ಭಾನುವಾರ, ಮಾರ್ಚ್ 29, 2015

ಬಿಳಿ ಕಡ್ಲೆ ಗಸಿ (ಚನ್ನ ಕರಿ)

ಬೆಳಗ್ಗಿನ ತಿಂಡಿ ಚಪಾತಿ ಮಾಡೋಣ ಎಂದು ನಿರ್ಧರಿಸಿದ್ದೆ. ಆದರೆ  ನೆಂಜಿಕೊಳ್ಳಲು ಪದಾರ್ಥವೇನು ಮಾಡಲಿ ಎಂದು ತಲೆಕೆಡಿಸಿಕೊಳ್ಳುತ್ತಿದ್ದೆ. ಊರಿಡೀ ಹರತಾಳದ ಕಾರಣಕ್ಕೆ ಬಂದ್ ಆಗಿತ್ತು.ಮಾರ್ಕೆಟ್ಟಿಗೆ ಹೋಗುವ ಹಾಗಿರಲಿಲ್ಲ.  ಫ್ರಿಜ್ಜಲ್ಲಿ ತರಕಾರಿ ಖಾಲಿಯಾಗಿತ್ತು. ನೆನೆಸಿದ ಬಿಳಿಕಡಲೆ, ಒಂದಿಷ್ಟು ಟೊಮೇಟೊ, ಚಿಕ್ಕ ತುಂಡು ಹೂಕೋಸು, ಒಂದು ಆಲೂಗಡ್ಡೆ ಮಾತ್ರ ಇತ್ತು. ಇದ್ದುದನ್ನುಸೇರಿಸಿ ಮಾಡಿದ್ದೇ ಪಂಚಾಮೃತವಾಗಿತ್ತು. ನೀವೂ ಮಾಡಿ ನೋಡಿ. 
ಸಾಮಾಗ್ರಿಗಳು :- 
೧. ನೆನೆಸಿ ಬೇಯಿಸಿದ ಬಿಳಿ ಕಡ್ಲೆ ಒಂದು ಕಪ್ 
೨. ಎರಡು ದೊಡ್ಡ ಹಣ್ಣು ಟೊಮೇಟೊ 
೩. ಹೂಕೋಸು, ಆಲೂಗಡ್ಡೆ ಹೋಳುಗಳು ಎರಡೂ ಸೇರಿ ಒಂದು ಕಪ್ 
೪. ಗರಂ ಮಸಾಲೆ ಪುಡಿ ಕಾಲು ಚಮಚ 
೫. ಟೊಮೇಟೊ ಹಾಟ್ & ಸ್ವೀಟ್ ಸಾಸ್ ಒಂದು ದೊಡ್ಡ ಚಮಚ 
೬. ಬೆಣ್ಣೆ ಎರಡು ಚಮಚ 
೭.  ಉಪ್ಪು, ಬೆಲ್ಲ ರುಚಿಗೆ ತಕ್ಕಷ್ಟು
೮. ಒಗ್ಗರಣೆಗೆ ಬೇಕಾದ ಸಾಸಿವೆ, ಜೀರಿಗೆ, ಕೆಂಪು ಮೆಣಸು, ಎಣ್ಣೆ. 
ವಿಧಾನ:-  
 ಟೊಮೇಟೊವನ್ನು ಹಸಿಯಾಗಿಯೇ ಮಿಕ್ಸಿಗೆ ಹಾಕಿ ನುಣ್ಣನೆ ಪೇಸ್ಟ್ ಮಾಡಿಕೊಳ್ಳಿ. ಕಡಲೆಯನ್ನು ನೆನೆಸಿ ಬೇಯಿಸಿಟ್ಟುಕೊಳ್ಳಿ. ಬಾಣಲೆಯನ್ನು ಬಿಸಿಗಿಟ್ಟು ಒಗ್ಗರಣೆ ಮಾಡಿಕೊಳ್ಳಿ.ಹೆಚ್ಚಿಟ್ಟ ತರಕಾರಿ ಹೋಳುಗಳನ್ನು ಹಾಕಿ ಬೇಯಲು ಬೇಕಾದಷ್ಟೇ ನೀರುಹಾಕಿ. ಬೆಂದು ನೀರು ಆರಿದ ಮೇಲೆ ಅರೆದಿಟ್ಟ ಟೊಮೇಟೊ ಪೇಸ್ಟನ್ನು ಸೇರಿಸಿ. ಉಪ್ಪು ಹಾಕಿ. ಟೊಮೇಟೊದ ಹುಳಿರುಚಿ ಅಡಗುವಷ್ಟು ಬೆಲ್ಲ ಹಾಕಿ, ಸಾಸ್ ಸೇರಿಸಿ, ಗರಂ
ಮಸಾಲ ಸಿಂಪಡಿಸಿ. ಚೆನ್ನಾಗಿ ಕುದಿಸಿ. ಬೆಂಕಿಯಿಂದ ಇಳಿಸಿ ಬೆಣ್ಣೆ ಹಾಕಿ. ಗಟ್ಟಿ ಬೆಣ್ಣೆ ನೀರಾಗುತ್ತಾ.....  ನೀರಾಗುತ್ತಾ.... ಇದರ ಸುವಾಸನೆಗೆ ನಿಮ್ಮ ಬಾಯಲ್ಲೂ ನೀರೂರತೊಡಗುತ್ತೆ!  just try it....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ