ಶುಕ್ರವಾರ, ಸೆಪ್ಟೆಂಬರ್ 19, 2014

ನಿಂಬೆ ಶರ್ಬತ್ Vs ಫ್ರೆಶ್ ಲೈಮ್ ಸೋಡಾ

ಶ್ರಾವಣ ಮಾಸ ಬಂತು ಎನ್ನುವಾಗ ಆಷಾಢ ಮಾಸ ಕಳೆಯಿತು ಎಂದ ಹಾಗೂ ಆಯಿತಲ್ಲ...?ಆಷಾಢ ಮಾಸವನ್ನು ನಮ್ಮ ಊರಿನ ಭಾಷೆಯಲ್ಲಿ ಆಟಿ ತಿಂಗಳು ಎಂದೂ ಶ್ರಾವಣ ಮಾಸವನ್ನು ಸೋಣೆ ತಿಂಗಳು ಎಂದೂ  ಹೇಳುತ್ತೇವೆ (ತುಳು ಭಾಷೆಯ ಇನ್ಫ್ಲುಯೆನ್ಸ್!). ನಮ್ಮಜ್ಜಿ ಇರುವಾಗ ಹೇಳುವುದಿತ್ತು...,
"ಆಟಿ ಆಡಿ...... ಆಡಿ.... ಸೋಣೆ ಓಡಿ..... ಓಡಿ...."ಎಂದು.  ಅಂದರೆ ಆಟಿಯಲ್ಲಿ ದಿನಗಳು ತೆವಳುತ್ತಾ ಸಾಗಿದರೆ ಸೋಣೆಯಲ್ಲಿ ಸಮಯ ರಭಸದಿಂದ ಮುನ್ನುಗ್ಗುತ್ತಿವೆ ಎಂಬ ಭಾವ.ಅಂದಿನ ಕಾಲದಲ್ಲಿ ಆಟಿ ತಿಂಗಳಲ್ಲಿ ಯಾವುದೇ ಶುಭ ಸಮಾರಂಭಗಳಿಲ್ಲದೆ ತೋಟದ ಕೆಲಸಗಳೂ(ಆವಾಗೆಲ್ಲ ಮನುಷ್ಯ  ತನ್ನ ಮೂಲ ವೃತ್ತಿಯಾದ ಕೃಷಿಯನ್ನು ಮಾತ್ರ  ನೆಚ್ಚಿಕೊಂಡಿದ್ದನಷ್ಟೇ...?)ಇಲ್ಲದೆ ಬರ್ರೋ.... ಎಂದು ರಾಶಿ ರಾಶಿಯಾಗಿ ಸುರಿಯುವ ಮಳೆಯನ್ನೇ ನಿಟ್ಟಿಸುತ್ತಾ.... ಇಡೀ ದಿನದ ಹಾಡೂ .... ಪಾಡೂ...  ಅದೇ ಆದಾಗ  ಹೊತ್ತು ಬೇಗನೆ ಸಾಗುವುದಾದರೂ ಹೇಗೆ...?
ಇಂತಿಪ್ಪ ಆಷಾಢ ಮಾಸದಲ್ಲಿ ಶುಭಕಾರ್ಯಗಳೊಂದೂ ಇಲ್ಲದೆ ಖಾಲಿ ಕುಳಿತಿದ್ದೆ. ಇನ್ನು ನಾಲ್ಕೇ ದಿನಕ್ಕೆ ನಾಗರ ಪಂಚಮಿ ಬರುತ್ತೆ.(ಈ ಬರಹ ಕಾಗದದಲ್ಲಿ ಮೂಡಿದ್ದು ಆವಾಗ!ಇಲ್ಲಿ ಪ್ರಕಟವಾಗಲು ಇಷ್ಟು ದಿನಗಳು  ಬೇಕಾದುವು).  ಮತ್ತೆ ಶರುವಾಗುತ್ತೆ  ನೋಡಿ ಮದುವೆ, ಮುಂಜಿ, ಹಬ್ಬ ಹರಿದಿನಗಳ ಗೆಜ್ಜೆ  ಕುಣಿತ... ಮದುವೆ ಎಂದಾಗ ಕಳೆದ ಸೀಸನ್ನಿನಲ್ಲಿ ಹಾಜರಾದ ಮದುವೆಗಳ ಚಿತ್ರಣ ಮನದಲ್ಲಿ ತೇಲಿ ಬರುತ್ತಿದೆ... ಇಂದಿನ ಮದುವೆಗಳಲ್ಲಿ ಎದ್ದು ಕಾಣುವಂತಹ ಕೊರತೆಯೊಂದಿದೆ ಅದೇನು ...?ಥಟ್ ಅಂತ  ಹೇಳಿ ಎಂದು ಕೇಳಿದರೆ ಫಟ್ ಎಂದು  ನನ್ನ ಬಾಯಲ್ಲಿ ಬರುವ  ಉತ್ತರ,'ನಿಂಬೆಹಣ್ಣು ಶರ್ಬತ್ತಿನ ಗೈರು ಹಾಜರಿ' ಎಂದಾಗಿರುತ್ತದೆ . ತಪ್ಪಲ್ಲ ತಾನೇ...? ಈಗೆಲ್ಲಾ ready to drink ಪಾನೀಯಗಳ ಕಾಲ.ನೀರು ಕುದಿಸೀ.... ತಣಿಸೀ....  ನಿಂಬೆ ಹಿಂಡೀ.... ಸಕ್ಕರೆ ಹಾಕೀ....  ಚೆನ್ನಾಗಿ ಕರಗಿಸಿ.... ರುಚಿ ನೋಡಿ.....ಸಾಲದಿದ್ದರೆ ಪುನ್ಹ ಸೇರಿಸಿ...,  ... ಲೋಟಗಳಿಗೆ ತುಂಬಿಸಿ.... ಖಾಲಿಯಾದ ಲೋಟಗಳನ್ನು ತೊಳೆದೂ....ಮತ್ತೆ ಶರ್ಬತ್ತು ತುಂಬಿಸೀ....  ಉಸ್ಸಪ್ಪ.... ಯಾರಿಗುಂಟು ಇಷ್ಟು ಪುರುಸೊತ್ತು.....?ಸೋ .... ಈಗ ಸಮಾರಂಭಗಳಲ್ಲಿ ಪೆಪ್ಸಿ, ಕೋಲಾ, ರೆಡಿಮೇಡ್  ಜ್ಯೂಸುಗಳದ್ದೇ ಕಾರುಬಾರು. ಇವುಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದು ಫ್ರೆಶ್ ಲೈಮ್ ಸೋಡಾ.ರುಚಿಯೂ ಹೌದು, ಆರೋಗ್ಯದ ಬಗ್ಗೆ ವಿಶೇಷ  ಕಾಳಜಿ ಇರುವವರೂ ಹೆಚ್ಚು ತಲೆಕೆಡಿಸಿಕೊಳ್ಳದೆ ಕುಡಿಯಬಹುದು ಎಂದು ತಿಳಿದುಕೊಂಡಿರುವುದರಿಂದಲೇ ಇದಕ್ಕೆ A ಗ್ರೇಡು ದೊರತಿದೆ. ಆದರೂ....  ನಾನು ಬಹಳವಾಗಿ ಇಷ್ಟಪಡುವ ನಿಂಬೂ ಶರ್ಬತ್ ಇಲ್ಲದ ಮದುವೆಗಳು ಬಹಳ ಸಪ್ಪೆ ಎಂದೇ ನನ್ನ ಅನಿಸಿಕೆ. 
'... ಇವಳಿಗೆ ಜುಜುಬಿ ನಿಂಬೆ ಹಣ್ಣಿನ ಶರ್ಬತ್ ಕುಡಿಯಲು ಮದುವೆ ಮನೆಯೇ ಆಗಬೇಕೇನು..?ಮಾರ್ಕೆಟ್ಟಿನಿಂದ ನಿಂಬೆ ತಂದ...ಶರ್ಬತ್ ಮಾಡಿದ... ಕುಡಿದ.... ಅಷ್ಟೇ.... ಮುಗಿಯತಲ್ಲ.... 'ಎಂದುಕೊಳ್ಳುವಿರೇನೋ....?ಅದು ಹಾಗಲ್ಲ.
ಮದುವೆಮನೆಗಳಲ್ಲಿ ದೊಡ್ಡ  ದೊಡ್ಡ ಪಾತ್ರೆಗಳಲ್ಲಿ  ಅಡುಗೆ ಭಟ್ಟರು ತಯಾರಿಸಿಟ್ಟ ಆ ಶರ್ಬತ್.... ಚೆಂದ ಚೆಂದದ ಹದಿಹರೆಯದ ಮಕ್ಕಳು ಶರ್ಬತ್ ತುಂಬಿಕೊಂಡು ಕುಳಿತ ಸ್ಟೀಲು ಲೋಟಗಳನ್ನಿರಿಸಿದ  ಟ್ರೇಯನ್ನು ಹಿಡಿದುಕೊಂಡು ಸಭೆಯಲ್ಲಿ ಓಡಾಡುವ ಆ ನೋಟ..... ಉದ್ದಕ್ಕೂ ಹಾಸಿರುತ್ತಿದ್ದ ಚಾಪೆಗಳಲ್ಲಿ ಕುಳಿತ ಅತಿಥಿಗಳೆದುರು ತುಸುವೇ ಬಾಗಿ '.... ಅತ್ತೆ...., ಶರ್ಬತ್ ತಗೊಳ್ಳಿ.... ಮಾವ ಬನ್ನಿ ಇಲ್ಲಿ ಕೂರಿ.... ತಗೊಳ್ಳಿ ಶರ್ಬತ್.... ಅಕ್ಕಾ... ಬಿಸಿನೀರ ಶರ್ಬತ್.... ತಗೊಳ್ಳಿ ....'ಹೀಗೆಲ್ಲಾ ಉಪಚರಿಸುತ್ತಾ ನೀಡುವ ಆ ಶರ್ಬತ್.... ,ಟ್ರೇ ಯಿಂದ ಎತ್ತಿಕೊಂಡೊಡನೆಯೇ ನಾವಾದರೂ ಅದನ್ನು ಗಟಗಟನೆ  ಕುಡಿದು ಮುಗಿಸುತ್ತೇವೆಯೇನು...?ಊಹುಂ.... ಇಲ್ಲವೇ ಇಲ್ಲ.... ,"..... ಹೋ .... ಅತ್ತಿಗೆ...., ಯಾವಾಗ ಊರಿಗೆ ಬಂದದ್ದು .....?ಮದುವೆಗೆಂದೇ ಬಂದ್ಯಾ....?ಎಷ್ಟು ದಿನ ಊರಲ್ಲಿರ್ತೀಯಾ...?ಈ ಸಲಾನಾದ್ರೂ ನಮ್ಮನೆಗೆ ಬಾ ಮಾರಾಯ್ತಿ.... (ಆಕೆಯ ಕೈಯ್ಯಲ್ಲಿರುವ ಶರ್ಬತ್ತಿನ ಲೋಟವನ್ನು ನೋಡಿಕೊಂಡೇ)ನೀನೂ ಶರ್ಬತ್ ತಗಂಡ್ಯಾ...?ಮತ್ತೇನಂತೆ ವಿಶೇಷ....?ಮನೆಯಲ್ಲೆಲ್ಲಾ ಸೌಖ್ಯವೇ....?,ಅಂದಹಾಗೆ ಮಗಳಿಗೆ ಎಲ್ಲಿಯಾದ್ರು ನೆಂಟಸ್ತನ ಕೂಡಿ ಬಂತಾ...?"ಇತ್ಯಾದಿ ಮಾತುಗಳ ಸುರಿಮಳೆಯೊಂದಿಗೆ ಕೈಯ್ಯಲ್ಲಿರುವ ಶರ್ಬತ್ ಹನಿಹನಿಯಾಗಿ ಗಂಟಲೊಳಗಿಳಿಯುವಾಗಿನ ಆ ಸುಖ.... ಮಧ್ಯಾಹ್ನದ ಭೋಜನದವರೆಗೂ ನಾವು ಎಲ್ಲೆಲ್ಲಿ ಇರುತ್ತೇವೆಯೋ ಅಲ್ಲಲ್ಲಿಗೇ ಬರುವ ಶರ್ಬತ್ತು ಸರಬರಾಜುದಾರರು  ನಗುನಗುತ್ತಾ ಕೊಡುವ ಆ ಅಮೃತ ಸಮಾನ ಪಾನೀಯ .....,  ಮನೆಯಲ್ಲಿ ಒಂಟಿ ಭೂತದಂತೆ ಕುಳಿತು ನಾವೇ ತಯಾರಿಸಿ ನಾವೇ ಗಟಗಟನೆ  ಕುಡಿಯುವ ಆ ನಿಂಬೆ ನೀರಿನಲ್ಲಿ ಹುಡುಕಿದರೂ ಸಿಗಲಾರದು.
ಇದೆಲ್ಲ ಈಗ ಮೂರು ನಾಲ್ಕು ವರ್ಷಗಳ ಹಿಂದಿನ ಮಾತಾಯ್ತು. ಅದಕ್ಕೂ ಹಿಂದೆ ಅಂದರೆ ನನ್ನ ಬಾಲ್ಯದ  ಕಾಲ.... ಮದುವೆ ಮನೆ .... ನಿಂಬೆ ಶರ್ಬತ್.... ಎಂದರೆ ಅದರ ಸುತ್ತ ಒಂದೊಂದು ದಿನಚರಿಯೇ ಇರುತ್ತಿತ್ತು. ಅದು ನಮ್ಮಕ್ಕನ ಮದುವೆಯ ಸಮಯ....ವಿಶಾಲವಾದ ಮನೆ, ಮೈದಾನಿನಂತಹ ಅಂಗಳ ಇರುವಾಗ ಮದುವೆ ಬೇರೆ ಕಡೆ ಮಾಡುವ ಮಾತೇ ಇರಲಿಲ್ಲ.  ಮದುವೆಗೆ ಎರಡು ದಿನ ಮೊದಲೇ ನಿಂಬೆಹಣ್ಣಿನ ರಾಶಿಯೇ ಬಂದು ಬಿದ್ದಿರುತ್ತಿತ್ತು. ನಾವು ಮನೆಯ ಮಕ್ಕಳೇ ಏಳೆಂಟು ಜನ. ಇನ್ನು ನೆಂಟರ, ಇಷ್ಟರ ಮಕ್ಕಳೆಲ್ಲ ಸೇರಿ ಹತ್ತುಹದಿನೈದು ಮಕ್ಕಳು[ಆಗೆಲ್ಲಾ ನಮ್ಮ ಚಿಕ್ಕಪ್ಪ ನಮ್ಮನ್ನು  ಕರೆಯುತ್ತಿದ್ದುದು T.M.S.(tailless monkeys)ಎಂದು...!]ನಾವೆಲ್ಲರೂ 'ಅಂದೆ ಕಾಲತ್ತಿಲೆ 'ಕ್ರಿಕೆಟ್ ದೇವರು ಗವಾಸ್ಕರನ ಪ್ರಾಮಾಣಿಕ ಭಕ್ತರು. ಹಿರಿಯ ಅಣ್ಣನ ಬಳಿ ಸೊಗಸಾದ ಕ್ರಿಕೆಟ್ ಸೆಟ್ ಇತ್ತು. ಅಂಗಳಕ್ಕೆ ಹಾಕಿರುತ್ತಿದ್ದ ವಿಶಾಲವಾದ ಚಪ್ಪರದಡಿಯೇ  ನಮ್ಮ ground.ನಾವು ಚಳ್ಳೆ ಪಿಳ್ಳೆಗಳೆಲ್ಲಾ ಯಾವಾಗಲೂ fielderಗಳೇ...ಅದಕ್ಕಿಂತ ಮೇಲಿನ ಗ್ರೇಡು ಸಿಗಬೇಕೆಂದರೆ ದೊಡ್ಡಣ್ಣ, ಸಣ್ಣಣ್ಣ, ಪುಟ್ಟಣ್ಣ ರಿಗೆ ದಮ್ಮಯ್ಯ ಗುಡ್ಡೆ ಹಾಕಬೇಕಿತ್ತು....ಚೆಂಡು ಜಾನುವಾರು  ಕೊಟ್ಟಿಗೆಯ ಹಿಂಬದಿಯಲ್ಲಿರುತ್ತಿದ್ದ ಬಯೋ ಗ್ಯಾಸಿನ ಸ್ಲರಿಗೆ ಬಿದ್ದರೆ six er.... ಬಾವಿಗೆ ಬಿದ್ದರೆ boundary.....ಅಲ್ಲಿಗೆ ಬಿದ್ದ ಚೆಂಡುಗಳನ್ನುಹೆಕ್ಕಿ ತರುವುದಾದರೂ ಹೇಗೆ...?ಸರಿ... ಆಗ ನಮ್ಮ ಕಣ್ಣು ಬೀಳುತ್ತಿದ್ದುದು ಉಗ್ರಾಣದಲ್ಲಿ ಬಿದ್ದಿರುತ್ತಿದ್ದ ನಿಂಬೆ ರಾಶಿಯ ಮೇಲೆ....ನಮ್ಮ ಆಟ ಬಜಾಯಿಸಿದಂತೆ ನಿಂಬೆ ಹಣ್ಣುಗಳು ಕರಗುತ್ತಾ....ಅವುಗಳು ಪಂಚರ್ ಆದ ಟಯರಿನಂತಾಗಿ ಅಂಗಳದಲ್ಲಿ ಅಲ್ಲಿ ಇಲ್ಲಿ ಹೊರಳಾಡಿ.... ಇದು ನಮ್ಮಜ್ಜನ ಕಣ್ಣಿಗೆ ಬಿದ್ದು..... ಅವರು ಮೊದಲೇ ದುರ್ವಾಸನ ಮಾನಸ ಪುತ್ರ....ನಮ್ಮ ಆವುಟ ಕಂಡ ಮೇಲಂತೂ ಸಾಕ್ಷಾತ್ ರುದ್ರನಾಗಿ...... ಭಂ ಭಂ.... ಭೋಲೇ ಎಂದು ಪ್ರಳಯ ನರ್ತನಕ್ಕೆ ತೊಡಗುವ ಸೂಚನೆ ಸಿಗುವ ಮೊದಲೇ ತೋಟದ ಆಚೆ ಬದಿಯಲ್ಲಿ ಹರಿಯುವ ಹೊಳೆಯ ದಂಡೆಯ  ಕಾಡಲ್ಲಿ ನಾವೆಲ್ಲಾ  ಅಡಗಿದ್ದು..... ಅಲ್ಲಿಂದಲೇ ದೊಡ್ಡಣ್ಣ ಒಬ್ಬರೇ  ಗುಡ್ಡದ ಬದಿಯ ರಸ್ತೆವರೆಗೆ ನಡೆದು  ಶಂಕರ  ವಿಟ್ಟಲ ಬಸ್ಸನ್ನೇರಿ (ಆಗ ಆ ಬಸ್ಸಿನ ಕಂಡಕ್ಟರ್ ನಮ್ಮ ಆಳೊಕ್ಕಲೇ  ಆಗಿದ್ದುದರಿಂದ ದುಡ್ಡಿಲ್ಲದೆಯೂ ಹೋಗಬಹುದಾಗಿತ್ತು)ಪೇಟೆಗೆ ಹೋಗಿ ಅಂಗಡಿಯ ಪೈಗಳಲ್ಲಿ ತಂದೆಯವರ ಹೆಸರು ಹೇಳಿ ನಿಂಬೆ ಹಣ್ಣುಗಳನ್ನ ಖರೀದಿಸಿದ್ದು....ವಾಪಾಸು ಬರುತ್ತಾ ನಿಂಬೆ ಹಣ್ಣುಗಳನ್ನು ಉಗ್ರಾಣದಿಂದ ತೆಗೆದ ತಪ್ಪಿಗೆ (ಆಡಿದ್ದು ಅವರಾದರೂ) ನಮ್ಮ ತಲೆಯಮೇಲೆ ಹೊರಿಸಿ  ತಂದಿದ್ದು.....!

ಇನ್ನು ಮದುವೆ ದಿವಸ ಅಡುಗೆ  ಭಟ್ಟರು ಬೆಳಗ್ಗೆಯೇ ನಿಂಬೆಹಣ್ಣುಗಳನ್ನು ಕೊಯ್ದು ದೊಡ್ಡ ಕಟಾರ(ಎರಡೂ ಬದಿ ಹಿಡಿಗಳಿರುವ
ದೊಡ್ಡ ಹಿತ್ತಾಳಿಯ ಪಾತ್ರೆ)ದಲ್ಲಿ ರಸ ಹಿಂಡುತ್ತಾ ಸಿಪ್ಪೆಗಳನ್ನು ಬದಿಯಲ್ಲಿ ರಾಶಿ ಹಾಕುತ್ತಾ ಹೋದಂತೆ ನಾವು ಅಲ್ಲಿಗೆ ಹಾಜರ್. ತೆಂಗಿನ ಗರಿಯ ಕಡ್ಡಿಗಳಿಗೆ ಒಂದು ಕೊನೆಯಲ್ಲಿ ಉರುಳು ಮಾಡಿ ಇನ್ನೊಂದು ತುದಿಗೆ ನಿಂಬೆ ಸಿಪ್ಪೆಯನ್ನು ಒಂದರ ಮೇಲೊಂದನ್ನು ಚುಚ್ಚುತ್ತಾ ಕೊನೆಗೆ ಅದನ್ನು ಖಡ್ಗದಂತೆ ಹಿಡಿದುಕೊಂಡು ಹಿಂದಕ್ಕೂ ಮುಂದಕ್ಕೂ ಓಲಾಡುತ್ತಾ ಕಣ್ಣುಗಳನ್ನು ವೃತ್ತಾಕಾರದಲ್ಲಿ ತಿರುಗಿಸುತ್ತಾ ".... ಓ.... ಹೀ.... ಹೂ... ಧನಿಕ್ಕುಲೇ.... "(ಒತ್ತೆಕ್ಕೋಲವೆಂಬ ದೈವಾರಾಧನೆಯಲ್ಲಿ  ಪಾತ್ರಿಗಳು ಖಡ್ಗವನ್ನು ಝಳಪಿಸುತ್ತಾ  ಓಲಾಡುವುದನ್ನು ನೋಡಿದ್ದೆವು)ಎಂದು ಕಿರುಚಿದ್ದು ..... ಶುಭ ದಿನದಂದು ಅಪಸ್ವರ ತೆಗೆದುದಕ್ಕಾಗಿ ಹಿರಿಯರಿಂದ ಬೈಗುಳ ತಿಂದಿದ್ದು.....ಒಂದೇ ... ಎರಡೇ... ?
ಇನ್ನು ಹದಿಹರೆಯದವರು ಶರ್ಬತ್ತು  ಸರಬರಾಜು ಮಾಡುವ ಸ್ಟೈಲೇ ಬೇರೆ ಇತ್ತು. ಒಂದು ಸ್ಯಾಂಪಲ್ ನೋಡಿ...,ಜರತಾರಿ ಲಂಗ  ದಾವಣಿ ಉಟ್ಟು ಒಪ್ಪವಾಗಿ ಹೆಣೆದ ಜಡೆಗೆ ಮಲ್ಲಿಗೆ ಜಲ್ಲೆಯನ್ನು ಬಿಟ್ಟು ಕೆನ್ನೆ ತುಂಬಾ ಕೆಂಪು ಕೆಂಪು...  ನೋಡುಗರ ಕಣ್ಣಿಗೆ ತಂಪು ತಂಪು.... ಮಾಡುತ್ತಾ  ನಮ್ಮ ಪುಟ್ಟಕ್ಕ  ಶರ್ಬತ್ತಿನ ಟ್ರೇ ಹಿಡಿದುಕೊಂಡು ವೈಯ್ಯಾರದಿಂದ ಚಪ್ಪರ ಪ್ರವೇಶಿಸುವಾಗಲೇ  ಅತ್ತಲಿಂದ ಖಾಲಿ ಟ್ರೇ ಹಿಡಿದುಕೊಂಡ ಈಚಣ್ಣ  ಧಾವಿಸಿ ಬರಬೇಕೆ...? ಆಗ ಏನಾಗಬಾರದಿತ್ತೋ ಅದಾಗಿ.... ಮುಂದೆ ಏನಾಗಬೇಕೋ ಅದೇ ಆಯ್ತು. ಅವರ ಮದುವೆಯಲ್ಲಿ ನಾನು ಲಂಗ ದಾವಣಿಯ ಹುಡುಗಿಯಾಗಿ  ಶರ್ಬತ್ ಕೇಳಿದ್ದೆ. ನನಗೆ ಮಾತ್ರ ಯಾರೂ ಢಿಕ್ಕಿ ಹೊಡೆದಿರಲೇ ಇಲ್ಲ!
 ಇಂತಹ ಎಷ್ಟೆಷ್ಟೋ ರೋಚಕ ಘಟನೆಗಳು ನಿಂಬೆ ಶರ್ಬತ್ತಿನೊಂದಿಗೆ ಸುರುಳಿ ಬಿಚ್ಚಿಕೊಳ್ಳುತ್ತಿವೆ. ಅದೇ ಈಗ....ಅಂದರೆ ಕಳೆದ  ಋತುವಿನಲ್ಲಿ ಮದುವೆ ಸಮಾರಂಭಗಳಲ್ಲಿ ದೃಶ್ಯ ಹೇಗಿತ್ತು....?

 ಅದು ಭವ್ಯ ಕಲ್ಯಾಣ ಮಂಟಪ, ಎದುರು ವಾಹನಗಳ ಸಾಲು ಸಾಲು, ಸ್ವಾಗತ ದ್ವಾರಕ್ಕೆ  ಅತಿ ವಿಶಿಷ್ಟ ಅಲಂಕಾರ...., ಎರಡೂ ಬದಿಯಲ್ಲಿ ನೀಟಾಗಿ ಡ್ರೆಸ್ ಮಾಡಿ ನಿಂತ  ಸ್ವಯಂ ಸೇವಕರು, ಅವರ ಎದುರುಭಾಗದಲ್ಲಿ  ಜೋಡಿಸಿಟ್ಟ ಮೇಜುಗಳು, ಅವುಗಳ ಮೇಲೆ ಸಾಲಾಗಿಟ್ಟ  ಟ್ರೇಗಳು, ತುಂಬಿ ನಿಂತ ಕುಡಿದೆಸೆಯುವ ಲೋಟಗಳು.... ಶಿಸ್ತಿನಿಂದ ನಿಂತು ಪಾನೀಯ ಹೀರುವ ಜನರು, ನಾನು ಅಲ್ಲಿ ಮುಟ್ಟುತ್ತಲೇ ಓರ್ವ ಸ್ವ. ಸೇ. ನನ್ನನ್ನು ನೋಡಿ  "ಬನ್ನಿ..., ಫ್ರೆಶ್ ಲೈಮ್ ಸೋಡಾ ತಗೊಳ್ಳಿ "ಎನ್ನುತ್ತಾ ನಿಂಬೆ ರಸ ಹಾಕಿಟ್ಟ ಲೋಟಕ್ಕೆ ಸಿಹಿ ಸೋಡಾವನ್ನು ಸುರಿದು ಕೊಟ್ಟ,  ಅದನ್ನು ಕುಡಿಯಲು ತೊಡಗಿ ಇನ್ನೂ ಒಂದು ನಿಮಿಷವಾಗಿರಲಿಲ್ಲ ... ,".... ಮ್ಯಾಡಂ.... , ಸ್ವಲ್ಪ ಸೈಡಿಗೆ ನಿಲ್ಲಿ...ಖಾಲಿ ಲೋಟವನ್ನು  ಈ ಬುಟ್ಟಿಯೊಳಕ್ಕೆ  ಹಾಕಿಬಿಡಿ...., ನೋಡಿ...,  ಓ ... ಅಲ್ಲಿ ಅರಸಿನ ಕುಂಕುಮ ಇದೆ. ತಗೊಂಡು ಒಳಕ್ಕೆ ಹೋಗಿ ಎಂದ. ಆತನೆಡೆಗೆ ನೋಡಿ 'ಥ್ಯಾಂಕ್ಯೂ' ಎನ್ನಲು ಬಾಯ್ತೆರೆದೆ.  ಕಟ್ಟಿಗೆ ಮುಖದಲ್ಲಿ ಯಾವ ಭಾವವೂ ಇರಲಿಲ್ಲ. ನನ್ನ ಬಾಯಿ ತೆರೆದಷ್ಟೇ ವೇಗದಿಂದ ಮುಚ್ಚಿತು.  ಒಳಗೆ ಹೋದೆ. ಸುತ್ತಲೂ ಕಣ್ಣಾಡಿಸಿದೆ. ಪರಿಚಯದವರು ಯಾರಾದರೂ ಇದ್ದಾರೆಯೇ... ಎಂದು ನೋಡುತ್ತಿದ್ದೆ. ಸ್ವ. ಸೇ. ಅಲ್ಲೂ ಪ್ರತ್ಯಕ್ಷನಾದ. "... ಮ್ಯಾಡಂ..., ಅಲ್ಲಿ ಚೇರ್  ಖಾಲಿಯಿದೆ ಕೂತ್ಕೊಳ್ಳಿ .."ಎಂದ.  ಕೂತೆ. ಆಚೀಚೆ ನೋಡಿದೆ. ಎಡ ಬದಿಯಲ್ಲಿ ಕುಳಿತ ಮಹಿಳೆ ಸೀರಿಯಸ್ಸಾಗಿ ಮೊಬೈಲಲ್ಲಿ  ಮಾತನಾಡುತ್ತಿದ್ದರು. ಬಲ  ಬದಿಯಲ್ಲಿದ್ದವರು ತದೇಕ ಚಿತ್ತದಿಂದ ವೇದಿಕೆಯೆಡೆಗೆ ನೋಡುತ್ತಿದ್ದರು. ನಾನೂ ಅದನ್ನೇ ಮಾಡಿದೆ. ಕ್ಯಾಮರಾ, ವಿಡಿಯೋಗಳ ಚಕ್ರವ್ಯೂಹವನ್ನು ಬೇಧಿಸಿ ಅದರೊಳಗೆ ಬಂಧಿಯಾಗಿದ್ದ ವಧೂವರರನ್ನು ಕಂಡು ಹಿಡಿಯುವಷ್ಟು ನನ್ನ ದೃಷ್ಟಿ ತೀಕ್ಷ್ಣವಾಗಿರಲಿಲ್ಲ. ಸೋ....ಚಕ್ರವ್ಯೂಹವೆಂಬ ಆ ಅಭೇದ್ಯ ಕೋಟೆಯನ್ನು ನಮ್ಮ ಬೇಕಲ ಕೋಟೆಗೆ ಹೋಲಿಸುತ್ತಾ  ಕೋಟೆಯೊಳಗೆಲ್ಲಾ ಸುತ್ತಾಡಿ ಬುರುಜಿನ ಮೇಲೆ ನಿಂತು ಸಮುದ್ರದ ವಿಹಂಗಮ ನೋಟವನ್ನು ಆಸ್ವಾದಿಸುತ್ತಾ... ಇದ್ದಂತೆ..... ಫಕ್ಕನೆ ಇಹ ಲೋಕಕ್ಕೆ ಇಳಿದೆ. ಏನಾಗಿತ್ತೆಂದರೆ ನನ್ನ ಹಿಂಬದಿಯ ಚೇರಿನಲ್ಲಿ ಕುಳಿತಿದ್ದವರು ಎದ್ದು ಹೋಗುವ ಭರದಲ್ಲಿ ಅವರ ಜಂಭದ ಚೀಲ ಒಂದು ಕ್ಷಣ ನನ್ನ ತಲೆಯನ್ನು ಅಲಂಕರಿಸಿತ್ತು! ನನ್ನನ್ನು ಎಚ್ಚರಿಸಿದ್ದಕ್ಕಾಗಿ ಅವರಿಗೆ ಮನದಲ್ಲೇ ಕೃತಜ್ಞತೆ ಸಲ್ಲಿಸಿದೆ. ಗಂಟಲು ಒಣಗಿದಂತೆನಿಸಿ ಶರ್ಬತ್ತು....  ಅಲ್ಲಲ್ಲ....  ಫ್ರೆಶ್ ಲೈಮ್ ಸೋಡಾ ಕುಡಿಯಬೇಕೆನಿಸಿತು.ಆಸನದಿಂದ  ಎದ್ದು.... ಆ ಸಾಲುಗಳನ್ನೆಲ್ಲಾ ದಾಟಿ....  ವಾದ್ಯವೃಂದದವರನ್ನು ಹಾದು.... ಜನಜಂಗುಳಿಯ ನಡುವೆ ನುಸುಳಿಕೊಂಡು...  ಸ್ವಾಗತ ದ್ವಾರಕ್ಕೆ ತಲುಪಿ ....ಅಲ್ಲಿ ಇಟ್ಟಿದ್ದ ಪಾನೀಯವನ್ನು ಕುಡಿದು....  ಮತ್ತೆ ಅದೇ ಕಸರತ್ತಿನೊಂದಿಗೆ ಇಲ್ಲಿಗೆ ಬಂದು....  ಉಫ್... ಅದಕ್ಕಿಂತ ಇದೇ ವಾಸಿ ಎಂದುಕೊಂಡು ಬ್ಯಾಗಿನಲ್ಲಿದ್ದ  ನೀರಿನ ಬಾಟಲಿಯನ್ನು ಹೊರಕ್ಕೆ ತೆಗೆದೆ.
ನೋಡುತ್ತಿದ್ದಂತೆ ವೇದಿಕೆಯ ಎರಡೂ ಬದಿಯಲ್ಲಿ ಅತಿಥಿಗಳು ಸಾಲುಗಟ್ಟಿ ನಿಂತರು. ನಾನೂ ನಿಂತೆ.ನಾನು ವಧುವಿನ ಕಡೆಯಿಂದ ಹೋಗಿದ್ದೆನಾದುದರಿಂದ ಅವರಿಗೆ ನನ್ನ ಹಾಜರಿಯನ್ನು ಗೊತ್ತುಪಡಿಸಬೇಕಿತ್ತು. ಆದರೆ ಹೇಗೆ...?? ಅಕ್ಷತೆ ಹಾಕಲು ಬರುತ್ತಿದ್ದವರನ್ನು ನೋಡುತ್ತಿದ್ದಂತೆ ವಿಡಿಯೋ, ಕ್ಯಾಮರಾಗಳ ಮುಖಗಳು ಗಂಟಿಕ್ಕಿಕೊಳ್ಳುತ್ತಿದ್ದುವು. ಮಂಟಪದೆದುರು ನನ್ನ ಸರದಿ ಬಂದಾಗ ಒಂದು ಕ್ಯಾಮರಾವನ್ನು ಬದಿಗೆ ಸರಿಸಿ ಒಳಕ್ಕಡಿಯಿಟ್ಟೆ. ಪಕ್ಕದಲ್ಲಿರುವ ಕ್ಯಾಮರಾ  ಹೇಳುತ್ತಿತ್ತು,
" ವಾವ್....! ವಾಟ್ ಎ ಸೂಪರ್ ಶಾಟ್ ಮಾರಾಯಾ.... ನೋಡಿಲ್ಲಿ ...,ಈ  ಸ್ನ್ಯಾಪಿಗೆ ಫೇಸ್ ಬುಕ್ಕಲ್ಲಿ ಈಗಾಗಲೇ ಇಪ್ಪತ್ತು ಲೈಕ್ಸ್  ಬಂದಾಯ್ತು....!"
'ಮಾರಾಯ' ಎನಿಸಿಕೊಂಡವನ ಪ್ರತಿಕ್ರಿಯೆ ಹೀಗಿತ್ತು...,
" ಛೇ...,ಈ ಒಂದು ಹೆಂಗಸು(ನನ್ನನ್ನು ವಾರೆ ನೋಟದಿಂದ ಕೆಕ್ಕರಿಸಿ ನೋಡುತ್ತಾ) ಇಲ್ಲಿಗೆ ಬಾರದಿರುತ್ತಿದ್ರೆ ನಾನು ಇನ್ನೂ ಚೆನ್ನಾಗಿ ಕ್ಲಿಕ್ ಮಾಡಿರುತ್ತಿದ್ದೆ ಕಣೋ.... "
ನಾನು ವಧೂವರರ ಎದುರು ನಿಂತು ಅವರ ತಲೆಯ ಮೇಲಕ್ಕೆ ಇನ್ನೇನು ಅಕ್ಷತೆ ಕಾಳುಗಳನ್ನು ಹಾಕಬೇಕು ಎನ್ನುವಷ್ಟರಲ್ಲಿ ಹಿಂದಿನಿಂದ ಯಾರೋ ತಳ್ಳಿದರು. ನನ್ನ ಸಮತೋಲನವನ್ನು ಕಾಯ್ದುಕೊಳ್ಳಲು ಹೆಣಗುತ್ತಾ ಮುಖದಲ್ಲಿ ನಗು ತಂದುಕೊಳ್ಳುತ್ತಾ ವಧೂವರರೆಡೆಗೆ ಬಾಗಿ ಶುಭ ಹಾರೈಸುತ್ತಾ ಅಕ್ಷತೆ ಬೀರುವಷ್ಟರಲ್ಲಿ ವಿಡಿಯೋಕ್ಕಾಗಿ  ಇಬ್ಬರೂ ಸ್ವಲ್ಪ ಬಾಗಿ ಆ ಕಡೆ ಮುಖ ತಿರುಗಿಸಿದರು. ಅಕ್ಷತೆ ಹಿಂಬದಿಯಲ್ಲಿ ಕುಳಿತ ಅಜ್ಜಿಯೊಬ್ಬರ ತಲೆಗೆ ಬಿತ್ತು. ತಕ್ಕೋ ....
"ಈಗಿನ ಹೆಂಗಸರಿಗೆ ಕ್ರಮ ನಿಯಮ ಒಂದೂ ಇಲ್ಲ.... ಹೋಗಿ....  ಹೋಗಿ... ನನ್ನ  ತಲೆಗೆ ಯಾಕೆ ಅಕ್ಷತೆ...?ಕಲಿ ಕಾಲ.... ಕಲಿ ಕಾಲ..."ಎಂದೇನೋ ವಟಗುಟ್ಟುತ್ತಿದ್ದಂತೆ ನಾನು ವೇದಿಕೆಯಿಂದ ಇಳಿಯಲು ಅಣಿಯಾದೆ.
ಅಷ್ಟರಲ್ಲಿ ....,"ಹಾಯ್.... ಶೀಲಾ ಆಂಟೀ....", ಎನ್ನುವ ಸ್ವರ ಕೇಳಿಸಿತು. ತಿರುಗಿ ನೋಡಿದೆ. ಮದುಮಗಳು ನನ್ನನ್ನು ಗುರುತಿಸಿದ್ದಳು! ಸಧ್ಯ... ನನ್ನ ಹಾಜರಿ ದಾಖಲಾಯ್ತಲ್ಲ...? ಅಷ್ಟು ಸಾಕು ಎಂದುಕೊಂಡೆ.  ಪುನ್ಹ ಆಕೆಯ ಬಳಿಗೆ ಹೋಗುವ ಧೈರ್ಯ ಮಾಡಲಿಲ್ಲ. ನಿಂತಲ್ಲಿಂದಲೇ ಹೆಬ್ಬೆಟ್ಟು ಎತ್ತಿ ಸನ್ನೆಯಿಂದಲೇ ವಿಶ್ ಮಾಡಿ ಕೆಳಕ್ಕೆ ಬಂದೆ.
ಎಲ್ಲರೂ ಊಟದ ಹಾಲಿನೆಡೆಗೆ ಧಾವಿಸುತ್ತಿದ್ದರು. ನಾನೂ ಹೋದೆ. ಒಹ್... !ಅಲ್ಲಿನ ದೃಶ್ಯ ವರ್ಣನೆಗೆ ಮೀರಿತ್ತು, ಬುಫೆಯಲ್ಲಿ ಊಊಊಊಊದ್ದ ಸಾಲು....., ಟೇಬಲ್ ಊಟವೂ  ಭರ್ತಿಯಾಗಿತ್ತು. ಅಷ್ಟೇ ಆಗಿದ್ದರೆ ಮುಂದಿನ ಸಲ ಜಾಗ ಸಿಗಬಹುದೆಂಬ ನಿರೀಕ್ಷೆಯನ್ನಾದರೂ ಇಟ್ಟುಕೊಳ್ಳಬಹುದಿತ್ತು. ಇಲ್ಲಿ ಪರಿಸ್ಥಿತಿ ಅದಕ್ಕಿಂತ ವಿಪರೀತವಿತ್ತು...., ಊಟ ಮಾಡುವವರನ್ನು ನುಂಗುವಂತೆ ನೋಡುತ್ತಾ ಅವರ ಬದಿಯಲ್ಲೇ ನಿಂತು ತಮ್ಮ ಸರದಿಗಾಗಿ ಕಾಯುವವರನ್ನು ನೋಡಿ...,
"ಸಾರನ್ನವಾದರೂ ಸೈ,
ನೀರನ್ನವಾದರೂ ಸೈ,
ಪಾಯಸಾನ್ನದ ತಂಟೆ ಬೇಡವಯ್ಯಾ....,
ಹರ ಹರಾ... ಶ್ರೀ ಚೆನ್ನ ಸೋಮೇಶ್ವರಾ.... "ಎಂದು ಮನದಲ್ಲೇ ಹಾಡಿಕೊಂಡೆ.

 ಮನೆಗೆ ಮುಟ್ಟಿದಾಗ ಮಗಳು ತನ್ನ ಕ್ಲಾಸು ಮುಗಿಸಿ ಬಂದು ಊಟ ಮಾಡುತ್ತಿದ್ದವಳು ನಾನು ಬಂದುದನ್ನು ನೋಡಿ,
"ಮದುವೆ ಎಲ್ಲ ಹೇಗಾಯ್ತಮ್ಮ...? ಊಟ ಎಲ್ಲ ಚೆನ್ನಾಗಿತ್ತಾ...?" ಎಂದು ಕೇಳಿದಳು.
"ಓ... ಫಸ್ಟ್ ಕ್ಲಾಸ್... ಈಗ ನಿನ್ಜೊತೆ ಕಂಪೆನಿಗಾಗಿ  ಸ್ವಲ್ಪ ಊಟ ಮಾಡ್ತೀನಿ..."ಎಂದೆ.
"ವಾಟ್....!? ಮುದುವೆ ಊಟ ಮಾಡಿಯಾದ್ಮೇಲೂ ನನ್ಜೊತೆ ಉಟಾನಾ...?"
ನಾನು ಉತ್ತರಿಸುವ ಗೋಜಿಗೇ ಹೋಗದೆ ಮೊದಲು ನಿಂಬೆ ಶರ್ಬತ್ತು ಮಾಡಿ ಗಂಟಲಿಗೆ ಸುರಿದುಕೊಂಡೆ. ನಂತರ ಊಟ...
ಅಷ್ಟರಲ್ಲಿ ಅಂಚೆಯ ಅಣ್ಣ ಬಂದ. ಮದುವೆ ಕರೆಯೋಲೆಯೊಂದನ್ನು ಕೊಟ್ಟು ಹೋದ. ನಾಳೆಯೇ ಮದುವೆ! ಚಿಕ್ಕ ಮಕ್ಕಳು ಶಾಲೆಗೆ ಹೋಗುವಾಗ ಶಾರ್ಟ್ ಬ್ರೇಕಿಗೆಂದು ಪುಟ್ಟ ಬಾಕ್ಸಲ್ಲಿ ತಿಂಡಿ ತಗೊಂಡು ಹೋಗ್ತಾರಲ್ಲಾ...? ನಾಳೆ ನಾನೂ ಅದನ್ನೇ ಮಾಡೋಣ ಅಂದ್ಕೊಂಡೆ.
ಅಂದು ಹೀಗೆ ಅಂದುಕೊಂಡಿದ್ದರೂ ಅದನ್ನು ಕಾರ್ಯರೂಪಕ್ಕೆ ಇಳಿಸಿರಲಿಲ್ಲ. ಈ ಸಲ ಏನಾಗುತ್ತೋ ನೋಡೋಣ... ಕಾಲಕ್ಕೆ ತಕ್ಕ ಕೋಲ.... ಇರಲೇಬೇಕು ಅಲ್ಲವೇ...?



    


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ