ಬುಧವಾರ, ಡಿಸೆಂಬರ್ 9, 2015

ಪಯಸ್ವಿನಿ v/s ಚಂದ್ರಗಿರಿ

".... ಈ ಕಾಸರಗೋಡು.... ಇದು ಕನ್ನಡ ನಾಡು ,ಇದರ ಮಣ್ಣು ಕನ್ನಡ, ಮನಸ್ಸು ಕನ್ನಡ, ನೋಟ ಕನ್ನಡ..., ಈ ಮಣ್ಣಿನಲ್ಲಿ ಜನಿಸಿದವರ ಮಾತೃಭಾಷೆ ಮಲೆಯಾಳವೇ ಆಗಿರಲಿ ,ತುಳು , ಕೊಂಕಣಿ  ಅಥವಾ ಇನ್ಯಾವುದೇ ಭಾಷೆ ಆಗಿರಲಿ ಅವರು ಈ ಮಣ್ಣಿನ ಮಕ್ಕಳು. ಅರ್ಥಾತ್ ಕನ್ನಡಿಗರು. ಈ ವೇದಿಕೆಯಲ್ಲಿ ನಿಂತು ಘಂಟಾ ಘೋಷವಾಗಿ ಹೇಳುತ್ತಿದ್ದೇನೆ ....,ಈ ಊರಿನ ಎಲ್ಲಾ ಖಾಸಗಿ ಹಾಗೂ ಸರಕಾರೀ ಉದ್ಯೋಗ ವಲಯಗಳಲ್ಲಿ ಕಾಸರಗೋಡಿನ ಜನತೆಗೆ ಅದ್ಯತೆ ಕೊಡಲೇಬೇಕು. ಅದು ನಮ್ಮ  ಜನ್ಮ ಸಿದ್ಧ  ಹಕ್ಕು. ನಮ್ಮ ಅನ್ನವನ್ನು ಕಸಿಯಲು ಬಂದ ಮಲೆಯಾಳಿಗಳನ್ನು ಒದ್ದೋಡಿಸಿ ....,ನಾವೆಲ್ಲರೂ ಸೇರಿ ಮತ್ತೆ ಕನ್ನಡ ನಾಡನ್ನು ಕಟ್ಟೋಣ...,ಜೈ ಕನ್ನಡಾಂಬೆ..." ಸುಮಾರು ಕಾಲು ಘಂಟೆಯ ಹೊತ್ತು ಆವೇಶ ಭರಿತಳಾಗಿ ವಿಷಯವನ್ನು ಮಂಡಿಸಿದ ಅವನಿ ವೇದಿಕೆಯ ಮೆಟ್ಟಲುಗಳನ್ನು ಇಳಿಯುತ್ತಿದ್ದಂತೆ ಕೆಚ್ಚಿನಿಂದ ಎದೆಯುಬ್ಬಿಸಿ ಮೆಟ್ಟಲುಗಳನ್ನೇರಿದ  ಸುಧಾಕರ ನಿರ್ಲಕ್ಷ್ಯದಿಂದೆಂಬಂತೆ ಅವಳನ್ನು ನೀವಾರಿಸಿಕೊಂಡು ಮೈಕಿನ ಬಳಿಗೆ ಹೋದ. ಕ್ರಾಂತಿಕಾರೀ ಶಬ್ದಗಳಲ್ಲಿ ಮಲೆಯಾಳಂ ಭಾಷೆ ಹಾಗೂ ಜನರ ಪರವಾಗಿ ಮಾತನಾಡಿ ಕೊನೆಗೆ ಸಭೆಯ ಎದುರು ಸಾಲಿನಲ್ಲಿ ಕುಳಿತಿದ್ದ ಅವನಿಯ ಕಡೆಗೆ ಇರಿಯುವಂತೆ ನೋಡುತ್ತಾ ಹೇಳಿದ," .... ತಿರುವನಂತಪುರ , ಕೊಚ್ಚಿ, ಕೊಲ್ಲಂ  ಇತ್ಯಾದಿಗಳು ಹೇಗೆ ಕೇರಳದ  ಅವುಭಾಜ್ಯ ಅಂಗಗಳೋ ಹಾಗೆಯೇ ಕಾಸರಗೋಡು ಕೂಡಾ ಕೇರಳ ರಾಜ್ಯದ ಒಂದು ತುಣುಕು..., ಆ ತುದಿಯಿಂದ ಈ ತುದಿಯವರೆಗೆ ಪ್ರತಿಯೊಬ್ಬ ಪ್ರಜೆಗೂ ಪ್ರತಿ ವಿಷಯದಲ್ಲೂ ಇಲ್ಲಿ  ಸಮಾನ ಹಕ್ಕು ಇದೆ. ನೀವು ನಮ್ಮನ್ನು ಒದ್ದೋಡಿಸಲು ನಾವೇನು ವಿದೇಶೀಯರೇ...?ಇಲ್ಲಿ ದುಡಿಯುವುದು ನಮ್ಮ ಜನ್ಮ ಸಿದ್ಧ ಹಕ್ಕು...." ಅವನ ಮುಂದಿನ ಮಾತುಗಳನ್ನು ಕೇಳಲು ಇಷ್ಟಪಡದ ಅವನಿ ಸಿಟ್ಟಿನಿಂದ ಎದ್ದು ಹೋದಳು. ಅವಳಿಗೆ ಸರಿಯಾಗಿ ಚುಚ್ಚಿದ ಖುಷಿಯಲ್ಲಿ ಸುಧಾಕರ ಬೀಗಿದ. `ಗಡಿನಾಡು - ಭಾಷೆ' ಎನ್ನುವ ವಿಷಯದ ಮೇಲಿನ ಚರ್ಚಾಕೂಟವಾಗಿತ್ತದು.
ಎಂಭತ್ತರ ದಶಕದಲ್ಲಿ ಈ ಮೇಲಿನ ದೃಶ್ಯಗಳಂತವು ನಮ್ಮ ಸರಕಾರೀ ಕಾಲೇಜಿನಲ್ಲಿ ದಿನನಿತ್ಯ ಎಂಬಂತೆ ನಡೆಯುತ್ತಿದ್ದುವು. ಅವನಿ ಕನ್ನಡ ಎಂ. ಎ . ಮೊದಲ ವರ್ಷದ ವಿದ್ಯಾರ್ಥಿನಿ. ಆಟ, ಪಾಠ, ಇತರ ಚಟುವಟಿಕೆಗಳೆಲ್ಲದರಲ್ಲೂ ಆಕೆಯೇ ಮುಂದು. ಕನ್ನಡಕ್ಕಾಗಿ ಜೀವ ಕೊಡಲೂ ತಯಾರಿದ್ದವಳು. ಸಹಜವಾಗಿಯೇ ಕನ್ನಡ ವಿದ್ಯಾರ್ಥಿ ಸಂಘದ ನಾಯಕಿಯಾಗಿ ಆಯ್ಕೆಯಾಗಿದ್ದಳು. ಐದು ಅಡಿ ಎತ್ತರದ ಪುಟ್ಟ ನಿಲುವು, ಮುದ್ದು ಮುಖ, ತೀಕ್ಷ್ನ ಕಣ್ಣುಗಳು, ಸಿಡಿ ಗುಂಡಿನಂತಹ ಮಾತುಗಳು, ಡೋಂಟ್  ಕೇರ್ ಪ್ರಕೃತಿ, ನಾಯಕತ್ವಕ್ಕೆ ಬೇಕಾದ ಎಲ್ಲಾ ಗುಣಗಳು ಅವಳಲ್ಲಿದ್ದುವು. ಕಾಲೇಜಿನಲ್ಲಿ ಅವಳ ಮತ್ತು ನನ್ನ ಆಯ್ಕೆಯ ವಿಷಯ ಬೇರೆ ಬೇರೆಯೇ ಆಗಿತ್ತಾದರೂ ಅದು ಹೇಗೋ ನಮ್ಮಿಬ್ಬರೊಳಗೆ ಗೆಳೆತನ ಬೆಳೆದಿತ್ತು. ನಾನು ಸ್ವಭಾವತಃ ಪುಕ್ಕಲು. ಆದುದರಿಂದಲೇ ಅವಳು ನನಗೆ ರೋಲ್ ಮಾಡೆಲ್. ಅವಳ ಬೆರಳೆಣಿಕೆಯ ಗೆಳತಿಯರ ಗುಂಪಿನಲ್ಲಿ ನಾನೂ ಇದ್ದೆ  ಎಂಬುದೇ ನನಗೆ ಹೆಮ್ಮೆಯ ವಿಷಯವಾಗಿತ್ತು. ಸುಧಾಕರ ಇಂಗ್ಲೀಷ್ ಬಿ.ಎ. ಕೊನೆಯ ವರ್ಷದ ವಿದ್ಯಾರ್ಥಿ. ಆರಡಿ ಎತ್ತರ, ನೋಡಲು ಸುಂದರ, ಮಾತಿನ ಚತುರ, ವಾಲಿಬಾಲ್ ಆಟಗಾರ ....,ಕಾಲೇಜಿನ ಹೀರೋ ಎನಿಸಿಕೊಳ್ಳಲು ಇಷ್ಟು ಸಾಲದೇ? ಈ ಎಲ್ಲಾ ಗುಣಗಳಿಗೆ ಕಲಶವಿಟ್ತಂತೆ ಮಲೆಯಾಳೀ ವಿದ್ಯಾರ್ಥಿ ಸಂಘದ ಅಧ್ಯಕ್ಷನೂ ಹೌದು. ಇಲ್ಲಿ ಮಲೆಯಾಳಂ ಭಾಷೆಗೆ ತಕ್ಕುದಾದ ಸ್ಥಾನಮಾನ ಸಿಗುತ್ತಿಲ್ಲ ಎಂಬುದು ಅವನ ವಾದ. ಮಲೆಯಾಳಕ್ಕಾಗಿ ಬಹಳಷ್ಟು ಕೆಲಸಗಳನ್ನು ಮಾಡುತ್ತಿದ್ದ. ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆದಷ್ಟು ಹೆಚ್ಚು ಮಲೆಯಾಳಂ ಭಾಷೆಯ ಕಾರ್ಯಕ್ರಮಗಳಿರುವಂತೆ ನೋಡಿಕೊಳ್ಳುತ್ತಿದ್ದ. ದಕ್ಷಿಣ ಕೇರಳದಿಂದ ಬಂದವನು ಇಲ್ಲೇಕೆ ಪಾರುಪತ್ಯ ಮಾಡಬೇಕು? ಎಂಬ ಅಸಹನೆ ಸ್ಥಳೀಯ ವಿದ್ಯಾರ್ಥಿಗಳಿಗೆ ಇದ್ದೇ ಇತ್ತು. ಅವನಿಯಂತೂ ಸುಧಾಕರನ ತಲೆ ಕಂಡರೆ ಉರಿದು ಬೀಳುತ್ತಿದ್ದಳು. ಅಗತ್ಯವಿದ್ದರೆ ತನ್ನ ರಕ್ತದಲ್ಲೇ ಮಲೆಯಾಳಂ ಅಕ್ಷರಗಳನ್ನು ಬರೆದು ಕೊಡಲೂ ಹಿಂಜರಿಯದ ಸುಧಾಕರ ಬಿಡುತ್ತಾನೆಯೇ? ಇವರಿಬ್ಬರ ಹಾವು, ಮುಂಗುಸಿಯ ಜಗಳ, ಜಿದ್ದಾ ಜಿದ್ದಿ, ಗುಂಡಾ ಗುಂಡಿ, ದೃಷ್ಠಿ ಯುದ್ಧ, ಮಾತಿನ ಚಕಮಕಿಗಳನ್ನು ಇಡೀ ಕಾಲೇಜೇ ಬಹು ದೊಡ್ಡ ಮೋಜು ಎನ್ನುವಂತೆ ಅನುಭವಿಸುತ್ತಿತ್ತು.
ಚರ್ಚಾಕೂಟ ನಡೆದ ಮಾರನೇ ದಿನ ಸುಧಾಕರ ಬೆಳಗ್ಗೆ ಬೇಗನೇ ಕಾಲೇಜಿಗೆ  ಬಂದಿದ್ದ.  ಅವನ ವಿಭಾಗ ಕಾಲೇಜಿನ ಮುಖ್ಯ ಬ್ಲಾಕಿನಲ್ಲಿದ್ದರೆ ಅವಳ ವಿಭಾಗ ಎರಡನೆಯ ಬ್ಲಾಕಿನಲ್ಲಿತ್ತು. ಅವಳು ಮುಖ್ಯ ಬ್ಲಾಕಿಗೆ ಅದೂ ಇವನ ತರಗತಿ ಇರುವ ಕಾರೀಡಾರಿಗೆ ಬರುವ ಅಗತ್ಯವೇ ಇರಲಿಲ್ಲ. ಆದರೂ ಈವತ್ತು ಸುಧಾಕರ ತನ್ನ ಕ್ಲಾಸಿನ ಕಡೆಗೆ ಹೋಗುತ್ತಿರುವಾಗ ವಿರುದ್ಧ ದಿಕ್ಕಿನಿಂದ ನಡೆದು ಬರುತ್ತಿರುವ ಅವನಿ ಇವನನ್ನು ನೋಡಿಯೇ ಇಲ್ಲವೆಂಬಂತೆ ಎತ್ತಲೋ ನೋಡುತ್ತಾ ಇವನನ್ನು ಹಾದುಕೊಂಡೇ ಮುಂದೆ ಹೋದಳು. `ಇವಳೇಕೆ ಇಲ್ಲಿಗೆ ಬಂದಳು?' ಸುಧಾಕರ ತಲೆ ಕೆಡಿಸಿಕೊಂಡೇ ಕ್ಲಾಸನ್ನು ಪ್ರವೇಶಿಸಿದ. ಅಲ್ಲಿ ನೋಡುವುದೇನು...? ಕರಿಹಲಗೆಯ ಮೇಲೆ ದೊಡ್ಡದಾಗಿ ಇಂಗ್ಲೀಷ್ ಅಕ್ಷರದಲ್ಲಿ ಬರೆಯಲಾಗಿತ್ತು, `ಮಲೆಯಾಳಿ...,ನೀನು ಕೊಲೆಯಾಳಿ' ಅವನಿಯಲ್ಲದೆ ಬೇರೆ ಯಾರಿಗೆ ಹೀಗೆ ಬರೆಯುವ ಧೈರ್ಯ ಉಂಟು? ಉಕ್ಕುವ ಯೌವ್ವನ, ಕೆಣಕಿದ ಯುವತಿ, ರೊಚ್ಚಿಗೆಬ್ಬಿಸಿದ ಆ ಎರಡು ಪದಗಳು.... ಇನ್ನು ಕೇಳಬೇಕೇ? ಸುಧಾಕರ ವಿಷಾಕರವಾಗಿಬಿಟ್ಟ. ಹಾಲು ಬಿಳುಪಿನ ಮುಖ ರಕ್ತದಲ್ಲಿ ಅದ್ದಿ ತೆಗೆದಂತಾಯ್ತು. `ಈವತ್ತು ಏನಾದರೂ ಒಂದು ತೀರ್ಮಾನವಾಗಲೇಬೇಕು' ಎಂದುಕೊಂಡವ ಉಟ್ಟಿದ್ದ ಪಂಚೆಯನ್ನು ಎತ್ತಿ ಕಟ್ಟಿ ( ಓದುಗ ಮಿತ್ರರೇ..., ಗಮನಿಸಿ, ಅಂದು ವಿದ್ಯಾರ್ಥಿಗಳು ಪಂಚೆಯುಟ್ಟು ಕಾಲೇಜಿಗೆ ಬರುವುದು ಕೇರಳದಲ್ಲಿ ಸಾಮಾನ್ಯವಾಗಿತ್ತು) ಹೂಂಕರಿಸುತ್ತಾ  ಎರಡನೆಯ ಬ್ಲಾಕಿನೆಡೆಗೆ ದಾಪುಗಾಲು ಹಾಕಿದ. ನಿರ್ಜನ ಕಾರಿಡಾರಿನಲ್ಲಿ ಅವನಿ ತನ್ನ ನೀಳ ಜಡೆಯನ್ನು ತೊನೆದಾಡಿಸುತ್ತಾ ರಭಸದಿಂದ ನಡೆಯುತ್ತಿದ್ದಳು. ಕರ್ಕಶ ಧ್ವನಿಯಿಂದ ಕೂಗು ಹಾಕಿದ,"ಏ...ಯ್..." ಅವಳು ತಿರುಗಿ ನೋಡಿದರೆ ತಾನೇ...? ತಾಳ್ಮೆಯ ಕಟ್ಟೆಯೊಡೆದ ಈತ ಎರಡೇ ಹೆಜ್ಜೆಗೆ ಆಕೆಯ ಬಳಿಗೆ  ಮುಟ್ಟಿದ.  ಪುಸ್ತಕಗಳನ್ನು ಎದೆಗವುಚಿಕೊಂಡು ಅವಳು ಇನ್ನೇನು ಕ್ಲಾಸಿಗೆ ಪ್ರವೇಶಿಸಬೇಕು ಎನ್ನುವಷ್ಟರಲ್ಲಿ ಸುಧಾಕರ ಬಾಗಿಲಿಗೆ ಅಡ್ಡವಾಗಿ ನಿಂತುಬಿಟ್ಟ. ಕೋಪದ ಪರಾಕಾಷ್ಠೆಯಲ್ಲಿ ಆತನ ಉಸಿರು ಹಾರಿ ಹಾರಿ ಬೀಳುತ್ತಿತ್ತು. ಧ್ವನಿ ಅದುರುತ್ತಿತ್ತು. " ಏಯ್.., ನನ್ನನ್ನು ಏನೆಂದು ತಿಳಿದೆ... ಹಾಂ...?" ಕತ್ತೆತ್ತಿ ಅವನೆಡೆಗೆ ನೋಡಿದ ಅವನಿಯ ಕಣ್ಣುಗಳು ಬೆಂಕಿಯ ಉಂಡೆಗಳಾಗಿದ್ದುವು. ಅವಳೂ ಅದೇ ದಾಟಿಯಲ್ಲಿ ಗಟ್ಟಿಸಿ ಹೇಳಿದಳು,"ಅಧಿಕ ಪ್ರಸಂಗಿ..., ಬಿಡೋ... ದಾರಿ..." ತನ್ನ ಸೊಂಟದಷ್ಟೇ ಎತ್ತರಕ್ಕಿರುವ ಅವಳ ದಾರ್ಷ್ಟ್ಯ ನೋಡಿ  ಅವನು ಇನ್ನು ತಡೆಯದಾದ. ಅವಳೆಡೆಗೆ ಬಾಗಿ ಹಲ್ಲುಕಚ್ಚಿ  ಕಿರುಚಿದ," ಯೂ..., ಬ್ಲಡೀ... ಏನಂತ ತಿಳ್ಕೊಂಡೆ ನನ್ನ...? ಈವತ್ತು ನಿನ್ಗೆ ಬುದ್ಧಿ ಕಲಿಸದಿದ್ರೆ ನಾನು ಬದುಕಿ ಏನು ಪ್ರಯೋಜನ....?" 
"ಓ..., ಹಾಗಾ...? ಏನ್ಮಾಡ್ತೀಯಾ... ಮಾಡು ನೋಡೋಣ... ಹೆದರು ಪುಕ್ಕಲ ..."
ಸುಧಾಕರ ಅವಳಿಗೆ ಹೊಡೆಯಲೆಂದು ಕೈಯೆತ್ತಿ ಸೊಂಟ ಬಾಗಿಸಿ ಇನ್ನೇನು ಬೀಸಿ ಕೆನ್ನೆಗೆ ಹೊಡೆಯಬೇಕೆನ್ನುವಷ್ಟರಲ್ಲಿ ಅವನಿ ತನ್ನ ಕೈಯ್ಯಲ್ಲಿದ್ದ ಪುಸ್ತಕಗಳನ್ನು ಅಲ್ಲೇ ಕೆಳಕ್ಕೆ ಹಾಕಿ ಒಂದು ಕೈಯಿಂದ ಅವನ ಆ ಕೈಯ್ಯನ್ನು ಬಲವಾಗಿ ಹಿಡಿದುಕೊಂಡು ಇನ್ನೊಂದು ಕೈಯಿಂದ  ತನ್ನ ಮುಖಕ್ಕೆ ಕೇವಲ ಎರಡಂಗುಲ ದೂರವಿರುವ ಆತನ ಮುಖವನ್ನು ಬಲವಂತವಾಗಿ ತನ್ನೆಡೆಗೆ ಸೆಳೆದುಕೊಂಡು ಬೆವರಿನಿಂದ ತೋಯ್ದು ಹೋಗಿದ್ದ ಆ ಕೆಂಪು ಒರಟು ಕೆನ್ನೆಗೆ ಗಟ್ಟಿಯಾಗಿ ತುಟಿಗಳನ್ನೂರಿಯೇ ಬಿಟ್ಟಳು! ಸುಧಾಕರನಿಗೆ ಏನು ನಡೆಯುತ್ತಿದೆ ಎಂದು ಅರಿವಾಗಿವ ಮೊದಲೇ ಅವಳು ಅವನನ್ನು ಬಲವಾಗಿ ತಳ್ಳಿ ಓಡಿ ಮಾಯವಾದಳು. ಇದೆಲ್ಲವೂ ಕಣ್ಣೆವೆ ಮಿಟಿಕಿಸುವಷ್ಟರಲ್ಲಿ ನಡೆದು ಹೋಗಿತ್ತು. 

 ಮುಂದೇನಾಯ್ತು...?
ಮೊನ್ನೆ ಮೊನ್ನೆ ಅವರ ಹೊಸ ಮನೆಯ ಗೃಹ ಪ್ರವೇಶಕ್ಕೆ ನನಗೆ ಕರೆ ಬಂದಿತ್ತು. ಹೋಗಿದ್ದೆ. ಸುಂದರವಾದ ಮನೆಗೆ ತಕ್ಕುದಾದ ಸುಂದರ ಗೇಟು. ಗೇಟಿನ ಒಂದು ಬದಿಯಲ್ಲಿ ಕನ್ನಡದಲ್ಲೂ ಇನ್ನೊಂದು ಬದಿಯಲ್ಲಿ ಮಲೆಯಾಳಂ ಭಾಷೆಯಲ್ಲೂ ಮನೆಯ ಹೆಸರನ್ನು ಸುಂದರವಾಗಿ ಕೆತ್ತಲಾಗಿತ್ತು. 'ಅವನಿಸುಧಾ'.  ಪೋರ್ಟಿಕೋದಲ್ಲಿ ಅವನಿಯ ಪಡಿಯಚ್ಚಿನಂತಿದ್ದ ಮಕ್ಕಳಿಬ್ಬರು ನಗುಮುಖದಿಂದ ಅತಿಥಿಗಳನ್ನು ಸ್ವಾಗತಿಸುತ್ತಿದ್ದರು. `ನಮಗೆ ಅವಳಿ ಜವಳಿ ಮಕ್ಕಳು' ಎಂದು ಅವನಿ ಹೇಳಿದ್ದು ನೆನಪಿತ್ತು. ಹೆಸರು ಕೇಳಿದೆ, ಹುಡುಗ ಚಂದ್ರಗಿರಿ, ಹುಡುಗಿ ಪಯಸ್ವಿನಿ . ಅವನಿಯ  ಜೀವನವೇ ಒಂದು ಅದ್ಭುತ...., ಇನ್ನು ಅವಳು ತನ್ನ ಮನೆ, ಮಕ್ಕಳ ಹೆಸರಿನ ಆಯ್ಕೆಯಲ್ಲಿ ತೋರಿದ ಜಾಣತನವಂತೂ ಅತ್ಯದ್ಭುತ! ಆ ಕ್ಷಣದಲ್ಲಿ ನನಗನಿಸಿದ್ದೇನೆಂದರೆ  ದಕ್ಷಿಣ ಕನ್ನಡದ ಜೀವನದಿ ಪಯಸ್ವಿನಿ ಇಲ್ಲಿ ಮುಟ್ಟುವಾಗ ಚಂದ್ರಗಿರಿಯಾಯ್ತು. ಆದರೇನಂತೆ? ಸಾಗರ ಗರ್ಭದಲ್ಲಿ ಎಲ್ಲವೂ ಒಂದಾಗಿ ಲೀನವಾದಾಗ  ಹೆಸರಿನ ಪ್ರತ್ಯೇಕತೆ ಎಲ್ಲಿ ಉಳಿಯಿತು? ಭಾಷೆ ಬೇರೆ ಬೇರೆಯಾದರೇನಂತೆ? ಸಂಸಾರ ಸಾಗರದಲ್ಲಿ ಹಾಲು ಜೇನಾಗಿ ಬೆರೆತು ಹೋದ ಕನ್ನಡತಿ ಅವನಿ, ಮಲೆಯಾಳಿ ಸುಧಾಕರರ ಕಥೆಯೂ ಇದಕ್ಕಿಂತ ಬೇರೆಯಲ್ಲ.  ಅಲ್ಲವೇ?   
   

  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ