ಹರಿಣಿ ಬೆಂಚಿನಿಂದ ಎದ್ದು ನೆಲದಲ್ಲಿ ಕುಳಿತು ಸುರಭಿಯನ್ನು ಬಾಚಿ ತಬ್ಬಿಕೊಂಡು ತನ್ನ ಮಡಿಲೊಳಕ್ಕೆ ಎಳೆದುಕೊಂಡಳು. ಮಗಳ ಕಣ್ಣೀರನ್ನು ತನ್ನ ಸೆರಗಿನಿಂದ ಒರೆಸಿದಳು. ಗಂಟಲು ಸರಿಪಡಿಸಿಕೊಂಡು ಹೇಳತೊಡಗಿದಳು,
"ಪುಟ್ಟೀ ಇದರಲ್ಲಿ ನೀನಲ್ಲ.., ತಪ್ಪಿತಸ್ತರು ನಾವು . ನಿನ್ನನ್ನು ಬೆಳೆಸುವಾಗ ನಾವು ಬಹುದೊಡ್ಡ ತಪ್ಪು ಮಾಡಿಬಿಟ್ಟೆವು. ಅತಿ ಚೆಲುವೆ, ಬುದ್ಧಿವಂತೆ, ಒಬ್ಬಳೇ ಮಗಳು...,ಮೇಲೆ ಇಟ್ಟರೆ ಕಾಗೆ ಕಚ್ಚಿಕೊಂಡು ಹೋದೀತು, ಕೆಳಗೆ ಇಟ್ಟರೆ ಇರುವೆ ಕಚ್ಚಿ ಒಯ್ದೀತು ಎಂಬಂತೆ ನಿನ್ನನ್ನು ಬೆಳೆಸಿದೆವು. ಅಕ್ಕಪಕ್ಕದ ಮಕ್ಕಳು ಮತ್ತು ನಿನ್ನ ನಡುವೆ ಸ್ಪಷ್ಟವಾದ ಅಂತರವನ್ನಿಟ್ಟು ನಿನ್ನನ್ನು ಸಾಕಿದೆವು. ನಮ್ಮ ಬಾಲ್ಯ ಕಾಲದಲ್ಲಿ ನಾವು ತೀರಾ ಮಧ್ಯಮ ವರ್ಗದ ಜೀವನ ನಡೆಸಿದವರು. ಮನೆತುಂಬಾ ಮಕ್ಕಳು, ಎಷ್ಟೋ ಆಸೆಗಳನ್ನು ನುಂಗಿಕೊಂಡೇ ಬೆಳೆದವರು. ನಮ್ಮ ಮಗುವಿಗೆ ಹಾಗಾಗಬಾರದು ಎಂಬ ಕಾರಣಕ್ಕಾಗಿ ಒಂದೇ ಮಗು ಸಾಕೆಂಬ ತೀರ್ಮಾನಕ್ಕೆ ಬಂದೆವು. ನಿನ್ನ ಆಸೆಗಳನ್ನೆಲ್ಲಾ ಪೂರೈಸಲು ಶಕ್ತಿ ಮೀರಿ ಪ್ರಯತ್ನಿಸಿದೆವು. ಅದೊಂದೇ ನಮ್ಮ ಜೀವನದ ಧ್ಯೇಯವಾಗಿತ್ತು. ಆ ಭರದಲ್ಲಿ ಮುಖ್ಯವಾದುದನ್ನೇ ಮರೆತುಬಿಟ್ಟೆವು ನೋಡು, ಅತ್ತ್ಯುತ್ತಮವಾದುವುಗಳಿಗೆ ನೀನು ಹಕ್ಕುದಾರಳಾದಂತೆಯೇ ಅವುಗಳನ್ನು ಹಂಚಿಕೊಳ್ಳಲೂ ಕಲಿಯಬೇಕೆಂಬುದನ್ನು ತಿಳಿಸದೇ ಹೋದೆವು. ಸೋ..., ನೀನು ಬಹಳ ಸ್ವ ಕೇಂದ್ರಿತ ವ್ಯಕ್ತಿಯಾಗಿ ಬೆಳೆದೆ. ಹೇಳಿಕೊಳ್ಳುವಂತಹ ಸ್ನೇಹಿತರೂ ಇರಲಿಲ್ಲವಲ್ಲಾ? ಹಾಗಾಗಿಯೇ ಕಂಪ್ಯೂಟರ್ , ಇಂಟರ್ನೆಟ್ಟುಗಳೇ ನಿನ್ನ ಲೋಕವಾದುವು. ಅದರ ಮಿಥ್ಯಾಲೋಕದೊಳಗೆ ನೀನು ಕಳೆದುಹೋದೆ. ಸುಖ-ದುಃಖ, ಪ್ರಶಂಸೆ-ವಿಮರ್ಶೆ, ಕೊಡು- ಕೊಳ್ಳುವಿಕೆಯ ಹದಪಾಕವೇ ಜೀವನವೆಂಬುದು ನಿನಗೆ ತಿಳಿಯದೆ ಹೋಯ್ತು. ನಿನ್ನೊಳಗೆ ಪರರ ಭಾವನೆಗಳಿಗೆ ಬೆಲೆಯೇ ಇಲ್ಲವಾಯ್ತು. ಆದುದರಿಂದಲೇ ನೀನು ಆದಿತ್ಯನನ್ನು ನಿನ್ನ ಜೀವನ ಸಂಗಾತಿಯನ್ನಾಗಿ ಆಯ್ದುಕೊಳ್ಳುವಾಗ ನಮಗೆ ತಿಳಿಸಬೇಕೆಂದೂ ಅನಿಸಲಿಲ್ಲ. ನೀನು ಒಬ್ಬಂಟಿಯಾಗಿರುವಷ್ಟು ಕಾಲ ಇದಾವುದೂ ಸಮಸ್ಯೆಯೇ ಆಗಿರಲಿಲ್ಲ. ಯಾವಾಗ ನಿನ್ನ ಜೀವನದಲ್ಲಿ ಆದಿತ್ಯನ ಪ್ರವೇಶವಾಯಿತೋ ಆವಾಗ ಪೇಚಾಟಕ್ಕಿಟ್ಟುಕೊಂಡಿತು."
"ಕಂದಾ..., ದಾಂಪತ್ಯ ಜೀವನವೆಂದರೆ ಕೊಟ್ಟು ತೆಗೆದುಕೊಳ್ಳುವ ಪ್ರಕ್ರಿಯೆ, ಸೋತು ಗೆಲ್ಲುವ ಆಟ, ಸೆಳೆತವಿರುವ ನದಿಗೆ ಬಿದ್ದಾಗ ಏನು ಮಾಡಬೇಕು? ಸೆಳೆತದೊಂದಿಗೇ ಈಜಿಬಿಡಬೇಕು. ವಿರುದ್ಧ ದಿಕ್ಕಿಗೆ ಈಜಿದರೆ ಏನಾಗಬಹುದು? ಕೈಕಾಲು ಸೋತು ಮುಳುಗಿಯೇ ಹೋಗಲೂಬಹುದು. ಸೆಳೆತದೊಂದಿಗೇ ಈಜುತ್ತಾ ಎಲ್ಲಿ ಕಾಲಿಗೆ ಭೂಮಿಯ ಸ್ಪರ್ಷವಾಗುತ್ತೋ ಅಲ್ಲಿ ನೆಟ್ಟಗೆ ನಿಂತು ಬಿಡಬೇಕು. ಸಂಸಾರವೂ ಅಷ್ಟೇ.., ಎಲ್ಲವೂ ಒಬ್ಬರೇ ಅಂದುಕೊಂಡಂತೆ ನಡೆಯಬೇಕೆಂದರೆ ಅಲ್ಲಿ ಘಟಿಸುವುದು ಬರಿಯ ಘರ್ಷಣೆಯೇ...,ಈಗ ನಿಮ್ಮೊಳಗೆ ನಡೆಯುತ್ತಿರುವುದೂ ಅದುವೇ..., ಅಹಂ ಗಳ ತಿಕ್ಕಾಟ..., ಒಬ್ಬನೇ ಮಗನಾಗಿದ್ದರೂ ಆದಿತ್ಯನ ಅಪ್ಪ, ಅಮ್ಮ ಸಮಾಜದಲ್ಲಿ ಬದುಕುವ ರೀತಿಯನ್ನು ಆತನಿಗೆ ಹೇಳಿಕೊಟ್ಟಿರುವರು. ಆದುದರಿಂದಲೇ ನಿನ್ನನ್ನು ಸಮಾಜ ಪ್ರೀತಿಯಿಂದ ಒಪ್ಪಿಕೊಳ್ಳುವಂತೆ ತಿದ್ದಲು ಪ್ರಯತ್ನಿಸಿದ. ಅವನು ನಿನ್ನ ಮೇಲೆ ಅಧಿಕಾರ ಚಲಾಯಿಸುತ್ತಿದ್ದಾನೆ ಎಂದು ನೀನು ತಪ್ಪಾಗಿ ಅರ್ಥ ಮಾಡಿಕೊಂಡೆ. ರಾತ್ರಿ ಪಾರ್ಟಿಗೆ ಹೋಗುವಾಗ ನೀನು ತೊಟ್ಟಿದ್ದ ಡ್ರೆಸ್ ಬಗ್ಗೆ ಆತ ಆಕ್ಷೇಪ ಎತ್ತಿದ ಕಾರಣಕ್ಕೇ ನಿಮ್ಮೊಳಗೆ ದೊಡ್ಡ ಜಗಳವೇ ಆಯಿತು ಎಂದೆಯಲ್ಲವೇ? ಮರೀ.., ನಿನಗೊಂದು ಗುಟ್ಟು ಹೇಳಲಾ...? ಎಷ್ಟೇ ಆಧುನಿಕ ಸಾಫ್ಟ್ ವೇರುಗಳ ಆವಿಷ್ಕಾರವಾಗಲಿ ಗಂಡಸಿನ ಮಿದುಳು ಎನ್ನುವ ಹಾರ್ಡ್ ವೇರ್ ಇದೆಯಲ್ಲಾ.., ಅದು ಈಗಲೂ ಅದೇ ಹಳೆಯ ಅಹಂ ನ ಮೊಟ್ಟೆಯೇ..., ಆಧುನಿಕತೆ, ಸಮಾನತೆ ಇತ್ಯಾದಿಗಳೆಲ್ಲ ಆ ಮಿದುಳಿನ ಹೊರಕವಚವನ್ನು ಸವರುತ್ತಾ ನಿಲ್ಲುವ ಪರದೆಗಳು ಮಾತ್ರ. ಹೆಣ್ಣು ತನ್ನ ಅಧೀನದಲ್ಲಿ ಇರಬೇಕಾದವಳು, ಅವಳು ತನ್ನ ಸೊತ್ತು.., ಇಂತಹ ಡಾಮಿನೇಟಿಂಗ್ ಭಾವನೆಗಳಿವೆಯಲ್ಲಾ...,ಅವು ಪುರುಷನ ವಂಶವಾಹಿಯಲ್ಲೇ ಮಿಳಿತವಾಗಿ ಹೋಗಿದೆ. ಅದರ ಪ್ರಮಾಣ ಕೆಲವರಲ್ಲಿ ಹೆಚ್ಚು ಕೆಲವರಲ್ಲಿ ಕಡಿಮೆ ಅಷ್ಟೇ ವ್ಯತ್ಯಾಸ.., ಅದುವೇ ಅವರ ಬಲಹೀನತೆಯೂ ಹೌದು. ನಾವು ಹೆಂಗಸರು ಅದನ್ನು ತಿಳಿದುಕೊಂಡು ಆತನೊಡನೆ ಸೋತಂತೆ ನಟಿಸಿ ಗೆಲ್ಲಬೇಕು. ನೀನು ಸತ್ಯಭಾಮೆಯಾಗಿಯೋ ರುಕ್ಮಿಣಿಯಾಗಿಯೋ ಕೃಷ್ಣನೊಡನೆ ನರ್ತಿಸುವಾಗ ಅವನನ್ನು ಬಗೆಬಗೆಯಾಗಿ ಓಲೈಸಿ ಕೈವಶ ಮಾಡಿಕೊಳ್ಳುತ್ತೀಯಲ್ಲವೇ..? ದಾಂಪತ್ಯ ಜೀವನವೂ ಅದಕ್ಕಿಂತ ಬೇರೆಯಲ್ಲ. ಸ್ವಲ್ಪ ಮೊದಲು ಅರುಂಧತಿಯ ಕುರಿತು ಕೇಳಿದೆಯಲ್ಲವೇ..? ಅವಳು ಬಹಳ ಗಟ್ಟಿಗಿತ್ತಿ ಹೆಣ್ಣು. ಪೂರ್ವ ಜನ್ಮದಲ್ಲಿ ಸಂಧ್ಯೆ ಎನ್ನುವ ಜಗದೇಕ ಸುಂದರಿಯಾಗಿದ್ದವಳು. ಅವಳ ಮೋಹಕ ರೂಪಕ್ಕೆ ಮರುಳಾಗದ ಗಂಡಸರಿರಲಿಲ್ಲ. ತನ್ನ ಅಪಾಯಕಾರಿ ಅತಿ ಸೌಂದರ್ಯದ ಬಗ್ಗೆ ಜಿಗುಪ್ಸೆಗೊಂಡು ವಿಷ್ಣುವನ್ನು ಪ್ರಾರ್ಥಿಸಿ ಯಜ್ಞಕುಂಡಕ್ಕೆ ಹಾರಿ ಆತ್ಮಾಹುತಿ ಮಾಡಿಕೊಂಡವಳು. ಮುಂದೆ ಅರುಂಧತಿಯಾಗಿ ಜನಿಸಿದಳು. ಅತಿ ಸೌಂದರ್ಯವೂ ಅತಿ ಅಪಾಯವೇ..,ನೀನು ಮೊದಲೇ ಚೆಂದುಳ್ಳಿ ಚೆಲುವೆ. ಆ ಚೆಲುವು ಎತ್ತಿಕಾಣುವಂತಹ ಉದ್ರೇಕಕಾರಿ ಬಟ್ಟೆಗಳನ್ನು ಧರಿಸಿ..., ಅದೂ ರಾತ್ರಿಗಳಲ್ಲಿ ಹೊರಗೆ ಹೋಗುವುದೆಂದರೆ... ? ಕಾಮುಕರು ಅಂದೂ ಇಂದೂ ಎಂದೂ ಒಂದೇ..., ಸಂಧ್ಯೆಗಾದರೋ ವಿಷ್ಣುವಿನ ವರವಿತ್ತಾದುದರಿಂದ ಯಜ್ಞಕುಂಡಕ್ಕೆ ಹಾರಿ ಉತ್ತಮಗತಿಯನ್ನು ತಲುಪಿದಳು. ಆದರೆ ನೀನು? ಆದಿತ್ಯ ಸಮಾಜದ ಕಣ್ಣಿನಲ್ಲಿ ನಿನ್ನನ್ನು ಅಳೆದನಾದುದರಿಂದಲೇ ನಿನ್ನ ಡ್ರೆಸ್ಸನ್ನು ಆತ ಇಷ್ಟಪಡಲಿಲ್ಲ. ನೀನು ಅವನ ಅಭಿಪ್ರಾಯಕ್ಕೆ ಬೆಲೆಕೊಡದಿದ್ದಾಗ ರೊಚ್ಚಿಗೆದ್ದ. ಇಂತಹ ಚಿಕ್ಕ ಚಿಕ್ಕ ವಿಷಯಗಳು ಸೇರಿಯೇ ನಿಮ್ಮ ಬಾಂಧವ್ಯ ಹದಗೆಟ್ಟಿತು. ಅರುಂಧತಿಯ ಬಗ್ಗೆ ಇನ್ನೂ ಹೇಳುವುದಿದೆ...,ಸಪ್ತರ್ಷಿಗಳನ್ನು ಉಲ್ಲೇಖಿಸುವಾಗ ಅರುಂಧತಿಯನ್ನು ಮಾತ್ರ ಜೊತೆಯಲ್ಲೇ ಉಲ್ಲೇಖಿಸುತ್ತಾರೆ. ಉಳಿದ ಋಷಿ ಪತ್ನಿಯರ ಉಲ್ಲೇಖ ಬಹಳ ಕಡಿಮೆ. ಯಾಕೆ ಗೊತ್ತಾ? ಪತಿಯ ನಿತ್ಯ ಅಗತ್ಯಗಳನ್ನು ಚಾಚೂ ತಪ್ಪದೆ ಪೂರೈಸುತ್ತಿದ್ದಳು ಎನ್ನುವ ಕಾರಣಕ್ಕಾಗಿ ಮಾತ್ರ ಅವಳು ಮಾಹಾಸತಿಯೆನಿಸಿಕೊಳ್ಳಲಿಲ್ಲ. ಅವಳು ಎಂತಹಾ ಸಮರ್ಥಳಿದ್ದಳೆಂದರೆ ಎಷ್ಟೋ ಸಂದರ್ಭಗಳಲ್ಲಿ ಏಳೂ ಮಂದಿ ಮುನಿಶ್ರೇಷ್ಟರನ್ನು ಕುಳ್ಳಿರಿಸಿ ಉಪದೇಶವನ್ನೀಯುತ್ತಿದ್ದಳು. ಹಾಗೆಂದು ಅಕೆಯೆಂದೂ ತಾನು ಸಮರ್ಥೆ ಎಂಬುದನ್ನು ತನ್ನ ನಡೆ ನುಡಿಗಳ ಮೂಲಕ ಪತಿಯೆದುರು ತೋರಿಸಿಕೊಂಡವಳೇ ಅಲ್ಲ. ವಸಿಷ್ಠ ಮುನಿಗಳು ಕಾಮಧೇನುವನ್ನು ಬದಿಗಿರಿಸಿ ಯಜ್ಞವನ್ನು ನಡೆಸುತ್ತಿರಬೇಕಾದರೆ ಕೊನೆಯ ಆಹುತಿಗೆ ಹವಿಸ್ಸಾಗಿ ಅರ್ಪಿಸಲು ಶುದ್ಧ ತುಪ್ಪ ಸಾಲದಾಯಿತು. ಅರುಂಧತಿ ಧೃತಿಗೆಡಲಿಲ್ಲ. ನಿತ್ಯೋಪಯೋಗದ ತುಪ್ಪ ಯಜ್ಞಕ್ಕೆ ನಿಷಿದ್ಧವೆಂದು ಗೊತ್ತಿದ್ದರೂ ಅಡುಗೆ ಮನೆಗೆ ಹೋಗಿ ತುಪ್ಪದ ಭರಣಿಯನ್ನು ತೆರೆದು ಮೂರು ಮಿಳ್ಳೆ ತುಪ್ಪವನ್ನು ಒಲೆಯಲ್ಲಿ ಉರಿಯುತ್ತಿದ್ದ ಅಗ್ನಿದೇವನಿಗೆ ಭಕ್ತಿಯಿಂದ ಅರ್ಪಿಸಿದಳು. ತುಪ್ಪದ ಅಶುದ್ಧತೆ ನಿವಾರಣೆಯಾಯಿತೆಂಬ ಧೈರ್ಯದಲ್ಲಿ ಭರಣಿಯಲ್ಲಿದ್ದುದನ್ನು ತಂದು ಪತಿಯ ಕೈಗೊಪ್ಪಿಸಿದಳು. ಯಜ್ಞ ಸಾಂಗವಾಗಿ ನೆರವೇರಿತು. ಅನುಕೂಲ ಶಾಸ್ತ್ರ ಎನ್ನುವುದು ಇದಕ್ಕೇ..., ಸಾಕ್ಷಾತ್ ಕಾಮಧೇನುವೇ ಬಳಿಯಲ್ಲಿರುವಾಗ ಅರುಂಧತಿ ತುಪ್ಪಕ್ಕಾಗಿ ತಡಕಾಡಬೇಕಾಗಿರಲಿಲ್ಲ. ಅಥವಾ ನೂರಾರು ಶಿಷ್ಯರು ಅಲ್ಲೇ ಇರುವಾಗ ಯಾರಾದರೊಬ್ಬರು ಅರೆಗಳಿಗೆಯಲ್ಲಿ ಹೊಸ ತುಪ್ಪವನ್ನು ತಂದೊದಗಿಸಿ ಕೊಡುತ್ತಿದ್ದರು. ಆದರೆ ಅರುಂಧತಿ ಇದಾವುದನ್ನೂ ಮಾಡಲಿಲ್ಲ. ಯಜ್ಞಕ್ಕೆ ಮೊದಲೇ ಸಾಕಷ್ಟು ತುಪ್ಪ ಸಂಗ್ರಹಿಸಿ ಇಡಬೇಕಾಗಿದ್ದ ಜವಾಬ್ದಾರಿ ಅವಳದಾಗಿತ್ತಾದುದರಿಂದ ಕೊನೆಗಳಿಗೆಯಲ್ಲಿ ತಾನು ಬೇಜವಾಬ್ದಾರಳಲ್ಲ ಎಂದೆನಿಸಿಕೊಳ್ಳಬೇಕಾದರೆ ಅನುಕೂಲ ಶಾಸ್ತ್ರಕ್ಕೆ ಮೊರೆ ಹೋಗಬೇಕಾಯಿತು.
"ಪುಟ್ಟೀ...,ದಾಂಪತ್ಯ ಜೀವನದಲ್ಲೂ ಅಷ್ಟೇ..,ಮೊದಲೇ ನಾವು ಸಾಕಷ್ಟು ತಯಾರಿ ಮಾಡಿಕೊಂಡಿರಬೇಕು. ಹಾಗೊಂದು ವೇಳೆ ತಯಾರಿ ಸಮರ್ಪಕವಾಗಿಲ್ಲವಾದರೂ ಸಮಯ ಪ್ರಜ್ಞೆ ಚುರುಕಾಗಿರಬೇಕು. ತಾನೇರಿದ ಕುದುರೆಗೆ ಮೂರೇ ಕಾಲು ಎಂದು ಸಾಧಿಸಹೊರಟರೆ ಹಳ್ಳಕ್ಕೆ ಬೀಳಬೇಕಾದೀತು. ಜೀವನವೆಂದರೆ ಬರಿಯ texting, chating, profile updating ಅಲ್ಲ. ದಾಂಪತ್ಯದ ಸಾರ ಇರುವುದೇ ಪರಸ್ಪರ ಮುಕ್ತ ಮಾತುಕತೆಯಲ್ಲಿ, ಮಧುರ ಸ್ಪರ್ಶದಲ್ಲಿ, ಅಗಾಧವಾದ ಕೊಡುಕೊಳ್ಳುವಿಕೆಯಲ್ಲಿ, ಭಾವ ತುಂಬಿದ ಮಿಲನದಲ್ಲಿ..., ನೀನು ಸೂಕ್ಷ್ಮಮತಿ, ಜಾಣೆ.., ನಾನು ಹೇಳಿದುದನ್ನು ಚೆನ್ನಾಗಿ ಅರ್ಥೈಸಿಕೊಂಡೆ ಎಂದು ತಿಳಿಯಲೇ...? ಜೀವನವಿರುವುದು ಬದುಕನ್ನು ಸವಿಯಲು... ಸಾಯಲಲ್ಲ...ನೆನಪಿರಲಿ..."
"ಅಮ್ಮಾ..., so sweet of you...,ಈ ಮಾತುಗಳನ್ನೇ ನೀನು ಆದಿತ್ಯನಿಗೂ ಯಾಕೆ ಹೇಳಬಾರದು,,,?"
"ನಾನು ಹೇಳಲಿಲ್ಲವೆಂದು ನಿನಗ್ಯಾಕೆ ಅನಿಸಿತು ಮಗಳೇ...? ನನಗೆ ನೀನು ಬೇರೆ ಅವನು ಬೇರೆಯಲ್ಲ..., ಇನ್ನು ಈ ವಿಷಯ ಸಾಕು. ನಾಳೆಗಳ ಬಗ್ಗೆ ಯೋಚಿಸೋಣ. ನೋಡು.., ನಾಳೆ ನೀನು ಮಾಡಬೇಕಾದ ಮೊದಲ ಕೆಲಸ ಅಪ್ಪನೊಡನೆ ಬಿಗುಮಾನ ಬಿಟ್ಟು ಮೊದಲಿನಂತೆ ಮನಬಿಚ್ಚಿ ಮಾತನಾಡು. ನಂತರ ನಾನೂ ಅವರನ್ನು ಕನ್ವಿನ್ಸ್ ಮಾಡ್ತೀನಿ. ಭಾನುವಾರ ನಾವೆಲ್ರೂ ಜೊತೆಯಲ್ಲಿ ನಿನ್ನ ಮನೆಗೆ ಹೋಗಲಿದ್ದೇವೆ.., ಆದಿತ್ಯ ನಮಗೆಲ್ಲರಿಗೂ ಟಿಕೆಟ್ ಬುಕ್ ಮಾಡಿದ್ದಾನೆ..." ಆದಿತ್ಯನ ಹೆಸರು ಕೇಳುತ್ತಲೇ ಚಕ್ಕನೆ ಎದ್ದು ಕುಳಿತ ಸುರಭಿ ಕಣ್ಣಗಲಿಸಿ ಕೇಳಿದಳು,
"ವಾಟ್...? ಅಮ್ಮಾ.., ಆದಿತ್ಯ ನಮ್ಮನ್ನು ಬರೋಕೆ ಹೇಳಿದ್ನಾ...?"
"ಹೂಂ ಆಗಲೇ ಅವನ ತಯಾರಿ ಅಲ್ಲಿ ಜೋರಾಗಿಯೇ ಶುರುವಾಗಿದೆ." ಸುರಭಿ ಅಮ್ಮನನ್ನು ತಬ್ಬಿ ಹಿಡಿದು ಕಿಲಕಿಲನೆ ನಗುತ್ತಾ ಹೇಳಿದಳು, "ಅಮ್ಮಾ.., thanks a lot..."
"ಸರಿ..,ಸರಿ..,ಹೊತ್ತು ತುಂಬಾ ಆಗೋಯ್ತು... ಮಲಗೋಣ..,ಬಾ."
"ಅಮ್ಮಾ.., ನೋಡಿಲ್ಲಿ.., ಮಳೆ ಬರೋ ಹಾಗಿದೆ,ನನ್ನ ಕೈ ಮೇಲೆ ಒಂದು ಹನಿಯೂ ಬಿತ್ತು ನೋಡು..."
" ಇಲ್ಲ ಸುರೀ... ಮಳೆ ಬರಲಾರದು. ಗಾಳಿ ಬೀಸೋಕೆ ಶುರುವಾಯ್ತಲ್ಲಾ.., ನೋಡು ಮೋಡಗಳೆಲ್ಲಾ ಚೆದುರಿ ಹೋಗ್ತಾ ಇವೆ."
"ಹಾಗಾದ್ರೆ ಸ್ವಲ್ಪ ಹೊತ್ತು ಇಲ್ಲೇ ಇದ್ಬಿಡೋಣಾ...? ಸಪ್ತರ್ಷಿ ಮಂಡಲ, ಅರುಂಧತಿಯನ್ನು ನೋಡಿಯೇ ಮಲಗೋಕೆ ಹೋಗೋಣಾ..?"
"ಓಹ್..., ಇನ್ನೂ ನೀನದನ್ನ ಮರೆತಿಲ್ಲವೇ...? ಸರಿಬಿಡು ಆದಿತ್ಯನ್ನ ನೆನೆಸ್ಕೋ... ಅರುಂಧತಿ ಬಂದೇ ಬರ್ತಾಳೆ..."ಜೋರಾಗಿ ಬೀಸುವ ಗಾಳಿಯಲೆಯೊಂದಿಗೆ ಇವರಿಬ್ಬರ ನಗುವಿನಲೆಯೂ ಸೇರಿಕೊಂಡು ವಾತಾವರಣ ಆಹ್ಲಾದಕರವಾಯಿತು.
(ಮುಗಿಯಿತು)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ