ಭಾನುವಾರ, ಅಕ್ಟೋಬರ್ 19, 2014

ಒಂದೇ ಬಳ್ಳಿಯ ಹೂಗಳು--4

ಗಾಯತ್ರಿ ಪ್ರಥಮ ಪಿ.ಯು.ಸಿ. ಯಲ್ಲಿ ಕಾಲೇಜಿಗೇ ಮೊದಳನೆಯವಳಾಗಿ ಪಾಸಾಗಿದ್ದರೆ ಹರಿ ಎರಡನೇ ವರ್ಷದ ಪಿ.ಯೂ.ಸಿ. ಯಲ್ಲಿ ವಿಶಿಷ್ಟ ಸ್ಥಾನ ಪಡೆದು ಪಾಸಾಗಿದ್ದ. ಕೆಲವೇ ದಿನಗಳಲ್ಲಿ ಅವನ ಸಿ.ಇ.ಟಿ. ಫ಼ಲಿತಾಂಶವೂ ಬಂತು. ವೈದ್ಯಕೀಯ ವಿಭಾಗದಲ್ಲಿ ಹರಿಗೆ ಎರಡುಸಾವಿರದ ಆರುನೂರ ಅರುವತ್ತನೇ ಸ್ಥಾನ ದೊರೆತಿತ್ತು. ಲಲಿತೆ ಗೋಪಾಲರ ನಿರೀಕ್ಷೆಯಂತೆ ಫಾಲಿತಾಂಶ ಇರದಿದ್ದರೂ ತುಂಬು ಮನಸ್ಸಿನಿಂದ ಮಗನನ್ನು ಅಭಿನಂದಿಸಿದರು. ಗೋಪಾಲ ಮಗನ ಭುಜ ಬಳಸಿ ಹಿಡಿದು ಹಗುರವಾಗಿ ಹೇಳಿದ,
"ಹರಿ..., ಕಂಗ್ರಾಟ್ಸ್..,ಲೆಟ್ಅಸ್ ಹೋಪ್ ದ ಬೆಸ್ಟ್... ಕೊನೆಯ ಸುತ್ತು ಕೌನ್ಸೆಲಿಂಗ್ವರೆಗೂ ಕಾದು ನೋಡಿ ಒಳ್ಳೆಯ ಮೆಡಿಕಲ್ ಕಾಲೇಜನ್ನೇ ಸೆಲೆಕ್ಟ್ ಮಾಡ್ವಾ... ವರಿ ಮಾಡೇಡ..."
"ಮಗಾ..., ದೇವರು ಕೈ ಬಿಡ... ಎಲ್ಲವೂ ಒಳ್ಳೇದಕ್ಕೆ ಹೇಳಿ ತಿಳ್ಕಾ.... ದೈರ್ಯ ಕಳಕ್ಕೋಳೇಡ..."ಲಲಿತೆಯೂ ದ್ವನಿ ಕೂಡಿಸಿದಳು. ಆಘಾತ ಆದದ್ದು ಮಾತ್ರ ಗಾಯತ್ರಿಗೆ. ಅಳು ಸ್ವರದಲ್ಲಿ ತನ್ನ ಕೈಲಾದಷ್ಟು ಅಣ್ಣನನ್ನು ಸಂತೈಸಲು ಪ್ರಯತ್ನ ಪಟ್ಟಳು,
"ಅಣ್ಣಾ...,ನಿನ್ನ rank ನೋಡಿ ಬೇಜಾರಾತಾ...?ಪ್ಲೀಸ್..., ಬೇಜಾರು ಮಾಡ್ಕೋಳೇಡ. ನಾವು ಎಸ್.ಎಸ್. ಲ್. ಸಿ. ವರೆಗೂ ಕನ್ನಡ ಮೀಡಿಯಮ್ಮಿಲ್ಲಿ ಓದಿದ್ದಲ್ದಾ...? ಆ ಕೆಟಗರಿಲಿ ನಿನಗೆ ಒಳ್ಳೆಯ ಕಾಲೆಜಿಲ್ಲೇ ಸೀಟು ಸಿಕ್ಕುಗು.... ಅಲ್ದಾ...?"
"ಒಹ್..., ನಿಂಗೋ ಎಲ್ಲರೂ ಎಂತಕೆ ಇಷ್ಟು ಟೆನ್ಶನ್ ಮಾಡುವದು? ಆನು ಡಿಸೈಡ್ ಮಾಡಿ ಆಯಿದು...., ಈ ವರ್ಷ ಕೌನ್ಸೆಲಿಂಗ್ ಎಟೆಂಡ್ ಮಾಡ್ತಿಲ್ಲೆ...,ಪುನ್ಹ ಒಂದು ವರ್ಷ ಪೂರ್ತಿ ಸಿ.ಇ. ಟಿ. ಗೆ ಓದುತ್ತೆ. ಅದರೊಟ್ಟಿಗೆ ಬಿ.ಎಸ್ಸಿ.ಗೂ ಸೇರ್ತೆ. ಮುಂದಿನವರ್ಷ ಮತ್ತೆ ಸಿ.ಇ.ಟಿ. ಬರೆದು ಒಳ್ಳೆ rank ತೆಗೆದು ಬೆಸ್ಟ್ ಮೆಡಿಕಲ್ ಕಾಲೆಜಿಲ್ಲೇ ಓದುತ್ತೆ... ಸರಿಯಲ್ದಾ...  ಅಪ್ಪಾ...?"  ಗೋಪಾಲ ಹರಿಯ ಧೃಢನಿರ್ಧಾರದ ಮಾತುಗಳಿಂದ ವಿಚಲಿತನಾದರೂ ತೋರಿಸಿಕೊಳ್ಳದೆ ಮಗನ ಮನಸ್ಸು ನೋಯದಂತೆ ಮೃದುವಾಗಿ ಕೇಳಿದ,
"ಒಂದು ವರ್ಷ ವೇಸ್ಟ್ ಆವುತ್ತಲ್ದಾ ಮಗಾ...?"
"ತೊಂದರೆ ಇಲ್ಲೇ ಅಪ್ಪಾ...,ಎನ್ನ ಮಾರ್ಕ್ಸಿಂಗೆ ಮೆರಿಟ್ಟಿಲ್ಲಿ ಒಳ್ಳೆಯ ಕಾಲೇಜಿಂಗೆ ಎಡ್ಮಿಶನ್ ಸಿಕ್ಕುವ ಚಾನ್ಸ್ ಇಲ್ಲೆ.ಇನ್ನು ಹೇಂಗಾದ್ರೂ ಒಬ್ಬ ಡಾಕ್ಟರ್ ಆದರೆ ಸಾಕು ಹೇಳಿಗೊಂಡು ಹೆಸರೇ ಕೇಳಿರದ ಯಾವದ್ಯಾವುದೋ ಮೆಡಿಕಲ್ ಕಾಲೇಜಿಂಗೆ ಸೇರಿ ನಾನೂ ಒಬ್ಬ ಡಾಕ್ಟರ್ ಆದೆ ಅನಿಸ್ಕೊಂಡು ಎಲ್ಲೋ ಒಂದು ಕಡೆ ಬೋರ್ಡ್ ಹಾಕಿ ಕೂತು ಪೇಶೆಂಟುಗಳ ಜೀವದ ಮೇಲೆ ಪ್ರಯೋಗ ಮಾಡಿ ಊರಿನವ್ರ ಬಾಯಿಂದ 'ಗೋಪಾಲನ ಮಗ ಬರೀ ಬುರ್ನಾಸು...' ಅಂತ ಹೇಳ್ಸಿಕೊಂಬದು ನಿಂಗೊಗೆ ಇಷ್ಟವಾ......ಅಪ್ಪಾ...? ಒಳ್ಳೆಯ ಹೆಸರಿಪ್ಪ ಹಳೆಯ  ಕಾಲೆಜಿಲ್ಲಿ ಚೆನ್ನಾಗಿ ಕಲಿತು ಉತ್ತಮ ಡಾಕ್ಟರ್ ಆಯೇಕು ಹೇಳಿ ಎನ್ನ ಆಸೆ...ಸರಿಯಲ್ದಾ... ಅಪ್ಪಾ..?"
ಮಕ್ಕಳ ಉನ್ನತ ಭಾವನೆಗಳನ್ನು ಎಂದೂ ತಳ್ಳಿಹಾಕದ ಗೋಪಾಲ ಈಗಲೂ ಅದನ್ನೇ ಮಾಡಿದ.ಹರಿ ಮಂಗಳೂರಲ್ಲೇ ಬಿ. ಎಸ್ಸಿ. ಗೆ ಸೇರಿಕೊಂಡ. ಸಿ.ಇ.ಟಿ. ಪಾಠಗಳಿಗೇ ಹೆಚ್ಚು ಒತ್ತು ಕೊಟ್ಟು ಓದಲಾರಂಭಿಸಿದ. ಗಾಯತ್ರಿ ಈಗ ದ್ವಿತೀಯ ಪಿ.ಯೂ.ಸಿ.  ವಿದ್ಯಾರ್ಥಿನಿ. ಅವಳು ಮೊದಲೇ ಪುಸ್ತಕದ ಹುಳು. ಈಗಂತೂ ಊಟ ನಿದ್ದೆಯ ಪರಿವೆಯೇ ಇಲ್ಲವಾಯಿತು. ಬರೀ ಓದು..... ಓದು.... ಹಗಲು...ಇರುಳು.... ಹಗಲು... ಇರುಳು.... ಕಾಲ ಚಕ್ರ ತಿರುಗಿದ್ದೇ ಗೊತ್ತಾಗದಂತೆ ಪರೀಕ್ಷೆಗಳೆಲ್ಲವೂ ಮುಗಿದು ಹೋದುವು. ತಮ್ಮ ಪರೀಕ್ಷೆಗಳಲ್ಲಿ (ಇಬ್ಬರೂ ವೃತ್ತಿ ಶಿಕ್ಷಣ ಪ್ರವೇಶ ಪರೀಕ್ಷೆ ಒಟ್ಟಿಗೇ ಬರೆದಿದ್ದರು) ಅತ್ಯುತ್ತಮ ಸಾಧನೆ ಮಾಡಿದ ತೃಪ್ತಿಯಿಂದ ಅಣ್ಣ ತಂಗಿ ಮನೆಗೆ ಮರಳಿದರು. ಎಷ್ಟೋ ದಿನಗಳ ನಂತರ ಮಕ್ಕಳನ್ನು ನೋಡಿದ ದಂಪತಿ ಸಮಾಧಾನದ ನಿಟ್ಟುಸಿರು ಬಿಟ್ಟರು. ಇನ್ನು ಮೂರು ತಿಂಗಳು ಮಕ್ಕಳು ತಮ್ಮೊಂದಿಗೇ ಇರುವರು ಎನ್ನುವುದೇ ಲಲಿತೆಗೆ ಬಹು ದೊಡ್ಡ ಸಂಭ್ರಮ. ದಿನ ದಿನವೂ ಬಗೆ ಬಗೆಯ  ತಿಂಡಿ ತಿನಸುಗಳನ್ನು ಮಾಡಿ ಇಬ್ಬರಿಗೂ ಉಣಬಡಿಸುವುದೇ ಅವಳ ಮುಖ್ಯ ಕಾಯಕವಾಯ್ತು. ಒಂದು ದಿನ ಹರಿಗೆ ಇಷ್ಟವೆಂದು ಉಂಡುಳಕಾಳು ಮಾಡಿದ್ರೆ ಇನ್ನೊಂದು ದಿನ ಉಪ್ಪಲ್ಲಿ ಹಾಕಿಟ್ಟ ಹಲಸಿನ ಸೊಳೆ ರೊಟ್ಟಿಯನ್ನು ಗಾಯತ್ರಿಗಾಗಿ ಮಾಡುವಳು. ಮತ್ತೊಂದು ದಿನ ಇಬ್ಬರೂ ಇಷ್ಟ ಪಡುವ ಸೇಮಿಗೆ, ರಸಾಯನ ತಯಾರಾಗುತ್ತಿತ್ತು. ಹಾಸ್ಟೆಲುಗಳಲ್ಲಿ ನೀರಸ ಊಟ, ತಿಂಡಿ ತಿಂದು ನಾಲಿಗೆ ಜಡ್ಡುಗಟ್ಟಿ ಹೋಗಿದ್ದ ಮಕ್ಕಳಿಬ್ಬರೂ ಅಮ್ಮನ ರುಚಿ ರುಚಿ ಅಡುಗೆಯನ್ನು ಸವಿ ಸವಿದು ಉಂಡರು.ಊಟ ಮಾಡುವಾಗ ಗೋಪಾಲ ಲಲಿತೆಯನ್ನು ವಾರೆನೋಟದಿಂದ ನೋಡುತ್ತಾ, 
"ಏ ಮಕ್ಕಳೇ...,ನಿಂಗೋ ಬಂದದಕ್ಕೆ ನನ್ಗೂ ಹೊಟ್ಟೆ ತುಂಬಾ ಊಟ ಸಿಗುವ ಹಾಂಗಾಯ್ತಪ್ಪ... ಇಲ್ಲದಿದ್ರೆ ನಿಂಗಳ ಅಮ್ಮ ಒಂದ್ರಲ್ಲಿ  ಕೊಬ್ಬು ಜಾಸ್ತಿ...,ಇನ್ನೊಂದ್ರಲ್ಲಿ ಸಿಹಿ ಜಾಸ್ತಿ...,ಮತ್ತೊಂದ್ರಲ್ಲಿ ಉಪ್ಪು ಜಾಸ್ತಿ ಅಂತ ಯಾವಾಗಲೂ ತಿಳಿಸಾರು, ತಂಬುಳಿ, ಸಲಾಡಿಲ್ಲೇ ಊಟ ಮುಗ್ಸುತ್ತು...., ಈಗ ಅಳಿಯನೊಟ್ಟಿಗೆ ಗಿಳಿಯಂಗೂ ಉಪಚಾರ ಹೇಳುವ ಹಾಂಗೆ ಆತಲ್ದಾ...?" ಎಂದ.  ಅಪ್ಪನ ಕೀಟಲೆಗೆ ಮಕ್ಕಳೂ ಧ್ವನಿ ಕೂಡಿಸಿ ನಗುವಾಗ ಲಲಿತೆ ಹುಸಿ ಮುನಿಸಿನಿಂದ ಕೈಯ್ಯಲ್ಲಿದ್ದ ಸಿಹಿ ಕೂಟಿನ ಪಾತ್ರೆಯಿಂದ ಗಂಡನಿಗೆ ಎರಡು ಸೌಟು ಜಾಸ್ತಿಯೇ ಬಡಿಸಿದಳು.     
ಲಲಿತೆ ತಾವಿಬ್ಬರೇ ಇರುವಾಗ ಬಹಳ ಸರಳವಾದ ಅಡುಗೆಗೆ ಪ್ರಾಶಸ್ತ್ಯ ಕೊಡುವುದಕ್ಕೂ ಕಾರಣವಿತ್ತು. ಸ್ವಲ್ಪ ಸಮಯದ ಹಿಂದೆ ಲಲಿತೆಯ ತಮ್ಮ ಡಾ.ಕೃಷ್ಣಮೂರ್ತಿ, "ಭಾವ..,ನಿಂಗೊಗೆ ನಲುವತ್ತೈದು ವರ್ಷ ಕಳೆದತ್ತಲ್ದಾ...? ಇನ್ನು ವರ್ಷಕೊಂದ್ಸರ್ತಿ ಪೂರ್ತಿ ದೇಹ ಪರೀಕ್ಷೆ ಮಾಡ್ಸಿಗೊಳ್ಳಿ...ಸಿಟಿಗೆ ಬನ್ನಿ..., ಆನು ಎಲ್ಲ ವ್ಯವಸ್ಥೆ ಮಾಡ್ತೆ..." ಅಂದಿದ್ದ. ಅದರಂತೆ ಸಿಟಿಯಲ್ಲಿ ಗೋಪಾಲನನ್ನು ಎಲ್ಲಾ ವಿಧದ ಪರೀಕ್ಷೆಗೊಳಪಡಿಸಲಾಗಿತ್ತು. ರಕ್ತದ ಒತ್ತಡ ಜಾಸ್ತಿಯಿತ್ತು ಮಾತ್ರವಲ್ಲದೆ ರಕ್ತದಲ್ಲಿ ಕೊಬ್ಬಿನ ಅಂಶವೂ ಜಾಸ್ತಿಯಾಗಿಯೇ ಇತ್ತು.ತಮ್ಮನ ನಿರ್ದೇಶನದಂತೆ  ಔಷಧಿಗಳೊಂದಿಗೆ ಗಂಡನ ಊಟ ಉಪಚಾರದಲ್ಲೂ ಲಲಿತೆ ಅತೀವ ಜಾಗ್ರತೆ ವಹಿಸುತ್ತಿದ್ದಳು.ಸಂದರ್ಭ ದೊರೆತಾಗಲೆಲ್ಲಾ ಗೋಪಾಲ ಹೆಂಡತಿಯ ಅತಿ ಮುಂಜಾಗರೂಕತೆಯ ಬಗ್ಗೆ ಕೀಟಲೆ ಮಾಡಿ ಆಕೆಯಿಂದ ಬೈಸಿಕೊಳ್ಳುತ್ತಿದ್ದ. 
ಪ್ರಕೃತಿಯಲ್ಲಿ ಬಿಸಿಲು-ನೆರಳು, ಸಮುದ್ರದಲ್ಲಿ ಭರತ-ಇಳಿತ ಹೇಗೆ ಸಹಜವೋ ಹಾಗೆಯೇ ಮಾನವನ ಬದುಕಿನಲ್ಲಿ ಕಷ್ಟ-ಸುಖಗಳು. ಗೋಪಾಲ ಲಲಿತೆಯರ ಜೀವನವೂ ಇದಕ್ಕೆ ಹೊರತಲ್ಲ. ಅಡಿಕೆಯ ಬೆಲೆ ಪಾತಾಳಮುಖಿಯಾಗಿತ್ತು. ಕೆಲಸದಾಳುಗಳ ಸಂಬಳ ಗಗನಮುಖಿಯಾಗಿತ್ತು. ಗೋಪಾಲನ ಕೈಯ್ಯಲ್ಲಿ ಸರಕಾರೀ ಕೆಲಸವೊಂದು ಇರುವುದರಿಂದ ಬದುಕಿನ ಬಂಡಿ ಕುಂಟದೆ ಸಾಗುತ್ತಿತ್ತು.ಕೃಷಿಕರು ಪರ್ಯಾಯ ಬೆಳೆಯ ಬಗ್ಗೆ ಯೋಚಿಸಲೇಬೇಕಾದಂತಹ ಕಾಲ ಒದಗಿ ಬಂದಿತ್ತು. ಎಲ್ಲರಂತೆ ಗೋಪಾಲನೂ ರಬ್ಬರ್ ಕೃಷಿಯೆಡೆಗೆ ಆಕರ್ಷಿತನಾದ. ಅಡಿಕೆ ಕೃಷಿಗೆ ಹೋಲಿಸಿದರೆ ಕಡಿಮೆ ಕಷ್ಟಪಟ್ಟು ಹೆಚ್ಚು ದುಡ್ಡು ಗಳಿಸಬಹುದಾದಂತಹ ವಾಣಿಜ್ಯ ಬೆಳೆ ರಬ್ಬರ್.ತನ್ನ ಭೂಮಿಯಲ್ಲೂ ರಬ್ಬರ್ ಕೃಷಿ ಮಾಡುವುದೆಂದು           ತೀರ್ಮಾನಿಸಿದ. ಆತನ ತೋಟದ ಸುತ್ತಲೂ ಬೇಕಾದಷ್ಟು ಕಾಡುಗಳಿದ್ದುವು. ಒಂದು ಬದಿಯ ಕಾಡನ್ನು ತೆಗೆದು ಅಲ್ಲಿ ರಬ್ಬರ್ ಗಿಡಗಳನ್ನು ಹಾಕಬಹುದು ಎಂದು ತಜ್ಞರು ಸಲಹೆ ಕೊಟ್ಟರು. ಈಗ ಶಾಲೆಗಳಿಗೆ ಬೇಸಿಗೆ ರಜಾ ಬಂದಿತ್ತಾದುದರಿಂದ ಗೋಪಾಲ ಬಿಡುವಾಗಿದ್ದ. 'ಶುಭಸ್ಯಂ ಶೀಘ್ರಂ' ಎಂದುಕೊಂಡ. ಮಾರನೆಯ ದಿನದಿಂದಲೇ ಮರಕತ್ತರಿಸುವ ಯಂತ್ರಗಳೂ, ಆಳುಗಳೂ ಗುಂಡಿಗದ್ದೆಯ ಕಾಡಲ್ಲಿ ಜಮಾಯಿಸತೊಡಗಿದರು. ಹರಿಯೂ ಅಪ್ಪನೊಟ್ಟಿಗೆ ಕಾಡಲ್ಲಿ ಅಡ್ಡಾಡ್ತಾ ಇದ್ದ. ನಡು ಮಧ್ಯಾಹ್ನದ ಹೊತ್ತು.... 
                                                                                                                                 ಇನ್ನು ನಾಳೆ.....            

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ