ಇದು ನಾನು ಕಂಪ್ಯೂಟರ್ ಕ್ಲಾಸಿಗೆ ಹೋಗುತ್ತಿರುವಾಗ ನಡೆದ ಘಟನೆ. ದಿನಾಲೂ ನಾನು ಅದೇ ಬಸ್ಸಿನಲ್ಲಿ ಹೋಗುತ್ತಿದ್ದೆ. ಕೆಲವೇ ದಿನಗಳಲ್ಲಿ ಅದರ ಚಾಲಕ,ನಿರ್ವಾಹಕರಿಗೆ ನಾನೆಷ್ಟು ಪರಿಚಿತಳಾದೆನೆಂದರೆ ಬಸ್ಟಾಪಿಗೆ ತಲುಪಲು ಇನ್ನೂ ಹತ್ತು ಹದಿನೈದು ಹೆಜ್ಜೆ ಹಿಂದೆ ಇದ್ದಾಗಲೇ ಆ ಬಸ್ ಬಂತೆಂದಾದರೆ ನನಗಾಗಿ ಒಂದು ನಿಮಿಷ ನಿಂತು ನನ್ನನ್ನು ಹತ್ತಿಸಿಕೊಂಡೇ ಹೊರಡುತ್ತಿತ್ತು. ಬಸ್ಸಿನ ಕಂಡಕ್ಟರ ಹೆಚ್ಚೆಂದರೆ ಇಪ್ಪತ್ತು ವರ್ಷದವನಿರಬಹುದು.ಆತನನ್ನು ನೋಡುವಾಗಲೆಲ್ಲಾ ಯಾಕೋ ಮೈಕೆಲ್ ಜ್ಯಾಕ್ಸನ್ ನೆನಪಾಗುತ್ತಿದ್ದ. ವ್ಯತ್ಯಾಸವೆಂದರೆ ಆತ ಚರ್ಮವನ್ನು ಬೆಳ್ಳಗೆ ಮಾಡಿಕೊಂಡಿದ್ದ. ಈತನ ಬಣ್ಣ ಸಹಜವಾಗೇ ಇತ್ತು. ನ್ಯೂಡಲ್ಸ್ಗಳಂತೆ ಸುರುಳಿಯಾಕಾರದಲ್ಲಿ ಒದ್ದೆ ಒದ್ದೆಯಾಗಿ(ಬಹುಶಃ ಜೆಲ್ಲಿನ ಪ್ರಭಾವ ಇರಬಹುದು)ಕಿವಿಯ ಕೆಳಭಾಗದವರೆಗೆ ಜೋತುಬೀಳುತ್ತಿದ್ದ ಕೂದಲು, ಬಾಯಿ ತೆರೆದೇ ಇರುತ್ತಿದ್ದ ಅಂಗಿಯ ಎರಡು ಮೂರು ಗುಂಡಿಗಳು, ಒಳಗಿನಿಂದ ಇಣುಕುವ ಬಣ್ಣ ಬಣ್ಣದ ಬನಿಯನ್, ನಾವೆಲ್ಲಾ ಚಿಕ್ಕದಿರುವಾಗ ಪುಂಡು ಕೋಣನನ್ನು ಹದ್ದುಬಸ್ತಿನಲ್ಲಿಡಲು ಅದರ ಮೂಗಿಗೆ ತೂತು ಕೊರೆದು ಒಂದು ವಿಧದ ಹಗ್ಗವನ್ನು ಸಿಗಿಸುತ್ತಿದ್ದರು. ಅದನ್ನು ನೆನಪಿಸುವ ಬಳೆ ಎನ್ನಬಹುದಾದಂತಹ ಆಭರಣ ಕೈಯ್ಯಲ್ಲಿ, ಇನ್ನು ಆತ ತೊಟ್ಟುಕೊಂಡಿರುತ್ತಿದ್ದ ಜೀನ್ಸನ್ನು ನೋಡಿದರೆ ಅದನ್ನು ಕಂಡುಹಿಡಿದ ಮಹಾಶಯನೇ ಆತ್ಮಹತ್ಯೆ ಮಾಡಿಕೊಳ್ಳುವುದು ಖಂಡಿತ. ಎರಡೂ ತೊಡೆಯ ಮೇಲ್ಭಾಗದಲ್ಲಿ ಡ್ರಾಕುಲನ ಮುಖದ ಟ್ಯಾಟೂ ...! ಮೊಣಕಾಲಿನ ಕೆಳಭಾಗದಲ್ಲಿ ಅಂಗೈ ಅಗಲದ ತೂತು....(ಎರಡೂ ಬದಿ ಒಂದೇ ತರದ ತೂತಿತ್ತಾದುದರಿಂದ ಅದು built in fashion ಇರಬಹುದು ಎಂದುಕೊಂಡೆ). ಕಂಡಕ್ಟರನಿಗೆಂದೇ ಇರುವ ಆಸನದಲ್ಲಿ ಆತ ಕುಳಿತಿದ್ದುದನ್ನು ನಾನು ನೋಡಿರಲೇ ಇಲ್ಲ. ನನ್ನ ಪ್ರಯಾಣ ಮಧ್ಯಾಹ್ನದ ಹೊತ್ತಿಗಿತ್ತಾದುದರಿಂದ ಬಸ್ಸಲ್ಲಿ ಜನ ಸಂದಣಿ ಇರುತ್ತಿರಲಿಲ್ಲ. ಆದರೂ ಆ ಹುಡುಗ ಹಿಂದಕ್ಕೂ ಮುಂದಕ್ಕೂ ನಡೆಯುತ್ತಲೇ ಇರುತ್ತಿದ್ದ. ಮೊಬೈಲ್ ಸಂಭಾಷಣೆ, ಟಿಕೆಟ್ ಕೊಟ್ಟು ದುಡ್ಡು ಪಡಕೊಳ್ಳುವುದು, ಪ್ರಯಾಣಿಕರನ್ನು ಹತ್ತಿಸಿ ,ಇಳಿಸಿಕೊಳ್ಳುವುದು- ಈ ಮೂರೂ ಕೆಲಸಗಳನ್ನುಒಂದೇ ಬಾರಿಗೆ ಸಮರ್ಪಕವಾಗಿ ಅವನು ನಿರ್ವಹಿಸುವ ರೀತಿ ನೋಡಿದರೆ ಮ್ಯಾನೇಜ್ಮೆಂಟ್ ಗುರುಗಳು multitask management ಬಗ್ಗೆ ಒಂದೆರಡು ಕ್ಲಾಸುಗಳನ್ನ ಇವನ ಕೈಯಿಂದಲೇ ತೆಗೆದುಕೊಳ್ಳುವುದು ಒಳಿತು ಎನ್ನುವಂತಿತ್ತು! ಪ್ರಯಾಣಿಕರು ಚಿಲ್ಲರೆಗೆ ಬದಲು ಇಡಿ ಇಡೀ ನೋಟುಗಳನ್ನು ಕೊಟ್ಟರೆ ಗರಂ ಆಗುತ್ತಿದ್ದ. ಆತ ಗುರಾಯಿಸುವುದನ್ನು ನೋಡಿದರೇ ನನ್ನ ಎದೆ ಬಡಿತ ಏರುತ್ತಿತ್ತು. ಮೊದಲೇ ವಿಕಾರ ವೇಷ, ಒರಟು ಮಾತು.... ಇಂತವನಿಂದ ಬೈಗುಳ ತಿನ್ನುವ ಕರ್ಮ ನನಗಾದರೂ ಯಾಕೆ ಬೇಕು...? ದಿನಾಲೂ ಕರಾರುವಕ್ಕಾಗಿ ಏಳು ರೂಪಾಯಿ ಚಿಲ್ಲರೆಯನ್ನೇ ಕೊಡುತ್ತಿದ್ದೆ. ನಮ್ಮ ಕೇರಳದ ಬಸ್ಸುಗಳಲ್ಲಿ ಮಹಿಳೆಯರಿಗೆಂದು ಮೀಸಲಿರಿಸಿದ ಆಸನಗಳಲ್ಲಿ ಪುರುಷರು ಕುಳಿತುಕೊಳ್ಳುವುದು ಕಡ್ಡಾಯವಾಗಿ ನಿಷಿದ್ಧ. ಅಪ್ಪಿ ತಪ್ಪಿ ಏನಾದರೂ ಆ ಸೀಟುಗಳಲ್ಲಿ ಗಂಡಸರು ಕುಳಿತರೆಂದರೆ ಆ ದಿನದ ಅವರ ನಸೀಬು ಖೊಟ್ಟಿ ಎಂದೇ ಲೆಕ್ಕ.ಈ ಕಂಡಕ್ಟರ ಹಿಂದೆ ಮುಂದೆ ನೋಡದೆ ಅವರನ್ನು ಝಾಡಿಸಿ ಬಿಡುತ್ತಿದ್ದ.
ಸಂಜೆ ಕ್ಲಾಸು ಮುಗಿಸಿ ಬರುವಾಗ ನನಗೆ ಆ ಬಸ್ಸು ಸಿಗುತ್ತಿರಲಿಲ್ಲ. ಒಂದು ದಿವಸ ನನ್ನ ಕ್ಲಾಸು ಅರ್ಧ ಘಂಟೆ ಮೊದಲೇ ಮುಗಿದಿತ್ತು. ರಸ್ತೆಗಿಳಿಯುತ್ತಿದ್ದಂತೆ ಅದೇ ಬಸ್ಸು ಪ್ರಯಾಣಿಕರನ್ನು ಭರ್ತಿ ಮಾಡಿಕೊಂಡು ಹೊರಡುವಅವಸರದಲ್ಲಿತ್ತು.ಕಂಡಕ್ಟರ ನನ್ನನ್ನು ನೋಡಿದ. 'ಠಣ್..' ಎಂದು ಘಂಟೆ ಹೊಡೆದು ಬಸ್ಸು ನಿಲ್ಲಿಸಿದ(ನಮ್ಮೂರಿನ ಬಸ್ಸುಗಳಲ್ಲಿ ಘಂಟೆಗಳಿವೆ. 'ಠಣ್' ಎಂದರೆ 'ನಿಲ್ಲು'ಎಂದೂ ಠಣ್... ಠಣ್... ಎಂದು ಎರಡು ಬಾರಿ ಹೊಡೆದರೆ 'ಹೊರಡು' ಎಂದರ್ಥ). ಹತ್ತಿಕೊಂಡೆ. ರಶ್ ಇತ್ತಾದುದರಿಂದ ನಿಂತುಕೊಳ್ಳಬೇಕಾಯ್ತು. ಯಾಕೋ ಅಚಾನಕ್ಕಾಗಿ ಹಿಂತಿರುಗಿ ನೋಡಿದೆ. ಎಡಬದಿಯ ಸೀಟುಗಳ ಮುಂದಿನ ಸಾಲಿನಲ್ಲಿ ಕುಳಿತ ಓರ್ವ ಹಿರಿಯರು ನನ್ನ ಗಮನ ಸೆಳೆದರು. ಅಚ್ಚ ಬಿಳಿಯ ಅಂಗಿ ಧರಿಸಿದ್ದರು. ನೀಟಾಗಿ ಹಿಂದಕ್ಕೆ ಬಾಚಿದ ಕೂದಲು, ಮುಖದಲ್ಲಿ ಎದ್ದು ಕಾಣುವಂತಹ ಕುಂಕುಮ ಬೊಟ್ಟು, ಕಿವಿಯಲ್ಲಿ ಸಿಗಿಸಿಕೊಂಡಿದ್ದ ತುಳಸಿ ಕುಡಿ, ಗಂಭೀರ ಮುಖ ಭಾವ, ಅದಕ್ಕೊಪ್ಪುವಂತಹ ಕನ್ನಡಕ...., ನೆಟ್ಟಗೆ ಕುಳಿತು ದಿನಪತ್ರಿಕೆಯನ್ನು ಓದುತ್ತಿದ್ದರು. ಕಂಡಕ್ಟರನನ್ನೂ ಇವರನ್ನೂ ಹೋಲಿಸಿ ನೋಡಿದ ಮನಸ್ಸು ಆ ಹುಡುಗನಿಗೆ
ಛೀಮಾರಿ ಹಾಕಿತು.'ಕಂಪ್ಯೂಟರ್, ಟಿ. ವಿ.,ಮೊಬೈಲ್ ಬಂದೇ ಇಂದಿನ ಮಕ್ಕಳು ಹಾಳಾಗಿಹೋದರು' ಎಂಬ ಘೋಷವಾಕ್ಯಕ್ಕೆ ನಾನೂ ಅಂಕಿತ ಹಾಕುತ್ತಿದ್ದೆನೇನೋ...? ಆದರೆ ಹಾಗಾಗಲಿಲ್ಲ. ಯಾಕೆ ಗೊತ್ತಾ...? ಮುಂದೆ ಓದಿ...
ನನ್ನ ಸ್ಟಾಪು ಬಂತು. ಇಳಿದೆ. ಎರಡು ಹೆಜ್ಜೆ ಇಟ್ಟಿದ್ದೆನೋ ಇಲ್ಲವೋ.... 'ಪಿಚಿಕ್' ಎಂಬ ಸದ್ದಿನೊಂದಿಗೆ ಹಿಡಿಗಾತ್ರದ ಉಗುಳು ಬಂದು ಬಿತ್ತು! ಕೂದಲೆಳೆಯ ಅಂತರದಲ್ಲಿ ಅದು ನನ್ನ ಮೈಗೆ ಬೀಳುವುದು ತಪ್ಪಿತ್ತು. ಆದರೆ ಅದರ ಹನಿಗಳು ನನ್ನ ಸೀರೆಯನ್ನು ಸ್ಪರ್ಶಿಸಿರಬಹುದು ಎಂಬ ಊಹೆಯಿಂದಲೇ ವಾಂತಿಬರುವ ಹಾಗಾಯ್ತು. ಸಿಟ್ಟಿನಿಂದ ಮುಖ ಮೇಲೆಮಾಡಿ ಉಗುಳು ಬಂದ ದಿಕ್ಕಿಗೆ ನೋಡಿದೆ. ಒಂದು ಕ್ಷಣದ ಹಿಂದೆ ಯಾವ ಹಿರಿಯರನ್ನು ನಾನು ಮನಸಾರೆ ಮೆಚ್ಚಿಕೊಂಡಿದ್ದೇನೋ ಅವರೇ ಉಗುಳಿದ್ದರು! ಮುಂದಕ್ಕೆ ಹೊರಟ ಬಸ್ಸು 'ಠಣ್' ಸದ್ದಿನೊಂದಿಗೆ ನಿಂತಿತು.
'' ಅಕ್ಕಾ..., ಮೈಗೆ ಉಗುಳು ಬಿತ್ತಾ... ?" ಕಂಡಕ್ಟರ ಕರೆದು ಕೇಳುತ್ತಿದ್ದ! ತಿರುಗಿ ನೋಡದೆ ಬೇರೆ ದಾರಿಯೇ ಇರಲಿಲ್ಲ(ಮೊದಲೇ ನಾನು ಅವನಿಗೆ ತುಂಬಾ ಹೆದರುತ್ತಿದ್ದೆ). ಮಾತನಾಡದೆ ಗಲಿಬಿಲಿ(ಇಂತಹ ಎಷ್ಟೋ ಘಟನೆಗಳಿಗೆ ನೀವೂ ಸಾಕ್ಷಿಯಾಗಿರಬಹುದು ಅಥವಾ ನಿಮಗೇ ಇಂತಹ ಅನುಭವಗಳಾಗಿರಲೂಬಹದು. ಆದರೆ ಪ್ರಯಾಣಿಕರ ಕಷ್ಟಗಳಿಗೆ ಸ್ಪಂದಿಸುವ ಚಾಲಕ,ನಿರ್ವಾಹಕರು ಎಲ್ಲೋ ನೂರಕ್ಕೊಬ್ಬರಿರಬಹುದು. ಸೋ.... ನಾನು ಗಲಿಬಿಲಿಗೊಂಡದ್ದು ಸಹಜವೇ ತಾನೇ?) ಯಿಂದ ಆತನೆಡೆಗೆ ನೋಡಿದೆ. ನನ್ನ ಬಳಿಗೆ ಬಂದು ನಿಂತ ಆತ ಆ ಹಿರಿಯರನ್ನು ಕೆಕ್ಕರಿಸಿ ನೋಡಿದ. ಅವರು ಆರಾಮವಾಗಿ ಟವೆಲಿನಿಂದ ಬಾಯಿ ಒರೆಸಿಕೊಳ್ಳುತ್ತಿದ್ದರು! ನಮ್ಮ ಕಂಡಕ್ಟರನ ಬಾಯಿಯಿಂದ ಬೈಗುಳದ ಜಲಪಾತವೇ ಬೋರ್ಗೊರೆದು ಹರಿಯತೊಡಗಿತು. ಅವನ ಮಾತುಗಳಲ್ಲೇ ಕೇಳಿ,
"ಉಂದು ಎಂಚಿನ ಸಾವು ಮಾರಾಯ ನಿನ್ನವು...? ಮೋಣೆಗ್ ಮಲ್ಲ ಕುಂಕುಮ ಬೊಟ್ಟು ಪಾಡ್ತ್ ,ಕೆಬಿಕ್ ತೊಳ್ಸಿ ದೀಂಟ ಈ ಮಲ್ಲ ದೇಬೇರ್ ಅಂದ್ ಗ್ರೇತಾನ...? ಉಂದು ನಿನ್ನ ಅಮ್ಮೆನ ಇಲ್ಲಲ್ತ ಜಾಲ್ ಅತ್ತ್ ... ನಿಂಕ್ ಬೋಡಾಯಿನ ಲೆಕ್ಕೋ ಉಗ್ಳಿಯಾರ.... ನಮ್ಮೋ ಟ್ಯಾಕ್ಸ್ ಕೊರ್ತು ಮಾಲ್ಪಾಯಿನ ರೋಡು ಉಂದು.... ಪೊನ್ಜೋ ಪೋಪುನೆ ಕಣ್ಣು ತೊಜುಜ್ಜಾ...?ನಿನ್ನ ಲೆಕ್ಕೊತ ನರ್ಮಾನಿಕ್ಲು ಉಪ್ಪುನಾಗ ಮೋದಿ ಲೆಕ್ಕೊತ ನೂದು ಜನ ಪ್ರಧಾನ ಮಂತ್ರಿ ಬತ್ತುಂಟ್ಲಾ ಈ ದೇಸೊ ಉದ್ದಾರ ಆವಾಂದಿಯಾ..."(ಇದು ಎಂತ ಕರ್ಮ ಮಾರಾಯ ನಿನ್ನದು ?ಮುಖದಲ್ಲಿ ದೊಡ್ಡ ಕುಂಕುಮ, ಕಿವಿಯಲ್ಲಿ ತುಳಸಿ ಇಟ್ಟು ನಿನೇನು ದೇವರು ಅಂತ ತಿಳ್ಕೊಂಡಿಯಾ?ಈ ತರ ಉಗುಳಲು ಇದೇನು ನಿನ್ನ ಮನೆಯ ಅಂಗಳ ಕೆಟ್ಟುಹೋಯ್ತೆ....?ನಾವು ಟ್ಯಾಕ್ಸ್ ಕೊಟ್ಟು ಮಾಡಿದ ರಸ್ತೆ ಇದು.... ಹೆಂಗಸರು ಹೋಗುವಾಗ ಕಣ್ಣು ಕಾಣ್ಸೋದಿಲ್ವಾ...? ನಿನ್ನಂತಹ ಜನರು ಇರುವಾಗ ಮೋದಿಯಂತಹವರು ನೂರು ಜನ ಪ್ರಧಾನ ಮಂತ್ರಿಗಳು ಬಂದರೂ ಈ ದೇಶ ಉದ್ಧಾರವಾಗಲಾರದು)
ಕೆರಳಿ ಕೆಂಡಾಮಂಡಲವಾದ ಆ ಗಂಡಸು ಅವಾಚ್ಯ ಶಬ್ದಗಳಿಂದ ಈ ಹುಡುಗನನ್ನು ಬೈಯ್ಯತೊಡಗಿದರು. ಅನಾವಶ್ಯಕ ತಮ್ಮ ಸಮಯವನ್ನು ಹಾಳು ಮಾಡಿದ ಆ ಬಿಳಿ ವೇಷದಾರಿಯೆಡೆಗೆ ಪ್ರಯಾಣಿಕರ ಸಿಟ್ಟು ತಿರುಗಿತು.ಇಡೀ ಬಸ್ಸಿನ ಗಮನದ ಕೇಂದ್ರ ಬಿಂದುವಾದ ಮುಜುಗರ, ಉಗುಳಿನಿಂದಾದ ಅಸಹ್ಯತೆ, ನನ್ನ ಕಾರಣಕ್ಕಾಗಿ ಆ ಮನುಷ್ಯ ಈ ಹುಡುಗನನ್ನು ಬೈಯ್ಯುತ್ತಿರುವುದು..... ಛೆ...., ಇದೆಲ್ಲಿಯ ಗ್ರಹಚಾರ.... ?ನನ್ನ ಜೀವ ಹಿಡಿಯಷ್ಟಾಗಿಹೋಯ್ತು.
ಪ್ರಯಾಣಿಕರೆಲ್ಲರೂ ಒಂದಾದಾಗ ಆ ಗಂಡಸಿನ ಧ್ವನಿ ಅಡಗಿತು. ನಮ್ಮ ಕಂಡಕ್ಟರ ಉಡದ ಜಾತಿಯವನೆಂದು ತೋರುತ್ತದೆ. ಹಿಡಿದ ಪಟ್ಟು ಬಿಡದೆ ಆ ಹಿರಿಯನ ಜೀಬಿನಿಂದ ಪರ್ಸ್ ತೆಗೆಸಿಯೇಬಿಟ್ಟ!
"ಇಂಬಾರೆಗ್ ಆರೇನ ಕುಂಟು ಕ್ಲೀನ್ ಮಾಲ್ಪಿಯಾರ ಲಾಂಡ್ರಿತ ಪೈಸೆ ಕೊರುಜ್ಜಿಯಾಂಟ ಇನಿ ಈ ಬಸ್ಸು ಪೋಪಿಜ್ಜಿ ..... (ಇವರಿಗೆ ಅವರ ಬಟ್ಟೆ ಕ್ಲೀನ್ ಮಾಡಲು ನೀನು ದುಡ್ಡು ಕೊಡದಿದ್ರೆ ಇವತ್ತು ಈ ಬಸ್ಸು ಹೊರಡೋದಿಲ್ಲ) ಡ್ರೈವರನೂ ಅಸಹನೆಯ ಧ್ವನಿ ಸೇರಿಸಿದ. ಪ್ರಯಾಣಿಕರ ಗಲಾಟೆ ಹೇಳತೀರದು. ಈಗ ನಾನೇನಾದರೂ ಹೇಳುವುದು ಅನಿವಾರ್ಯವಾಗಿತ್ತು.
"ನಿಮ್ಮನ್ನು ನೋಡಿದಾಗ ನೀವು ತುಂಬಾ ಸಂಸ್ಕಾರವಂತರು ,ತಿಳುವಳಿಕೆಯುಳ್ಳವರು ಎಂದುಕೊಂಡಿದ್ದೆ. ಆದರೆ ಅದೆರಡೂ
ಇದ್ದುದು ಈ ಕಂಡೆಕ್ಟರನಲ್ಲಿ..., ನಿಮ್ಮ ದುಡ್ಡನ್ನು ನಾನು ಮುಟ್ಟಿದರೆ ಅದರ ಮೂಲಕ ನಿಮ್ಮ ಚಾಳಿ ನನಗೂ ಹರಡಲೂಬಹುದು. ಹೇಗೂ ದುಡ್ಡನ್ನ ಪರ್ಸಿನಿಂದ ತೆಗೆದಿರಲ್ಲ, ಯಾವುದಾದರೂ ಕಾಣಿಕೆ ಡಬ್ಬಕ್ಕೆ ಹಾಕಿ ಇನ್ನಾದರೂ ಒಳ್ಳೆ ಬುದ್ಧಿ ಕೊಡು ಎಂದು ದೇವರಲ್ಲಿ ಬೇಡಿಕೊಳ್ಳಿ..." ಎಂದೆ.
ಮೊಟ್ಟಮೊದಲಬಾರಿಗೆ ಆ ಕಂಡಕ್ಟರನೆಡೆಗೆ ನೋಡಿ ನಸುನಕ್ಕೆ. "ಥ್ಯಾಂಕ್ಸ್....,ಬರ್ತೀನಿ" ಎಂದೆ. ಆತ ಮಾರುತ್ತರ ನೀಡಿದರೆ ತಾನೇ...?"ಠಣ್... ಠಣ್" ಬಸ್ಸಿನ ಬೆಲ್ಲು ಹೊಡೆದ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ