ಶುಕ್ರವಾರ, ಅಕ್ಟೋಬರ್ 17, 2014

ಒಂದೇ ಬಳ್ಳಿಯ ಹೂಗಳು ---2

ಈಗೀಗ 'ನಾನೇ ಧಣಿ' ಎನ್ನುವ ಕೆಲಸದಾಳುಗಳೇ ಇರುವುದು ಹೌದಾದರೂ ಹಳೆಯ ತಲೆಮಾರಿನ ಆರೆಂಟು ಆಳುಗಳು  ಹೊಟ್ಟೆಪಾಡಿಗೆಂದೋ  ಮೊದಲಿನ ಧಣಿಯ ಕಾಲದಿಂದಲೂ ಕೆಲಸಕ್ಕೆ ಬರುತ್ತಿದ್ದೇವೆ ಎನ್ನುವ ಮುಲಾಜಿನ ಕಾರಣಕ್ಕೋ ಅಂತೂ ಈಗಲೂ ಗೋಪಾಲನಲ್ಲಿಗೆ ದುಡಿಮೆಗೆ ಬರುತ್ತಾರೆ. ಆಧುನಿಕತೆಯ ಗಾಳಿ ಸೋಕಿದ ಹೊಸ ತಲೆಮಾರಿನ ಪಡ್ಡೆಗಳೆಲ್ಲರೂ ಸರಕಾರ ಕೊಡುವ ಸವಲತ್ತುಗಳನ್ನು ಉಪಯೋಗಿಸಿಕೊಂಡು ಶಾಲೆ,ಕಾಲೇಜು, ಉದ್ಯೋಗ ಎಂದು ಪೇಟೆ ಕಡೆಗೆ ಮುಖ ಮಾಡಿದವರು ಅಪ್ಪಿ ತಪ್ಪಿಯೂ ಗೋಪಾಲನ ತೋಟದ ಕಡೆಗೆ ಮುಖ ಮಾಡುವುದಿಲ್ಲ. ಗೋಪಾಲ ಲಲಿತೆಯರ ಸಹೃದಯತೆ, ಆಳುಗಳ ಅಗತ್ಯಕ್ಕೆ ಸ್ಪಂದಿಸಿ ಕೊಡುವ ಸಾಲಗಳು, ಹೊಟ್ಟೆ ತುಂಬಾ ಕೊಡುವ ಊಟ,ಕಾಫಿ ಇತ್ಯಾದಿಗಳ ಆಕರ್ಷಣೆಯಿಂದಲೋ ಏನೋ... ಅಂತೂ ಇವರ ತೋಟದಲ್ಲಿ ಕೃಷಿ ಕೆಲಸ ಕಾಲ ಕಾಲಕ್ಕೆ ಹೇಗೋ ನಡೆದುಕೊಂಡು ಹೋಗುತ್ತೆ.
'ಜೀವನವನ್ನು  ಕಳೆ  ಮತ್ತು ಜೀವನವನ್ನು ಅನುಭವಿಸು' ಈ ಎರಡರಲ್ಲಿರುವ ವ್ಯತ್ಯಾಸವನ್ನು ಚೆನ್ನಾಗಿ ಅರಿತಿರುವ ಗೋಪಾಲ ಎರಡನೆಯದನ್ನು ಆಯ್ದುಕೊಂಡ ಧನಾತ್ಮಕ ಜೀವಿ. ಅವನಿಗೆ ತಕ್ಕ ಹೆಂಡತಿ ಲಲಿತೆ. ಗೋಪಾಲನಿಗೆ ಮಾಸ್ತರ ಕೆಲಸ ಇರುವುದರಿಂದ ಮನೆಯ ಮೇಲ್ಖರ್ಚಿಗೆ ತಿಂಗಳ ಸಂಬಳವೇ ಸಾಕಾಗುತ್ತೆ. ದುಂದುಗಾರಿಕೆ ಇಲ್ಲದುದರಿಂದ ಕೃಷಿಯಲ್ಲಿ ಗಳಿಸಿದ ಅತ್ಯಲ್ಪ ಲಾಭ ಕೂಡಿನಿಂತು ಪುಟ್ಟ ಗಂಟಾಗಿ ಆತನ ಹೆಸರಲ್ಲಿ ಬ್ಯಾಂಕಲ್ಲಿ ಭದ್ರವಾಗಿತ್ತು. ನಿತ್ಯ ಅಗತ್ಯಕ್ಕೊಂದು ಸ್ಕೂಟರು, ಕುಟುಂಬದ ಅಗತ್ಯಕ್ಕೆ ಜೀಪು. ಹೀಗೆ ಆರಕ್ಕೇರದೆ ಮೂರಕ್ಕಿಳಿಯದ ದಂಪತಿ ಗೋಪಾಲ ಲಲಿತೆಯರಿಗೆ ಇಬ್ಬರು ಮಕ್ಕಳು. ಹರೀಶ ಮತ್ತು ಗಾಯತ್ರಿ. ಹರಿಯ ನಸು ಕೆಂಪು ಬಣ್ಣ, ಸುಂದರ ನಿಲುವು, ಗುಂಗುರು ಕೂದಲು ನೋಡಿದವರೆಲ್ಲರೂ'....  ಮಗ ಅಮ್ಮನ ಪಡಿಯಚ್ಚು..' ಎನ್ನುವರು. ಆತ ಮಂಗಳೂರಿನ ಕಾಲೇಜೊಂದರಲ್ಲಿ ದ್ವಿತೀಯ ಪಿ.ಯೂ.ಸಿ. ಓದುತ್ತಿದ್ದಾನೆ. ಅಪ್ಪನ ಹಾಗೆ ಜೀವನದಲ್ಲಿ ಬಂದುದನ್ನು ಬಂದ ಹಾಗೆಯೇ ಸ್ವೀಕರಿಸಬಲ್ಲ ಹಗುರ ಮನೋಭಾವದ ಹರಿ ಎಂದರೆ ತೋಟದ ಆಳುಗಳಿಂದ ಹಿಡಿದು ಕಾಲೇಜಿನ ಪ್ರಿನ್ಸಿಯವರೆಗೆ ಎಲ್ಲರಿಗೂ ಅಚ್ಚು ಮೆಚ್ಚು. ಗಾಯತ್ರಿ ಅಣ್ಣನಿಗಿಂತ ಒಂದು ವರ್ಷಕ್ಕೆ ಚಿಕ್ಕವಳು. ಎಣ್ಣೆಗಪ್ಪು ಬಣ್ಣ, ತೆಳ್ಳಗಿನ ನೀಳಕಾಯದ ಗಾಯತ್ರಿ ಬಹಳ  ಒಳ್ಳೆಯ ಹುಡುಗಿ. ಯಾವ ವಿಷಯವನ್ನೇ ಆದರೂ ನೋಡಿದ ತಕ್ಷಣ ಅರ್ಥಮಾಡಿಕೊಂಡು ಅದರ ಆಳಕ್ಕಿಳಿದು ಮನನ ಮಾಡಿಕೊಳ್ಳುವ ಛಲ ಇರುವಾಕೆ. ಗಾಯತ್ರಿಯ ಜಾಣತನದ ಬಗ್ಗೆ ಮನೆಯರೆಲ್ಲರಿಗೂ ಅಪಾರ ಹೆಮ್ಮೆ. ಹುಣ್ಣಿಮೆ ಚಂದ್ರನಲ್ಲಿಯೇ ಕಲೆ ಇದೆಯಂತೆ....  ಇನ್ನು ಮನುಷ್ಯ ಯಾವ ಲೆಕ್ಕ? ಎಲ್ಲವೂ ಇರುವ ಗಾಯತ್ರಿಯಲ್ಲೂ ಕೊರತೆ ಇತ್ತು. ಹುಡುಗಿಗೆ ಹುಟ್ಟುವಾಗಲೇ ಮೆಲ್ಳೆ ಕಣ್ಣು, ಎಡ ಕೆನ್ನೆಯಿಂದ ಉದ್ದಕ್ಕೂ ಕೊರಳಿನವರೆಗೂ ಹರಡಿಕೊಂಡಿರುವ ಕಡುಕಪ್ಪು ಮಚ್ಚೆ. ವಿದ್ಯಾವಂತೆ ಲಲಿತೆಯೂ ಕೆಲವೊಮ್ಮೆ ಮಗಳ ಭವಿಷ್ಯದ ಬಗ್ಗೆ ಚಿಂತೆ ಹತ್ತಿಸಿಕೊಳ್ಳುತ್ತಿದ್ದಳು. ಆದರೆ ಗೋಪಾಲ ಯಾವಾಗಲೂ ಮಡದಿಯನ್ನು ಸಂತೈಸುವುದಿತ್ತು, "ಲಲ್ಲೀ..., ಗಾತಿಯ ರೂಪದ ಬಗ್ಗೆ ಎಂತಕೆ ಮಾರಾಯ್ತಿ ಚಿಂತೆ ಮಾಡ್ತಿ...?ಅಂವ ಒಂದು ಕಲಿ ತಕ್ಕೊಂಡ್ರೆ ಇನ್ನೊಂದು ಕೈಲಿ ಕೊಟ್ಟೇ ಕೊಡ್ತಾ....,ನಮ್ಮ ಗಾತಿಯ ಪ್ರಚಂಡ ಬುದ್ಧಿಯ ಎದುರು ಎಂತೆಂತ ಶೋಕಿನ ಕೂಸುಗಳನ್ನಾದ್ರೂ ನೀವಾಳ್ಸಿ ತೆಗೇಕು....,ಅದರ ಬುದ್ಧಿ, ಸ್ವಭಾವ, ಗುಣ ನಡತೆ ತಿಳಿದು ಮೆಚ್ಚಿಕೊಂಬವಂಗೇ ಧಾರೆ ಎರೆದು ಕೊಟ್ರೆ ಸಮಸ್ಯೆ ಮುಗಿದತ್ತಲ್ದೋ....? ಈ ಲೋಕಲ್ಲಿ ಹಾಂಗಿಪ್ಪವೂ ಧಾರಾಳ ಇದ್ದವು ಅಬ್ಬೋ....ಆದ್ರೆ ಅದಕ್ಕಿನ್ನೂ ಬೇಕಾದಷ್ಟು ಸಮಯ ಇದ್ದನ್ನೇ.... ಈಗಿಂದಲೇ ಎಂತಕೆ ಮಂಡೆ ಬಿಸಿ ಮಾಡಿಗೊಳ್ತೆ....?" ಲಲಿತೆಗೂ ಗಂಡನ ಮಾತು ಸರಿ ಎನಿಸುತ್ತಿತ್ತು. ಆದರೂ ಹೆತ್ತಬ್ಬೆಯ ಚಿಂತೆಗೆ ಕೊನೆಯೆಲ್ಲಿ..? 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ