ಮಂಗಳವಾರ, ಆಗಸ್ಟ್ 4, 2015

ಹೀಗೊಂದಿಷ್ಟು ಟಿಪ್ಸ್....

ನಿತ್ಯ ಜೀವನದಲ್ಲಿ ನಾವು ಕೆಲವೊಮ್ಮೆ ಚಿಕ್ಕ ಪುಟ್ಟ ವಿಷಯಗಳ ಬಗ್ಗೆ ತುಂಬಾ ಕಿರಿಕಿರಿ ಅನುಭವಿಸುತ್ತಿರುತ್ತೇವೆ ಅಲ್ವೇ? ಅಂತಹ ಕೆಲವೆಲ್ಲ ವಿಷಯಗಳು ಪರಿಹಾರದೊಂದಿಗೆ ನಿಮ್ಮ ಮುಂದಿದೆ. ಓದಿ ನೋಡಿ, ಮಾಡಿ ನೋಡಿ.

ಪತ್ರೊಡೆ ತಯಾರಿಸುವಾಗ ಹುಳಿ ಉಪಯೋಗಿಸಿದರೂ ತಿನ್ನುವಾಗ ಕೆಲವೊಮ್ಮೆ ತುರಿಕೆ ಇರುತ್ತೆ.ಅದಕ್ಕಾಗಿ ರುಬ್ಬಿದ ಮಿಶ್ರಣಕ್ಕೆ ಒಂದು ಚಿಟಿಕೆ ಅಡುಗೆ ಸೋಡಾವನ್ನು  ನೀರಲ್ಲಿ ಕಲಸಿ ಸೇರಿಸಿಕೊಳ್ಳಿ. ಹೀಗೆ ಮಾಡಿದರೆ  ಯಾವುದೇ ಕಾರಣಕ್ಕೂ ಪತ್ರೊಡೆ ತಿಂದಾದ ಮೇಲೆ ಬಾಯಿ, ಗಂಟಲು ತುರಿಸುವುದಿಲ್ಲ. 

ಕೆಸುವಿನ ಸೊಪ್ಪು, ಸುವರ್ಣ ಗಡ್ಡೆ, ಪಪ್ಪಾಯಿಗಳನ್ನು ಹೆಚ್ಚಿದಾಗ ಕೈ ತುರಿಸುವುದಿದ್ದರೆ ಹುಳಿಯಿಂದ ಕೈಯ್ಯನ್ನು ಚೆನ್ನಾಗಿ ತಿಕ್ಕಿಕೊಳ್ಳಿ. ಹತ್ತು ನಿಮಿಷ ಬಿಟ್ಟು ನೀರಲ್ಲಿ ತೊಳೆಯಿರಿ. 

ಮಾವಿನ ಕಾಯಿ, ಹಲಸಿನ ಸೊಳೆಗಳನ್ನು ಉಪ್ಪಿನಲ್ಲಿ ಹಾಕಿ ದಾಸ್ತಾನು ಇಡುವಾಗ ನೇರ ಉಪ್ಪಿನಲ್ಲೇ ಮಿಶ್ರ ಮಾಡುವ ಬದಲು ಉಪ್ಪು ನೀರನ್ನು ಚೆನ್ನಾಗಿ ಕುದಿಸಿ ಹರಳು ಕಟ್ಟಿಸಿ.(ಉಪ್ಪು ನೀರು ಕುದಿದು ಬತ್ತಿದಾಗ ಮೇಲ್ಪದರ ಕನ್ನಡಿಯಂತಾಗುತ್ತೆ). ಆರಿದ ಮೇಲೆ ಉಪಯೋಗಿಸಿ. ಇದರಲ್ಲಿ ಹಾಕಿಟ್ಟ ಹಲಸು ಮಾವುಗಳು ಒಂದು ವರ್ಷ ಕಳೆದರೂ ಮೆತ್ತಗಾಗುವುದಿಲ್ಲ.  

 ಪದಾರ್ಥಕ್ಕಾಗಿ ಬಾಳೆ ಹೂ(ಕುಂಡಿಗೆ)ವನ್ನು ಹೆಚ್ಚಿ ಚೊಗರು ಬಿಡಲೆಂದು ನೀರಲ್ಲಿ ಹಾಕಿಡುತ್ತೇವೆ ತಾನೇ? ಆ ನೀರಿಗೆ ಎರಡು ಚಿಟಿಕೆ ಉಪ್ಪು ಹಾಕಿಕೊಳ್ಳಿ. ಕುಂಡಿಗೆ ಕಪ್ಪಗಾಗುವುದೇ ಇಲ್ಲ. ಕೈ ಕಪ್ಪಗಾಯ್ತೋ ನಿಂಬೆ ಸಿಪ್ಪೆಯ ಒಳಭಾಗದಿಂದ ಚೆನ್ನಾಗಿ ತಿಕ್ಕಿಕೊಳ್ಳಿ. 

ಹಾಗಲ ಕಾಯಿಯನ್ನು  ಹೆಚ್ಚುವ ಮೊದಲು ಚೆನ್ನಾಗಿ ಉಜ್ಜಿ ಉಜ್ಜಿ ತೊಳೆಯಿರಿ. ಬೇಯಿಸುವಾಗ ಮುಚ್ಚಳ ಹಾಕದೆ ಬೇಯಿಸಿ. ಇವೆರಡೂ ಅದರ ಕಹಿಯನ್ನು ಕಡಿಮೆ ಮಾಡುತ್ತೆ.

ಇಸ್ತ್ರಿ ಪೆಟ್ಟಿಗೆಯ ಉಪಯೋಗ ಹೆಚ್ಚಾದಂತೆಲ್ಲಾ ಅದರ ಮೇಲ್ಮೈ ಕಪ್ಪಗಾಗಿ, ಎಷ್ಟೋ ಸಾರಿ ಇಸ್ತ್ರಿ ಮಾಡುವಾಗ ಬಟ್ಟೆಗಳಿಗೆ ಅದು ಮೆತ್ತಿಕೊಂಡು ಅಸಹ್ಯ ಕಲೆಗಳಾಗುತ್ತವೆ ಅಲ್ವೇ? ಬಟ್ಟೆಗಳನ್ನು ಎಷ್ಟೇ ಚೆನ್ನಾಗಿ ತೊಳೆದರೂ ಅವುಗಳ ನೂಲುಗಳೆಡೆಯಲ್ಲಿ ಸೋಪಿನ ಅಂಶ ಉಳಿದಿರುತ್ತೆ. ಬಿಸಿ ಇಸ್ತ್ರಿ ಪೆಟ್ಟಿಗೆ ಇಂತಹ ಬಟ್ಟೆಯ ಸಂಪರ್ಕಕ್ಕೆ ಬಂದಾಗ ಅದು ಕರಗಿ ಮಯಣದಂತೆ ಇಸ್ತ್ರಿ ಪೆಟ್ಟಿಗೆಯ ಮೇಲ್ಮೈಗೆ ಅಂಟಿಕೊಳ್ಳುತ್ತೆ. ಇಸ್ತ್ರಿ ಹಾಕುವ ಮೊದಲು ಒಂದು ಚಿಟಿಕೆ ಸಬೀನಾ ಪುಡಿ ತೆಗೆದುಕೊಳ್ಳಿ. ಅದನ್ನು ಬರಿಗೈಯ್ಯಲ್ಲಿ ಕಪ್ಪಗಾದ ಮೇಲ್ಮೈಗೆ ಹಾಕಿ ಮೃದುವಾಗಿ ಉಜ್ಜಿ(ನೀರು ಹಾಕಬೇಡಿ). ಒದ್ದೆ ಬಟ್ಟೆಯಲ್ಲಿ ಸ್ವಚ್ಛಗೊಳಿಸಿ. ಯಾವಾಗಲೂ ಇಸ್ತ್ರಿ ಹಾಕುವ ಮೊದಲು ಇದನ್ನು ಮಾಡಿ. ಬಟ್ಟೆ ಹಾಗೂ ಇಸ್ತ್ರಿಪೆಟ್ಟಿಗೆಗಳ ಬಾಳ್ವಿಕೆ ಜಾಸ್ತಿಯಾಗುತ್ತೆ. 

ರೇಷ್ಮೆ ಬಟ್ಟೆಯನ್ನು ತೊಳೆಯಲೇ ಬೇಕಾದಂತಹ ಸಂದರ್ಭಗಳಲ್ಲಿ ಡಿಟರ್ಜೆಂಟ್ ಸೋಪು ಉಪಯೋಗಿಸಬೇಡಿ. ಟಾಯ್ಲೆಟ್ ಸೋಪನ್ನು ಅತ್ಯಲ್ಪ ಪ್ರಮಾಣದಲ್ಲಿ ಹಾಕಿ ಬ್ರಷ್ ಬಳಸದೆ ಕೈಯ್ಯಲ್ಲೇ ಮೃದುವಾಗಿ ತಿಕ್ಕಿ ಕೂಡಲೇ ತೊಳೆಯಿರಿ. ಬಣ್ಣ ಬಿಡುವಂತಹ ಬಟ್ಟೆಯಾಗಿದ್ದರೆ ಡ್ರೈಯರಲ್ಲಿ ಹಾಕಿ ತೆಗೆಯಿರಿ.

ಬಿರು ಬೇಸಿಗೆಯಲ್ಲಿ ಸೀರೆ ಉಟ್ಟು ನಡೆಯುವಾಗ ಬೆವರಿದ ಕಾಲುಗಳಿಗೆ ಬಟ್ಟೆ ಅಂಟಿಕೊಂಡು ಮುಗ್ಗರಿಸಿದಂತಾಗುತ್ತೆ ಅಲ್ವೇ? ಹಳೆಯ ಲೆಗ್ಗಿಂಗ್ಸ್ ಹಾಕಿಕೊಳ್ಳಿ. ಮೊಣಕಾಲು ತನಕ ಮಡಚಿಕೊಳ್ಳಿ.ಈಗ ಸೀರೆ ಉಟ್ಟು ಬಿರ ಬಿರನೆ ನಡೆಯಬಹುದು.  
           

        

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ