ಮಕ್ಕಳ ಜನ್ಮದಿನದಂದು ಸಂಭ್ರಮಿಸುವ ನಾವಿಬ್ಬರು ನಮ್ಮ ನಮ್ಮ birth day ಗಳನ್ನು ಒಂದು Event ಎಂಬ ದೃಷ್ಠಿಯಿಂದ ನೋಡಿದ್ದೇ ಇಲ್ಲ. ಇದುವರೆಗೂ ಉಳಿದ ದಿನಗಳಂತೆ ಆ ದಿನವೂ ಹೀಗೇ ಬಂದು ಹಾಗೇ ಹೋಗುತ್ತಿತ್ತು. ದೂರದಲ್ಲಿರುವ ಮಕ್ಕಳು ಫೋನಾಯಿಸಿ ಸಂಭ್ರಮದಿಂದ wish ಮಾಡುವಾಗಲೇ "ಹಾ... ಇವತ್ತು ನನ್ನ ಬರ್ತ್ ಡೇ..."ಎಂದು ನೆನಪಾಗುತ್ತಿತ್ತು. ಆದರೆ ಈ ಸಲ F.B.ಯಲ್ಲಿ ನಿಮ್ಮೆಲ್ಲರ ಹಾರೈಕೆ ತುಂಬಿ ತುಳುಕುತ್ತಿತ್ತಲ್ಲಾ...?ಮನಸ್ಸಿಗೆ ಏನೋ ಒಂಥರಾ ಬೆಚ್ಚಗಿನ ಫೀಲಿಂಗ್. ಸಾಲದುದಕ್ಕೆ ಮಕ್ಕಳು ರಜಾ ಎಂದು ಮನೆಯಲ್ಲೇ ಇದ್ದರು. ನನಗೇ ಗೊತ್ತಾಗದಂತೆ b'day ಯ plan ಮಾಡಿದ್ದರು. ಆ ದಿನ ಬಹಳ ಚೆನ್ನಾಗಿ ಕಳೆದು ಹೋಯ್ತು. ನೀತಿ, ಶ್ರಾವಣ್ ಉತ್ಸಾಹಕ್ಕೆ ಸರಿಗಟ್ಟಾಗಿ ನಾನೂ ಬಹಳ ಹುರುಪಿನಿಂದ ಅಡುಗೆ ಮಾಡಿದ್ದೆ. ಊಟಕ್ಕೆ cashew paneer pulav & methi, aaluu moong curry ಮಾಡಿದ್ದೆ. ಅಪ್ಪ, ಮಕ್ಕಳೆಲ್ಲರೂ ಆ ಮೆನುಗೆ ಸರಿಯಾಗಿಯೇ ನ್ಯಾಯ ಒದಗಿಸಿದ್ದರು. ಸಂಜೆ ಟಿಫಿನ್ ಚಪಾತಿ, ಪನೀರ್, ಮಟರ್ ನೊಂದಿಗೆ ವಿಜ್ರಂಭಿಸಿತು. ಅವುಗಳ ರೆಸಿಪಿಯನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆನಿಸಿತು. ಇಲ್ಲಿದೆ ನೋಡಿ.
ಕ್ಯಾಶ್ಯೂ ಪನೀರ್ ಪುಲಾವ್:- ಸಾಮಾಗ್ರಿಗಳು:- ಪುಲಾವಿನ ಅಕ್ಕಿ ನಾಲ್ಕು ಕಪ್, ಕ್ಯಾರೆಟ್, ಬೀನ್ಸ್ ಹೋಳುಗಳು ಎರಡು ಕಪ್, ಬಟಾಣಿ ಅರ್ಧ ಕಪ್ (ತಾಜಾ ದೊರೆತರೆ ರುಚಿ ಹೆಚ್ಚು, frozen ಆದರೂ ಪರವಾಗಿಲ್ಲ) ಪನೀರ್ ಒಂದೂವರೆ ಪ್ಯಾಕೆಟ್, ಗೇರುಬೀಜ ಒಂದು ಕಪ್ (two pieces ಇರುವುದನ್ನ ಉಪಯೋಗಿಸಿ),ಕೊತ್ತಂಬರಿ ಸೊಪ್ಪು ಒಂದು ಕಟ್ಟು, ಪುದಿನ ಹತ್ತು ಹದಿನೈದು ಎಲೆಗಳು, ಲವಂಗ 10-12,ಚೆಕ್ಕೆ ಎರಡಿಂಚಿನ ತುಂಡು, ಬೆಳ್ಳುಳ್ಳಿ ಐದು ಎಸಳು, ಶುಂಟಿ ಎರಡಿಂಚು, ಕರಿಮೆಣಸು 8-10, ಕೊತ್ತಂಬರಿ ಒಂದು ಚಮಚ,ಏಲಕ್ಕಿಪುಡಿ ಕಾಲು ಚಮಚ, ಮೆಣಸಿನ ಕಾಯಿ ಎರಡು, ಕಿಚನ್ ಕಿಂಗ್ ಮಸಾಲ ಒಂದು ಚಮಚ, ಸೋಂಪು ಎರಡು ಚಮಚ, ತೆಂಗಿನ ತುರಿ ನಾಲ್ಕು ಚಮಚ, ತೆಂಗಿನ ಹಾಲು ನಾಲ್ಕು ಕಪ್, ತುಪ್ಪ ಒಂದು ಕಪ್,ಉಪ್ಪು ರುಚಿಗೆ ತಕ್ಕಷ್ಟು,ಅಕ್ಕಿಯ ಎರಡರಷ್ಟು ನೀರು, ನಿಂಬೆಹಣ್ಣು ಅರ್ಧ.
ವಿಧಾನ:- ಅಕ್ಕಿಯನ್ನು ಕಾಲು ಗಂಟೆ ನೆನೆಸಿಕೊಳ್ಳಿ. ಗೇರುಬೀಜವನ್ನೂ ಪನೀರನ್ನೂ ಬೇರೆ ಬೇರೆಯಾಗಿ ತುಪ್ಪದಲ್ಲಿ ಹುರಿದು(ಗೋಡಂಬಿ ನಸು ಕಂದು ಬಣ್ಣ ಬರಲಿ,ಪನೀರ್ ನಸು ಹಳದಿ ಬಣ್ಣ ಬಂದರೆ ಸಾಕು. ಪನೀರನ್ನು ಬಿಸಿನೀರಲ್ಲಿ ಹತ್ತುನಿಮಿಷ ಹಾಕಿಟ್ಟು ನೀರಿನಂಶವನ್ನು ಹಿಂಡಿ ತೆಗೆದಿಟ್ಟು ನಂತರ ಹುರಿದುಕೊಳ್ಳಿ.) ಬಾಣಲೆಯನ್ನು ಬಿಸಿಗಿಟ್ಟು ಸ್ವಲ್ಪ ಎಣ್ಣೆ ಹಾಕಿಕೊಂಡು ಮೆಣಸಿನ ಕಾಯಿಯನ್ನು ಭಾಗ ಮಾಡಿ ಹಾಕಿ. ಸೊಪ್ಪುಗಳನ್ನು ಹೆಚ್ಚಿ ಹಾಕಿ ಹುರಿಯಿರಿ. ನೀರಿನಂಶ ಆವಿಯಾಗುತ್ತಿದ್ದಂತೆ ಕೊತ್ತಂಬರಿ, ಲವಂಗ, ಚೆಕ್ಕೆ,ಸೋಂಪು, ಕರಿಮೆಣಸನ್ನು ಗರಿಗರಿಯಾಗಿ ಹುರಿದುಕೊಳ್ಳಿ. ಮಿಕ್ಸಿ ಮಾಡುವಾಗ ಇದಕ್ಕೆ ಬೆಳ್ಳುಳ್ಳಿ, ಶುಂಟಿ,ಮಸಾಲೆಪುಡಿ ,ತೆಂಗಿನ ತುರಿ ,ಏಲಕ್ಕಿ ಪುಡಿ ಸೇರಿಸಿ ಚಟ್ನಿಯಂತೆ ನುಣ್ಣಗೆ ಅರೆದುಕೊಳ್ಳಿ. ಹೆಚ್ಚಿಟ್ಟ ತರಕಾರಿ ಹೋಳುಗಳೊಂದಿಗೆ ಇದನ್ನು ಮಿಶ್ರ ಮಾಡಿ. ಅಕ್ಕಿಯಿಂದ ನೀರನ್ನು ಪೂರ್ತಿಯಾಗಿ ಬಸಿದು ಇದಕ್ಕೆ ಸೇರಿಸಿ. ಬಟಾಣಿಯನ್ನೂ ಹಾಕಿಕೊಳ್ಳಿ. ಹುರಿದಿಟ್ಟ ಗೇರುಬೀಜವನ್ನೂ ಸೇರಿಸಿ ಬೇಕಷ್ಟು ಉಪ್ಪು ಹಾಕಿಕೊಳ್ಳಿ. ಗೋಡಂಬಿ, ಪನೀರ್ ಹುರಿಯಲು ಉಪಯೋಗಿಸಿದ ತುಪ್ಪದೊಂದಿಗೆ ಉಳಿದ ತುಪ್ಪವನ್ನು ಈ ಮಿಶ್ರಣಕ್ಕೆ ಎರೆಯಿರಿ. ನಾಲ್ಕು ಕಪ್ ತೆಂಗಿನ ಹಾಲು, ನಾಲ್ಕು ಕಪ್ ನೀರು ಸೇರಿಸಿ. ನಿಂಬೆಹಣ್ಣಿನ ಬೀಜ ತೆಗೆದು ರಸವನ್ನು ಹನಿಸಿ. ಕುಕ್ಕರಿಗೆ ನೀರುಹಾಕಿ. ಅದರೊಳಗಡೆ ನಿಲ್ಲುವಂತಹ ಪಾತ್ರೆಗೆ ಈ ಮಿಶ್ರಣವನ್ನು ಹಾಕಿ ಮೂರು ವಿಸಿಲಲ್ಲಿ ಬೇಯಿಸಿ.(ಮುಚ್ಚಳ ತೆಗೆದಾಗ ಇನ್ನೂ ಬೇಯಬೇಕೆಂದಿದ್ದರೆ ಪುನ: ಸ್ವಲ್ಪ ನೀರು ಹನಿಸಿ ಎರಡು ವಿಸಿಲ್ ಬೇಯಿಸಿ.) ಬೆಂದ ಪುಲಾವಿನ ಬಿಸಿ ಸ್ವಲ್ಪ ಆರಿದಾಗ ದೊಡ್ಡ ಬಾಣಲೆಯೊಂದನ್ನು ಬಿಸಿಗಿಟ್ಟು ಹುರಿದಿಟ್ಟ ಪನೀರ್ ಹಾಕಿ. ಈಗ ಬೆಂದ ಪುಲಾವನ್ನು ಇದಕ್ಕೆ ಸುರಿದು ಚೆನ್ನಾಗಿ ಕೈಯ್ಯಾಡಿಸಿ. ಕ್ಯಾಶ್ಯೂ ಪನೀರ್ ಪಲಾವ್ ರೆಡಿ.
ಕಿವಿ ಮಾತು :-ಬಿಸಿನೀರಲ್ಲಿ ಹಾಕಿಟ್ಟು ಹಿಂಡಿ ತೆಗೆದ ಪನೀರ್ ಮೃದುವಾಗಿರುತ್ತೆ. ಅಕ್ಕಿಬೇಯಲಿಡುವಾಗ ನಿಂಬೆ ಹಣ್ಣು ಹಿಂಡಿದರೆ ಅನ್ನ ಉದುರುದುರಾಗುತ್ತೆ. ಸಾಮಾಗ್ರಿಗಳನ್ನು ನೇರ ಕುಕ್ಕರಿನಲ್ಲೇ ಬೇಯಲಿಟ್ಟರೆ ತಳ ಹಿಡಿಯುವ ಅಪಾಯ ಇದೆ. ಪುಲಾವ್ ಆದಷ್ಟೂ ಉದುರುದುರಾಗಿರಲಿ. ಕೊನೆಯಲ್ಲಿ ಪನೀರಿನೊಂದಿಗೆ ಮಿಶ್ರ ಮಾಡುವಾಗ ಮುದ್ದೆಯಾಗುವ ಭಯವಿರುವುದಿಲ್ಲ. ಪನೀರನ್ನೂ ಎಲ್ಲಾ ಸಾಮಗ್ರಿಗಳೊಂದಿಗೆ ಹಾಕಿ ಕುಕ್ಕರಲ್ಲಿ ಬೇಯಿಸಿದರೆ ಪುಲಾವ್ ಮುದ್ದೆಯಾಗುತ್ತೆ ಮಾತ್ರವಲ್ಲ ಪನೀರ್ ನೀರಾಗಿ ಹೋಗುತ್ತೆ. ಇದಕ್ಕೆ ಬಾಸ್ಮತಿ ಅಕ್ಕಿ ಉಪಯೋಗಿಸುವುದಿದ್ದರೆ ಬೇಯಲು ಹಾಕುವ ನೀರಿನ ಪ್ರಮಾಣವನ್ನು ಒಂದು ಕಪ್ ಕಡಿಮೆ ಮಾಡಿಕೊಳ್ಳಿ. ಪಲಾವ್ ಮಾಡಲು ಅಕ್ಕಿ ಕೊಳ್ಳುವಾಗ ಹಳೆ ಅಕ್ಕಿಯನ್ನು ಕೇಳಿ ಕೊಳ್ಳಿರಿ. ಹೊಸ ಅಕ್ಕಿ ಬೆಂದಾಗ ಮುದ್ದೆಯಾಗುತ್ತೆ.
ಆಲೂ, ಮೇತಿ, ಮೂಂಗ್ ಕರಿ :-ಸಾಮಾಗ್ರಿಗಳು :-ಪಚ್ಚೆ ಹೆಸರು ನೆನೆಸಿದ್ದು ಒಂದು ಕಪ್, ಮಧ್ಯಮ ಗಾತ್ರದ ಆಲೂಗಡ್ಡೆ ಹೋಳುಗಳು ಒಂದು ಕಪ್, ಮೆಂತೆ ಸೊಪ್ಪು ಅರ್ಧ ಕಟ್ಟು, ತೆಂಗಿನ ತುರಿ ಅರ್ಧ ಕಪ್,ಕೊತ್ತಂಬರಿ, ಜೀರಿಗೆ ತಲಾ ಒಂದು ಚಮಚ, ಹಿಂಗ್ ಒಂದು ಚಿಟಿಕೆ, ಕೆಂಪು ಮೆಣಸು ನಾಲ್ಕು, ಪುದಿನ,ಕೊತ್ತಂಬರಿಸೊಪ್ಪಿನ ಮಿಶ್ರಣ ಎರಡು ಚಮಚ,ಉಪ್ಪು ರುಚಿಗೆ ತಕ್ಕಷ್ಟು.ಒಗ್ಗರಣೆಗೆ :-ಎಣ್ಣೆ,ಸಾಸಿವೆ,ಕೆಂಪು ಮೆಣಸು, ಕರಿಬೇವಿನಸೊಪ್ಪು.
ವಿಧಾನ:-ಹೆಸ್ರು, ಆಲೂಗಳನ್ನು ಕುಕ್ಕರಲ್ಲಿ ಮೂರು ವಿಸಿಲಲ್ಲಿ ಬೇಯಿಸಿ. ಮೆಂತೆ ಸೊಪ್ಪನ್ನು ಸ್ವಲ್ಪ ಎಣ್ಣೆ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ(ಆಗ ಕಹಿ ರುಚಿ ಹೋಗುತ್ತೆ)ಮಸಾಲೆ ಸಾಮಗ್ರಿಗಳನ್ನು ಎಣ್ಣೆ ಹಾಕದೆ ಹುರಿದುಕೊಳ್ಳಿ. ತೆಂಗಿನತುರಿಯೊಂದಿಗೆ ನುಣ್ಣಗೆ ಅರೆದುಕೊಳ್ಳಿ. ಬೆಂದ ಮಿಶ್ರಣಕ್ಕೆ ನೀರು ಬೇಕಿದ್ದರೆ ಹಾಕಿ. ಈಗ ಮೆಂತೆ ಸೊಪ್ಪನ್ನು ಸೇರಿಸಿ ಉಪ್ಪು, ಅರಸಿನ,ಹಾಕಿ ಕುದಿಸಿ. ಅರೆದ ಮಸಾಲೆಯನ್ನು ಹಾಕಿ ಪುನ: ಕುದಿ ಬರಿಸಿ. ಮೇಲಿನಿಂದ ಸೊಪ್ಪುಗಳ ಮಿಶ್ರಣ ಸಿಂಪಡಿಸಿ. ಒಗ್ಗರಣೆ ಕೊಡಿ. ಈ ಪದಾರ್ಥ ಗಸಿಯಂತೆ ಇರಲಿ.

,
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ