ಸೋಮವಾರ, ಡಿಸೆಂಬರ್ 14, 2015

ಅಮ್ಮಾ...,ನಿನ್ನ ತೋಳಿನಲ್ಲಿ....

"ಶಾರೀ..., ಪ್ಲೀಸ್ ...,ಸ್ವಲ್ಪ ಅರ್ಥ ಮಾಡ್ಕೋ ..., ಮಕ್ಕಳು ಟೀನೇಜಲ್ಲಿ ಸ್ವಲ್ಪ ಹಾಗೇ.... ನಾವು ಏನು ಹೇಳ್ತೆವೋ ಅದಕ್ಕೆ ಉಲ್ಟಾ ಹೊಡೆಯೋದು ಸಹಜವೇ... ಹಾಗೆಂದು ನಾವು ಅಸಹನೆ,ಸಿಟ್ಟು ತೋರಿಸಿ ಅವರನ್ನು ಬೈದು, ಬಡಿದು ಮಾಡಿದರೆ ಏನು ಸಾಧಿಸಿದ ಹಾಗಾಯ್ತು? ನಮ್ಮ ಬಾಲ್ಯ ಕಾಲವನ್ನ ಸ್ವಲ್ಪ ಜ್ಞಾಪಿಸ್ಕೋ... ನಾವೂ ಆಗ ಏನೂ ಕಡಿಮೆ ಇರಲಿಲ್ಲ. ಇಂದಿನ ಮಕ್ಕಳು ಟ್ಯೂಷನ್ನು, ಮ್ಯೂಸಿಕ್ಕು, ಕರಾಟೆ ಎಂದೆಲ್ಲಾ ಸಂಜೆ ಹೊತ್ತಿಗೆ ಬ್ಯುಸಿಯಾಗಿರೋ ಹಾಗೆ ನಾವು ಅದೇ ಹೊತ್ತಲ್ಲಿ ಕಾಡು ಮೇಡು ಅಲೀತಿರ್ಲಿಲ್ವಾ..? ಅಪ್ಪ, ಓದ್ಕೊಳ್ಳಿ ಮಕ್ಕಳೇ ಅಂತಿದ್ದಾಗ ನಾವು ಏನನ್ನು ಓದ್ತಿದ್ದೆವು? ಪಾಠ ಪುಸ್ತಕದ ಮಧ್ಯೆ ಕಾದಂಬರಿ ಇಟ್ಟು ಓದ್ತಿರ್ಲಿಲ್ವಾ...? ನಮ್ಮ ಆ ಮಂಗಾಟಗಳನ್ನು ಅವ್ರು ಇಷ್ಟಪಡ್ತಿದ್ರಾ...?ಹಾಗೆಂದು ನಮ್ಮನ್ನು ಹೊಡೆದು ಬಡಿದು ಮಾಡಿದ್ರಾ...?ಇಂದಿನ ಮಕ್ಕಳದ್ದೂ ಬುದ್ಧಿ ಅದುವೇ.... ಸ್ವರೂಪ ಸ್ವಲ್ಪ ಬೇರೆ ಅಷ್ಟೇ... ತಂದೆ ತಾಯಾಗಿ ನಮ್ಮ ಕರ್ತವ್ಯಗಳನ್ನ ನಾವು ಸರಿಯಾಗಿ ನಿಭಾಯಿಸ್ತಾ ಇದ್ರೆ ಅವರೂ ಸರಿಯಾಗಿಯೇ ಇರ್ತಾರೆ ಬಿಡು. ಚುಕ್ಕುವನ್ನು ಅಶಿಸ್ತಿನ ಹುಡುಗ ಎಂದು ಯಾಕೆ ಲೇಬಲ್ ಮಾಡ್ತಿಯಾ..? ಆತ ನಾವು ಹೇಳಿದ್ದನ್ನ ಕೇಳಿಕೊಂಡಿರಬೇಕೆಂದು ಬಯಸುವ ಬದಲು ಅವನು ಹೇಳೋದನ್ನ ನಾವು ಆಲಿಸಿ ನಮ್ಮ ಅಭಿಪ್ರಾಯಗಳನ್ನು ನಯವಾಗಿ ತಿಳಿಸಿ ಅವನನ್ನು ಗೈಡ್ ಮಾಡ್ತಾ ಇರೋಣ..." ಶಾರಿಗೆ ಆ ಕ್ಷಣಕ್ಕೆ ಪತಿ ಹೇಳಿದ್ದು ಸರಿ ಅನ್ನಿಸಿದ್ರೂ ಮಗನ ಅತಿಯಾದ ತುಂಟತನ, ಮಂಗಚೇಷ್ಟೆಗಳನ್ನು ನೋಡುವಾಗಲೆಲ್ಲಾ `ಮುಂದೆ ಹೇಗೋ ಏನೋ' ಎನ್ನುವಂತಾಗುತ್ತಿತ್ತು. ಆ ಕಳವಳ, ಕಾಳಜಿಗಳೇ ಶಾರಿ ಚುಕ್ಕುವಿಗೆ ಹೆಜ್ಜೆ ಹೆಜ್ಜೆಗೂ ಬುದ್ಧಿ ಹೇಳುವಂತೆ ಮಾಡುತ್ತಿದ್ದುದು. ಚುಕ್ಕು ಅತಿ ಹೆಚ್ಚು ಕಿರಿ ಕಿರಿ ಅನುಭವಿಸುತ್ತಿದ್ದುದೂ ಆಗಲೇ.
"ಏನಮ್ಮಾ ನೀನು..., ನನ್ನ ಫ್ರೆಂಡ್ಸ್ ಅಮ್ಮಂದಿರೆಲ್ಲಾ ಅವ್ರ ಮಕ್ಕಳನ್ನು ಎಷ್ಟು ಜಾಲಿಯಾಗಿರಲು ಬಿಡ್ತಾರೆ...,ನೀನೊಬ್ಳು ಮಾತ್ರಾ ಇಡೀ ದಿನ ಮಹಾತ್ಮಾ ಗಾಂಧಿಯ ಮೊಮ್ಮಗಳ ಹಾಗೆ ಮಾರಲ್ ಕ್ಲಾಸು ತೆಗೀತಾನೇ ಇರೋದ್ಯಾಕೆ...?"
"ಅದು ಹಾಗಲ್ಲ ಚುಕ್ಕೂ...., ಒಳ್ಳೊಳ್ಳೇ ಅಭ್ಯಾಸಗಳನ್ನ ಚಿಕ್ಕಂದಿನಿಂದಲೇ ಬೆಳೆಸ್ಕೋಬೇಕು..."
"ಓ..., ಸಾಕು ಬಿಡಮ್ಮಾ...,ನಾನು ಒಂದು ಹತ್ತು ನಿಮಿಷ ವಿಡಿಯೋ ಗೇಮ್ ಆಡ್ಕೊಂಡ್ರೆ ಏನೀಗ?  ನನ್ಕಣ್ಣು ಕುರುಡಾಗಿ ಹೋಗುತ್ತಾ..? ಬ್ರೈನ್ ಹಾಳಾಗಿ ನಾನೇನು ಹುಚ್ಚನಾಗಿ ಬಿಡ್ತೀನಾ...?"
" ಶಾಂತಂ ಪಾಪಂ..., ಶಾಂತಂ ಪಾಪಂ..., ಹಾಗೆಲ್ಲಾ ಕೆಟ್ಟ ಮಾತುಗಳನ್ನು ಆಡ್ಬಾರ್ದು ಚುಕ್ಕೂ...,,...,"
ಅವಳ ಮುಂದಿನ ಮಾತುಗಳನ್ನು ಕೇಳಲು ಅವನಲ್ಲಿ ಇದ್ದಾರೆ ತಾನೇ? ಅವನಾಗಲೇ ರೂಮು ಸೇರಿ ಬಾಗಿಲು ಹಾಕಿಕೊಂಡಾಗಿತ್ತು. ಇಂತಹ ಸಂದರ್ಭಗಳಲ್ಲೇ ಶಾರಿಯ ತಲೆ ಬಿಸಿಯೇರಿ, ಮೈ ಬೆವರಿ, ಎದೆ ನಗಾರಿಯಂತಾಗುವುದು. ಅಯ್ಯೋ...,ಮಗ ಮುಂದಿನ ವರ್ಷ ಎಸ್. ಎಸ್.  ಎಲ್. ಸಿ. ಪರೀಕ್ಷೆಗೆ ಕಟ್ಟಬೇಕಾದವ.... ಈಗಲೇ ಕಷ್ಟಪಟ್ಟು ಓದದಿದ್ದರೆ ಹೇಗೆ? ಅವನಿಗೆ ವಿಡಿಯೋ ಗೇಮು, ಸಿನೆಮಾಗಳ ಹುಚ್ಚು ವಿಪರೀತ ಎನ್ನುವಷ್ಟಿದೆ.( ಸಧ್ಯ..., ಫ಼ೇಸ್ ಬುಕ್, ವಾಟ್ಸಾಪ್ಪುಗಳ ಮೆರವಣಿಗೆಯನ್ನು ಅದು ಹೇಗೋ ಗಂಡ ಉಪಾಯದಿಂದ ಮನೆಯಿಂದಲೇ ಓಡಿಸಿಬಿಟ್ಟಿದ್ದರು). ವಿಡಿಯೋ ಗೇಮ್ ಆಡಿ... ಆಡಿ ಎಷ್ಟೋ ಮಕ್ಕಳು ಕ್ರಿಮಿನಲ್ಲುಗಳಾಗಿದ್ದಾರಂತೆ, ಇನ್ನೆಷ್ಟೋ ಮಂದಿ ಖಿನ್ನತೆ ಖಾಯಿಲೆಯಿಂದ ಬಳಲುತ್ತಿದ್ದಾರಂತೆ....! ಇಂತಹ ಇನ್ನೂ ಎಷೆಷ್ಟೋ ಭೀಕರ ಸುದ್ದಿಗಳು ಪೇಪರಲ್ಲಿ ಬರುತ್ತಲೇ ಇರುತ್ತವೆ. ಈ ಟೀನೇಜು ಮಕ್ಕಳನ್ನು ಸಂಭಾಳಿಸುವುದು ಎಂದರೆ ಕೆಂಡವನ್ನು ಸೆರಗಲ್ಲಿ ಕಟ್ಟಿಕೊಂಡಂತೆಯೇ ಸೈ... ರಾಮ... ರಾಮಾ... ತನ್ನ ಮಗನ ಗತಿ ಮುಂದೆ ಏನಾಗುವುದೋ ಎಂದೆಲ್ಲಾ ಹಳಹಳಿಸುತ್ತಾ ಶಾರಿ ಒಳಗೊಳಗೇ ರೋದಿಸುತ್ತಿರುತ್ತಾಳೆ. ಆಗೆಲ್ಲಾ ಪತಿಯೇ ಅವಳ ಮನಸ್ಸನ್ನು ಹಗುರಗೊಳಿಸುತ್ತಿದ್ದುದು. 
ಸಂಜೆ ಮಗ ಮನೆಗೆ ಬಂದು ಹೇಳುತ್ತಾನೆ, " ಅಮ್ಮಾ.., ಮುಂದಿನ ವಾರ ಸ್ಕೂಲಿನಿಂದ ಟೂರು ಇದ್ಯಂತೆ...,ಗೋವಾಕ್ಕೆ... ನಾನೂ ಹೋಗ್ತೀನಿ..."
ಶಾರಿ ಮತ್ತೆ ಬೇಗೆಗೆ ಮೈಯೊಡ್ಡಿದ ಪತಂಗವಾದಳು. `ಗೋವಾ...? ಅಲ್ಲಿನ ಬೀಚುಗಳು, ಬೆತ್ತಲೆ ಫಾರಿನರ್ಸ್, ಡ್ರಗ್ಸ್, ಡ್ರಿಂಕ್ಸ್.... ಅಯ್ಯೋ... ಇವನನ್ನು ಹೇಗಾದರೂ ತಡೆಯಲೇಬೇಕು...., ಚುಕ್ಕುವಿಗೆ ನೀರಲ್ಲಿ ಆಡುವುದೆಂದರೆ ಮೊದಲೇ ಪ್ರಾಣ.... ಇನ್ನು ಸಮುದ್ರವೆಂದರೆ ಕೇಳಬೇಕೇ...? ಜೊತೆಯಲ್ಲಿ ತಾವೂ ಇಲ್ಲವೆಂದಾದರೆ ಅವನನ್ನು ಹಿಡಿಯುವವರು ಯಾರು? ಬೇಡಪ್ಪಾ... ಬೇಡ..., ಮಗ ಖಂಡಿತಕ್ಕೂ ಅಲ್ಲಿಗೆ ಹೊಗೋದು ಬೇಡ...' ಹಾಗೆಂದು ಚುಕ್ಕುವಿನ ಮನ ನೋಯಿಸಲೂ ಅವಳು ಸಿದ್ಧಳಿಲ್ಲ. ಕೊನೆಗೆ  ಪತಿಯೇ ತೀರ್ಮಾನ ಹೇಳಿದರು, "ಹೋಗಿ ಬರಲಿ ಶಾರೀ..,ಈ ಪ್ರಾಯದಲ್ಲಿ ಮಕ್ಕಳು ಆಗೊಮ್ಮೆ ಈಗೊಮ್ಮೆ ತಮ್ಮ ಜೊತೆಗಾರರೊಂದಿಗೆ ಹೊರಗೆ ಸುತ್ತಾಡಿ ಬರಲು ನಾವು ಅನುವು ಮಾಡಿಕೊಡಬೇಕು. ಅವರ ಮೇಲೆ ನಮಗೆ ನಂಬಿಕೆ ಇದೆ ಅನ್ನೋದನ್ನ ನಮ್ಮ ನಡತೆಯ ಮೂಲಕ ತೋರಿಸಿಕೊಡಬೇಕು...." ಹಾಗೆ ಚುಕ್ಕುವಿನ ಟ್ರಿಪ್ ನಿಗದಿಯಾಯ್ತು. ಅವನು ಆಗಸದಲ್ಲಿ ಹಾರಾಡುವ ಬೆಲೂನಾದ. ಹೊರಡುವ ಕೊನೆಯ ಗಳಿಗೆಯವರೆಗೂ ಶಾರಿ ಬಡಬಡಿಸುತ್ತಲೇ ಇದ್ದಳು,"... ಚುಕ್ಕೂ.., ಬೀ ಕೇರ್ಫುಲ್...,ಬೆಳಗ್ಗೆ ಟೈಮಿಗೆ ಸರಿಯಾಗಿ ಏಳು..., ಫುಡ್ಡು ಸರಿಯಾಗಿ ತಗೋ.., ಸಮುದ್ರಕ್ಕೆ ಇಳೀಬೇಡಾ..., ಅಪರಿಚಿತರೊಂದಿಗೆ ಮಾತು ಬೇಡಾ..., ಅವರು ಕೊಟ್ಟಿದ್ದನ್ನ ತಿನ್ಬೇಡಾ..., ದುಡ್ಡು ಜೋಪಾನಾ..., ಮೊಬೈಲಲ್ಲಿ ಗೇಮ್ ಆಡ್ತಾ ಇರ್ಬೇಡಾ..., ಅಲ್ಲಿ ಏನೇನಾಯ್ತು ಅಂತ ಆಗಾಗ ಫೋನು ಮಾಡಿ ಹೇಳ್ತಾ ಇರು..." ಮಗ ಮಾತ್ರ ಯಾವುದಕ್ಕೂ `ಹೂಂ' ಅನ್ನಲೂ ಇಲ್ಲ, `ಊಹೂಂ' ಅನ್ನಲೂ ಇಲ್ಲ! ಶಾರಿ ಆ ನಾಲ್ಕು ದಿನಗಳನ್ನು ಹೇಗೆ ಕಳೆದಳೋ ಆ ದೇವರೇ ಬಲ್ಲ. ಗಂಡ ಅವಳ ಬದಿಗೆ ಇಲ್ಲದಿರುತ್ತಿದ್ದರೆ ಎದೆ ಒಡೆದೇ ಬಿಡುತ್ತಿತ್ತೇನೊ? ಮಗ ಅಲ್ಲಿ ಮುಟ್ಟಿದ್ದಕ್ಕೆ ಹರಿಕೆ ಸಲ್ಲಿಸಿಬಿಡುವಂತೆ ಒಮ್ಮೆ ಫ಼ೋನು ಮಾಡಿದ್ದ. ಆ ಮೇಲೆ ಅಮ್ಮ ಕರೆ ಮಾಡಿದಾಗಲೆಲ್ಲಾ ಒಂದೋ` ಔಟ್ ಆಫ್ ರೇಂಜ್' ಇಲ್ಲಾ `ಸ್ವಿಚ್ಡ್ ಆಫ್' ಎಂಬುದೇ ಉತ್ತರವಾಯ್ತು. ಅವನ ಜೊತೆಗೆ ಹೋದ ಶಿಕ್ಷಕರಿಗೆ ಫೋನಾಯಿಸಿ ವಿಷಯವನ್ನು ತಿಳಿದುಕೊಂಡು ಎದೆ ನೀವಿಕೊಂಡಳು. ನಾಲ್ಕನೆಯ ದಿನ ಬೆಳ್ಳಂಬೆಳಗ್ಗೆ ಚುಕ್ಕು `ಅಮ್ಮಾ..' ಎಂದು ಕೂಗಿದಾಗ ಶಾರಿ ಒಂದೇ ನೆಗೆತಕ್ಕೆ ವೆರಾಂಡದಲ್ಲಿದ್ದಳು. 
"ಓ..,ಬಂದ್ಯಾ...ಚುಕ್ಕೂ...,ಹೇಗಾಯ್ತು  ಟೂರೆಲ್ಲಾ...?" ಮೇರೆ ಮೀರಿದ ಸಂಭ್ರಮದಲ್ಲಿ ಅವಳ ಧ್ವನಿ ಅದುರುತ್ತಿತ್ತು. ಮಗನ ಭುಜ ಬಳಸಿ ಹಿಡಿದು ಆತನನ್ನೇ ಕ್ಷಣಕಾಲ ದಿಟ್ಟಿಸಿ ನೋಡಿದಳು. ನಗುತ್ತಾ ಕಳೆ ಕಳೆಯಾಗಿದ್ದ ಮಗನನ್ನು ನೋಡಿ ದೇವರಿಗೆ ತನ್ನ ಪ್ರಾರ್ಥನೆ ಮುಟ್ಟಿದೆ ಎಂದುಕೊಂಡಳು. 
"ಟೂರೇನೊ ಚೆನ್ನಾಗಿಯೇ ಆಯ್ತಮ್ಮಾ..., ಆದರೆ ನಿನ್ನನ್ನು ತುಂಬಾನೇ ಮಿಸ್ ಮಾಡ್ಕೊಂಡೆ. ಬೆಳಗ್ಗೆ ಎಬ್ಬಿಸಲು ನೀ ನಿರ್ಲಿಲ್ವಲ್ಲಾ..? ಸೋ..., ರಾತ್ರಿ ನಿದ್ದೇನೇ ಬರ್ತಿರ್ಲಿಲ್ಲ...., ಊಟ, ತಿಂಡಿಗೆ ನಿನ್ನ ಟಚ್ ಇಲ್ಲದೆ ಅದ್ಯಾಕೋ ಬರೀ ಸಪ್ಪೆ ಸಪ್ಪೆ 
ಅನ್ನಿಸ್ತು .  ಬೀಚಲ್ಲಿ ಫ್ರೆಂಡ್ಸ್ ಜೊತೆ ಈಜಾಡಕ್ಕೇನೋ ಹೋಗಿದ್ದೆ. ಆದರೆ ಮಜಾ ಇರ್ಲಿಲ್ಲಾ.., ಯಾಕೆ ಗೊತ್ತಾ..? `ಚುಕ್ಕೂ.., ಬೀ ಕೇರ್ ಫುಲ್ ಅಂತ ನೀನು ಕಿರುಚೋದು.., ನಿನ್ನ ಗಾಬರಿ ಮುಖ ನೋಡ್ತಾ ನಾನು ಮತ್ತೆ ನೀರಿಗೆ ಜಿಗಿಯೋದು... ಇದೆಲ್ಲ ಅಲ್ಲಿ ಎಲ್ಲಿತ್ತು? ಟೀಚರ್ಸ್ ಆಗಾಗ ಕೂಗು ಹಾಕುತ್ತಾ ನಮ್ಮ ಕೇರ್ ತಗೋತಿದ್ರು. ಆದ್ರೆ ಅದ್ರಲ್ಲಿ ನನ್ನ ಶಾರಿ ಅಮ್ಮನ ಕನ್ಸರ್ನ್ ಎಲ್ಲಿತ್ತು ಹೇಳು ...? ಅಮ್ಮಾ, ನೋಡಿಲ್ಲಿ.., ಈ ಹೇರ್ ಕ್ಲಿಪ್ ನಿನ್ಗೆ ಇಷ್ಟವಾಯ್ತಾ? ಸಮುದ್ರ ದಂಡೆಯಲ್ಲಿ ಚಿಪ್ಪಿಗಳಿಂದ ತಯಾರಿಸಿದ ಇಂತಹ ಕ್ಲಿಪ್ಪುಗಳ ರಾಶಿಯನ್ನೇ ಹಾಕಿ ಮಾರಾಟ ಮಾಡುತ್ತಿದ್ರು. ಹುಡುಗೀರು, ಟೀಚರ್ಸುಗಳೆಲ್ಲಾ ತಗೊಳ್ತಿದ್ರು, ನನ್ಗೂ ಇಷ್ಟವಾಯ್ತು, ನಿನ್ನ ಕೂದಲಿಗೆ ಇದು ಚೆನ್ನಾಗಿ ಸೂಟ್ ಆಗುತ್ತೆ ಅನ್ಸಿತ್ತು. ರೇಟು ಕೇಳಿದೆ, ಒಂದಕ್ಕೆ ನಲುವತ್ತು ರೂಪಾಯಿ ಅಂದ. ಐವತ್ತು ಕೊಡ್ತೀನಿ, ಎರಡು ಕೊಡು ಅಂದೆ. ಸ್ವಲ್ಪ ಚರ್ಚೆ ಮಾಡಿದ್ಮೇಲೆ ಒಪ್ಕೊಂಡ. ಇಷ್ಟ ಆಯ್ತಾ ಅಮ್ಮಾ...?" ಕೆನೆ ಬಣ್ಣದ ಒಂದೇ ವಿಧದ ಎರಡು ಹೇರ್ ಕ್ಲಿಪ್ಪುಗಳನ್ನು ಕೈಯ್ಯಲ್ಲಿ ಹಿಡಿದುಕೊಂಡು ಅರಳು ಹುರಿದಂತೆ ಮಾತನಾಡುತ್ತಲೇ ಇದ್ದ ಮಗನನ್ನು ಶಾರಿ ನೋಡಿಯೇ ನೋಡಿದಳು. ಅವಳ ಕಣ್ಣು ಗುಡ್ಡೆಗಳು ಇನ್ನೇನು ಹೊರಕ್ಕೆ ಬಿದ್ದೇ ಬಿಟ್ಟುವೇನೋ ಎಂಬಂತೆ ಅಗಲಿಕೊಂಡವು. ಆದರೆ ಅವುಗಳು ಕೆಳಕ್ಕುರುಳದಂತೆ ದಪ್ಪನಾದ ನೀರಿನ ಪರದೆ ತಡೆಯಾಗಿ ನಿಂತಿತ್ತು.ಪ್ರತ್ಯುತ್ತರ ಕೊಡಲೆಂದು ಬಾಯ್ದೆರೆದಳು. ಆದರೆ  ತುಟಿಗಳು ಅಲುಗಿದ್ದು ಮಾತ್ರ, ಧ್ವನಿ ಹೊರಡಲೇ ಇಲ್ಲ. ಹೃದಯ ಮಾತ್ರ ಕೂಗಿ ಕೂಗಿ ಹೇಳುತ್ತಿತ್ತು...,"ಚುಕ್ಕೂ...,ಥ್ಯಾಂಕ್ಯೂ ಸೋ ಮಚ್....ಕ್ಲಿಪ್ಪುಗಳೊಂದಿಗೆ ನೀನಿತ್ತ ಎಲ್ಲದಕ್ಕೂ...ಎಲ್ಲದಕ್ಕೂ..."     

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ