ಶನಿವಾರ, ಜನವರಿ 16, 2016

ಅಸಹಿಷ್ಣುತೆ

"ಕಲೋತಿಯವರೇ...., ನಿಮ್ಮ ಈ ಖಡಕ್ ನಿರ್ಧಾರದ ಹಿಂದಿನ ಮರ್ಮವಾದರೂ ಏನು?"
"ನೋಡಿ....,ದಯವಿಟ್ಟು ಇನ್ನು ಮುಂದೆ ನನ್ನನ್ನು ಆ ಹೆಸರಿನಿಂದ ಕರೆಯಬೇಡಿ. ಅದೆಲ್ಲ ಮುಗಿದ ಅಧ್ಯಾಯ. ನಾನೀಗ ಬರಿಯ ಮಿಸೆಸ್ ರಾವ್ ಅಥವಾ ಶ್ವೇತಪದ್ಮಾ ರಾವ್." ಮುಗಮ್ಮಾಗಿ ಉತ್ತರಿಸಿದರು ನಮ್ಮ ನಾಡಿನ ಸುಪ್ರಸಿದ್ಧ ಸಾಹಿತಿ ಕ್.ಲೋ.ತಿ. ಯಾನೆ `ಕಥಾ ಲೋಕ ತಿಲಕ' ಬಿರುದಾಂಕಿತೆ. ಪ್ರಶ್ನೆ ಕೇಳಿದ ಪತ್ರಕರ್ತರು ಉಗುಳು ನುಂಗಿಕೊಂಡು ಗಂಟಲು ಸರಿಪಡಿಸಿಕೊಂಡರು. ಶ್ರೀಮತಿ ಶ್ವೇತ ಪದ್ಮಾ ರಾವ್ ಎಂಭತ್ತರ ದಶಕದ ಜನಪ್ರಿಯ ಕಥನಾಗಾರ್ತಿ. ಹದಿನಾರು ಕಾದಂಬರಿಗಳು ಮತ್ತು  ಹನ್ನೆರಡು ಕಥಾ ಸಂಕಲನಗಳ ಒಡತಿ. ಅವರ `ಹೊಯ್ಸಳರ ರಾಣಿ ಶಾಂತಲಾ' ಕಾದಂಬರಿ ಎಂಟು ಮರುಮುದ್ರಣಗಳನ್ನು ಕಂಡದ್ದೂ ಅಲ್ಲದೆ `ಸರ್ವಕಾಲಿಕ ಶ್ರೇಷ್ಟ ಕೃತಿ' ಎಂಬ ಪ್ರಶಸ್ತಿಯನ್ನೂ ಬಾಚಿಕೊಂಡಿದೆ. ಅಂದಿನ ಕರ್ನಾಟಕ ಸರ್ಕಾರ ರಾಜ್ಯೋತ್ಸವದಂದು ಅವರಿಗೆ ಕ. ಲೋ. ತಿ. ಬಿರುದನ್ನಿತ್ತು ಸನ್ಮಾನಿಸಿದೆ. ಭೂತಕಾಲದ ಆ ಪ್ರಸಿದ್ಧಿಯ ಮಂಪರಿನಿಂದ ಅವರಿನ್ನೂ ಹೊರಗೆ ಬಂದಿಲ್ಲ. ಅರುವತ್ತರ ಹರೆಯದ ಈ ಸಾಹಿತ್ಯ ರತ್ನ ಬಹಳ ಸ್ವಪ್ರತಿಷ್ಠೆಯ ಮಹಿಳೆ. ಹೊಗಳಿಕೆಯನ್ನು ಬಹಳವಾಗಿ ಇಷ್ಟಪಡುವ ಅವರಿಂದ ತಮಗೆ ಬೇಕಾದ ಸುದ್ದಿಗಳನ್ನು ಹೊರತೆಗೆಯುವ ಹಿಕ್ಮತ್ತು ಪತ್ರಕರ್ತರಿಗೆ ಚೆನ್ನಾಗಿಯೇ ಕರಗತವಾಗಿತ್ತು.
"ಕ್ಸಮಿಸಿ ಮ್ಯಾಡಂ..., ನಿಮ್ಮೆಡೆಗೆ ಕಾತರದಿಂದ ನೋಡುತ್ತಿರುವ ಕನ್ನಡ ಸಾಹಿತ್ಯ ಲೋಕದ ಪರವಾಗಿ ನಾವು ಈ ಪ್ರಶ್ನೆ ಕೇಳದೆ ಬೇರೆ ದಾರಿಯಿಲ್ಲ. ನಿಮ್ಮಂತಹ ಸಾಹಿತ್ಯ ಶಿಖರ ಪ್ರಶಸ್ತಿ ವಾಪ್ಸಿ ಚಳುವಳಿಗೆ ಧುಮುಕಲು ಏನೋ ಬಲವಾದ ಕಾರಣವಿರಲೇಬೇಕು.... ದಯವಿಟ್ಟು ಬಿಡಿಸಿ ಹೇಳಿ?"
"ನನ್ನಂತಹ ಸೂಕ್ಷ್ಮ ಸಂವೇದಿ ಸಾಹಿತಿ ಇಂತಹ ಕಹಿ ನಿರ್ಧಾರ ತೆಗೆದುಕೊಳ್ಳಲು ಈ ಹೊಲಸು ಸರ್ಕಾರವೇ ಕಾರಣ, ನಿಮ್ಮಂತಹ ಅಬ್ಬೇಪ್ಪಾರಿ ಪತ್ರಕರ್ತರೇ ಕಾರಣ, ಸತ್ಯ ಹೇಳುವುದಿದ್ದರೆ ಇಡೀ ಸಮಾಜವೇ ಇದರ ಹೊಣೆ ಹೊರಬೇಕಾಗುತ್ತದೆ...."
ಮಾಯಾ, ಮಮತಾ, ಲಲಿತಾ ಈ ಮೂವರೂ ಒಂದಾಗಿ ಶ್ವೇತ ಪದ್ಮಾ ರೂಪದಲ್ಲಿ ತಮ್ಮೆದುರು ಕುಳಿತಿದ್ದಾರೆಯೇ ಎಂಬ ಸಂದೇಹ ಪತ್ರಕರ್ತರಿಗೆ ಬಾರದೆ ಇರಲಿಲ್ಲ.
"ಕಲೋತಿಯವರೇ...,ಸ್ಸಾರೀ.... ಸ್ಸಾರೀ....,ಶ್ವೇತಪದ್ಮಾ ಅವರೇ...., ಹೀಗೆ ಒಗಟಿನ ಹಾಗೆ ಮಾತನಾಡಿದರೆ ನಮ್ಮಂತವರಿಗೆ ಅರ್ಥವಾಗುವುದಾದ್ರೂ ಹೇಗೆ?"
"ನಿಮ್ಮಂತಹ ಎಮ್ಮೆ ತೊಗಲುಗಳನ್ನು ಕರೆದು ಪತ್ರಿಕಾಗೋಷ್ಠಿ ನಡೆಸುತ್ತಿರುವ ನನ್ನನ್ನು ನಾನೇ ಹಳಿದುಕೊಳ್ಳಬೇಕು.....,`ಅಸಹಿಷ್ಣುತೆ' ಈ ನಾಡಿನಲ್ಲಿ ಬೇರೂರಿದೆ ಎಂದು ಮೊದಲು ಬಹಿರಂಗಪಡಿಸಿದ್ದೇ ನಾನು. ಅಂದೇ ನಾನೊಂದು ಪತ್ರಿಕಾಗೋಷ್ಠಿ ಏರ್ಪಡಿಸಿದ್ದೆ. ಅಂದು ಇಲ್ಲಿಗೆ ಬಂದಿದ್ದ ನೀವು ಮಾಡಿದ್ದೇನು?ನಾನು ಕೊಟ್ಟ ತಿಂಡಿ, ಕಾಫಿಯ ಜೊತೆಗೇ ನಾನು ಹೇಳಿದ್ದ ಮಾತುಗಳನ್ನೂ ಗುಳುಂ ಮಾಡಿದ್ದಲ್ಲವೇ? ಆ ದಿನ ನಾನು ಇದರ ಬಗ್ಗೆ ಅರ್ಧ ಘಂಟೆ ಹೊತ್ತು ನಿಮ್ಮೊಂದಿಗೆ ಮಾತನಾಡಿದ್ದೆ. ಪ್ರೈಮ್ ನ್ಯೂಸ್ ಆಗಿ ಪ್ರಕಟವಾಗಬೇಕಿದ್ದ ಆ ವಿಚಾರಗಳನ್ನು ನಿಮ್ಮ ಪೇಪರು ಪ್ರಕಟಿಸಿದ್ದೆಷ್ಟು? ನಿಧನ ವಾರ್ತೆಗಳ ಪಕ್ಕದಲ್ಲಿ ಚಿಕ್ಕ ಇರುವೆಯಂತಹ ಅಕ್ಷರಗಳಲ್ಲಿ ಒಂದು ವಾಕ್ಯವನ್ನು ಹಾಕಿ ಕೈ ತೊಳೆದುಕೊಂಡಿರಲ್ಲ? ಪರಿಣಾಮವೇನಾಯ್ತು? ಇಂದಿನ ಈ  ಸಮಾಜದಲ್ಲಿ ನಾಗರಿಕರಿಗೆ ನಿರ್ಭಯದಿಂದ ಜೀವಿಸಲು ಸಾಧ್ಯವಿಲ್ಲವಾಗಿದೆ. ಜಾತಿ, ಜಾತಿಗಳ ನಡುವೆ, ಧರ್ಮ, ಧರ್ಮಗಳ ನಡುವೆ ಅಗಾಧ ಕಂದಕ ಸೃಷ್ಟಿಯಾಗಿದೆ. ಅತಿಥಿ ದೇವೋಭವ ಎನ್ನುವ ಈ ನಾಡಿನಲ್ಲಿ ನಡೆಯುತ್ತಿರುವುದಾದರೂ ಏನು? ಅಲ್ಪ ಸಂಖ್ಯಾತರ ತುಚ್ಚೀಕರಣ, ಅವಮಾನ, ಅವರ ಮೇಲೆ ನಡೆಯುವ ಅನಾಚಾರ, ಅತ್ಯಾಚಾರಗಳಿಗೆ ಕೊನೆ ಎಂದು? ಇದಕ್ಕೊಂದು ಪರಿಹಾರ ಕಂಡುಕೊಳ್ಳಲೇಬೇಕೆಂಬ ನಿಟ್ಟಿನಲ್ಲಿ ಸುಮಾರು ಮೂರ್ನಾಲ್ಕು ತಿಂಗಳ ಹಿಂದೆಯೇ ನಾನು ಕೆಲವು ಸಮಾನ ಮನಸ್ಕ ಕಿರಿಯ ಸಾಹಿತಿಗಳನ್ನೆಲ್ಲಾ ಒಗ್ಗೂಡಿಸಿ ಗಂಭೀರ ಸಮಾಲೋಚನೆ ನಡೆಸಿ ಒಂದು ಮನವಿ ಪತ್ರವನ್ನು ಬರೆದು ಮುಖ್ಯ ಮಂತ್ರಿಗಳ ವಿಳಾಸಕ್ಕೆ ಕಳಿಸಿದ್ದೆವು. ಆದರೆ ದುರಂತವೇನು ಗೊತ್ತೇ...? ಈಗ ಕೆಲವು ದಿನಗಳ ಹಿಂದೆ ನನ್ನ ಮೊಮ್ಮಗ ನನಗೆ ಬಹಳ ಇಷ್ಟವೆಂದು ಬಿಸಿ ಬಿಸಿ ಕಡ್ಲೆ ಕಾಯಿ ಕೊಂಡು ತಂದಿದ್ದ. ನನ್ನ ಇದೇ ಕೈಯಿಂದ ನಾನೇ ಖುದ್ದಾಗಿ ಬರೆದ ಆ ಮನವಿ ಪತ್ರ ಕಡ್ಲೆ ಕಾಯಿಗಳನ್ನು ತನ್ನೊಳಗೆ ತುಂಬಿಸಿಕೊಂಡ ಸುರುಳಿಯಾಗಿ ಪುನಃ ನನ್ನ ಮನೆಗೇ ಮರಳಿ ಬಂದಿತ್ತು!
"ಪ್ಚ್ ... ಪ್ಚ್ ...ಪ್ಚ್ ..."(ಪತ್ರಕರ್ತರ ಒಕ್ಕೊರಲ ಧ್ವನಿ)
"ಮ್ಯಾಡಂ..., ಈಗ ಯಾರೂ ಕೈಯ್ಯಲ್ಲಿ ಬರೆದುದ್ದನ್ನ ಓದೋದಿಲ್ಲ. ಕಂಪ್ಯೂಟರಲ್ಲಿ ಟೈಪ್ ಮಾಡಿ ಮೇಲ್ ಮಾಡಬೇಕಿತ್ತು..."(ತರಲೆ ಪತ್ರಕರ್ತನೊಬ್ಬ ಸುಮ್ಮನಿರಲಾರದೆ ಒದರಿದ)
"ಏ..., ನಿಲ್ಲಿಸ್ರೀ...,ನಿಮ್ಮ ಬುಡುಬುಡಿಕೇನ...,ಪತ್ರಿಕಾಗೋಷ್ಠಿ ಕರೆದದ್ದು ನಾನೋ ನೀವೋ...?
"ಸ್ಸಾರೀ... ಮ್ಯಾಡಂ..., ಪ್ಲೀಸ್ ಕಂಟಿನ್ಯೂ..."
"ನಾನಿನ್ನೂ ಜೀವಂತ ಇರುವಾಗಲೇ ಸರಕಾರ ಮಾಡಿದ ಈ ಅವಮಾನವನ್ನ ಸಹಿಸಿಕೊಂಡಿರಬೇಕೇ...? ಸಮಾಜ ಯಾವ ರೀತಿಯಲ್ಲಿ ಅಧೋಗತಿಯೆಡೆಗೆ ಸಾಗುತ್ತಿದೆ ಎನ್ನಲು ಇದಕ್ಕಿಂತ ಉತ್ತಮ ಉದಾಹರಣೆ ಬೇರೆ ಬೇಕೇ...? ಕಡ್ಲೆ ಕಾಯಿ ತಿಂದ ಆ
ದಿನದಿಂದ ಇಂದಿನವರೆಗೂ ಹಗಲು ರಾತ್ರಿ ಚಿಂತೆಯಿಂದ ಬಸವಳಿದಿದ್ದೇನೆ...., ಊಟ, ತಿಂಡಿಯ ಕಡೆಗೆ ಗಮನವಿಲ್ಲವಾಗಿದೆ... ನಿದ್ದೆ ಹತ್ತಿರವೂ ಸುಳಿಯುತ್ತಿಲ್ಲ, ಎಲ್ಲ ಯಾರಿಗಾಗಿ? ಸಮಾಜದಲ್ಲಿ ತುಳಿಯಲ್ಪಟ್ಟ ಅಲ್ಪ ಸಂಖ್ಯಾತರಿಗಾಗಿ...,ಯೋಚಿಸಿ... ಯೋಚಿಸಿ ಕಡೆಗೂ ಬ್ರಹ್ಮಾಸ್ತ್ರವೊಂದನ್ನು ಹೊರತೆಗೆಯಲು ತೀರ್ಮಾನಿಸಿದೆ.... ಅದುವೇ ನನ್ನ ಬಿರುದಿನೊಂದಿಗೆ ಪ್ರಶಸ್ತಿ ವಾಪ್ಸಿ..." ಹೇಳುತ್ತಾ ಪತ್ರಕರ್ತರ ಮುಖಗಳನ್ನು ಸೂಕ್ಷ್ಮವಾಗಿ ಸ್ಕ್ಯಾನಿಂಗ್ ಮಾಡಿ ನೋಡಿದರು. ತಾನು ನಿರೀಕ್ಷಿಸಿದ ಭಾವನೆಗಳು ಅಲ್ಲಿದ್ದುದಕ್ಕೆ ಪದ್ಮಾ ತೃಪ್ತಿ ಪಟ್ಟು ಕೊಂಡರು. ಕಡೆಗೂ ಮ್ಯಾಡಂ ವಿಷಯಕ್ಕೆ ಬಂದರಲ್ಲಾ ಎಂದು ಪತ್ರಕರ್ತರೂ ನೆಮ್ಮದಿಯ ಉಸಿರು ಬಿಟ್ಟರು. ಸಭೆಯಲ್ಲಿ ಗುಜು..ಗ಼ುಜು... ಒಬ್ಬ ಗಟ್ಟಿ ಧ್ವನಿಯಲ್ಲಿ ಕೇಳಿದ,
"ಅಲ್ಲ ಮ್ಯಾಡಂ..., ಈಗಾಗಲೇ ನೂರಾರು ಮಂದಿ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದಾರಲ್ಲಾ.....? ಏನೂ ಪ್ರಯೋಜನ ಆದ ಹಾಗೆ ಕಾಣಿಸ್ತಾ ಇಲ್ಲಾ..?"
" ನೋಡಿ.., ನಾನಾಗಲೇ ಹೇಳಿದ ಹಾಗೆ ನಿಮ್ಮಂತಹ ಮಾಧ್ಯಮದವರಿಂದಾಗಿಯೇ ಈ ದೇಶ ಇಷ್ಟು ಗಬ್ಬೆದ್ದು ಹೋಗಿರೋದು..., ಯಾವುದನ್ನು ಹೈಲೈಟ್ ಮಾಡ್ಬೇಕೋ ಅದನ್ನು ಮಾಡದೆ ಅದೇನೋ ಚೆನ್ನೈ ಪ್ರವಾಹ,  ಆ ಪೀಡಿತರಿಗೆ  ಜಾತಿ ಮತ ಬೇಧವಿಲ್ಲದೆ ಅದ್ಯಾವುದೋ ದೇವಸ್ತಾನದಲ್ಲಿ ಆಶ್ರಯ ಇತ್ತದ್ದು, ಇನ್ನ್ಯಾರೋ ಅದೆಲ್ಲಿಂದಲೋ ಸಾವಿರಾರು ಕ್ವಿಂಟಾಲು ಅಕ್ಕಿ ಸಪ್ಲೈ ಮಾಡಿದ್ದು... ಮತ್ತ್ಯಾರೋ ತಮ್ಮ ಮನೆಯಲ್ಲಿ ನೂರಾರು ಪೀಡಿತರಿಗೆ ಗಂಜಿ ಬೇಯಿಸಿ ಕೊಟ್ಟದ್ದು..., ಇಂತಹ ಯೂಸ್ಲೆಸ್ ನ್ಯೂಸುಗಳನ್ನು ಫೋಟೋ ಸಹಿತ ಹಾಕಿ ಹೈಲೈಟ್ ಮಾಡ್ತೀರಲ್ಲಾ.., ತಲೆ ಸರಿ ಇದೆಯಾ ನಿಮಗೆ? ನ್ಯೂಸ್ ಯಾವಾಗಲೂ ಸೆನ್ಸೇಶನಲ್ ಆಗಿರಬೇಕು...,ಜನರ ಭಾವನೆಗಳು ಕೆರಳುವಂತಿರಬೇಕು..., ಹೂಂ..., ನಿಮ್ಮ ಬಳಿ ಎಷ್ಟು ಬಡ್ಕೊಂಡ್ರೂ ಅಷ್ಟೇ..., ಇವತ್ತಿಗೆ ಇಷ್ಟು ಸಾಕು...,ನಾನು ಗುರುತು ಹಾಕಿ ಕೊಟ್ಟ ವಿಚಾರಗಳೆಲ್ಲಾ ನಾಳೆ  ದಿನಪತ್ರಿಕೆಗಳ ಮುಖಪುಟದಲ್ಲೇ ಇರಬೇಕು ನೆನಪಿರಲಿ.., ಸೈಡ್ ಪೋಸಲ್ಲಿರುವ ನನ್ನ ಆ ಒಂದು ಫೋಟೋ ಇದೆಯಲ್ಲಾ.. ಅದನ್ನೇ ನ್ಯೂಸ್ ಜೊತೆ  ಹಾಕಿಬಿಡಿ. ಸರಿ. ಇನ್ನು ನೀವು ಹೊರಡಬಹುದು."
ಮೇಕಪ್ಪು ಮಾಸದಂತೆ ಮುಖದ ಬೆವರನ್ನು ಹಗುರವಾಗಿ ಒರೆಸಿಕೊಂಡ ಶ್ವೇತಪದ್ಮಾ ಒಳಕ್ಕೆ ಹೋಗಲು ಅಣಿಯಾದರು. ಆ ತರಲೆ ಪತ್ರಕರ್ತ ಮಾತ್ರ  ಒದ್ದೋಡಿಸಿದವನಂತೆ ಧಡ ಬಡಿಸಿ ಎದ್ದು ಆಕೆಯ ಬಳಿಗೆ ಬಂದ,
"ಮ್ಯಾಡಂ.., ಒಂದೇ ಒಂದು ಪ್ರಶ್ನೆ..,ಆ ಪ್ರಶಸ್ತಿಯೊಂದಿಗೆ ಕ್ಯಾಶ್ ಒಂದು ಲಕ್ಷ ಬಂದಿತ್ತಲ್ವಾ...,ಅದನ್ನೂ ವಾಪಾಸು..."
ಶ್ವೇತಪದ್ಮಾ ದೇವಿಯವರ ಕಣ್ಣುಗಳಿಗೆ ಶಕ್ತಿಯಿರುತ್ತಿದ್ದರೆ ಆತ ಆ ಕ್ಷಣವೇ ಭಸ್ಮವಾಗಿಬಿಡುತ್ತಿದ್ದ. ಆತನ ಅದೃಷ್ಟ ಚೆನ್ನಾಗಿತ್ತು. ಹಾಗೇನೂ ಆಗದೆ ಸ್ವರ ಮಾತ್ರ ಅರ್ಧದಲ್ಲೇ ಉಡುಗಿ ಹೋಯ್ತು. 
                                                                                                                            (ಸಶೇಷ)    

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ