ಮಂಗಳವಾರ, ಏಪ್ರಿಲ್ 5, 2016

ಸ್ಕೂಲ್ ಡೇ ಯೂ ವರ್ಧಂತ್ಯುತ್ಸವವೂ

ಅಂದ ಚೆಂದದ ವೇಷ ತೊಟ್ಟ ಮಕ್ಕಳು, ಮಿರಿಮಿರಿ ಮಿರುಗುವ ಅವರ ಬಟ್ಟೆಬರೆಗಳಲ್ಲಿ ಎದ್ದು ಕಾಣುವ ನಾವಿನ್ಯತೆ, ಸಮೂಹ ಗಾಯನ, ನೃತ್ಯಗಳಲ್ಲಿ ಬಹು ಆಕರ್ಷಕವಾಗಿ ಕಾಣುವ ಯುನಿಫಾರ್ಮಿಟಿ, ಇವೆಲ್ಲಕ್ಕಿಂತ ಹೆಚ್ಚಾಗಿ ಆ ಮಕ್ಕಳ ಮುಖದಲ್ಲಿ ಒಡೆದು ಮೂಡಿದ್ದ ನಿರಾಳತೆ, ಆತ್ಮವಿಶ್ವಾಸ.., ನೋಡಲು ಖುಷಿಯೆನಿಸಿತು. ಸುಂದರ ಪ್ರಕೃತಿಯ ಮಡಿಲೊಳಗಿನ ಆ ಕುಗ್ರಾಮ, ಅದರೊಳಗೆ ಹೊಸದಾಗಿ ಸುಣ್ಣ ಬಣ್ಣ ಹೊಡೆಸಿಕೊಂಡು ತಲೆಯೆತ್ತಿ ನಿಂತ ಆ ವಿದ್ಯಾ ಸಂಸ್ಥೆ. ಅದು ಇಂಗ್ಲಿಷ್ ಮಾಧ್ಯಮದ್ದೇ ಆಗಿತ್ತಾದರೂ ಇತರ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿರುವ ಆ ಕೃತ್ರಿಮತೆ ಅಲ್ಲಿ ಕಾಣಲಿಲ್ಲ. ನಾನೇನೂ ಅಲ್ಲಿಗೆ ಹೊಸಬಳಲ್ಲವಾದರೂ ಆ ದಿನ ಅಲ್ಲಿ ನಡೆಯುತ್ತಿದ್ದ ವರ್ಧಂತ್ಯುತ್ಸವ (ಗಮನಿಸಿ, ಸ್ಕೂಲ್ ಡೇ ಅಲ್ಲ) ವು ನಾನು ಆ ಶಾಲೆಯ ಕುರಿತು ಹೊಸ ದೃಷ್ಟಿಯನ್ನು ಬೆಳೆಸಿಕೊಳ್ಳುವಂತೆ ಮಾಡಿತು. ಬೆಳಗ್ಗಿನಿಂದಲೇ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳು ಭರದಿಂದ ಸಾಗುತ್ತಿದ್ದರೂ ನಾನು ಅಲ್ಲಿಗೆ ಮಧ್ಯಾಹ್ನದ ವೇಳೆಗೆ ಹೋದೆ. `ಮುಂಜಾನೆದ್ದು ಕುಂಬಾರಣ್ಣ ಹಾಲು ಬಾಯಿ ಉಂಡಾನಾ...' ಈ ಜಾನಪದ ಗೀತೆಗೆ ಗ್ರಾಮ್ಯ ಧಿರಸಿನಲ್ಲಿ ಮುದ್ದಾಗಿ ಕಾಣುತ್ತಿದ್ದ ಪುಟ್ಟ ಮಕ್ಕಳು ಲವಲವಿಕೆಯಿಂದ ನಗು ನಗುತ್ತಾ ಹೆಜ್ಜೆ ಹಾಕುತ್ತಿದ್ದರು. ಈ ಮಕ್ಕಳು ಎಷ್ಟು ಭಾಗ್ಯವಂತರು ಎಂದು ಕೊಂಡೆ.
 ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಂದಿನ ಮಕ್ಕಳಿಗೆ ಬೇಕಿರುವುದು ಅದಮ್ಯ ಉತ್ಸಾಹ, ಮತ್ತು ಉತ್ಸಾಹ, ಮತ್ತು ಉತ್ಸಾಹ. ನಾನು ಯಾಕೆ ಹೀಗೆ ಹೇಳಿದೆ ಗೊತ್ತಾ? ಇಂಟರ್ನೆಟ್ಟು ನಮ್ಮ ಅಂಗೈಯ್ಯಲ್ಲೇ ಇದೆ. ಕನಸುಗಳೇ ಸಾಕಾರವಾಗಿ ಚಿತ್ರ ವಿಚಿತ್ರ ಡ್ರೆಸ್ಸುಗಳ ರೂಪ ಧರಿಸಿ ಅಂಗಡಿಗಳಲ್ಲಿ ಸಾಲುಗಟ್ಟಿ ಕುಳಿತಿವೆ. ತಮ್ಮ ಮಕ್ಕಳ ಪ್ರತಿಭೆ ವೇದಿಕೆಯಲ್ಲಿ ಮಿಂಚಲೇಬೇಕೆಂದು ಪಣತೊಟ್ಟು ಕಾಸಿನ ಮುಖ ನೋಡದ ಹೆತ್ತವರಿದ್ದಾರೆ. ಇಷ್ಟೆಲ್ಲವೂ ಮಕ್ಕಳ ಬಗಲಲ್ಲೇ ಇರುವಾಗ ನಾನು ಹಾಗೆ ಹೇಳಿದುದರಲ್ಲಿ ಉತ್ಪ್ರೇಕ್ಷೆ ಇದೆಯೇ? ನನ್ನೆದುರು ಕುಣಿಯುತ್ತಿದ್ದ ವಿದ್ಯಾರ್ಥಿಗಳನ್ನು ನೋಡುತ್ತಾ ನಾನು ನನ್ನ ಬಾಲ್ಯಕ್ಕೆ ಜಾರಿಹೋದೆ. ನಾನಾಗ ಎಂಟನೆ ತರಗತಿಯ ವಿದ್ಯಾರ್ಥಿನಿ. ನಮ್ಮ ಸ್ಕೂಲ್ ಡೇ ಸಂದರ್ಭ, ಪುಟ್ಟಣ್ಣ ಕಣಗಾಲರ ಸಿನಿಮಾ, ಕಾದಂಬರಿ ಆಧಾರಿತ `ಬಿಳೀ ಹೆಂಡ್ತಿ' ಗಲ್ಲಾ ಪೆಟ್ಟಿಗೆಯನ್ನು ಚಿಂದಿ ಉಡಾಯಿಸಿದ್ದ ಆ ದಿನಗಳು....,  ಭಾರತದ ಯುವಕ ಅಮೆರಿಕೆಗೆ ಹೋಗಿ ಅಲ್ಲಿಯ ಯುವತಿಯನ್ನು ಪ್ರೇಮಿಸಿ ವಿವಾಹವಾಗಿ ತಾಯ್ನಾಡಿಗೆ ಬರುತ್ತಾನೆ. ಅವನ ಮಾಜಿ ಪ್ರೇಮಿ ಭಾರತದ ಕನ್ಯೆ ಚಿರ ವಿರಹಿಯಾಗಿಯೇ ಉಳಿಯುತ್ತಾಳೆ. ನನಗೆ ನೆನಪಿರುವಂತೆ  ಆ ಸಿನೆಮಾದ ಕಥೆ ಇದೇ ಇರಬೇಕು. ಅದರಲ್ಲಿನ `ರಂಗೇನ ಹಳ್ಳಿಯಾಗೆ...' ಎಂದು ಪ್ರಾರಂಭವಾಗುತ್ತಿದ್ದ ಒಂದು ಗೀತೆ ಅಂದು ಬಹು ಜನಪ್ರಿಯವಾಗಿತ್ತು. ನಮ್ಮ ಟೀಚರಿಗೆ ಆ ಹಾಡನ್ನು ನೃತ್ಯದ ಮೂಲಕ ತೋರಿಸಬೇಕೆಂಬ ಆಸೆ(ಸಿನೆಮಾಟಿಕ್ ಡ್ಯಾನ್ಸ್ ಎಂಬುದರ ಮೂಲ ರೂಪ?)ಯಿತ್ತು. ನನ್ನನ್ನು ಫಾರಿನ್ ಹುಡುಗಿ ಮಾರ್ಗರೆಟ್ ಪಾತ್ರಕ್ಕೆ ಆಯ್ಕೆ ಮಾಡಿದರು (ಆಗ ನನಗೆ ಸ್ವರ್ಗಕ್ಕೆ ಮೂರೇ ಗೇಣು). ಅಮ್ಮನ ಹಳೆ ರೇಷ್ಮೆ ಸೀರೆಯಿಂದ ಹೋಲಿಸಿದ ಉದ್ದ ಗೌನು, ಗೆಳತಿಯ ಎತ್ತರದ ಹಿಮ್ಮಡಿಯ ಚಪ್ಪಲಿ, ತಲೆಯ ಮೇಲೊಂದು ಹ್ಯಾಟು (ಫಾರಿನ್ ಹುಡುಗಿಯ ತಲೆಯಲ್ಲಿ ಹ್ಯಾಟು ಇರಲೇಬೇಕೆಂಬ ಸಲಹೆ ನಮ್ಮ ಡ್ಯಾನ್ಸ್ ಟೀಚರಿಗೆ ಯಾವ ಪುಣ್ಯಾತ್ಮ ಕೊಟ್ಟನೋ ಗೊತ್ತಿಲ್ಲ), ಮುಖಕ್ಕೆ ಮೆತ್ತಿದಂತಿದ್ದ ಗಾಢವಾದ ಬಣ್ಣ (ಆವಾಗೆಲ್ಲ ವೇಷಧಾರಿ ವಿದ್ಯಾರ್ಥಿಗಳಿಗೆ ನಮ್ಮ ಡ್ರಾಯಿಂಗ್ ಮೇಷ್ಟರೇ ಮುಖಕ್ಕೆ ಬಣ್ಣ ಬಳಿಯುತ್ತಿದ್ದರು), ಇವಿಷ್ಟು ನನ್ನ ಔಟ್ ಫಿಟ್ಟು.  ಇಲ್ಲಿ ನನ್ನ ಹ್ಯಾಟಿನ ಬಗ್ಗೆ ಒಂದೆರಡು ವಾಕ್ಯಗಳನ್ನು ಬರೆಯಲೇಬೇಕು. ಇಂದಿನಂತೆ ಅಂದು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆಂದೇ ಬಟ್ಟೆ ಬರೆಗಳು, ಅವುಗಳಿಗೆ ಹೊಂದಿಕೊಳ್ಳುವಂತಹ ಆಕ್ಸೆಸರೀಸ್ಗಳನ್ನು ತಯಾರಿಸಿ ಬಾಡಿಗೆಗೆ ಕೊಡುವ ಅಂಗಡಿಗಳಿರಲಿಲ್ಲ. ಸೋ.., ನಾನು ನನ್ನ ಪಾತ್ರಕ್ಕೆ ಬೇಕಾದ ಹ್ಯಾಟಿಗೆ ಎಲ್ಲಿಗೆ ಹೋಗಲಿ? ಅಂದು ನಮ್ಮ ತೋಟವನ್ನು ಕಾಯುತ್ತಿದ್ದವ ನೇಪಾಲದ ಒಬ್ಬ ಘೂರ್ಕ. ವಿದೇಶೀಯನಾದ ಅವನೇ ನಮಗೊಂದು ಅಚ್ಚರಿ. ಇನ್ನು ಅವನ ಹ್ಯಾಟೆಂದರೆ ಅದು ಬ್ರಿಟಿಷರ ಸ್ಟೈಲಿಂದು. ಯಾವಾಗಲೂ ನಮಗೆ ಅದರ ಮೇಲೆಯೇ ಕಣ್ಣು. ಮೊರದಷ್ಟು ಅಗಲವಿದ್ದ ಅದನ್ನು ಉಲ್ಟಾ ಹಿಡಿದು ಎಷ್ಟೋ ಸಲ ತೋಟದಿಂದ ಹೆಕ್ಕಿದ ಅಡಿಕೆಯನ್ನು ಅದರಲ್ಲಿ ಹಾಕಿದ್ದೂ ಇದೆ(ಅವನು ಅದನ್ನು ತೋಟದಲ್ಲೇ ಬಿಟ್ಟು ಊರಿಗೆ ಹೋಗಿದ್ದಾಗ). ಅವನ ಆಜಾನುಬಾಹು ದೇಹಕ್ಕೆ ಅ ಹ್ಯಾಟು ಭೂಷಣವಾಗಿತ್ತು. ಆದರೆ ನನ್ನಂತಹ ನಿತ್ರಾಣ ಸಿಂಗಳಿಗೆ...? ಬೇರೆ ದಾರಿಯಿರಲಿಲ್ಲ. ಅದನ್ನೇ ಅಡ್ಜಸ್ಟ್ ಮಾಡುವುದೆಂದಾಯ್ತು. ಸರಿ. ಕಾರ್ಯಕ್ರಮದ ಪ್ರಾರಂಭಕ್ಕೆ ಇನ್ನೂ ಎರಡು ಮೂರು ಘಂಟೆ ಇದೆ ಎನ್ನುವಾಗಲೇ ನಮ್ಮನ್ನೆಲ್ಲಾ ಅಣಿಗೊಳಿಸಿ ಗ್ರೀನ್ ರೂಮಿನಿಂದ ಹೊರಕ್ಕೆ ಹೋಗದಂತೆ ತಾಕೀತು ಮಾಡಿದ್ದರು. ನಾಲ್ಕು ಘಂಟೆಗೆ ಪ್ರಾರಂಭವಾಗಬೇಕಿದ್ದ ಸಭಾ ಕಾರ್ಯಕ್ರಮ ಸರಿಯಾಗಿ ಐದು ಘಂಟೆಗೆ ಶುರುವಾಯ್ತು. ಮುಖ್ಯ ಅತಿಥಿಗಳು ತಮ್ಮ ಭಾಷಣದಲ್ಲಿ`...ಇಂದಿನ ಮಕ್ಕಳೇ ಮುಂದಿನ ಜನಾಂಗ, ಕಷ್ಟಪಟ್ಟು ಓದಿ ಶಾಲೆಯ ಹೆಸರನ್ನು ಬೆಳಗಿಸುವ ಜವಾಬ್ದಾರಿ ನಿಮ್ಮ ಮೇಲಿದೆ,  ದೊಡ್ಡವರಾಗಿ ಡಾಕ್ಟರು, ಎಂಜಿನಿಯರುಗಳಾಗಿ ನಮ್ಮ ನಾಡಿಗೆ ಕೀರ್ತಿ ತನ್ನಿ...' ಎಂದು ಮುಂತಾಗಿ ಕೊರೆದರು. ಸಭಾಕಾರ್ಯಕ್ರಮದ ಉಳಿದ ಔಪಚಾರಿಕತೆಗಳೆಲ್ಲಾ ಮುಗಿದು ಸಾಂಸ್ಕೃತಿಕ ಕಾರ್ಯಕ್ರಮಗಳು ಮೊದಲಾಗುವ ಹೊತ್ತಿಗೆ  ಹಸಿವು, ಬಾಯಾರಿಕೆ, ಕಿರಿಕಿರಿಯೆನಿಸುವ ವೇಷಭೂಷಣಗಳಿಂದಾಗಿ ನಾವು ಜೀವಚ್ಛವವಾಗಿ ಹೋದೆವು.
ಕೊನೆಗೂ ನಮ್ಮ ನೃತ್ಯದ ಸರದಿ ಬಂತು. ಟೇಪ್ ರೆಕಾರ್ಡರು ಒಳಗಿಂದ ಹಾಡುತ್ತಿತ್ತು. ವೇದಿಕೆಯ ಮೇಲೆ ನಾನು ನನ್ನ ಪ್ರೇಮಿ ಪಾತ್ರಧಾರಿಯ ಕೈಹಿಡಿದು ಕುಣಿಯತೊಡಗಿದೆ. ಒಂದೆರಡು ಕ್ಷಣದಲ್ಲಿ ನನ್ನ ಗೌನಿನ ಸೊಂಟದ ಸುತ್ತ ಚುಚ್ಚಿದ್ದ ಪಿನ್ನು (ಸಣಕಲು ಕಡ್ಡಿಯಂತಿದ್ದ ನನಗೆ ಆ ಹೊಸ ಗೌನು ತುಂಬಾ ಜಾಳು ಜಾಳಾಗಿ ಅದರೊಳಗೆ ನಾನು ಥೇಟ್ ಬೆದರುಗೊಂಬೆಯಂತೆ ಕಾಣುತ್ತಿದ್ದೆನಂತೆ! ಅದರ ಅಳತೆಯನ್ನು ನನ್ನ ಶರೀರಕ್ಕೆ ಸರಿಹೊಂದಿಸಲು ಡಜನುಗಟ್ಟಲೆ ಪಿನ್ನುಗಳು ನನ್ನ ಅಂಗಿಯನ್ನು ಹೊಕ್ಕಿದ್ದುವು) ಗಳು ಬಾಯ್ಬಿಟ್ಟು ನನ್ನ ಚರ್ಮವನ್ನು ಭೇದಿಸಿ ನಾನು ಕುಂಯ್ಯೋ... ಮುರ್ಯ್ಯೋ... ಎನ್ನುವಂತಾಗಿತ್ತು. ಸಾಲದುದಕ್ಕೆ ನನ್ನ ಮುಖದ ಅರ್ಧಭಾಗವನ್ನೂ ಮುಚ್ಚುತ್ತಿದ್ದ ಮೊರದಂತಹ ಆ ಹ್ಯಾಟು ಮುಂದಕ್ಕೆ ಜಾರದಂತೆ ಗೌನಿನ ಕುತ್ತಿಗೆಯ ಹಿಂಭಾಗವನ್ನು ಮತ್ತು ಹ್ಯಾಟಿನ ಹಿಂಬದಿಯಲ್ಲಿದ್ದ ದಾರವನ್ನು ಒಟ್ಟುಗೂಡಿಸಿ ಹೊಲಿದುಬಿಟ್ಟಿದ್ದರು. ಆ ಒಂದು ಜೋಡಣೆಯಿಂದಾಗಿ ನನ್ನ ಕುತ್ತಿಗೆ ತಟ್ಟೀರಾಯನಂತೆ ಮರಗಟ್ಟಿಹೋಗಿತ್ತು. ಅಭ್ಯಾಸವಿಲ್ಲದ ಎತ್ತರದ ಹಿಮ್ಮಡಿ ಚಪ್ಪಲು, ನನ್ನ ಕಾಲುಗಳಿಗೆ ದೊಗಲೆಯಾಗುತ್ತಿತ್ತು. ಆಯ ತಪ್ಪಿ ಬೀಳುವಂತಾದಾಗ ನನ್ನ ಪ್ರೇಮಿ ನನ್ನನ್ನು ಬಳಸಿಹಿಡಿದಂತೆ ಪೋಸ್ ಕೊಟ್ಟು ತನ್ನ ಪ್ರೆಸೆನ್ಸ್ ಆಫ್ ಮೈಂಡನ್ನು ತೋರಿಸಿದ್ದಳು! ಅಂತೂ ನೃತ್ಯವೆಂಬ ಆ ಮಹಾಕಾರ್ಯವನ್ನು ಮುಗಿಸಿ ಗ್ರೀನ್ ರೂಮಿಗೆ ಮರಳುವಾಗ `ಸಾಕೋ ಸಾಕು..., ಇನ್ನು ಮುಂದೆ ಕನಸಿನಲ್ಲಿಯೂ ಸ್ಕೂಲ್ ಡೇಯಲ್ಲಿ  ಭಾಗವಹಿಸೆ...' ಎಂದು ಪ್ರತಿಜ್ಞೆ ಮಾಡಿದ್ದೆ.
`ಕೋಡಗನ ಕೋಳಿ ನುಂಗಿತ್ತಾ ...ನೋಡವ್ವ ತಂಗಿ..' ಜಾನಪದ ಹಾಡಿನ ಗಟ್ಟಿ ಧ್ವನಿಗೆ ಇಹಲೋಕಕ್ಕೆ ಮರಳಿದೆ. ಮಕ್ಕಳು ಹಾಡನ್ನು ಅರ್ಥೈಸಿಕೊಂಡು ಅನುಭವಿಸಿ ಹೆಜ್ಜೆ ಹಾಕುತ್ತಿದ್ದ ಆ ರೀತಿ ಒಂದು ಕ್ಷಣ ನನ್ನೊಳಗೆ ಈರ್ಷ್ಯೆಯ ಕಿಡಿ ಹೊತ್ತಿಸಿದ್ದು ಸುಳ್ಳಲ್ಲ! ಇನ್ನೂ ಹಲವಾರು ಮನೋರಂಜನಾ ಕಾರ್ಯಕ್ರಮಗಳು ಉಳಿದಿರುವಂತೆಯೇ ಸಭಾಕಾರ್ಯಕ್ರಮವನ್ನು ಅಣಿಗೊಳಿಸಲು ಮಕ್ಕಳು ಓಡಾಡುತ್ತಿದ್ದುದು ವಿಶೇಷವೆನಿಸಿತು. ಅಲ್ಲಿ ಇನ್ನೂ ಕೆಲವೆಲ್ಲ ವಿಶೇಷತೆಗಳಿದ್ದುವು. ಪ್ರಾರ್ಥನಾ ಗೀತೆಯಾಗಿ ಗಣೇಶ ಪಂಚರತ್ನವನ್ನು ಜಾತಿ ಮತ ಬೇದವಿಲ್ಲದೆ ಎಲ್ಲಾ ಮಕ್ಕಳೂ ಸಲೀಸಾಗಿ ಸ್ಪಷ್ಟ ಉಚ್ಛಾರಣೆಯೊಂದಿಗೆ ಹಾಡಿದರು. ನಂತರ ಶಾಲಾ ಮುಖಂಡನಿಂದ ಇಂಗ್ಲಿಷ್ ಭಾಷೆಯಲ್ಲಿ ಸಭಾ ನಿರ್ವಹಣೆ. `ಮೂಲಕ್ಕೆ ಸಂಸ್ಕೃತ, ಮುನ್ನುಗ್ಗಲು ಇಂಗ್ಲೀಷ್' ಎನ್ನುವಂತೆ ಎರಡರ ಸಮಪಾಕ ನೋಡಲು ಸೊಗಸಾಗಿತ್ತು. ಪ್ರತಿ ಕಾರ್ಯಕ್ರಮದ ಕೊನೆಯಲ್ಲಿ ರಾಮಸ್ಮರಣೆಯೊಂದಿಗೆ ಕೈಚಪ್ಪಾಳೆ! ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳು ತಮ್ಮ ಭಾಷಣದಲ್ಲಿ ಹೇಳಿದ ಮಾತುಗಳು ವಿದ್ಯಾರ್ಥಿಗಳ ಮುಖದಲ್ಲಿ ಚಿಮ್ಮುತ್ತಿದ್ದ ಉತ್ಸಾಹಕ್ಕೆ ಕನ್ನಡಿ ಹಿಡಿದಂತಿತ್ತು, `.... ನಮ್ಮ ಸಮೂಹ ಸಂಸ್ಥೆಗಳ ಫಲಿತಾಂಶ ಪ್ರತಿಬಾರಿಯೂ ಶೇಕಡಾ ನೂರು ಎಂಬ ವಿಚಾರ ಹಳತಾಗಿ ಹೋಯ್ತು. ಇನ್ನೇನಿದ್ದರೂ rank ನತ್ತ ನಮ್ಮ ಗಮನ...., ಮಕ್ಕಳೇ.., ಕಿವಿಗೊಟ್ಟು ಕೇಳಿ, ಇದರಲ್ಲಿ ನೀವು ಚಿಂತಿಸಬೇಕಾದಂತಹ ವಿಷಯವೇನೂ ಇಲ್ಲ. ಆ ಎತ್ತರಕ್ಕೆ ನಿಮ್ಮನ್ನೊಯ್ಯಲು  ನಿಮ್ಮ ರಕ್ಷಕರನ್ನು ಮತ್ತು ಶಿಕ್ಷಕರನ್ನು ತಯಾರುಗೊಳಿಸುವ ಜವಾಬ್ದಾರಿ ನಮ್ಮದು...' ಎಂತಹ ಮನನೀಯವಾದ ಮಾತುಗಳು! 
ಮುಂದಿನ ಭಾಷಣದ ಸರದಿ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಗಣ್ಯರದ್ದು., `....ಹೆತ್ತವರೇ, ಇಂಗ್ಲೀಷೇ ಜೀವನವಲ್ಲ, ಜೀವನದಲ್ಲಿ ಇಂಗ್ಲೀಷ್ ಇರಲಿ...,  ಈವತ್ತು ಈ ಶಾಲೆ ಅದರ ಮೌಲ್ಯಗಳಿಗಾಗಿ ಗುರುತಿಸಿಕೊಳ್ಳುತ್ತಿದೆ. ಅವುಗಳನ್ನು ಮತ್ತು ಈ ಶಾಲೆಯಲ್ಲಿರುವ ವಿದ್ಯಾರ್ಥಿ ಜೀವನ ಪದ್ಧತಿಗಳನ್ನೂ ನಾವು ನಮ್ಮ ಮಕ್ಕಳಿಗೆ ಅರೆದು ಕುಡಿಸಬೇಕಾಗಿದೆ. ನಮ್ಮ ದೇಶದಲ್ಲಿರುವ ೧೬೫೦ ಭಾಷೆಗಳು ಈ ಒಂದು ಇಂಗ್ಲೀಷ್ ಭಾಷೆಯಿಂದಾಗಿ ಸಾವಿನಂಚಿನಲ್ಲಿವೆ, ಭಾಷೆಯೊಂದಿಗೆ ನಮ್ಮ ಸಂಸ್ಕೃತಿಯೂ..., ನಾವೆತ್ತ ಸಾಗಬೇಕಾಗಿದೆ? ಮರಳಿ ನಮ್ಮ ಮಣ್ಣಿನ ಸಂಸ್ಕೃತಿಯತ್ತ... ' ಎಂದು ಮುಂತಾಗಿ ಕಲ್ಲು ಹೊಡೆದಂತೆ ಹೇಳಿದ ಆ ಮಾತುಗಳು ಸ್ವಲ್ಪವೇ ಮೊದಲು `ನಮ್ಮ ಮಕ್ಕಳಿಗೆ ಸಿಟಿ ಮಕ್ಕಳಂತೆ ಇಂಗ್ಲೀಷ್ ಮಾತನಾಡಲು ಕಲಿಸಿ' ಎಂದು ಬೇಡಿಕೆಯಿಟ್ಟಿದ್ದ ಹೆತ್ತವರು ಎದೆ ಮುಟ್ಟಿ ಆತ್ಮ ವಿಮರ್ಶೆ ಮಾಡಿಕೊಳ್ಳುವಂತಿದ್ದುವು. 
ಮುಂದೆ ಹಳೆ ವಿದ್ಯಾರ್ಥಿಯೊಬ್ಬ ಮಾತನಾಡಿದ. ಆತ ಪ್ರಸ್ತುತ ಓದುತ್ತಿರುವ ಕಾಲೇಜಿನ ಬಗ್ಗೆ ಹೇಳುತ್ತಾ ಯಾವುದೋ ಕಾರಣಕ್ಕೆ ಏನೋ ಒಂದು ಅಹಿತಕರ ಘಟನೆಯೊಂದು ನಡೆದಾಗ ಅವನ ಶಿಕ್ಷಕರು, `ಶ್ರೀ ಭಾರತೀ ವಿದ್ಯಾ ಸಂಸ್ಥೆಯಿಂದ ಬಂದ ಮಕ್ಕಳನ್ನು ಸಂದೇಹ ಪಡುವ ಕಾರಣವೇ ಇಲ್ಲ. ಅಲ್ಲಿ ಅವರನ್ನು ತಯಾರು ಮಾಡಿದ ರೀತಿ ಹಾಗಿದೆ' ಎಂದಿದ್ದರಂತೆ. ಆತನ ಮಾತುಗಳು ಹೊಸ ವಿದ್ಯಾರ್ಥಿಗಳಿಗೆ ದಾರಿದೀಪದಂತಿತ್ತು.ಆ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ಶ್ರೀಮತಿ ಶಾರದಾಜಯಗೋವಿಂದ ಮತ್ತು ವಿಶೇಷ ಅತಿಥಿಯಾಗಿ ಆಗಮಿಸಿದ್ದ ಪತ್ರಿಕಾ ಸಂಪಾದಕ ಶ್ರೀ ಪ್ರಕಾಶ್ ಇಳಂತಿಲ ಇವರಿಬ್ಬರ ಮಾತುಗಳೂ ಬಹಳಷ್ಟು ದಿನಗಳ ಕಾಲ ನನ್ನನ್ನು ಚಿಂತನೆಗೆ ಹಚ್ಚಿದ್ದುವು.  
ದಷ್ಟ ಪುಷ್ಟವಾದ ಆರೋಗ್ಯವಂತ ಬೇರನ್ನು ಹೊಂದಿರುವ ಮರದ ಚಿಗುರೆಲೆಗಳು ಹೇಗೆ ಲಕಲಕಿಸುತ್ತವೆ ಎಂಬುದನ್ನು ನಾನಲ್ಲಿ ಕಣ್ಣಾರೆ ಕಂಡೆ. ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಯೋಜನೆಗಳು, ಯೋಚನೆಗಳು ಪ್ರತಿಯೊಂದೂ ಹಾಗೇ...., ಸರಳ, ಸ್ವಚ್ಛ, ಸುಂದರ. ಆದರೆ ಅಡಿಪಾಯ ಭದ್ರ. ಕನ್ನಡ ನಾಡಿನಾದ್ಯಂತ ಒಂಭತ್ತು ವಿದ್ಯಾ ಸಂಸ್ಥೆಗಳು ಶ್ರೀ ಮಠದ ಕನಸಿನ ಕೂಸುಗಳಾಗಿ ಕುಡಿಯೊಡೆದಿವೆ, ಸೊಂಪಾಗಿ ಬೆಳೆಯುತ್ತಲೂ ಇವೆ. ಆ ದಿನ ನಾನು ಭೇಟಿಯಿತ್ತದ್ದು ಕಾಸರಗೋಡು ಜಿಲ್ಲೆಯಲ್ಲಿರುವ ಮುಜುಂಗಾವು ಶ್ರೀ ಭಾರತೀ ವಿದ್ಯಾಸಂಸ್ಥೆಗೆ. ವರ್ಧಂತ್ಯುತ್ಸವ ಅಲ್ಲಿ ನಿಜ ಅರ್ಥದಲ್ಲಿ ಸಂತಸದ ವರ್ಧನೆಯೇ ಆಗಿ ಕಂಡಿತು. ಚುಟುಕಾಗಿ ಸಭಾ ಕಾರ್ಯಕ್ರಮ ಮುಗಿದಿತ್ತು. ಮತ್ತೆ ಮಕ್ಕಳೇ ವೇದಿಕೆಯನ್ನು ಆಳತೊಡಗಿದರು. ಆ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಅಷ್ಟೂ ಹೊತ್ತು ನನ್ನ ಮನಸ್ಸು ಬಹಳ ಖುಷಿ ಖುಷಿಯಾಗಿತ್ತು. ಅಂದಿನ ದಿನವನ್ನು ಸಾರ್ಥಕವಾಗಿ ಕಳೆದ ತೃಪ್ತಿಯೊಂದಿಗೆ ಮನೆಗೆ ಮರಳಿದೆ. 

2 ಕಾಮೆಂಟ್‌ಗಳು: