ಶುಕ್ರವಾರ, ಫೆಬ್ರವರಿ 20, 2015

ಭಾವ ಪೀಡನೆ -ಭಾಗ-4

ಆಗಲೇ ಹೇಳಿದ ಹಾಗೆ ಇವರು ತನ್ನಿಂದಾದ ತಪ್ಪುಗಳಿಗೆ ಉಳಿದವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ನಿಂದಿಸುತ್ತಿರುತ್ತಾರೆ. ಸಮಾಜದಲ್ಲಿ ತಾನು ಇನ್ನಷ್ಟು ಎತ್ತರಕ್ಕೇರಿ v.i.p.ಆಗಿರುತ್ತಿದ್ದೆ,ಆದರೆ ಆಗಿಲ್ಲ ಯಾಕೆಂದರೆ ತನ್ನ ಹೆಂಡತಿ ಮಕ್ಕಳ ಜವಾಬ್ದಾರಿ ತನ್ನನ್ನು ಹಿಂದಕ್ಕೆ ಎಳೆಯುತ್ತಿತ್ತು. ಅವರ ಬೇಡಿಕೆಗಳನ್ನು ಪೂರೈಸಿ ಅವರನ್ನು ಒಂದು ನೆಲೆಗೆ ತಲಪಿಸುವಷ್ಟರಲ್ಲಿ ನನ್ನ ಆಯಸ್ಸು ಮುಗಿದೇ ಹೋಯ್ತು ಎಂದು ಸಂದರ್ಭ ಸಿಕ್ಕಾಗಲೆಲ್ಲಾ ಹೇಳುತ್ತಿರುತ್ತಾರೆ. ಅಸಲು ವಿಷಯ ಏನೆಂದರೆ ಈ ರೀತಿಯ ಪೀಡಕರು ಮುನ್ನುಗ್ಗುವ ಛಾತಿ ಉಳ್ಳವರಲ್ಲ. ಯಾವುದೇ ವಿಷಯದಲ್ಲೂ ರಿಸ್ಕ್ ತೆಗೆದುಕೊಳ್ಳಲು ತಯಾರಿರುವುದಿಲ್ಲ. ಜೀವನದ ಬಗ್ಗೆ ತಮ್ಮ ಮನದಲ್ಲಿ ಒಂದು ನಿರ್ಧಿಷ್ಟ ಚಿತ್ರವನ್ನು ಬರೆದಿಟ್ಟಿರುತ್ತಾರೆ. ಚಿತ್ರದ ಗೆರೆ ಸ್ವಲ್ಪ ವ್ಯತ್ಯಾಸವಾದರೂ ಪೂರ್ತಿ ದಿಕ್ಕು ತಪ್ಪಿದಂತಾಗಿ ಎಲ್ಲದಕ್ಕೂ ಕಾರಣ ತನ್ನ ಸಂಗಾತಿ ಎಂದು ಅವಳ/ಅವನ ಮೇಲೆ ಕಿಡಿ ಕಾರುತ್ತಲೇ ಇರುತ್ತಾರೆ. ಹೀಗೆ ಮಾಡಿ ತನ್ನ ಅಪಯಶಸ್ಸಿಗೆ ಕಾರಣ ಉಳಿದವರೇ ಹೊರತು ತಾನಲ್ಲ ಎಂದು ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಾನೆ. ಭಾವಪೀಡಕರ ಮನದಲ್ಲಿ ತಾವು ಯಾವಾಗಲೂ ಉಳಿದವರಿಗಿಂತ ಮೇಲು ಎಂಬ ಭಾವನೆ ಇರುತ್ತೆ. ಸಮಾಜದಲ್ಲಿ ಎಲ್ಲರಿಗೂ ಒಂದು ಕಾನೂನಾದರೆ ಇವರು ತಮಗಾಗಿಯೇ ಒಂದು ಕಾನೂನನ್ನು ಸೃಷ್ಟಿ ಮಾಡಿಕೊಂಡಿರುತ್ತಾರೆ. ಯಾವುದೇ ಕಾರಣಕ್ಕೂ ಅವರು ಅದರಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧರಿರುವುದಿಲ್ಲ. ಕ್ರಿಮಿನಲ್ ಅಪರಾಧಿಗಳನ್ನು ನೀವು ಗಮನಿಸಿರಬಹುದು, ಅವರಿಗೆ ತಾವು ಮಾಡಿದ ಕೃತ್ಯಗಳ ಕುರಿತು ಒಂಚೂರೂ ಪಾಶ್ಚಾತ್ತಾಪವಿರುವುದಿಲ್ಲ. ಅದಕ್ಕೆ ಕಾರಣ ಇದುವೇ ಆಗಿರುತ್ತದೆ. ಅವರ ನಿಯಮಗಳ ಪ್ರಕಾರ ಅವರು ಮಾಡಿದ 'ಆ' ಕೃತ್ಯ ನೂರಕ್ಕೆ ನೂರರಷ್ಟು ಸರಿ!
ಭಾವ ಪೀಡಕರ ಬಾಲ್ಯದ ಬಗ್ಗೆ ಹೇಳುವುದಿದ್ದರೆ ಇವರ ಹೆತ್ತವರಲ್ಲಿ ಒಬ್ಬರು ಭಾವ ಪೀಡಕರಾಗಿದ್ದು ಇನ್ನೊಬ್ಬರು ಬಹಳ ಸಾತ್ವಿಕ ಸ್ವಭಾವದವರಾಗಿರುತ್ತಾರೆ. ಅವರು ತಮ್ಮ ಸಂಗಾತಿಯನ್ನು ಮಾತ್ರವಲ್ಲದೆ ತಾಯಿಯನ್ನು, ಸಹೋದರಿಯನ್ನು ಕೂಡಾ ಅತ್ಯಂತ ನೀಚ ಮಾತುಗಳಿಂದ ನಿಂದಿಸುವುದು, ಹೊಡೆಯುವುದು ಮಾಡಿರುತ್ತಾರೆ. ಮನೆಯಲ್ಲಿನ ಪ್ರತಿ ಸಮಸ್ಯೆಯೂ ಹಿಂಸೆಯ ಮೂಲಕವೇ ಪರಿಹಾರ ಕಂಡುಕೊಳ್ಳುವುದನ್ನು ನೋಡುತ್ತಾ ಬೆಳೆಯುವ ಮಗುವಿಗೆ ಜೀವನವೆಂದರೆ ಹಿಂಸೆ ಎನ್ನುವಂತಾಗುತ್ತೆ. ಸಾಮಾನ್ಯ ಮನುಷ್ಯರಿಗೆ ನಗು, ಮಾತು, ಕಷ್ಟ ಸುಖ ಹಂಚಿಕೊಳ್ಳುವಿಕೆ ಹೇಗೆ ಇಷ್ಟವಾಗುತ್ತೋ ಹಾಗೆ ಇವರು ಬಿರುಸಿನ ವಾದ, ತಾರಕ ಸ್ವರದಲ್ಲಿ ಕಿರುಚಿ ಜಗಳಾಡುವುದನ್ನು ತುಂಬಾ ಇಷ್ಟ ಪಡುತ್ತಾರೆ.  ಇವರು ಪಕ್ಕಾ ಸುಳ್ಳುಗಾರರು. ವಿಷಯ ಹೇಗೇ ಸಂಭವಿಸಿರಲಿ ಅದನ್ನು ತನಗೆ ಸರಿಕಂಡಂತೆ ತಿರುಚಿ ಸುಂದರವಾಗಿ ಕಥೆ ಕಟ್ಟಿ ಹೇಳುವುದರಲ್ಲಿ ಇವರು ಪ್ರವೀಣರು. ಮುಂದೆಂದಾದರೂ ಅದು ಸುಳ್ಳು ಎಂದು ಗೊತ್ತಾದರೆ ತಾನು ಹಾಗೆ ಹೇಳಿಯೇ ಇಲ್ಲ ಎಂದು ಸಾಧಿಸಿ ತಮ್ಮ ಸಿಟ್ಟಿನ ಪ್ರದರ್ಶನದಿಂದ ಉಳಿದವರನ್ನು ಸುಮ್ಮನಿರಿಸುತ್ತಾರೆ. ಇವರಿಗೆ ಅನೈತಿಕ ಸಂಬಂಧ ಇದೆಯೆಂದಾದರೆ ಕೊನೆಯವರೆಗೂ ಅದರ ಗೌಪ್ಯತೆಯನ್ನು ಕಾಯ್ದುಕೊಳ್ಳುತ್ತಾರೆ. ಇವರು ಪ್ರಾಣಿಗಳನ್ನು ದ್ವೇಷಿಸುತ್ತಾರೆ. ಸಾಕುಪ್ರಾಣಿಗಳು ಮನೆಯಲ್ಲಿರುವುದನ್ನು ಸಹಿಸುವುದಿಲ್ಲ. ಪುಟ್ಟ ಮಕ್ಕಳನ್ನೂ ಇವರು ಇಷ್ಟಪಡುವುದಿಲ್ಲ. 
ಇಷ್ಟೆಲ್ಲಾ ಓದಿದ ಮೇಲೆ ಇಂತಹ ವ್ಯಕ್ತಿಗಳು ಎಲ್ಲೋ ನೂರಕ್ಕೆ ಒಬ್ಬರೋ ಇಬ್ಬರೋ.....,  ಅದೂ ಕುಡುಕರು,ಡ್ರಗ್ಸ್ ತಗೊಳ್ಳುವವರು, ಸ್ಲಂಗಳಲ್ಲಿ ವಾಸಿಸುವವರು, ಓದು ಬರಹ ತಿಳಿಯದವರು....  ಇಂತಹವರೇ ಹೀಗೆ ಆಗಿರಲು ಸಾಧ್ಯ ಎಂದು ನೀವು ಭಾವಿಸಿದ್ದರೆ ಅದು ಶುದ್ಧ ತಪ್ಪು. ಇಂತಹವರು ನಮ್ಮ ನಿಮ್ಮ ನಡುವೆಯೇ ಇದ್ದಾರೆ. ಇವರು ಅತ್ಯಂತ ಸುಶಿಕ್ಷಿತರೂ ಹೌದು, ಸಮಾಜದಲ್ಲಿ ಪ್ರತಿಷ್ಟಿತ ಹುದ್ದೆಯನ್ನು ಅಲಂಕರಿಸಿಯೂ ಇರುತ್ತಾರೆ. ಯಾವುದೇ ಕಾರಣಕ್ಕೂ ಇವರು ತಮ್ಮ ನಿಜ ಬಣ್ಣವನ್ನು ಸಮಾಜದೆದುರು ಬಹಿರಂಗಪಡಿಸುವುದೇ ಇಲ್ಲ. ಸಾಲದುದಕ್ಕೆ ಎಲ್ಲಿ ಯಾರ ಮೇಲೆ ಎಂತಹ ಶೋಷಣೆಯೇ ಆಗಿರಲಿ ಅದನ್ನು ಖಂಡಿಸುವಲ್ಲಿ ಇವರೇ ಮೊದಲಿಗರಾಗಿರುತ್ತಾರೆ! ನಾನು ಕೆಲವು ದಿನಗಳ ಹಿಂದೆ ಒಂದು ಲೇಖನವನ್ನು ಓದಿದ್ದೆ, ಓರ್ವ ಮಹಿಳಾ I.G.P. ಮನೋವೈದ್ಯರಲ್ಲಿಗೆ ಹೋಗಿದ್ದರಂತೆ.ಅವರ ಮನೋಕ್ಲೇಶ ಏನು ಗೊತ್ತಾ? ಆಕೆಯ ಗಂಡ (ಅವರೂ ಓರ್ವ I.G.P) ಮನೆಗೆ ಬರುವ ಹೊತ್ತಿಗೆ ಈ ಮಹಿಳೆ ಮನೆಯಲ್ಲಿರಲೇಬೇಕು. ಇಲ್ಲವಾದರೆ ಆಕೆಯನ್ನು ವಿವಸ್ತ್ರಗೊಳಿಸಿ ಈತ ತನ್ನ ಸೊಂಟದಲ್ಲಿನ ಬೆಲ್ಟ್ ಬಿಚ್ಚಿ ತರಾಮಾರಾ ಹೊಡೆಯುತ್ತಿದ್ದ ( ಹೊಡೆತದ ಗುರುತು ಬೇರೆಯವರಿಗೆ ಕಾಣದಿರಲೆಂಬ ಉದ್ದೇಶದಿಂದ ಬಟ್ಟೆ ಮುಚ್ಚುವ ಜಾಗಕ್ಕೇ ಹೊಡೆಯುತ್ತಿದನಂತೆ), ಸಿಗರೇಟಿನಿಂದ ಸುಡುತ್ತಿದ್ದ.ಮನೋವೈದ್ಯರಿಗೆ ಈಕೆಯನ್ನು ಎಷ್ಟೋ ವರ್ಷಗಳಿಂದ ಪರಿಚಯವಿತ್ತಂತೆ.ಈಕೆ ತನ್ನ ಶರೀರದ ಮೇಲಿನ ಗುರುತುಗಳನ್ನು ತೋರಿಸುತ್ತಾ ಗಂಡ ತನ್ನ ಮೇಲೆ ನಡೆಸುವ ಅನಾಚಾರದ ಬಗ್ಗೆ ಹೇಳುತ್ತಿದ್ದರೆ ಮನೋವೈದ್ಯ ಬಾಯಿ ಕಳೆದುಕೊಂಡವನಂತೆ ಬೆಪ್ಪು ಹಿಡಿದು ಕುಳಿತಿದ್ದನಂತೆ.ಯಾಕೆ ಗೊತ್ತಾ? ಆಕೆಯ ಗಂಡ,ದಕ್ಷ ಪೋಲೀಸು ಅಧಿಕಾರಿ, ಸಹೋದ್ಯೋಗಿಗಳ ಕಷ್ಟಕ್ಕೆ ಸ್ಪಂದಿಸುವ ಸಹೃದಯಿ ಈ ಮನೋವೈದ್ಯನ ಆತ್ಮೀಯ ಸ್ನೇಹಿತ! ಎರಡೂ ಕುಟುಂಬಗಳು ಎಷ್ಟೋ ಸಲ ಜೊತೆಯಲ್ಲಿ ರಜಾದಿನಗಳನ್ನು ಕಳೆದಿದ್ದೂ ಇತ್ತು.ಗಂಡ ಹೆಂಡತಿ ಇಬ್ಬರೂ ಉನ್ನತ ಪೋಲಿಸ್ ಅಧಿಕಾರಿಗಳಾಗಿದ್ದೂ ಎಷ್ಟು ಅನ್ಯೋನ್ಯತೆಯಲ್ಲಿದ್ದಾರೆ ಎಂಬಂತಿತ್ತು ಅವರ ಜೋಡಿ. ಆದರೆ ನಿಜ ಬಣ್ಣ ?ಈ ಲೇಖನದ ಮೊದಲಲ್ಲಿ ನಾನು ಗೋಮುಖ ವ್ಯಾಘ್ರ ಎನ್ನುವ ಶಬ್ಧವನ್ನು ಬಳಸಿದ್ದೆ. ಅದೇಕೆ ಎಂದು ಈಗ ಅರ್ಥವಾಗಿರಬಹುದಲ್ಲವೇ?
ಮೇಲೆ ಉಲ್ಲೇಖ ಮಾಡಿದ ಹಲವಾರು ಋಣಾತ್ಮಕ ಗುಣಗಳಲ್ಲಿ ಒಂದೋ ಎರಡೋ ಗುಣಗಳು ಇಲ್ಲದ ಮನುಜರೇ ಇರಲಾರರು. ಆದರೆ ಉಳಿದೆಲ್ಲಾ ಧನಾತ್ಮಕ ಗುಣಗಳ ಪ್ರಕಾಶದೆದುರು ಅವು ಮಂಕು ಬಡಿದು ಹೋಗಿರುತ್ತೆ. ಆದುದರಿಂದ ದಂಪತಿಗಳು ಪರಸ್ಪರರ weak point ಗಳನ್ನು ಅರ್ಥೈಸಿಕೊಂಡು ಬಾಳಲು ಸಾಧ್ಯವಾಗುತ್ತೆ. ಮೇಲೆ ವಿವರಿಸಿದಂತಹ ವ್ಯಕ್ತಿಗಳನ್ನು ಮನೋರೋಗಿಗಳೆನ್ನಲೇಬೇಕಾಗುತ್ತೆ. ಈ ಮನೂರೋಗಿಗಳ ಸೃಷ್ಟಿ ಹೇಗಾಗುತ್ತೆ ಎಂಬುದರ ಬಗ್ಗೆಯೂ ಈ
ಲೇಖನದಲ್ಲಿ ವಿವರಿಸಿರುವುದನ್ನು ನೀವು ಗಮನಿಸಿರಬಹುದಲ್ಲವೇ?ಮಕ್ಕಳನ್ನು ಜನಾನುರಾಗಿಗಳಾಗಿ ಬೆಳೆಸುವಲ್ಲಿ ಅಪ್ಪ ಅಮ್ಮಂದಿರ ಜವಾಬ್ದಾರಿ ಎಷ್ಟು ಗುರುತರವಾದುದು ಎಂದರಿವಾದಾಗ ಒಂದು ಕ್ಷಣ ಹಿಂದೆ ತಿರುಗಿ ನಾವು ಮಕ್ಕಳೊಡನೆ  ನಡೆದು ಬಂದ ದಾರಿ ಸರಿಯಾಗಿದೆಯೇ ಎಂದು ನೋಡಬೇಕೆನಿಸುತ್ತೆ ಅಲ್ಲವೇ?
                                                                                                    (ಮುಗಿಯಿತು) 

         

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ