ಶನಿವಾರ, ಜನವರಿ 16, 2016

ಅಸಹಿಷ್ಣುತೆ -ಭಾಗ 2.

ಶ್ವೇತ ಪದ್ಮಾ ಅವರ ಬಳಿ ಮೊಬೈಲ್ ಫೋನು ಇರಲಿಲ್ಲ! ಸೋ..,ಮಾರನೆ ದಿನ ಬೆಳಗ್ಗಿನಿಂದ ಅವರ ಲ್ಯಾಂಡ್ ಲೈನು ಒಂದೇ ಸಮನೆ ಬಾಯಿಬಡಿದುಕೊಳ್ಳತೊಡಗಿತು. ಪ್ರತಿಸಲವೂ ಈ ನಮ್ಮ ಸಾಹಿತಿವರೇಣ್ಯರು ಗಾಳಿಯಲ್ಲಿ ತೇಲುವಂತೆ ಬಂದು ನಗುಮುಖದಿಂದ ಫೋನಿನ ಕರೆಯನ್ನು ಸ್ವೀಕರಿಸಿದರು. ದಿನಪತ್ರಿಕೆಗಳನ್ನು ಓದಿದ ಅವರ ಅಭಿಮಾನಿಗಳು ಫೋನಾಯಿಸಿ ತಾರಾಮಾರಾ ಮೆಚ್ಚುಗೆಯ ಬಿರುಮಳೆಯನ್ನೇ ಸುರಿಸತೊಡಗಿದರು. ಆದರೆ ಅವರ ಖಾಸಾ ದೋಸ್ತಿ ಸುಮನಾ ಪೈ ಮಾತ್ರ ಪದ್ಮಾ ಅವರ ಸೊಸೆಯ ಮೊಬೈಲಿಗೆ ಕರೆ ಮಾಡಿದರು.
"ಹಲೋ.., ಪ್ರೀತಿ.., ನಾನು ಸುಮಾ ಆಂಟಿ..., ಅಲ್ಲಾ.., ಈ ಪದ್ಮಾಗೆ ಏನು ರೋಗ ಬಡಿದಿದೆ ಅಂತ ಅವಾರ್ಡು ವಾಪಾಸು ಮಾಡಲು ಹೊರಟಿರೋದು  ..?"
"ಪ್ರೀತಿ ಹೊಟ್ಟೆ ತುಂಬಾ ನಕ್ಕು ತಮ್ಮ ಮಾತುಗಳು ಅತ್ತೆಯ ಕಿವಿಗೆ ಬೀಳದಷ್ಟು ದೂರ ಹೋಗಿ ಉತ್ತರಿಸಿದಳು. "ಆಂಟೀ, ಈವತ್ತು ಬೆಳಗ್ಗಿಂದಾ ಅತ್ತೆಯ ಸಂಭ್ರಮವನ್ನು ನೀವು ನೋಡ್ಬೇಕಿತ್ತು.., ಹೀಗಾದ್ರೂ ತಾನು ಸೆಂಟರ್ ಆಫ್ ಅಟ್ರಾಕ್ಷನ್ ಆದೆಯಲ್ಲಾ ಅನ್ನೋ ಸಮಾಧಾನ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಈಗ ಒಂದಾರು ತಿಂಗಳ ಹಿಂದೆ ಶ್ರೇಷ್ಟ ಸಾಹಿತಿಗಳಿಗೆ ಕೊಡುತ್ತಿದ್ದ ಟಿ. ಎ., ಡಿ. ಎ., ಗಳನ್ನು ಸರ್ಕಾರ ಖೈದು ಮಾಡಿದ್ದು ನಿಮಗೆ ಗೊತ್ತೇ ಇದೆಯಲ್ಲಾ? ಅಂದಿನಿಂದಲೂ ಅತ್ತೆ ಒಂತರಾ ಡಿಪ್ರೆಸ್ಸ್ ಆದ ಹಾಗಿದ್ದಾರೆ. ಸ್ವಂತ ಖರ್ಚಿಗೇನೂ ತೊಂದರೆಯಾಗದ ಹಾಗೆ ಅವರ ಖಾತೆಯಲ್ಲಿ ಧಾರಾಳ ದುಡ್ಡು ಇರುವ ಹಾಗೆ ಮಗ ನೋಡಿಕೊಳ್ತಾರೆ. ಆದರೂ ಅತ್ತೆಗೆ ಅಸಮಾಧಾನ. ಇತ್ತೀಚೆಗೆ ಅವರ ಬರವಣಿಗೆಗೂ ಡಿಮ್ಯಾಂಡು ಕಡಿಮೆಯಾಗಿದೆ ಅನ್ಸುತ್ತೆ. ಈವಾಗ ಜಮಾನಾ ಪೂರ್ತಿಯಾಗಿ ಬದಲಾಗಿ ಹೋಗಿದೆ ಎಂಬುದನ್ನು ಅವರು ಒಪ್ಪಿಕೊಳ್ಳಲು ತಯಾರಿಲ್ಲ. ಮೊದಲಿನ ಹಾಗೆ ಕೆ. ಜಿ. ಗಟ್ಟಲೆ ಬರೆದು ಹಾಕಿದ್ರೆ ಇವತ್ತು ಓದೋರು ಯಾರಿದ್ದಾರೆ? ಓದುಗರು ಇಲ್ಲದ ಮೇಲೆ ಪ್ರಕಟಿಸೋ ಧೈರ್ಯ ಯಾರು ಮಾಡ್ತಾರೆ? ಮೊನ್ನೆ ಮೊನ್ನೆ ಅತ್ತೆ  ಕಥೆಗಳನ್ನು ಬರೆದು ಎರಡ್ಮೂರು ಪತ್ರಿಕೆಗಳಿಗೆ ಕಳಿಸಿದ್ದರು. ಒಂದು ಕಾಲದಲ್ಲಿ ಅವರ ಬಳಿ  ಬಂದು ದಮ್ಮಯ್ಯ ಗುಡ್ಡೆ ಹಾಕಿ ಬರೆಸಿಕೊಂಡು ಹೋಗುತ್ತಿದ್ದ ಅದೇ ಪತ್ರಿಕೆಗಳು ಮೊನ್ನೆಯ ಇವರ ಬರಹಗಳನ್ನು ನೋಡಿ ಅವುಗಳನ್ನು  ಚಿಕ್ಕದು ಮಾಡಿ ಕಳ್ಸಿ ಎಂದು ವಾಪಾಸು ಮಾಡಿಬಿಟ್ಟುವು. ಸಾಲದುದಕ್ಕೆ ಕಂಪ್ಯೂಟರಲ್ಲಿ ಟೈಪ್ ಮಾಡಿ ಮೇಲ್ ಮಾಡಿ ಎಂದರು. ಸ್ಮಾರ್ಟ್ ಫ಼ೋನು ಇಟ್ಕೊಳ್ಳಿ, ತಮಗೆ ಸಂಪರ್ಕಕ್ಕೆ ಅನುಕೂಲ ಆಗುತ್ತೆ ಅಂತಾನೂ ಹೇಳಿಬಿಟ್ಟಿದ್ದರು. ಪತ್ರಿಕೆಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡಲೇ ಬೇಕು ತಾನೇ? ಆದರೆ ಅತ್ತೆ ಅದನ್ನೆಲ್ಲಾ ಅರ್ಥ ಮಾಡಿಕೊಳ್ಳದೆ ಸಂಪಾದಕರು ತಮ್ಮನ್ನು ಅವಮಾನಿಸಿದ್ದಾರೆ, ಅವರಾಡಿದ  ಮಾತುಗಳು ತಮ್ಮ ವ್ಯಕ್ತಿತ್ವಕ್ಕೇ ಬಿದ್ದ ಕೊಡಲಿ ಪೆಟ್ಟು ಎಂದೆಲ್ಲಾ ಹೇಳುತ್ತಿದ್ದಾರೆ. ಕಂಪ್ಯೂಟರ್, ಮೊಬೈಲ್, ಸ್ಮಾರ್ಟ್ ಫೋನುಗಳ ಎ.ಬಿ.ಸಿ.ಡಿ. ಅವರಿಗೆ ಗೊತ್ತಿಲ್ಲ. ಮೊಮ್ಮಗ ಅವರಿಗೆ ಕಲಿಸುವ ಉತ್ಸಾಹ ತೋರಿಸಿದಾಗ ಅವರ ಅಹಂಗೆ ಪೆಟ್ಟು ಬಿತ್ತು. `ನೀನು ಚೋಟುದ್ದದ ಹುಡುಗ ನನಗೇ ಕಲಿಸುವಷ್ಟು ಬೆಳೆದುಬಿಟ್ಯಾ.?' ಎಂದು ಗರಂ ಆದರು. ಅವರಿಗೆ ಕಾಲಕ್ಕೆ ತಕ್ಕಂತೆ ತಾನಿಲ್ಲ ಎಂಬ ಕೀಳರಿಮೆ ಕಾಡ್ತಾ ಇದೆ. ಹಾಗೆಂದು ತಮ್ಮಲ್ಲಿರುವ ಅರೆಕೊರೆಗಳನ್ನು ಸರಿಪಡಿಸಿಕೊಂಡು ನಮ್ಮೊಂದಿಗೆ ಹೆಜ್ಜೆ ಹಾಕೋ ಮನಸ್ಸೂ ಇಲ್ಲ. ಯಾವಾಗಲೂ ಅಸಹನೆ, ಸಿಟ್ಟು, ಸೆಡವು ...., ನನಗೆ ಟಾಂಗ್ ಕೊಡೋದು ಅಂದ್ರೆ ಅವರಿಗೆ ಅದೇನೋ ಒಂತರಾ ಖುಷಿ. ಫ್ರೀ ಟೈಮಲ್ಲಿ ನಾನು ಇಂಟರ್ನೆಟ್ಟು, ಫ಼ೇಸ್ಬುಕ್ಕು, ವಾಟ್ಸಾಪ್ಪು ಅಂತೆಲ್ಲಾ ಜಾಲಿಯಾಗಿದ್ರೆ ಅವರು ಸಹಿಸೋಲ್ಲಾ...,`ಗಂಡ, ಅತ್ತೆ, ಮನೆ, ಮಕ್ಕಳು ಅನ್ನೋ ಗೊಡವೆಯೇ ಇಲ್ಲಾ..., ಇಡೀ ದಿನ ಆ ಫೋನಿನ ಹಗ್ಗವನ್ನ  ಕಿವಿಯಲ್ಲಿಟ್ಕೊಂಡು ಹುಚ್ಚರ ಹಾಗೆ ಒಬ್ಬಳೇ ನಗೋದು, ಮಾತನಾಡೋದು...,ಜೊತೆಯಲ್ಲಿರೋ ಜೀವಂತ ಮನುಷ್ಯರೊಂದಿಗೆ ಮುಖಕೊಟ್ಟು ಒಂದು ಮುಗುಳ್ನಗು ಬೀರಲೂ ಈ ಮನೆಯಲ್ಲಿ ಯಾರಿಗೂ ಟೈಮೇ ಇಲ್ಲಾ...' ಎಂದೆಲ್ಲಾ  ವಟಗುಟ್ಟುತ್ತಲೇ ಇರ್ತಾರೆ. ಏನೋ ಪ್ರಾಯದ ದೋಷ ಎಂದುಕೊಂಡು ನಾನು ಸುಮ್ಮನಿರ್ತೀನಿ ಅಂದ್ರೆ ಮಕ್ಕಳು ಸುಮ್ಮನಿರ್ತಾರೆಯೇ? ಮೊನ್ನೆ ನಮ್ಮ ಮಹಿಗೂ ಅವರಿಗೂ ಇದೇ ವಿಷಯಕ್ಕೆ ದೊಡ್ಡ ಜಗಳವೇ ಆಯಿತು. ಆಂಟೀ.., ಕೊನೆಗೆ ಸಿಟ್ಟು ತಡೆಯಲಾರದೆ ಮಹಿ ಸುತ್ತ ಮುತ್ತಲಿನ ನಾಲ್ಕು ಮನೆಗಳಿಗೆ ಕೇಳಿಸುವಂತೆ ಗಟ್ಟಿಯಾಗಿ ಕಿರುಚಿಬಿಟ್ಟಳು, `ಅಜ್ಜೀ.., ನಿಮ್ಮ ಕಾಲಕ್ಕೆ ನೀವು ದೊಡ್ಡ ಸಾಹಿತಿ ಇರಬಹುದು. ಆದರೆ ಈಗ ಏನಿದ್ರೂ ಕಂಪ್ಯೂಟರ್, ಸ್ಮಾರ್ಟ್ ಫೋನುಗಳ ಜಮಾನಾ, ನಿಮ್ಮಂತಹ ಕಂಪ್ಯೂಟರ್ ಇಲ್ಲಿಟರೇಟುಗಳಿಗೆ ನಾವು ಏನು ಮಾಡ್ತೀವೋ ಅದು ಅರ್ಥವೇ ಆಗದು., ಒಂದೋ ಅವಗಳನ್ನು ಕಲಿತು ನಮ್ಮನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ ಇಲ್ಲಾ ಬಾಯ್ಮುಚ್ಚಿ ನಿಮ್ಮ ರೂಮಲ್ಲಿ ಕುಳಿತು ಲೋಡುಗಟ್ಟಲೆ ಬರೆದು ಕ. ಬು. ರಾಯನ ಹೊಟ್ಟೆ ತುಂಬಿಸ್ತಾ ಇದ್ದು ಬಿಡಿ' ಅಂದು ಬಿಟ್ಟಳು! ಅಂದೇ ಕೊನೆ...,ಆ ಮೇಲೆ ನಮ್ಮೊಂದಿಗೆ ಮಾತನಾಡ್ತಾ ಇಲ್ಲಾ. ಊಟ, ತಿಂಡಿ ಎಲ್ಲ ಹೊರಗಡೆನೇ..." ಕಣ್ಣೊರೆಸಿಕೊಂಡ ಪ್ರೀತಿ ಗದ್ಗದ ಸ್ವರದಲ್ಲಿ ಹೇಳಿದಳು," ಈಗ ನೋಡಿದ್ರೆ ಪ್ರಶಸ್ತಿ ವಾಪಾಸು ಮಾಡ್ತೀನಿ ಅನ್ನೋ ಹೊಸ ನಾಟಕ ಶುರು ಹಚ್ಕೊಂಡಿದ್ದಾರೆ..."
"ಓ...,ಇದಾ ವಿಷಯಾ....? ಹೀಗೇ ಏನೋ ಇರಬೇಕು ಅಂದ್ಕೊಂಡಿದ್ದೆ. ಸನ್ಮಾನ, ಬಿರುದು, ಪ್ರಶಸ್ತಿಗಳನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸೋಳು ಇದ್ದಕ್ಕಿದ್ದಂತೆ ಸಮಾಜ ಸುಧಾರಕಿಯ ಪೋಸ್ ಕೊಡೋದು ಅಂದ್ರೇನು? ಪ್ರೀತೀ..., ಸಮಾಧಾನ ಮಾಡ್ಕೋ..., ನಾನಿರೋವಾಗ ನೀವ್ಯಾರೂ ಚಿಂತೆ ಮಾಡಬೇಕಾಗಿಲ್ಲ.... ಅವ್ಳನ್ನ ಸರಿ ದಾರಿಗೆ ತರೋ ಜವಾಬ್ದಾರಿ ನನ್ನದು...., ಓ.ಕೆ? ಬಾ...ಯ್."
"ಥ್ಯಾಂಕ್ಯೂ ಸೋ ಮಚ್ ಆಂಟೀ..., ನಿಮ್ಮ ಉಪಕಾರವನ್ನ ಲೈಫ಼ಲ್ಲಿ ಮರೆಯಲಾರೆ" ಎಂದಳು ಪ್ರೀತಿ. 
ಪ್ರೀತಿಯೊಡನೆ ಮಾತು ಮುಗಿಸಿದ ಸುಮನಾ ಲ್ಯಾಂಡ್ ಲೈನಿಗೆ ಕರೆ ಮಾಡಿದಳು. `ಈ ನಂಬರು ಇನ್ನೊಂದು ಕರೆಯಲ್ಲಿ ನಿರತವಾಗಿದೆ' ಎಂಬ ಸಿದ್ಧ ಉತ್ತರವನ್ನೇ ಕೇಳಿ ಕೇಳಿ ಆಕೆಯ ತಲೆ ಚಿಟ್ಟು ಹಿಡಿದು ಹೋಯ್ತು.ಅಭಿಮಾನಿಗಳ ಕರೆ ಇರಬೇಕು ಎಂದು ಹಲ್ಲು ಕಡಿದುಕೊಂಡಳು.  ಕೊನೆಗೂ ಶ್ವೇತಪದ್ಮಾ ಲೈನಿಗೆ ಬಂದರು. 
"ಹಲ್ಲೋ.., ನಾನು ಸುಮನಾ ಮಾರಾಯ್ತೀ..., ಸುಮ್ಮೀ..."
"ಓ ಏನು ಭಾರೀ ಅಪ್ರೂಪಾ...? ಎಂದು ಶುರುವಾದ ಪದ್ಮಾ ಮಾತು ಪ್ರಶಸ್ತಿ ವಾಪಾಸಾತಿಯ ಬಗ್ಗೆ ಸಮರ್ಥನೆ, ಸರಿಯಿಲ್ಲದ ಈ ಸಮಾಜ, ಸರ್ಕಾರಗಳಿಗೆ ಕ್ಯಾಕರಿಸಿ ಉಗುಳುವಲ್ಲಿಯವರೆಗೆ ಸುಮಾರು ಅರ್ಧ ಘಂಟೆ ಹೊತ್ತು ಏರುಗತಿಯಲ್ಲೇ ಸಾಗಿತು. ಆ ಮೇಲೆ ತಮ್ಮ ಮನೆ, ಮಗ, ಸೊಸೆ, ಮೊಮ್ಮಕ್ಕಳ ಬಗ್ಗೆ ಹೇಳುತ್ತಾ ಹೋದ ಹಾಗೆ ಸ್ವರ ಮಂದ್ರಸ್ತಾಯಿಯಲ್ಲಿ ಸಾಗಿ ಕೊನೆಗೆ ಮೂಗು ಸೊರ ಸೊರ,  ಕಣ್ಣು ಬಳ ಬಳ ಆಗಿ ಒಡಕು ಧ್ವನಿಯಲ್ಲಿ ಗೊಣಗಿದರು, ಅಲ್ಲ.., ಸುಮ್ಮೀ ..., ನಾನು ಯಾರಿಗಾಗಿ ಬದುಕಬೇಕು ಹೇಳು? ಸಮಾಜಕ್ಕಾಗಿ ನಾನು ಎಷ್ಟೆಷ್ಟು ಒಳ್ಳೆಯ ಪುಸ್ತಕಗಳನ್ನು ಬರೆದೆ, ಈಗಲೂ ಬರೆಯುತ್ತಲೇ ಇದ್ದೇನೆ. ಆದರೆ ಜನರೆಲ್ಲಾ ಹಾಳಾಗಿ ಹೋಗಿದ್ದಾರೆ. ಅದೇನೋ ಹಾಳು ಮೂಳು ಕಂಪ್ಯೂಟರು, ಮೊಬೈಲು ಎಂದುಕೊಂಡು ಅಧೋಗತಿಗೆ ಇಳಿಯುತ್ತಿದ್ದಾರೆ....,ನಾನು ಹೇಳುವುದು ಯಾರಿಗೂ ಬೇಡವಾಗಿದೆ..." 
ಹೋಲ್ದಾನ್.....,ಹೋಲ್ಡ್ ಆನ್...,ಪದ್ಮಾ, ಒಂದ್ನಿಮಿಷ ಸುಧಾರಿಸಿಕೋ.., ನಾನು ಹೇಳೋದನ್ನ ಗಮನಕೊಟ್ಟು ಕೇಳು. ಆಗಿನಿಂದಾ ನಿನ್ನ ಮಾತುಗಳನ್ನು ಗಮನಿಸುತ್ತಲೇ ಇದ್ದೆ. ನಿನ್ನ ಪ್ರತಿ ವಿಚಾರಗಳಲ್ಲೂ `ನಾನು, ನಾನು' ಗಳೇ ತುಂಬಿ ಹೋಗಿವೆಯಲ್ಲಾ? ಯೋಚನೆಗಳಲ್ಲಿ, ಮಾತುಗಳಲ್ಲಿ ಒಂದು ಚಿಕ್ಕ ಮಾರ್ಪಾಡು ಮಾಡಿಕೋ. `ನಾನು' ಇರುವೆಡೆಯೆಲ್ಲಾ `ನಾವು' ಮಾಡ್ಕೋ, ಇನ್ನು `ನನ್ನದು' ಎನ್ನುವಲ್ಲೆಲ್ಲಾ `ನಮ್ಮದು' ಎಂದು ಕರೆಕ್ಷನ್ ಮಾಡ್ಕೋ.... ಅರ್ಥವಾಗಿಲ್ವಾ? ಉದಾಹರಣೆಗೆ... `ನನ್ನ ಮನೆ' ಎನ್ನುವ ಬದಲು `ನಮ್ಮ ಮನೆ' ಎಂದುಕೋ... ಆಗ ನೋಡು, ಆ ಮನೆಯೊಳಗಿನವರೆಲ್ಲಾ ನಿನ್ನೊಳಗೇ ಸೇರಿಹೋದರು. ಅವರೂ ನೀನೂ ಒಂದೇ ಆದ್ಮೇಲೆ ನಿನಗೆ ದೂರು ಹೇಳಲು ವಿಷಯವಾದರೂ ಎಲ್ಲಿದೆ? ಹಾಗೆಯೇ ನಿನಗೆ ದೊರೆತ ಕ.ಲೋ.ತಿ. ಪ್ರಶಸ್ತಿ ಇಡೀ ಕನ್ನಡ ಸಾಹಿತ್ಯ ಲೋಕಕ್ಕೆ ಸಂದ ಗೌರವ ಎಂದು ತಿಳ್ಕೋ, ನೀನೊಬ್ಬಳೇ ಅದಕ್ಕೆ ಹಕ್ಕು ಭಾದ್ಯಳಲ್ಲ, ಸಹೃದಯ ಓದುಗರು ಇಲ್ಲದಿರುತ್ತಿದ್ದರೆ ನೀನೆಲ್ಲಿರುತ್ತಿದ್ದೆ? ಅಸಹಿಷ್ಣುತೆ ಇರೋದು ಈ ದೇಶದೊಳಗಲ್ಲ..., ನಿನ್ನೊಳಗೆ...,ಓ..., ಮಾತಿನ ಭರದಲ್ಲಿ  ಏನೇನೋ ಹೇಳಿಬಿಟ್ಟೆ...., ನಿನ್ನಂತಹ ಬುದ್ಧಿವಂತೆಗೆ ಇಂತಹ ಸಿಲ್ಲಿ ವಿಚಾರಗಳನ್ನ ಹೇಳಬೇಕಾಗಿಯೇ ಇಲ್ಲ. ಅದೆಲ್ಲಾ ಹೋಗಲಿ, ಈವತ್ತು ಸಂಜೆ ನಾನು ನಿಮ್ಮ ಮನೆಗೆ ಬರೋಳಿದ್ದೇನೆ. ನನ್ನ ಕೈಯ್ಯಲ್ಲಿ ಲ್ಯಾಪ್ ಟಾಪು, ಸ್ಮಾರ್ಟ್ ಫ಼ೋನು ಎರಡೂ ಇರುತ್ತೆ. ಇವತ್ತಿನಿಂದ ನೀನು ನನ್ನ ಸ್ಟೂಡೆಂಟು, ರೆಡಿಯಾಗಿರು...,ಬಾ...ಯ್..."
" ಏನೂ...!!? ಹಲೋ...,ಹಲೋ...,ಸುಮ್ಮೀ..., ಸುಮ್ಮೀ... " ಶ್ವೇತ ಪದ್ಮಾ ಸ್ವರ ಕಾತರದಿಂದ ನಡುಗುತ್ತಿತ್ತು. ಆದರೆ ಆ ಕಡೆಯಿಂದ ಉತ್ತರ ಬರಲೇ ಇಲ್ಲ. 
`ಛೆ, ಇನ್ನು ಸಂಜೆಯವರೆಗೂ ಕಾಯಬೇಕಲ್ಲಾ...' ಎಂದುಕೊಂಡರು. 
                                                                                                                                 (ಮುಗಿಯಿತು)            

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ