ಹರಿ ಮೂರ್ತಿಯ ಕಾರಿಗೆ ರಸಬಾಳೆ ಗೊನೆ, ಗೆಂದಾಳಿ ಎಳನೀರ ಗೊನೆ, ಬೀರುಂಡ ಹಣ್ಣುಗಳು, ತಾಜಾ ಗೇರುಬೀಜ ಇತ್ಯಾದಿಗಳನ್ನು ತುಂಬಿಸಿದರೆ ಗಾಯತ್ರಿ ಹಲಸಿನ ಹಪ್ಪಳ, ಮಾಂಬಳ, ಹೊಸದಾಗಿ ಹಾಕಿದ ಮಾವಿನಮಿಡಿ ಉಪ್ಪಿನಕಾಯಿ ಡಬ್ಬಗಳನ್ನು ತುಂಬಿಸಿದಳು. ಎಲ್ಲರ ಮನಸ್ಸಿನ ಭಾರವನ್ನು ಹಗುರಗೊಳಿಸುವ ಸಲುವಾಗಿ ಮೂರ್ತಿ ವಿನೋದವಾಗಿ ನುಡಿದ,
"ಒಹ್... ಇದೆಷ್ಟು ಸಾಮಾನುಗಳ ತುಂಬುಸುವದು ಮಕ್ಕಳೇ...? ಇನ್ನು ಒಂದೆರಡು ತಿಂಗಳಿಗೆ ನಾವು ಪ್ರಾವಿಶನ್ ಸ್ಟೋರಿಗೆ ಹೋಗುವ ಅಗತ್ಯ ಇಲ್ಲೆ.... ಅಲ್ದಾ ಸುಮತಿ...?"
ನೆಂಟರಿಷ್ಟರನ್ನು ವಿಶೇಷವಾಗಿ ಹಚ್ಚಿಕೊಳ್ಳದ ಗಾಯತ್ರಿಯೂ ಈ ಕೆಲವೇ ದಿನಗಳಲ್ಲಿ ಅತ್ತೆಯನ್ನು ಬಹಳವಾಗಿ ಇಷ್ಟಪಟ್ಟಿದ್ದಳು. ಸುಮತಿಯ ವಿಶಾಲ ಮನಸ್ಸು, ಸರಳ ನಡೆನುಡಿ ಗಾಯತ್ರಿಯನ್ನು ಇನ್ನಿಲ್ಲದಂತೆ ಆಕರ್ಷಿಸಿತ್ತು. ಅತ್ತೆ ಹೋದಮೇಲೆ ಆಕೆಗೆ ಮನೆ, ಮನಸ್ಸು ಎರಡೂ ಖಾಲಿಯಾದಂತೆನಿಸಿತು. ಹೃದಯದ ಚಿಕಿತ್ಸೆ ಮುಗಿಸಿ ಬಂದಮೇಲೆ ಗೋಪಾಲ ತನ್ನ ದಿನಚರಿಯನ್ನು ಪೂರ್ತಿಯಾಗಿ ಬದಲಾಯಿಸಿಕೊಂಡಿದ್ದ. ಬೆಳಗ್ಗೆದ್ದು ಯೋಗ, ಧ್ಯಾನ.... ಸಂಜೆಯ ಹೊತ್ತು ವಾಯು ವಿಹಾರ, ಅಧ್ಯಾತ್ಮ ಪುಸ್ತಕಗಳ ಓದುವಿಕೆ ಇತ್ಯಾದಿಗಳನ್ನು ಮಾಡುತ್ತಿದ್ದ. ಆಗ ಲಲಿತೆಯೂ ಆತನಿಗೆ ಜೊತೆಯಾಗುತ್ತಿದ್ದಳು. ಒಂದು ದಿನ ಹೀಗೇ ಗದ್ದೆಯ ಬದುವಿನಲ್ಲಿ ಅವರಿಬ್ಬರೂ ಅಡ್ಡಾಡ್ತಾ ಇರುವಾಗ ಇದುವರೆಗೂ ತನ್ನ ಮನಸ್ಸನ್ನು ಕೊರೆಯುತ್ತಿದ್ದ ವಿಚಾರವೊಂದನ್ನು ಗಂಡನೊಡನೆ ಹಂಚಿಕೊಳ್ಳಬೇಕೆಂಬ ಉದ್ದೇಶದಿಂದ ಕೇಳಿದಳು,
"ಇನ್ನು ಮೇಲೆ ನಿಂಗೊಗೆ ತೋಟದ ಉಸ್ತುವಾರಿ, ಶಾಲೆ ಕೆಲಸ ಎರಡನ್ನೂ ನಿಭಾಯಿಸಲೆ ಸಾಧ್ಯ ಆದೀತಾ..? ಸಾಲದ್ದಕ್ಕೆ ರಬ್ಬರು ತೋಟದ ಕೆಲ್ಸ ಅರ್ಧಲ್ಲೇ ನಿಂತು ಹೋತಲ್ದಾ...? ನಾಡಿದ್ದು ಜುಲೈ ಕಳೆದ್ರೆ ಮಕ್ಕಳಿಬ್ರೂ ಓದೋಕೆ ಹೇಳಿ ದೂರ ಹೋಗ್ಬಿಟ್ರೆ ನಮಗ್ಯಾರು ದಿಕ್ಕು...? ಅವರ ವಿದ್ಯಾಭ್ಯಾಸಕ್ಕೂ ದುಡ್ಡು ಹೊಂದ್ಸೇಕು ತಾನೇ...?ಮೊನ್ನೆ ಆಸ್ಪತ್ರೆಯ ಖರ್ಚೇ ಲಕ್ಷಗಟ್ಲೆ ಅಯಿದೇನೊ...? ಹರಿಯ ಬಳಿ ಕೇಳಿದ್ರೆ ಸುಮ್ಮನೆ ನಕ್ಕು ವಿಷಯವ ಹಾರ್ಸಿ ಬಿಡ್ತ.... " ಹೆಂಡತಿಯ ಮಾತನ್ನು ಅರ್ಧದಲ್ಲೇ ತಡೆದ ಗೋಪಾಲ ಸಮಾಧಾನ ಚಿತ್ತದಿಂದಲೇ ಹೇಳಿದ,
"ಲಲ್ಲೀ...., ದೂರದ ವಿಷಯದ ಬಗ್ಗೆ ಅನಗತ್ಯ ಚಿಂತೆ ಎಂತಕೆ ಮಾಡ್ತಿ...?ನೋಡು.., ಮೊನ್ನೆ ಎನಗೆ ಎದೆನೋವು ಬಂತು... ಅದರ ನಿರೀಕ್ಷೆಯಾದ್ರೂ ನಮಗೆ ಇತ್ತಾ...? ಆ ಸಮಯಕ್ಕೆ ನಮ್ಮೊಟ್ಟಿಗೆ ಹರಿ ಇದ್ದದ್ದಕ್ಕೆ ಎಲ್ಲವೂ ಸುಸೂತ್ರವಾಗಿ ಆತು. ಅದೇ ಘಟನೆ ಮಕ್ಕಳು ಕಾಲೆಜಿಲ್ಲಿ ಇರುವಾಗ ಆಗಿರ್ತಿದ್ರೆ ನಾನಿಂದು ನಿನ್ನ ಎದುರು ಇರ್ತಿದ್ದೇನೂ ಇಲ್ವೋ..... " ಗಾಬರಿಗೊಂಡ ಲಲಿತೆ ಗಂಡನ ಬಾಯಿಗೆ ಕೈ ಅಡ್ಡ ಇಟ್ಟು ಪಿಸುಗುಟ್ಟಿದಂತೆ ಹೇಳಿದಳು,
"ರಾಮ.... ರಾಮಾ.... ಅಶುಭ ಮಾತ್ನಾಡೇಡಿ...." ಗೋಪಾಲ ಪತ್ನಿಯ ಕೈಯ್ಯನ್ನು ತನ್ನ ಕೈಯ್ಯಲ್ಲಿ ತೆಗೆದುಕೊಂಡು ಸಹಜವಾಗಿಯೇ ಹೇಳಿದ,
"ಲಲ್ಲೀ... ಇದ್ರಲ್ಲಿ ಶುಭ, ಅಶುಭದ ಪ್ರಶ್ನೆಯೇ ಇಲ್ಲೆ.ಸತ್ಯ ಹೇಳಿದೆ ಅಷ್ಟೇ.... ಜೀವನ ಹೇಳಿದ್ರೆ ಬಂದದ್ರ ಬಂದ ಹಾಂಗೇ ಎದುರ್ಸಿಗೊಂಡು ಆ ಮೇಲಿನವನ ದಯೆಯೊಂದು ನಮ್ಮ ಮೇಲೆ ಸದಾ ಇರಲಿ ಎಂದು ಬೇಡಿಕೊಂಡರೆ ಸಾಕು. ಉಳಿದದ್ದೆಲ್ಲಾ ತನ್ನಿಂದ ತಾನೇ ಸರಿಯಾಗ್ತಾ ಹೊವುತ್ತು..."
"ಏನೋಪ್ಪ... ನಿಂಗಳ ದೈರ್ಯ ಎನಗಿಲ್ಲೆ..." ಕಂಗೆಟ್ಟ ಮಡದಿಯನ್ನು ಸಂತೈಸುವಂತೆ ಆಕೆಯ ಭುಜ ಬಳಸಿ ಹಿಡಿದ ಗೋಪಾಲ ಮನೆಯ ಕಡೆ ಹೆಜ್ಜೆ ಹಾಕಿದ.
ದ್ವಿತೀಯ ಪೀ.ಯೂ.ಸಿ. ಯ ಫಾಲಿತಾಂಶ ಹೊರ ಬಿತ್ತು. ಗಾಯತ್ರಿ ರಾಜ್ಯಕ್ಕೇ ಮೊದಲಿಗಳಾಗಿ ತೇರ್ಗಡೆಯಾಗಿದ್ದಳು. ಕೆಲವೇ ದಿನಗಳಲ್ಲಿ ವೃತ್ತಿ ಶಿಕ್ಷಣ ಪ್ರವೇಶ ಪರೀಕ್ಷೆಯ ಫಾಲಿತಾಂಶವೂ ಬಂತು. ಗಾಯತ್ರಿ ರಾಜ್ಯಕ್ಕೇ ದ್ವಿತೀಯ ಸ್ಥಾನ ಪಡೆದಿದ್ದರೆ ಹರಿ ಅರುವತ್ತನಾಲ್ಕನೇ ಸ್ಥಾನ ಗಳಿಸಿದ್ದ. ಎಷ್ಟೋ ದಿನಗಳ ನಂತರ ಅವರ ಮನೆ ಸಂತಸದ ಗೂಡಾಯ್ತು, ಹರುಷದ ಹೊನಲಾಯ್ತು. ಮಕ್ಕಳಿಬ್ಬರ ಸಾಧನೆಯನ್ನು ನೋಡಿದ ಹೆತ್ತವರಿಗೆ ತಮ್ಮ ಜನ್ಮ ಸಾರ್ಥಕವೆನಿಸಿತ್ತು. ಲಲಿತೆಯಂತೂ ಮಕ್ಕಳಿಬ್ಬರನ್ನೂ ತಬ್ಬಿಕೊಂಡು ಅತ್ತೇಬಿಟ್ಟಳು. ಗೊಪಾಲನೂ ಹೃದಯ ತುಂಬಿ ಅವರನ್ನು ಅಭಿನಂದಿಸಿದ,
ಹರೀ... ನಿನ್ನ ಸಾಧನೆಗೆ ಮೆಚ್ಚಿದೆ... ಡಿಗ್ರಿಗೂ ಓದಿಗೊಂಡು ಇಷ್ಟೊಳ್ಳೆ ಸ್ಥಾನವನ್ನೂ ಪಡೆದದ್ದು ನಿಜಕ್ಕೂ ಗ್ರೇಟ್ ಮಗಾ...., ಗಾತೀ..., ಕಂಗ್ರಾಟ್ಸ್ ಮಗಳೇ...,ಇಡೀ ಸಮಾಜವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿ ತೋರ್ಸಿದೆ..., ನಿಮ್ಮಿಬ್ರನ್ನೂ ದೇವರು ಸದಾ ಹೀಂಗೇ ಇಟ್ಟಿರಲಿ...,ಲಲ್ಲೀ..., ಸಿಹಿ ಎಲ್ಲಿ...? ಇವತ್ತೊಂದು ದಿನ ನನ್ನ ಡಯಟ್ ನೆನಪಿಸೇಡ....ಪಾಯಸ ಮಾಡು... ಆಳುಗಳಿಗೆಲ್ಲಾ ಹಂಚು......., ಮಕ್ಕಳೇ..., ಮೊದಲು ದೇವರಿಂಗೆ ದೀಪ ಹಚ್ಚಿ ಕೈಮುಗಿದು ಬನ್ನಿ..." ಬಹುಶಃ ತನ್ನ ಆಪರೇಶನ್ ಆದ ನಂತರ ಗೋಪಾಲ ಮೊದಲ ಬಾರಿಗೆ ಅಷ್ಟು ದೀರ್ಘವಾಗಿ ಮಾತನಾಡಿದ್ದ.
ಲಲಿತೆ ಸಂಭ್ರಮದಿಂದ ಒಳಕ್ಕೋಡಿದಳು. ದೇವರ ಕೋಣೆಯಿಂದ ಹೊರಬರುತ್ತಾ ಹರಿ ನಾಟಕೀಯವಾಗಿ ತಂಗಿಯೆಡೆಗೆ
ಬಾಗಿ ಹೇಳಿದ,
"ಗಾತೀ..., ಅಭಿನಂದನೆಗಳು... ಹೃದಯಪೂರ್ವಕ ಅಭಿನಂದನೆಗಳು...,ತಾವೂ ಡಾ. ಮೇರಿ ಕ್ಯೂರಿ.... ಡಾ. ಆನಂದಿ ಗೋಪಾಲ್ ಮುಂತಾದವರ ಸಾಲಿಗೆ ಸೇರಬೇಕೆಂಬುದೇ ನಮ್ಮಿಚ್ಛೆ ... " ಅಣ್ಣನ ನಾಟಕೀಯ ನುಡಿಗಳಿಗೆ ತಂಗಿಯೂ ಅಷ್ಟೇ ನಾಟಕೀಯವಾಗಿ ಉತ್ತರಿಸಿದಳು,
"ಧನ್ಯವಾದಗಳು ಅಣ್ಣಾ ಸಾಹೆಬ್ರೇ..., ನಿಮಗೂ ಮನದುಂಬಿದ ಅಭಿನಂದನೆಗಳು... " ನಂತರ ಅಣ್ಣನಿಗೆ ಮಾತ್ರ ಕೇಳುವಂತೆ ಹೇಳಿದಳು,
"ಅಣ್ಣಾ..., ಎನ್ನ ಬಗ್ಗೆ ಅಷ್ಟೆಲ್ಲಾ ದೊಡ್ಡ ನಿರೀಕ್ಷೆ ಬೇಡಾ..., ನಿನ್ನ ಬೆಂಗಾವಲು ಇಲ್ಲದಿದ್ರೆ ನಾನೊಂದು ದೊಡ್ಡ ಸೊನ್ನೆ... ಅಷ್ಟೇ... ಒಬ್ಬಳೇ ಮುನ್ನುಗ್ಗುವ ದೈರ್ಯವೇ ಇಲ್ವಲ್ಲಾ ನನ್ನಲ್ಲಿ...? ಅತ್ಯಂತ ಮುಗ್ಧಳಾಗಿ ನುಡಿದ ತಂಗಿಯ ತಲೆಗೊಂದು ಮೊಟಕಿ ಹರಿ ಹೇಳಿದ,
"ಏ ಹುಡುಗೀ...,ನಿನಗೀಗ ಹದಿನೆಂಟು ವರ್ಷ..., ನೆನಪಿದ್ದಲ್ದಾ..? ವೋಟು ಹಾಕಿ ಜನನಾಯಕರ ಚುನಾಯಿಸುವ ಹಕ್ಕು ಬಯಿಂದು ನಿನಗೆ. ಸೋ... ನಿನ್ನ ಜೀವನದ ಎಲ್ಲ ತೀರ್ಮಾನಗಳನ್ನೂ ನೀನೇ ತಗೊಳ್ಳಲೇಬೇಕು... ಪುಟ್ಟ ಪಾಪುವಿನ ಹಾಂಗೆ ಪ್ರತಿ ವಿಷಯಕ್ಕೂ ಎನ್ನ ಹಿಂದೆ ಮುಂದೆ ಸುತ್ತುವುದಲ್ಲ.... ತಿಳ್ಕೋ .... "
ಗಾಯತ್ರಿಗೆ ಫೋನಿನ ಮೂಲಕ ಅಭಿನಂದನೆಗಳ ಮಹಾಪೂರವೇ ಹರಿದುಬಂತು. ಊರು,ಕಾಲೇಜು, ಕೋಚಿಂಗ್ ಸಂಸ್ಥೆಗಳ ವತಿಯಿಂದ ಪ್ರತ್ಯೇಕ ಪ್ರತ್ಯೇಕವಾಗಿ ಆಕೆಯನ್ನು ಅದ್ದೂರಿಯಾಗಿ ಸನ್ಮಾನಿಸಿದರು. ಮಾಧ್ಯಮದವರೂ ಸಂದರ್ಶನವನ್ನು ಏರ್ಪಡಿಸಿದರು. ಮಾತ್ರವಲ್ಲ ಟಿ.ವಿ. ವಾಹಿನಿಗಳಲ್ಲೂ ಅದು ನೇರ ಪ್ರಸಾರವಾಯ್ತು. ಎಲ್ಲಾ ಕಡೆಗೂ ಹೋಗುವಾಗಲೆಲ್ಲಾ ಗಾಯತ್ರಿಗೆ ಜೊತೆಯಾದದ್ದು ಹರಿಯೇ. ತಂಗಿಯ ಸಂಭ್ರಮವನ್ನು ದೂರದಿಂದಲೇ ನೋಡಿ ತೃಪ್ತಿಪಟ್ಟ. ಇನ್ನು ವೃತ್ತಿ ಶಿಕ್ಷಣಕ್ಕಾಗಿ ನಡೆಸುವ ಸಂದರ್ಶನವನ್ನು ಎದುರಿಸುವ ಆತಂಕ...,ಗಡಿಬಿಡಿ.
"ಹರಿ..., ನಿಮ್ಮ ಕೌನ್ಸೆಲಿಂಗ್ ಯಾವಾಗ...? ಆವತ್ತು ನೀನು ಹೇಳಿದ ಡೇಟ್ ಮರೆತ್ತು ಹೋಯ್ತು ನೋಡು..., ಈಗೀಗ ಎನಗೆ ಮರೆವು ಜಾಸ್ತಿ..."ಹರ್ಷಾತಿರೇಕದ ಭರತ ಇಳಿದಾದ ಮೇಲೆ ಒಂದು ದಿನ ಗೋಪಾಲ ಕೇಳಿದ....
ಉಳಿದದ್ದು ನಾಳೆ .....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ