ಮಂಗಳವಾರ, ಅಕ್ಟೋಬರ್ 21, 2014

ಒಂದೇ ಬಳ್ಳಿಯ ಹೂಗಳು --5

ಪ್ರಿಯ ಓದುಗ ಮಿತ್ರರೇ,
                                ನಿನ್ನೆ ನಮ್ಮೂರಲ್ಲಿ ಕಟ್ಟಡಗಳೇ ಅದುರಿ ಬೀಳುವಂತಹ ಗುಡುಗು....  ಸಿಡಿಲು....ಮಳೆ....,ವಿದ್ಯುತ್ ಉಪಕರಣಗಳನ್ನು ಉಪಯೋಗಿಸುವ ಮಾತು ದೂರವೆ ಉಳಿಯಿತು. ಸೋ..., ನಿನ್ನೆಯ ಕಂತಿನ ಕಥೆ ಪ್ರಕಟಿಸಲಾಗಿಲ್ಲ. ಕ್ಷಮಿಸಿ. ಇವತ್ತು ಓದಿ...

ಕಾಸರ್ಕನ ಮರದ ನೆರಳಲ್ಲಿ ನಿಂತು ಕೆಲಸದ ಮೇಲ್ತನಿಕೆಯನ್ನು ಮಾಡುತ್ತಿದ್ದ ಗೋಪಾಲ ಇದ್ದಕ್ಕಿದ್ದಂತೆ ಎದೆಯನ್ನು ಒತ್ತಿ ಹಿಡಿದು, "ಹರಿ..,ಎನಗೆ ಯಾಕೋ ಒಂಥರಾ ಅವುತ್ತಾ ಇದ್ದು..., ಕೆಲಸ ನಿಲ್ಸುವದು ಬೇಡ...,ನೀನು ಇಲ್ಲೇ ಇರು.... ಆನು ಮನೆಗೆ ಹೋ....ವು.... ತ್ತೆ..."ಎನ್ನುತ್ತಲೇ ಅಲ್ಲೇ ಕುಸಿದ ಅಪ್ಪನನ್ನು ನೋಡಿ ಹರಿಗೆ ಒಂದು ಕ್ಷಣ ಕೈ ಕಾಲೇ ಆಡದ ಹಾಗಾಯ್ತು. ಆದರೆ ದೈರ್ಯಗೆಡುವ ಹೊತ್ತಲ್ಲ ಅದು,ಗಟ್ಟಿ ಧ್ವನಿಯಲ್ಲಿ ಆಳುಗಳನ್ನು ಕರೆದ. ಆದರೆ ಯಂತ್ರಗಳ ಶಬ್ದಕ್ಕೆ ಇವನ ಕೂಗು ಕೇಳಿಸಿದರೆ ತಾನೇ? ಅಪ್ಪನನ್ನು ಮೆಲ್ಲನೆ ಮರದ ಕಾಂಡಕ್ಕೆ ಒರಗಿಸಿ ಕುಳ್ಳಿರಿಸಿ ಆಳುಗಳೆಡೆಗೆ ಓಡಿದ. ಹರಿ ಧಾವಿಸಿ ಬರುತ್ತಿರುವುದನ್ನು ಕಂಡ ಆಳುಗಳ ಲಕ್ಷ್ಯ ಇತ್ತ ಹರಿಯಿತು. ಕೆಲಸ ಅರ್ಧಕ್ಕೇ ನಿಂತಿತು. ಎಲ್ಲರೂ ಸೇರಿ ಗೋಪಾಲನನ್ನು ಹೊತ್ತುಕೊಂಡೇ ಮನೆಗೆ ತಂದರು. ಅಮ್ಮನಿಗೆ ಸೂಕ್ಷ್ಮವಾಗಿ ವಿಷಯ ತಿಳಿಸಿ ದೈರ್ಯಗೆಡಬಾರದೆಂದು ಪರಿಪರಿಯಾಗಿ ಹೇಳಿದ. ಜೇಬಿಗೆ ಒಂದಷ್ಟು ದುಡ್ಡನ್ನು ಇಳಿಸಿಕೊಂಡು ಗೋಪಾಲನನ್ನು ಜೀಪಲ್ಲಿ ಕೂರಿಸಿದ. ಒಬ್ಬ ಆಳನ್ನೂ ಜೊತೆಗೆ ಬರುವಂತೆ ಹೇಳಿದ. ಗಾಯತ್ರಿ ಭೀತಳಾಗಿದ್ದರೂ ಅಣ್ಣನೊಂದಿಗೆ ಹೊರಟೇಬಿಟ್ಟಳು. ಜೀಪು ಮಂಗಳೂರಿನ ಕಡೆಗೆ ದೌಡಾಯಿಸಿತು. ದೊಡ್ಡಾಸ್ಪತ್ರೆಯಲ್ಲಿ ಹೃದ್ರೋಗ ತಜ್ಞರು ಗೋಪಾಲನನ್ನು ಪರೀಕ್ಷಿಸಿ ತುರ್ತಾಗಿ ಶಸ್ತ್ರಚಿಕಿತ್ಸೆ ಆಗಬೇಕೆಂದರು. ಹೃದಯದ ಶಸ್ತ್ರ ಚಿಕಿತ್ಸೆ ಎಂದರೆ ಮಕ್ಕಳಾಟವೇ? ಅಪ್ಪನ ಜಿವಕ್ಕೀಗ ಒಂದೊಂದು ಕ್ಷಣವೂ ಅತ್ಯಮೂಲ್ಯ ಎಂಬುದು ಹರಿಗೆ ಗೊತ್ತಾಗಿತ್ತು. ಎಲ್ಲಾ ಅಳುಕು, ಅನುಮಾನಗಳನ್ನು ಬದಿಗೊತ್ತಿ ಆಸ್ಪತ್ರೆಯ ಶಿಷ್ಟಾಚಾರಗಳೆಲ್ಲವನ್ನೂ ಕ್ಷಣಾರ್ಧದಲ್ಲಿ ಮುಗಿಸಿ ಅಪ್ಪನನ್ನು ಶಸ್ತ್ರ ಚಿಕಿತ್ಸಾ ವಿಭಾಗಕ್ಕೆ ಕಳುಹಿಸಿ ಕೊಟ್ಟ. ಮೂಲೆಯಲ್ಲಿ ದಿಕ್ಕೆಟ್ಟು ನಿಂತಿದ್ದ ಗಾಯತ್ರಿಯನ್ನುಕರೆದು ಸಮಾಧಾನಿಸಿ ಬೆಂಗಳೂರಲ್ಲಿರುವ ಸೋದರಮಾವ ಡಾ. ಕೃಷ್ಣಮೂರ್ತಿಗೆ ಫೋನಲ್ಲಿ(ಓದುಗರೇ..,ಒಂದು ವಿಷಯ ಗಮನಿಸಿ,ಆಗಿನ್ನೂ ಮೊಬೈಲ್ ಸರ್ವಾಂತರ್ಯಾಮಿ ಆಗಿರಲಿಲ್ಲ) ವಿಷಯ ತಿಳಿಸಲು ಹೇಳಿದ. ಹಾಗೆಯೇ ಅಮ್ಮನಿಗೂ ಇಲ್ಲಿನ ಪರಿಸ್ಥಿತಿ ವಿವರಿಸಿ ಎದೆಗುಂದದಿರುವಂತಿರಲು ಹೇಳಬೇಕೆಂಬ ಜವಾಬ್ದಾರಿಯನ್ನೂ ತಂಗಿಗೆ ಒಪ್ಪಿಸಿ ಬ್ಲಡ್ ಬ್ಯಾಂಕಿನೆಡೆಗೆ ಧಾವಿಸಿದ.

ಗೋಪಾಲ ಲಲಿತೆಯರ ದಾಂಪತ್ಯವೆಂದರೆ ಒಂದೇ ಉಸಿರು ಎರಡು ಜೀವ ಎನ್ನುವಂತಿತ್ತು. ಆಗಸದಲ್ಲಿ ವಿಹರಿಸಿಕೊಂಡಿದ್ದ ಹಕ್ಕಿ ಅಚಾನಕ್ಕಾಗಿ ಗರಿಮುರಿದು ಧರಾಶಾಯಿಯಾದಂತಾಗಿತ್ತು ಲಲಿತೆಯ ಈಗಿನ ಸ್ಥಿತಿ. ಕಣ್ಣು ಕಟ್ಟಿ ಕಾಡಿಗೆ ಬಿಡಲ್ಪಟ್ಟವಳಂತೆ ನಿಂತಲ್ಲೇ  ಮುಗ್ಗುರಿಸಿದಳು, ನಡೆದಾಡಲಾರದೆ ಎಡತಾಕಿದಳು.ಎದುರಿನ ದೃಶ್ಯ ಕಾಣಿಸದಷ್ಟು ಕಣ್ಣೀರ ಪರದೆ ದಟ್ಟವಾಯ್ತು. ಆಕೆಯೊಂದಿಗೆ ನಿಂತ ಮನೆಕೆಲಸದ ಚಂದ್ರನಿಗಂತೂ ಅಕ್ಕನ ಸ್ಥಿತಿ ನೋಡಿ ಕರುಳು ಕಿವುಚಿದಂತಾಯಿತು.
"... ಅಕ್ಕೇರೇ ಬೂಲ್ಪೊಡ್ಚಿ..... ದೆಬೇರ್ ಉಲ್ಲೇರ್... ಮಾಂತ ಸರಿ ಆವು.... ಅಣ್ಣೆರ್ ಯೆರೆಕ್ಲಾ ಉಪದ್ರ ಮಾಲ್ತಿಜ್ಜಿ... ಅಂಚ ಉತ್ನಾಕ್ಲೆನ ಕೈ ಬುಡಾಯೆರ್ ದೆಬೇರ್..."(ಅಕ್ಕಾ, ಅಳಬೇಡಿ, ದೇವರು ಇದ್ದಾನೆ ಎಲ್ಲಾ ಸರಿಹೋಗುತ್ತೆ...,ಆಣ್ಣ ಯಾರಿಗೂ ಕೇಡು ಬಗೆದಿಲ್ಲ..., ಅಂತವರನ್ನು ದೇವರು ಕಾಪಾಡುತ್ತಾನೆ) ಎಂದೆಲ್ಲಾ ತನಗೆ ತೋಚಿದಂತೆ ಸಂತೈಸಲು ಪ್ರಯತ್ನಿಸಿದ.
ಇತ್ತ ....,
ಎಷ್ಟೋ ಹೊತ್ತಿನ ನಂತರ ಆಪರೇಷನ್ ಥಿಯೇಟರಿನಿಂದ ಗೋಪಾಲನನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಿದಾಗ ಹರಿ, ಗಾಯತ್ರಿ ಧೀರ್ಘವಾದ ನಿಟ್ಟುಸಿರೊಂದನ್ನು ಹೊರಚೆಲ್ಲಿದರು. ವೈದ್ಯರು ಬರೆದುಕೊಟ್ಟ ಔಷಧಿಗಳನ್ನು ಕ್ಷಣಮಾತ್ರದಲ್ಲಿ ಒದಗಿಸಿಕೊಟ್ಟ ಹರಿ ಗಾಯತ್ರಿಯನ್ನು ಆಸ್ಪತ್ರೆಯಲ್ಲೇ ಇರಲು ಹೇಳಿದ. ಅಮ್ಮ ಮನೆಯಲ್ಲಿ ಎಷ್ಟು ಚಡಪಡಿಸುತ್ತಿರುತ್ತಾಳೆ ಎಂಬುದರ ಅರಿವು ಅವನಿಗಿತ್ತಾದುದರಿಂದ ಆಕೆಯನ್ನೂಆದಷ್ಟು ಬೇಗ ಇಲ್ಲಿಗೆ ಕರೆತರಬೇಕಿತ್ತು. ಆಳಿನೊಂದಿಗೆ ಮನೆಗೆ ವಾಪಾಸಾದ ಹರಿ ನೇರ ದೇವರ ಕೋಣೆಗೆ ಹೋದ. ಲಲಿತೆ ಅಲ್ಲೇ ಇರುತ್ತಾಳೆ ಎಂಬುದು ಅವನಿಗೆ ನಿಖರವಾಗಿ ಗೊತ್ತಿತ್ತು. ಹಚ್ಚಿಟ್ಟ ದೀಪದೆದುರು ಮರಗಟ್ಟಿದಂತೆ ಕುಳಿತ ಆಕೆಯ ಬಳಿಗೆ ಹೋದ ಹರಿ ಆಕೆ ಗಾಬರಿಯಾಗದಂತೆ ಮೆಲ್ಲನೆ ಆಕೆಯೆಡೆಗೆ ಬಾಗಿ ಮೃದುವಾಗಿ ಹಿಡಿದೆತ್ತಿ ನಿಲ್ಲಿಸಿದ.
"ಅಮ್ಮಾ..., ನೀನಿಷ್ಟು ಹೆದರಿಕೊಂಬ ಹಾಂಗೆ ಎಂತದೂ ಆಗಿಲ್ಲ...,ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಕ್ಕಿತ್ತು. ಹಾಂಗೆ ಅಪ್ಪ ಚೆನ್ನಾಗಿಯೇ ಇದ್ದವು. ಕೆಲವು ಕಾಲ ರೆಸ್ಟ್ ಬೇಕಕ್ಕು ಅಷ್ಟೇ..., ಬಾ..., ಮುಖ ಎಲ್ಲ ತೊಳೆದು ಕಲಸಿ ಹೋದ ಕುಂಕುಮ ತೆಗೆದು ಬೇರೆ ಹಾಕಿಗೋ ..., ಸೀರೆ ಬೇಕಿದ್ರೆ ಬದಲಾಯಿಸಿಗೋ... ಈಗಲೇ ಅಪ್ಪ ಇದ್ದಲ್ಲಿಗೆ ಹೋಪ ......, ಆನು ಜೀಪಿಲ್ಲಿರ್ತೆ... ಬೇಗ ಬಾ..." ಎನ್ನುತ್ತಾ ಪುನ್ಹ ಹೊರಡಲು ಅಣಿಯಾದ......
                                                                      ನಾಳೆ ನೋಡಿ....        

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ