ನನ್ನ ಬ್ಲಾಗಿನ ಒಳ್ಳೆಯ ವಿಮರ್ಶಕಿ ನನ್ನ ಅತ್ತಿಗೆ. "ಅತ್ತಿಗೆ ನೀನು ಪೋಸ್ಟ್ ಮಾಡಿದ ಕ್ಯಾಶ್ಯೂ ಪಲಾವಿನ ರೆಸಿಪಿಯಲ್ಲಿ ಉಪಯೋಗಿಸಬೇಕಾದ ತುಪ್ಪದ ಪ್ರಮಾಣ ನೋಡಿಯೇ ತಲೆ ಗಿರ್ರ್ ಎಂದಿತು...."ಎಂದಿದ್ದಳು. "... ಎಲ್ಲೋ ತಿಂಗಳಿಗೊಮ್ಮೆಯೋ ಎರಡು ತಿಂಗಳಿಗೊಮ್ಮೆಯೋ ಮಾಡೋ ತಿಂಡಿಯನ್ನ ರುಚಿಕಟ್ಟಾಗಿ (ಅಂದರೆ ತುಪ್ಪ, ಉಪ್ಪು ಎಲ್ಲವೂ ಚೆನ್ನಾಗಿ ಹಾಕಿದ) ಮಾಡಿ ತಿಂದರೆ ಪರವಾಗಿಲ್ಲ ಅಲ್ವೇ...? " ಎಂದಿದ್ದೆ. ಮನೆಗೆ ಬಂದಾಗ ಅನಿಸಿತ್ತು, ತುಪ್ಪ ಅಗತ್ಯವೇ ಇಲ್ಲದ ಆರೋಗ್ಯಕ್ಕೆ ಅತ್ಯುತ್ತಮವಾದ(ಕೊಬ್ಬು, ಸಿಹಿ ಇಲ್ಲದಿರುವಂತಹ) ತಿಂಡಿಯೊಂದನ್ನ ಟ್ರೈ ಮಾಡೋಣ ಅನಿಸಿತ್ತು. ಸೋ .... ಅದರ ಫಲಿತಾಂಶವೇ ಈ ತಿಂಡಿ. ಇದನ್ನ ದಿನಾಲೂ ತಿನ್ನಬಹುದು.
ಸಾಮಾಗ್ರಿಗಳು:- 1.ಇಡಿ ಗೋದಿ ಎರಡು ಕಪ್
2.ಬೆಳ್ತಿಗೆ ಅಕ್ಕಿ ಅರ್ಧ ಕಪ್
3.ಚಿರೋಟಿ ರವೆ ಕಾಲು ಕಪ್
4.ಕ್ಯಾರೆಟ್ ತುರಿ ಅರ್ಧ ಕಪ್
5.ಬೇಯಿಸಿದ ಕ್ಯಾಬೇಜ್ ತುರಿ ಅರ್ಧ ಕಪ್
6.ಕೊತ್ತಂಬರಿ ಸೊಪ್ಪಿನ ತುರಿ, ಪುದಿನಾ ಸೊಪ್ಪಿನ ತುರಿ, ಕರಿಬೇವಿನ ತುರಿ ತಲಾ ನಾಲ್ಕು ಚಮಚ
7.ಈರುಳ್ಳಿ ಚೂರು ನಾಲ್ಕು ಚಮಚ
8.ಶುಂಟಿ ತುರಿ ಒಂದು ಚಮಚ
9.ತೆಂಗಿನ ತುರಿ ಅರ್ಧ ಕಪ್(ಐಛ್ಚಿಕ)
10.ಉಪ್ಪು ರುಚಿಗೆ ತಕ್ಕಷ್ಟು
ವಿಧಾನ:- ಅಕ್ಕಿ ಮತ್ತು ರವೆಯನ್ನು ಬೇರೆ ಬೇರೆ ನೆನೆ ಹಾಕಿ(ಅರ್ಧ ಘಂಟೆ). ಗೋದಿಯನ್ನು ನೆನೆಸುವ ಅಗತ್ಯ ಇಲ್ಲ. ಅಕ್ಕಿ, ಗೋದಿ ,ತೆಂಗಿನ ತುರಿ ಒಟ್ಟಿಗೆ ಹಾಕಿ ಅರೆಯಿರಿ. (ನೀರು ಹೆಚ್ಚು ಹಾಕಬೇಡಿ)ಈ ಮಿಶ್ರಣ ನುಣ್ಣಗೆ ಆಗಿ ತೆಗೆಯುವ ಮೊದಲು ಮೇಲೆ ಹೇಳಿದ ಸೊಪ್ಪು, ತರಕಾರಿಗಳನ್ನು ಸೇರಿಸಿ ಎರಡು ಸುತ್ತು ತಿರುಗಿಸಿ ತೆಗೆದುಬಿಡಿ. ಈಗ ನೆನೆದ ರವೆಯನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಬಾಳೆ ಎಲೆಯ ತುಂಡಿನ ಮೇಲ್ಭಾಗದಲ್ಲಿ ರೊಟ್ಟಿ ಹಚ್ಚಿ ಕಾವಲಿಯಲ್ಲಿ ಹಾಕಿ ಎರಡೂ ಬದಿ ಬೇಯಿಸಿ. (ನೇರವಾಗಿ ಕಾವಲಿಯಲ್ಲೇ ಹಿಟ್ಟು ಹಚ್ಚಿಯೂ ಬೇಯಿಸಬಹುದು). ಪುದಿನ ಚಟ್ನಿಯೊಂದಿಗೆ ಸವಿಯಿರಿ.
ಪುದಿನ ಚಟ್ನಿ:-ಸಾಮಾಗ್ರಿಗಳು-ತೆಂಗಿನತುರಿ ಒಂದು ಕಪ್
ಹಸಿರು ಮೆಣಸಿನ ಕಾಯಿ ಒಂದು ಯಾ ಎರಡು (ಅಥವಾ ಖಾರ ಬೇಕಾದಷ್ಟು)
ಶುಂಟಿ ತುಂಡು ಒಂದು ಇಂಚಿನಷ್ಟು
ಪುದಿನ ಸೊಪ್ಪಿನ ಚೂರುಗಳು ನಾಲ್ಕು ಚಮಚ
ಉಪ್ಪು, ಹುಳಿ ರುಚಿಗೆ ತಕ್ಕಷ್ಟು
ಒಗ್ಗರಣೆಗೆ- ಎಣ್ಣೆ, ಉದ್ದಿನಬೇಳೆ,ಸಾಸಿವೆ, ಕೆಂಪು ಮೆಣಸು, ಕರಿಬೇವಿನ ಸೊಪ್ಪು.
ವಿಧಾನ:- ಸೊಪ್ಪು ಮತ್ತು ಒಗ್ಗರಣೆ ಸಾಮಾಗ್ರಿಗಳನ್ನು ಹೊರತುಪಡಿಸಿ ಉಳಿದವುಗಳನ್ನು ಮಿಕ್ಸಿ ಮಾಡಿ. ಕೊನೆಯಲ್ಲಿ ಸೊಪ್ಪಿನ ಚೂರುಗಳನ್ನು ಹಾಕಿ pulse ಮಾಡಿ ತೆಗೆಯಿರಿ. ಒಗ್ಗರಣೆ ಕೊಡಿ.
ಕಿವಿಮಾತು-ಇಡಿ ಗೋದಿಯನ್ನು ಮಿಕ್ಸಿಯಲ್ಲಿ ಹಾಕಿದರೆ ಅದರ ಬಾಳತನ ಕಡಿಮೆಯಾಗಬಹುದು.grinder ಉಪಯೋಗಿಸುವುದು ಉತ್ತಮ. ಮಿಕ್ಸಿಯನ್ನು ಮಾತ್ರ ಉಪಯೋಗಿಸುವವರು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಮೇಲೆ ಹೇಳಿದ ಪ್ರಮಾಣದಲ್ಲೇ ಅಕ್ಕಿ ಹಿಟ್ಟು,ಗೋದಿ ಹಿಟ್ಟು(ಉಳಿದದ್ದೆಲ್ಲಾ ಅದುವೇ) ಉಪಯೋಗಿಸಿಯೂ ಮಾಡಬಹುದು. ಆದರೆ ಇಡಿಗೋದಿಯಲ್ಲಿರುವ ನಾರಿನಂಶ ಗೋದಿಹಿಟ್ಟಿನಲ್ಲಿ ಇರಲಾರದು. ರೊಟ್ಟಿ ಹಚ್ಚುವಾಗ ಕೈಗೆ ನೀರನ್ನು ಸವರಿಕೊಳ್ಳಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ