ಗುರುವಾರ, ಅಕ್ಟೋಬರ್ 16, 2014

ಒಂದೇ ಬಳ್ಳಿಯ ಹೂಗಳು (2008 ನೇ ಸಾಲಿನ 'ಕೊಡಗಿನ ಗೌರಮ್ಮ ಕಥಾ ಸ್ಪರ್ಧೆ' ಯಲ್ಲಿ ಮೊದಲ ಬಹುಮಾನ ಪಡೆದ ಕಥೆ)

ಗುಂಡಿ ಗದ್ದೆಯ ಮೇಲಿನಿಂದ ಹಾದುಹೋಗುವ ರಸ್ತೆಯಲ್ಲಿ ನಿಂತು ಕೆಳಕ್ಕೆ ನೋಡಿದರೆ ಮಳೆಯಲ್ಲಿ ಮಿಂದು ನಿಂತ ಗೋಪಾಲನ ತೋಟ ಕೆತ್ತನೆ ಇಲ್ಲದೆ ಬಿದ್ದುಕೊಂಡ ಪಚ್ಚೆ ಮರಕತದ ತುಂಡಿನ ಹಾಗೆ ಗೋಚರಿಸುತ್ತೆ. ಆ ಆಸ್ತಿಯೇ ಹಾಗೆ, ದಾರಿಹೋಕರನ್ನು ಒಂದು ಕ್ಷಣ ಸೆರೆಹಿಡಿದು ತನ್ನೊಳಗೆ ಕಟ್ಟಿ ಹಾಕುವ ಆಕರ್ಷಣೆ ಇದೆ ಅದರಲ್ಲಿ. ಪ್ರಕೃತಿಯ ಒನಪು ವೈಯ್ಯಾರಕ್ಕೆ ತಲೆದೂಗದವರು ಯಾರು...?ನಿನ್ನೆಯವರೆಗೆ ಮೋಡದ ಬಸಿರನ್ನೇ ಸೀಳಿ ಹೊರಬಂದು ಭೂಮಿಗಭಿಷೇಕ ಮಾಡಿಕೊಂಡಿದ್ದ ಮುಸಲಧಾರೆ ಇಂದು ಇಳೆಗೆ ಪನ್ನೀರಿನ ಸ್ನಾನ ಮಾಡಿಸುವ ಉಮೇದಿಯಲ್ಲಿರುವಂತೆ ತುಂತುರು ತುಂತುರಾಗಿ ಹನಿಯುತ್ತಾ ಇದೆ. ದಶಕಗಳ ಕಾಲದಿಂದ ಚಿತ್ರಕಲೆ ಅಭ್ಯಾಸ ಮಾಡಿದ ನುರಿತ ಕಲಾವಿದನ ಕುಂಚದಲ್ಲಿ ಒಡಮೂಡಿದಂತಹ ದೃಶ್ಯಕಾವ್ಯ  ಆ ತೋಟದ ಮೂಡಣ ಆಕಾಶದಲ್ಲಿ  ಅನಾವರಣಗೊಂಡಿತ್ತು. ಹಿನ್ನೆಲೆಯಲ್ಲಿ ದಟ್ಟ ನೀಲಿ ವರ್ಣದ ಛಾದರ ಹೊದ್ದು  ಮಲಗಿದ ಎತ್ತರ ತಗ್ಗಿನ ಗುಡ್ಡ ಬೆಟ್ಟಗಳ ಸಾಲು. ಆ ಛಾದರದ ಬಿಸುಪು ಸ್ವಲ್ಪ ನಮಗೂ ಇರಲಿ ಎಂಬ ಹಾಗೆ ಅವುಗಳೆದೆಯಲಿ ಒರಗಿದ ತಿಳಿವರ್ಣದ ಮೋಡಗಳು. ಮೋಡಗಳಿಗೆ ಅಡಿ ಗೆರೆ ಎಳೆದಂತೆ ಉದ್ದಕ್ಕೂ ಹಾಸಿ ಮಲಗಿದ ಬೆಳ್ಳಿಗೆರೆ. ಒಂದು ಕ್ಷಣದ ಹಿಂದೆ ನಾಟಕವೆಲ್ಲಾ ಮುಗಿದು ಬಣ್ಣ ಮಾಸಿದ ಪರದೆ ಇಳಿಸಿ ಹೋದ ನಾಟಕಕಾರ ತರಾತುರಿಯಲ್ಲಿ ಹಿಂದಕ್ಕೆ ಬಂದು ಆ ತೆರೆಯನ್ನು ಸರಿಸಿ ಹೊಸ ನಾಟಕಕ್ಕೆ ವೇದಿಕಯನ್ನು ಸಜ್ಜುಗೊಳಿಸಿದನೋ ಎಂಬಂತೆ ತೋರುವ ಆಗಸ ಎಂತಹ ಅರಸಿಕರನ್ನೂ ಮರುಳು ಮಾಡುವಂತಿತ್ತು. ಬೆಟ್ಟದ ಹಿಂಬದಿಯಲ್ಲಿ ಯಾರೋ ಕೆಂಪು, ಹಳದಿ ವರ್ಣಗಳನ್ನು ಒಟ್ಟಿಗೆ ಕಲಸಿ ಬೇಕಾಬಿಟ್ಟಿ ಚೆಲ್ಲಿದ್ದಾರೇನೋ ಎಂಬಂತೆ ಕಡು ಕೇಸರಿ ಬಣ್ಣ! ಒಂದು ವಾರ ಪೂರ್ತಿ ಅದರೊಳಗೆ ಅವಿತಿದ್ದನೇನೋ ಎಂಬಂತೆ ಆ ಕಡುವರ್ಣ ಪೂರ್ತಿಯಾಗಿ ಮೈಗೆ ಮೆತ್ತಿಕೊಂಡ ಬಾಲ ಭಾಸ್ಕರ ಮೆಲ್ಲಗೆ ತಲೆ ಎತ್ತಿ ಬಲಹೀನ ಮೋಡಗಳೆಡೆಗೆ ನೋಡಿ ಕಿಸಕ್ಕನೆ ನಕ್ಕ! ಪ್ರಖರ ವರ್ಣದ ಸುರಸುಂದರಾಂಗ ಆದಿತ್ಯನೊಂದಿಗೆ ತಮ್ಮ ಮಂಕು ಬಣ್ಣವನ್ನು ಹೋಲಿಸಿ ನೋಡಿದ ಮೋಡಗಳು ನಾಚಿ ಕರಗಿ ನೀರಾಗಿ ಹೋದುವು. ವಿಜಯೋತ್ಸಾಹದಿಂದ ಮೆಲೀರಿ ಬಂದ ದಿನಕರ ಪ್ರಕೃತಿಯ ಹಸುರುಡುಗೆಯ ಮೇಲೆ ಚಿನ್ನದೆಳೆಯ ನೇಯ್ಗೆ ಶುರುಮಾಡಿದ. ಮೂರೂ ಬದಿ ಗುಡ್ಡಗಳಿಂದಾವೃತಗೊಂಡಿರುವ ಗೋಪಾಲನ ತೋಟ ದಿನದಲ್ಲಿ ಹಲವು ಸಲ ಇಂತಹ ರಮ್ಯ ದೃಶ್ಯಾವಳಿಗಳಿಗೆ ಸಾಕ್ಷಿಯಾಗುತ್ತೆ.
ಗುಂಡಿಗದ್ದೆಯಿಂದ ಮೂರ್ನಾಲ್ಕು ಕೀ.ಮೀ. ದೂರದಲ್ಲಿರುವ ಸರಕಾರೀ ಪ್ರೌಢ ಶಾಲೆಯಲ್ಲಿ ಗೋಪಾಲ ಹೆಡ್ಮಾಸ್ತರು. ಪಿತ್ರಾರ್ಜಿತವಾಗಿ ಬಂದ ನಾಲ್ಕೆಕ್ಕರೆ ಅಡಿಕೆ ತೋಟ, ಎರಡೆಕ್ರೆ ತೆಂಗಿನ ತೋಟ, ಬಾಳೆ, ಹಲಸು, ಮಾವು ಹೀಗೆ ಎಲ್ಲವೂ ಇದ್ದ  ಸಮೃದ್ಧ ಆಸ್ತಿಯನ್ನು ತನ್ನ ಸ್ವಂತ ಮಗುವಿನ ಹಾಗೆ ನೋಡಿಕೊಂಡು ಬರುತ್ತಿದ್ದಾನೆ. ನೀರಿನಾಶ್ರಯ ಧಾರಾಳ, ಒಳ್ಳೆ ನುಸುಳು ಇರುವ ಕೆಂಪು ಮಣ್ಣು, ಭೂಮಿತಾಯಿಗೆ ಇವನೆಷ್ಟು ಉಣ ಬಡಿಸುತ್ತಾನೋ ಅದರ ಎರಡರಷ್ಟು ಆಕೆ ಇವನ ಮಡಿಲಿಗೆ ಸುರಿಯುತ್ತಿದ್ದಳು. ಹಾಗೆಂದು ಊರಲ್ಲೆಲ್ಲ ಇರುವಂತೆ ಕೆಲಸದವರ ಅಭಾವ, ಅಡಿಕೆ ಕೊಳೆ ರೋಗ, ತೆಂಗಿನ ನುಸಿ ಪೀಡೆ,ಜಾನುವಾರುಗಳ ಖಾಯಿಲೆ ಕಸಾಲೆ- ಈ ಎಲ್ಲ ಸಮಸ್ಯೆಗಳು ಗೋಪಾಲನಿಗೆ ಇಲ್ಲವೆಂದಲ್ಲ. ಎಲ್ಲವೂ ಹಾಸಿ ಹೊದೆವಷ್ಟು ಇದ್ದರೂ ಆತ ಒಂದು ವಿಷಯದಲ್ಲಿ ಅದೃಷ್ಟವಂತನೇ ಸೈ. ಗುಂಡಿಗೆದ್ದೆಯ ಆಸುಪಾಸಿನಲ್ಲಿ ಇವನಿಗಿಂತಲೂ ದೊಡ್ಡ ಹಿಡುವಳಿದಾರರು ಯಾರೂ ಇಲ್ಲ. "ಇನಿ ಬೆಂದುಂಟ ಎಲ್ಲೆ ಸಿನೋಳಿ..."(ಇವತ್ತು ದುಡಿದರೆ ನಾಳೆ ತಿನ್ನಬಹುದು) ಎನ್ನುವ ಮಟ್ಟದ ಮಣ್ಣಿನ ಮಕ್ಕಳೇ ಸುತ್ತಮುತ್ತ ಇರುವವರು. ನಾಲ್ಕಾರು  ಆಳುಗಳಿಗೆ ಕೆಲಸ ಕೊಟ್ಟು ಮಾಡಿಸುವ ತಾಕತ್ತು
ಇರುವವ ಗೋಪಾಲ ಒಬ್ಬನೇ. ಹಾಗಾಗಿ ಎಲ್ಲರಿಗೂ 'ಧಣಿಗಳು' ಎಂದರೆ ಗೋಪಾಲನೆ.
                                                                                                                      (ಮುಂದುವರಿಯುವುದು)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ