ಮದುವೆ ಸೆಟ್ಲ್ ಆಯಿತೋ ಎಲ್ಲಾ ತನ್ನಿಂದಾಗಿಯೇ ಆಯಿತೆನ್ನುವಂತೆ ಬೀಗುತ್ತಿರುತ್ತಾರೆ. ಅದೇ ವಿಷಯದಲ್ಲಿ ಏನಾದರೂ ಎಡವಟ್ಟು ಆಯಿತೋ ಎಲ್ಲ ತಪ್ಪನ್ನೂ ಹೆಂಡತಿಯ ಮೇಲೆ ಹಾಕಿ ಮತ್ತೆ ಮತ್ತೆ ಆಕೆಯನ್ನು ಜರೆಯುತ್ತಿರುತ್ತಾರೆ. ಆಕೆ ಇನ್ನು ಮುಂದೆ ಇಂತಹ ಜವಾಬ್ದಾರಿಗಳನ್ನು ಹೊತ್ತುಕೊಳ್ಳದಿದ್ದರೆ ತಾನಿದನ್ನು ಹೇಗೆ ನಿಭಾಯಿಸಲಿ ಎಂದು ಒಳಗೊಳಗೇ ಬಹಳ ಅಧೀರರೂ ಆಗುತ್ತಾರೆ.
ಭಾವಪೀಡಕರು ತಮ್ಮ ಮಾತ್ಸರ್ಯದ ಗುಣದಿಂದಾಗಿ ಸಂಗಾತಿಯ ಜೀವನವನ್ನು ಅಕ್ಷರಶಃ ನರಕವನ್ನಾಗಿಸುತ್ತಾರೆ. ಗಂಡನಾದರೆ ಹೆಂಡತಿಯ ಶೀಲದ ಬಗ್ಗೆ, ಹೆಂಡತಿಯಾದರೆ ಗಂಡನ ಶೀಲದ ಕುರಿತು ಯಾವಾಗಲೂ ಸಂಶಯಿತರಾಗಿಯೇ ಇರುತ್ತಾರೆ. ಉದಾ:-ಹೆಂಡತಿ ಗಂಡನೊಡನೆ ಹೇಳುತ್ತಾಳೆ,".... ನೀವು ಅವಳೊಡನೆ ಅಷ್ಟು ನಗುತ್ತಾ ಮಾತನಾಡಿದಾಗಲೇ ನನಗೆ ಅನುಮಾನ ಇತ್ತು, ನಿಮ್ಮಿಬ್ಬರೊಳಗೆ 'ಏನೋ' ಇರಬಹುದೆಂದು....ಅಲ್ಲದಿದ್ದರೆ ನಿನ್ನೆ ಅವಳ ಗಂಡನಿಗೆ accident ಆದಾಗ ಊರಿಗೆ ಮೊದಲೇ ಹೋಗಿ ಆತನನ್ನು ನೋಡಲು ನಿಮಗೆ ಅಷ್ಟು ಅವಸರ ಏನಿತ್ತು...? " ಸಮಸ್ಯೆಯೇ ಬೇಡ ಎಂದುಕೊಂಡು ಗಂಡನಾದವ ರೋಗಿಯನ್ನು ನೋಡಲು ಆಕೆಯನ್ನು ಕರೆದರೂ ಅವಳು ಉಲ್ಟಾ ಹೊಡೆಯುತ್ತಾಳೆ, ".... ಥೂ..., ನಿಮಗೆ ಒಂಚೂರೂ ಕಾಮನ್ ಸೆನ್ಸ್ ಇಲ್ಲ...., ಅವನೇನು ನನ್ನ ಅಣ್ಣನೇ... ತಮ್ಮನೇ? ಹಾಗೆ ಆಸ್ಪತ್ರೆಗೆ ಅಡ್ಮಿಟ್ ಆಗೋರು ಊರಲ್ಲಿ ಸಾವಿರಾರು ಜನ ಇರ್ತಾರೆ. ಅವರನ್ನೆಲ್ಲಾ ನೋಡೂಕೆ ನೀವೇ ಲಾಯಕ್ಕು..." ಎಂದು ಬಿಡುತ್ತಾಳೆ. ಪತಿ/ಪತ್ನಿ ಎಲ್ಲಿಗೆ ಹೋದರೂ ತಮ್ಮ ಒಂದು ಕಣ್ಣನ್ನು ಅವರ ಮೇಲೆಯೇ ಇಟ್ಟಿರುತ್ತಾರೆ. ಅವರ ಮಾತುಗಳ ನಡತೆಯ ಪ್ರತಿ ವಿವರವನ್ನೂ ತಿಳಿಯಬಯಸುತ್ತಾರೆ. possessiveness ಎನ್ನುವುದು ಅವರಲ್ಲಿ ಎಷ್ಟು ಆಳವಾಗಿ ಬೇರೂರಿರುತ್ತೆ ಅಂದರೆ ತನ್ನ ಸಂಗಾತಿ ಉಡುವ ಬಟ್ಟೆಗಳ ಬಗ್ಗೆಯೂ ಅವರೇ ನಿರ್ಧಾರ ತೆಗೆದುಕೊಂಡುಬಿಡುತ್ತಾರೆ.ಉದಾ:- "... ನೀನು ಈ ಕಪ್ಪು ಬಣ್ಣದ ಸೀರೆ ಉಟ್ಟು ನನ್ನೊಂದಿಗೆ ಬಂದು ನನ್ನ ಮರ್ಯಾದೆ ತೆಗೆಯಬೇಡ...,ಅದೇನಿದ್ದರೂ ನಿನ್ನ ಅಪ್ಪನ ಮನೆಗೆ ಹೋಗುವಾಗ ಬೇಕಿದ್ದರೆ ಉಟ್ಟುಕೋ..., ಈಗ ಅದನ್ನು ಬದಲಾಯಿಸಿ ಬರುವುದಿದ್ದರೆ ನನ್ನೊಂದಿಗೆ ಬಾ..."ಎಂದು ಕಟುವಾಗಿ ಹೇಳುತ್ತಾನೆ. ತನ್ನ ಅಚ್ಚುಮೆಚ್ಚಿನ ಸೀರೆಯ ಬಗ್ಗೆ ಪತಿಯಿಂದ ಬಂದ ಕಾಮೆಂಟ್ಸ್ ಕೇಳಿ ಕುಗ್ಗಿಹೋದ ಪತ್ನಿ ಮೂಡು ಕೆಡಿಸಿಕೊಂಡು ಮತ್ತೆ ತಯಾರಾಗುತ್ತಾಳೆಯೇ?ಇಲ್ಲ. ತನ್ನೊಂದಿಗೆ ಬರಲು ಉತ್ಸಾಹ ತೋರದ ಆಕೆಯ ನಡತೆ ತನಗೆ ಮಾಡಿದ ಅವಮಾನ ಎಂದು ತಿಳಿಯುವ ಶೀಘ್ರ ಕೋಪಿ ಗಂಡ ಮುಂದೇನು ಮಾಡುತ್ತಾನೆ? ಇಷ್ಟು ಓದಿದ ಮೇಲೆ ನಿಮಗೂ ಅರ್ಥವಾಗಿರಲೇಬೇಕು. ಮನೆ ರಣರಂಗವಾಗುತ್ತೆ.
ಭಾವ ಪೀಡಕರ ವ್ಯಕ್ತಿತ್ವ
ಇವರು ತಮ್ಮೊಡನೆ ಇರುವವರ(ಹೆಂಡತಿ/ಗಂಡ/ಮಕ್ಕಳು/ ಕೆಲಸದವರು) ಆತ್ಮ ಗೌರವವನ್ನು ಚುಚ್ಚುತ್ತಲೇ ಇರುತ್ತಾರೆ. "ನಿನ್ನಂತಹ ಯೂಸ್ಲೆಸ್ ಫೆಲೋ ಆ ಕೆಲಸವನ್ನ ಹೀಗೇ ಮಾಡಬಹುದಷ್ಟೆ ಎಂದು ನನಗೆ ಮೊದಲೇ ಗೊತ್ತಿತ್ತು. ನೋಡು..., ನಾನು ಅದನ್ನು ಎಷ್ಟು ನೀಟಾಗಿ ಮಾಡಿ ಮುಗಿಸಿದೆ ..."ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾರೆ .ಹೀಗೆ ನಿರಂತರವಾಗಿ ತಮ್ಮ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದಾಗ ಪೀಡಿತ ವ್ಯಕ್ತಿ ಸ್ವಯಂ ನಿರ್ಧಾರ ತೆಗೆದುಕೊಳ್ಳುವ ಧೈರ್ಯವನ್ನು ಕಳೆದುಕೊಳ್ಳುತ್ತಾನೆ/ಳೆ. ಕೆಲವು ಮಕ್ಕಳಿಗೆ ಸ್ನೇಹಿತರೇ ಇಲ್ಲದಿರುವುದನ್ನು ನೀವು ಗಮನಿಸಿರಬಹುದು. ಅವರು ಯಾರನ್ನೂ ನಂಬಲಾರರು. ಯಾಕೆ ಗೊತ್ತಾ? 'ತಾನು ಮಾಡಿದ ಯಾವ ಕೆಲಸಕ್ಕೂ ಅಪ್ಪ(ಅಮ್ಮ) ಒಂದೇ ಒಂದು ಒಳ್ಳೆಯ ಮಾತನ್ನು ಹೇಳೋಲ್ಲ. ಬಹುಶಃ ತನಗೆ ಒಳ್ಳೆಯ ಕೆಲಸ ಮಾಡುವ ಯ್ಯೋಗ್ಯತೆಯೇ
ಇಲ್ಲವೇನೊ? ತನ್ನಷ್ಟು ಅಪ್ರಯೋಜಕರನ್ನು ಯಾರೂ ಇಷ್ಟ ಪಡಲಾರರು...' ಶೋಷಿತ ಮಕ್ಕಳ ಯೋಚನಾದಾಟಿ ಹೀಗಿಯೇ ಸಾಗುತ್ತಿರುತ್ತೆ. ಈ ಕಾರಣದಿಂದಾಗಿಯೂ ಅವರು ಒಬ್ಬಂಟಿಯಾಗಿ ಅಂತರ್ಮುಖಿಯಾಗಿರುವ ಸಾಧ್ಯತೆಗಳೂ ಇವೆ.
ಪೀಡಕರು ದೈನಂದಿನ ಆಗುಹೋಗುಗಳಿಂದ ತಮ್ಮ ಅವಲಂಬಿತ(ಪತಿ/ಪತ್ನಿ/ಮಕ್ಕಳು)ರನ್ನು ದೂರವೇ ಇಡಲು ಬಯಸುತ್ತಾರೆ. ಉದಾ:-ಆಫೀಸಿನಲ್ಲಿ ಆ ದಿನ ನಡೆದಂತಹ ಉಲ್ಲಾಸಕರ ಅಥವಾ ದುಃಖಕರ ಘಟನೆಗಳನ್ನು ಅಪ್ಪಿತಪ್ಪಿಯೂ ಮನೆಯಲ್ಲಿ ಹೇಳುವುದಿಲ್ಲ. ಬೇರೆಯವರ ಮೂಲಕ ಪತ್ನಿಗೆ ಅದು ತಿಳಿಯಿತು ಎಂದುಕೊಳ್ಳಿ. ಆಕೆ ಅಕಸ್ಮಾತ್ ಗಂಡನೊಡನೆ ಅದನ್ನು ಉಲ್ಲೀಖಿಸಿ "ನಿಮ್ಮ ಆಫೀಸಲ್ಲಿ ಮೊನ್ನೆ ಹೀಗಾಯ್ತಂತೆ ಅಲ್ಲಾ? ನೀವು ನನ್ಗೆ ಹೇಳೇ ಇಲ್ಲ?" ಎಂದು ದೂರಿದರೆ ಗಂಡನ
ಪ್ರತಿಕ್ರಿಯೆ ಹೇಗಿರುತ್ತೆ ನೋಡಿ,"ಅದನ್ನೆಲ್ಲಾ ನಿನ್ನಲ್ಲಿ ಹೇಳಿ ನನಗೆ ಆಗಬೇಕಾದುದು ಏನಿದೆ? ನಿನ್ನದೇನಿದ್ದರೂ ಮನೆಕೆಲಸ, ಅಡುಗೆ ಕೆಲಸ..."ಈ ಪೀಡಕರು ತಮ್ಮ ಸಂಪಾದನೆ, ಉಳಿತಾಯ, ಖರ್ಚು, ವೆಚ್ಚದ ಬಗ್ಗೆ ಬಹಳ ಗೌಪ್ಯತೆಯನ್ನು ಕಾಯ್ದುಕೊಳ್ಳುತ್ತಾರೆ.ಇವರು ಯಾರನ್ನೂ ನಂಬಲಾರರು. ಆದುದರಿಂದ ಅತಿ ಸಾಮಾನ್ಯ ವಿಷಯಗಳನ್ನೂ ತಮ್ಮ ಮನದ ಅಭೇದ್ಯ ಕೋಟೆಯೊಳಗೆ ಬಚ್ಚಿಡುತ್ತಾರೆ. ಹೆಂಡತಿ ಮಕ್ಕಳ ಆಶೆಗಳನ್ನು ಆಗೊಮ್ಮೆ ಈಗೊಮ್ಮೆ ಪೂರೈಸುತ್ತಿರುತ್ತಾರೆ. ಆ ಮೂಲಕ ತನ್ನ ಪ್ರತಿಯೊಂದು ಬೇಡಿಕೆಯನ್ನು (ಅದೆಷ್ಟೇ ಅಸಮಂಜಸವಾಗಿರಲಿ) ಪೂರೈಸಲು ಅವರು ಬಾಧ್ಯಸ್ತರು ಎಂಬುದನ್ನು ಪುನಃ ಪುನಃ ಅವರಿಗೆ ನೆನಪಿಸುತ್ತಲೇ ಇರುತ್ತಾನೆ. ಉದಾ:- "ಗಂಡ ಹೇಳುತ್ತಾನೆ, "... ನಿನಗಾಗಿ ನಾನು ಇಷ್ಟೆಲ್ಲಾ ಮಾಡಿರುವಾಗ ಈ ಮನೆಗೆ ಬೇಕಾದ ಫರ್ನಿಚರುಗಳನ್ನು ನಿನ್ನ ಅಪ್ಪನಲ್ಲಿ ಕೊಡಿಸೋಕೆ ಹೇಳೋದ್ರಲ್ಲಿ ತಪ್ಪೇನಿದೆ? ತಮ್ಮ ಮಗಳಿಗೇ ತಾನೇ ಅವರು ಕೊಡ್ತಿರೋದು?"
ಭಾವನಾ ಪೀಡಕರು emotional blackmail ತಂತ್ರಗಳನ್ನು ಉಪಯೋಗಿಸಿ ಬಲಿಪಶುಗಳನ್ನು ತಮ್ಮ ಕಪಿಮುಷ್ಟಿಯೋಳಗೇ ಇಟ್ಟುಕೊಳ್ಳಲು ಬಯಸುತ್ತಾರೆ. ಉದಾ:-ಹೆಂಡತಿಯಾದವಳು ತನ್ನಿಚ್ಛೆಯಂತೆ ನಡೆದುಕೊಳ್ಳುತ್ತಿಲ್ಲ ಎಂಬ ಸಂದೇಹ ಬಂದಾಗ ಹಟಾತ್ತಾಗಿ ಮನೆ ಖರ್ಚಿಗೆ ದುಡ್ಡು ಕೊಡುವುದನ್ನು ನಿಲ್ಲಿಸಿಬಿಡುತ್ತಾನೆ. ಮನೆ ಕೆಲಸದವಳಿಗೆ ಸಂಬಳ ಕೊಡುವುದಿಲ್ಲ.ದಿನಗಟ್ಟಲೆ, ವಾರಗಟ್ಟಲೆ ಕೆಲವೊಮ್ಮೆ ತಿಂಗಳುಗಳ ಕಾಲ ಪತ್ನಿಯೊಡನೆ ಮಕ್ಕಳೊಡನೆ ಮಾತೇ ಆಡುವುದಿಲ್ಲ. ಇದೇಕೆ ಹೀಗೆ ಎಂದು ಹೆಂಡತಿ ಪ್ರಶ್ನಿಸಿದರೆ ಆತನ ಉತ್ತರ ಹೀಗಿರುತ್ತೆ..,"ನನ್ನವಿಷಯಗಳನ್ನು ನಿನ್ನ ತವರು ಮನೆಯಲ್ಲಿ ಹೋಗಿ ಚಾಡಿ ಹೇಳ್ತೀಯಾ? ಇನ್ನೊಂದು ಸಲ ಹಾಗೆ ಮಾಡೋಲ್ಲ ಎಂದು ನನ್ನ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೆ ದುಡ್ಡು ಸಿಗುತ್ತೆ ...,ಇಲ್ಲಾಂದ್ರೆ ನಿಮ್ಮಪ್ಪನ ಮನೆಗೆ ಹೋಗಿ ಬಿದ್ದುಕೋ..."ಇಷ್ಟು ದಿನಗಳ ಮನೆಯೊಳಗಿನ ಅಸಹನೀಯ ಮೌನ, ಮನೆಯ ಖರ್ಚಿಗೆ ಕೈಯ್ಯಲ್ಲಿ ದುಡ್ಡೇ ಇಲ್ಲದೆ ಆಗುವ ಪರದಾಟ, ಮಕ್ಕಳ ಬೇಡಿಕೆಗಳನ್ನು ತೀರಿಸಲಸಾಧ್ಯವಾದಂತಹ 'ಕೈಕಟ್ ...ಬಾಯ್ಮುಚ್ ' ಎನ್ನುವಂತಹ ಸ್ಥಿತಿ, ಮುಂದೆಂದಿಗೂ ಗಂಡನ ವಿಚಿತ್ರ ನಡವಳಿಕೆಯನ್ನು ಪ್ರಶ್ನಿಸದಂತೆ ಅಥವಾ ಮನದ ಅಳಲನ್ನು ತವರುಮನೆಯಲ್ಲಿ ಹೇಳದಂತೆ ಪತ್ನಿಯನ್ನು ತಡೆಯುತ್ತೆ. ಇವೆಲ್ಲವೂ ಮಕ್ಕಳ ಮನದಲ್ಲಿ ರೆಕೊರ್ಡ್ ಆಗುತ್ತೆ, ಮತ್ತೆ ಮತ್ತೆ ರೀ ವೈಂಡ್ ಆಗುತ್ತಲೇ ಇರುತ್ತೆ.
ಈ ಪೀಡಕರು ತುಂಬಾ dominating ಪ್ರಕೃತಿಯವರು ಎಂದು ಆಗಲೇ ಹೇಳಿದೆನಷ್ಟೇ? ಲೈಂಗಿಕ ಕ್ರಿಯೆಗೆ ಸಂಬಂಧಪಟ್ಟಂತೆಯೂ ಸಂಗಾತಿಯ ಇಷ್ಟ ಅಇಷ್ಟಗಳ ಕಡೆಗೆ ಗಮನ ಕೊಡದೆ ತನ್ನಿಷ್ಟವನ್ನು ಯಾವ ರೀತಿಯಲ್ಲಾದರೂ ತೀರಿಸಿಕೊಂಡು ಬಿಡುವ ಛಾತಿ ಉಳ್ಳವರು. ಸಂಗಾತಿಯ ಇಚ್ಚೆಯನ್ನರಿತು ಶಕ್ತಿ ಮೀರಿ ಗಂಡ ಹೆಂಡತಿಯನ್ನು ಅಥವಾ ಹೆಂಡತಿ ಗಂಡನನ್ನು ತೃಪ್ತಿಪಡಿಸಲು ಹೆಣಗಿದರೂ ಅವರು ತೃಪ್ತಿಪಟ್ಟುಕೊಳ್ಳಲಾರರು. ಉಳಿದ ದೈನಂದಿನ ಕಾರ್ಯಗಳ ವಿಷಯಗಳಲ್ಲಿ ಇವರ ಪ್ರತಿಕ್ರಿಯೆಯನ್ನು ಮೊದಲೇ ಊಹಿಸಲು ಸಾಧ್ಯವೇ ಇಲ್ಲ. ಉದಾ:- ತಾನು ಮೊನ್ನೆ ಮಾಡಿದ ತಿಂಡಿ ಗಂಡನಿಗೆ ಇಷ್ಟವಾಗಿತ್ತೆಂದು ಇನ್ನೊಂದು ದಿನ ಪುನಃ ಅದನ್ನೇ ಮಾಡಿದರೆ ಆತ ಅದನ್ನು ಕಟುವಾಗಿ ಟೀಕಿಸಲು ಹಿಂದೆ ಮುಂದೆ ನೋಡಲಾರ. ಇವರು ಉಳಿದವರು ಮಾಡುವ ಕೆಲಸ ನೂರಕ್ಕೆ ನೂರರಷ್ಟು ಸಂಪೂರ್ಣ(perfect) ವಾಗಿರಬೇಕೆಂದು ನಿರೀಕ್ಷಿಸುತ್ತಾರೆ. ಮನೆ ಕನ್ನಡಿಯಂತೆ ಹೊಳೆಯುತ್ತಿರಬೇಕು. ತನ್ನ ಬಟ್ಟೆ ಬರೆಗಳು ನೀಟಾಗಿರಬೇಕು, ಊಟ ,ತಿಂಡಿ ರುಚಿ ಶುಚಿಯಾಗಿ ಪೂರ್ವ ನಿಗದಿತ ಸಮಯದಲ್ಲಿ ವ್ಯತ್ಯಯವಾಗದಂತೆ ತನಗೆ ಸಿಗುತ್ತಿರಬೇಕು ಎಂಬುದು ಇವರ ಮನೆಯಲ್ಲಿ ಅಲಿಖಿತ ಕಾನೂನೇ ಆಗಿರುತ್ತೆ. ಹೆಂಡತಿಯ ಅನಾರೋಗ್ಯದ ಕಾರಣಕ್ಕೋ ಅಥವಾ ಬೇರಿನ್ನೇನೋ ಕಾರಣಕ್ಕಾಗಿ ಇವುಗಳಲ್ಲಿ ಸ್ವಲ್ಪ ವ್ಯತ್ಯಯವಾದರೂ ಇವರು ಸಿಟ್ಟಿನಿಂದ ಕಿಡಿಕಿಡಿಯಾಗಿಬಿಡುತ್ತಾರೆ. (ಸಶೇಷ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ