ಕುಂಕುಮ
ತಮ್ಮ ಜೀವನವೆಂದರೆ ಶಿಸ್ತು, ಸಂಯಮ ಪ್ರೀತಿ ಪ್ರೇಮಗಳ ಹದಪಾಕ. ಒಂದು ಹೆಚ್ಚಿಲ್ಲ, ಒಂದು ಕಡಿಮೆಯೂ ಇಲ್ಲ. ಮಗಳೂ ತಮ್ಮ ಪಡಿಯಚ್ಚು ಎಂದೇ ಇಷ್ಟು ವರ್ಷ ಅಂದಾಜಿಸಿದ್ದು ತಪ್ಪಾಗಿ ಹೋಯ್ತೇ? ಅಲ್ಲದಿದ್ದರೆ ಇವಳಿಗೆಮ್ತಹ ಮೂರ್ಖ ಹಠ? ಯಾವ ಗಂಡನ್ನೂ ಒಪ್ತಾ ಇಲ್ಲ. ಲವ್ವು... ಗಿವ್ವು... ಯಾವುದೂ ಇಲ್ಲ ಅಂತಾಳೆ. ತಮ್ಮ ಬುದ್ದಿ ಎಲ್ಲಾ ಖರ್ಚು ಮಾಡಿ ಆಯಿತು. ಹಿರಿಯರಿಂದ ಹೇಳಿಸಿಯೂ ಆಯಿತು. ಊಹೂಂ....., ಎಲ್ಲಾ ನಿಷ್ಪ್ರಯೋಜಕ. ಮೊನ್ನೆ ಮೊನ್ನೆ ಪ್ರಪೋಸಲ್ ಒಂದು ಬಂತು. ಜಾತಕ ಹೊಂದುತ್ತೆ, ಮನೆತನ ಒಪ್ಪಿಗೆ ಆಗಿದೆ, ಗಂಡಿನ ವೃತ್ತಿ, ಗುಣ ನಡತೆ ಎಲ್ಲವೂ ಒ.ಕೆ. ಆಗಿ ಈ ದಿನ ಹುಡುಗಿ ನೋಡಲೂ ಬರುವವರಿದ್ದಾರೆ.
ಇವಳೋ ಇವಳ ವೇಷವೋ, ದೇವರಿಗೇ ಪ್ರೀತಿ! ಹಣೆಯಲ್ಲಿ ಬೊಟ್ಟಿಲ್ಲ,ಕಿವಿ, ಕತ್ತು,ಕೈ ಬೋಳು.... ಬೋಳು! "ಅವನೇನು ನನ್ನನ್ನು ನೋಡೂಕೆ ಬರ್ತಿದ್ದಾನೋ ನನ್ನ ಬೊಟ್ಟು ಆಭರಣಗಳನ್ನು ನೋಡೋಕೆ ಬರ್ತಿದ್ದಾನೋ?" ಎಂಬ ಕೊಂಕು ಪ್ರಶ್ನೆ ಬೇರೆ.
ಅಯ್ಯೋ... ಅವರು ಬಂದೇ ಬಿಟ್ಟರು. ಕಾಫಿ ತಿಂಡಿ, ಮಾತುಕತೆ ಎಲ್ಲವೂ ಸುರಳೀತ.... ಇಂತಹವರು ಬೀಗರಾಗಿ ಸಿಗಲೂ ಪುಣ್ಯ ಮಾಡಿರಬೇಕು. ಇವಳ ಯೋಗ್ಯತೆಗಿಷ್ಟು ಬೆಂಕಿ ಹಾಕ.... ಛೆ.... ಇವರು ಹೊರಡ್ತೀವಿ ಅಂತಾರಲ್ಲ? ನೆಂಟರು ಹೊರಡುವಾಗ ಕಳುಹಿಸಿಕೊಡಬೇಕೆನ್ನುವ ಜ್ಞಾನವಾದರೂ ಬೇಡವೇ ಇವಳಿಗೆ?
ಅಂದ ಹಾಗೆ ಇವಳೆಲ್ಲಿ? ಎಲ್ಲಿ ಇವಳು?ರೂಮಿಗೆ ಹೋಗಿ ನೋಡಿದರೆ.... ಮಗಳು ಕುಂಕುಮದ ಕರಂಡಕವನ್ನು ಬಲ ಕೈಯ್ಯಲ್ಲಿ ಹಿಡಿದು ಎದಕೈಯ್ಯ ತೋರುಬೆರಳಿಂದ ಹಣೆಗೆ ದುಂಡಗಿನ ಚಿತ್ತಾರವನ್ನು ಬಿಡಿಸುತ್ತಿದ್ದಾಳೆ! ಕನ್ನಡಿ ಮೂಲಕವೇ ತನ್ನೆಡೆಗೆ ನೋಡುತ್ತಾ ಕಿಸಿಕಿಸಿ ನಗುತ್ತಾ ಅವಳು ಹೇಳುತ್ತಿರುವುದಾದರೂ ಏನು? "ಅಮ್ಮಾ..., ಅಭಿ ಹೇಳಿದ, ನನ್ನ ಅಗಲ ಹಣೆಗೆ ಕುಂಕುಮ ಬೊಟ್ಟು ತುಂಬಾ ಸೂಟ್ ಆಗುತ್ತಂತೆ.... ನಾವು ಸೆಂಡ್ ಮಾಡಿದ ಆ ನನ್ನ ಫೋಟೋ ಅವರಿಗೆಲ್ಲಾ ತುಂಬಾ ಇಷ್ಟವಾಯ್ತಂತೆ...."
(ಈ ವರ್ಷದ ತರಂಗ ಯುಗಾದಿ ವಿಶೇಷಾಂಕದಲ್ಲಿ ಪ್ರಕಟಗೊಂಡ ಕಥೆ)
ಬಾಂಧವ್ಯ
"ಅಮ್ಮಾ..., ಇವ್ಳು ನನ್ನ ಫ್ರೆಂಡ್..., ಚೇತನಾ...."
"ಚೇತೂ...,ಇವ್ರು ನನ್ನಮ್ಮ..."
"ನಮಸ್ತೆ ಆಂಟಿ..."
"ನಮಸ್ತೆ..."
ಪರಸ್ಪರ ಸೌಹಾರ್ದದ ಮಾತುಕತೆಗಳೆಲ್ಲ ಮುಗಿದು ಹೊರಡುವ ಸಮಯ.
"ಚೇತನಾ...,ನಮ್ಮ ಸ್ನೇಹಾ ಜೊತೆಯಲ್ಲಿ ಆಗಾಗ ಮನೆಗೆ ಬರ್ತಾ ಇರು ...."
"ಸರಿ ಆಂಟಿ..."
"ಚೇತನಾ..., ಅಂದ ಹಾಗೆ ಒಂದ್ವಿಷಯ ಹೇಳೋದು ಮರೆತ್ಬಿಟ್ಟೆ, ಈ ಡ್ರೆಸ್ಸು ನಿನ್ಗೆ ತುಂಬಾ ಸೂಟ್ ಆಗುತ್ತೆ. ಮುದ್ದಾಗಿ ಕಾಣ್ತೀಯಾ..."
ಚೇತನಾ ಕಣ್ಣರಳಿಸಿ ತುಟಿಯರಳಿಸಿ "ಥೆಂಕ್ಯೂ ಸೋ ಮಚ್ ಆಂಟಿ...., ನಾನು ಬರ್ಲಾ? ಸ್ನೇಹಾ..., ಬಾಯ್....ನಾಳೆ ಸಾಧ್ಯವಾದರೆ ನಿಮ್ಮನೆಗೆ ಬರ್ತೀನಿ ಆಯ್ತಾ....? "
"ಖಂಡಿತಾ ಬಾ ಚೇತೂ..."
(ಮನೆಗೆ ಮರಳುತ್ತಾ) "ಅಮ್ಮಾ..., ನಿಂಗೆ ನಿಜವಾಗ್ಲೂ ಅವಳ ಡ್ರೆಸ್ ಇಷ್ಟವಾಯ್ತಾ...?"
"ನನ್ನ ಇಷ್ಟ, ಅಯಿಷ್ಟ ಕಟ್ಟಿಕೊಂಡು ಅವಳಿಗೇನಾಗಬೇಕಾಗಿದೆ ಹೇಳು? ಮೊದಲ ಭೇಟಿಯ ನೆನಪು ಮಧುರವಾಗಿರಲಿ ಎಂದು ಎರಡು ಒಳ್ಳೆಯ ಮಾತುಗಳನ್ನು ಹೇಳಿದೆ ಅಷ್ಟೇ..., ನನ್ನ ಮಾತುಗಳು ಅವಳ ಮೇಲೆ ಬೀರಿದ ಪರಿಣಾಮವನ್ನ ನೀನೇ ನೋಡಿದೆ ಅಲ್ಲವೇ? ಅವಳ ಹೃದಯಕ್ಕೆ ಮೆತ್ತಿದ ಆ ಸಿಹಿ ಲೇಪ ಮುಂದಿನ ನಮ್ಮ ಭೇಟಿಯನ್ನು ಇನ್ನಷ್ಟು ಸವಿಯಾಗಿಸುತ್ತೆ. ನಗು, ಮಾತುಗಳು ಸಂಕ್ರಾಮಿಕವಾಗಲು ಇಷ್ಟು ಸಾಕಲ್ಲವೇ? ಇದನ್ನೇ ಅಲ್ಲವೇ ಬಾಂಧವ್ಯ ಅನ್ನೋದು?
ಇಲ್ಲಿದ್ದು ಹೋಗುವಾಗ ಬೇರೆನೂ ಅಲ್ಲದಿದ್ದರೂ ನಮ್ಮ ಬಗ್ಗೆ ಮುದ ನೀಡುವ ನೆನಪುಗಳನ್ನಾದರೂ ಬಿಟ್ಟು ಹೋಗಲು ದುಡ್ಡು ಖರ್ಚೇನೂ ಮಾಡಬೇಕಾಗಿಲ್ಲವಲ್ಲಾ? "
'ಈ ಅಮ್ಮನಿಂದ ಕಲಿಯುವುದು ಬಹಳಷ್ಟಿವೆ' ಅಂದುಕೊಂಡಳು ಮಗಳು.
ದಾಖಲೆ
ಡಾಕ್ಟರು: ( ರೋಗಿಯೊಡನೆ ) "ಹೆಸರೇನಮ್ಮಾ?"
ರೋಗಿ : "ಸುಚರಿತ"
ಡಾ: "ಏನು ಬಂದಿದ್ದು?"
ರೋಗಿ ತನ್ನ ಕಾಯಿಲೆಯನ್ನು ವಿವರಿಸಿದಳು. ಡಾಕ್ಟರು ಪ್ರಿಸ್ಕ್ರಿಪ್ಶನ್ ಬರೆಯುತ್ತಾ
"ವಯಸ್ಸೆಷ್ಟಮ್ಮಾ?"
ರೋಗಿ: "ನಲುವತ್ತೈದು"
ಡಾಕ್ಟರು ಔಷಧಿಗಳನ್ನು ಹೇಗೆ ತೆಗೆದುಕೊಳ್ಳಬೇಕೆಂಬುದನ್ನು ಹೇಳುತ್ತಿರುವಾಗ ಮಧ್ಯದಲ್ಲೇ ರೋಗಿ ಕೇಳುತ್ತಾಳೆ,
"ಡಾಕ್ಟ್ರೆ...., ಆ ಮಾತ್ರೆ ದಿವಸಕ್ಕೆ ಎರಡೇ ಸಾಕೇ?"
"ಹೌದು, ಸಂಶಯ ಯಾಕಮ್ಮಾ?"
"ಅಲ್ಲಾ..., ತಪ್ಪು ತಿಳೀಬೇಡಿ ಡಾಕ್ಟ್ರೆ..., ಈ ಸರಕಾರೀ ಆಸ್ಪತ್ರೆಗಳಲ್ಲಿ ಸ್ಟ್ರಾಂಗ್ ಔಷಧಿಗಳನ್ನು ಕೊಡೊಲ್ವಂತೆ...? ಅದಕ್ಕಾಗಿ ನಾನು ನನ್ನ ವಯಸ್ಸನ್ನ ಸ್ವಲ್ಪ ಹೆಚ್ಚು ಮಾಡಿ ಹೇಳಿದೆ. ಹಾಗಾದ್ರೂ ಡೋಸ್ ಹೆಚ್ಚು ಮಾಡಿ ಕೊಡ್ತೀರೇನೋ ಅಂದ್ಕೊಂಡೆ.... ಔಷಧಿ ಚೆನ್ನಾಗಿ ಪರಿಣಾಮ ಬೀರಲಿ ಎಂದು...."
ಡಾ:"ಏನು? ಏನಂದ್ರಿ..... ? ವಯಸ್ಸು ಜಾಸ್ತಿ ಮಾಡಿ ಹೇಳಿದ್ರಾ ...?ನಿಮ್ಮ ತಿಳುವಳಿಕೆ ತಪ್ಪಮ್ಮಾ, ಸ್ಟ್ರಾಂಗ್, ಮೈಲ್ಡ್ ಅಂತ ಅಲ್ಲಾ, ಯಾವ ರೋಗಕ್ಕೆ ಏನು ಕೊಡಬೇಕೋ ಅದನ್ನೇ ಕೊಡ್ತೀವಿ. ಆದರೂ ನಿಮ್ಮ ಐಡಿಯಕ್ಕೆ ಮೆಚ್ಚಿದೆ ..., ಅಂದ ಹಾಗೆ ನಿಮ್ಮ ಹೆಸರು ಸುಚರಿತ ಅಲ್ಲವೇ?"
ರೋ: "ಹೌದು, ಆಗಲೇ ಹೇಳಿದೆ ಆಲ್ವಾ ದಾಕ್ತ್ರೆ...?"
ಡಾ:"ಹೌದಹೌದು... ಗೊತ್ತು...,ಆದರೂ ಪುನ್ಹ ಖಚಿತಪಡಿಸಿಕೊಳ್ಳಲು ಕೇಳಿದೆ ಅಷ್ಟೇ..."
ರೋ:"ಯಾಕೆ ಡಾಕ್ಟ್ರೆ ?"
ಡಾ: "ಹೆಣ್ಣುಮಗಳೊಬ್ಬಳು ತನ್ನ ವಯಸ್ಸನ್ನ ಜಾಸ್ತಿ ಮಾಡಿ ಹೇಳಿದ್ದು ಬಹುಷಃ ಭೂತ ಭವಿಷ್ಯಗಳಲ್ಲಿ ಇರಲಾರವು. ಸೋ...,ನಿಮ್ಮ ಹೆಸರನ್ನ ಗಿನ್ನೆಸ್ ದಾಖಲೆಗೆ ಶಿಫಾರಸು ಮಾಡಬಹುದೇನೋ ಅಂದ್ಕೊಂಡೆ..."
baravadellaa tumbaa laayikaiddu sheelakka. ellaa odidde. aadare comment baravale tadavaatu.
ಪ್ರತ್ಯುತ್ತರಅಳಿಸಿ