ಮೊನ್ನೆ ಮೊನ್ನೆ ಮಾರ್ಕೆಟ್ಟಿನಲ್ಲಿ ಅನಿರೀಕ್ಷಿತವಾಗಿ ಹಳೆಯ ದೋಸ್ತಿಯೊಬ್ಬಳ ಭೇಟಿಯಾಯಿತು. ಎಷ್ಟೋ ವರ್ಷಗಳ ನಂತರದ ಭೇಟಿಯಾಗಿತ್ತದು. ಒತ್ತಾಯದಿಂದ ನನ್ನನ್ನು ತನ್ನ ಮನೆಗೆ ಕರೆದೊಯ್ದಳು. ಬಾಲ್ಯ ಸ್ನೇಹಿತೆಯರು ಎಂದ ಮೇಲೆ ಕೇಳಬೇಕೇ?ಮಾತು ಆಷಾಢದ ಮಳೆಯಾಗಿ ಸುರಿಯಿತು. ಅವಳ ಪತಿ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕನಾಗಿದ್ದ. ಸೈಡ್ ಬಿಸಿನೆಸ್ ಆಗಿ ಟ್ಯೂಶನ್ ಸೆಂಟರನ್ನೂ ನಡೆಸುತ್ತಿದ್ದ. ಅದರ ಉಸ್ತುವಾರಿ ಈಕೆಗೆ. ಒಬ್ಬನೇ ಮಗ ಹೈಸ್ಕೂಲು ಓದುತ್ತಿದ್ದ. ದುಡ್ಡಿಗೇನೂ ತೊಂದರೆ ಇದ್ದ ಹಾಗೆ ಕಾಣಲಿಲ್ಲ. ಆದರೂ ಅವರಿದ್ದುದು ಇಕ್ಕಟ್ಟಾದ ಬಾಡಿಗೆ ಮನೆಯಲ್ಲಿ. ಆ ಏರಿಯಾವೂ ಅಷ್ಟೇನೂ ಚೆನ್ನಾಗಿರಲಿಲ್ಲ. ಎಲ್ಲಿಂದಲೋ ಹರಿದು ಬರುತ್ತಿದ್ದ ಕೊಳಚೆ ನೀರು ಇವರ ಮನೆಯ ಹಿಂಬದಿಯನ್ನು ಬಳಸಿಕೊಂಡೇ ಮುಂದಕ್ಕೆ ಹೋಗುತ್ತಿತ್ತು. ಮನೆಯ ಮೆಟ್ಟಲಿನಿಂದ ಹೆಜ್ಜೆ ಕೆಳಕ್ಕಿಡುತ್ತಿದ್ದುದೇ ರಸ್ತೆಗೆ. ಮಾತಿನ ಮಧ್ಯೆ ಕೇಳಿದೆ,"ಇಬ್ಬರೂ ಕೈತುಂಬಾ ದುಡೀತಿರಂತೆ...? ಸ್ವಂತ ಸೈಟು, ಮನೆ ಇತ್ಯಾದಿ ಇನ್ನೂ ಮಾಡಿಕೊಂಡಿಲ್ವಾ...?"
"ಅಯ್ಯೋ...,ಅದೆಲ್ಲಾ ಯಾಕೆ ಕೇಳ್ತಿ ಮಾರಾಯ್ತಿ .....? ಸಿ.ಪಿ.ಸಿ.ಆರ್.ಐ. ಬಳಿಯಲ್ಲಿ ಹದಿನೈದು ಸೆಂಟ್ಸ್ ಜಾಗ ತಗೊಂಡು ಮೂರು ಬೆಡ್ ರೂಂ ಗಳ ಮನೆ ಕಟ್ಸಿದ್ದೇವೆ. ಸೈಟು, ಮನೆ ಎಲ್ಲಾ ಸೇರಿ ಸುಮಾರು ಐವತ್ತು ಅರುವತ್ತು ಲಕ್ಷ ಖರ್ಚು ಬಿತ್ತು. ಬ್ಯಾಂಕಿನ ಲೋನು ಇದೆ. ಅದು ಮುಗಿಯೋ ತನಕ ಮನೆಯನ್ನು ಬಾಡಿಗೆಗೆ ಕೊಡೋದೇ ಜಾಣತನ ಅಂತ ಇವರದ್ದು ಒಂದೇ ಹಟ. ಸೋ...,ಅಲ್ಲೀಗ ಬ್ಯಾಂಕ್ ಮ್ಯಾನೇಜರ್ ಒಬ್ರು ಫ್ಯಾಮಿಲಿಯೊಂದಿಗೆ ಇದ್ದಾರೆ. ಬಾಡಿಗೆ ದುಡ್ಡು ನೇರವಾಗಿ ನಮ್ಮ ಲೋನು ಅಕೌಂಟಿಗೆ ಜಮಾ ಆಗೋ ಹಾಗೆ ಇವ್ರು ವ್ಯವಸ್ಥೆ ಮಾಡಿದ್ದಾರೆ. ನನ್ನ ಹಣೆಬರಹ ನೋಡು..., ಆ ಮನೆಯ ಒಂದೊಂದು ಕಲ್ಲು ಮೆಲೇರುವಾಗಲೂ ನಾನೆಷ್ಟು ಕನಸು ಕಟ್ಟಿದ್ದೆ ಗೊತ್ತಾ? ನಮ್ಮ ಬೆಡ್ ರೂಂ ಬೇರೇ...., ಮಗನ ರೂಮೇ ಬೇರೆ....,ಮನೆಯ ಎದುರೊಂದು ಚಂದದ ಗಾರ್ಡನ್..., ಬಾಲ್ಕನಿಯಲ್ಲೊಂದು ಚಂದದ ಉಯ್ಯಾಲೆ....,ಹೀಗೆ ಏನೇನೋ....,ಛೆ, ಎಲ್ಲವೂ ನೀರ ಮೇಲಿನ ಗುಳ್ಳೆಯಾಗಿ ಹೋಯ್ತು...., ಈ ಕಿಷ್ಕಿಂದೆಯಲ್ಲಿರುವುದೇ ನನ್ನ ಕರ್ಮ ಆಗಿರೋವಾಗ ಯಾರನ್ನು ಏನು ಹೇಳಿ ಪ್ರಯೋಜನ? ಇಲ್ಲಿಗೇ ಮುಗೀಲಿಲ್ಲ, ಇನ್ನು ಈ ಲೋನು ಮುಗಿಯೋ ಹೊತ್ತಿಗೆ ಮಗ ಬೆಳೆದು ನಿಂತಿರ್ತಾನೆ. ಆಗ ಅವನ ಪ್ರೊಫೆಶನಲ್ ಕೋರ್ಸು...,ವೆಹಿಕಲ್ಲು, ಅದೂ ಇದೂ ಅಂತ ಮತ್ತೆ ಲೋನು...,ಅದು ಮುಗಿಯೋವರ್ಗೂ ಪುನಃ ಆ ಮನೆ ಬಾಡಿಗೆದಾರರ ಕೈಗೆ...., ಅಂತೂ ಇಂತೂ ಕುಂತಿ ಮಕ್ಕಳಿಗೆ ವನವಾಸ ಅನ್ನೋ ಹಾಗೆ ಆಗಿದೆ ನನ್ನ ಸ್ಥಿತಿ...."ಹೇಳ್ತಾ ಹೇಳ್ತಾ ಕಣ್ಣು ತುಂಬಿಕೊಂಡಳು. ಆಕೆಯ ಪತಿದೇವರ ಕಾಲರ್ ಹಿಡಿದು ಕೇಳಬೇಕೆನಿಸಿತ್ತು, `ಲೋ ..., ಮನುಷ್ಯಾ...,ಇಷ್ಟೆಲ್ಲಾ ಪೈಗೆ ಪೈ ಕೂಡಿಟ್ಟು ಮಾಡಿದ ಗಂಟನ್ನ ಏನು ಮಾಡ್ಬೇಕುಂತಿದ್ಯಾ...? ಮೇಲೆ ಹೋಗೋವಾಗ ಅದಕ್ಕೊಂದು ಸ್ಪೆಷಲ್ ವೀಸಾ ಮಾಡಿಸ್ತೀಯಾ ...?"
ಇನ್ನೊಂದು ಘಟನೆ ನೋಡಿ, ಮನೆಯ ಯಜಮಾನ ಖಾಸಗಿ ಉದ್ಯೋಗಿ. ವರಮಾನ ಚೆನ್ನಾಗಿಯೇ ಇತ್ತು. ಹೆಂಡತಿ ಗೃಹಿಣಿ. ಒಬ್ಬಳೇ ಮಗಳು. ಈತ ಹೆಂಡತಿ ಮಕ್ಕಳು ತನ್ನ ಕಣ್ಸನ್ನೆಯಡಿಯಲ್ಲೇ ಇರಬೇಕೆಂದು ಬಯಸುವ ಒಂದು ವಿಧದ ಭಯೋತ್ಪಾದಕ. ಸಮಾಜದಲ್ಲಿ ತಾನೋರ್ವ ಆಡ್ಯ ವ್ಯಕ್ತಿ ಎಂದು ತೋರಿಸಿಕೊಳ್ಳುವ ಚಪಲವೂ ಇದ್ದವ. ಒಮ್ಮೆ ಕುಟುಂಬ ಸಮೇತನಾಗಿ ಫಾರಿನ್ ಟೂರು ಮಾಡಿಬರಲು ಯೋಜನೆ ಹಾಕಿಕೊಂಡ. ಫಾರಿನ್ ಖರ್ಚು, ತನ್ನ ಗೈರು ಹಾಜರಿಯಲ್ಲಿ ಇಲ್ಲಿ ನಷ್ಟವಾಗುವ ವರಮಾನ ಎಲ್ಲವನ್ನೂ ಬರೆದು ಕೂಡಿ ಕಳೆದು ಲೆಕ್ಕ ಹಾಕಿ ನೋಡಿದ. ಆ ನಷ್ಟವನ್ನು ಸರಿದೂಗಿಸುವ ಹಿಕ್ಮತ್ತು ಏನು?? ಟೂರಿಗೆ ಇನ್ನೂ ಒಂದು ತಿಂಗಳಿದೆ ಎನ್ನುವಾಗಲೇ ಮನೆಗೆ ತರುವ ದಿನನಿತ್ಯದ ದಿನಸಿ ಸಾಮಾನುಗಳಿಗೆ ಖೊಕ್ ಕೊಡಲಾಯ್ತು. ಮನೆಯ ಹಿಂದೆ ಮುಂದೆ ಇದ್ದ ಸೊಪ್ಪು ಸೌದೆಗಳೇ ಸಾರು ಪಲ್ಯಗಳಾದುವು (ಅದೃಷ್ಟವಶಾತ್ ಅವರ ವಾಸ ಸ್ವತಂತ್ರ ಮನೆಯಲ್ಲಾಗಿತ್ತು, ಫ್ಲ್ಯಾಟ್ ವಾಸಿಗಳಾಗಿರುತ್ತಿದ್ದರೆ ಗೋಡೆಯ ಸಿಮೆಂಟನ್ನೇ ಕೆರೆದು ಅಡುಗೆ ಮಾಡಬೇಕಾಗುತ್ತಿತ್ತೇನೋ). ಕೆಲಸದ ಹೆಂಗಸಿಗೆ ಒಂದು ತಿಂಗಳು ಎಕ್ಸ್ಟ್ರಾ ರಜೆ ಸಾರಲಾಯ್ತು. ನಾಲ್ಕು ಪ್ಯಾಕೆಟ್ ಹಾಲು ತರುವಲ್ಲಿ ಎರಡು ತರೋದೇ ಅಬ್ಬಬ್ಬ ಎನ್ನುವಂತಾಯ್ತು. ಮಗಳು, `ಅಪ್ಪಾ.., ಸ್ಕೂಲು ಬ್ಯಾಗು ಹರಿದು ಹೋಯ್ತು, ಹೊಸತು ಬೇಕು' ಎಂದಾಗ `ಇನ್ನೆಲ್ಲಾ ಫಾರಿನ್ನಿಂದ ಬಂದ ಮೇಲೆ' ಎಂಬ ಉತ್ತರ ಬಂತು. ಮನೆಯಲ್ಲಿ ವಾಶಿಂಗ್ ಮೆಶೀನು ಕೆಟ್ಟು ಕೂತಿತ್ತು. ಹೆಂಡತಿ ಅದರ ಬಗ್ಗೆ ಚಕಾರ ಎತ್ತಲೇ ಇಲ್ಲ. ಅವಳಿಗೆ ಗೊತ್ತಿತ್ತು, ಎರಡು ಕೀ. ಮೀ. ದೂರವಿರುವ ಮೆಕ್ಯಾನಿಕ್ ಹುಡುಗನನ್ನು ಕರೆಯಲು ಅಪ್ಪಣೆ ಸಿಗಬೇಕಾದರೆ ತಾವು ಸಾವಿರಾರು ಕೀ. ಮೀ. ದೂರದ ವಿದೇಶ ಸುತ್ತಿ ಬರಬೇಕಾಗುತ್ತದೆ ಎಂದು. ಬಟ್ಟೆಗಳ ರಾಶಿಯನ್ನು ಕೈಯಲ್ಲೇ ಒಗೆದು ಹೈರಾಣಾಗಿ ಹೋದಳು. ಅಂತೂ ಟೂರಿಗೆ ಹೊರಡುವ ದಿನವೂ ಬಂತು. ಗಂಡ ತಲೆಯೆತ್ತಿ ಎದೆಯುಬ್ಬಿಸಿ ವಿಮಾನ ನಿಲ್ದಾಣವನ್ನು ಪ್ರವೇಶಿಸಿದರೆ ಅವನ ಕುಟುಂಬ ಗಾಳಿ ಹೋದ ಬೆಲೂನಿನಂತೆ ತೆವಳಿಕೊಂಡೇ `ಯಜಮಾನ' ನನ್ನು ಹಿಂಬಾಲಿಸಿತು. ಫಾರಿನ್ನಲ್ಲೂ ಮಗಳಿಗೆ ಸ್ಕೂಲ್ ಬ್ಯಾಗಿನದ್ದೇ ಚಿಂತೆ. ಮೋಲ್ ಒಂದರಲ್ಲಿ ಚೆಂದದ ಸ್ಕೂಲ್ ಬ್ಯಾಗು ಅವಳ ಕಣ್ಣಿಗೆ ಬಿತ್ತು. "ಅಪ್ಪಾ..., ಆ ಬ್ಯಾಗು ನನ್ಗೆ ಕೊಡ್ಸು ಪ್ಲೀಸ್..." ಸರಿ. ರೇಟಿನ ವಿಚಾರಣೆ ಆಯ್ತು. ಮೂವತ್ತು ಡಾಲರ್ ಎಂಬ ಉತ್ತರ ಬಂತು. ಮನದಲ್ಲೇ ಡಾಲರನ್ನು ರೂಪಾಯಿಗೆ ಬದಲಿಸಿ ಲೆಕ್ಕ ಹಾಕಿದ. ತಲೆ ಗಿರ್ರ್ ಎಂದಿತು. "ಇಂಡಿಯಾದಲ್ಲಿ ಇದೇ ದುಡ್ಡಿಗೆ ಎರಡ್ಮೂರು ಸ್ಕೂಲ್ ಬ್ಯಾಗುಗಳು ಆರಾಮದಲ್ಲಿ ಸಿಗಬಹುದು...., ನಾನು ಬೆವರು ಸುರಿಸಿ ದುಡಿದ ದುಡ್ಡಿನ ಬೆಲೆ ನಿಂಗೇನು ಗೊತ್ತು...? ಆಂ...?ಇಲ್ಲಿ ಅದೆಲ್ಲಾ ಏನೂ ಬೇಡಾ..., ನಡಿ ಮುಂದಕ್ಕೆ..." ಎಂದ. ರಭಸದಿಂದ ಓಡುತ್ತಿದ್ದ ವಾಹನದ ಚಕ್ರದಡಿಗೆ ಸಿಲುಕಿದ ಹಣ್ಣಂಬಟೆಯಂತಾದಳು ಮಗಳು. ಫಾರಿನ್ನಿಂದ ಬಂದ ಮೇಲೂ ಟೂರಿನಾಲ್ಲದ ಖರ್ಚನ್ನು ಭರ್ತಿ ಮಾಡಲು ಒಂದು ತಿಂಗಳು ಓವರ್ ಟೈಮ್ ದುಡಿದು ಸಮಾಧಾನದ ನಿಟ್ಟುಸಿರು ಬಿಟ್ಟ ಆ ಪುಣ್ಯಾತ್ಮ.
ಮೇಲಿನ ಎರಡೂ ಘಟನೆಗಳಲ್ಲಿ ಸಮಾನವಾದ ಒಂದಂಶವನ್ನು ಗಮನಿಸಿದ್ದೀರಾ? ದುಡ್ಡಿನ ಇಡಿಗಂಟೊಂದು ಬಗಲಲ್ಲಿ ಇಲ್ಲದಿದ್ದರೆ ನಾಳೆಗಳು ಹೇಗೋ ಏನೋ ಎಂಬ ಅತಿಯಾದ ಭಯ ಹಾಗೂ ಚಿಂತೆಯೇ ಅಲ್ಲಿದ್ದುದು. ಹಾಗಾದರೆ ದುಡ್ಡಿನ ಅಗತ್ಯವೇ ಇಲ್ಲವೇನು? ಎಂದು ಕೇಳಬೇಡಿ. ದುಡ್ಡಿದ್ದವನೇ ದೊಡ್ಡಪ್ಪ. ಅದು ಖಂಡಿತಾ ಬೇಕೇ ಬೇಕು. ಆದರೆ ಅದು ಅಡುಗೆಗೆ ಉಪ್ಪಿನಂತೆ, ಉರಿವ ದೀಪಕ್ಕೆ ಎಣ್ಣೆಯಂತಿರಬೇಕು. ಮ್ಯಾನೇಜ್ಮೆಂಟ್ ಗುರುವೊಬ್ಬ ಹೇಳುತ್ತಾನೆ, `Father And Mother I Love You ಇದರ ಹ್ರಸ್ವ ರೂಪವೇ Family' ಅಂತ. ಎಷ್ಟು ಚೆಂದದ ಮಾತುಗಳು! ಇಂದಿನ ತೀಕ್ಷ್ಣಮತಿ, ಚುರುಕು ಮಕ್ಕಳು ಮನದುಂಬಿ ಆ ವಾಕ್ಯವನ್ನು ಹೇಳಬೇಕಾದರೆ ಅಪ್ಪ, ಅಮ್ಮ ಪರಸ್ಪರ ಹೇಗಿರಬೇಕು? ಮಕ್ಕಳೊಂದಿಗೆ ಅವರಿಬ್ಬರೂ ಹೇಗಿದ್ದರೆ ಚೆನ್ನ? ಅಂತಸ್ತಿನ ಹಿಂದಿನ ಓಟಕ್ಕೆ ಒಂದು ಕ್ಷಣ ವಿರಾಮ ಕೊಟ್ಟು ಯೋಚಿಸಿದರೆ ತಿಳಿಯುತ್ತೆ, ಜೀವನದ ಸುಂದರತೆ ಇರುವುದು ಅಲ್ಲೇ....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ