅಟ್ಯಾಕ್  ಮಾಡಿಬಿಡುತ್ತವೆ...."
                                                                  ******** 
ಒಂದು ದಿನ ನಾನು ಕ್ಲಾಸಲ್ಲಿ ಫೋಟೋಶೋಪ್ ಅಭ್ಯಾಸ ಮಾಡ್ತಾ ಇದ್ದೆ. ಅದರಲ್ಲಿ image adjustments ಅನ್ನೋ ಒಂದು ಆಪ್ಶನ್  ಇದೆ. ನಾವು ಆಯ್ದುಕೊಂಡ ಚಿತ್ರಗಳಲ್ಲಿ ಬೇಕಾದ ಬದಲಾವಣೆಗಳನ್ನು ಇದರ ಮೂಲಕ ಮಾಡಬಹುದು. ಸಿನೆಮಾ ತಾರೆ ಶ್ರೀದೇವಿಯ ಫೋಟೋವನ್ನು download ಮಾಡಿಕೊಂಡು ಬದಲಾವಣೆಗಳನ್ನು ತರಲು ಪ್ರಯತ್ನಿಸುತ್ತಾ ಇದ್ದೆ. ನನ್ನ ಪಕ್ಕದಲ್ಲೇ  ಶಿಲ್ಪಾ  ಕುಳಿತು ಮಾರ್ಗದರ್ಶನ ನೀಡುತ್ತಿದ್ದಳು. ಫಕ್ಕನೆ ನನ್ನ ಹಿಂಬದಿಯಿಂದ ಅಶರೀರವಾಣಿಯೊಂದು(ಬೆಳಗ್ಗೆ ಏಳುವಾಗ ನನ್ನ ಕುತ್ತಿಗೆ ಉಳುಕಿತ್ತು.ಹಿಂದೆ ನೋಡಬೇಕೆಂದರೆ ತಟ್ಟೀರಾಯನಂತೆ ಪೂರ್ತಿ ಮೈಯ್ಯನ್ನೇ ಹೊರಳಿಸಬೇಕಿತ್ತು. ಆ ಕಷ್ಟ ಯಾರಿಗೆ ಬೇಕು...?ಸೋ... ನನಗದು ಅಶರೀರವಾಣಿಯಾಯ್ತು...)ಮೊಳಗಿತು,
"ಶಿಲ್ಪಾ...., ಇವರೇನು ಮಾಡ್ತಿದ್ದಾರೆ...?ಇಷ್ಟು ಚಂದದ  ಶ್ರೀದೇವಿಯನ್ನ ಹೀಗೂ ಹಾಳು ಮಾಡೋದುಂಟಾ?"
"ಫೋಟೋಶಾಪ್ ಮಾಡ್ತಿದ್ದಾರೆ ....
"ಹಾಗಂದ್ರೆ...?"
"ಅಂದ್ರೇ...,ಫೋಟೊಗಳನ್ನ ನಮಗೆ ಬೇಕಾದ ರೀತಿಯಲ್ಲಿ ಬದಲಾವಣೆ ಮಾಡೋದು, ಸ್ಪೆಶಲ್ ಇಫ಼ೆಕ್ತ್ಸ್ ಕೊಡೋದು...."
"ಓ.... ಹಾಗೆಯಾ... ?ಗೊತ್ತಾಯ್ತು ಬಿಡಿ..., ಈಗೆಲ್ಲಾ ಹೆಣ್ಣು ಮಕ್ಕಳು ಫುಲ್ ಡ್ರೆಸ್ ಹಾಕ್ಕೊಂಡಿದ್ರೂ ನೇಕೆಡ್ ಆಗಿ  ಬರೋ ಹಾಗೆ  ಫೋಟೋ ತೆಗೀತಾರಂತೆ.... ಈ ವಿದ್ಯೆ ಕಲಿತವರೇ ಅದನ್ನ ಮಾಡೋದಿರ್ಬೇಕು ಆಲ್ವಾ... ?!"
ಸದ್ಯ... ನನ್ನ ಕುತ್ತಿಗೆ ಉಳುಕಿತ್ತಲ್ಲಾ.... ಬದುಕಿಕೊಂಡೆ.ಬೆಳೆಗ್ಗೆ ಆ ಒರಟು ದಿಂಬಿಗೆ ಹಿಡಿ  ಶಾಪ ಹಾಕಿದ್ದೆ.  ಈಗ ಅದನ್ನು ಹಿಡಿದು ಮುದ್ದಾಡಬೇಕೆನಿಸಿತು.   computer ಕ್ಲಾಸ್ ಮುಗಿಯುವವರೆಗೂ ನನ್ನ ಕತ್ತು ಹೀಗೇ ಇರಲಿ ದೇವರೇ ಎಂದು ಮನದಲ್ಲೇ ಪ್ರಾರ್ಥಿಸಿಕೊಂಡೆ.                                                                                                                                        

                                                             ***************    

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ