ಕೃತಿಯ ಅಮ್ಮ ಆ ದಿನವೇ ಊರಿಗೆ ಮರಳಬೇಕಿತ್ತಾದುದರಿಂದ ವಿಮಾನ ನಿಲ್ದಾಣದ ದಾರಿಯಲ್ಲಿ ಹೊಟ್ಟೆತುಂಬಿಸಿಕೊಂಡರಾಯಿತೆಂದು ಆತುರಾತುರವಾಗಿ ನಮಗೆ ವಿದಾಯ ಹೇಳಿದರು. ಮುಂಬೈ ಟ್ರಿಪ್ಪಿನ ನೆಪದಲ್ಲಿ ಸುಸಂಸ್ಕೃತ ಮಹಿಳೆಯೊಬ್ಬರ ಸ್ನೇಹ ಲಭ್ಯವಾದುದಕ್ಕಾಗಿ ಬಹಳ ಸಂತಸಪಟ್ಟೆ. ಮಕ್ಕಳ ಲಗ್ಗೇಜುಗಳನ್ನು ಆಗಲೇ ಅವರ ರೂಮಿಗೆ ಶಿಫ್ಟ್ ಮಾಡಿಯಾಗಿತ್ತು. ಹೋಟೆಲಿನ ಲೆಕ್ಕವನ್ನು ಬಳಗ್ಗೆಯೇ ಚುಕ್ತಾ ಮಾಡಿದ್ದೆವು. ಮಧ್ಯಾಹ್ನದ ಭೋಜನಕ್ಕಾಗಿ ನಮ್ಮ ಆತ್ಮೀಯ ಬಂಧುವೊಬ್ಬರ ಮನೆಗೆ ಹೋಗಲಿದ್ದೆವು. ಅವರು ಬಾಂದ್ರಾದಲ್ಲಿದ್ದರು. ಅದು ಮುಗಿಸಿ ನಾನು ನನ್ನ ಗೆಳತಿಯ ಮನೆಗೆ ಹೋಗುವುದು, ಮಗಳು ಕಾಲೇಜಿಗೆ ಮರಳವುದು ಎಂದು ನಿಶ್ಚೈಸಿದ್ದೆವು. ನನ್ನ ಬ್ಯಾಗುಗಳೊಂದಿಗೆ ಟ್ಯಾಕ್ಸಿಯೇರಿದೆವು. ಸುಮಾರು ಒಂದೂವರೆ ಘಂಟೆಯ ಪ್ರಯಾಣ.ನಡು ಹರೆಯ ದಾಟಿದ ನಮ್ಮ ಡ್ರೈವರನ ಹಿಂದಿ ಭಾಷೆಯ ಉಚ್ಚಾರಣೆ ಗಮನಿಸಿದಾಗ ನನಗೇನೋ ಅನುಮಾನ ಬಂತು. ಊರೆಲ್ಲಿ ಎಂದು ವಿಚಾರಿಸಿದೆ. ಕೇರಳದ ಕಣ್ಣೂರಂತೆ! ನಾವು ಕಾಸರಗೋಡಿನವರು.ಅಂದರೆ ನಾವು ನೆರೆಹೊರೆಯವರು! ಇನ್ನು ಕೇಳಬೇಕೆ? ಆತನ ಚರ್ಯೆಯೆ ಬದಲಾಗಿಹೋಯಿತು.ತೆಕೋ... ಮಲೆಯಾಳಂ ಭಾಷೆಯಲ್ಲಿ ಮಾತುಗಳ ಪ್ರವಾಹವೇ ಹರಿದು ಬಂತಯ್ಯ...., ಅದರ ಸಾರಾಂಶ ಇಷ್ಟು, ಆತ ಮೂರು ವರ್ಷದವನಿರುವಾಗ ಕುಟುಂಬದ ಸಮಸ್ತರನ್ನೂ ಕಳೆದುಕೊಂಡು ಮುಂಬೈಪಾಲಾದನಂತೆ. ಇಲ್ಲಿನವಳನ್ನೇ ಮದುಯಾದನಂತೆ. ಮಕ್ಕಳೂ 'ಮುಂಬೈಕಾರ್' ಅಗಿಹೋಗಿದ್ದಾರಂತೆ. ಎಂದಾದರೊಮ್ಮೆ ಊರಿನ ಮಣ್ಣಿನ ದರ್ಶನವನ್ನಾದರೂ ಮಾಡೋಣವೆಂದುಕೊಂಡರೆ ಅಲ್ಲಿ ಯಾರಿದ್ದಾರೆ....? ಈಗ ನಮ್ಮನ್ನು ನೋಡಿದಾಗ ಆತನ ತವರೂರಿನ ದರ್ಶನವಾದಷ್ಟೇ ಸಂತೋಷವಾಯಿತಂತೆ. ಅವನು ಕೊನೆಯ ಮಾತುಗಳನ್ನು ಹೇಳುತ್ತಿದ್ದಾಗ ಧ್ವನಿ ಗದ್ಗದವಾದಂತೆ ಭಾಸವಾಯ್ತು. ಒಂದು ಕ್ಷಣ ಕಾರಿನೊಳಗೆ ಗಂಭೀರ ಮೌನ ನೆಲೆಸಿತು. ಸನ್ನಿವೇಶವನ್ನು ಹಗುರಗೊಳಿಸಲೆಂದು ನಾವು ಮುಂಬೈಗೆ ಆಗಮಿಸಿದ ಉದ್ದೇಶವನ್ನು ಹೇಳಿದೆ.
'ತಾಯೀ..., ಮಗಳು ದಿನಾಲೂ ಈ ಆಸ್ಸ್ಪತ್ರೆಯಿಂದ ಬಾಂದ್ರಾವರೆಗೆ ಪ್ರಯಾಣ ಮಾಡೋಕಾಗುತ್ತಾ...? ಆಸ್ಪತ್ರೆ ಡ್ಯೂಟಿ ಮುಗಿಸುವಾಗ ತಡರಾತ್ರಿಯಾದರೆ ಅಷ್ಟು ದೂರ ಅವಳೊಬ್ಬಳನ್ನೇ ಕಳಿಸೋದು ಸೇಫ್ ಅಲ್ಲಾ..." ಕಳಕಳಿಯಿಂದ ಹೇಳಿದ. ನಾವೀಗ ಬಂಧುವೊಬ್ಬರ ಬೇಟಿಗಾಗಿ ಮಾತ್ರ ಹೋಗುತ್ತಿರುವುದಾಗಿಯೂ ಮಗಳ ವಾಸಕ್ಕೆ ಕಾಲೇಜು ಕ್ಯಾಂಪಸ್ ಒಳಗಡೆಯೇ ವ್ಯವಸ್ಥೆ ಇದೆಯೆಂದೂ ಹೇಳಿದೆ. ತೃಪ್ತಿಯಿಂದ ತಲೆಯಾಡಿಸಿ ನಸುನಗೆ ನಕ್ಕ. ಬಾಂದ್ರಾ ಎನ್ನುವ ಆ ಪ್ರದೇಶದಲ್ಲಿ ನಿರ್ಧಿಷ್ಟ ಸ್ಥಳದವರೆಗೆ ಮಾತ್ರ ಟ್ಯಾಕ್ಸಿಗಳು ಹೋಗಲು ಸಾಧ್ಯವಂತೆ. ಮುಂದೆ ನಾವು ಅಟೋದಲ್ಲಿ ಹೋಗಬೇಕಂತೆ. ನಮ್ಮಈ ಚಾಲಕ ನನ್ನ ಲಗ್ಗೇಜುಗಳನ್ನು ತಾನೇ ತೆಗೆದು ಅಟೋದೊಳಕ್ಕೆ ಇಟ್ಟ. ಬಾಡಿಗೆ ಕೊಡುವಾಗ ಮಗಳಿಗೆ ಏನನಿಸಿತ್ತೊ ...? ಬಾಕಿ ಚಿಲ್ಲರೆಯನ್ನು ನೀವೇ ಇಟ್ಟುಕೊಳ್ಳಿ ಎಂದು ಅಟೋ ಹತ್ತಿದಳು.ಅಟೋ ಡ್ರೈವರನಿಗೆ ನಮ್ಮನ್ನು ಜೋಪಾನವಾಗಿ ಮನೆ ತಲಪಿಸುವಂತೆ ತಾಕೀತು ಮಾಡಿ ಮಗಳಿಗೆ ಶುಭಾಷಯ ಹೇಳಿ ಬೀಳ್ಕೊಟ್ಟ. ಎಲ್ಲಿಯ ಟ್ಯಾಕ್ಸಿ ಚಾಲಕನೋ.... ಎಲ್ಲಿಯ ನಾವೋ .....? ಅಷ್ಟೂ ಹೊತ್ತು ನಮ್ಮನ್ನು ಪರಸ್ಪರ ಬಂಧಿಸಿಟ್ಟಿದ್ದು ಊರಿನ ಸೆಳೆತ ಮತ್ತು ಭಾಷೆಯ ಮೇಲಿನ ಮಮತೆ!ನಮ್ಮ ಬಂಧುಗಳ ಮನೆಯಲ್ಲಿ ಊಟ ಉಪಚಾರ,ನಗು, ಮಾತು, ಫೋಟೋ ಎಲ್ಲ ಮುಗಿಯುವಾಗ ಹೊರಗೆ ಸೂರ್ಯ ದಣಿದಿದ್ದ, ತಣಿದಿದ್ದ. ಸಿಟಿ ಲೈಫಿನ ಕೃತಕತೆ ಇಲ್ಲದ ಹೋಮ್ಲಿ... ಹೋಮ್ಲಿ ಸ್ವಭಾವದ ಸುಜಾತ ನನ್ನ ಮಗಳನ್ನು ಕಾಲೇಜಿಗೆ ಪುನಃ ತಲುಪಿಸುವ ಜವಾಬ್ದಾರಿಯನ್ನು ಹೊತ್ತುಕೊಂಡಳು. ನಾನು ಶೋಭನನ ಮನೆಯ ದಾರಿ ಹಿಡಿದೆ. ಒಂದು ಘಂಟೆ ಬಸ್ಸಲ್ಲಿ ಪ್ರಯಾಣ.ನೆರೂಲ್ ಎನ್ನುವಲ್ಲಿಗೆ ಹೋಗಬೇಕಿತ್ತು. ನಾನು ಇಳಿಯಲಿರುವ ನಿಲ್ದಾಣದಲ್ಲಿ ಅವಳು ಕಾದು ನಿಂತಿದ್ದಳು. ನಿಮಗೆ ನಮ್ಮ ಗೆಳೆತನದ ಹಿನ್ನಲೆಯನ್ನು ಹೇಳಲೇಬೇಕು. ನಾವಿಬ್ಬರು ಒಂದನೇ ತರಗತಿಯಿಂದ ಪದವಿ ಕೊನೆಯ ವರ್ಷದವರೆಗೆ ಜೊತೆಯಲ್ಲೇ ಓದಿದವರು.ಈ ಹದಿನೈದು ವರ್ಷಗಳ ಕಾಲ ನಮ್ಮಿಬ್ಬರ ದೇಹಗಳು ಬೇರೆ ಉಸಿರೊಂದೇ ಎನ್ನುವಂತಿದ್ದೆವು. ಮುಂದೆ ನಾನು ಮದುವೆಯಾದೆ. ಅವಳು ಓದನ್ನು ಮುಂದುವರಿಸಿದಳು. ನಾನು ಗೃಹಿಣಿಯಾದಮೇಲೂ ನಮ್ಮಿಬ್ಬರೊಳಗಿನ ಸಂಪರ್ಕ ಕಡಿದಿರಲಿಲ್ಲ. ಅವಳ ಕಾಲೇಜಿಗೆ ರಜಾ ಇರುವಾಗಲೆಲ್ಲ ಬೇಟಿಯಾಗುತ್ತಿದ್ದೆವು. ಅವಳು ಮದುವೆಯಾಗಿ ಮುಂಬೈಗೆ ಹೋದಮೇಲೂ ನಾವು ಮೊದಲಿನ ಗೆಳತಿಯರೇ. ಸರಕಾರೀ ಉದ್ಯೋಗಿಯಾಗಿ ತಲೆತುರಿಸಲು ಸಮಯವಿಲ್ಲದಿದ್ದರೂ ವರ್ಷಕ್ಕೊಂದು ಸಲ ರಜಾದಲ್ಲಿ ನಮ್ಮಲ್ಲಿಗೆ ಬಂದೇ ಬರುತ್ತಾಳೆ. ಬಾಲ್ಯಸ್ನೇಹಿತೆಯನ್ನು ಭೇಟಿಯಾಗುವ ಆ ಸಂಭ್ರಮಕ್ಕೆ ಆ ಸಂಭ್ರಮವೇ ಸಾಟಿ. ಸೋ... ಮುಂಬೈಯಲ್ಲಿ ಮಗಳು ಸೀಟನ್ನು ಆಯ್ಕೆ ಮಾಡಿಕೊಂಡಾಗಲೇ ನಾವಿಬ್ಬರೂ ಒಟ್ಟಿಗೆ ಇದ್ದು ಹಳೆಯ ದಿನಗಳನ್ನು ಮತ್ತೆ ಅನುಭವಿಸೋಣ ಎಂದು ಕನಸು ಕಟ್ಟಿದ್ದೆವು. ಅವರದು ಆಧುನಿಕ ಮನಸ್ಥಿತಿಯ ನ್ಯೂ ಕ್ಲಿಯರ್ ಫ್ಯಾಮಿಲಿ ಅಲ್ಲ. ಮಗ ಸೊಸೆ ಜೊತೆಯಲ್ಲೇ ಇದ್ದರು. ನಾಲ್ಕೂ ಜನ ಉನ್ನತ ಹುದ್ದೆಯಲ್ಲಿರುವವರೇ. ಮನೆ ಕೆಲಸಕ್ಕೆ ಆಳುಕಾಳುಗಳು ಯಾರೂ ಇರಲಿಲ್ಲ. ಅದರೂ ಅಲ್ಲಿ ಗಡಿಬಿಡಿ,ಗೌಜು, ಗೊಂದಲಗಳಿರಲೇ ಇಲ್ಲ.ಪ್ರೀತಿ, ವಿಶ್ವಾಸ, ಗೌರವ, ಇತ್ಯಾದಿಗಳನ್ನು ಕೊಟ್ಟು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಆ ಮನೆಯ ಸದಸ್ಯರೊಳಗೆ ಯಾವುದೇ ಬಿಗುಮಾನವಿರಲಿಲ್ಲ. ಬದಲಿಗೆ ಪೈಪೋಟಿ ಇದ್ದಂತಿತ್ತು.ನಾನು ಆ ವಾತಾವರಣವನ್ನು ಬಹಳ ಇಷ್ಟಪಟ್ಟೆ. ಮಾರನೇ ದಿನ ಬೆಳ್ಳಂಬೆಳಗ್ಗೆಯೇ ನಾವಿಬ್ಬರೇ ಮುಂಬೈ ದರ್ಶನಕ್ಕೆ ಹೊರಟೆವು. ವಯಸ್ಸು, ಸ್ಥಾನ ಮಾನಗಳ ಹಂಗು ಮರೆತು ಸುತ್ತಾಡಿದ್ದೇ ಸುತ್ತಾಡಿದ್ದು. ಜುಹೂ ಬೀಚಲ್ಲಿ ಸುಡು ಸುಡು ಜೋಳ ತಿಂದೆವು. ಫಾಸ್ಟ್ ಫುಡ್ ಸೆಂಟರಿಗೆ ನುಗ್ಗಿ ಪಾನಿ ಪೂರಿ ಮೆದ್ದೆವು...,ಇನ್ನೆಲ್ಲೋ ಮಿಸಳ್ ಭಾಜಿ ಮುಕ್ಕಿದೆವು.... (ಚಿಕ್ಕವರಿರುವಾಗ ಇದೇ ರೀತಿ ಐಸ್ಕ್ಯಾಂಡಿ ಚೀಪುತ್ತಿದ್ದೆವು). ಅಗತ್ಯವೇ ಇಲ್ಲದಿದ್ದರೂ ಸಿಕ್ಕ ಸಿಕ್ಕ ಅಂಗಡಿಗಳಿಗೆ ನುಗ್ಗಿ ಏನೇನೋ ಕಾಮೆಂಟ್ಸ್ ಮಾಡುತ್ತಾ..., ಘೊಳ್ಳನೆ ನಗುತ್ತಾ....ಮುಂಬೈಯ ಲೋಕಲ್ ಟ್ರೈನುಗಳಲ್ಲಿ ದಢ ದಢ ಹತ್ತಿಳಿಯುತ್ತಾ..., ಬಿಗ್ ಬಿ ಅಮಿತಾಬ್ ಅವರ ಮನೆಯೆದುರು ಸಾಗುವಾಗ 'ಶೋ.... ಎಷ್ಟು ಚಂದ ಮಾರಯ್ತೀ...' ಎಂದು ದೊಡ್ಡ ಧ್ವನಿಯಲ್ಲಿ ಹೇಳುತ್ತಾ..., ಪ್ರೇಕ್ಷಣೀಯ ಸ್ಥಳಗಳಲ್ಲಿ ಫೋಟೋ ಕ್ಲಿಕ್ಕಿಸುತ್ತಾ..., 6D ಕನ್ನಡಕ ಧರಿಸಿ ಹಾರರ್ ಸಿನೆಮಾ ನೋಡಿ ಬಿದ್ದೂ ಬಿದ್ದೂ ನಗುತ್ತಾ...!, ರಾತ್ರಿಯಾದದ್ದೇ ತಿಳಿಯದಂತೆ ಸಮಯ ಜಾರಿ ಹೋಗಿತ್ತು...., ಅಬ್ಬ! ಹತ್ತು ವರ್ಷಗಳಷ್ಟು ಚಿಕ್ಕವರಾಗಿ ಹೋಗಿದ್ದೆವು.ನಾವು ಮನೆಗೆ ಮುಟ್ಟುವಾಗ ರಾತ್ರಿ ಭರ್ತಿ ಒಂಭತ್ತು ಘಂಟೆ. ಮನೆ ಮಂದಿಯೆಲ್ಲಾ ಸೇರಿ ಸೊಗಸಾದ ಭೋಜನ ತಯಾರಿಸಿಟ್ಟು ನಮ್ಮನ್ನೇ ಕಾಯುತ್ತಿದ್ದರು.
ಮುಂಬೈ ನಿಂದ ಮಂಗಳೂರಿಗೆ ಒಂದ್ಸಲವಾದರೂ ಬಸ್ಸು ಪ್ರಯಾಣ ಮಾಡಬೇಕು ಎಂದು ನಮ್ಮ ಆತ್ಮೀಯರೊಬ್ಬರು ಹೇಳಿದ್ದರು. ಪ್ರಕೃತಿಯ ನೋಟ ಸವಿ ಸವಿದು ಉಣ್ಣುವಂತಿರುತ್ತೆ ಎಂದಿದ್ದರು.ಅದನ್ನು ಕಾರ್ಯಾಗತಗೊಳಿಸಲೆಂದೇ ಮಾರನೆಯ ದಿನ ಮಧ್ಯಾಹ್ನ ಮುಂಬೈನಿಂದ ಹೊರಡುವ ಬಸ್ಸಿಗೆ ಟಿಕೆಟ್ ಕಾದಿರಿಸಿದ್ದೆ.ಹೊರಡುವ ಮೊದಲೊಮ್ಮೆ ಮಗಳೊಡನೆ ಮಾತನಾಡೋಣ ಎಂದು ಫೋನಾಯಿಸಿದೆ.ಎರಡು ಮೂರು ಪ್ರಯತ್ನಗಳ ನಂತರ ಲೈನಿಗೆ ಬಂದಳು. "ಅಮ್ಮಾ..., ನಾನು ಎಮೆರ್ಜೆನ್ಸಿ ವಾರ್ಡಲ್ಲಿದ್ದೀನಿ..., ಹನ್ನೆರಡು ಘಂಟೆ ಡ್ಯೂಟಿ ಮೇಲಿದ್ದೀನಿ..., ಆ ಮೇಲೆ ಮಾತ್ನಾಡ್ಲಾ..." (ಕಟ್....)ಊಂ.... ಇದಕ್ಕೂ ಹೊಂದಿಕೊಳ್ಳಲು ನಾನು ಅಭ್ಯಾಸ ಮಾಡಿಕೊಳ್ಳಲೇಬೇಕು ಎಂದುಕೊಂಡೆ. ಹನ್ನೆರಡು ಘಂಟೆ ಡ್ಯೂಟಿ? ಹಾಗಾದರೆ ಊಟ.., ತಿಂಡಿ..ನಿದ್ದೆ..? ತಲೆ ಕೊಡವಿಕೊಂಡೆ.ಎದೆ ನೀವಿಕೊಂಡೆ. ಶೋಭಾ ನನ್ನ ಬೇಗುದಿಯನ್ನು ಸರಿಯಾಗಿ ಅರ್ಥಮಾಡಿಕೊಂಡಿದ್ದಳು. ಆದರೇನು ಮಾಡೋಣ.... ?
ಶೋಭನಾ ನನಗೆ ದಾರಿ ಖರ್ಚಿಗಿರಲೆಂದು ಹೊಸದಾಗಿ ತಿಂಡಿ,ಬಾಜಿ ತಯಾರಿಸಿದಳು. ನಾನು ನೋಡುತ್ತಲೇ ಇದ್ದೆ, ಅವಳ ಪತಿ ಎಲ್ಲವನ್ನೂ ಸೊಗಸಾದ ಅಲ್ಯುಮಿನಿಯಂ ಫಾಯಿಲ್ ಬಾಕ್ಸ್ಸಲ್ಲಿ ಪ್ಯಾಕ್ ಮಾಡಿದ್ದೂ ಅಲ್ಲದೆ ಅದರೊಂದಿಗೆ ಹಣ್ಣು, ಬಿಸ್ಕಿತ್ಸ್, ನೀರುಗಳನ್ನೂ ಜೊತೆಮಾಡಿ ನನ್ನ ಬ್ಯಾಗಲ್ಲಿ ಅಚ್ಚುಕಟ್ಟಾಗಿ ತುಂಬಿಸಿಕೊಟ್ಟರು. ಟಿಶ್ಯೂ ಪೇಪರ್ ಹಾಕಲಿಲ್ಲವೆಂದು ಮತ್ತೆ ಹೊರಗೆ ಹೋಗಿ ಅದನ್ನೂ ತಂದು ಕೊಟ್ಟರು. ನಾನು ಬ್ಯಾಗುಗಳಿಗೆ ಲಾಕ್ ಹಾಕಿರಲಿಲ್ಲ. ಅದರ ಬಗ್ಗೆ ಜಾಗರೂಕಳಾಗಿರುವಂತೆ ಮತ್ತೆ ಮತ್ತೆ ಹೇಳಿದರು. ಬಸ್ ನಿಲ್ದಾಣದವರೆಗೂ ನನ್ನ ಲಗ್ಗೇಜನ್ನು ಅವರೇ ಹಿಡಿದುಕೊಂಡಿದ್ದರು. ದೊಡ್ಡ ಬ್ಯಾಗನ್ನು ನಾನು ಬಸ್ಸಿನ ಡಿಕ್ಕಿಯಲ್ಲಿ ತುಂಬಿಸುವವಳಿದ್ದೆ. ಆದರೆ ಅವರದನ್ನುಬಸ್ಸೊಳ
ಗಿನ ಡ್ಯಾಶ್ ಬೋರ್ಡಲ್ಲೇ ಭರ್ತಿಮಾಡಿಬಿಟ್ಟರು(ಲಾಕ್ ಹಾಕಿರಲಿಲ್ಲವಲ್ಲಾ). ಇನ್ನು ನಾನು ಮರಳಿ ಗೂಡಿಗೆ....
ಬ್ರಹ್ಮನ ಕೊರಳ ಮಾಲೆಯಿಂದ ನೇರವಾಗಿ ಪ್ರಪಾತಕ್ಕೆ ಬಿದ್ದ ಮುತ್ತಿನ ಮಣಿಗಳಂತೆ ಶೋಭಿಸುತ್ತಿದ್ದ ಬಿಳಿ ಕಟ್ಟಡಗಳ ಗುಂಪು ಆಳದಲ್ಲಿ ಕಾಣುತ್ತಿತ್ತು. ಬಸ್ಸು ತಿರುವುಗಳಲ್ಲಿ ಹೋಗುವಾಗಲೆಲ್ಲ ಹಿಂದಿನ ತಿರುವಿನ ನೋಟ....ಆ ಗುಡ್ಡಗಳು... ಕಡು ಹಸಿರಿನ ಎತ್ತರದ ವೃಕ್ಷಗಳ ಸಾಲು, ಕರಿ ಕಂಬಳಿಯ ಮೇಲೆ ಪಚ್ಚೆ ಕಲ್ಲುಗಳನ್ನು ಜೋಡಿಸಿ ಮಾಲೆ ಮಾಡಿ ಇಟ್ಟರೇನೊ ಎಂಬಂತೆ ತೋರುತ್ತಿತ್ತು,ಎತ್ತರದ ಬೋಳು ಗುಡ್ಡಗಳ ನೆತ್ತಿಯಿಂದ ಬೈತಲೆ ಕೊರೆದಂತಹ ವಾರೆ ಕೋರೆಗಳು.... ಆ ಬೈತಲೆಯಲ್ಲಿ ತೆಳ್ಳಗಿನ ಬೆಳ್ಳಿ ಗೆರೆಯಂತೆ ತೋರುವ ನೀರಿನ ಲಾಸ್ಯ..... ಬಹುಷಃ ಅಲ್ಲೆಲ್ಲೋ ಮಳೆ ಬಿದ್ದಿರಬೇಕು.ಫಕ್ಕನೆ ಮಂಜು ಮುಸುಕಿಯೇ ಬಿಟ್ಟಿತು. ಕಿಟಿಕಿಯಿಂದ ಬಾಗಿ ಹಿಂತಿರುಗಿ ನೋಡಿದೆ. ಬಸ್ಸು ಸವೆಸಿದ ದಾರಿ ಬೆಟ್ಟಗಳಿಗೊರಗಿ ಮೈಚೆಲ್ಲಿ ಮಲಗಿತ್ತು. ನಿಶ್ಚಲವಾಗಿ ಬಿದ್ದ ಹೆಬ್ಬಾವಿನಂತೆ. ಹಾಗೆ ಮೇಲಕ್ಕೆ ದೃಷ್ಟಿ ಹಾಯಿಸಿದೆ. ವಾವ್....ಮುಸುಕಿದ ಮಂಜು ಸ್ವಲ್ಪ ಸ್ವಲ್ಪವಾಗಿ ಕರಗುತ್ತಿತ್ತು. ಬೆಟ್ಟದ ತುದಿಯಿಂದ ಜಾರಿ ಆಚೆಬದಿಯಲ್ಲಿ ಕಾಣೆಯಾಗಿದ್ದ ಸೂರಜ್ಜನ ಕಡುಗೆಂಪು ಕಿರಣಗಳ ಹಿನೆಲೆಯಲ್ಲಿ ಗಿರಿಶಿಖರ ಫಲ ಫಳ ಹೊಳೆಯುತ್ತಿತ್ತು! ಸತಾರ ತಲಪುವವರೆಗೂ ನನ್ನ ಕಣ್ಗಳ ಹಸಿವನ್ನು ನೀಗಿಸಿಕೊಂಡೆ. ಸಾಕಿನ್ನು ನಾಳೆ ಬಾ ಎನ್ನುವಂತೆ ದಿನಕರ ಮರೆಯಾಗಿ ಹೋದ. ಸೀಟಿಗೊರಗಿ ಕಣ್ಣುಗಳನ್ನು ಮುಚ್ಚಿಕೊಂಡೆ. ಈ ಮೂರ್ನಾಲ್ಕು ದಿನಗಳ ಘಟನಾವಳಿಗಳನ್ನು ನೆನಪು ಮಾಡಿಕೊಂಡೆ. ಮೊದಲ ದಿನದ ಟ್ಯಾಕ್ಸಿ ವಾಲಾ, ಆ ಹೋಟೆಲಿನ ಯುವಕ, ಬೆಂಗಳೂರಿನ ಆ ಮಾತೆ, ನನ್ನ ಮಗಳ ಸಹಪಾಟಿಯ ತಂದೆ, ಬಾಂದ್ರಾ ದಾರಿಯ ಟ್ಯಾಕ್ಸಿವಾಲಾ ಇವರೆಲ್ಲ ನನಗೇನಾಗಬೇಕು? ವ್ಯವಹಾರಿಕ ಸಮಾಜದ ದೃಷ್ಟಿಯಿಂದ ಏನೂ ಆಗಬೇಡ..., ದಾರಿಯಲ್ಲಿ ಹೋಗುವಾಗ ಅಡ್ಡವಾದರೂ ಮುಖ ನೋಡಬೇಕಾದ ಅಗತ್ಯವೂ ಇಲ್ಲದವರು. ಅದರೂ ಮನುಷ್ಯ ಸಹಜ ಧರ್ಮ... ಪರೋಪಕಾರ, ಕಾಳಜಿ ತೋರಿಸಿ ನಿರುಮ್ಮಳವಾಗಿ ಎದ್ದು ಹೋಗಿಬಿಟ್ಟರಲ್ಲಾ? ಲೋಡು ಲೋಡು ಥ್ಯಾಂಕ್ಸ್ ನನ್ನೊಳಗೇ ಉಳಿದುಹೊಯಿತಲ್ಲಾ? ಇನ್ನೆಂದೂ ನಾನವರನ್ನು ಭೇಟಿಯಾಗುವ ಸಾಧ್ಯತೆಗಳು ಇಲ್ಲವೇ ಇಲ್ಲ. ಇನ್ನು ಸುಜಾತ, ಶೋಭನಾ,ಅವರ ಕುಟುಂಬದವರೆಲ್ಲ ನನ್ನೊಡನೆ ಪರಿಪರಿಯಾಗಿ ಹೇಳಿದ್ದರು,' ಮಗಳಿಗೆ ಏನೇ ಅಗತ್ಯವಿದ್ದರೂ ಒಂದು ಕಾಲ್ ಮಾಡಿದ್ರೆ ಸಾಕು..., ನಾವು ಹೋಗಿ ಅವಳಿಗೆ ಏನು ಬೇಕೋ ಅದನ್ನ ಮಾಡಿ ಕೊಡ್ತೀವಿ..' ರಕ್ತ ಸಂಬಂಧವಿಲ್ಲ, ಒಡಹುಟ್ಟುಗಳಲ್ಲ, ಆದರೂ... ಎಷ್ಟು ಪ್ರೀತಿ ತೋರಿದರು.....ಕಾಳಜಿ ಮೆರೆದರು.... ಈಗ ಹೇಳಿ... ಯಾರಿಗೆಲ್ಲ ಎಷ್ಟೆಷ್ಟು ಥ್ಯಾಂಕ್ಸ್ ಹೇಳೋಣ? ಅಥವಾ ಅದು ಅಷ್ಟರಲ್ಲೇ ಮುಗಿಯುವಂತಾದ್ದೇ....??? ಬಗೆಹರಿಯದ ಈ ಸಮಸ್ಯೆಗೆ ನನಗೆ ತೋಚಿದ್ದು ಒಂದೇ ದಾರಿ,ಆ ಕಾಣದ ಶಕ್ತಿಗೆ ಮನದಲ್ಲೇ ಎರಡೂ ಕೈಯೆತ್ತಿ ಮುಗಿದುಬಿಟ್ಟೆ.
ಬರೆಹಗಾರರು ಮುಂಬೈ ಬಗ್ಗೆ ಬರೆಯುವಾಗಲೆಲ್ಲ ತಪ್ಪದೆ ಉಪಯೋಗಿಸುವ ಒಂದು ವಿಶೇಷಣ 'ಮಾಯಾ ನಗರಿ ಮುಂಬೈ' ಎಂದಲ್ಲವೇ? ನನಗಂತೂ ಹಾಗೆ ಅನಿಸಲೇ ಇಲ್ಲ. ಎಲ್ಲ ನಗರಗಳಂತೆ ಇದೂ ಇತ್ತು. ನಾವು ಸಮಯ ಪ್ರಜ್ಞೆ, ಶರೀರ ಪ್ರಜ್ಞೆ, ಸುತ್ತ ಮುತ್ತಲಿನ ಆಗುಹೋಗುಗಳನ್ನು ಚಕಚಕನೆ ಸೂಕ್ಷ್ಮವಾಗಿ ಗಮನಿಸುವ ಸುಪ್ತ ಪ್ರಜ್ಞೆ ಇವಿಷ್ಟನ್ನೂ ಎಚ್ಚರವಿರಿಸಿಕೊಂಡರೆ ಮುಂಬೈ ಆದರೂ ಒಂದೆ ಕಾಸರಗೋಡಾದರೂ ಒಂದೇ. ಪೆದ್ದಂಭಟ್ಟನಂತೆ ಸ್ವಪ್ನ ಲೋಕದಲ್ಲಿ ವಿಹರಿಸುತ್ತಾ ಇಹಲೋಕ ಮರೆತು ಸಿಟಿ ಲೈಫ್ ಎಂಜಾಯ್ ಮಾಡ್ತೀನಿ ಅಂತ ಹೊರಟರೆ ಅಲ್ಲಾದರೂ ಹಳ್ಳಕ್ಕೆ ಬೀಳಬೇಕು ಇಲ್ಲಾದರೂ ಅದೇ ಗತಿ.ಆಗ ಅಂತಹ ಜಾಗ ನಿಜ ಅರ್ಥದಲ್ಲಿ ಮಾಯಾ ನಗರಿ ಎನಿಸಿಕೊಂಡೀತು.ಅಲ್ಲವೇ?
ಪ್ರಿಯ ಓದುಗ ಮಿತ್ರರೇ..., ನಿಮಗೆ ಬೋರ್ ಹೊಡೆಯಿತೇನೋ...? ಸಂತಸವನ್ನು ಹಂಚಿಕೊಂಡರೆ ಇಮ್ಮಡಿಯಾಗುತ್ತಂತೆ. ಅದಕ್ಕೋಸ್ಕರ ನಿಮ್ಮೊಡನೆ ಹಂಚಿಕೊಂಡೆ. ಮುಂದೆ ಮತ್ತೆ ಭೇಟಿಯಾಗೋಣ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ