ಸುಮಾರು ಐವತ್ತರುವತ್ತು ವರ್ಷಗಳಷ್ಟು ಹಳೆಯದಾದ ನಮ್ಮ ಶ್ರೀ ದೇವಿ ಭಜನಾ ಮಂದಿರದ ಚಾವಣಿ ಕುಸಿಯುವ ಭೀತಿಯಲ್ಲಿತ್ತು. ಮೊನ್ನೆ ಮೊನ್ನೆ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಮಂದಿರ ನವೀಕರಣದ ಬಗ್ಗೆ ಗಂಭೀರ ಚರ್ಚೆ ನಡೆದಿತ್ತು. ಮುಂದಿನ ತಿಂಗಳು ದುರುಸ್ತಿ ಕಾರ್ಯ ಶುರುಹಚ್ಚಿ ಮಳೆಗಾಲಕ್ಕೆ ಮೊದಲು ಅದರ ನವೀಕರಣೋತ್ಸವಕ್ಕೆ ದಿನ ನಿಗದಿಗೊಳಿಸಬೇಕೆಂದೂ ತೀರ್ಮಾನವಾಯ್ತು. ಕಾಮಗಾರಿಗೆ ಅಂದಾಜು ವೆಚ್ಚ ನಾಲ್ಕು ಲಕ್ಷ. ಮಂದಿರದ ಖಜಾನೆಯಲ್ಲಿ ಅಷ್ಟು ದೊಡ್ಡ ಮೊತ್ತವಿರಲಿಲ್ಲ. ಸರಿ, ಊರ, ಪರವೂರ ಭಕ್ತರಿಂದ ದೇಣಿಗೆ ಸಂಗ್ರಹಿಸುವುದೆಂದು ಮಾತುಕತೆಯಾಯ್ತು. ಮಂದಿರದ ಆಡಳಿತ ವರ್ಗ, ಖಾಯಂ ಸ್ವಯಂ ಸೇವಕರು, ನಿತ್ಯ ಭಕ್ತರೆಲ್ಲಾ ಒಟ್ಟುಸೇರಿ ತಮ್ಮೊಳಗೇ ಬೇರೆ ಬೇರೆ ಗುಂಪುಗಳನ್ನು ಮಾಡಿಕೊಂಡು ದುಡ್ಡು ಸಂಗ್ರಹಕ್ಕೆ ಹೊರಡುವುದೆಂದಾಯ್ತು. ನನ್ನ ಬಾಲ್ಯಕಾಲದ ಸಂಜೆಗಳೆಲ್ಲಾ ಆ ಮಂದಿರದ ಜಗುಲಿಯಲ್ಲೇ ಕಳೆದಿದ್ದುವು. ಇಲ್ಲಿ ಆಡಿ ಬೆಳೆದ ಮಕ್ಕಳಲ್ಲಿ ಈಗಲೂ ಇದೇ ಊರಿನಲ್ಲಿ ಝಂಡಾ ಹೂಡಿಕೊಂಡಿರುವುದು ನಾವೊಂದು ನಾಲ್ಕಾರು ಮಂದಿ ಮಾತ್ರ. ಆದುದರಿಂದಲೇ ನನಗೆ ಆ ಮಂದಿರವೆಂದರೆ ಒಂತರಾ ಚಡ್ಡಿ ದೋಸ್ತಿ ಎನ್ನುವಂತಹ ಭಾವನೆ. ಅಲ್ಲಿನ ನಿತ್ಯ ಭಕ್ತರ ಪಟ್ಟಿಯಲ್ಲಿ ನನ್ನ ಹೆಸರೂ ಸೇರಿಹೋಗಿದೆ.
ದೇಣಿಗೆ ಸಂಗ್ರಹಕ್ಕೆ ಹೊರಟ ರಾಘಣ್ಣನ ಗುಂಪಿನಲ್ಲಿ ನಾನೂ ಸೇರಿದಂತೆ ಐದು ಮಂದಿ. ಆ ದಿನದ ನಮ್ಮ ಗುರಿ ಐವತ್ತು ಮನೆಗಳು. ಮಂದಿರದ ದಕ್ಷಿಣ ಭಾಗದ ಕಡೆಗಿರುವ ಬಡಾವಣೆ ನಮ್ಮ ಮೊದಲ ಆಯ್ಕೆಯಾಗಿತ್ತು. ಮೇಲ್ಮಧ್ಯಮ ವರ್ಗದವರೇ ಜಾಸ್ತಿ ಇರುವ ಆ ಏರಿಯಾದಲ್ಲಿ ಸಂಗ್ರಹ ಚೆನ್ನಾಗಿಯೇ ಆಗಬಹುದೆಂಬುದು ನಮ್ಮ ನಿರೀಕ್ಷೆಯಾಗಿತ್ತು. ಹತ್ತು..., ಇಪ್ಪತ್ತು..., ಐವತ್ತು..., ಕೆಲವೇ ಕೆಲವು ಐನೂರರ ನೋಟುಗಳು..., ಒಂದೆರಡು ಸಾವಿರದ ನೋಟುಗಳು..., ಹೀಗೆ ಅಲ್ಪ ಸ್ವಲ್ಪ ದುಡ್ಡು ಸಂಗ್ರಹವಾಯ್ತು. ಆದರೆ ಅದಕ್ಕಿಂತಲೂ ಅನುಭವಗಳ ಸಂಗ್ರಹವೇ ದೊಡ್ಡದಾಯ್ತು. ಕೆಲವರು ನಮ್ಮನ್ನು ಕಾಣುತ್ತಲೇ ಮುಖಕ್ಕೆ ಹೊಡೆದಂತೆ ಬಾಗಿಲು ಅಪ್ಪಳಿಸಿ ಬಿಡುತ್ತಿದ್ದರು. ಇನ್ನು ಕೆಲವರು ಕಿಟಿಕಿಯಿಂದಲೇ ತಲೆ ಮಾತ್ರ ತೋರಿಸಿ ಭಿಕ್ಷುಕರನ್ನು ಓಡಿಸುವಂತೆ ಕೈಯ್ಯಲ್ಲಿ ತಾರಮ್ಮಯ್ಯ ಆಡಿಸಿ ಹೋಗುವಂತೆ ಸನ್ನೆ ಮಾಡಿದರು. ದುಡ್ಡು ಕೊಡುವುದಕ್ಕಿಂತಲೂ ರಸೀದಿ ಪಡೆದುಕೊಳ್ಳುವುದೇ ಮುಖ್ಯ ಎಂಬಂತೆ ನಡೆದುಕೊಂಡವರೂ ರಸೀದಿ ಕೊಟ್ಟಾಗ ಅದನ್ನು ಪಡೆದುಕೊಂಡು, `ಇಂತಹ ಖೊಟ್ಟಿ ರಸೀದಿ ಪ್ರಿಂಟ್ ಮಾಡಿ ದುಡ್ಡು ಮಾಡುವ ದಂಧೆಯೇ ಈಗ ಶುರುವಾಗಿದೆ' ಎಂದವರೂ ಇದ್ದರು! ಆದರೂ ನಮ್ಮ ಮುಖದಲ್ಲಿ ರೆಡಿಮೇಡ್ ನಗು ಹಾಗೇ ಇತ್ತು. ರಣ ಬಿಸಿಲಿನಲ್ಲಿ ಮನೆಯಿಂದ ಮನೆಗೆ ನಡೆದೇ ಹೋಗುತ್ತಿದ್ದೆವಾದುದರಿಂದ ಮಧ್ಯಾಹ್ನದ ಹೊತ್ತಿಗೆ ಒಣಗಿದ ತರಗೆಲೆಗಳಾಗಿ ಹೋದೆವು. ಕುಡಿಯಲು ತಂದಿದ್ದ ನೀರು ಯಾವಾಗಲೋ ಖಾಲಿಯಾಗಿ ಹೋಗಿತ್ತು. ಗಂಟಲು ಬರಡಾಗಿ ಹೊಟ್ಟೆ ಬೆನ್ನಿಗಂಟಿ ಹೋಗಿತ್ತು. ಆ ಬಡಾವಣೆಯಲ್ಲಿ ಇನ್ನೂ ಒಂದು ಮನೆ ಬಾಕಿಯಿತ್ತು. ಅದನ್ನು ಮುಗಿಸಿಯೇ ಊಟಕ್ಕೆ ಹೋಗೋಣ ಎಂದುಕೊಂಡೆವು. ಆ ಮನೆಯ ಗೇಟಿನ ಬಳಿ ತಲಪುತ್ತಲೇ ಅಂಗಳದ ತುದಿಯಲ್ಲಿದ್ದ ತೆಂಗಿನ ಮರದ ಕಟ್ಟೆಯಲ್ಲಿ ಕುಳಿತು ವೀಳ್ಯ ಹಾಕುತ್ತಿದ್ದ ಅಜ್ಜಿಯೊಬ್ಬಳನ್ನು ಕಂಡೆವು. ಆಕೆಯ ವೇಷಭೂಷಣ ನೋಡಿದಾಗ ಅವಳು ಆ ಮನೆಯ ಕೆಲಸದವಳಿರಬಹುದು ಎಂದುಕೊಂಡು `ಮನೆಯವರಿಲ್ಲವೇ?' ಎಂದು ಕೇಳಿದೆವು. ಅವರು ಹೊರಗೆಲ್ಲೋ ಹೋಗಿರುವರೆಂದೂ ಇನ್ನೊಂದರ್ಧ ಘಂಟೆಯಲ್ಲಿ ಬರಬಹುದೆಂದೂ ಹೇಳಿದಳು. ನಾವು ಬಂದ ಉದ್ದೇಶವೇನೆಂದೂ ಕೇಳಿ ತಿಳಿದುಕೊಂಡಳು. ಸುಕ್ಕು ಕಟ್ಟಿ ಒಳಕ್ಕೆ ಮಡಚಿ ಹೋಗಿದ್ದಂತಹ ಅವಳ ಮುಖ ಶ್ರೀದೇವಿ ಭಜನಾ ಮಂದಿರದ ಹೆಸರು ಕೇಳುತ್ತಲೇ ಹೂವಿನಂತೆ ಅರಳಿತು. ಗೇಟು ತೆರೆದು ನಮ್ಮ ಸನಿಹಕ್ಕೆ ಬಂದು ಹೇಳಿದಳು,
"ಇಕೊಳ್ಳಿ.., ಒಮ್ಮೆ ನೀವು ನನ್ನೊಟ್ಟಿಗೆ ಬರ್ಬೇಕು ಅಣ್ಣಾ...,ನನ್ನ ಮನೆ ಇಲ್ಲೇ ಆಚೆ ಬದಿಯಲ್ಲಿದೆ. ಈ ಮನೆಯವ್ರು ಬರುವೊತ್ತಿಗೆ ನಮ್ಮ ಮನೆಗೊಮ್ಮೆ ಹೋಗಿ ಬರುವಾ..." ಮುದುಕಿ ಅಂಗಲಾಚುವಂತೆ ಕೇಳಿಕೊಂಡಾಗ ನಾವೂ ಕುತೂಹಲಕ್ಕೊಳಗಾದೆವು. ಗುರುತು ಪರಿಚಯವಿಲ್ಲದ ನಮ್ಮನ್ನು ಇಷ್ಟು ಬಲವಂತ ಮಾಡಬೇಕಾದರೆ...? ಸರಿ, ಅಜ್ಜಿಯನ್ನು ಹಿಂಬಾಲಿಸಿದೆವು. ಗುಡಿಸಲಿನಂತಹ ಆ ಪುಟ್ಟ ಮನೆಯ ಅಂಗಳದಲ್ಲಿ ನಿಂತುಕೊಂಡೆವು. ನಮ್ಮ ಮುಖ ನೋಡಿಯೇ ಅಜ್ಜಿ ನಮ್ಮ ಆಯಾಸವನ್ನು ಅಂದಾಜಿಸಿರಬೇಕು. ಕುಡಿಯಲು ತಂಪಾದ ಬಾವಿ ನೀರನ್ನು ತಂದು ಕೊಟ್ಟಳು. ಹೊಟ್ಟೆ ತುಂಬಾ ನೀರು ಕುಡಿದು `ಉಸ್ಸಪ್ಪಾ' ಎನ್ನುತ್ತಾ ಅದೇ ನೀರಿನಿಂದ ಮುಖವನ್ನೂ ತೊಳೆದುಕೊಂಡೆವು.
"ಇಕೊಳ್ಳಿ.., ಸ್ವಲ್ಪ ಇಲ್ಲಿ ಬನ್ನಿ.., ಕೂತ್ಕೊಳ್ಳಿ...," ಎಂದು ನಮ್ಮನ್ನು ಕರೆದು ಕುಳ್ಳಿರಿಸಿದಳು. ಲುಟು ಲುಟುನೆ ಒಳಕ್ಕೆ ಓಡಿದ ಅಜ್ಜಿ ಹೋದ ವೇಗದಲ್ಲೇ ಹೊರಕ್ಕೆ ಬಂದಳು. ಆಕೆಯ ಕೈಯ್ಯಲ್ಲಿ ಹರುಕು ಸೀರೆಯ ಗಂಟೊಂದಿತ್ತು. ನಮ್ಮೆದುರು ಕಾಲು ಚಾಚಿ ಕುಳಿತು ಗಂಟನ್ನು ಬಿಚ್ಚತೊಡಗಿದಳು. ನಾವು ಮುಖ ಮುಖ ನೋಡಿಕೊಂಡೆವು. ಹಳೆ ಬಟ್ಟೆಯ ಕಮಟು ವಾಸನೆ ಮೂಗಿಗೆ ಬಡಿಯುತ್ತಿತ್ತು. ಸಹಿಸಿಕೊಂಡೆವು. ಜೀವಜಲವಿತ್ತ ಜೀವಿಗೆ ಅಷ್ಟಾದರೂ ಕೃತಜ್ಞತೆ ತೋರಿಸದಿದ್ದರೆ ಹೇಗೆ? ಒಂದರೊಳಗೊಂದು ಹೀಗೆ ಸುಮಾರು ಮೂರ್ನಾಲ್ಕು ಚಿಂದಿ ಬಟ್ಟೆಗಳನ್ನು ಬಿಚ್ಚಿದ ಮೇಲೆ ಹಳತಾಗಿ ಕಪ್ಪುಗಟ್ಟಿ ಹೋಗಿದ್ದ ಮರದ ಪೆಟ್ಟಿಗೆಯೊಂದು ಹೊರಕ್ಕೆ ಬಂತು. ಅಜ್ಜಿ ಅದನ್ನು ತೆಗೆದು ರಾಘಣ್ಣನ ಮುಂದೆ ಇಟ್ಟು ಹೇಳಿದಳು,
"ಇದರೊಳಗೆ ಸ್ವಲ್ಪ ದುಡ್ಡು ಉಂಟು ಮಗಾ.., ಎಣಿಸಿ ನೋಡು..,ನಮ್ಮ ಆ ದೇವಿಯಮ್ಮನಿಗೆ ಕೊಡ್ಲಿಕೆ..." ನಮಗೆ ಏನು ಹೇಳಬೇಕೆಂದೇ ತೋಚದಾಯ್ತು. ಮೊದಲು ಚೀತರಿಸಿಕೊಂಡಿದ್ದು ರಾಘಣ್ಣನೇ. ಅವರೇ ಕೇಳಿದರು.
"ಎಂತ ಅಜ್ಜಿ ನೀವು ಹೇಳೋದು..?"
"ಹೌದು ಮಗಾ.., ಇದೊಂದು ಬಾಕಿ ಇತ್ತು. ಈ ದುಡ್ಡನ್ನು ಒಂದು ಒಳ್ಳೆ ಕೆಲ್ಸಕ್ಕೆ ಕೊಡ್ಬೇಕು ಅಂತ ಆಸೆ ಇತ್ತು. ನನ್ನ ಬೇಡಿಕೆ ಆ ಅಮ್ಮನಿಗೆ ಕೇಳಿತೋ ಏನೋ...? ಅವಳೇ ನಿಮ್ಮನು ಇವತ್ತು ಇಲ್ಲಿಗೆ ಕಳಿಸಿರ್ಬೇಕು.., ಇನ್ನು ನಾನು ಸತ್ರೂ ಚಿಂತೆ ಇಲ್ಲ.., ತೆಕ್ಕೊಳ್ಳಿ.., ತೆಕ್ಕೊಳ್ಳಿ.." ಎಂದಳು. ನಮಗೆ ಅಜ್ಜಿಯ ಮಾತುಗಳ ತಲೆ ಬಾಲ ಅರ್ಥವಾಗಲಿಲ್ಲ. ಅವಳೇ ಮುಂದುವರಿಸಿದಳು,"ನೀವೆಲ್ಲಾ ಈಗಿನವರು..., ಆ ಅಮ್ಮನ ಕಾರ್ಣಿಕ ನಿಮ್ಗೆ ಎಂತ ಗೊತ್ತುಂಟು...? ನನ್ನ ಬಾಳು ಬಂಗಾರವಾದದ್ದೇ ಆ ಅಮ್ಮನಿಂದ..., ನನ್ನ ಕಥೆ ಹೇಳ್ತೇನೆ ಕೇಳಿ..,ನನ್ಗೆ ಮದುವೆಯಾಗಿ ಹತ್ತು ವರ್ಷವಾದ್ರೂ ಮಕ್ಕಳಾಗಲೇ ಇಲ್ಲ. ಯಾರೋ ಹೇಳಿದರು,`ಆ ಶ್ರೀದೇವಿ ಅಮ್ಮನನ್ನು ನಂಬಿಕೊಳ್ಳಿ, ಮಕ್ಕಳಾಗ್ತದೆ' ಅಂತ. ಅಂದಿನಿಂದ ಒಂದು ವರ್ಷ ಕಾಲ ನಾನೂ ನನ್ನ ಗಂಡನೂ ಬೆಳಗ್ಗೆ ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲೇ ಮೂರು ಮೈಲು ನಡೆದೇ ಆ ಮಂದಿರಕ್ಕೆ ಹೋಗಿ ಪ್ರಾರ್ಥನೆ ಮಾಡಿ ಬರುತ್ತಿದ್ದೆವು. ಮತ್ತೆ ಅದಕ್ಕಿಂತ ಹೆಚ್ಚು ಪೂಜೆ ಎಲ್ಲ ಮಾಡಿಸ್ಲಿಕೆ ನಮ್ಮ ಕೈಯಲ್ಲಿ ದುಡ್ದೆಲ್ಲಿತ್ತು...? ಆದರೂ ಆ ದೇವಿಯಮ್ಮ ನಮ್ಮ ಕೈ ಬಿಡ್ಲಿಲ್ಲ. ಚಿನ್ನದಂತಾ ಮಗ ನನ್ನ ಮಡಿಲು ತುಂಬಿದ. ಎಂತಾ ಬುದ್ಧಿ...,ಎಂತಾ ರೂಪ ಗೊತ್ತುಂಟಾ..ಅವ್ನಿಗೆ...? ನಮ್ಮ ಜಾತಿಯಲ್ಲೇ ಅಷ್ಟು ಬುದ್ಧಿವಂತಿಕೆಯಿರುವ ಮಕ್ಕಳು ಇಂದಿನವರೆಗೆ ಯಾರಿಗೂ ಹುಟ್ಲಿಲ್ಲ ಗೊತ್ತುಂಟಾ..? ಎಲ್ಲಾ ಆ ಅಮ್ಮನ ಮಹಾತ್ಮೆ...., ಶಾಲೆಯಲ್ಲಿರುವಾಗಲೇ ಅವನಿಗೆ ಸರ್ಕಾರದಿಂದ ದುಡ್ಡು (ವಿದ್ಯಾರ್ಥಿ ವೇತನ) ಬರ್ತಿತ್ತು. ಓದಿ... ಓದಿ ದೊಡ್ಡ ಕಂಪ್ಲೀತರು(ಕಂಪ್ಯೂಟರ್) ಇಂಜಿನಿಯರಾದ. ಈಗ ಬೊಂಬಾಯಿಯಲ್ಲಿ ಅದೆಂತದೋ ದೊಡ್ಡ ಕಂಪೆನಿಯಲ್ಲಿ ದೊಡ್ಡ ಕೆಲಸದಲ್ಲಿದ್ದಾನೆ. ಮದುವೆಯಾಗಿ ಎರಡು ಮಕ್ಕಳೂ ಉಂಟು."
"ಅಯ್ಯೋ ಅಜ್ಜೀ..., ಮತ್ತ್ಯಾಕೆ ಇಲ್ಲಿ ನೀವೊಬ್ರೇ ಇರೋದು..., ಅಲ್ಲಿಗೇ ಹೋಗಿಬಿಡಬಹುದಲ್ವಾ?" ನಾನು ಕೇಳಿದೆ.
"ನೀನೆಂತಾ ಮಗಾ ಹೇಳೋದು? ಅವ್ನು ಯಾವಾಗಲೂ ಒತ್ತಾಯ ಮಾಡ್ತಾನೆ ಅಂತ ಒಂದ್ಸಲ ಬೊಂಬಾಯಿಗೆ ಹೋಗಿದ್ದೆ.., ಅದೂ ಒಂದು ಪೇಟೆಯಾ... ? ಬೆಂಕಿಪೆಟ್ಟಿಗೆ ಜೋಡಿಸಿ ಇಟ್ಟ ಹಾಗೆ...? ಆಕಾಶದಲ್ಲುಂಟು ಅವನ ಮನೆ...,ಒಂದು ಮುಷ್ಠಿ ಮಣ್ಣು ನೋಡ್ಬೆಕಾ...? ಹತ್ತಿಪ್ಪತ್ತು ಮೈಲು ಹೋಗ್ಬೇಕಂತೆ! ಇನ್ನು ನಮ್ಮ ಮನೆಯೊಳಗೇ ನಾವು ಬಂಗುಡೆ ಸಾರು ಮಾಡಿ ತಿನ್ನುವ ಅಂತೇಳಿದ್ರೆ ಎಲ್ಲ ಕಿಟಿಕಿ, ಬಾಗಿಲು ಮುಚ್ಚಿ ಮನೆಯನ್ನು ಗುಡಾಣದ ಹಾಗೆ ಮಾಡ್ಬೇಕಂತೆ. ಆಚೀಚೆ ಮನೆಗೆಲ್ಲಾ ವಾಸನೆ ಬಂದ್ರೆ ಕೇಸು ಹಾಕ್ತಾರಂತೆ..., ಹೊರಗೆ ಅಂಗಳದಲ್ಲಿ ಕೂತು ಮೈಕೈ ಅಲ್ಲಾಡಿಸುವಾ ಹೇಳಿದ್ರೆ ಅದಿಕ್ಕೂ ಅಲ್ಲಿ ಜಾಗವಿಲ್ಲ...,ಒಳಗೆ ಕೂತು ಬೇಕಾದ್ದು ಮಾಡಿ ತಿನ್ಲಿಕೂ ಆಗುದಿಲ್ಲಾ..., ಅದೂ ಒಂದು ಬದುಕಾ....? ಕೈಕಾಲು ಗಟ್ಟಿ ಇರುವವರೆಗೆ ನನ್ಗೆ ನನ್ನೂರೇ ಸಾಕು ಅಂತ ಇಲ್ಲೇ ಇದ್ದೇನೆ. ಗಂಡ ಸತ್ತವರಿಗೆ ಬರುವ ದುಡ್ಡು(ವಿಧವಾ ವೇತನ) ನನ್ಗೆ ಸಿಗ್ತದೆ. ಮೊದಲು ಪೋಸ್ಟಾಪೀಸಿಗೆ ಗುಡಿಸ್ಲಿಕೆ ಹೋಗ್ತಿದ್ದೆ. ಈಗ ಅದರದ್ದು ಪೆನ್ಸನು(ಪೆನ್ಶನ್) ಬರ್ತದೆ. ಆ ದೊಡ್ಡ ಮನೆಯ ಅಕ್ಕನಿಗೆ ಏನಾದ್ರೂ ಸಹಾಯಕ್ಕೆ ಹೋಗ್ತೇನೆ. ಅವ್ರೂ ಏನಾದ್ರೂ ಕೊಡ್ತಾರೆ ಮತ್ತು ನನ್ನನ್ನು ಚಂದಕೆ ನೋಡಿಕೊಳ್ತಾರೆ. ಇನ್ನೆಂತ ಬೇಕು ನನ್ಗೆ...? ಮಗ ಮೋಬಿಲು(ಮೊಬೈಲ್) ತಂದು ಕೊಟ್ಟಿದ್ದಾನೆ. ಅವ್ನೂ ವರ್ಷಕ್ಕೆ ಎರಡುಸಲ ಬರ್ತಾನೆ. ಬಂದಾಗೆಲ್ಲಾ ಅಟ್ಟಿ ಅಟ್ಟಿ ದುಡ್ಡು ಕೊಟ್ಟು ಹೇಳ್ತಾನೆ...`ಅಮ್ಮಾ.., ಮನೆ ರಿಪೇರಿ ಮಾಡಿಸ್ಕೋ.., ಡಾಕ್ಟ್ರ ಹತ್ರ ಹೋಗಿ ಸರಿಯಾಗಿ ಮದ್ದು ತೆಕ್ಕೋ..., ಹಬ್ಬಕ್ಕೆ ಹೊಸಾ ಬಟ್ಟೆ ತೆಕ್ಕೋ..,ಅಂತ ..., ಊರು ಹೋಗು, ಕಾಡು ಬಾ ಅಂತ ಕರೀತದೆ.. ಇನ್ನು ನನ್ಗೆ ಅದೆಲ್ಲಾ ಯಾಕೆ...? ಇಕೊಳ್ಳಿ..., ಇದ್ರಲ್ಲಿರುವ ದುಡ್ಡು ನನ್ನ ಆ ಚಿನ್ನದಂತ ಮಗ ಕೊಟ್ಟದ್ದು.., ಊರವ್ರೆಲ್ಲಾ ನನ್ನನ್ನು `ಬಂಜೆ..., ಬಂಜೆ...' ಅಂತ ಹಂಗಿಸ್ತಿದ್ದಾಗ ಆ ತಾಯಿ ನನ್ನ ಮಡಿಲು ತುಂಬಿದ್ದನ್ನು ನಾನು ಮರೀಲಿಕ್ಕಾಗ್ತದಾ ನೀವೇ ಹೇಳಿ...? ಇವತ್ತು ಅವಳ ತಲೆಗೊಂದು ಸೂರು ಮಾಡಿಕೊಡುವ ಭಾಗ್ಯ ನನ್ಗೆ ಸಿಕ್ಕುವಂತಾದ್ದೂ ಅವಳಿಂದಾಗಿಯೇ..., ಅದನ್ನು ತಳ್ಳಿಹಾಕಿ ನಾನು ಯಾವ ನರಕಕ್ಕೆ ಹೋಗಲಿ ಮಗಾ...?" ಎಂದಳು.
ಆ ಪೆಟ್ಟಿಗೆಯೊಳಗೆ ಪದರ ಪದರವಾಗಿ ಮಡಚಿಟ್ಟ ನೋಟುಗಳನ್ನು ತೆಗೆದು ಎಣಿಕೆ ಮಾಡಲು ಸುಮಾರು ಅರ್ಧ ಘಂಟೆಯೇ ಹಿಡಿಯಿತು. ಅಜ್ಜಿ ಆಗಾಗ ಹೊರಕ್ಕೆ ಹೋಗಿ ಆ ದೊಡ್ಡ ಮನೆಯವರು ಇನ್ನೂ ಬಂದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳುತ್ತಿದ್ದಳು. ಅಜ್ಜಿಯ ಹರುಕು ಗಂಟಿನಲ್ಲಿ ಇದ್ದುದು ಬರೋಬ್ಬರಿ ಐದು ಲಕ್ಷ!
"ಅಜ್ಜೀ.., ಮಂದಿರಕ್ಕೆ ಇಷ್ಟೆಲ್ಲಾ ದುಡ್ಡು ಬೇಡ.., ನಿಮ್ಮ ಕಷ್ಟ ಕಾಲಕ್ಕೆ ಇಟ್ಕೊಂಡು ಉಳಿದದ್ದು ಕೊಟ್ರೆ ಸಾಕು..." ಎಂದರು ರಾಘಣ್ಣ.
"ಅಯ್ಯ..., ನೀನೆಂತ ಮಗಾ ಹೇಳೂದು...? ನನ್ನ ಕಷ್ಟಕಾಲ ಎಲ್ಲ ಯಾವಾಗ್ಲೋ ಕಳೆದುಹೋಗಿದೆ..., ಇನ್ನೊಂದು ಸಾವು ಬಂದ್ರೆ ಆಯ್ತು..., ಅದ್ರಲ್ಲಿ ದುಡ್ಡು ಜಾಸ್ತಿ ಇದ್ರೆ ಶ್ರೀದೇವಿ ಅಮ್ಮನಿಗೆ ನನ್ನ ಲೆಕ್ಕದಲ್ಲಿ ಕಾಸಿನ ಸರ ಮಾಡ್ಸಿ ಹಾಕಿ.
"......."
"....."
"...."
"...."
"...."
ಈಗಲೂ ಮೊದಲು ಮಾತನಾಡಿದ್ದು ರಾಘಣ್ಣನೆ.
"ಅಜ್ಜೀ..., ಹಾಗಾದ್ರೆ ರಸೀದಿ ಹರಿಯೋದಾ...?"
ಬಾಯಲ್ಲಿರುವ ನಾಲ್ಕೇ ನಾಲ್ಕು ಹಲ್ಲುಗಳೂ ಕಾಣುವಂತೆ ಕಿಲಕಿಲನೆ ನಕ್ಕ ಅಜ್ಜಿ,
"ಅಯ್ಯೋ..ಮಗಾ..., ಮನುಷ್ಯರಲ್ಲಿ ಅಷ್ಟೂ ನಂಬಿಕೆ ಇಡದಿದ್ರೆ ಹೇಗೆ...? ಆ ದುಡ್ಡನ್ನು ನಿಮ್ಮ ಮುಂದೆ ಇಟ್ಟಾಗಲೇ ಅದು ಆ ಅಮ್ಮನಿಗೆ ಸೇರಿ ಹೋಯ್ತು. ಇನ್ನು ಅದಕ್ಕೆಂತಾ ಚೀಟಿ ಹರಿಯೋದು...?" ಎಂದುಬಿಟ್ಟಳು!
ಆಗಿಂದಾ ಮಾತು ಕಳೆದುಕೊಂಡ ಮೂಕರಂತಾಗಿದ್ದ ನಾವು ಈಗಂತೂ ಮರಗಟ್ಟಿಯೇ ಹೋದೆವು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ