ತನ್ನ co-sister ಹೇಳಿದ ರೆಸಿಪಿಯನ್ನು ಮಾಡಿ ಅದನ್ನು ತಾನು ಬಹಳ ಇಷ್ಟ ಪಟ್ಟದ್ದಾಗಿ ನನ್ನ ಮಗಳು ನಿನ್ನೆ ನನ್ನೊಡನೆ ಹೇಳಿದಾಗ ನಾನೂ ಅದನ್ನು ಆಸಕ್ತಿಯಿಂದ ಮಾಡಿ ನೋಡಿದೆ. ಅದುವೇ ಈ ಗೊಜ್ಜು. ನಿಮಗೂ ಬಹಳ ಇಷ್ಟವಾಗಬಹುದು. ಬದನೆಯಲ್ಲಿ ಈ ತರದ ಮಸಾಲೆ ಗೊಜ್ಜು ನಮ್ಮ ದಕ್ಷಿಣ ಭಾರತದಲ್ಲಿ ಮಾಡುವುದು ಬಹಳ ಅಪರೂಪ. ಮಾಡಿ ನೋಡಿ ಸಾಮಾಗ್ರಿಗಳು:-
ಗುಳ್ಳ ಬದನೆ ನಾಲ್ಕು
ಟೊಮೇಟೊ(ಮಧ್ಯಮ ಗಾತ್ರದ್ದು) ಮೂರು
ಈರುಳ್ಳಿ ಒಂದು
ಬೆಳ್ಳುಳ್ಳಿ ಮೂರು ಎಸಳು
ಶುಂಟಿ ಒಂದಿಂಚು
ಮೆಣಸಿನ ಕಾಯಿ ಒಂದು
ಹುರಿದ ನೆಲಕಡಲೆ ( ಶೇಂಗಾ ಬೀಜ) ಎರಡು ಚಮಚ
ತೆಂಗಿನ ತುರಿ ನಾಲ್ಕು ಚಮಚ.
ಉಪ್ಪು ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಎಣ್ಣೆ ಅಥವಾ ತುಪ್ಪ, ಕೆಂಪುಮೆಣಸು,ಜೀರಿಗೆ,ಸಾಸಿವೆ. ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು.
ವಿಧಾನ:- ಮೊದಲು ಬದನೆಯನ್ನು ಶುಚಿಗೊಳಿಸಿ. ಕೆಂಡದಲ್ಲಿ ಯಾ ಗ್ಯಾಸಿನ ಮೇಲೆ ಇಟ್ಟು ಬೇಯಿಸಿ (ಇದೇ ಬ್ಲಾಗಲ್ಲಿ ' ಬದನೆ ಗೊಜ್ಜು' ಎಂಬ ಹಳೆ ಪೋಸ್ಟನ್ನು ನೋಡಿ. ಅದರಲ್ಲಿ ಬದನೆಯನ್ನು ಗ್ಯಾಸಿನ ಮೇಲಿಟ್ಟು ಸುಡುವ ರೀತಿಯನ್ನು ಹೇಳಲಾಗಿದೆ. ಅದೇ ವಿಧಾನವನ್ನು ಅನುಸರಿಸಿ). ಹಿಚುಕಿದ ತಿರುಳನ್ನು ಪಕ್ಕಕ್ಕಿಡಿ. ಕಾಯಿ ತುರಿ ಮತ್ತು ಹುರಿದ ಶೇಂಗಾ ಬೀಜವನ್ನು ಒಟ್ಟಿಗೆ ಹಾಕಿ ನುಣ್ಣಗೆ ಅರೆದು ಪ್ರತ್ಯೇಕವಾಗಿಡಿ. ಎರಡು ಟೊಮೇಟೊ, ಅರ್ಧ ಈರುಳ್ಳಿ, ಬೆಳ್ಳುಳ್ಳಿ, ಹಸಿರು ಮೆಣಸು, ಶುಂಟಿಗಳನ್ನೂ ನುಣ್ಣಗೆ ಅರೆದಿಡಿ. ಉಳಿದ ಈರುಳ್ಳಿ ಮತ್ತು ಒಂದು ಟೊಮೇಟೊವನ್ನು ಹೆಚ್ಚಿಕೊಳ್ಳಿ. ಸೊಪ್ಪುಗಳನ್ನೂ ಹೆಚ್ಚಿಡಿ. ಈಗ ಬಾಣಲೆ ಬಿಸಿಗಿಡಿ. ಒಗ್ಗರಣೆ ಹಾಕಿ. ಹೆಚ್ಚಿಟ್ಟ ಈರುಳ್ಳಿ ಮತ್ತು ಟೊಮೇಟೊವನ್ನು ಚೆನ್ನಾಗಿ ಫ್ರೈ ಮಾಡಿ. ಅದು ಒಂದೇ ಮುದ್ದೆಯಾಗುವಂತಿರಲಿ. ಅರೆದಿಟ್ಟ ಟೊಮೇಟೊ ಮಿಶ್ರಣವನ್ನು ಸೇರಿಸಿ. ಈರುಳ್ಳಿ ಬೆಳ್ಳುಳ್ಳಿಗಳ ಹಸಿವಾಸನೆ ಹೋಗುವಷ್ಟು ಕುದಿಸಿ(ಈಗ ಬೇಕಿದ್ದರೆ ಸ್ವಲ್ಪ ನೀರು ಹಾಕಿಕೊಳ್ಳಬಹುದು). ಹಿಚುಕಿ ಇಟ್ಟ ಬದನೆಯನ್ನು ಚೆನ್ನಾಗಿ ಕಲಸಿ ಹಾಕಿ ಕುದಿ ಬರುವಾಗ ಶೇಂಗಾ ಮಿಶ್ರಣವನ್ನು ಸೇರಿಸಿ ಉಪ್ಪು ಹಾಕಿ ಮತ್ತೆ ಕುದಿಯಲು ಬಿಡಿ. ಬೆಂಕಿಯಿಂದ ಇಳಿಸಿ ಹೆಚ್ಚಿಟ್ಟ ಸೊಪ್ಪುಗಳನ್ನು ಮೇಲಿನಿಂದ ಉದುರಿಸಿ. ರೊಟ್ಟಿ, ಪೂರಿ. ಚಪಾತಿಯೊಂದಿಗೆ ನೆಂಜಲು ಕೊಡಿ.

ರುಚಿಕರ ಬದನೆ ಗೊಜ್ಜು ಬಹುಷಃ ಶೇಂಗಾ ಪುಡಿ ಯಿಂದ ಇದಕ್ಕೆ ವಿಶಿಷ್ಟ ರುಚಿ ಬರಬಹುದು
ಪ್ರತ್ಯುತ್ತರಅಳಿಸಿ