"ಸುರೀ..., ಯಾವುದೇ ಒಂದು ವಸ್ತು ಕಾಣದಾಗಲು ಕಾರಣವೇನು? ಒಂದೋ ನಮ್ಮ ದೃಷ್ಟಿಗೆ ಏನೋ ಅಡ್ಡಬಂದಿರಬೇಕು ಇಲ್ಲವೇ ಆ ವಸ್ತುವಿಗಡ್ದವಾಗಿ ಏನೋ ಇರಬೇಕು. ಅದನ್ನು ಸರಿಸಿ ನೋಡುವ ಚಾಕಚಕ್ಯತೆ ನಮ್ಮಲ್ಲಿರಬೇಕು ಅಥವಾ ಅದಾಗಿಯೇ ಸರಿದು ಹೋಗುವವರೆಗೆ ಕಾಯುವ ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು ಅಲ್ಲವೇ ...? ಇದರಲ್ಲಿ ಪಾಪ ಪುಣ್ಯದ ಪ್ರಶ್ನೆ ಎಲ್ಲಿ ಬಂತು?"
"ಲಾಜಿಕ್ಕಿಗಿಂತಲೂ ಮೇಲೆ ಒಂದು ಅದೃಶ್ಯ ಶಕ್ತಿ ಇದೆ, ಜೀವನವೆನ್ನುವುದು ಅದರ ನಿರ್ದೇಶನದಂತೆ ನಡೆಯುತ್ತಿರುತ್ತೆ..., ಎಂದು ನೀನೇ ಹೇಳುತ್ತಿದ್ದಿಯಲ್ಲಮ್ಮಾ ...? ಛೆ.., ನಾನು ಎಲ್ಲವನ್ನೂ ನನ್ನ ಮೂಗಿನ ನೇರಕ್ಕೇ ನೋಡ್ಕೊಂಡ್ಬಿಟ್ಟೆ..., ಸಪ್ತಪದಿ ತುಳಿದಾದ ಮೇಲೆ ವಧೂವರರನ್ನು ಅಂಗಳಕ್ಕೆ ಕರೆದು ಅರುಂಧತಿ ನಕ್ಷತ್ರವನ್ನು ತೋರಿಸಿ ನೀನೂ ಅವಳಂತೆಯೇ ಮಹಾಸತಿಯಾಗಿರು ಎಂದು ಹರಸುತ್ತಾರೆ ಎಂದೆಲ್ಲಾ ನಾನು ಚಿಕ್ಕೋಳಿದ್ದಾಗ ಕೇಳಿದ ನೆನಪಿದೆ. ಆವಾಗೆಲ್ಲಾ ನಾನು ದಿನಾಲೂ ಸಪ್ತರ್ಷಿ ಮಂಡಲವನ್ನು ನೋಡುತ್ತಿದ್ದೆ, ಅರುಂಧತಿಯೂ ಕಾಣುತ್ತಿದ್ದಳು. ಈವತ್ತು ನೋಡು, ನಾವಿಲ್ಲಿ ಬಂದು ಇಷ್ಟು ಹೊತ್ತಾದರೂ ಆಗಸದಲ್ಲಿ ಏನೂ ಕಾಣಿಸ್ತಾ ಇಲ್ಲಾ...? ಯಾಕೇಂದ್ರೆ ನಾನು ಸಪ್ತಪದೀನೂ ತುಳಿದಿಲ್ಲ..., ಹಿರಿಯರ ಆಶೀರ್ವಾದವನ್ನೂ ಬೇಡಿಲ್ಲ...., ಅಮ್ಮಾ ನಾನು ಪಾಪಿ..., ನನ್ನನ್ನು ಕ್ಷಮಿಸ್ತೀಯಾ...? ಆದಿತ್ಯನನ್ನು ಮದುವೆಯಾಗಿ ನಾನು ಬಹುದೊಡ್ಡ ತಪ್ಪು ಮಾಡಿಬಿಟ್ಟೆ... ನಿಮ್ಮನ್ನು ಕೇಳದೇ ಮಾಡ್ಕೊಂಡಿದ್ದಕ್ಕೆ ದೇವರು ಸರಿಯಾದ ಶಿಕ್ಷೆ ಕೊಟ್ಟ...." ಬಿಕ್ಕಳಿಕೆಯ ನಡುವೆ ತಮ್ಮೊಳಗೆ ನಡೆದ ಜಟಾಪಟಿಗಳನ್ನೆಲ್ಲಾ ಸವಿಸ್ತಾರವಾಗಿ ಬಿಡಿಸಿಟ್ಟು ಕೊನೆಗೆ ಹೇಳಿದಳು,
"ನಾವೀಗ ಮೂರು ತಿಂಗಳುಗಳಿಂದ ಮಾತನಾಡ್ತಾ ಇಲ್ಲ...!"
"ವಾಟ್...? ಮದುವೆಯಾಗಿ ಆಗಿರುವುದೇ ಆರು ತಿಂಗಳು ..., ಅದರಲ್ಲೂ ಮೂರು ತಿಂಗಳು ವೇಸ್ಟ್ ಮಾಡಿಬಿಟ್ಟಿರಾ?" ಸನ್ನಿವೇಶ ಸ್ವಲ್ಪವಾದರೂ ಹಗುರವಾಗಲಿ ಎಂದು ಹರಿಣಿ ಹಾಗೆ ಹೇಳಿದ್ದಳು. ಆದರೆ ಸುರಭಿ ಮೌನ, ಗಂಭೀರಳಾಗಿಯೇ ಇದ್ದು ಜೀಬಿನಿಂದ ಸ್ಮಾರ್ಟ್ ಫೋನನ್ನು ಹೊರಕ್ಕೆ ತೆಗೆದಳು. ಅದರ ಪರದೆಯ ಮೇಲೆ ಬೆರಳಾಡಿಸಿ ಫೇಸ್ ಬುಕ್ ತೆರೆದು ತನ್ನ ಅಂಗಳಕ್ಕೆ ಹೋದಳು. ಅದನ್ನು ಹರಿಣಿಗೆ ಕಾಣುವಂತೆ ಹಿಡಿದು ಪರದೆಯನ್ನು ತಡವುತ್ತಾ ಹಳೆಯ ಪೋಸ್ಟುಗಳನ್ನು ಜಾಲಾಡತೊಡಗಿದಳು. ಹರಿಣಿಯ ಮುಖದಲ್ಲೊಂದು ಹುಸಿನಗು ಸುಳಿದು ಮಾಯವಾಯ್ತು. ಸುರಭಿ ತನ್ನ ನೃತ್ಯ ಪದವಿಯನ್ನು ಅಂಚೆ ಶಿಕ್ಷಣದ ಮೂಲಕ ಮಾಡಲು ಶುರುವಿಟ್ಟುಕೊಂಡ ಮೇಲೆ ಅಂತರ್ಜಾಲದೊಳಗೆ ಸುತ್ತಾಡುವುದು ಇನ್ನೂ ಜಾಸ್ತಿಯಾಗಿತ್ತು. ಸುರಭಿಯ ಫೇಸ್ ಬುಕ್ ಸ್ನೇಹಿತರ ಪಟ್ಟಿಯಲ್ಲಿ ಹರಿಣಿಯೂ ಇದ್ದಳು. ಆದುದರಿಂದ ಮಗಳು ತನ್ನಂಗಳದ ಭಿತ್ತಿಯಲ್ಲಿ ಛಾಪಿಸುತ್ತಿದ್ದ ಫೋಟೋಗಳು, ಅವುಗಳಿಗೆ ಬರುತ್ತಿದ್ದ ಕಾಮೆಂಟ್ಸ್ ಗಳನ್ನು ಇವಳೂ ನೋಡಬಹುದಾಗಿತ್ತು. ಅವುಗಳೆಲ್ಲವನ್ನೂ ನೋಡುತ್ತಿದ್ದ ಆಕೆಗೆ ಮಗಳು ಪ್ರೇಮದಲ್ಲಿ ಸಿಲುಕಿಬಿದ್ದಿರಬಹುದೇ ಎಂಬ ಸಂದೇಹವೂ ಬಂದಿತ್ತು. ಅದನ್ನೇ ಸುರಭಿಯೊಡನೆ ಸೂಚ್ಯವಾಗಿ ಕೇಳಿಯೂ ಇದ್ದಳು. ಸಿಡಾರೆಂದು ಸಿಡುಕಿದ್ದ ಸುರಭಿ,"ನಿನ್ನಂತಹ ಓಲ್ಡ್ ಫ್ಯಾಶನ್ದ್ ಲೇಡಿ ಅದನ್ನೆಲ್ಲಾ ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ.., ಸುಮ್ಮನೇ ನನ್ನ ತಲೆ ತಿನ್ನಬೇಡಾ..." ಎಂದು ಹರಿಹಾಯ್ದದ್ದೂ ಅಲ್ಲದೆ ಹರಿಣಿಯನ್ನು ತನ್ನ ಫೇಸ್ ಬುಕ್ ಅಂಗಳದಿಂದ ಹೊರಕ್ಕಟ್ಟಿ ಬಿಟ್ಟಿದ್ದಳು ಅಂದರೆ ತನ್ನ ಸ್ನೇಹಿತರ ಯಾದಿಯಿಂದ ಅಮ್ಮನನ್ನು ಡಿಲಿಟ್ ಮಾಡಿದ್ದಳು. ಹರಿಣಿ ಅದೊಂದು ನಿಸ್ಸಾರ ವಿಷಯವೆನ್ನುವಂತೆ ಅದರ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಮಗಳು ಜೊತೆಯಲ್ಲೇ ಇರುವಾಗ ಮುಕ್ತ ಮಾತುಕತೆಗೆ ಬೇಕಾದಷ್ಟು ಅವಕಾಶಗಳೂ ಇರುವಾಗ ನಿರ್ಜೀವ ಅಂತರ್ಜಾಲದ ಮೂಲಕವೇ ಮಗಳನ್ನು ಸಂಪರ್ಕಿಸಬೇಕಾದಂತಹ ಜರೂರೂ ಅವಳಿಗಿರಲಿಲ್ಲ. ಆದರೆ ಹರಿಣಿಗೆ ಚೋದ್ಯವೆನಿಸಿದ್ದು ಅಂದು ಸಿಟ್ಟಿನಿಂದ ತನ್ನನ್ನು ಹೊರಗಟ್ಟಿದವಳು ಇಂದು ತಾನಾಗಿಯೇ ಕರೆದು ಅದೇ ಫೇಸ್ ಬುಕ್ಕನ್ನು ತೋರಿಸುತ್ತಿದ್ದಾಳೆ! ಯಾವುದೇ ಭಾವನೆಯನ್ನು ಹೊರಗೆಡಹದೆ ನಿರ್ಭಾವುಕಳಾಗಿ ಅವಳು ಬೆರಳು ಮಾಡಿದತ್ತ ದೃಷ್ಟಿ ಹಾಯಿಸಿದಳು. ಸುಂದರ, ಅತಿ ಸುಂದರ ಎನಿಸುವಂತಹ ಸುರಭಿಯ ವಿವಿಧ ನಾಟ್ಯಭಂಗಿಯ ಫೋಟೋಗಳು, ಅವುಗಳಿಗೆ ಬಂದ ಸಾವಿರಾರು ಮೆಚ್ಚುಗೆಗಳು, ನೂರಾರು ಪ್ರಶಂಸಾ ನುಡಿಗಳು. ಅವುಗಳ ನುಡುವಿನಿಂದ ಆದಿತ್ಯನ ಕಾಮೆಂಟ್ಸ್ ಗಳನ್ನು ತೋರಿಸಿದಳು.
`ನಿನ್ನ ಹೆತ್ತವರು ಬಹುಷಃ ದೇವಲೋಕದವರಿರಬೇಕು...? ಯಾಕೆ ಕೇಳಿದೆನೆಂದರೆ ನಿನ್ನ ಅಂಗ ಸೌಷ್ಟವ ಇಲ್ಲಿನದಲ್ಲ..., ಮುಖದ ಕಾಂತಿ ಇಲ್ಲಿನದಲ್ಲ..., ನೀನೊಬ್ಬಳು ಮಾನವರೂಪೀ ಅಪ್ಸರೆ..'
`ನಿನ್ನ ಕಂಗಳು ಕಂಗಳಲ್ಲ..., ಮದೋನ್ಮತ್ತ ದುಂಬಿ.., ಆ ದುಂಬಿಗಳಿಗೆ ದೇವಲೋಕದ ಮಧುವೇ ಬೇಕೇನು..?'
`ಆಡಿಸಿದಳೋ ಯಶೋದೇ..., ಎನ್ನುತ್ತಾ ನೀನು ನರ್ತಿಸುವಾಗ ನಿನ್ನ ಕೈಯ್ಯೊಳಗಿನ ಕೃಷ್ಣ ನಾನಾಗಬಾರದೇ ಎಂದುಕೊಂಡಿದ್ದು ಎಷ್ಟು ಬಾರಿಯೋ...'
`ಮೊತ್ತಮೊದಲ ಸ್ತ್ರೀ ಈವ್ ಳ ಸೊಂಟದಿಂದ ತೆಗೆದ ಎಲುಬಿನಿಂದ ಪುರುಷನ ಸೃಷ್ಟಿಯಾಯಿತೆನ್ನುವ ಸಿದ್ಧಾಂತದಲ್ಲಿ ನನಗೆ ನಂಬಿಕೆ ಹುಟ್ಟಿದ್ದು ನಿನ್ನ ಸೊಂಟದ ಬಳುಕು ನೋಡಿದ ಮೇಲೆ...'
ಕಾವ್ಯಾತ್ಮಕ ಶೈಲಿಯಲ್ಲಿ ಬರೆದ ಇಂತಹ ನೂರಾರು ಕಾಮೆಂಟ್ಸ್ ಗಳನ್ನು ತೋರಿಸಿದಳು. ಇವಳೂ ಅದಕ್ಕೆ ಪೂರಕವಾಗಿಯೇ ಬರೆದ ಪ್ರತ್ತ್ಯುತ್ತರಗಳನ್ನೂ ತೋರಿಸಿದಳು. ಎಲ್ಲವನ್ನೂ ಓದಿದ ಹರಿಣಿ ನಗುತ್ತಲೇ ಹೇಳಿದಳು,
"ಬಹಳ ಸುಂದರವಾದ ಪ್ರೇಮಕಾವ್ಯವೊಂದನ್ನು ಓದಿದ ಅನುಭವವಾಯ್ತು ಸುರೀ..., ಆದಿತ್ಯನ ಭಾಷೆ ತುಂಬಾ ಚೆನ್ನಾಗಿದೆ." ಸುರಭಿ ಮಾತನಾಡಲೇ ಇಲ್ಲ. ಆದಿತ್ಯನನ್ನು ಹೊಗಳಿದ್ದು ಇಷ್ಟವಾಗಲಿಲ್ಲ ಎನ್ನುವಂತೆ ಹುಬ್ಬು ಗಂಟಿಕ್ಕಿ ಮೊಬೈಲಿನ ಪರದೆಯ ಮೇಲೆ ಇನ್ನೂ ಏನನ್ನೋ ಜಾಲಾಡುತ್ತಲೇ ಇದ್ದಳು. ಪುನಃ ಹರಿಣಿಯೆಡೆಗೆ ಬಾಗಿ ತೋರಿಸಿದಳು, ಅಲ್ಲೂ ಸುರಭಿಯ ಇತ್ತೀಚೆಗಿನ ನಾಟ್ಯ ಭಂಗಿಯ ಭಾವಚಿತ್ರಗಳನ್ನು ಅಪ್ ಲೋಡ್ ಮಾಡಿದ್ದಳು. ಸಾವಿರಾರು ಪ್ರಶಂಸೆಗಳ ನಡುವಿನಿಂದ ಆದಿತ್ಯನ ಪ್ರತಿಕ್ರಿಯೆಯನ್ನು ಬೆಟ್ಟು ಮಾಡಿ ತೋರಿಸಿದಳು. ಕೆಲವು ಕಡೆ ಬರಿಯ ಪ್ರಶ್ನಾರ್ಥಕ ಚಿಹ್ನೆ ಹಾಕಿದ್ದ. ಇನ್ನು ಕೆಲವು ಕಡೆ ಬೇಸರದ ಸಂಕೇತಗಳನ್ನು ಹಾಕಿದ್ದ. ಇನ್ನು ಕೆಲವು ಕಡೆ ವ್ಯಂಗ್ಯ ಮಿಶ್ರಿತ ಚಿಹ್ನೆಗಳು!
"ಅಮ್ಮಾ..., ನೋಡಿದ್ಯಾ..? ಅವನಿಗೆ ನಾನು ಎಷ್ಟು ಸದರವಾಗಿ ಹೋದೆ? ದೇವಲೋಕದ ಅಪ್ಸರೆ ಎನ್ನುತ್ತಿದ್ದವ ಇಂತಹ ಸೊಟ್ಟ ಮುಖದ ಚಿಹ್ನೆ ಹಾಕಿ ನನ್ನನ್ನು ಅವಮಾನಿಸುವುದು ಸರಿಯೇ? ಇನ್ನೂ ಇದೆ ನೋಡಿಲ್ಲಿ..." ಎನ್ನುತ್ತಾ ತನ್ನ ವಾಟ್ಸಾಪ್ ತೆರೆದಳು. ಆಡಿತ್ಯನ ಪ್ರೊಫೈಲಿಗೆ ಹೋದಳು. ಅವನ ಮುಖಪುಟದಲ್ಲಿ ಇದ್ದ ಫೋಟೋ ತೋರಿಸಿದಳು, ಆದಿತ್ಯ ತನ್ನ ಹೆತ್ತವರನ್ನು ಬಳಸಿ ಹಿಡಿದು ನಗುತ್ತಿದ್ದ. ಕೆಳಗೆ ಬರೆದಿತ್ತು, `ನಾನು ಅತ್ಯಂತ ಇಷ್ಟ ಪಡುವ ವ್ಯಕ್ತಿಗಳು' . ನೋಡಿದ ಹರಿಣಿ ತುಂಬಾ ಸಂತಸಗೊಂಡಳು. ಅದನ್ನೇ ಹೇಳಿಯೂ ಬಿಟ್ಟಳು.
" ತುಂಬಾ ಸಂತೋಷವಾಗ್ತಿದೆ ಸುರೀ.., ಇಂದಿನ ಜನರೇಶನ್ನು ಹಿರಿಯರನ್ನು ಗೌರವಿಸಿ ಪ್ರೀತಿಸೋದನ್ನ ನೋಡೋಕೂ ಭಾಗ್ಯ ಬೇಕು... ಇಂತಹ ಗಂಡನನ್ನು...." ಹರಿಣಿಯ ಮಾತುಗಳು ಅರ್ಧದಲ್ಲೇ ನಿಂತುಹೋಗುವಂತೆ ಸುರಭಿ ತಲೆಚಚ್ಚಿಕೊಳ್ಳುತ್ತಾ ಗಟ್ಟಿಯಾಗಿ ಹಲುಬಿದಳು,
"ಅಮ್ಮಾ .., ಅಮ್ಮಾ.., ಸ್ಟಾಪ್ ಇಟ್...., ಅವನ ಗುಣಗಾನ ಸಾಕು..., ನನಗಿಂತಲೂ ಅವನೇ ಹೆಚ್ಚಾಗಿ ಹೋದನೇನು..? ನಿನ್ಗೆ
ನಾನು ಹೇಗೆ ಅರ್ಥ ಮಾಡಿಸಲಿ..? ನನ್ನ ಹೊಟ್ಟೆ ಉರಿಸಲೆಂದೇ ಇದನ್ನು ಇಲ್ಲಿ ಅಪ್ ಲೋಡ್ ಮಾಡಿದ್ದಾನೆ ಗೊತ್ತೇನು..? ಮೊದಲು ಇದೇ ಜಾಗದಲ್ಲಿ ನಾವಿಬ್ಬರು ಹಗ್ ಮಾಡಿಕೊಂಡಿದ್ದ ಫೋಟೋ ಹಾಕಿದ್ದ. ಈಗ ನೋಡು...? ನನ್ನನ್ನು ನೋಯಿಸಬೇಕೆಂದೇ ಹೀಗೆ ಮಾಡಿದ್ದಾನೆ..., ಅದೂ ಸಾಲದೆಂಬಂತೆ ನೀನು ನನಗಿಷ್ಟವಿಲ್ಲ ಎಂಬುದನ್ನೂ ಇಂಡೈರೆಕ್ಟ್ ಆಗಿ ಹೇಳಿದ್ದಾನೆ. ನೀನೂ ಅವನ ಕಡೆಗೇ ಸೇರ್ಕೊಂಡಿದ್ದೀಯಾ..., ಅಪ್ಪಂಗೂ ನನ್ನ ತಲೆ ಕಂಡ್ರೆ ಆಗೋದಿಲ್ಲಾ..., ಯಾರಿಗೂ ನಾನಂದ್ರೆ ಇಷ್ಟಾನೆ ಇಲ್ಲಾ... ಎಲ್ಲರ ದೃಷ್ಟಿಯಲ್ಲೂ ನಾನೇ ತಪ್ಪಿತಸ್ತೆ..., ಹೀಗೆ ಬದುಕೋದಕ್ಕಿಂತ ಸಾಯೋದೇ ಮೇಲು..., ಹೇಳುತ್ತಾ ಹೇಳುತ್ತಾ ಬೋರೆಂದು ಅತ್ತಳು.
(ಮುಂದುವರಿಯುವುದು)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ