ಗುರುವಾರ, ಅಕ್ಟೋಬರ್ 23, 2014

ಒಂದೇ ಬಳ್ಳಿಯ ಹೂಗಳು --7

ಹೇಳ್ತಾ ಹೇಳ್ತಾ ಗಂಟಲುಬ್ಬಿ ಬಂದು ಮಾತು ತಡೆದರೂ ಮುಂದುವರಿಯುತ್ತಲೇ ಇದ್ದ ಹರಿಯ ಮಾತುಗಳಲ್ಲಿ ಯಮ ಭಾರದ ಒಳಗಿನ ಒತ್ತಡವನ್ನು ಹೊರ ಚೆಲ್ಲಿ ಹಗುರಾಗಿ ಬಿಡಬೇಕೆಂಬ ಧಾವಂತವಿತ್ತು,
" ಮಾವಾ..., ಅಮ್ಮ ತನ್ನ ಜೀವನಲ್ಲಿ ಇಂತಹ ಘಟನೆಯ ಖಂಡಿತಕ್ಕೂ ನಿರೀಕ್ಷೆ ಮಾಡಿದ್ದಿಲ್ಲೆ. ಈ ಆಘಾತವ ತಾಳಿಗೊಂಡು ಅಮ್ಮ ಹೀಂಗೇ ಆರೋಗ್ಯಲ್ಲಿ ಇರೇಕು ಹೇಳಿ ಆದ್ರೆ ಇನ್ನು ಮುಂದೆ ಅವಳೊಟ್ಟಿಗೆ ನಾವಿಬ್ಬರಲ್ಲಿ ಯಾರಾದರೂ ಒಬ್ಬರು ಇರಲೇಬೇಕು ....., ಅದೂ ಅಲ್ಲದ್ದೆ ಕೃಷಿಕನ ಕಷ್ಟ ಎಂತ ಹೇಳಿ ಈ ಕೆಲವು ದಿನಗಳಲ್ಲಿ ಎನಗೆ ಸರಿಯಾಗಿ ಗೊಂತಾತು. ಎನಗೆ ಮತ್ತು ಗಾತಿ ಇಬ್ರಿಂಗೂ ಅತ್ಯುತ್ತಮ ಶಿಕ್ಷಣ ಕೊಡ್ಸೇಕು ಹೇಳುವ ಒಂದೇ ಉದ್ದೇಶಂದ ಅಪ್ಪ ನಮ್ಮನ್ನು ಮಂಗಳೂರಿಲ್ಲಿ ಓದ್ಸಿದ್ದದು. ಅಲ್ಲಿನ ದುಬಾರಿ ಖರ್ಚುಗಳ ಸರಿದೂಗ್ಸಲೆ ಅಮ್ಮ, ಅಪ್ಪ ಎಷ್ಟು ಕಷ್ಟ ಪಟ್ಟಿರಬಹುದು ಹೇಳಿ ಈಗ ಎನಗೆ ಅಂದಾಜು ಆವುತ್ತು. ಛೆ..., ಅದು ಸಾಲದ್ದುದಕ್ಕೆ ಆನು ಹುಂಬನ ಹಾಂಗೆ ಒಂದು ವರ್ಷ ವೇಸ್ಟ್ ಮಾಡಿ ಪುನ್ಹ ಕೋಚಿಂಗ್ ಕ್ಲಾಸಿಂಗೆ ಸೇರಿ ಸಾವಿರಗಟ್ಲೆ ದುಡ್ಡಿನ ಸುಮ್ಮನೆ ಪೋಲು ಮಾಡಿಬಿಟ್ಟೆ...., ಆದರೂ ಅಪ್ಪ ಒಂದೇ ಒಂದು ಅಡ್ಡ ಮಾತು ಆಡದ್ದೆ ಎನ್ನ ಪ್ರೋತ್ಸಾಹಿಸಿದವು. ಅಪ್ಪನ ಇಂದಿನ ಸ್ಥಿತಿಲಿ ಇನ್ನೂ ಇನ್ನೂ ಅವಂಗೆ ಹೊರೆ ಆಗಲು ಆನು ಬಯಸುತ್ತಿಲ್ಲೆ ಮಾವಾ..., ಆದರೆ ಗಾಯತ್ರಿಯ ಮೆಡಿಕಲಿಂಗೆ ಕಳ್ಸಲೇಬೇಕು. ಅದಕ್ಕೆ ಆ ಆಸೆ ಹುಟ್ಟಿನಿಂದಲೇ ಬಂದದ್ದು ಹೇಳುವಷ್ಟಿದ್ದು. ಈಗೆಲ್ಲಾ ಎಜುಕೇಶನ್ ಲೋನ್ ಸಿಕ್ಕುತ್ತಲ್ದಾ ಮಾವಾ...? ಅದಕ್ಕೆ ಆಗುವಷ್ಟು ಮಾತ್ರ ಲೋನ್ ತೆಗೆದ್ರೆ ಅದರ ತೀರಿಸುವಷ್ಟು ನಮಗೆ ಹುಟ್ಟಾವಳಿ ಇದ್ದು. ಅದಕ್ಕೆ ಎಷ್ಟು ಕಲಿಯೇಕು ಹೇಳಿ ಆಸೆ ಇದ್ದೋ ಅಷ್ಟು ಆನು ಕಲ್ಸುತ್ತೆ. ಬಾಹ್ಯ ರೂಪಕ್ಕೇ ಜಾಸ್ತಿ ಇಂಪಾರ್ಟೆನ್ಸ್ ಕೊಡುವ ಈ ಸಮಾಜಲ್ಲಿ ಗಾತಿ ತಲೆ ಎತ್ತಿ ಹೆಮ್ಮೆಂದ ಮುನ್ನಡೆಯೇಕಾದ್ರೆ ಹೆಚ್ಚಿನ ವಿದ್ಯೆ, ಆರ್ಥಿಕ ಸ್ವಾತಂತ್ರ್ಯ ಎರಡೂ ಬಹಳ ಅಗತ್ಯ ಇದ್ದು.... ಸರಿಯಲ್ದಾ ಮಾವಾ...? ಎಂತ ನಿಂಗೋ ಮಾತೇ ಆಡ್ತಿಲ್ಲೆ...?"
ಈ ಕೆಲವೇ ದಿನಗಳಲ್ಲಿ ಹರಿಯಲ್ಲಾದ ವಿಸ್ಮಯಕಾರಿ ಬದಲಾವಣೆ, ಆತನ ಮಾತುಗಳಲ್ಲಿ ಎದ್ದು ಕಾಣುವ ವಯಸ್ಸಿಗೆ ಮೀರಿದ ಪಕ್ವತೆ, ಇಡೀ ಕುಟುಂಬದ ಜವಾಬ್ದಾರಿ ಇನ್ನು ಮುಂದೆ ತನ್ನದೇ ಎನ್ನುವಂತಹ ಪ್ರೌಢ  ಸ್ಪಷ್ಟತೆ,ಸ್ವಾಭಿಮಾನ ....ಇವುಗಳನ್ನೆಲ್ಲಾ  ನೋಡಿ ಮೂರ್ತಿಗೆ ಮಾತು ಮರೆತು ಹೋದುದರಲ್ಲಿ ಆಶ್ಚರ್ಯವೇನಿದೆ...?ಮನೆಯಲ್ಲಿ ದೊರೆತ ಸಂಸ್ಕಾರ ಮಕ್ಕಳನ್ನು ಯಾವ ರೀತಿ ತಯಾರು ಮಾಡುತ್ತದೆ ಎಂಬುದನ್ನು ಅವನಿಂದು ಕಣ್ಣಾರೆ ನೋಡಿದ ಸಂತಸದಲ್ಲಿ ಅಳಿಯನನ್ನು ಬಾಚಿ ತಬ್ಬಿಕೊಂಡ. ಅಪ್ರಯತ್ನವಾಗಿ ಅವನ ನಾಲಿಗೆ ಗುಣುಗುಣಿಸಿತು,
"ಅಕ್ಕ..,ಭಾವ.., ಯೂ ಆರ್ ರಿಯಲಿ ಗ್ರೇಟ್..." ಹೆಮ್ಮೆಯಿಂದ ಅಳಿಯನ ಬೆನ್ನು ತಟ್ಟುತ್ತಾ ಹೇಳಿದ,
"ಹರಿ ಮುಂದೆ ಯಾವಾಗಲಾದ್ರೂ ನಿನ್ನ ಡಿಸಿಶನ್ ಬದಲಾಗಿ ಮೆಡಿಕಲ್ ಮಾಡ್ಬೇಕು ಅಂತನ್ನಿಸಿದ್ರೆ ನಾನು ನಿನ್ಗೆ ಎಂತ ಹೆಲ್ಪ್ ಬೇಕಿದ್ರೂ ಮಾಡ್ಲೆ ತಯಾರು.. ಎಂದಿಗೂ ಆನು ನಿನ್ನ ವೆಲ್ವಿಶರ್ ಹೇಳುವದ್ರ ಮರಿಯೇಡ.."
"ಥ್ಯಾಂಕ್ಯೂ ಸೋ ಮಚ್ ಮಾವಾ...., ಎಂಗೊಗೆ ನೀವಲ್ಲದ್ದೆ ಬೇರೆ ಯಾರು ಇದ್ದವು..?" ತುಂಬಿ ಬಂದ ಕಣ್ಣೀರನ್ನು ತೊಡೆದು ಹಾಕಿ ಮಾವನೊಂದಿಗೆ ಮನೆಗೆ ಮರಳಿದ.ಅವನಿಗೆ ಮಾವ ತನ್ನ ಬೆನ್ನಿಗೆ ನಿಂತದ್ದು ಸಮಾಧಾನವಾಗಿತ್ತು. ಇನ್ನು ಉಳಿದವರನ್ನು ಒಪ್ಪಿಸುವ ಗುರುತರ ಜವಾಬ್ದಾರಿ ಇತ್ತು. 
ಗೋಪಾಲ ಆಸ್ಪತ್ರೆಯಿಂದ ಬಿಡುಗಡೆ ಹೊಂದಿ ಮನೆಗೆ ಬಂದ ಮೇಲೂ ಒಂದೆರಡು ದಿನಗಳ ಕಾಲ ಅಕ್ಕನ ಮನೆಯಲ್ಲೇ ಉಳಿದಿದ್ದ ಮೂರ್ತಿ ನಾಳೆ ಹೊರಡುವ ಸೂಚನೆಯಿತ್ತಾಗ ಲಲಿತೆ ಆತನ ಕೈಯ್ಯನ್ನು ಹಿಡಿದುಕೊಂಡು ಭಾವುಕಳಾಗಿ ನುಡಿದಳು...,
"ಮೂರ್ತಿ ನೀನೊಬ್ಬ ಇಲ್ಲದಿರುತ್ತಿದ್ರೆ ನಮಗೆ ಯಾರಿಂಗೂ ಈ ಕಷ್ಟವ ತಡ್ಕೊಂಬ ತಾಕತ್ತೇ ಇರ್ತಿತಿಲ್ಲೆ... ನಿಂಗೋ ಇನ್ನೂ ಒಂದು ನಾಲ್ಕು ದಿನ ಇರ್ಬೋದಾಗಿತ್ತು... ಇನ್ನಾದ್ರೂ ಅಷ್ಟೇ ಆಗಾಗ ಬಂದು ಭಾವನ ನೋಡ್ತಾ ಇರೇಕು..." 
"ಛೆ... ಎಂತಕೆ ಅಕ್ಕಾ ಕಣ್ಣೀರು ಹಾಕುತ್ತೆ...? ಭಾವ ನೂರಕ್ಕೆ ನೂರು ಸರಿ ಹೋಯಿದವು. ಸುಮ್ಮನೆ ಎಂತೆಂತದೋ ಚಿಂತೆ ತಲೆಗೆ ಹಾಕೇಡ...,ನೋಡು ನಾಳೆ ಬೆಳಗ್ಗೆ ಎಂಗೋ ವಾಪಸಾಗಲೇಬೇಕು. ಅಲ್ಲಿ ಮಕ್ಕಳು ಮಾತ್ರ ಇಪ್ಪದಲ್ದಾ...?ಮನೆಯ ಸ್ಥಿತಿ ಗತಿ ನೋಡೇಕು.... ಹಾಂಗೆಯೇ  ಎನ್ನ ರೋಗಿಗಳ ಚಿಂತೆಯೂ ಮಾಡೇಕಲ್ದಾ...?" ಮೂರ್ತಿ ಅನುನಯದಿಂದ ನುಡಿದಾಗ ಅಲ್ಲೇ  ಮಂಚದಲ್ಲಿ ಕೂತಿದ್ದ ಗೋಪಾಲ ಮೆಲ್ಲನೆ ಎದ್ದು ಬಂದು ಭಾವನ ಭುಜ ಬಳಸಿ ಹಿಡಿದು ಮೃದುವಾಗಿ ಹೇಳಿದ...,
"ಭಾವಾ..., ನಿನ್ನ ಉಪಕಾರವ ಈ ಜನ್ಮಲ್ಲಿ ತೀರ್ಸಲೆ ಸಾಧ್ಯ ಇಲ್ಲೆ..."  ಮೂರ್ತಿ ಭಾವನ ಮಾತುಗಳು ಪೂರ್ತಿಯಾಗುವ ಮೊದಲೇ ಹೇಳಿದ,
"ಓ..., ಇದೆಂತಹ ಮಾತು ಭಾವಾ...? ಉಪಕಾರ...., ತೀರಿಸುವುದು..., ಎಲ್ಲಾ ಆಮೇಲಾಗಲಿ... ಮೊದಲು ನಿಂಗೋ 'ಆನೊಬ್ಬ ರೋಗಿ' ಹೇಳುವ ಭಾವನೆ ಬಿಟ್ಟು ಬಿಡೇಕು.ಇನ್ನುನಿಧಾನವಾಗಿ ಹಗುರವಾದ ಒಂದೊಂದೇ ಕೆಲಸ ಮಾಡಲಕ್ಕು.
ಒಂದು ತಿಂಗಳು ಬಿಟ್ಟು ನಾವು ಪುನ್ಹ ಬರ್ತೇವೆ. ಆಗ ನೀವಿಬ್ರೂ ಬೆಂಗಳೂರಿಂಗೆ ಬರೇಕು. ನಿಂಗೊಗೂ ಒಂದು ಚೇಂಜ್ ಬೇಕು ಭಾವಾ... " ಮಾತನಾಡ್ತಾ ಹೆಂಡತಿಯನ್ನು ಉದ್ದೇಶಿಸಿ ಹೇಳಿದ,
"ಸುಮತಿ ಪ್ಯಾಕಿಂಗ್ ಶುರು ಮಾಡಲಕ್ಕು...ನಾಳೆ ಹೊರಡುವಾ...."
"ಸರಿ...,ಅತ್ತಿಗೆ ನೀವು ಯಾವಾಗ ನಮ್ಮಲ್ಲಿಗೆ ಬಪ್ಪದು? ಅಲ್ಲಿ ಒಂದೆರಡು ತಿಂಗಳಾದ್ರೂ ನಿಲ್ಲಲೇಬೇಕು..." ಸುಮತಿ ಆತ್ಮೀಯವಾಗಿ ಹೇಳಿದಾಗ ಲಲಿತೆ  ಸಪ್ಪೆ ಮುಖದಿಂದ ಬರಿದೇ ತಲೆ ಆಡಿಸಿದಳು. 
                                                                                                ಮುಂದುವರಿಕೆ.... ನಾಳೆ...   
     

           

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ