ಗುರುವಾರ, ಫೆಬ್ರವರಿ 18, 2016

ಪಚ್ಚೆ ಹೆಸ್ರು- ಕಾಳು, ಬೇಳೆ ಸವಿ ರುಚಿ

ಪಚ್ಚೆ ಹೆಸರು ಸಸ್ಯಾಹಾರ ಭೋಜನದ ಯಾದಿಯಲ್ಲಿ ಮೊತ್ತ ಮೊದಲ ಸ್ಥಾನವನ್ನು ಗಳಿಸುತ್ತದೆ. ಪ್ರೋಟೀನು ಭರಿತವಾದ ಇದರಲ್ಲಿ ಕಾರ್ಬೋಹೈಡ್ರೇಟಿನ ಅಂಶ ಅತ್ಯಂತ ಕಡಿಮೆ ಇರುವುದು. ಪಚ್ಚೆ ಹೆಸ್ರಿನಲ್ಲಿರುವ ಪ್ರೋಟೀನಿಗೆ ಹೋಲಿಸಿದರೆ ಇದರ ಸಿಪ್ಪೆ ತೆಗೆದ ಬೇಳೆಯಲ್ಲಿ ಪ್ರೋಟೀನು ಕಡಿಮೆ. ಆದರೂ ತೊಗರಿಬೇಳೆಗಿಂತ ಇದರಲ್ಲಿ ಪ್ರೊಟೀನು ಜಾಸ್ತಿಯೇ ಇದೆ. ಸಕ್ಕರೆ ಕಾಯಿಲೆಯವರಿಗೂ ಇದು ಅತ್ತ್ಯುತ್ತಮ ಆಹಾರ. ಪಚ್ಚೆ ಹೆಸ್ರನ್ನು ಮೊಳಕೆ ಬರಿಸಿ ಹಸಿಯಾಗಿಯೇ ಅಥವಾ ಸ್ವಲ್ಪ ಮಾತ್ರವೇ ಬೇಯಿಸಿ ತಿನ್ನುವುದೂ ಅತ್ಯಂತ ಉಪಯುಕ್ತ. ಇಂದಿನ ಈ ದಾವಂತದ ಯುಗದಲ್ಲಿ ಅಡುಗೆಯನ್ನು ಚಕಚಕನೆ ಮುಗಿಸಿ ಆಫೀಸು ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ ಮಹಿಳೆಗಿದೆ. ಅಂತಹ ಗಡಿಬಿಡಿ ಅಡುಗೆಗೂ ಈ ವಸ್ತು ಚೆನ್ನಾಗಿ ಹೊಂದಿಕೊಳ್ಳುತ್ತದೆ. ಅಂತವುಗಳನ್ನು ತಯಾರಿಸಿ ತಿಂದು ನಾವು ಖುಷಿಪಟ್ಟಿದ್ದೇವೆ. ನೀವೂ ಮಾಡಿ ನೋಡಿ.
ಈ ಕೆಳಗಿನ ಪಾಕ ವಿಧಾನಗಳಿಗೆ ತಗಲುವ ಸಮಯ ಹತ್ತರಿಂದ ಹದಿನೈದು ನಿಮಿಷ.
ಪ್ರಮಾಣ: ಎರಡು ಯಾ ಮೂರು ಮಂದಿಗೆ.
ರೊಟ್ಟಿ
ಸಾಮಾಗ್ರಿಗಳು:
೧. ಚಿಕ್ಕ ತರಿ ರವೆ - ೨ ಕಪ್
೨. ಗೋದಿ ಹುಡಿ -೩ ಕಪ್  
೩.  ತೆಂಗಿನ ತುರಿ- ೧/೨ ಕಪ್ 
೪. ಮೊಳಕೆ ಬಂದ ಹೆಸ್ರು ಕಾಳು -೧ ಕಪ್ 
೫. ಕ್ಯಾರೆಟ್ ತುರಿ -೧/೨ ಕಪ್ 
೬. ಕರಿಬೇವಿನ ಸೊಪ್ಪು- ೧೦-೧೫
೭. ಕೊತ್ತಂಬರಿ ಸೊಪ್ಪು - ಮೂರು ಎಸಳು 
೮. ಹಸಿರು ಮೆಣಸಿನ ಕಾಯಿ - ರುಚಿಗೆ ತಕ್ಕಂತೆ 
೯. ಜೀರಿಗೆ- ೧/೪ ಚಮಚ 
೧೦. ಹಸಿ ಶುಂಟಿ- ೧ ಇಂಚು ಗಾತ್ರ 
೧೧. ಉಪ್ಪು 
ವಿಧಾನ : ರವೆ ಮುಳುಗುವಷ್ಟೇ ನೀರು ಹಾಕಿ ನೆನೆಸಿ ಮೆತ್ತಗಾಗಿಸಿಕೊಳ್ಳಿ. ರವೆ, ಗೋದಿಹುಡಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಯ ಚಿಕ್ಕ ಜಾರಿನಲ್ಲಿ ಹಾಕಿ ನೀರು ಬೆರೆಸದೆ ಎರಡು ಸುತ್ತು ತಿರುಗಿಸಿ.( ಈ ಮಿಶ್ರಣ ನುಣ್ಣಗೆ ಇರಬಾರದು) ಅಗಲ ಬಾಯಿಯ ಪಾತ್ರೆಯಲ್ಲಿ ಇದನ್ನು ಹಾಕಿ ಗೋದಿಹುಡಿ, ನೆನೆದ ರವೆಯನ್ನೂ ಸೇರಿಸಿ. ಎಲ್ಲವನ್ನೂ ಚೆನ್ನಾಗಿ  ಮಿಶ್ರ ಮಾಡಿ ಒಂದು ಮುದ್ದೆಯಾಗುವಂತೆ ನೋಡಿಕೊಳ್ಳಿ.( ಈ ಮಿಶ್ರಣ ಗಟ್ಟಿಯಿರಬಾರದು ಕಲಸುವಾಗ ಅಗತ್ಯ ಬಿದ್ದರೆ ನೀರು ಚಿಮುಕಿಸಿಕೊಳ್ಳಬಹುದು). ಕೈಯ್ಯನ್ನು ಒದ್ದೆ ಮಾಡಿಕೊಂಡು ದೊಡ್ಡ ನಿಂಬೆ ಗಾತ್ರದ ಹಿಟ್ಟನ್ನು ತೆಗೆದುಕೊಳ್ಳಿ. ಬಾಳೆಲೆ ತುಂಡಿನ ಮೇಲ್ಭಾಗದಲ್ಲಿ ರೊಟ್ಟಿ ತಟ್ಟಿ ಆ ಬದಿ ಬಿಸಿ ಕಾವಲಿಗೆಯ ಮೇಲೆ ಬೀಳುವಂತೆ ಹಾಕಿ ಬೇಯಿಸಿ. ಬಾಳೆಲೆ ಬಾಡಿದಾಗ ಅದನ್ನು ಹಗುರವಾಗಿ ರೊಟ್ಟಿಯಿಂದ ಬೇರ್ಪಡಿಸಿ. ತುಪ್ಪ ಹನಿಸಿ ಕವುಚಿ ಹಾಕಿ ಒಂದು ನಿಮಿಷ ಬೇಯಿಸಿ ತೆಗೆಯಿರಿ. ಚಟ್ನಿಯೊಂದಿಗೆ ಸವಿಯಿರಿ. 
ಸಲಹೆಗಳು: ನೆನೆಸಿದ ಕಾಳುಗಳನ್ನು ನೀರಿನಿಂದ ತೆಗೆದು ತೆಳ್ಳಗಿನ ಬಟ್ಟೆಯಲ್ಲಿ ಗಂಟುಕಟ್ಟಿ ತೂಗು ಹಾಕಿದರೆ ಮಾರನೆಯ ದಿನಕ್ಕೆ ಚೆನ್ನಾಗಿ ಮೊಳಕೆಯೊಡೆದಿರುತ್ತದೆ. ಇದನ್ನು ಉಪಯೋಗಿಸುವ ಮೊದಲು ಮೂರ್ನಾಲ್ಕು ಸಲ ನೀರು ಬದಲಾಯಿಸಿ  ತೊಳೆದುಕೊಳ್ಳಿ. ಕರಿಬೇವು, ಕೊತ್ತಂಬರಿ ಸೊಪ್ಪು, ಶುಂಟಿ, ಹಸಿಮೆಣಸುಗಳನ್ನು ಸ್ವಚ್ಛಗೊಳಿಸಿ ಚಿಕ್ಕದಾಗಿ ಹೆಚ್ಚಿಕೊಂಡ ಮೇಲೆ ಮಿಕ್ಸಿಗೆ ಹಾಕಿದರೆ ಸರಿಯಾಗಿ ಪುಡಿಯಾಗುತ್ತದೆ. ಕ್ಯಾರೆಟ್ ತುರಿಯುವ ಮೊದಲು ಸಿಪ್ಪೆಯನ್ನು ಹೆರೆದುಕೊಳ್ಳಿ.












     ಮೊಳಕೆ ಕಾಳು ಪಲ್ಯ 
ಸಾಮಾಗ್ರಿಗಳು: ೧. ಮೊಳಕೆಯೊಡೆದ ಹೆಸರು ಕಾಳು-೨ ಕಪ್.
                       ೨. ನೆನೆಸಿ ಬೇಯಿಸಿದ ರಾಜ್ಮ - ೧/೨ ಕಪ್
                       ೩. ತೆಂಗಿನ ತುರಿ - ೪ ಚಮಚ
                       ೪. ಈರುಳ್ಳಿ - ೧
                       ೫. ಬೆಳ್ಳುಳ್ಳಿ ಎಸಳು -೪
                       ೬. ಮೆಣಸಿನ ಕಾಯಿ - ಒಂದೆರಡು
                       ೭. ನಿಂಬೆ ರಸ - ೧ ಚಮಚ
                       ೮. ಕೊತ್ತಂಬರಿ ಸೊಪ್ಪು -೨ ಎಸಳು
                       ೯. ಉಪ್ಪು.
ವಿಧಾನ : ಎಂಟು ಘಂಟೆ ಹೊತ್ತು ನೀರಲ್ಲಿ ನೆನೆದ ರಾಜ್ಮ ಕಾಳುಗಳನ್ನು ಬೇಕಾದಷ್ಟು ನೀರು ಹಾಗೂ ಉಪ್ಪಿನೊಂದಿಗೆ ಕುಕ್ಕರಿನಲ್ಲಿ ಮೂರ್ನಾಲ್ಕು ವಿಸಿಲಿಗೆ ಬೇಯಿಸಿಟ್ಟುಕೊಳ್ಳಿ. ಮೊಳಕೆಕಾಳಿಗೂ ಉಪ್ಪು ಸೇರಿಸಿ ಸ್ವಲ್ಪ ಮಾತ್ರವೇ ಬೀಯಿಸಿಕೊಳ್ಳಿ(ನಾಲ್ಕೈದು ನಿಮಿಷ). ಬಾಣಲೆಯನ್ನು ಬಿಸಿಗಿಟ್ಟು ಒಗ್ಗರಣೆ ಮಾಡಿ. ಹೆಚ್ಚಿಟ್ಟ ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನ ಕಾಯಿಗಳನ್ನು ಸೇರಿಸಿ ಹಸಿವಾಸನೆ ಹೋಗುವಷ್ಟು ಹುರಿಯಿರಿ (ಒಗ್ಗರಣೆಯ ಎಣ್ಣೆಯೇ  ಇದಕ್ಕೂ ಸಾಕು). ರಾಜ್ಮ, ಮೊಳಕೆಕಾಳುಗಳಿಂದ ನೀರನ್ನು ಪೂರ್ತಿಯಾಗಿ ಬಸಿದು ಇದರೊಂದಿಗೆ ಮಿಶ್ರ ಮಾಡಿ ಚೆನ್ನಾಗಿ ಕೈಯ್ಯಾಡಿಸಿ. ತೆಂಗಿನ ತುರಿ ಸೇರಿಸಿ. ಮೇಲಿನಿಂದ ಕೊತ್ತಂಬರಿ ಸೊಪ್ಪಿನ ಚೂರುಗಳನ್ನು ಉದುರಿಸಿ ಬೆಂಕಿಯಿಂದ ಕೆಳಕ್ಕಿಳಿಸಿ. ನಿಂಬೆ ರಸ ಹನಿಸಿ ರೊಟ್ಟಿ ಯಾ ಚಪಾತಿ ಯಾ ಪೂರಿಗಳೊಂದಿಗೆ ಸೇರಿಸಿ ತಿಂದು ನೋಡಿ.(ಸಲಹೆ: ಮೊಳಕೆ ಕಾಳುಗಳನ್ನು ಯಾವುದೇ ಕಾರಣಕ್ಕೂ ಕುಕ್ಕರಿನಲ್ಲಿ ಬೇಯಿಸಬೇಡಿ. ಕಾಳುಗಳನ್ನು ಬೇಯಿಸಿದ ನೀರನ್ನು ಬಿಸಾಡದೆ ತಿಳಿ ಸಾರು ಮಾಡಬಹುದು).


 










ಪಚ್ಚೆ ಹೆಸರು ಖೂರ್ಮ 
ಸಾಮಾಗ್ರಿಗಳು: ೧. ನೆನೆಸಿ ಬೇಯಿಸಿದ ಹೆಸರು ಕಾಳು- ೨ ಕಪ್ 
                       ೨. ಗರಂ ಮಸಾಲೆ ಪುಡಿ - ೧ ಚಿಟಿಕೆ 
                       ೩. ಸಾಂಬಾರು ಪುಡಿ- ೨ ಚಿಟಿಕೆ 
                       ೪. ಕೊತ್ತಂಬರಿ ಸೊಪ್ಪು, ಪುದಿನ ಸೊಪ್ಪು, ಕರಿಬೇವಿನ ಸೊಪ್ಪು ತಲಾ ಎರಡೆರಡು ಎಸಳು 
                       ೫. ಶುಂಟಿ - ೧/೨ ಇಂಚು 
                       ೬. ಬೆಳ್ಳುಳ್ಳಿ - ಒಂದೆಸಳು 
                       ೭. ಉಪ್ಪು 
ವಿಧಾನ : ಉಪ್ಪು  ಹಾಕಿ ಬೇಯಿಸಿ (ಮೂರು ವಿಸಿಲ್) ದ ಕಾಳುಗಳಿಂದ ೧/೪ ಕಪ್ ಕಾಳನ್ನು ತೆಗೆದುಕೊಂಡು ಸೊಪ್ಪುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸಾಮಾಗ್ರಿಗಳೊಂದಿಗೆ ಬೇಕಷ್ಟೇ ನೀರಿನೊಂದಿಗೆ ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ. ಬೀಯಿಸಿಟ್ಟ ಕಾಳಿನೊಂದಿಗೆ ಇದನ್ನು ಸೇರಿಸಿ ಕುದಿಸಿ. ಈಗ ಹೆಚ್ಚಿಟ್ಟ ಸೊಪ್ಪುಗಳನ್ನು ಮೇಲಿನಿಂದ ಉದುರಿಸಿ ಬೆಂಕಿಯಿಂದ ಇಳಿಸಿ. ಬೆಳಗ್ಗಿನ ತಿಂಡಿಯೊಂದಿಗೆ ನೆಂಜಿಕೊಳ್ಳಿ.
  
  

 










ಹೆಸರು ಬೇಳೆ ತಿಳಿ ಸಾರು
ಸಾಮಾಗ್ರಿಗಳು: ೧. ಖಮ್ಮಗೆ ಹುರಿದ ಹೆಸ್ರು ಬೇಳೆ- ೧/೪ ಕಪ್ 
                       ೨. ಕೆಂಪು ಮೆಣಸು - ರುಚಿಗೆ ತಕ್ಕಷ್ಟು 
                       ೩. ಮೆಂತೆ- ಏಳೆಂಟು ಕಾಳು
                       ೪. ಇಂಗು -ಚಿಟಿಕೆ 
                       ೫. ಉಪ್ಪು,( ಬೇಕಿದ್ದರೆ ಬೆಲ್ಲ ಸೇರಿಸಿಕೊಳ್ಳಬಹುದು)
                       ೬. ಹುಳಿ -ನೆಲ್ಲಿ ಗಾತ್ರ  
                       ೭. ಒಗ್ಗರಣೆಗೆ- ಎಣ್ಣೆ, ಕೆಂಪು ಮೆಣಸು, ಸಾಸಿವೆ, ಜೀರಿಗೆ, ಕರಿಬೇವಿನ ಸೊಪ್ಪು 
ವಿಧಾನ: ಬಿಸಿ ಬಾಣಲೆಗೆ ಬೇಳೆಯನ್ನು ಸುರಿದು ಚಿಕ್ಕ ಬೆಂಕಿಯಲ್ಲಿ ಚಿನ್ನದ ಬಣ್ಣಕ್ಕೆ ಹುರಿದುಕೊಳ್ಳಿ (ಎಣ್ಣೆ ಬೇಡ). ಆರಿದ ಮೇಲೆ ತೊಳೆದು ಮೆತ್ತಗೆ ಬೇಯಿಸಿಟ್ಟುಕೊಳ್ಳಿ. ಒಗ್ಗರಣೆಯ ಸಾಮಾಗ್ರಿ ಹೊರತುಪಡಿಸಿ ಉಳಿದವುಗಳನ್ನು ಸ್ವಲ್ಪ ಎಣ್ಣೆ ಹಾಕಿ ಹುರಿದು
ಬೀಯಿಸಿಟ್ಟ ಬೇಳೆಯೊಂದಿಗೆ ನುಣ್ಣಗೆ ಅರೆಯಿರಿ. ಪಾತ್ರೆಗೆ ಹಾಕಿ ಬೇಕಿದ್ದಷ್ಟು ನೀರು, ಉಪ್ಪು, ಬೆಲ್ಲ ಹಾಕಿ ಕುದಿಸಿ. ಒಗ್ಗರಣೆ ಕೊಡಿ. ಅನ್ನದೊಂದಿಗೆ ಸವಿಯಿರಿ. ಇದೇ ರೀತಿಯಾಗಿ ಹುರುಳಿ ಸಾರನ್ನೂ ಮಾಡಬಹುದು.

   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ