ಭಾನುವಾರ, ಮಾರ್ಚ್ 6, 2016

ಅಮ್ಮಾ...,ನಾನು ಅರುಂಧತಿಯಾಗಲಿಲ್ಲ...,ಭಾಗ- ೧

ಬೆಳ್ಳಂಬೆಳಗ್ಗೆ ಗೇಟು ಶಬ್ಧವಾದಾಗ ವಾಕಿಂಗು ಹೋದ ಪತಿ ವಾಪಾಸಾದುದಿರಬೇಕೆಂದುಕೊಂಡಳು. ಆದರೆ ಅವರು `ಹರಿಣೀ..,. ' ಎಂದು ಕರೆಯುತ್ತಲೇ ಒಳಗೆ ಬರುವ ವಾಡಿಕೆ. ವ್ಯತಿರಿಕ್ತವಾಗಿ `ಅಮ್ಮಾ...,' ಎಂಬ ಕೂಗು ಕೇಳಿದಂತಾಗಿ ಓಡುತ್ತಿರುವ ಮಿಕ್ಸಿಯನ್ನು ನಿಲ್ಲಿಸಿ ಕಿವಿ ನಿಮಿರಿಸಿ ಕುತ್ತಿಗೆಯನ್ನು ಉದ್ದ ಮಾಡಿ ತಲೆಯನ್ನು ಹೊರಕ್ಕೆ ಚಾಚಿದಳು. ಮಗಳು ಸುರಭಿ ನಿಧಾನಕೆ ಒಳಗಡಿಯಿಡುತ್ತಿದ್ದಳು! ಕೈಯ್ಯಲ್ಲಿ ಭಾರವಾದ ದೊಡ್ಡ ಬ್ಯಾಗು, ಅದಕ್ಕಿಂತ ಭಾರವಾದ ಮುಖಭಾವ....!! ಯಾಕೋ ಹರಿಣಿಯ ಬಲಗಣ್ಣು ಅದುರಿದಂತಾಯ್ತು. ಆದರೆ ಯಾವುದೇ ಸಂದರ್ಭದಲ್ಲೂ ಸಮಚಿತ್ತವನ್ನು ಕಳೆದುಕೊಳ್ಳದ ಗಟ್ಟಿ ಹೆಣ್ಣು ಆಕೆ.
"ಆಹಾ..., ಏನಿದು ಪ್ಲೆಸೆಂಟ್ ಸರ್ಪ್ರೈಸ್...? ಒಂದು ಮೆಸೇಜು ಮಾಡ್ಬಾರ್ದಾಗಿತ್ತಾ....? ಬಸ್ಟ್ಯಾಂಡಿಗೇ ಬಂದ್ಬಿಡ್ತಿದ್ದೆ...?" ಎನ್ನುತ್ತಾ ಮಗಳನ್ನು ನಗುಮುಖದಿಂದ ಸ್ವಾಗತಿಸಿದಳು. 
ಮೊದಲೆಲ್ಲ ಮಾಡುತ್ತಿದ್ದಂತೆ ಅಮ್ಮನ ತೆಕ್ಕೆಗೆ ಬಿದ್ದು ಆ ಕಾಟನ್ ಸೀರೆಯ ಮರ್ಮರದಲ್ಲಿ ಮುಖ ಹುದುಗಿಸಿ ಮೂಗನ್ನು ಅತ್ತಿಂದಿತ್ತ ತಿಕ್ಕಬೇಕೆಂಬ ಅದಮ್ಯ ಬಯಕೆಯನ್ನು ಹತ್ತಿಕ್ಕಿಕೊಂಡಳು. ಅವರಿಬ್ಬರ ನಡುವೆ ಅದೃಶ್ಯ ಕಂದಕವೊಂದು ಏರ್ಪಟ್ಟು ಹೋಗಿತ್ತಲ್ಲಾ....? ಬರಿದೇ ಸಪ್ಪೆ ನಗುವೊಂದನ್ನು ಹೊರಚೆಲ್ಲಿದಳು. ಈಗಾಗಲೇ ಮಗಳ ವಿಷಯದಲ್ಲಿ ತಲೆ ಕೆಡಿಸಿಕೊಂಡು ಜರ್ಝರಿತರಾಗಿ ಹೋಗಿದ್ದ ಗಂಡ ವಾಕಿಂಗು ಮುಗಿಸಿ ಮನೆ ಪ್ರವೇಶಿಸುವಾಗ ಮಗಳ ಈ ಅವತಾರವನ್ನು ನೋಡಿ ಅವರು ಇನ್ನಷ್ಟು ಕುಗ್ಗಿ ಹೋಗದಂತೆ ಹರಿಣಿ ತಕ್ಷಣಕ್ಕೆ ಏನನ್ನಾದರೂ ಮಾಡಲೇಬೇಕಿತ್ತು.
"ಸುರೀ ಪುಟ್ಟೀ..., ಮದುವೆ ಆದ್ಮೇಲೆ ಬಹಳ ಗಂಭೀರಳಾಗಿ ಹೋದೆಯಲ್ಲೇ....? ಬಾ..., ಬಾ..., ಬ್ಯಾಗು ಒಳಗಿಟ್ಟು ಫ್ರೆಶ್ ಆಗಿಬಿಡು.." ಎನ್ನುತ್ತಾ ಮಗಳ ಕೈ ಹಿಡಿದು ಬೆಡ್ ರೂಮಿಗೆ ಕರೆದೊಯ್ದಳು. ತಾನು ಮನೆಬಿಟ್ಟು ಆರು ತಿಂಗಳುಗಳಾದರೂ ಇನ್ನೂ ನಿನ್ನೆ ಮೊನ್ನೆಯಷ್ಟೇ ಉಪಯೋಗಿಸಿ ಬಿಟ್ಟಂತಿರುವ ತನ್ನ ರೂಮನ್ನು ನೋಡಿ ಸುರಭಿಯೋಳಗಿನ ಅಪರಾಧಿ ಭಾವ ಇನ್ನಷ್ಟು ಬಲಿಯಿತು.
"ಪುಟ್ಟೀ..., ಈಗಿನ್ನೂ ಆರೂವರೆ ಅಷ್ಟೇ..., ಸ್ವಲ್ಪ ಮಲಕ್ಕೋ..., ನೀರು ಬಿಸಿಯಾದ ಮೇಲೆ ಸ್ನಾನ ಮಾಡಿಬಿಡು. ಎಲ್ರೂ ಜೊತೆಯಲ್ಲೇ ಬ್ರೇಕ್ಫಾಸ್ಟ್ ಮಾಡೋಣ.."
ಮಗಳಿಗೆ ಮಲಗಲು ಅನುವು ಮಾಡಿಕೊಟ್ಟು ಹೊರಗೆ ಬರುವಷ್ಟರಲ್ಲಿ ಪತಿ ಬಂದಾಗಿತ್ತು. ಮೆಲುಧ್ವನಿಯಲ್ಲಿ ಮಗಳು ಬಂದ ವಿಷಯವನ್ನು ತಿಳಿಸಿ ಅವಳೊಂದಿಗೆ ಸಹನೆಯಿಂದಲೇ ವರ್ತಿಸುವಂತೆ ಬೇಡಿಕೊಂಡಳು. ನೀರುದೋಸೆಯ ತಯಾರಿಯಲ್ಲಿದ್ದವಳು ಅದನ್ನು ಪಕ್ಕಕ್ಕಿಟ್ಟು ಮಗಳಿಗೆ ಇಷ್ಟವೆಂದು ರೊಟ್ಟಿ ಮಾಡಲು ಹಿಟ್ಟಿನ ಡಬ್ಬವನ್ನು ತಡಕಾಡಿದಳು. ಕೈಗಳು ಚಕಚಕನೆ ಕೆಲಸಗಳನ್ನು ಮಾಡುತ್ತಿದ್ದರೂ ಮನಸ್ಸು ಮಗಳ ಹಿಂದೆ ಓಡಿತು......,
ಅಪ್ಪಟ ಚೆಲುವೆ, ನೃತ್ಯಗಾತಿ, ಸೊಗಸುಗಾತಿ, ತಮ್ಮ ಒಬ್ಬಳೇ ಮಗಳು ಸುರಭಿ ಅಪ್ಪನ ಕಣ್ಗೊಂಬೆ. ಹದಿಹರೆಯದವರೆಗೂ ರಾತ್ರಿಗಳಲ್ಲಿ ತನ್ನೊಂದಿಗೆ ಮನೆಯ ಬಾಲ್ಕನಿಯಲ್ಲಿ ಕುಳಿತು ಆಗಸದಲ್ಲಿ ಕಾಣುವ ಹೊಳೆವ ಚಂದಿರ, ಬೆಳ್ಳಿ ಚುಕ್ಕೆಗಳನ್ನು ನೋಡುವುದು, ಅವುಗಳ ಕುರಿತಾದ ಪುರಾಣ ಕಥೆಗಳನ್ನು ಕೇಳುವುದು ಅವಳ ಅಚ್ಚುಮೆಚ್ಚಿನ ಹವ್ಯಾಸವಾಗಿತ್ತು. ಶಾಲೆಯ ಪಾಠಕ್ಕಿಂತಲೂ ತಾನು ಕಲಿಯುತ್ತಿದ್ದ  ಭರತ ನಾಟ್ಯವನ್ನು ಹೆಚ್ಚು ಇಷ್ಟ ಪಡುತ್ತಿದ್ದವಳು ಮುಂದೆ ಅದರ ಆರಾಧಕಿಯೇ ಆದದ್ದು..., ಕ್ರಮೇಣ ಕಂಪ್ಯೂಟರ್, ಅಂತರ್ಜಾಲ, ಫೇಸ್ ಬುಕ್, ಇತ್ಯಾದಿಗಳ ತೆಕ್ಕೆಯೊಳಕ್ಕಿಳಿದು ತಾವು ಅವಳ ದೃಷ್ಟಿಯಲ್ಲಿ `ಔಟ್ ಡೇಟೆಡ್' ಎನಿಸಿಕೊಂಡಿದ್ದು..., ಬೆಂಗಳೂರಿನ ಪ್ರತಿಷ್ಠಿತ ಕಲಾ ಕಾಲೇಜಿನಿಂದ ನೃತ್ಯ ಪದವಿ ಪಡೆದ ಮೇಲಂತೂ ಭರತ ನಾಟ್ಯ, ಅಂತರ್ಜಾಲಗಳೆರಡೇ ಅವಳ ಲೋಕವಾಗಿದ್ದು..., ಮುಂದೆ  ತಮಗೆ ಯಾವುದೇ ಸೂಚನೆಯನ್ನೂ ಕೊಡದೆ ಫೇಸ್ ಬುಕ್ ಅಂಗಳದ ಸ್ನೇಹಿತನನ್ನೇ ಮದುವೆಯಾಗಿದ್ದು...,ದೂರದ ನೆಂಟರಿಗೆ ತಿಳಿಸುವ ರೀತಿಯಲ್ಲಿ ತಮಗೆ ಕರೆಮಾಡಿ ತನ್ನ ಮದುವೆಯ ಸುದ್ದಿಯನ್ನು  ತಿಳಿಸಿದ್ದು..., ಮಗಳು ಜಾಣತನದ ಕೆಲಸ ಮಾಡಿದಾಗಲೆಲ್ಲಾ `ನನ್ನ ಮಗಳು' ಎಂದು ಎದೆಯುಬ್ಬಿಸಿ ತಪ್ಪು ಮಾಡಿದಾಗಲೆಲ್ಲಾ `ನಿನ್ನ ಮಗಳು' ಎಂದು ಜರೆಯುತ್ತಿದ್ದ ಗಂಡ ಈ ಸುದ್ದಿಯನ್ನು ಕೇಳಿ ಒಂದೇ ಒಂದು ಶಬ್ದವನ್ನೂ ಆಡದೆ ರೂಮು ಸೇರಿಕೊಂಡಾಗ ತಾನು ಅತಿಯಾಗಿ ಭಯ ಭೀತಳಾಗಿದ್ದು...,ಮುಖಾ ಮುಖಿಯಾಗದ, ಕುಟುಂಬದ  ಹಿನ್ನೆಲೆ ಗೊತ್ತಿಲ್ಲದ ಜಾತಿಯಲ್ಲದ ಕೊನೆಗೆ ಕನ್ನಡಿಗನೇ ಅಲ್ಲದ ಅದ್ಯಾರೋ ದೆಹಲಿಯ ಹುಡುಗನಂತೆ..., ಎಮ್. ಎನ್. ಸಿ. ಯಲ್ಲಿ ದೊಡ್ಡ ಹುದ್ದೆಯಂತೆ..., ಬೆಂಗಳೂರು ವಾಸಿ.., ಇವಳ ಭಾರತ ನಾಟ್ಯ ಕಾರ್ಯಕ್ರಮ ಒಂದೂ ಬಿಡದೆ ನೋಡಿದ್ದಾನಂತೆ..., ಮುಂದೆಯೂ ಇವಳ ನೃತ್ಯ ಕಲೆಗೆ ಧಾರಾಳ ಪ್ರೋತ್ಸಾಹ ಕೊಡುವ ಭರವಸೆಯಿತ್ತ  ವಿಶಾಲ ಮನಸ್ಸಿನ ಹುಡುಗನಂತೆ ಆದಿತ್ಯ..,ಎಂದೆಲ್ಲಾ ಸುರಭಿ ಫೋನಿನಲ್ಲೇ ಬಡಬಡಿಸಿದ್ದಳು. ಯಾವ ಊರೋ..,? ಎಂತಹ ಮನಸ್ಥಿತಿಯವನೋ..? ಯಾವ ಉದ್ದೇಶದಿಂದ ಇವಳನ್ನು ಬಲೆಗೆ ಹಾಕಿಕೊಂಡನೋ...? ಮುಂದೆ ಇವಳ ಭವಿಷ್ಯವೇನೋ...? ಎಂದೆಲ್ಲಾ ತಾವು ಚಿಂತಿಸಿ ಹಣ್ಣಾದದ್ದು ..., ಮಗಳ ಕಾರಣದಿಂದಾಗಿಯೇ ಖಿನ್ನತೆಗೊಳಗಾದ ಪತಿ ಮೋಹನ ಮುಂದೆ ಕೆಲವೇ ದಿನಗಳಲ್ಲಿ ವೃತ್ತಿಯಿಂದ  ವಿ.ಆರ್. ಎಸ್. ತೆಗೆದುಕೊಂಡಿದ್ದು,..., ಅದಾಗಿ ಒಂದೆರಡು ವಾರಗಳಲ್ಲಿ ಅವರಿಗೆ ಹೃದಯಾಘಾತವಾಗಿದ್ದು,.., ಆ ಘಟನೆಯನ್ನು ಕರ್ತವ್ಯವೆಂಬಂತೆ ಮಗಳಿಗೆ ಫೋನಾಯಿಸಿ ತಾನು ತಿಳಿಸಿದ್ದು ..., ಆಕೆಯೊಂದಿಗೆ ಆದಿತ್ಯನೂ ಬಂದು ತಾವು ಆಸ್ಪತ್ರೆಯಲ್ಲಿದ್ದಷ್ಟು ದಿನವೂ ಅಲ್ಲೇ ಇದ್ದು ಮಗನಿಗಿಂತ ಹೆಚ್ಚಾಗಿ ನಿಂತು ತಮಗೆ ಧೈರ್ಯ ನೀಡಿದ್ದು..,ಸುರಭಿಯ ನಡವಳಿಕೆಯಲ್ಲಿ ತನ್ನಿಂದಾಗಿ ಅಪ್ಪನಿಗೆ ಹೀಗಾಯ್ತು ಎಂಬ ತಪ್ಪಿತಸ್ತ ಭಾವನೆ ಎದ್ದು ಕಾಣುತ್ತಿತ್ತು. ಅವಳ ಕಾರಣದಿಂದಾಗಿ ಸಮಾಜದಲ್ಲೂ ಮನೆಯೊಳಗೂ ತಾವು ಅನುಭವಿಸಿದ ಮಾನಸಿಕ ಹಿಂಸೆಗಳು, ಮೋಹನರ ಹದತಪ್ಪಿದ ಬದುಕು, ಅನಾರೋಗ್ಯಗಳಿಂದಾಗಿ ತಾನಾಗ ಕಲ್ಲಾಗಿ ಹೋಗಿದ್ದೆ. ಅಂದು ಸುರಭಿಯೊಡನೆ ಸ್ವಲ್ಪ ಒರಟೇ ಎನ್ನುವ ರೀತಿಯಲ್ಲಿ ನಡೆದುಕೊಂಡಿದ್ದೆನೇನೋ..., ಆದರೆ ಆದಿತ್ಯನ  ಪರ್ಸನಾಲಿಟಿ, ಸುಸಂಸ್ಕೃತ ನಡವಳಿಕೆ, ಸೌಮ್ಯ ಸ್ವಭಾವ, ಸ್ಪಷ್ಟ ಕನ್ನಡ ಉಚ್ಛಾರ..., ಎಲ್ಲವನ್ನೂ ತಾನು ಮೆಚ್ಚಿಕೊಂಡಿದ್ದೂ  ಸುಳ್ಳಲ್ಲ! ಇವರು ಮಾತ್ರ ಮಗಳು ಅಳಿಯನನ್ನು ಸ್ವೀಕರಿಸಲು 
ಸುತಾರಾಂ ಮನಸ್ಸು ಮಾಡಲಿಲ್ಲ. ಹಾಗೆಂದು ತಿರಸ್ಕರಿಲೂ ಇಲ್ಲ. ಅಳಿಯನ ಒಳ್ಳೆಯತನವನ್ನು ಅವರೂ ಗಮನಿಸಿದ್ದಾರೆ ಎಂಬುದು ಅವರ ನಡವಳಿಕೆಯಿಂದ ತಮಗೆಲ್ಲರಿಗೂ ಅರ್ಥವಾಗಿತ್ತು. ಆದುದರಿಂದಲೇ ತಾವು ಆಸ್ಪತ್ರೆಯಿಂದ ಮನೆಗೆ ಮರಳಿದ ಮೇಲೆ ಮಗಳು, ಅಳಿಯ ಇಬ್ಬರೂ ತನ್ನೊಡನೆ ಫೋನಿನಲ್ಲಿ ಮಾತನಾಡುವಷ್ಟು ಸಲಿಗೆವಹಿಸಿದ್ದರು. ಆದರೆ ಮೋಹನ ಎಂದೂ ತಮ್ಮ ಆ ಸಂಭಾಷಣೆಯಲ್ಲಿ ಭಾಗಿಯಾಗಲು ಉತ್ಸಾಹ ತೋರಿಸಲೇ ಇಲ್ಲ. ಮಗಳ ಬಗ್ಗೆ ಒಮ್ಮೆಯೂ ವಿಚಾರಿಸಲಿಲ್ಲ. ತಾನಾಗಿ ಅವರೊಡನೆ ಹೇಳಲೂ ಇಲ್ಲ. ಅವರಿಗೆ ಇಷ್ಟವಿಲ್ಲದ ವಿಚಾರಗಳನ್ನು ತಾನೆಂದೂ ಪ್ರಸ್ತಾಪಿಸುತ್ತಲೇ ಇರಲಿಲ್ಲ. ಆದುದರಿಂದಲೇ ತಮ್ಮೊಳಗಿನ  ಫ಼ೋನು ಸಂಭಾಷಣೆ ಎಷ್ಟೇ ದೀರ್ಘವಾಗಿದ್ದರೂ ಸುರಭಿ, ಆದಿತ್ಯರನ್ನು ತಾನು ಮನೆಗೆ ಆಹ್ವಾನಿಸಿರಲೇ ಇಲ್ಲ! ಅವರು ಬರಲೂ ಇಲ್ಲ. ಅಂದು ಮನೆ ಬಿಟ್ಟು ಹೋದ ಮಗಳು ಇಂದು ಗೃಹಿಣಿಯಾಗಿದ್ದೂ ಒಬ್ಬಳೇ ಬಂದಿದ್ದಾಳೆ. ತಾವೇ ನೋಡಿ ಮಾಡಿದ ಮದುವೆಯಾಗಿರುತ್ತಿದ್ದರೆ...? ಮೊದಲ ಬಾರಿ ಮಗಳು ಅಳಿಯ ಬರುವರೆಂದರೆ ಮನೆಯ ವಾತಾವರಣ ಹೇಗಿರುತ್ತಿತ್ತು...? ಆದರೆ ಈಗ...? ಅಳಿಯ ಬರಲೇ ಇಲ್ಲ..., ಬಂದಿರುವ ಮಗಳೂ ಏನೋ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡೇ ಬಂದ ಹಾಗಿದೆ...? ಮನ, ಮನೆಗಳೊಳಗೆ ಕಳವಳ, ಆತಂಕಗಳ ಬಸಿರನ್ನು ಹೊತ್ತ ಗಾಢ ಮೌನದ ಭಾರ ಹರಿಣಿಗೆ ಅಸಹನೀಯವೆನಿಸಿತು.
                                                                                                 (ಮುಂದುವರಿಯುವುದು)  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ