ಮಂಗಳವಾರ, ಮೇ 5, 2015

ನೆಂಟರು o.k. ಆದರೆ ಹಿಗೇಕೆ...?

ಅದೊಂದು ಎರಡು ಬೆಡ್ ರೂಮುಗಳ ಅಪಾರ್ಟ್ಮೆಂಟ್. ಗಂಡ ಹೆಂಡತಿ ಉಷಾ ಉಮೇಶ್ ಎಂದಿಟ್ಟುಕೊಳ್ಳೋಣ. ಇಬ್ಬರೂ ಹೊರಗೆ ದುಡಿಯುವವರು. ಉಷಾ ದಿನಾಲೂ ಐವತ್ತು ಅರುವತ್ತು ಕಿ.ಮೀ. ಪ್ರಯಾಣಿಸಿ ಆಫೀಸು ತಲುಪಬೇಕು. ಬೆಳಗ್ಗೆ ಆರಕ್ಕೆ  ಹೊರಟರೆ ಅವಳು ಪುನಃ ಮನೆ ಮುಟ್ಟುವಾಗ ಮುಸ್ಸಂಜೆ ಏಳು ಘಂಟೆ. ಅಡುಗೆ, ಕಾಫಿ, ತಿಂಡಿ ಎಲ್ಲಾ ಹರೋಹರ. ಇಬ್ಬರೇ ಇದ್ದುದಕ್ಕೆ ಹೇಗೋ ನಡೆಯುತ್ತಿತ್ತು. ಇಂತಿಪ್ಪ ಮನೆಗೆ ದೂರದ  ಊರಿನಿಂದ ನೆಂಟರ ಆಗಮನವಾಯ್ತು.ತಾಯಿ ಮತ್ತು ಮಗ.ಮಗನಿಗೆ ಅದೇನೋ ಕ್ರ್ಯಾಶ್ ಕೋರ್ಸ್ ಅಂತೆ. ಹದಿನೈದು ದಿನಗಳ ಕಾಲ ಅವರ ಟಿಕಾಣಿ ಇವರ ಮನೆಯಲ್ಲೇ ಎಂಬ ವಿಷಯ ಅವರು ಬಂದ ಮೇಲೆಯೇ ಗೊತ್ತಾಗಿದ್ದು. ಉಷಾಳಿಗೆ ಎದೆ ದಸಕ್ ಎಂದರೂ ಹೇಳುವ ಹಾಗಿಲ್ಲ. ಹೇಗೋ ಸುಧಾರಿಸಿದರಾಯ್ತು ಎಂದುಕೊಂಡಳು (ಈ 'ಹೇಗೋ' ಎನ್ನುವುದು ಕಡೆಗೆ 'ಹೇಗೇಗೋ' ಅಯಿತೆನ್ನುವುದು ಕ್ಲೈಮ್ಯಾಕ್ಸ್).  ಇಷ್ಟು ದೊಡ್ಡ ಪಟ್ಟಣದಲ್ಲಿ ಪಿ.ಜಿ. ಸೇಫ್ ಅಲ್ಲವಂತೆ. ಹೋಟೆಲಲ್ಲಿ ನಿಂತರೆ ಸಮಾಜ ಅನುಮಾನದಿಂದ ನೋಡುತ್ತಂತೆ. ಸಾಲದುದಕ್ಕೆ ಉಮೇಶ ಲೀಲಾ( ಉಷಾಳ ಮನೆಗ ಬಂದ ಅತಿಥಿ)ಳ ಅತಿ ಹತ್ತಿರದ ಬಂಧು(ಆಕೆಯ ಗಂಡನ ತಂಗಿಯ ನಾದಿನಿಯ ಅತ್ತೆಯ ತಮ್ಮ) ವಂತೆ. ಆಕೆಯ ಗಂಡನ ತಂಗಿ ಹೇಳಿದ್ದಾರಂತೆ 'ಉಮೇಶ ನಮ್ಮ ಮಗನ ಹಾಗೇ, ನೀನು ಅಲ್ಲಿ ನಿಂತರೆ ನಮ್ಮ ಮನೆಯಲ್ಲಿ ನಿಂತ ಹಾಗೇ...'ಇತ್ಯಾದಿ ಇತ್ಯಾದಿ ಅಂತೆ ಕಂತೆಗಳ ಸಂತೆಯಲ್ಲಿ ಉಷಾ ಕಳೆದೇ ಹೋದಳು. ಉಮೇಶನಿಗೆ ಆಕೆಯ ಪರಿಚಯ ಚೆನ್ನಾಗಿತ್ತಾದರೂ  ಸಂಬಂಧಗಳ ಹಳಿಗಳನ್ನು ಜೋಡಿಸಲಸಮರ್ಥನಾಗಿ ಅರಿಸ್ಟಾಟಲನ ತತ್ವಗಳೇ ಇದಕ್ಕಿಂತ ಸರಳ ಎಂದುಕೊಂಡು ತಲೆಕೊಡವಿಬಿಟ್ಟ. ಗಂಡ ತಲೆ ಕೊಡವಿಕೊಂಡುಬಿಟ್ಟ ಎಂದು ಹೆಂಡತಿಯಾದವಳಿಗೆ ಕೈಕೊಡವಿಕೊಳ್ಳಲು ಸಾಧ್ಯವೇ? ಎಷ್ಟಾದರೂ 'ಅತಿಥಿ ದೇವೋ ಭವ'. ಕೊನೆಗೆ ಈ ಅತಿಥಿಯೇ 'ದೆವ್ವೋ ಭವ' ಆದದ್ದು ಮಾತ್ರ ಟ್ರಾಜಿಡಿ.
ಪ್ರಿಯ ಓದುಗ ಮಿತ್ರರೇ.., ಈಗ ನೀವು ' ಯಾವುದೋ ಲೂಸ್ ಪಾರ್ಟಿ ಬಂತೆಂದು ಇವರು ಒಳಕ್ಕೆ ಬಿಡೋದಾ..., ಅದೂ ಇಂತಹ ಕಾಲದಲ್ಲಿ...' ಎಂದುಕೊಂಡಿರಾ? ನೀವು ತಪ್ಪಿದಿರಿ. ಉಮೇಶನ ಸಾಕ್ಷಾತ್ ಅಮ್ಮನೇ ಕರೆ ಮಾಡಿ ಲೀಲಾ ಬಗ್ಗೆ  ನೂರಕ್ಕೆ ನೂರು ಅಂಕ ಕೊಟ್ಟಿದ್ದಕ್ಕೇ ಅವರು  ಇವರ ಅತಿಥಿಗಳಾಗಿದ್ದು. ಲೀಲಾಳ ಗಂಡ ಊರಲ್ಲಿ ಗಟ್ಟಿ ಕುಳವೇ. ಆ  ಕುಟುಂಬ ಅಲ್ಲಿ educated, sophisticated ಎಂದೇ ಗುರುತಿಸಿಕೊಂಡಿದೆ. ಸಾಮಾನ್ಯವಾಗಿ ಸಮಾಜ ಎಜುಕೇಷನ್ ಎನ್ನುವುದು ಯಾವುದಕ್ಕೆ? ತಮ್ಮ ತಮ್ಮ ಹೆಸರಿನ ಹಿಂದೆ ಹಾಕಿಕೊಳ್ಳುವ ಉದ್ದುದ್ದ ಡಿಗ್ರಿಗಳಿಗೆ ಅಲ್ಲವೇ? ಈ ಲೀಲಾಳಿಗೆ ಅದೇನೊ ಧಾರಾಳವಾಗಿಯೇ ಇತ್ತು. ಹೋಂ ಸೈನ್ಸ್ ಪದವೀದರೆ ಮನೆಯ ಸದಸ್ಯರೊಂದಿಗೆ, ನೆಂಟರಿಷ್ಟರೊಂದಿಗೆ ನೀರು ಕುಡಿದಂತೆ ಇಂಗ್ಲೀಷು ಭಾಷೆಯಲ್ಲಿಯೇ ಮಾತನ್ನಾಡುವಳು. ಮಾನವ ಜೀವಿಯ ಗುಣ ನಡತೆ, ಆಚಾರ ವಿಚಾರಗಳಿಗೂ ಅವನ(ಳ)ಹೆಸರಿನ ಹಿಂದೆ ಬಾಲದಂತಿರುವ ಡಿಗ್ರಿಗಳಿಗೂ ಯಾವುದೇ ಸಂಬಂಧ ಇಲ್ಲ ಎನ್ನುವುದನ್ನು ಪ್ರತ್ಯಕ್ಷವಾಗಿ ನೋಡಿ
ಅನುಭವಿಸಿ ಪರಾಂಬರಿಸಿ ಆ ಸತ್ಯಕ್ಕೆ ಮಿಗಿಲಾದ ಸತ್ಯ ಬೇರಿಲ್ಲವೆಂಬುದನ್ನು ಬಲವಾಗಿ ನಂಬಿದವಳು ನಾನು. ಅವರವರ ವಂಶದಿಂದ ಯಾವ ಸಂಸ್ಕಾರ ಪ್ರಾಪ್ತವಾಗಿದೆಯೋ ಅದರ ಸುಂದರ ಹೊರ ಕವಚವಾಗಿ  ಮಾತ್ರ ಈ ಪದವಿಗಳು ಕೆಲಸ ಮಾಡುತ್ತವೆ(ಇದನ್ನು ಬರೆಯುವಾಗ ನೆನಪಿಗೆ ಬಂದುದೇನೆಂದರೆ  ಒಬ್ಬ ಮೊಬೈಲ್ ಬ್ಯಾಟರಿಯನ್ನು online purchase ಮಾಡಿ ಪಾರ್ಸೆಲ್ ಬಂದುದನ್ನು ಬಿಚ್ಚಿ ನೋಡಿದರೆ ಅದೇನೋ ಗುಜುರಿ ಸಾಮಾನನ್ನು ತುಂಬಿಸಿ ಅತಿ ಸುಂದರ ಪ್ಯಾಕೆಟ್ಟಲ್ಲಿ ಕಳುಹಿಸಿದ್ದರಂತೆ). ಸಾಮಾನ್ಯ ಸಂದರ್ಭಗಳಲ್ಲಿ ಅತ್ಯುತ್ತಮ ನಾಗರಿಕರಂತೆ ವರ್ತಿಸುವವರೇ ಖಾಸಗಿ ವಿಚಾರಗಳ ಬಗ್ಗೆ, ಗಂಭೀರ ಸನ್ನಿವೇಷಗಳನ್ನು ಎದುರಿಸುವ ಸಂದರ್ಭಗಳಲ್ಲಿ, ಇನ್ನೊಬ್ಬರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗಿ ಬಂದಾಗ ಪೂರ್ತಿಯಾಗಿ ಬೆರೆಯದೇ ರೂಪ ಪಡೆಯುತ್ತಾರೆ.ಆ ಹೊತ್ತಿನಲ್ಲಿ educated ಎನ್ನುವ ಶಬ್ದ ಪೂರ್ತಿಯಾಗಿ ಅರ್ಥ ಕಳೆದುಕೊಂಡು A to Z ವರೆಗಿನ ಆ ಡಿಗ್ರಿಗಳು ಬಾಲ ಮಡಚಿಕೊಂಡು ಡೊಗ್ಗು ಸಲಾಮು ಹಾಕಿಕೊಂಡುಬಿಡುತ್ತವೆ. ಅಂತಹ ಸಂದರ್ಭಗಳಲ್ಲಿ  ಅವರು ಉಪಯೋಗಿಸುವ ಭಾಷೆ, ಬಾಡಿ ಲಾಂಗ್ವೇಜ್, ಮುಖ ಭಾವ ಇತ್ಯಾದಿಗಳು ಅವರ ಮೂಲ ಸಂಸ್ಕಾರವನ್ನು ಅನಾವರಣ ಮಾಡಿಬಿಡುತ್ತವೆ. ಈ ಲೇಖನದಲ್ಲಿ ವಿವರಿಸಿದ  ಪ್ರಸಂಗ ಆ ಸಾಲಿಗೊಂದು ಹೊಸ ಸೇರ್ಪಡೆಯಷ್ಟೇ. ಮುಂದೆ ಓದಿ...,

   ಕೆಲಸದ ಒತ್ತಡ, ಪ್ರಯಾಣದ ಆಯಾಸ, ಮನೆಯಲ್ಲಿ ನೆಂಟರಿದ್ದಾರೆ ಎಂಬ ಧಾವಂತ ಇವೆಲ್ಲವುಗಳೊಂದಿಗೆ ಉಷಾ ಪ್ರಯಾಣಿಸುತ್ತಿದ್ದ ರೈಲು ಆ ದಿನ ಲೇಟು ಬೇರೆ. ಕಾಲು ಸುಟ್ಟ ಬೆಕ್ಕಿನಂತೆ ಚಡಪಡಿಸುತ್ತಾ ಮನೆ ಪ್ರವೇಶಿಸಿದಾಗ ಆಕೆ ಕಂಡಿದ್ದೇನು? ಲೀಲಾಳ ಮಗರಾಯನ ಬ್ಯಾಗು, ಪುಸ್ತಕಗಳು, ಪೆನ್ನು, ಪೆನ್ಸಿಲುಗಳು, ಐ ಪ್ಯಾಡು ಇತ್ಯಾದಿಗಳು ಹಾಲಲ್ಲಿ ಬೇಕಾಬಿಟ್ಟಿ ಹರಡಿಕೊಂಡಿದ್ದುವು. ಸೋಫಾದ ಮೇಲೆ ಒಂದಷ್ಟು ಪುಸ್ತಕಗಳು ಬಾಯ್ದೆರೆದು ಬೋರಲಾಗಿ ಬಿದ್ದಿದ್ದುವು. ಟೀಪಾಯ್ ಮೇಲೆ ತಿಂದುಳಿದ ಕುರ್ಕುರೆ, ಲೇಯ್ಸ್ ಪ್ಯಾಕೆಟ್ಟುಗಳು, ಅರ್ಧ ಕುಡಿದು ಬಿಟ್ಟ ಪೆಪ್ಸಿ ಬಾಟಲು, ಗಟ್ಟಿಯಾಗಿ ಕಿರುಚಿಕೊಳ್ಳುತ್ತಿದ್ದ ಟಿ. ವಿ. ಇವೆಲ್ಲದರ ಹೊರತಾಗಿಯೂ ಮಗ ಎನ್ನುವ ಆಸಾಮಿ ಅಲ್ಲಿರಲೇ ಇಲ್ಲ. ಭೂಕಂಪ ಪೀಡಿತ ನೇಪಾಲ ಇದಕ್ಕಿಂತ ಎಷ್ಟೋ ವಾಸಿ ಇರಬಹುದೇನೋ ಎಂದು ಉಷಾಳಿಗೆ ಅನಿಸಿದ್ದರೆ ಆಶ್ಚರ್ಯವಿಲ್ಲ.ಯಾವುದಕ್ಕೂ ಮೊದಲು ಫ್ರೆಶ್ ಆಗಿ ಬರೋಣವೆಂದು ಆಕೆ ಬಾತ್ರೂಮ್ ಹೊಕ್ಕರೆ ಅಲ್ಲಿಯದೇ ಒಂದು ರಾಮಾಯಣ. ಸೋಪ್ ಸ್ಟ್ಯಾಂಡಲ್ಲಿ ಇವರು ಉಪಯೋಗಿಸುವ ಸೋಪನ್ನು ಹುಡುಕಿ ತೆಗೆಯಬೇಕಾಯಿತು. ಲೀಲಾಳ ಸೋಪು, ಶ್ಯಾಂಪು, ಹೇರ್ ಕಂಡಿಷನರ್, ಟೂತ್ ಬ್ರಶ್, ಪೇಸ್ಟುಗಳು ಅಲ್ಲಿ ತುಂಬಿ ತುಳುಕುತ್ತಿದ್ದುವು. ಮುಖ ಒರೆಸಲೆಂದು ಟವೆಲ್ ಸ್ಟ್ಯಾಂಡ್ ಕಡೆ ತಿರುಗಿದವಳು ಬೆಚ್ಚಿ ಬಿದ್ದಳು. ಇವಳ ಟವೆಲನ್ನು ಒಂದು ಮೂಲೆಗೆ ತಳ್ಳಲಾಗಿತ್ತು. ಅಷ್ಟುದ್ದದ ಸ್ಟ್ಯಾಂಡು ಪೂರ್ತಿ ಅತಿಥಿಗಳ ಒದ್ದೆ ಒಳ ಉಡುಪುಗಳಿಂದ ಅಲಂಕೃತಗೊಂಡಿತ್ತು! ಉಷಾಳಿಗೆ ಶಾಕ್ ಮೇಲೆ ಶಾಕ್. ಸಾವರಿಸಿಕೊಳ್ಳದೆ ಉಪಾಯವೇ ಇಲ್ಲ. ಹೊಟ್ಟೆಗೆ ಏನಾದರೂ ಬೀಳಲೇ ಬೇಕಲ್ಲ? ಅಡುಗೆ ಕೋಣೆ ಪ್ರವೇಶಿಸುವಷ್ಟರಲ್ಲಿ ಅಲ್ಲಿಂದ ಕೈಯುಜ್ಜಿ(ಉಷಾ ಉಪಯೋಗಿಸುವ ಟವೆಲಿನಲ್ಲಿ) ಕೊಳ್ಳುತ್ತಲೇ ಹೊರಬಂದ ಲೀಲಾ ಸುಂದರವಾಗಿ ನಗುತ್ತಾ ಹೇಳುತ್ತಾಳೆ(ಇಂಗ್ಲಿಷಿನಲ್ಲಿ), 'ದೀದೀ... , ನಮ್ಮ ಅಡುಗೆ ತಿಂಡಿ ಎಲ್ಲಾ ಆಯ್ತು..., ನಿಮಗೆ ಬೇಕಿದ್ದುದು ಮಾಡಿದರಾಯ್ತು...' ಉಷಾ ತಲೆತಿರುಗಿ ಬೀಳುವುದೊಂದು ಬಾಕಿಯಿತ್ತು. ಇಂತಹ ನೆಂಟರೂ ಇರುತ್ತಾರೆಯೇ?? ಹೊಟ್ಟೆ ಚುರು ಚುರು.... ತಲೆ ಧಿಮಿ ಧಿಮಿ ಎನ್ನುತ್ತಿರುವಾಗ ಮಾತನಾಡಿ ಕೆಟ್ಟವಳೆನಿಸಿಕೊಳ್ಳುವುದು ಬೇಡವೆಂದು ಸೀದಾ ಅಡುಗೆ ಕೋಣೆಗೆ ನುಗ್ಗಿದಳು. ಕೂದಲು ಬಿರಿಹೊಯ್ದು, ಕಾಲಪ್ಪಳಿಸಿ, ಮೈ ಪರಚಿ, ಕೈಯಲ್ಲಿ ಸೌಟು ಹಿಡಿದು ಧೀಂ ತಕ ಧೀಂ ತಕ ಲಾಗ ಹಾಕಿ ಕಿರುಚುತ್ತಾ ಲೀಲಾಳ ಕುತ್ತಿಗೆ ಹಿಚುಕಿಬಿಡಬೇಕೆನ್ನುವಷ್ಟು ಕೋಪ ಉಕ್ಕುಕ್ಕಿ ಬಂತು. ಯಾಕೆ ಗೊತ್ತಾ?ಯಾವಾಗಲೂ ಕನ್ನಡಿಯಂತೆ ಹೊಳೆಯುತ್ತಿದ್ದ ಕಿಚನ್ ಪ್ಲ್ಯಾಟ್ ಫಾರ್ಮ್ ಇವತ್ತು ಒಡೆದ ಕನ್ನಡಿ ಚೂರುಗಳನ್ನು ತುಂಬಿಸಿಟ್ಟ ಕ.ಬು. ರಾಯನಂತಿತ್ತು. ಅಲ್ಲಿ ತಟ್ಟೆ, ಲೋಟ, ಚಮಚ, ಸೌಟು, ಬೋಗುಣಿ, ಚೂರಿ ಇತ್ಯಾದಿಗಳ ಪೆರೇಡೇ ನಡೆದಿತ್ತು. ಕಿಚನ್ ಕ್ಯಾಬಿನೆಟ್ಟುಗಳ ಬಾಗಿಲುಗಳು ಹಾರುಹೊಡೆದಿದ್ದುವು. ಗ್ಯಾಸಿನ ಮೇಲೆ ತಾಯಿ ಮಗನಿಗೆಂದು ಬೇಯಿಸಿಟ್ಟ ಅಡುಗೆ ಇತ್ತು. 'ಹಾಗಾದರೆ ತಮಗೆ?' ತಣ್ಣಗಿನ ನೀರನ್ನಾದರೂ  ಕುಡಿಯೋಣವೆಂದುಕೊಂಡು ಫ್ರಿಜ್ಜಿನ ಬಾಗಿಲನ್ನು ತೆರೆದರೆ.....? ಎಂದಿಗಿಂತ ಭಿನ್ನವಾಗಿ ಅದು ತುಂಬಿ ತುಳುಕುತ್ತಿತ್ತು, ಬ್ರೆಡ್ದುಗಳು, ಚೀಸುಗಳು, ಏನೇನೋ ಚಾಕೊಲೇಟುಗಳು.... ಇವೆಲ್ಲವೂ ಅವರಿಗೆ ಮಾತ್ರೆವೆ ಇರಬಹುದೇನೋ....? ಇದನ್ನು ತಾಳಲು ಸಾದ್ಯವೇ ಇಲ್ಲವೆನಿಸಿ ಉಷಾ ಪತಿಗೆ ಕರೆ ಮಾಡಿ ಆಫಿಸಿನಿಂದ ನೇರ ಹೋಟೆಲಿಗೆ ಬರಹೇಳಿದಳು. ಇನ್ನು ಒಂದು ಕ್ಷಣ ಅಲ್ಲಿ ನಿಂತರೂ ಜಗಳವಾಗುವುದು ಗ್ಯಾರೆಂಟಿ ಎಂದುಕೊಂಡು ರೊಂಯ್ಯನೆ ಹೊರಕ್ಕೆ ಹಾರಿದಳು. ಹೊಟ್ಟೆ ತುಂಬಿದಾಗ ಮನಸ್ಸು ಸ್ವಲ್ಪ ತಣ್ಣಗಾಯ್ತು. ಪತಿಯ ಸಂತೈಸುವಿಕೆಯೂ ಸೇರಿದಾಗ ಮಾಮೂಲು ಮನುಷ್ಯಳಾದಳು.
ಟುಸ್ ಪುಸ್ ಇಂಗ್ಲೀಷ್ ಮಾತನಾಡುತ್ತಾ ಉಷಾಳ ಮನೆ ಪ್ರವೇಶಿಸಿದ ಲೀಲಾ ಇಂಗ್ಲೀಷರಂತೆಯೇ ಈ ಮನೆಯನ್ನು ತನ್ನ ಕಲೋನಿಯನ್ನಾಗಿ ಮಾಡಿಕೊಂಡಳು. ಯಾವಾಗಲೂ ಬೆಳಗ್ಗೆ ಉಷಾಳ ಗಂಡನಿಗೆ ಬ್ಲ್ಯಾಕ್ ಟೀ ಕುಡಿಯುವ ಅಭ್ಯಾಸ. ಟೀ ಮಾಡಲೆಂದೇ ಉಷಾ ಪ್ರತ್ಯೇಕವಾದ ಬೋಗುಣಿಯೊಂದನ್ನು ಇಟ್ಟಿರುತ್ತಿದ್ದಳು.ಆ ದಿನವೂ  ಗಡಿಬಿಡಿಯಲ್ಲಿ ಎದ್ದು ಟೀ ತಯಾರಿಸಿದಳು. ಲೋಟಕ್ಕೆ  ಸುರಿದು  ನೋಡುತ್ತಾಳೆ,ಬ್ಲ್ಯಾಕ್ ಟೀ ಗಂಜಿಯ ಬಣ್ಣದಲ್ಲಿತ್ತು. ಇದೇಕೆ ಹೀಗೆ ಎಂದುಕೊಂಡು ಕುದಿಸಿದ ಪಾತ್ರೆಯನ್ನು ಪರೀಕ್ಷಿಸುತ್ತಾಳೆ. ನಿನ್ನೆ ರಾತ್ರಿ ಬಹುಷಃ ಲೀಲಾ ಅದರಲ್ಲಿ ಹಾಲು ಕುದಿಸಿ ತೊಳೆಯದೇ ಇಟ್ಟಿರಬೇಕು. ಘಂಟೆ ಆಗಲೇ ಐದು ಐವ್ವತ್ತೈದು! ಆರಕ್ಕೆ ಉಷಾ ಹೊರಡಲೇ ಬೇಕಿತ್ತು.ತಲೆ ಚಚ್ಚಿಕೊಳ್ಳಲೂ ಪುರುಸೊತ್ತಿಲ್ಲ..., ಮಾಡಿದುದೆಲ್ಲವನ್ನೂ ಸಿಂಕಿಗೆ ಸುರಿದು ರೈಲ್ವೇ ಸ್ಟೇಶನ್ ಕಡೆಗೆ ಓಟ ಕಿತ್ತಳು. ಬೆಳಗ್ಗಿನ ಟೀ ಇಲ್ಲದೆ ಇಡೀ ದಿನ ಮೂಡು ಕೆಡಿಸಿಕೊಂಡ ಉಮೇಶ ಆಫೀಸಿನಲ್ಲಿ  ಗರಂ ಆಗಿದ್ದ. ರಾತ್ರಿ ಉಷಾಳ  ಸಂತೈಸುವಿಕೆಯಿಂದ ಮಾಮೂಲು ಸ್ಥಿತಿಗೆ ಬಂದ. ಉಷಾಳ ಮನೆ ಪಕ್ಕದಲ್ಲೇ ದೊಡ್ಡದಾದ ಮರವೊಂದಿತ್ತು. ಸಾವಿರಾರು ಬಾವಲಿಗಳ ಆವಾಸ ಸ್ಥಾನವಾಗಿತ್ತದು. ಸಂಜೆ ಹೊತ್ತಿಗೆ ಕಿಟಿಕಿ ಬಾಗಿಲುಗಳನ್ನೆಲ್ಲಾ  ಭದ್ರಪಡಿಸದಿದ್ದರೆ ಅವುಗಳು ಒಳಕ್ಕೆ ದಾಳಿ ಇಡುತ್ತಿದ್ದುವು. ಈ ವಿಷಯವನ್ನು ಲೀಲಾಳಿಗೆ ಹೇಳಿಯೂ ಆಗಿತ್ತು. ಒಂದು ದಿನ ಉಷಾ ಮನೆಯನ್ನು ಪ್ರವೆಶಿಸುತ್ತಿದ್ದಂತೆಯೇ ತಲೆಗೆ ರೆಕ್ಕೆಯಿಂದ ಬಡಿಯುತ್ತಾ ಹಾರಿಬಂದ ಬಾವಲಿಯೊಂದು ಬೆಡ್ ರೂಮನ್ನು ಪ್ರವೇಶಿಸಿತು.ಭಯದಿಂದ ಗಟ್ಟಿಯಾಗಿ ಕಿರುಚಿದ ಉಷಾ ಗಂಡ ಬರುವವರೆಗೆ ವೆರಾಂಡದಲ್ಲೇ ಕುಳಿತಳು. ಲೀಲಾ ತನ್ನ ರೂಮಲ್ಲಿ ಮಗನಿಗೆ ಪಾಠ ಮಾಡುವುದರಲ್ಲಿ ಮಗ್ನಳಾಗಿದ್ದಳು. ಮನೆಯೊಳಗೆ  ಚಪ್ಪಲಿ ಹಾಕುವುದನ್ನು ದ್ವೇಷಿಸುತ್ತಿದ್ದ ಉಷಾಳಿಗೆ ಲೀಲಾ ಬಾತ್ ರೂಮಲ್ಲಿ ಉಪಯೋಗಿಸಿದ ಅದೇ ಚಪ್ಪಲಿಯನ್ನು ಉಳಿದೆಡೆಗಳಲ್ಲೂ ಮೆಟ್ಟಿಕೊಂಡು ನಡೆಯುವುದು ನೋಡಿ ಹೊಟ್ಟೆ ತೊಳಸಿಕೊಂಡು  ಬಂದಂತಾಯ್ತು. ನಾಲ್ಕೇ ದಿನಗಳಲ್ಲಿ ಉಷಾ ಹೈರಾಣಾಗಿ ಹೋದಳು. ಮಾರನೆ ದಿನ ಭಾನುವಾರವಾಗಿತ್ತು. ಉಮೇಶ ಏಳುವಷ್ಟರಲ್ಲಿ ಅವಳು ಹೊರಟು ರೆಡಿಯಾಗಿದ್ದಳು. ಪಕ್ಕದಲ್ಲಿ ದೊಡ್ಡ ಸೂಟ್ಕೇಸಿತ್ತು. ಉಮೇಶನ ಮುಖ ಕಪ್ಪಿಟ್ಟು ಹೋಗಿತ್ತು. ಉಷಾಳನ್ನು ಅವಳ ತಾಯಿ ಮನೆಗೆ ಬಿಟ್ಟು ಬಂದು ದೊಪ್ಪನೆ ಸೋಫಾದಲ್ಲಿ ಬಿದ್ದುಕೊಂಡವ ಛಂಗನೇ ಎದ್ದು ಕುಳಿತ. ಲೀಲಾಳ ಮಗನ ಕಂಪಾಸ್ ಬಾಕ್ಸ್ ಹಿಂಬದಿಗೆ ಒತ್ತಿತ್ತು! ಮುಂದೆ ಹತ್ತು ದಿನಗಳ ಕಾಲ ಉಮೇಶ ನರಕವಾಸಿಯಂತಾಗಿ ಹೋದ. ಉಷಾ ತವರುಮನೆಯಿಂದಲೇ ಕೆಲಸಕ್ಕೆ ಹೋಗಿ ಬರುತ್ತಿದ್ದಳು. ಸಭಾವತಃ ಮೃದುಹೃದಯದವನಾದ ಉಮೇಶ ತನ್ನಮ್ಮನ ಬಳಗ ಎನ್ನುವ ಕಾರಣಕ್ಕೆ ಲೀಲಾಳನ್ನು ಸಹಿಸಿಕೊಂಡ. ರಾತ್ರಿ ಯಾವುದೋ ಜಾವಕ್ಕೆ ಮನೆಗೆ ಬರುತ್ತಿದ್ದ. ಬೆಳಗ್ಗೆ ಸೂರ್ಯ ಮೂಡುವ ಮೊದಲೇ ಹೊರಕ್ಕೆ ಹೋಗಿರುತ್ತಿದ್ದ. ಅಂತೂ ಹದಿನೈದು ದಿನಗಳ ಕಾಲ ಲೀಲಾಳ ಚಿತ್ರ ವಿಚಿತ್ರ ಲೀಲೆಗಳಿಗೆ ಕೊನೆ ಮೊದಲೇ ಇರಲಿಲ್ಲ.
'ಇವಳಿಗೇನೋ ಬರೆಯುವ ತೆವಲು, ಅದಕ್ಕೋಸ್ಕರ ಹೀಗೆ 70 ಎಮ್. ಎಮ್ಮಿನ ರೀಲು ತಿರುಗಿಸುತ್ತಾ ಇದ್ದಾಳೆ' ಎಂದುಕೊಂಡಿರಾ ಓದುಗರೇ...? ನನ್ನ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡಿರುವ ಓರ್ವ ಮಹಿಳೆಯ ಜೀವನದಲ್ಲಿ ನಡೆದ ಘಟನೆಗಳು ಇವು. ಒಂದೊಂದು ಅಕ್ಷರವೂ ಸತ್ಯ. ಅವರು ಬಹಳ ಬೇಸರದಿಂದ ಇದನ್ನು ನನ್ನ ಬಳಿ ಹೇಳಿಕೊಂಡಿದ್ದರು. ಆಗ ನನ್ನ ಮನಸ್ಸಲ್ಲಿ ಎದ್ದ ಕೆಲವು ಪ್ರಶ್ನೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ. ಲೀಲಾ ಕೆಲವೆಲ್ಲ ಚಿಕ್ಕ ಚಿಕ್ಕ ವಿಷಯಗಳನ್ನು ಗಮನಿಸಿಕೊಂಡಿರುತ್ತಿದ್ದರೆ ಆ ಹದಿನೈದು ದಿನಗಳನ್ನು ಒಂದು ಮಧುರ ಅನುಭೂತಿಯನ್ನಾಗಿ ಮಾಡಿಕೊಳ್ಳಬಹುದಿತ್ತಲ್ಲವೇ? ಉಷಾಳ ಅನುಮತಿಯೊಂದಿಗೆ ಆ ಮನೆಯ ಸಾಧನಗಳನ್ನು ಉಪಯೋಗಿಸುವುದು,ತಮಗೆ ಮಾಡುವ ಅಡುಗೆಯನ್ನೇ ಸ್ವಲ್ಪ ಹೆಚ್ಚು ಮಾಡಿ ತಲೆ ತುರಿಸಲು ಸಮಯವಿಲ್ಲದ ಉಷಾ ಉಮೆಶರಿಗೂ ಬಡಿಸಬಹುದಾಗಿತ್ತಲ್ಲವೇ? ಇಡೀ ದಿನ ತಮಗೆಂದು ಮೀಸಲಿರಿಸಿದ ಕೋಣೆಯಲ್ಲಿದ್ದುಕೊಂಡು ಮೊಬೈಲ್ ಭಾಷಿಣಿ  ಆಗಿರುವ ಬದಲು ಅತಿಥೇಯರ ಕಷ್ಟ ಸುಖಗಳಲ್ಲೊಂದಾಗಿ ಅವರು ಕೆಲಸದಿಂದ ಹಿಂತಿರುಗಿದಾಗ ನಗುನಗುತ್ತಾ ಮಾತನಾಡಿಸಿ ಪಾನೀಯವನ್ನು ನೀಡುವುದೋ ಕಾಫಿ ತಿಂಡಿ ಕೊಡುವುದೋ ಮಾಡಿರುತ್ತಿದ್ದರೆ ಅವಳ ಗಂಟೇನು ಹೋಗುತ್ತಿತ್ತು? ಮಗನಿಗೆ ಸ್ವಲ್ಪ ಶಿಸ್ತನ್ನು ಕಲಿಸಿರುತ್ತಿದ್ದರೆ .... ?ಮನೆಯೊಡತಿಯ ಇಷ್ಟ, ಅಇಷ್ಟಗಳನ್ನು ಗಮನಿಸಿ ನಡೆದುಕೊಂಡಿದ್ದರೆ ಅವರೀರ್ವರೊಳಗೆ ಸಾಮರಸ್ಯದ ಒಂದು ಸುಂದರ ಸೇತುವೆಯೇ ನಿರ್ಮಾಣವಾಗಿರುತ್ತಿತ್ತಲ್ಲ? ಮುಂದೆ ಎಂದಾದರೂ ಉಷಾ ಲೀಲಾಳ ಮುಖವನ್ನು  ನೋಡಲಾದರೂ ಇಷ್ಟಪಟ್ಟಾಳೇ..... ??? 
ಈ ಲೇಖನದ ಪ್ರಾರಂಭದಲ್ಲಿ education(ವಿದ್ಯೆ ಅಲ್ಲ)ಗೂ ಸಂಸ್ಕಾರಕ್ಕೂ ಸಂಬಂಧವಿಲ್ಲ ಎಂದಿದ್ದೆ ತಾನೇ? ನಾನು ಹಾಗೆ ಹೇಳಿದ್ದೇಕೆಂದು ಈಗ ಅರ್ಥವಾಯ್ತೇ? ನನ್ನೊಂದಿಗೆ ನೀವೂ ಧ್ವನಿ ಸೇರಿಸಿದಿರಾದರೆ ಈ ಲೇಖನದ ಉದ್ದೇಶ ಸಾರ್ಥಕವಾದಂತೆ.     

            

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ