ಬುಧವಾರ, ಫೆಬ್ರವರಿ 18, 2015

ಭಾವ ಪೀಡನೆ - ಭಾಗ - 2

ಭಾವ ಪೀಡಕರ ಮೂಲ ಗುಣಗಳ ಬಗ್ಗೆ ಬರೆದೆನಲ್ಲವೇ? ನನ್ನ ಬರವಣಿಗೆಗಳ  ಖಾಯಂ ಓದುಗ ಮಿತ್ರರೋರ್ವರು ಮೌಖಿಕವಾಗಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದರು. "... ನೀನು ಕಾಂಪ್ಲಿಕೇಟೆಡ್ ವಿಷಯಗಳನ್ನ ಬರೆಯಲು ಹೊರಟಿದ್ದಿಯಾ? ಅದರಲ್ಲಿನ ಎರಡನೇ ವಿಷಯ ಅರ್ಥವಾಗಿಲ್ಲ. ಅದರ ಬಗ್ಗೆ ಸ್ವಲ್ಪ ಹೇಳ್ತಿಯಾ? ಎಂದು ಕೇಳಿದ್ದರು. ನಾಳಿನ ಲೇಖನ ಓದು ಆಗ ಅರ್ಥವಾಗುತ್ತೆ ಎಂದಿದ್ದೆ. ನಿಮ್ಮೊಳಗೂ ಇಂತಹ ಪ್ರಶ್ನೆ ಹುಟ್ಟಿರಬಹುದಲ್ಲವೇ? ನಿನ್ನೆ ಬರೆದ ಸಂಖ್ಯೆಗಳಿಗನುಗುಣವಾಗಿ ಅವುಗಳ ವಿವರಗಳನ್ನು ಕೊಡುತ್ತಾ ಹೋಗ್ತೀನಿ. ಆಗ ನಿಮಗೆ ವಿಷಯವು ಸುಲಭ ಗ್ರಾಹ್ಯವಾಗಬಹುದು.
ಈ ಭಾವಪೀಡಕರ ಲಾಜಿಕ್ ಬಹಳ ವಿಚಿತ್ರವಾಗಿರುತ್ತದೆ. ಎಲ್ಲಾ ವಿಷಯಗಳನ್ನೂ ತಮ್ಮ ಮೂಗಿನ ನೇರಕ್ಕೇ ವಿಮರ್ಶಿಸಿ ಅವುಗಳಲ್ಲಿ ತನ್ನ ಸಂಗಾತಿ/ಮಕ್ಕಳು ಭಾಗವಹಿಸಬೇಕೇ ಬೇಡವೇ ಎಂಬುದನ್ನು ತಾವೇ ನಿರ್ಧರಿಸಿಬಿಡುತ್ತಾರೆ. ಉದಾ:- ಪತ್ನಿ ತನ್ನ ಗೆಳತಿಯ ಮನೆ ಸಮಾರಂಭಕ್ಕೆ ಹೋಗಲು ಉತ್ಸಾಹ ತೋರಿಸಿದಾಗ ಗಂಡ ಹೇಳುತ್ತಾನೆ "ನಿನಗೆ ನೆನಪಿಲ್ಲವೇನೋ ...? ಆದರೆ ನಾನು ಮರೆತಿಲ್ಲ, ಆವತ್ತು ನಾವು birthday partyಗೆ  ಹೋಗಿದ್ದಾಗ ಅವಳ ಗಂಡ ನನ್ನನ್ನು ಸರಿಯಾಗಿ ಮಾತನಾಡಿಸಲೇ ಇಲ್ಲ.ಸಿರಿವಂತರು ಯಾರಿದ್ದಾರೋ ಅವರನ್ನೇ ಹೆಚ್ಚೆಚ್ಚು ಉಪಚರಿಸುತ್ತಿದ್ದ. ನನ್ನನ್ನು insult ಮಾಡಿದವರೊಂದಿಗೆ ಬೆರೆಯಲು ನಿನಗೇನು ಅಷ್ಟು ಉತ್ಸಾಹ...?" ಎನ್ನುತ್ತಾನೆ. ಹೆಂಡತಿ ಪಟ್ಟು ಹಿಡಿದರೆ ಈತನ ವರಸೆ ಹೀಗಿರುತ್ತದೆ,".... ನಾನು ಈ ಮನೆಯ ಯಜಮಾನ, ಇಲ್ಲಿ ನಾನು ಹೇಳಿದಂತೆ ನಡೆಯಬೇಕು, ಈ ಮನೆ ನಡೆಯುವುದು ನನ್ನ ಸಂಪಾದನೆಯಿಂದ ....ನೆನಪಿರಲಿ ...  ?"ಇತ್ಯಾದಿಯಾಗಿ ಮೇಲಿಂದ ಮೇಲೆ ಅದನ್ನೇ ಮತ್ತೆ ಮತ್ತೆಬೇರೆ ಬೇರೆ ವಿಧದಲ್ಲಿ ಹೇಳುತ್ತಿರುತ್ತಾನೆ. ಮಕ್ಕಳು ಇದನ್ನೇ ನೋಡುತ್ತಾ ಪ್ರತಿಭಟಿಸುವ ಧೈರ್ಯ ಸಾಲದೇ ಬೆಳೆಯುತ್ತಿರುತ್ತಾರೆ.  ಹೆಚ್ಚಿನ ವಿಷಯಗಳಲ್ಲಿ ಇಂತಹುದೇ ಋಣಾತ್ಮಕ ಪ್ರತಿಕ್ರಿಯೆ ಗಂಡನಿಂದ ಬಂದಾಗ ನಿಧಾನಕೆ ಹೆಂಡತಿಯಾದವಳು ತನ್ನತನವನ್ನು ಕಳೆದುಕೊಳ್ಳುತ್ತಾಳೆ ಮತ್ತು ಖಿನ್ನತೆಗೆ ಜಾರುತ್ತಾಳೆ.ಪೀಡಕರು ತನ್ನ ಮಕ್ಕಳ ಸ್ನೇಹಿತರು ಯಾರಾಗಿರಬೇಕು, ಯಾರೊಡನೆ ಅವರು ಬೆರೆಯಬೇಕು ಎಂಬುದನ್ನೆಲ್ಲ ಅಧಿಕಾರಯುತವಾಗಿ ತೀರ್ಮಾನಿಸಿ ಮಕ್ಕಳ ಆಯ್ಕೆಗಳನ್ನು ಹೀನಾಯ ಮಾಡಿ ಮಾತನಾಡುತ್ತಿರುತ್ತಾರೆ. ಈ ಮೂಲಕ ತನ್ನ ಕುಟುಂಬದ ಪ್ರತಿ ಸದಸ್ಯರೂ ತನ್ನ ಹದ್ದುಬಸ್ತಿನಲ್ಲೇ ಇರಬೇಕೆಂದು ಬಯಸುತ್ತಾನೆ.ತನ್ನ ಮನದಿಂಗಿತದಂತೆ ನಡೆದುಕೊಳ್ಳದ ಸಂಗಾತಿ/ಮಕ್ಕಳನ್ನು ಹೊಡೆಯಲೂ ಇವರು ಹೇಸುವುದಿಲ್ಲ.

ಸ್ತ್ರೀಭಾವಪೀಡಕರು ಯಾವಾಗಲೂ ಹೆಂಗಸಿನ ಗುಣಗಳನ್ನು(ಬೇಗನೆ ದುಃಖಕ್ಕೊಳಗಾಗಿ ಅಳುವುದು, ಪ್ರೀತಿಯನ್ನು ಆಗಾಗ ಮಾತುಗಲ್ಲಿ ಹೇಳುವುದು...,ಇತ್ಯಾದಿ) ಪ್ರದರ್ಶಿಸಲು ಇಷ್ಟ ಪಡುವುದೇ ಇಲ್ಲ. ತಾನು ಉಳಿದ ಮಹಿಳೆಯರಂತೆ ಕೈಲಾಗದವಳಲ್ಲ, ಮನೆ/ಆಫೀಸು ನಡೆಯುತ್ತಿರುವುದೇ ತನ್ನಿಂದ ಎಂದು ತಿಳಿಯುತ್ತಿರುತ್ತಾಳೆ. ಸಂಧರ್ಭ ದೊರೆತಾಗಲೆಲ್ಲಾ ಗಂಡನನ್ನು ಕೆಲಸಕ್ಕೆ ಬಾರದವ, ಅಪ್ರಯೋಜಕ ಎಂಬ ಅರ್ಥ ಬರುವಂತೆ ಜರೆಯುತ್ತಿರುತ್ತಾಳೆ. ಮಕ್ಕಳನ್ನೂ ಇದೇ ರೀತಿಯಾಗಿ ನಡೆಸಿಕೊಳ್ಳುತ್ತಾಳೆ.ಇವರು ಆಫೀಸಿನಲ್ಲಿ ಬಾಸ್ ಆಗಿದ್ದರಂತೂ ಕೈ ಕೆಳಗಿನವರಿಗೆ ಜೀವಂತ ನರಕದ ಅನುಭವವಾದೀತು.  ಪುರುಷ ಭಾವ ಪೀಡಕರು ಅತಿಯಾದ ಅಹಂನಿಂದ ಬಳಲುತ್ತಿರುತ್ತಾರೆ. ಮನೆಯಲ್ಲಿ ಸಾಧಾರಣವಾಗಿ ಅವರ ಮಾತುಗಳು ಈ ರೀತಿ ಇರುತ್ತವೆ, "... ನಾನು ಗಂಡಸು...,ಈ ಮನೆಯ ಯಜಮಾನ...,ದುಡಿದು ನಿಮ್ಮನ್ನೆಲ್ಲಾ ಸಾಕುವವ ಎಂಬುದು ನೆನಪಿರಲಿ..." ಇತ್ಯಾದಿ.  

ಇವರೆಂದೂ ತಮ್ಮ ಮನದೊಳಗಿನ ಭಾವನೆಗಳನ್ನು ಪ್ರಾಮಾಣಿಕವಾಗಿ ವ್ಯಕ್ತ ಪಡಿಸುವುದಿಲ್ಲ. ತಮಗಾದ ಸಂತಸವನ್ನು ಉಳಿದವರೊಡನೆ ಹಂಚಿಕೊಳ್ಳುವುದನ್ನು ದ್ವೇಷಿಸುತ್ತಾರೆ ('ಅವರಿಗೆ ನಾನು ಸಂತಸವಾಗಿರುವುದನ್ನು ನೋಡಿದರೆ ಹೊಟ್ಟೆಕಿಚ್ಚು...' ಇತ್ಯಾದಿಯಾಗಿ ಹಲುಬುತ್ತಿರುತ್ತಾರೆ). ಮನಸ್ಸಿನ ಆತಂಕವನ್ನು, ಒತ್ತಡಗಳನ್ನು, ಉದ್ವೇಗಗಳನ್ನು ತಮ್ಮೊಳಗೇ ಅದುಮಿ ಇಟ್ಟುಕೊಂಡಿರುತ್ತಾರೆ. ಈ ಋಣಾತ್ಮಕ ಭಾವನೆಗಳ ಮೂಟೆಯ ಗಾತ್ರ ಮಿತಿಮೀರಿದಾಗ ಭಯಂಕರ ಸಿಟ್ಟಾಗಿ ಸ್ಫೋಟಗೊಳ್ಳುತ್ತೆ. ಭಾವಪೀಡಕರು ಅತಿ ಸಿಟ್ಟಿನ ಪ್ರಕೃತಿಯವರಾಗಿರಲು ಇದೂ ಒಂದು ಕಾರಣ. ಸಿಟ್ಟಿನ ಸಂಧರ್ಭದಲ್ಲಿ ಇವರು ಕೈಗೆ ದೊರೆತ ಸಾಮಾನುಗಳನ್ನು ಒಗೆಯುವುದು, ನೆಲಕ್ಕೆ ಅಪ್ಪಳಿಸುವುದು, ಎದುರು ಇರುವವರನ್ನು ಹೊಡೆಯುವುದು ಮಾಡುತ್ತಾರೆ.

ಬಾಲ್ಯಕಾಲದ ಕಹಿ ಜೀವನದಿಂದಾಗಿ ಇವರ ಆತ್ಮ ಗೌರವ ನಾಶವಾಗಿರುತ್ತದೆ. ಆದುದರಿಂದ ಇವರು ಮಾನಸಿಕವಾಗಿ ತಮ್ಮ ಸಂಗಾತಿಯ ಮೇಲೆ ಅವಲಂಬಿತರಾಗಿರುತ್ತಾರೆ. ಆದರೆ ಅದನ್ನು ಎಳ್ಳಷ್ಟೂ ತೋರಿಸಿಕೊಳ್ಳದೆ ಮನೆಯ ಜವಾಬ್ದಾರಿಗಳನ್ನು ಸಂಗಾತಿಯೇ ಮಾಡಬೇಕಾದುದು ಅವಳ ಕರ್ತವ್ಯ ಎನ್ನುವಂತೆ ನಡೆದುಕೊಳ್ಳುತ್ತಾರೆ. ಉದಾ:- " ನಿನ್ನ ಮಗ/ಮಗಳಿಗೆ  ಹೆಣ್ಣು/ಗಂಡು ಹುಡುಕುವ ಕೆಲಸ ನಿನಗೇ ಬಿಟ್ಟದ್ದು..., ನನಗೆ ಅದಕ್ಕೆಲ್ಲಾ ಟೈಮೇ ಇಲ್ಲಾ..., ಊರ ಜನಗಳಲ್ಲಿ ಜಾತಕ ಗೀತಕ ಎಂದೆಲ್ಲ ಮಾತನಾಡಲು ನನ್ನಿಂದಾಗದು..." ಎಂದೆಲ್ಲಾ ಹೇಳುತ್ತಿರುತ್ತಾರೆ. ಅಸಲಿಗೆ ಇವರಿಗೆ ಯಾರೊಂದಿಗೂ ಉತ್ತಮ ಬಾಂಧವ್ಯ ಇರುವುದಿಲ್ಲ. ಬಾಂಧವ್ಯ ವೃಧ್ಧಿಸಿಕೊಳ್ಳಬೇಕು  ಎನ್ನುವ ಧನಾತ್ಮಕ ನಿಲುವೂ ಇರುವುದಿಲ್ಲ.                                                  
                                                                                             (ಸಶೇಷ)
 


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ