ಗುರುವಾರ, ಆಗಸ್ಟ್ 28, 2014

ಸೌತೆ, ದೊಣ್ಣೆಮೆಣಸು, ನುಗ್ಗೆ ಕೋಡು ಮಜ್ಜಿಗೆ ಹುಳಿ

ಯಾವುದೋ ಒಂದು ತರಕಾರಿಯನ್ನು ಉಪಯೋಗಿಸಿ ಮಜ್ಜಿಗೆ ಹುಳಿ ಮಾಡೋದು ಸಾಮಾನ್ಯ. ಇದು ನೋಡಿ ಮೂರು ತರಕಾರಿಗಳ ಸಂಯೋಜನೆಯಿಂದ ತಯಾರಾದದ್ದು. ಮಾಡಿ ನೋಡಿ....
ಸಾಮಾಗ್ರಿಗಳು:-
1.ಮಂಗಳೂರು ಸೌತೆ ಅರ್ಧ
2.ಎರಡು ನುಗ್ಗೆ ಕೋಡು 
3.ದೊಣ್ಣೆ ಮೆಣಸು ಚಿಕ್ಕದಾದರೆ ಒಂದು 
4.ತೆಂಗಿನ ತುರಿ ಒಂದು ಕಪ್
5.ಮಜ್ಜಿಗೆ ಒಂದು ಕಪ್ 
6.ಹಸಿರುಮೆಣಸಿನ ಕಾಯಿ ಒಂದು 
7.ಅರಸಿನ ಮತ್ತು ಮೆಣಸಿನ ಪುಡಿ ಚಿಟಿಕೆ 
8.ರುಚಿಗೆ ತಕ್ಕಷ್ಟು ಉಪ್ಪು,ಕರಿಬೇವಿನಸೊಪ್ಪು ಎರಡು ಎಸಳು.  
9.ಒಗ್ಗರಣೆಗೆ- ಎಣ್ಣೆ, ಕೆಂಪು ಮೆಣಸು, ಸಾಸಿವೆ, ಕಾಲು ಚಮಚ ಮೆಂತೆ.
ವಿಧಾನ:-ಸೌತೆಕಾಯಿ ಬೇಯಲು ಸ್ವಲ್ಪ ಜಾಸ್ತಿ ಹೊತ್ತು ಬೇಕಿರುವುದರಿಂದ ಅದನ್ನು ಕುಕ್ಕರಿನಲ್ಲಿ ಎರಡು ವಿಸಿಲಿಗೆ ಬೇಯಿಸಿಕೊಳ್ಳಿ. ಬೆಂದ ಹೋಳುಗಳೊಂದಿಗೆ ನುಗ್ಗೆ ,ಕ್ಯಾಪ್ಸಿಕಮ್ ಸೇರಿಸಿ ಬೇಯಲು ಇಡಿ. ಉಪ್ಪು ಅರಸಿನ, ಮೆಣಸಿನ ಪುಡಿ ಹಾಕಿ.(ಸೌತೆ ಬೇಯುವಾಗ ಹಾಕಿದ ನೀರೇ ಇದಕ್ಕೂ ಸಾಕಾಗುತ್ತೆ). ತರಕಾರಿಗಳೆಲ್ಲವೂ ಬೆಂದಾಗ ಮೊದಲೇ ನುಣ್ಣಗೆ ಅರೆದಿಟ್ಟ ತೆಂಗಿನ ಕಾಯಿ ಸೇರಿಸಿ. ದಪ್ಪ ಮಜ್ಜಿಗೆಯನ್ನೂ ಹಾಕಿ. ಹಸಿರು ಮೆಣಸಿನ ಕಾಯಿಯನ್ನು ಮಧ್ಯದಿಂದ ಸಿಗಿದು ಹಾಕಿ. ಕುದಿ ಬರುವಾಗ  ಬೇವಿನ ಎಸಳನ್ನು ಹಾಕಿ. ಬೆಂಕಿ ಆರಿಸಿ ಒಗ್ಗರಣೆ ಕೊಡಿ (ಸಾಸಿವೆಯಂತೆ ಮೆಂತೆಯೂ ಚಟ ಪಟಿಸಲಿ). 
ಕಿವಿ ಮಾತು :- ಕಾಯಿ ಹುಳಿ ಹೆಚ್ಚು ನೀರಾಗಿರಬಾರದು. ಬೆಂದ ಹೋಳುಗಳಲ್ಲಿ ನೀರು ಜಾಸ್ತಿ ಇದೆ ಅನಿಸಿದರೆ ಅರೆದ ಕಾಯಿ ಸೇರಿಸುವ ಮೊದಲೇ ಸ್ವಲ್ಪ ನೀರನ್ನು ಬಸಿದುಕೊಳ್ಳಿ.ಸೌತೆಯೊಂದಿಗೆ ಉಳಿದೆರಡು ತರಕಾರಿಗಳನ್ನು ಕುಕ್ಕರಲ್ಲಿ ಬೇಯಿಸುವ
ಅಗತ್ಯ ಇಲ್ಲ. ಇಲ್ಲಿ ಹೇಳಿದ ಪ್ರಮಾಣ ಮೂರು ಜನರಿಗೆ ಸಾಕಾಗುತ್ತೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ