ಏನಿದ್ದರೂ ವಾಸ್ತವವನ್ನು ಎದುರಿಸಲೇಬೇಕಲ್ಲವೇ ಎಂದುಕೊಂಡ ಹರಿಣಿ ತಲೆಕೊಡವಿ ಉಪಹಾರಕ್ಕಾಗಿ ಮೇಜನ್ನು ಅಣಿಗೊಳಿಸಿದಳು. ಸುರಭಿಯೂ ಫ್ರೆಶ್ ಆಗಿ ಬಂದಳು. ಅಪ್ಪ ಮಗಳು ಜೊತೆಯಲ್ಲಿ ತಿಂಡಿ ತಿನ್ನತೊಡಗಿದರು. ಅವರೊಳಗೆ ಹರಿದಾಡಿದ್ದು ಔಪಚಾರಿಕತೆಯನ್ನು ಮೀರದ ಕೆಲವೇ ಕೆಲವು ಮಾತುಗಳು. ಮೊದಲೆಲ್ಲ ಅವರಿಬ್ಬರೂ ಜೊತೆಯಲ್ಲಿ ಕುಳಿತರೆಂದರೆ ಸೂರ್ಯನ ದೃಷ್ಟಿಯಡಿಯಲ್ಲಿರುವ ಸಕಲ ಚರಾಚರ ವಸ್ತುಗಳ ಬಗ್ಗೆಯೂ ಮಾತುಕತೆ ನಡೆದಿರುತ್ತಿತ್ತು. ಆದರೆ ಈಗ...? ಗತವೈಭವವನ್ನು ನೆನೆದು ಹರಿಣಿ ನಿಡುಸುಯ್ದಳು. `ವರ್ತಮಾನದಲ್ಲಿ ಬದುಕಲು ಕಲಿ' ಎಂದು ಮತ್ತೆ ಮತ್ತೆ ತನ್ನ ಮಿದುಳಿಗೆ ತಾಕೀತು ಮಾಡಿದಳು. ನಗುವಿನ ಮುಖವಾಡ ತೊಟ್ಟುಕೊಂಡಳು. ಮುಂದಿನ ಮೂರ್ನಾಲ್ಕು ದಿನಗಳ ಕಾಲ ತಾಯಿಯೊಬ್ಬಳು ಮಗಳನ್ನು ಸಂತೋಷದಲ್ಲಿರಿಸಲು ಏನೆಲ್ಲಾ ಮಾಡಬಹುದೋ ಅದೆಲ್ಲವನ್ನೂ ಹರಿಣಿ ಸುರಭಿಗಾಗಿ ನಿರ್ವಂಚನೆಯಿಂದ ಮಾಡಿದಳು. ರಾತ್ರಿ ಹೊತ್ತು ಅಳಿಯ ಎಂದಿನಂತೆ ಕರೆಮಾಡಿ ಹರಿಣಿಯೊಡನೆ ಮಾತನಾಡಿದ. ಸುರಭಿಯ ವಿಷಯವನ್ನು ಎತ್ತಲೇ ಇಲ್ಲ! ಆದಿತ್ಯನೊಡನೆ ಅಮ್ಮನ ಮಾತುಕತೆ ಶುರುವಾದೊಡನೆ ಸುರಭಿ ಎದ್ದು ಹೋಗುತ್ತಿದ್ದಳು. ಚುರುಕುಮತಿ ಹರಿಣಿ ಎಲ್ಲವನ್ನೂ ಗಮನಿಸಿಯೂ ಗಮನಿಸದಂತಿದ್ದಳು. ಒಂದು ದಿನ ಸುರಭಿ ನಿದ್ದೆ ಮಾಡುತ್ತಿದ್ದ ಸಮಯವನ್ನು ನೋಡಿ ಅಳಿಯನಿಗೆ ಕರೆಮಾಡಿ ಸುಧೀರ್ಘವಾಗಿ ಮಾತನಾಡಿದಳು. ಮಗಳು ಅಳಿಯನ ನಡುವಿನ ಸಮಸ್ಯೆಯ ಕುರಿತು ಅರಿತು ಚೆನ್ನಾಗಿ ಚಿಂತಿಸಿ ಕೊನೆಗೆ ತಾನೇ ಒಂದು ತೀರ್ಮಾನವನ್ನೂ ತೆಗೆದುಕೊಂಡು ಎದೆಯ ಭಾರವನ್ನು ಹಗುರಗೊಳಿಸಿಕೊಂಡಳು. ಮಗಳು ಬಂದು ಆಗಲೇ ಐದು ದಿನಗಳು ಕಳೆದಿದ್ದುವು. ಮೋಹನ ತನಗೂ ಮನೆಗೆ ಬಂದ ಮಗಳಿಗೂ ಯಾವುದೇ ಸಂಬಂಧವಿಲ್ಲವೆನ್ನುವಂತೆ ವರ್ತಿಸುತ್ತಿರುವಾಗ ಅವಳ ಮ್ಲಾನವದನದ ಹಿಂದಿನ ಕಾರಣ, ಸಮಸ್ಯೆ, ತಾವು ಸೂಚಿಸಬಹುದಾದ ಪರಿಹಾರ ಇತ್ಯಾದಿಗಳ ಕುರಿತು ಅವರೊಡನೆ ಚರ್ಚಿಸಿ ಅವರನ್ನು ಇನ್ನಷ್ಟು ಒತ್ತಡಕ್ಕೊಳಪಡಿಸಲು ಹರಿಣಿ ಬಯಸಲಿಲ್ಲ.
ಆ ದಿನ ಬೆಳಗ್ಗಿನಿಂದ ಸುರಭಿ ತನ್ನೊಡನೆ ಏನನ್ನೋ ಹೇಳವ ತವಕದಲ್ಲಿದ್ದಾಳೆ ಎಂಬುದು ಹರಿಣಿಯ ಮಾತೃ ಹೃದಯಕ್ಕೆ ಅರಿವಾಗಿತ್ತು. ಆದರೂ ಅವಳದನ್ನು ತಾನಾಗಿಯೇ ತಿಳಿಯುವ ಉತ್ಸಾಹ ತೋರಲಿಲ್ಲ. ಕೇಳದೇ ತಾವಾಗಿಯೇ ಕೊಡುವ ಉಪದೇಶ ಮತ್ತು ಅಭಿಪ್ರಾಯಗಳು ಘೋರ್ಕಲ್ಲ ಮೇಲೆ ನೀರೆರೆದಂತೆ ಎಂಬುದನ್ನವಳು ಚೆನ್ನಾಗಿ ಬಲ್ಲಳು. ಸುರಭಿ ಅವಳ ಸಮಸ್ಯೆಗಳನ್ನು ತನ್ನ ಮುಂದೆ ತೋಡಿಕೊಂಡಾಗ ತಾನದಕ್ಕೆ ಪ್ರತಿಕ್ರಿಯೆ ನೀಡಿದರೆ ಸಾಕು ಎಂದು ಹರಿಣಿ ನಿಶ್ಚೈಸಿಕೊಂಡಿದ್ದಳು. ಅದು ರಾತ್ರಿಯ ಹೊತ್ತು. ಮಲಗುವ ಮೊದಲು ಹಾಲಿಗೆ ಹೆಪ್ಪು ಹಾಕುವ ತಯಾರಿಯಲ್ಲಿದ್ದಳು. ಆಗ ಸುರಭಿ ಅಡುಗೆ ಕೋಣೆಗೆ ಬಂದಳು,
"ಅಮ್ಮಾ..., ಕೆಲಸವೆಲ್ಲಾ ಆಯ್ತಾ...?" ಮಗಳ ಧ್ವನಿಯಾಕೋ ತೀರಾ ಸೋತಿದೆಯೆನಿಸಿತು.
"ಹೂಂ.., ಪುಟ್ಟೀ..., ಏನಾದರೂ ಬೇಕಿತ್ತಾ...?"
"ಇಲ್ಲಮ್ಮಾ..., ಹೀಗೇ ಸುಮ್ಮನೇ..." ಅವಳ ಧ್ವನಿಯಲ್ಲಿದ್ದ ಕಂಪನವನ್ನು ಗುರುತಿಸಿದ ಹರಿಣಿ ಮಗಳ ಕಡೆಗೆ ತಿರುಗಿದಳು. ಅವಳು ತುಟಿ ಕಚ್ಚಿ ಅಳುವನ್ನು ತಡೆಯುತ್ತಿರುವಂತೆ ತೋರಿತು. ಕೈಯ್ಯಲ್ಲಿದ್ದ ಕೆಲಸವನ್ನು ಅಲ್ಲೇ ಬಿಟ್ಟು ಮಗಳ ಭುಜ ಬಳಸಿ ಹಿಡಿದು ಅಲ್ಲೇ ಬದಿಯಲ್ಲಿರುವ ಕುರ್ಚಿಯಲ್ಲಿ ಕುಳ್ಳಿರಿಸಿ ಹೇಳಿದಳು,
"ಸುರೀ..., ಈಗ ಬಂದೆ..., ಅಪ್ಪಂಗೆ ಮಾತ್ರೆಗಳನ್ನು ಕೊಟ್ಟು ಬಂದ್ಬಿಡ್ಲಾ...? ಆಮೇಲೆ ಬಾಲ್ಕನಿಗೆ ಹೋಗೋಣಾ...?"ಹೇಳುತ್ತಲೇ ತಮ್ಮ ಬೆಡ್ ರೂಮಿನೆಡೆಗೆ ಧಾವಿಸಿದಳು. ಯಾವುದೇ ಕಾರಣಕ್ಕೂ ಮಗಳು ಅಳುವುದನ್ನು ಪತಿ ನೋಡಲೇಬಾರದು..., ನೋಡಿ ಅವರೊಳಗಿನ ಜ್ವಾಲಾಮುಖಿ ಸ್ಫೋಟವಾಗಬಾರದು, ಒಂದುವೇಳೆ ಅದು ಸ್ಫೋಟವಾಯಿತೋ...., ಅದರ ಬಿಸಿ ಅವರನ್ನೇ ಆಪೋಶನ ತೆಗೆದುಕೊಂಡರೆ...? ಆದುದರಿಂದ ಅದು ಅಲ್ಲಿಗಲ್ಲಿಗೇ ಶಮನಗೊಳ್ಳಬೇಕಾದ ಜರೂರೂ ಬಹಳವಿತ್ತು. ಈ ನಡೆಯಲ್ಲಿ ತನ್ನ ಜವಾಬ್ದಾರಿ ಬಹಳ ಗುರುತರವಾದದ್ದಿದೆ ಎಂದುಕೊಳ್ಳುತ್ತಾ ರೂಮನ್ನು ಪ್ರವೇಶಿಸುವಾಗ ಅವಳ ಅದೃಷ್ಟಕ್ಕೆ ಅವರು ದಿಂಬಿಗೊರಗಿಯಾಗಿತ್ತು. ಅವರ ಅಗತ್ಯಗಳನ್ನು ಪೂರೈಸಿ ನಿಶ್ಶಬ್ಧವಾಗಿ ಹೊರಕ್ಕೆ ಬಂದು ಬಾಗಿಲನ್ನು ಮುಂದೆಮಾಡಿದಳು. ಮಗಳೊಡನೆ ಬಾಲ್ಕನಿಯನ್ನು ಪ್ರವೇಶಿಸಿ ದೀಪದ ಗುಂಡಿಯದುಮಿದಳು.
"ಅಮ್ಮಾ.., ಲೈಟು ಬೇಡಾ..., ಕತ್ತಲೆಯೇ ಇರಲಿ" ಸುರಭಿಯೆಂದಾಗ ದೀಪವನ್ನಾರಿಸಿದಳು. ಒಳಗೂ ಹೊರಗೂ ಕತ್ತಲೆಯೇ ತುಂಬಿಹೋಯ್ತಲ್ಲಾ ಎಂದುಕೊಳ್ಳುತ್ತಾ ಹರಿಣಿ ಮೌನವಾಗಿ ಬೆಂಚಿನ ಮೇಲೆ ಕುಳಿತುಕೊಂಡಳು. ಸರ್ರನೆ ಅವಳ ಕಾಲಬುಡದಲ್ಲಿ ಕುಳಿತ ಸುರಭಿ ಅಮ್ಮನ ತೊಡೆಯ ಮೇಲೆ ತಲೆಯಿಟ್ಟು ಮುಖವನ್ನು ಮುಚ್ಚಿಕೊಂಡಳು. ಅಚಾನಕ್ಕಾಗಿ ಹರಿಣಿಯ ಕೈ ಮಗಳ ತಲೆಯನ್ನು ನೇವರಿಸಿತು. ಆ ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಅದುವರೆಗೂ ಅವರ ನಡುವೆ ಬೆಳೆದು ನಿಂತಿದ್ದ ಅದೃಶ್ಯ ಗೋಡೆಯನ್ನು ಪುಡಿಗಟ್ಟಿತು. ಇಷ್ಟು ದಿನಗಳಿಂದ ಸುರಭಿಯೊಳಗೆ ಕಟ್ಟಿ ನಿಂತ ಕೊಳೆನೀರಿಗೆ ತೂಬು ಕೊರೆದಂತಾಯ್ತು. ಕಣ್ಣೀರು ಧಾರೆಯಾಯ್ತು. ಕಟ್ಟಿನಿಂತ ಕೊಳಚೆ ನೀರು ಹೊರಹರಿದ ಮೇಲೆ ಮುಂದಿನ ಕೆಲಸ ತಳದಲ್ಲಿರುವ ಕೊಚ್ಚೆಯನ್ನು ಸ್ವಚ್ಛಗೊಳಿಸುವುದು. ಅದಾದರೆ ಮತ್ತೆಲ್ಲವೂ ಸಲೀಸು. ತುಂಬಿ ನಿಂತ ಜಾಗಕ್ಕೆ ಏನನ್ನು ಸುರಿದರೂ ಹೊರಚೆಲ್ಲಿ ವ್ಯರ್ಥವಷ್ಟೇ...? ಅದೇ ಜಾಗ ಖಾಲಿಯಿದ್ದರೆ...? ಶೂನ್ಯದಲ್ಲಿ ಪೂರ್ಣತೆಯನ್ನು ತುಂಬುವ ಆ ಹೊರೆಯನ್ನು ಹೊರಲು ಹರಿಣಿ ಸರ್ವಸನ್ನದ್ಧಳೇ ಆಗಿದ್ದಳು.
"ಪುಟ್ಟೀ..., ಎಷ್ಟು ಅಳಬೇಕೆನಿಸುತ್ತೋ ಅಷ್ಟು ಅತ್ತುಬಿಡಮ್ಮಾ..., ಏನು ಹೇಳಬೇಕೆನಿಸುತ್ತೋ ಅದನ್ನು ನಿಧಾನಕೆ ಹೇಳುವಿಯಂತೆ...?" ಅಮ್ಮ ಎಷ್ಟೋ ವರ್ಷಗಳ ಹಿಂದಿನಂತೆ ತನ್ನ ಬೆನ್ನು ತಡವುತ್ತಾ ತಲೆಗೂದಲಲ್ಲಿ ಕೈಯಾಡಿಸುತ್ತಾ ಮಾತನಾಡುತ್ತಿದ್ದ ಆ ರೀತಿಯೇ ಅವಳಿಗೆ ಹಲವು ವಿಷಯಗಳನ್ನು ತಿಳಿಸಿತ್ತು. ಅದರಲ್ಲಿ ಅಮ್ಮ ತನ್ನನ್ನು ಪೂರ್ತಿಯಾಗಿ ಕ್ಷಮಿಸಿ ಬಿಟ್ಟಿದ್ದಾಳೆ ಎಂಬ ಸಂದೇಶವನ್ನೂ ಹೆಕ್ಕಿಕೊಂಡಳು.` ಆದರೆ ಅಪ್ಪ? ತನ್ನ ತಲೆತುದಿ ಕಾಣುವಾಗಲೇ ಮುಖ ಸಿಂಡರಿಸುತ್ತಾರೆ...? ತಡೆಯಲಾರದೆ ಬಿಕ್ಕಿ ಬಿಕ್ಕಿ ಅತ್ತಳು. ಇನ್ನು ಆದಿತ್ಯ..? ಅಬ್ಬಾ..., ಏನು ಅವನ ಧೀಮಾಕು? ಅವನು ಎಳೆದ ಗೆರೆ ದಾಟದಂತಿರಲು ತಾನೇನು ಅವನ ಗುಲಾಮಳೇ...? ತಾನಿಲ್ಲಿ ಬಂದು ಇಷ್ಟು ದಿನಗಳಾದರೂ ಒಮ್ಮೆಯೂ ತನಗೆ ಕರೆ ಮಾಡದವ ಅಮ್ಮನೊಡನೆ ಅದೇನು ನಗು, ಮಾತು...? ಹೂಂ.., ಒಟ್ಟಿನಲ್ಲಿ ತಾನೆಂದರೆ ಯಾರಿಗೂ ಇಷ್ಟವಿಲ್ಲಾ... ಅಂತಹ ಕೆಟ್ಟ ಆದಿತ್ಯನಿಗಾಗಿ ದೇವರಂತಹ ಅಮ್ಮ, ಅಪ್ಪನನ್ನು ಬಿಟ್ಟು ಹೋದೆನಲ್ಲಾ...? ಅದಕ್ಕಾಗಿಯೇ ದೇವರು ತನಗೆ ಬುದ್ಧಿ ಕಲಿಸಲೆಂದೇ ಈ ಶಿಕ್ಷೆ ಕೊಟ್ಟ... ' ಅವಳ ಸ್ವಗತ ಸಂಭಾಷಣೆಯು ಕಣ್ಣೀರಿನ ಪ್ರವಹಾದೊಂದಿಗೆ ಹರಿದು ಹೋಗುತ್ತಲೇ ಇತ್ತು. ಹರಿಣಿ ಗಂಭೀರಳಾಗಿ ಆಗಸವನ್ನೇ ದಿಟ್ಟಿಸುತ್ತಾ ಕುಳಿತುಬಿಟ್ಟಳು. ಮದೋನ್ಮತ್ತ ಆನೆಗಳು ಸಾಲುಗಟ್ಟಿ ಹೋಗುತ್ತಿರುವಂತೆ ಮೋಡಗಳು ಬಾನಿಗೆ ಪರದೆಯನ್ನಿಳಿಸುತ್ತಾ ಮುಂದಕ್ಕೊತ್ತುತ್ತಿದ್ದುವು. ಸುಪ್ತ ಗಾಳಿ, ಸ್ತಬ್ಧ ಮರಗಳ ಹಿನ್ನೆಲೆಯಲ್ಲಿ ಆಕಾಶ ಇನ್ನಷ್ಟು ಕರ್ರಗಾಯಿತು.
"ಅಮ್ಮಾ..., ಪಾಪಿಗಳಿಗೆ ಅರುಂಧತಿ ನಕ್ಷತ್ರ ಕಾಣಿಸುವುದಿಲ್ಲವಂತೆ ಹೌದಾ ...?" ಕೊನೆಗೂ ಸುರಭಿ ಅಳು ನಿಲ್ಲಿಸಿ ಮಾತನಾಡಿದಳು. ಅದೂ ಎಂತಹ ಮಾತು? ಹರಿಣಿಗೆ ಕರುಳು ಹಿಂಡಿದಂತಾಯ್ತು. ಆದರೂ ತನ್ನ ಭಾವನೆಗಳು ಹೊರ ಹರಿಯದಂತೆ ಅವಳು ಜಾಗರೂಕಳಾಗಲೇಬೇಕಿತ್ತು. ಕಬ್ಬಿಣ ಕಾದಿದ್ದಾಗಲೇ ಪೆಟ್ಟು ಹಾಕಿ ಬಗ್ಗಿಸಿಯೇಬಿಡಬೇಕೆಂಬ ಪಣತೊಟ್ಟಿದ್ದಳಲ್ಲ? ಆದಿತ್ಯ ಸಭ್ಯ ಹುಡುಗನೆಂಬುದನ್ನು ಬೇರೆ ಬೇರೆ ಕೋನಗಳಿಂದ ಅವಳು ಪರೀಕ್ಷಿಸಿ ತಿಳಿದುಕೊಂಡಿದ್ದಳು. ತಮ್ಮನ್ನು ಗಣನೆಗೆ ತೆಗೆದುಕೊಳ್ಳದೆ ಸುರಭಿ ಆತನನ್ನು ವರಿಸಿದಳು ಎನ್ನುವ ಕಾರಣಕ್ಕಾಗಿ ಹರಿಣಿ ಆದಿತ್ಯನನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸಲಿಲ್ಲ. ಮಾತ್ರವಲ್ಲ ಮಗಳ ಜೀವನ ಹಳಿತಪ್ಪುತ್ತಿರುವಾಗ ತಮ್ಮ ಅಹಂ ನ ತೃಪ್ತಿಗೋಸ್ಕರ ಅವಳನ್ನು ಅವನೆದುರು ಎತ್ತಿಕಟ್ಟಿ ಆ ಬಾಂಧವ್ಯವನ್ನು ಪೂರ್ತಿಯಾಗಿ ಮುರಿದು ಹಾಕುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲವೆಂಬುದನ್ನು ಆಕೆ ಚೆನ್ನಾಗಿ ತಿಳಿದುಕೊಂಡಿದ್ದಳು. ಸುರಭಿಯ ಅದೃಷ್ಟಕ್ಕೆ ಅನಾಯಾಸವಾಗಿ ಆಕೆಗೆ ಅತ್ಯುತ್ತಮ ಪತಿಯೇ ದೊರೆತಿದ್ದ. ಇಷ್ಟೆಲ್ಲಾ ಅಂಶಗಳೊಂದಿಗೆ ಬಹು ಮುಖ್ಯವಾದ ಇನ್ನೊಂದು ಅಂಶವೂ ಇತ್ತು. ಮಗಳು ಕೊಟ್ಟ ಮೊದಲನೆಯ ಪೆಟ್ಟಿನಿಂದಾಗಿ ಮೋಹನ ಹೃದಯದ ಶಸ್ತ್ರಚಿಕಿತ್ಸೆಯನ್ನು ಎದುರಿಸಬೇಕಾಯ್ತು. ಇನ್ನೊಂದು ಪೆಟ್ಟನ್ನು ತಾಳಿಕೊಳ್ಳುವ ಶಕ್ತಿ ಆ ದುರ್ಬಲ ಹೃದಯಕ್ಕಿರಲಾರದು. ಇದೆಲ್ಲವನ್ನೂ ಲೆಕ್ಕ ಹಾಕಿಯೇ ಹರಿಣಿ ತನ್ನ ಗಂಭೀರತೆಯನ್ನು ಕಳೆದುಕೊಳ್ಳದೆ ನುಡಿದಳು.,
(ಮುಂದುವರಿಯುವುದು)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ