ಶುಕ್ರವಾರ, ಸೆಪ್ಟೆಂಬರ್ 5, 2014

ನನ್ನ ಸವಿತಾ ಟೀಚರೂ..... ನಮ್ಮ ಸವಿತಕ್ಕನೂ....

ರಣ ರಣ ಬಿಸಿಲು... ಶಾಲೆ ಮೈದಾನದಲ್ಲಿ ಶಿಸ್ತಿನಿಂದ ಸಾಲು ಸಾಲಾಗಿ ನಿಂತ ವಿದ್ಯಾರ್ಥಿ ವಿದ್ಯಾರ್ಥಿನಿಯರು..... ಎಲ್ಲರ ಎದುರು ಭಾಗದಲ್ಲಿ ಧ್ವಜಸ್ತಂಭ. ಅದರ ಕಟ್ಟೆಯ ಎದುರು ಭಾಗದಲ್ಲಿ  ತನ್ನ ಹಿಂಬದಿಗೆ ಕೈಕಟ್ಟಿ ವಿದ್ಯಾರ್ಥಿಗಳಿಗೆ ಮುಖ ಮಾಡಿ ನಿಂತ ಮುಖ್ಯೋಪಾದ್ಯಾಯರು. ಅವರ ಬಳಿ ನಿಂತ ಶಾಲಾ ನಾಯಕ....
"ಸಾವಧಾನ್... ವಿಶ್ರಾಮ್..... ಸಾವಧಾನ್.....' ಇದೆಲ್ಲ ಆದ ಬಳಿಕ ಶಾಲಾ ಪ್ರತಿಜ್ಞೆ....,
"ಭಾರತ ನನ್ನ ದೇಶ.... ಭಾರತೀಯರೆಲ್ಲರೂ ನನ್ನ ಸಹೋದರ ಸಹೋದರಿಯರು...."ಶಾಲಾನಾಯಕ ಹೇಳುತ್ತಿರುವುದನ್ನು ಪ್ರತಿಧ್ವನಿಸುವ ಬಾಲಕ ಬಾಲಕಿಯರು.... ಅಷ್ಟರಲ್ಲಿ.... 'ಧಡ್' ಎಂಬ ಸದ್ದು. ಎಲ್ಲ ಮಕ್ಕಳ ಮುಖ ಆ ಕಡೆಗೆ.... ನೋಡುವುದೇನು...?ಹುಡುಗಿಯೊಬ್ಬಳು ಬವಳಿ ಬಂದು ಬಿದ್ದು ಬಿಟ್ಟಿದ್ದಳು. ಬದಿಯಲ್ಲಿ ಸಾಲಾಗಿ ನಿಂತಿರುತ್ತಿದ್ದ ಶಿಕ್ಷಕಿಯರಲ್ಲಿ ಒಬ್ಬರು ಓಡೋಡಿ ಬಂದು ಅವಳನ್ನು ಎತ್ತಿ ಬೇರೆ ಹುಡುಗಿಯರ ಸಹಾಯದಿಂದ ಕೋಣೆಯೊಳಕ್ಕೊಯ್ದು ಶುಶ್ರೂಷೆ ನೀಡಿ ಆಕೆಯ ಪಕ್ಕದಲ್ಲೇ ಇದ್ದು  ತಮ್ಮ ಪರ್ಸಿನಿಂದಲೇ ದುಡ್ಡು ತೆಗೆದು ಪೇದೆಯ  ಕೈಗಿತ್ತು ಸ್ಟ್ರಾಂಗ್ ಕಾಫಿ, ತಿಂಡಿಗಳನ್ನು ತರಿಸಿ ಆ ಬಾಲಕಿಗಿತ್ತಾಗಲೇ ಈ ಶಿಕ್ಷಕಿಗೆ ಸಮಾಧಾನ. ಇದು ಒಂದು ದಿನದ ಕಥೆಯಲ್ಲ. ದಿನಾಲೂ ಪುನರಾವರ್ತನೆಯಾಗುತ್ತಿತ್ತು. ಮಕ್ಕಳು ಮಾತ್ರ ಬೇರೆ ಬೇರೆ ಅಷ್ಟೇ.
ಇನ್ನೊಂದು ಘಟನೆ.... ಅಂದು ನಮ್ಮ ಶಾಲೆಯಲ್ಲಿ ಸ್ಕೌಟ್ ಮತ್ತು ಗೈಡ್ ಚಟುವಟಿಕೆಗಳು ಸಕ್ರಿಯವಾಗಿದ್ದುವು. ಮೇಲೆ ಹೇಳಿದ ಅದೇ ಶಿಕ್ಷಕಿ ಗೈಡಿನ ಮುಖ್ಯಸ್ತೆಯೂ ಆಗಿದ್ದರು (ನಂತರ ಇವರು ಗೈಡಿನ ಜಿಲ್ಲಾ ಆಯುಕ್ತೆಯೂ ಆದರು). ಅಂದಿನ ದಿನಗಳಲ್ಲಿ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಗೈಡುಗಳ ಲೇಜೀಮ್ ಅಥವಾ ಯೋಗ್ಛಾ ಪ್ ಪ್ರಮುಖ ಆಕರ್ಷಣೆಯಾಗಿತ್ತು. ಅದು ತಗಡಿನ ಪುಟ್ಟ ಪುಟ್ಟ ಗಾಲಿಗಳನ್ನು ಪೇರಿಸಿ ಮಾಡಿದ ಒಂದು-ಒಂದೂವರೆ ಅಡಿ ಉದ್ದದ ಲೋಹದ ದಂಟು. ಅದರ ಒಂದು ತುದಿಯಿಂದ ಇನ್ನೊಂದು ತುದಿಗೆ ಗಟ್ಟಿಯಾದ ಹಗ್ಗ ಬಿಗಿದಿರುತ್ತಿತ್ತು. ಒಂದು ಕೈಯಲ್ಲಿ ಆ ಲೋಹದ ಕೋಲನ್ನೂ ಇನ್ನೊಂದು ಕೈಯಲ್ಲಿ ಹಗ್ಗವನ್ನೂ ಹಿಡಿದು ತಾಳಬದ್ಧವಾಗಿ ಆಡಿಸುತ್ತಾ ಲಯಬದ್ಧವಾಗಿ ಕುಣಿಯುವುದೇ ಲೇಜೀಮ್. ಸತತ ಅಭ್ಯಾಸದಿಂದ ಮಾತ್ರವೇ ಅದನ್ನು ಮಾಡಲು ಸಾಧ್ಯವಿತ್ತು. ಶಾಲೆ ಮುಗಿದ ಮೇಲೆ ಅಂದರೆ ನಾಲ್ಕು ಘಂಟೆಯ ನಂತರ ಇದರ ಅಭ್ಯಾಸವಿರುತ್ತಿತ್ತು. ಭಾರದ ಲೇಜೀಮ್ ಹಿಡಿದು ಹುಡುಗಿಯರು ವೃತ್ತಾಕಾರದಲ್ಲಿ ಕುಣಿಯಬೇಕು. ಇಂತಹ ಹಲವು ವೃತ್ತಗಳಿರುತ್ತವೆ. ಯಾವುದೋ ಒಂದು ವೃತ್ತದಲ್ಲಿ ಹುಡುಗಿಯೋರ್ವಳು ಕುಣಿಯುತ್ತಾ ಕುಣಿಯುತ್ತಾ ಸುಸ್ತಾಗಿ ಅಲ್ಲೇ ಕುಸಿದು ಕುಳಿತು ಯಾರಿಗೂ ತಿಳಿಯಬಾರದೆಂಬಂತೆ ಬಾಯಿಗೆ ಕೈಯ್ಯಡ್ಡ ಇಟ್ಟು ಅಳುತ್ತಾಳೆ.... ಉಳಿದ ಹುಡುಗಿಯರೆಲ್ಲಾ ಅವಳನ್ನು ಹೊರತುಪಡಿಸಿದ ವೃತ್ತವನ್ನು ರಚಿಸಿ ಕುಣಿಯುತ್ತಲೇ ಇದ್ದರೆ ಒಬ್ಬರೇ ಒಬ್ಬರು ಶಿಕ್ಷಕಿ ಮಾತ್ರ ಅವಳೆದುರು ಹಾಜರಾಗುತ್ತಾರೆ.
ಬೆನ್ನು ತಟ್ಟಿ ಸಮಾಧಾನ ಪಡಿಸಿ ಎದುರಿನ ಕೃಷ್ಣಣ್ಣನ ಅಂಗಡಿಯಿಂದ ಎಳೆನೀರು ತರಿಸಿ ಅವಳಿಗೆ ಕುಡಿಸಿ ನಲ್ಲಿಯ ಬಳಿಗೊಯ್ದು ಮುಖ ತೊಳೆಸಿ ಅಟೋವೊಂದನ್ನು ಕರೆದು ಜೋಪಾನವಾಗಿ ಅವಳನ್ನು ಮನೆ ಮುಟ್ಟಿಸುವ ಜವಾಬ್ದಾರಿಯನ್ನೂ ದುಡ್ಡನ್ನೂ ಡ್ರೈವರಿಗಿತ್ತು (ಅಂದೆಲ್ಲ ಒಬ್ಬಂಟಿ ಹುಡುಗಿ ಅಪರಿಚಿತ ವ್ಯಕ್ತಿಯೊಂದಿಗೆ ಕ್ಷೇಮವಾಗಿ ಮನೆ ತಲುಪಿಯಾಳೇ ಎಂದು ಭಯ ಪಡಬೇಕಾಗಿರಲಿಲ್ಲ.)ಕಳುಹಿಸುತ್ತಾರೆ...
ಈ ಮೇಲಿನ ಎರಡೂ ಘಟನೆಗಳಲ್ಲಿ ಪ್ರಸಂಗಾವಧಾನತೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿದವರೇ ನನ್ನ ಸವಿತಾ ಟೀಚರು. ನಮ್ಮ ಬಾಸೆಲ್ ಎವ್ಯಾಂಜಲಿಕಲ್ ಮಿಷನ್ ಹೈಸ್ಕೂಲಿನ ವಿಜ್ಞಾನದ ಶಿಕ್ಷಕಿಯಾಗಿದ್ದವರು. ನನ್ನ ಶಾಲಾ ದಿನಗಳು ಇಂತಹ ಎಷ್ಟೆಷ್ಟೋ  ಘಟನೆಗಳಿಗೆ ಸಾಕ್ಷಿಯಾಗಿವೆ. ಆವಾಗ ಅಂತಹ ಸಂದರ್ಭಗಳನ್ನು ವಿಮರ್ಶಾತ್ಮಕವಾಗಿ ನೋಡುವ ಪ್ರೌಧಿಮೆ ನ    ನ್ನಲ್ಲಿ   ಇರಲಿಲ್ಲ. ಈಗ ಸುಮ್ಮನೆ ಕುಳಿತು ಅಂದಿನ ದಿನಗಳನ್ನು ಮೆಲುಕು ಹಾಕುವಾಗ ಗುರು ಶಿಷ್ಯರ ಸಂಬಂಧದೊಳಗಣ ಮಾರ್ದವತೆಗೆ ಅವರು ಕೊಡುತ್ತಿದ್ದ ಪ್ರಾಮುಕ್ಯತೆಯ ಅರಿವಾಗುತ್ತೆ.
ನಾನಾಗ ಎಂಟನೆಯ ತರಗತಿಯಲ್ಲಿದ್ದೆ. ಸವಿತಾ ಟೀಚರು ಜೀವ ಶಾಸ್ತ್ರ ವಿಷಯವನ್ನು ತೆಗೆದುಕೊಳ್ಳುತ್ತಿದ್ದರು.  'ಮನುಷ್ಯದೇಹ -ಚರ್ಮದ  ರಚನೆ ಹಾಗೂ ಕಾರ್ಯ ವಿಧಾನ ' ಅಂದಿನ ವಿಷಯವಾಗಿತ್ತು. ಚರ್ಮದ ಪದರುಗಳು,ಅವುಗಳ ಕೋಮಲತೆಯನ್ನು ಪ್ರಾತ್ಯಕ್ಷಿಕೆಯ ಮೂಲಕ ನಮಗೆ ಮನದಟ್ಟು ಮಾಡಿದ್ದರು. ಆ  ಡೆಮೋ ಹೀಗಿತ್ತು...,  ಅಂದು ಅವರು ತರಗತಿಗೆ ಇಸ್ತ್ರಿಪೆಟ್ಟಿಗೆಯನ್ನು ತಂದಿದ್ದರು. ಗೋಡೆಯಲ್ಲಿರುವ ಪ್ಲಗ್ಗಿಗೆ ಅದನ್ನು ಸಿಗಿಸಿ ಬಿಸಿಮಾಡಿ ತಮ್ಮ ಮುಂಗೈಗೆ ಅದನ್ನು ತಾಗಿಸಿ ಚರುಕ್ ಎಂದು  ಚರ್ಮವನ್ನು ಕರಟಿಸಿಕೊಂಡಿದ್ದರು. ನನಗೆ ಈಗಲೂ ಚೆನ್ನಾಗಿ ನೆನಪಿದೆ. ಯಾವಾಗಲೂ ಎದುರು ಬೆಂಚಿನಲ್ಲಿ ಕುಳಿತಿರುತ್ತಿದ್ದ  ನಾನಾಗ ಗಟ್ಟಿ
ಯಾಗಿ ಕಿರುಚಿಕೊಂಡಿದ್ದೆ,
"ಅಯ್ಯೋ...., ಟೀಚಾ..., ನಿಮ್ಮ ಕೈ..."

ಸವಿತಾ ಟೀಚರೆಂದರೆ ಯಾವಾಗಲೂ ಅವರ ಸುತ್ತಮುತ್ತ ಹಿಂಡು ಹಿಂಡು ಮಕ್ಕಳು ಇರಲೇಬೇಕು. ಅಂದು ಎನ್ . ಆರ್ ಕಾಮತ್  ಅವರು ನಮ್ಮ ಹೆಡ್ ಮಾಸ್ತರು. ತುಂಬಾ ಸ್ಟ್ರಿಕ್ಟ್. ಸಾಲದುದಕ್ಕೆ ಶಾಲೆಯ ಪ್ರತಿಯೊಬ್ಬ ಸ್ಟೂಡೆಂಟನ್ನೂ ಹೆಸರು ಹಿಡಿದು ಕರೆಯಬಲ್ಲವರಾಗಿದ್ದರು.ಅವರೆದುರು ನಿಲ್ಲುವುದನ್ನು ಊಹಿಸಿಯೇ ಛಳಿ,ಜ್ವರ ಎರಡೂ ಸೇರಿಕೊಂಡವರಂತೆ ನಡುಗುತ್ತಿದ್ದೆವು. ಕೆಲವೊಂದು ದಿವಸ ನಮಗೆ ಯಾವುದಾದರೂ ಒಂದು ಕ್ಲಾಸು ಫ್ರೀ ಇರುತ್ತಿತ್ತು. ಕೈಕಟ್ಟಿ ಬಾಯ್ಮುಚ್ಚಿ ಕುಳಿತುಕೊಳ್ಳುವಷ್ಟು ಪಾಪದ ಮಕ್ಕಳಲ್ಲ ನಾವು. ನಮ್ಮ ದಂಡು ಸವಿತಾ ಟೀಚರನ್ನು ಹುಡುಕಿಕೊಂಡು ಹೊರಡುತ್ತಿತ್ತು. ಅವರಿಗೆ  ದಂಬಾಲು ಬಿದ್ದು ಹೆಡ್ಮಾಸ್ಟರ ಅಪ್ಪಣೆ ಸಿಗುವಂತೆ ಮಾಡಿಸಿಕೊಂಡು ತ್ರೋ ಬಾಲು ಹಿಡಿದುಕೊಂಡು ಮೈದಾನಕ್ಕೆ ಲಗ್ಗೆ ಇಡುತ್ತಿದ್ದೆವು. ಕೊನೆಯ ಕ್ಲಾಸು ಫ್ರೀ ಇದ್ದರಂತೂ ನಮ್ಮ ಆಟ ಐದು ಘಂಟೆಯವರೆಗೂ ಮುಂದುವರಿಯುವುದಿತ್ತು. ಆಗ ಕೆಲವೊಂದು ಬಾರಿ ಸವಿತಾ ಟೀಚರು ನಮ್ಮೊಂದಿಗೆ ಆಡುವುದಿತ್ತು. ಆಗೆಲ್ಲಾ ನಮ್ಮೊಳಗೇ ವಾಗ್ಯುದ್ಧ ನಡೆಯುತ್ತಿತ್ತು.
"ಟೀಚಾ...., ನೀವು ನಮ್ಮ ಪಾರ್ಟಿಗೇ.... "
"ಇಲ್ಲ ಟೀಚಾ....,ಇವತ್ತು ನೀವು  ನಮ್ಮ ಪಾರ್ಟಿಗೇ ಬರಬೇಕು.... ಓ ಮೊನ್ನೆ ನೀವು ಅವರ ಪಾರ್ಟಿಯಲ್ಲಿ ಆಡಿದ್ರಲ್ಲಾ..."

ಹತ್ತನೇ ತರಗತಿಯಲ್ಲಿದ್ದಾಗ  ನಾನೂ ಎಲ್ಲರಂತೆ ಹಸ್ತಾಕ್ಷರ ಪುಸ್ತಕ ಮಾಡಿದ್ದೆ. ಎಲ್ಲಾ  ಶಿಕ್ಷಕ, ಶಿಕ್ಷಕಿಯರು ಶುಭ ಹಾರೈಕೆಗಳೊಂದಿಗೆ  ಹಸ್ತಾಕ್ಷಗಳನ್ನು ನೀಡಿಯಾಗಿತ್ತು. ಸ್ನೇಹಿತ, ಸ್ನೇಹಿತೆಯರು ವಿಧ ವಿಧದ ಕಾಮೆಂಟ್ಸ್ಗಳೊಂದಿಗೆ ಬರೆದ ಶಭಾಶಂಸೆಗಳಿಂದ ನನ್ನ ಪುಸ್ತಕ ತುಂಬಿ ತುಳುಕುತ್ತಿತ್ತು. ಆದರೆ ಒಂದೇ ಒಂದು ಹಾಳೆಯನ್ನು ಖಾಲಿ ಬಿಟ್ಟಿದ್ದೆ. ಸವಿತಾ ಟೀಚರ  ಹಸ್ತಾಕ್ಷರಕ್ಕಾಗಿ. ಮುಂದೆ ಕೆಲವೇ ದಿನಗಳಲ್ಲಿ ನಾನು ಕಾಮಾಲೆ ರೋಗದಿಂದ ಅಸ್ವಸ್ಥಳಾದೆ. ಸುಮಾರು ಒಂದು ತಿಂಗಳ ಕಾಲ  ಶಾಲೆಗೆ ಹೋಗಲಾಗಲಿಲ್ಲ. ಕಾಯಿಲೆಯಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಪಬ್ಲಿಕ್ ಪರೀಕ್ಷೆಗೆ ಓದಿಕೊಳ್ಳಲೆಂದು ರಜಾ ಸಾರಿದ್ದರು. ನಂತರ ಪರೀಕ್ಷೆ..... ಅದು ಮುಗಿದು ಫಾಲಿತಾಂಶ ನೋಡಲೆಂದು ಶಾಲೆಗೆ ಹೋದಾಗಲೂ ಸವಿತಾ ಟೀಚರನ್ನು  ಭೇಟಿಯಾಗಲಾಗಿರಲಿಲ್ಲ. ನನ್ನ ಪುಸ್ತಕದಲ್ಲಿ ಆ ಒಂದು ಹಾಳೆ ಖಾಲಿಯಾಗಿಯೇ ಉಳಿಯಿತು.
ಮುಂದೆ ನಾನು ಕಾಲೇಜು ಹುಡುಗಿಯಾದೆ. ಹೊಸ ವಾತಾವರಣ...,ಹೊಸ ಶಿಕ್ಷಕರು .... ಹೊಸ ಗೆಳತಿಯರು.... ಪಾಠಗಳು ....  ಇತರ ಚಟುವಟಿಕೆಗಳು .... ಇತ್ಯಾದಿಗಳ ಭರಾಟೆಯಲ್ಲಿ  ಸವಿತಾ ಟೀಚರು ತಾತ್ಕಾಲಿಕವಾಗಿ  ಮರೆವಿನ ಪರದೆಯ ಹಿಂದೆ ಸರಿದು ಹೋದರು.ಮುಂದೆ ಅವರಿಗೆ ಮದುವೆಯಾಯಿತೆಂದು ತಿಳಿಯಿತು.ಕೆಲವು ವರ್ಷಗಳ ನಂತರ ನಾನೂ ಶ್ರೀಮತಿಯಾದೆ. ನಾವಿಬ್ಬರೂ ಮದುವೆಯಾದ ಮೇಲೂ ತವರೂರಲ್ಲೇ ಸೆಟ್ಲ್ ಆದವರು. ನಮ್ಮೂರಿನ ಮಲ್ಲಿಕಾರ್ಜುನ ದೇವಾಲಯದಲ್ಲೋ  ಲಲಿತಕಲಾಸದನದಲ್ಲೋ ಆಗೊಮ್ಮೆ ಈಗೊಮ್ಮೆ ದೂರದಿಂದ ಅವರನ್ನು ಕಾಣುವುದಿತ್ತು.ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ವ್ಯಸ್ತರಾಗಿರುತ್ತಿದ್ದ ಸವಿತಾ ಟೀಚರು ಸಾವಕಾಶವಾಗಿ ಮಾತಿಗೆ ಸಿಗುತ್ತಲೇ ಇರಲಿಲ್ಲ. ಆ ಹೊತ್ತಿಗಾಗಲೇ ಅವರು ಸರ್ವರಿಗೂ ಬೇಕಾದ ಸವಿತಕ್ಕ ಆಗಿ ಹೋಗಿದ್ದರು.
ಹಿಂದೂ ಮಹಿಳಾ ಸಂಘಟನೆಯ ಸಕ್ರಿಯ ಕಾರ್ಯಕರ್ತೆ, ಅಲ್ಲಲ್ಲಿ ಶಾಲೆಗಳಲ್ಲಿ, ಸಾಮಾಜಿಕ ಕೇಂದ್ರಗಳಲ್ಲಿ ಶಿಬಿರಗಳನ್ನೇರ್ಪ  ಡಿಸಿ ಹೆಣ್ಣು ಮಕ್ಕಳ ಸಬಲೀಕರಣದತ್ತ ಅರಿವು ಮೂಡಿಸುವಿಕೆ... ಹಿಂದೂ ಸಂಸ್ಕೃತಿಯ ಬಗ್ಗೆ ತಿಳುವಳಿಕೆ ನೀಡುವುದು... ಮಹಿಳೆಯರ  ಸಮಸ್ಯೆಗಳಿಗೆ ಸ್ಪಂದಿಸುವುದು.... ಸ್ವಚ್ಚತಾ ಆಂದೋಲನದ ನೇತ್ರತ್ವ... ಅಪಾರ  ಮಾನಸಿಕ ಹಾಗೂ ದೈಹಿಕ ಶ್ರಮಗಳನ್ನು ಬೇ ಡುವಂತಹ ಈ ಎಲ್ಲಾ ಚಟುವಟಿಕೆಗಳಲ್ಲೂ ಅವರದು ನಗುಮುಖದ ದಣಿವಿರದ ಪಾಲ್ಗೊಳ್ಳುವಿಕೆ.

ಒಂದು ಬೆಳಗ್ಗೆ ದಿನಪತ್ರಿಕೆಯಲ್ಲಿ ಅವರ ಭಾವ ಚಿತ್ರ ಅಚ್ಚಾಗಿರುವುದನ್ನು ಕಂಡೆ. ಕೆಳಗೆ ಬರೆದಿತ್ತು,'ಅತ್ಯುತ್ತಮ ಶಿಕ್ಷಕಿ ಎಂದು ಕೇರಳ ರಾಜ್ಯ ಪ್ರಶಸ್ತಿಗೆ ಭಾಜನರಾದ ಶ್ರೀಮತಿ ಸವಿತಾ ಐ. ಭಟ್..... ' ಓದುತ್ತಿದ್ದಂತೆ ಎಷ್ಟೋ  ವರ್ಷಗಳ ನಂತರ ನನ್ನ ಹೃದಯ ಮತ್ತೆ ಪಿಸುಗುಟ್ಟಿತ್ತು...,"ಒಹ್..., ನನ್ನ ಸವಿತಾ ಟೀಚರು... " 

ನಮ್ಮ ಬಿ.ಇ.ಎಮ್.ಹೈಸ್ಕೂಲಿನ ಪ್ರಿನ್ಸಿಪಲ್ ಹುದ್ದೆ ಎಂದರೆ ಅದು ಬಹು ಪ್ರತಿಷ್ಟಿತ  ಸ್ಥಾನ ಎಂದೇ ಈಗಲೂ ಪರಿಗಣಿಸಲಾಗುತ್ತದೆ. ನಮ್ಮ ಟೀಚರು ಆ ಸ್ಥಾನವನ್ನೂ ಅಲಂಕರಿಸಿಯೇ ನಿವೃತ್ತರಾದರು. ನಿವೃತ್ತಿಯ ನಂತರವೂ ಅವರ ಬಾಳ ಪುಟದಲ್ಲಿ ಪೂರ್ಣ ವಿರಾಮದ ಚಿಹ್ನೆಯೇ ಇರಲಿಲ್ಲ, ಬರೀ ಅಲ್ಪ ವಿರಾಮವೇ..., ಚಿನ್ಮಯಾ  ವಿದ್ಯಾಲಯದ ಪ್ರಿನ್ಸಿಪಲ್ ಹುದ್ದೆ, ನಿವೃತ್ತ ಶಿಕ್ಷಕರ ಸಂಘದ ಪ್ರಾಂತ್ಯ ಉಪಾಧ್ಯಕ್ಷೆ, ಒಂದು ಅವಧಿಗೆ ಕಾಸರಗೋಡು ನಗರಪಾಲಿಕೆಯ ಸದಸ್ಯತ್ವ, ಚಿನ್ಮಯಾ ಮಿಷನ್ ಕಾಸರಗೋಡು ವಿಭಾಗದ ದೇವಿ ಗ್ರೂಪಿನ ಸದಸ್ಯೆ(ಅಧ್ಯಾತ್ಮಿಕ ಕಾರ್ಯಕ್ರಮಗಳ ಸಂಯೋಜನೆ ಈ ಬಳಗದ ಕೆಲಸ)..... ಇವೆಲ್ಲವುಗಳೊಂದಿಗೆ ಕಾಲ ಓಡುತ್ತಾ ಓಡುತ್ತಾ ಸವೆದು ಸುಸ್ತಾದರೂ ಸವಿತಾ ಟೀಚರ ಜೀವನೋತ್ಸಾಹ ಒಂದಿನಿತೂ ಸವೆದಿರಲಿಲ್ಲ. 

 ಸುಮಾರು ಇಪ್ಪತ್ತು ವರ್ಷಗಳ ಕಾಲ ಪತಿ, ಮನೆ, ಮಕ್ಕಳ ಪ್ರಪಂಚದ ಸುತ್ತಲೇ ಗಿರಕಿ ಹೊಡೆಯುತ್ತಿದ್ದ ನಾನು ಮಕ್ಕಳೆಲ್ಲರೂ ವಿದ್ಯಾವಂತರಾಗಿ  ಅವರವರ ಕಾಲಮೇಲೆ ನಿಲ್ಲುವಂತಾದಾಗ ಮೆಲ್ಲನೆ ನನ್ನ ಚಿಪ್ಪಿನಿಂದ ಹೊರಬರಲು ಮನಸ್ಸು ಮಾಡಿದೆ. ಓದು... ಬರವಣಿಗೆ... ಚಿತ್ರಕಲೆ.... ಸಾಮಾಜಿಕ ಚಟುವಟಿಕೆಗಳು.... ಸಮಾನ ಮನಸ್ಕರೊಂದಿಗೆ ವಿಚಾರ ವಿಮರ್ಶೆ.....  ಇವೆಲ್ಲವುಗಳು ನನ್ನ ಸಂಗಾತಿಗಳಾಗುತ್ತಿದಂತೆ  ಸವಿತಾ ಟೀಚರು ಮತ್ತೆ ನನ್ನ ಬಾಳಪುಟದಲ್ಲಿ ತಮ್ಮ ಛಾಪನ್ನು ಒತ್ತತೊಡಗಿದರು.  ಅಂದಿನ ಇಪ್ಪತ್ತನಾಲ್ಕರ ಸವಿತಾ ಟೀಚರಿಗೂ ಇಂದಿನ ಅರುವತ್ತನಾಲ್ಕರ ಸವಿತಾ ಟೀಚರಿಗೂ ಇದ್ದುದು ಎರಡೇ ಎರಡು ವ್ಯತ್ಯಾಸ ಒಂದು ಕನ್ನಡಕ ಮತ್ತೊಂದು ತಲೆಯಲ್ಲಿನ ಬೆಳ್ಳಿ ಗೆರೆಗಳು!ಉಳಿದಂತೆ ಎಲ್ಲಾ ಸೇಮ್ ಟು ಸೇಮ್ ..... ಅದೇ ತೆಳ್ಳಗಿನ ಶರೀರ, ಅದೇ ಪಾದರಸದಂತಹ ಚುರುಕು ನಡಿಗೆ, ಸಮಾಜಮುಖಿ ಕೆಲಸಗಳಿಗೆ ಹಿಂಜರಿಯದೆ ಸೈ ಎನ್ನುವ ಅದೇ ಗಟ್ಟಿ ನಿಲುವು..... 

ಅಂದು ವಿದ್ಯಾಮಂದಿರದಲ್ಲಿ ಪಾಠ ಕಲಿಸುತ್ತಿದ್ದ ಅವರು ಇಂದು ಭಜನಾಮಂದಿರದಲ್ಲಿ ಭಜನೆ ಹಾಡುವುದನ್ನು ಕಲಿಸುತ್ತಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಒಂದು ಘಂಟೆ ಹೊತ್ತು ಸಲೀಸಾಗಿ ಚಕ್ಕಳ ಮಕ್ಕಳ ಹಾಕಿ ಕುಳಿತು ಸುಶ್ರಾವ್ಯವಾಗಿ ಅವರು ಹಾಡುವಾಗ ನಾನು ಗಂಟಲು ಸರಿಪಡಿಸಿಕೊಳ್ಳುತ್ತಾ ಕುಳಿತಭಂಗಿಯನ್ನು ಆಗಾಗ ಬದಲಿಸಿಕೊಳ್ಳುತ್ತಾ ಭಜನೆಯನ್ನು ಕಲಿತುಕೊಳ್ಳುತ್ತಿದ್ದೇನೆ. ಅಂದಿನಿಂದ ಇಂದಿನವರೆಗೂ ಖಾಲಿಯಾಗೇ ಉಳಿದಿದ್ದ ಹಸ್ತಾಕ್ಷರ ಪುಸ್ತಕದ ಆ ಹಾಳೆ   ಭರ್ತಿಯಾಗುವ ಸಮಯ  ಕೊನೆಗೂ ಬಂದೇ   ಬಂತು... ಅದು  ಸವಿತಾ ಟೀಚರ ಭಜನೆಗಳಿಂದ !ನನ್ನ ಅಚ್ಚು ಮೆಚ್ಚಿನ ಶಿಕ್ಷಕಿ ಅಂದೂ ನನ್ನ  ಟೀಚರು.... ಇಂದೂ ನನ್ನ ಟೀಚರು... ಇಂತಹ ಭಾಗ್ಯ ಎಷ್ಟು ಜನರಿಗೆ ದೊರೆತೀತು...?

ಇಂದು ಶಿಕ್ಷಕರ ದಿನಾಚರಣೆ..... ಅವರಿಗೆ ಹೀಗೊಂದು ನುಡಿ ನಮನ.....
   


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ