ಸೋಮವಾರ, ಜೂನ್ 8, 2015

ಸುಂದರ ಸುಂದರ ಜೀವನವಿದೂ.... (2)

ಕಿರಿಯ ಮಗಳು ವೈದ್ಯಕೀಯ ಸ್ನಾತಕೋತ್ತರ ಪದವಿಗಾಗಿ ಮುಂಬೈಗೆಂದು ಹೊರಟು ನಿಂತ ಸಮಯ. ತನ್ನ ಅರ್ಹತೆಯ ಆಧಾರವೊಂದರಿಂದಲೇ ಭಾರತದ ಪ್ರತಿಷ್ಟಿತ ಮೆಡಿಕಲ್ ಕಾಲೇಜಲ್ಲಿ ತನ್ನಿಚ್ಛೆಯ ವಿಭಾಗವನ್ನೇ ಆಯ್ದುಕೊಂಡ ಅವಳ ಗಟ್ಟಿಗತನಕ್ಕೆ ನಾವು ಮನೆಯವರು ಸಂಭ್ರಮಿಸದೆ ಇರುತ್ತೇವೆಯೇ....? ಸಂಭ್ರಮದ ತೆರೆ ಇಳಿದಾಗ ನನ್ನೊಬ್ಬಳ ಎದೆಯಲ್ಲಿ ಮಾತ್ರ ಕಳವಳದ ಅವಲಕ್ಕಿ ಕುಟ್ಟಲಾರಂಭಿಸಿತ್ತು! ಅಷ್ಟು ದೂರ.... ಮಗಳಲ್ಲಿ... ನಾವಿಲ್ಲಿ.... ಬೇಕೆಂದಾಗ ಹೋಗಿ ಅವಳ ಕಷ್ಟ ಸುಖ ವಿಚಾರಿಸಿ ಮನೆಯ ತಿಂಡಿ ತಿನಸುಗಳನ್ನು ಕೊಟ್ಟು ಬರಲು ಅದೇನು ನಮ್ಮ ಮಂಗಳೂರಿನ ಕೆ.ಎಮ್.ಸಿ. ಹಾಸ್ಟಲೇ...? ಕೆ.ಎಮ್.ಸಿ. ಯಲ್ಲಿ ಓದಲೆಂದು ಅವಳು ಹೊರಟು ನಿಂತಿದ್ದಾಗ ನನಗೆ ಸಂತಸ ಬಿಟ್ಟರೆ ಬೇರೇನೂ ಅನ್ನಿಸಿರಲೇ ಇಲ್ಲ.ಈಗ ನನ್ನ ಮಗನೂ  ಅಲ್ಲಿಯ ವಿದ್ಯಾರ್ಥಿಯೇ ಹೌದಾದರೂ ಅವನು ನಮ್ಮಿಂದ ಬೇರೆ ಇದ್ದಾನೆ ಎಂಬ ಅನಿಸಿಕೆ ಎಂದೂ ಕಾಡಿದ್ದಿಲ್ಲ. ಇನ್ನು ನಮ್ಮ ತಲೆಮಾರಿನ ಬಗ್ಗೆ ಹೇಳುವುದಿದ್ದರೆ ನನ್ನ ಅಣ್ಣ ಮತ್ತು ಪತಿ ಇಬ್ಬರೂ ಅಲ್ಲಿಯ ಹಳೆ ವಿಧ್ಯಾರ್ಥಿಗಳೇ. ಇನ್ನೂ ಹಿಂದಕ್ಕೆ ಹೋದರೆ ನಮ್ಮತಂದೆಯವರು ತಮ್ಮ ವೃತ್ತಿಯಲ್ಲಿ ಎಷ್ಟೋ ರೋಗಿಗಳನ್ನು ಅಲ್ಲಿಗೆ ಶಿಪಾರಸು ಮಾಡಿದ್ದುದನ್ನು ಹಾಗು ಕೆಲವೊಮ್ಮೆ ಅವರೊಂದಿಗೆ ಅಲ್ಲಿಯವರೆಗೆ ಹೋಗಿದ್ದುದನ್ನೂ ನಾನು ಕಣ್ಣಾರೆ ಕಂಡಿದ್ದೇನೆ. ಹಾಗಾಗಿ ಕೆ.ಎಮ್.ಸಿ. ಎನ್ನುವುದು ಎಷ್ಟು ರೂಡಿಕೆಯಾಗಿಬಿಟ್ಟಿತ್ತೆಂದರೆ ಅದು ನನ್ನ ಕುಟುಂಬದ ಅವಿಭಾಜ್ಯ ಅಂಗ ಎನಿಸಿಬಿಟ್ಟಿತ್ತು.ಇನ್ನು ಮುಂದೆ ಮಗಳ ಭವಿಷ್ಯ, ಓದು, ಕೆರೀರ್ ಎಂದೆಲ್ಲಾ ಎಷ್ಟೇ ಪ್ರಾಕ್ಟಿಕಲ್ ಆಗಿ ಯೋಚಿಸಬೇಕೆಂದುಕೊಂಡರೂ ನಾನೆಷ್ಟಾದರೂ ಅವಳ ಹೆತ್ತಮ್ಮನಲ್ಲವೇ? ಹೆತ್ತಬ್ಬೆಗೆ ಹೆಗ್ಗಣ ಮುದ್ದು! ದಿನಕ್ಕೆ ಸಾವಿರ, ಎರಡು ಸಾವಿರ ಹೊರ ರೋಗಿಗಳಿರುವ ಆಸ್ಪತ್ರೆಯಲ್ಲಿ ಅವಳು ಕೆಲಸವೂ ಮಾಡಬೇಕು ಓದಿಕೊಳ್ಳಲೂ ಬೇಕು. ಹೊತ್ತೊತ್ತಿಗೆ ಊಟ, ತಿಂಡಿ, ನಿದ್ದೆ, ಸ್ನಾನ, ವಿಶ್ರಾಂತಿ....? ನೋ ಚಾನ್ಸ್...!ಅವಳ ಬೇಕು ಬೇಡಗಳನ್ನು ನೋಡಿಕೊಳ್ಳುವವರಾರು? ಮಕ್ಕಳು ಹೋಗುವಲ್ಲಿಗೆಲ್ಲ ನಾವೂ ಶಿಫ್ಟ್ ಆಗುವಂತಿದ್ದರೆ.... ಬದುಕೆಷ್ಟು  ಸುಂದರವಾಗಿರುತ್ತಿತ್ತು? ಈ ಮಕ್ಕಳು ಯಾಕಾದರೂ ಬೆಳೆದು ದೊಡ್ದವರಾಗುತ್ತಾರೋ...? ಇದೆಲ್ಲವೂ ನನ್ನ ಸ್ವಗತ ಮಾತ್ರವೇ  ಆಗಿತ್ತು.
ಹೊರಡುವ ಘಳಿಗೆಯೂ ಬಂತು. ಅನಿವಾರ್ಯ ಕಾರಣಗಳಿಂದ ನಾನು ಮಾತ್ರವೇ ಮಗಳಿಗೆ ಸಾಥ್ ಕೊಡಲು ಸಾಧ್ಯವಾಯಿತು. ಅವಳ ಗೆಳತಿಯೂ ಅಮ್ಮನೊಂದಿಗೆ ಹೊರಡುವವಳಿದ್ದಳು. ಸೋ... ನಾವಿಬ್ಬರು, ಅವರಿಬ್ಬರು  ಜೊತೆಯಲ್ಲೇ ಹೋಗುವುದೆಂದು ತೀರ್ಮಾನಿಸಿದ್ದೆವು. ಇನ್ನೋರ್ವ ಸ್ನೇಹಿತೆ ತನ್ನ ತಂದೆಯವರೊಂದಿಗೆ ಪ್ರತ್ಯೇಕವಾಗಿ ಹೊರಟಿದ್ದಳು. ಕೃತಿ ಹಾಗೂ ಅಮ್ಮನನ್ನು ಮೊದಲ ಬಾರಿ ಭೇಟಿಯಾಗಿದ್ದೆನಾದರೂ ಹಾಗೆ ಅನಿಸಿರಲೇ ಇಲ್ಲ. ಕುಟುಂಬ ಸದಸ್ಯರಂತೆ ಪರಸ್ಪರ ಹೊಂದಿಕೊಂಡೆವು. ಮುಂಬೈ ಟ್ಯಾಕ್ಸಿ ವಾಲಾಗಳ ಸುಲಿಗೆ, ಒರಟುವರ್ತನೆ, ನಮ್ಮ ಬಳಿಯಲ್ಲಿದ್ದ ಅನಿವಾರ್ಯ ಬೆಲೆಬಾಳುವ ವಸ್ತುಗಳು.... ಇತ್ಯಾದಿಗಳ ಬಗ್ಗೆ ನಾವಿಬ್ಬರೂ ಅತಿಯಾಗಿ ತಲೆಕೆಡಿಸಿಕೊಂಡಿದ್ದೆವು. ಯಾಕೆಂದರೆ ನಮ್ಮೊಂದಿಗೆ ಗಂಡಸರ್ಯಾರೂ ಇರಲಿಲ್ಲ. ಸಯಾನ್ ಎನ್ನುವಲ್ಲಿ ನಾವು ಹೋಟೆಲು ಕಾದಿರಿಸಿಕೊಂಡಿದ್ದೆವು. ಟ್ಯಾಕ್ಸಿವಾಲಾ ಗಜ ಗಾತ್ರದ ನಮ್ಮ ಲಗ್ಗೇಜುಗಳನ್ನು ಹೋಟೆಲಿನ ಹಜಾರದವರೆಗೂ ತಂದಿಟ್ಟ. ಸ್ವಾಗತಕಾರನೊಡನೆ ಮರಾಟಿ ಭಾಷೆಯಲ್ಲಿ ಏನೋ ಹೇಳಿದ. ಎರಡೇ ನಿಮಿಷಗಳಲ್ಲಿ ನಮ್ಮೆದುರು ಯುವಕನೋರ್ವ ಪ್ರತ್ಯಕ್ಷನಾದ. ಸೊಗಸಾದ ಕನ್ನಡದಲ್ಲಿ ನಮ್ಮ ಯೋಗಕ್ಷೇಮ ವಿಚಾರಿಸಿಕೊಂಡ. ಅಲ್ಲಿ ಲಭ್ಯವಿರುವ ಅತ್ಯುತ್ತಮ ಸೇವೆಗಳನ್ನು ಒದಗಿಸಿಕೊಟ್ಟ.  ಛೆ..., ಆ ಟ್ಯಾಕ್ಸಿವಾಲಾಗೆ ಕನಿಷ್ಟಪಕ್ಷ ಒಂದು ಥ್ಯಾಂಕ್ಸ್ ಆದರೂ  ಹೇಳಬಹುದಿತ್ತಲ್ಲಾ...? ಎಂದುಕೊಂಡೆವು. 
ಮುಂಬೈಯ ಪರೇಲ್ ಎನ್ನುವಲ್ಲಿ ಸೇತ್. ಜಿ. ಎಸ್. ಮೆಡಿಕಲ್ ಕಾಲೇಜು ಹಾಗೂ ಅದರ ಕಾರ್ಯಕ್ಷೇತ್ರವಾದ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಹಾಸ್ಪಿಟಲ್ ಎರಡೂ  ಒಂದೇ ಆವರಣದೊಳಗೆ ಇವೆ. ಬೆಳಗ್ಗಿನ ನಿತ್ಯವಿಧಿಗಳನ್ನು ಪೂರೈಸಿ ಸರಿಯಾಗಿ ಒಂಭತ್ತು ಘಂಟೆಗೆ ಅಲ್ಲಿಗೆ ತಲುಪಿದೆವು. ಬ್ರಿಟಿಷರಿಂದ ವಿನ್ಯಾಸಗೊಂಡ ಆ ಭವ್ಯ ಸ್ಥಾಪನೆ ಹಸುರಿನ ಮಡಿಲಲ್ಲಿ ಕಿಲೋಮೀಟರುಗಟ್ಟಲೆ ಚಾಚಿಕೊಂಡಿತ್ತು. ಅಲ್ಲೊಂದು ಮಿನಿ ಭಾರತವೇ ಮೈತಳೆದಂತಿತ್ತು. ಎತ್ತ ನೋಡಿದರೂ ಜನ ಸಂದಣಿ.... ಮರಾಟಿ, ಹಿಂದಿ ಭಾಷೆಗಳ ಗಜಿಬಿಜಿ...., ಅಸಂಖ್ಯಾತ ರೋಗಿಗಳು...,ಸ್ಟ್ರೆಚರುಗಳ ಕಿರ್ಯೋಂ ಕಿರ್ಯೋಂ ಶಬ್ದ,  ಅಂಬ್ಯುಲೆನ್ಸ್ಗಳು..., ಯುನಿಫಾರ್ಮ್ ತೊಟ್ಟ ನರ್ಸ್ಗಳು..., ವಾರ್ಡ್ ಬಾಯ್ಸ್..., ಒಹ್... ಇಲ್ಲಿ ನಾವು ಹೋಗಬೇಕಾದುದಾದರೂ ಎಲ್ಲಿಗೆ? ಮುಖ್ಯ ದ್ವಾರದಲ್ಲಿದ್ದ ಸೆಕ್ಯುರಿಟಿ ಗಾರ್ಡ್ ನಮ್ಮ ಸಹಾಯಕ್ಕೆ ಬಂದ. ನಾವು ಪ್ರಮಾದವಶಾತ್ ಆಸ್ಪತ್ರೆಯ ದ್ವಾರದಿಂದ ಒಳಹೊಕ್ಕಿದ್ದೆವು. ಗಾರ್ಡ್ ಕಾಲೇಜಿನ ದ್ವಾರವನ್ನು ತೋರಿಸಿಕೊಟ್ಟ. ಅಲ್ಲಿಯ ವಾತಾವರಣವಾದರೋ ತದ್ವಿರುದ್ಧವಾಗಿತ್ತು. ಶಾಂತ, ಗಂಭೀರ ಮೌನ.... ಕೊರಳ ಸುತ್ತ ಸ್ಟೆತ್, ಬಿಳಿ ಕೋಟು ಧರಿಸಿದ ವಿದ್ಯಾರ್ಥಿಗಳನ್ನು ಬಿಟ್ಟರೆ ಕಾರಿಡಾರ್ ಖಾಲಿಯಿತ್ತು. ಅಂಗಳದ ಹಸುರಿನ ನಡುವೆ ಅಲ್ಲಲ್ಲಿ ಕಲ್ಲು ಬೆಂಚುಗಳು. ನಮ್ಮನ್ನು ಅಲ್ಲಿ ಕುಳ್ಳಿರಲು ಹೇಳಿ ಮಕ್ಕಳು ತಮ್ಮ ಕೆಲಸಕ್ಕೆ ಹೊರಟು ಹೋದರು.ಮಾರನೆಯ ದಿನದಿಂದಲೇ ಅವರಿಗೆ ಕಾಲೇಜು ಪ್ರಾರಂಭವಾಗುವುದಿತ್ತಾದುದರಿಂದ ಆ ದಿನವೇ ಅವರು ಎಲ್ಲಾ ಔಪಚಾರಿಕತೆಗಳನ್ನು ಮುಗಿಸಬೇಕಿತ್ತು. ನಾವೂ ಕಾಲೇಜಿನ ಹೊರ ಭಾಗದಿಂದಲೇ ಒಂದು ಸುತ್ತು ಹೊಡೆದು ಬಂದೆವು. ಇಂತಹ ಭವ್ಯ ಸಂಸ್ಥೆಯಲ್ಲಿ ಓದಲಿರುವ ವಿದ್ಯಾರ್ಥಿಗಳು ನಮ್ಮ ಮಕ್ಕಳು ಎನ್ನವುದೇ ನಮಗೆ ಹೆಮ್ಮೆಯ ವಿಷಯವಾಗಿತ್ತು. (ಆದರೂ.... ಇಷ್ಟು ದೂರ....?) ಘಂಟೆ ಆಗಲೇ ಒಂದಕ್ಕೆ ಹತ್ತಿರವಾಗಿತ್ತು. ನಡೆದು ನಡೆದು ಸುಸ್ತಾಗಿತ್ತು.ಪುನಃ ಅದೇ ಬೆಂಚಿನಲ್ಲಿ ಸ್ಥಾಪನೆಗೊಂಡೆವು. ಹೊಟ್ಟೆ ಚರುಗುಟ್ಟುತ್ತಿತ್ತು. ಮಕ್ಕಳನ್ನು ಬಿಟ್ಟು ಉಣ್ಣಲುಂಟೆ?ಅವರು ಇಂತಹ ಕಡೆಗೆ ಹೋಗಿರಬಹುದು ಎಂದು ಅಂದಾಜಿನ ಮೇಲೆ ಹುಡುಕುವುದು ಸುಲಭವಾಗಿರಲಿಲ್ಲ. ಸಾಲದುದಕ್ಕೆ ನಮಗೆ ಮರಾಟಿ ಭಾಷೆ ಗೊತ್ತಿರಲಿಲ್ಲ. ಲೋಕಲ್ ಹಿಂದಿ ಅಪರಿಚಿತವಾಗಿತ್ತು.(ನಮ್ಮದು ಎಷ್ಟಾದರೂ ಪುಸ್ತಕದ ಹಿಂದಿಯಲ್ಲವೇ) ಇಂಗ್ಲೀಷ್ ಭಾಷೆಯಲ್ಲಿ ಮಾತನಾಡಿದರೆ ಸರಿಯಾದ ಉತ್ತರ ಸಿಗುತ್ತಿರಲಿಲ್ಲ. ಸೋ..., ಕುಳಿತಲ್ಲಿಂದ ಅಲುಗಾಡಲಿಲ್ಲ. ಮಕ್ಕಳಿಗೆ ಎಂತಹ ರೂಮು ಸಿಗುತ್ತೋ...? ರೂಮ್ ಮೇಟ್ಸ್ ಯಾರೋ...? ಪರಭಾಷೆಯ ಹಿರಿಯ ವಿದ್ಯಾರ್ಥಿನಿಗಳೊಂದಿಗೆ ಇವರು ಇರಬೇಕಾಗಿ ಬಂದರೆ ಚಿಕ್ಕ ಪುಟ್ಟ ರೇಗಿಸುವಿಕೆ ಇರುತ್ತಂತೆ....?  ಹದಿನಾರು ಮಾಳಿಗೆಯ ಈ  ಹಾಸ್ಟೆಲ್ ಕಟ್ಟಡದಲ್ಲಿ ಇವರ ರೂಮು ಎಲ್ಲಿರುತ್ತೋ...? ತಮ್ಮ ರೂಮಿನ ಬಗ್ಗೆ ಯಾರೊಡನೆ ಮಾತನ್ನಾಡುತ್ತಾರೋ ...? ಕಾಲೇಜಲ್ಲಿ ಇವರ ಯೂನಿಟ್ ಹೆಡ್ ಯಾರಾಗಿರುತ್ತಾರೋ.... ? ಏನು ಕತೆಯೋ...? ಒಂದೂ ತಿಳಿಯದೆ ಅಬ್ಬೆಪ್ಪಾರಿಗಳಂತೆ ಕಂಗೆಟ್ಟು ಕುಳಿತೇ ಇದ್ದೆವು. ಅಷ್ಟರಲ್ಲಿ ಕರ್ನಾಟಕದವರಂತೆ ತೋರುವ ಮಹಿಳೆಯೋರ್ವರು ನಮ್ಮ ಪಕ್ಕದಲ್ಲೇ ಬಂದು ಕುಳಿತರು. ವಾಗ್ದೇವಿಯ ಪುತ್ರಿಯರೆಂದಲ್ಲವೇ ಮಹಿಳೆಯರಿಗೆ ಬಿರುದು ...? ಪರವೂರಲ್ಲಿ ಅದೂ ಪಕ್ಕದಲ್ಲೇ ನಮ್ಮೂರಿನ ಹೆಂಗಸೊಬ್ಬರು ಕುಳಿತಿದ್ದರೆ ಮತನಾಡಿಸದೆ ಬಿಡುತ್ತೇವೆಯೇ? ಅವರೂರು ಬೆಂಗಳೂರಂತೆ. ಮಗಳು ಈಗಷ್ಟೆ ಇದೇ ಕಾಲೇಜಿನಲ್ಲಿ ಪಿ.ಜಿ.ಮುಗಿಸಿದ್ದಳು. ಬೀಳ್ಕೊಡುಗೆಯ ಔಪಚಾರಿಕತೆಗಳನ್ನು ಮುಗಿಸಲು ಬಂದಿದ್ದರು. ಅನುಭವಸ್ಥ ಅಮ್ಮನಾಗಿ ಅವರು ನಮ್ಮ ಮಕ್ಕಳಿಗಾಗಿ ಹಲವು ಅಮೂಲ್ಯ ಸಲಹೆಗಳನ್ನಿತ್ತರು. ಡಬ್ಬಾವಾಲಾಗಳ ಮೂಲಕ ಊಟ ತರಿಸಿಕೊಳ್ಳುವ ರೀತಿಯನ್ನೂ ಹೇಳಿಕೊಟ್ಟರು. ಅವರೊಡನೆ ಮಾತುಗಳನ್ನಾಡುತ್ತಾ  ಇದ್ದಂತೆ  ಚಮತ್ಕಾರವೊಂದು ನಡೆದು  ಹೋಯ್ತು. "ಆಂಟಿ..., ನಮ್ಮ ರೂಮ್ ಅಲಾಟ್ ಆಯ್ತು...."ಎಂದು ಸಮೀಪದಲ್ಲೇ ಕನ್ನಡದ ಜೇನಹನಿಯ ಸಿಂಚನವಾಯ್ತು. ತಿರುಗಿ ನೋಡಿದೆವು. ನಮ್ಮ ಮಕ್ಕಳದ್ದೇ ಪ್ರಾಯದ ಹುಡುಗಿಯೋರ್ವಳು ನಗುತ್ತಾ ನಿಂತಿದ್ದಳು. ಯಾರಿವಳು? ಅರ್ಥವಾದವಳಂತೆ ಅವಳೇ ಮಾತನಾಡಿದಳು. "ಆಂಟಿ..., ನಾನು ಫಾದರ್ ಮುಲ್ಲರ್ಸ್ ಸ್ಟೂಡೆಂಟ್...,(ಅದು ಮಂಗಳೂರಿನ ಇನ್ನೊಂದು ಹೆಸರಾಂತ ಮೆಡಿಕಲ್ ಕಾಲೇಜು) ಪಿ. ಜಿ. ಗೆ  ಇಲ್ಲೇ ಸೀಟ್ ತಗೊಂಡಿದೀನಿ ...,(ಗಮನಿಸಿ, 'ಸೀಟು ತಗೊಂಡೆ' ಎನ್ನುವುದಕ್ಕೂ 'ಸೀಟ್ ಸಿಕ್ಕಿತು' ಎನ್ನುವುದಕ್ಕೂ ಬಹಳ ವ್ಯತ್ಯಾಸ ಇದೆ) ನಿಮ್ಮನ್ನ ಆಗ್ಲೇ ನೋಡಿದೆ..., ಅನ್ವಿತ, ಕೃತಿ, ಶಿಲ್ಪ ಅವರನ್ನ ಪರಿಚಯ ಮಾಡ್ಕೊಂಡೆ..., ನಾವೆಲ್ರೂ ಹಾಸ್ಟೆಲ್ ಫಾರ್ಮ್ ಫಿಲ್ಲಪ್ ಮಾಡ್ತಿರ್ಬೇಕಿದ್ರೆ ನಮ್ಮಪ್ಪ ಮಹಡಿಗೋಗಿ ವಾರ್ಡನ್ ಜೊತೆ ಮಾತ್ನಾಡಿದ್ರು. ಈವಾಗ ಹಾಸ್ಟೆಲ್ ಫ್ರೀ ಇಲ್ವಂತೆ... ಸೋ... ಸ್ಟಾಫ್ ಕ಼್ವಾರ್ತರ್ಸ್ಸಲ್ಲಿ  ಒಂದೊಂದು ರೂಮಲ್ಲಿ ನಾಲ್ಕು ನಾಲ್ಕು ಪಿ. ಜಿ. ಗಳನ್ನ ಹಾಕ್ತಿದ್ದಾರೆ. ನಮ್ಮಪ್ಪ ನಾವು ನಾಲ್ವರಿಗೆ ಒಂದೇ ರೂಮು ಅಲಾಟ್ ಮಾಡೋಕೆ ರಿಕ್ವೆಸ್ಟ್ ಮಾಡ್ಕೊಂಡಿದ್ರು. ಅದು ಓ.ಕೆ. ಆಗಿಬಿಡ್ತು."
 (ವ್ವಾರೆ... ವ್ವಾ... ನಮ್ಮ ಅದೃಷ್ಟವೆಂದರೆ ಇದೇ ಅಲ್ಲವೇ...?) ನಾವು ಕೇಳಿದೆವು, "ನಿಮ್ಮ ತಂದೆಯವರು ಎಲ್ಲಿ?"
"ಅವರು ಆಗಲೇ ಹೋಗಾಯ್ತು ಆಂಟಿ..., ಫ್ಲೈಟ್ 12.30ಕ್ಕೆ... "ಎಂದವಳೇ ಪುರ್ರ್ ಎಂದು ಹಾರಿ ಹೋದಳು.ನಮ್ಮ ಸಂತಸವನ್ನು ಬೆಂಗಳೂರಿನ ಮಹಿಳೆಯೊಡನೆ ಹಂಚಿಕೊಲ್ಳೋಣವೆಂದುಕೊಂಡು ಇತ್ತ ತಿರುಗಿದರೆ ಅವರಲ್ಲಿ ಇದ್ದರೆ ತಾನೇ....?ನಾವು ಕುಡಿದ ನೀರೂ ಅಲ್ಲಾಡಿರಲಿಲ್ಲ, ನಮ್ಮ ಮಕ್ಕಳಿಗೆ ನಮ್ಮಿಛ್ಚೆಯಂತೆಯೇ ವಾಸಕ್ಕೆ ವ್ಯವಸ್ಥೆಯಾಗಿತ್ತು! ನಾವು ಯಾರು ಏನು ಎತ್ತ ಒಂದೂ ಗೊತ್ತಿರದಿದ್ದರೂ ಆ ಸಜ್ಜನ ಈ ನಾಲ್ಕೂ ಮಕ್ಕಳು ಒಂದೇ ಊರಿನವರು ಎಂಬ ಕಾರಣಕ್ಕಾಗಿ ಮಹದುಪಕಾರವನ್ನೇ ಮಾಡಿ ಹೋಗಿದ್ದರು. ಬೆಂಗಳೂರಿನ ಆ ತಾಯಿಯ ಮಾತುಗಳಿಂದ ನಮ್ಮ ತಲೆಯ ಮೇಲಿದ್ದ ಟೆನ್ಶನ್ ಪರ್ವತ ಅರ್ಧ ಕರಗಿಹೋಗಿತ್ತು. ಈಗ ಈ ಹುಡುಗಿ(ಛೆ..,ಅವಳ ಹೆಸರೂ ಕೇಳಲಿಲ್ಲವಲ್ಲಾ...) ಪೂರ್ತಿಯಾಗಿ ಹಗುರಗೊಳಿಸಿಬಿಟ್ಟಿದ್ದಳು. 
ಕೊನೆಗೂ ದೂರದಲ್ಲಿ ನಾಲ್ಕೂ ಮಕ್ಕಳು ಬರುತ್ತಿರುವುದು ಕಾಣಿಸಿತು.ಅವರನ್ನು ನೋಡುತ್ತಾ ನಾನು ಫಕ್ಕನೆ ಮೂವತ್ತು ವರ್ಷಗಳಷ್ಟು ಹಿಂದಕ್ಕೆ ಜಾರಿ ಹೋದೆ. ಅವಾಗ ನಾನು ಕಾಲೇಜು ಕನ್ಯೆಯಾಗಿದ್ದೆ. ಕೋ. ಎಜುಕೇಶನ್ ಪದ್ದತಿಯಲ್ಲಿ ಓದಿದವಳು ನಾನು. ಹುಡುಗರೆಂದರೆ ಹೆದರಿ ಗುಬ್ಬಚ್ಚಿಯಂತಾಗಿಬಿಡುತ್ತಿದ್ದೆವು. ಎದೆಗೆ ಪುಸ್ತಕಗಳನ್ನವುಚಿಕೊಂಡು ತಲೆಬಾಗಿಸಿ ಕಾಲೇಜಿನ ಮಹಾದ್ವಾರವನ್ನು ಪ್ರವೇಶಿಸುವಾಗ ಎರಡೂ ಬದಿಯ ಕಟ್ಟೆಗಳಲ್ಲಿ ಕುಳಿತಿರುತ್ತಿದ್ದ ಹುಡುಗರು ಚಿತ್ರ ವಿಚಿತ್ರ ಕಾಮೆಂಟ್ಸ್ ಗಳನ್ನು ಪಾಸ್ ಮಾಡ್ತಾ ಅದರಲ್ಲೇ ಬ್ರಹ್ಮಾನಂದವನ್ನು ಹೊಂದುತ್ತಿದ್ದರೆ ನಾವು ಜೀವ ಹಿಡಿಯಾಗಿಸಿಕೊಂಡು ಒಳಗೆ ಹೋಗಿಬಿಡುತ್ತಿದ್ದೆವು. 'ಅಬಲೆ', 'ಕೋಮಲಾಂಗಿ' ಎಂದು ಮುಂತಾಗಿ ನಮ್ಮ ಪುರುಷ ಮಣಿಗಳು ಸ್ತ್ರೀಗೆ ದಯಪಾಲಿಸಿದ ನಾಮ ವಿಶೇಷಣಗಳಿಗೆ ತಕ್ಕಂತೆ (?) ನಾವಾಗ ಇದ್ದೆವು ಎಂದು ನನಗೀಗ ಅನ್ನಿಸ್ತಾ ಇದೆ. ಆಗೆಲ್ಲಾ ಕಾದಂಬರಿಗಳಲ್ಲಿ ಕಾಲೇಜು ಕನ್ಯೆಯರಿಗೆ  ತೆಳ್ಳಗೆ..,ಬೆಳ್ಳಗೆ...ಬಳಕುವ ಬಳ್ಳಿ..., ಬಿಂಕ.., ಬಿನ್ನಾಣ..., ಕೆಂಪು ಕೆನ್ನೆ...ಬೊಗಸೆ ಕಣ್ಣು..., ಹಣೆಯಲ್ಲಿ ಮುತ್ತಿನಂತಹ ಬೆವರ ಹನಿಗಳು..., ನೀಳ ಜಡೆ.., ಮುಡಿ ತುಂಬಾ ಹೂವು..., ಮೈತುಂಬಾ ಸೆರಗು..... ಎಂದು ಮುಂತಾಗಿ ವಿಶೇಷಣಗಳ ರಾಶಿಯನ್ನೇ ಹೊದೆಸಿಬಿಡುತ್ತಿದ್ದರಲ್ಲವೇ? ಆದರೆ ಈಗ..? ಎದುರಿನಿಂದ ಬರುತ್ತಿದ್ದ ನಾಲ್ಕು ಹುಡುಗಿಯರ ಬಲಗೈಗಳಲ್ಲಿ ಫೈಲಿನ ಫೋಲ್ಡರ್, ಎಡಗೈಯ್ಯಲ್ಲಿ ಮೊಬೈಲ್ ಫೋನು, ಕೂದಲು ಅಲೆಅಲೆಯಾಗಿ ಗಾಳಿಯಲ್ಲಿ ತೇಲಾಡುತ್ತಿತ್ತು. ತೊಟ್ಟಿದ್ದು ಜೀನ್ಸ್, ಟೀ ಶರ್ಟ್, ಶೂ. ತಲೆಯೆತ್ತಿ ಕೈ ಬೀಸಿ ನಡೆದು ಬರುತ್ತಿದ್ದ ಆ ರೀತಿ ಆತ್ಮ ವಿಶ್ವಾಸದ ಪ್ರತೀಕ. ಅವರ ಜೊತೆಯಲ್ಲಿ ಹೈ ಪ್ರೊಫೈಲಿನವರಂತೆ ತೋರುವ ಇಬ್ಬರು ಗಂಡಸರೂ ಇದ್ದರು. ಅವರ ಸಮ ಸಮಕ್ಕೆ ದೃಢ ಹೆಜ್ಜೆಗಳನ್ನಿಡುತ್ತಾ ಬಿಂಕ ಬಿನ್ನಾಣಗಳಿಲ್ಲದೆ ಹಿಂದಿಯಲ್ಲಿ ನಿರರ್ಗಳವಾಗಿ ಮಾತುಗಳನ್ನಾಡುತ್ತಾ ಬರುತ್ತಿದ್ದರು ನಮ್ಮ ಹೆಣ್ಣು ಮಕ್ಕಳು! 
  ಭಾರತದಲ್ಲಿ ಹೆಣ್ಣಿಗೆ ಗೌರವ ಇಲ್ಲವೆಂದವರು ಯಾರು? ಮೀಸಲಾತಿಗಾಗಿ ಹೆಣ್ಣೇಕೆ ಅಂಗಲಾಚಬೇಕು? ಸ್ವಸಾಮರ್ಥ್ಯದಿಂದ ಗಳಿಸಿದ ಉತ್ಕೃಷ್ಟ ಜ್ಞಾನ ಯಾವುದೇ ಮೀಸಲಾತಿ, ವಶೀಲಿಬಾಜಿ ಇಲ್ಲದೆ ಗಂಡು ಹೆಣ್ಣನ್ನು ಸಮಾನ ಸ್ತರದಲ್ಲಿರಿಸುತ್ತದೆ ಎಂಬುದಕ್ಕೆ ನನ್ನೆದುರೇ ತಾಜಾ ಉದಾಹರಣೆಯಿತ್ತು!  ಮಾ ತುಜೇ ಸಲಾಂ.... 
                                                                                                            (ಸಶೇಷ)

                                                
    

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ