`ಅಜ್ಜಾ..,
ನಾಳೆಯಿಂದ ನೀವು ಕಡು ಪಥ್ಯದ ಆಹಾರವನ್ನೇ ತಿನ್ನಬೇಕು. ಬಿ. ಪಿ., ಶುಗರ್
ಎರಡನ್ನೂ ಕಂಟ್ರೋಲಿಗೆ ತರಲೇಬೇಕು....ತಿಳಿಯಿತೇ...?' ಎಂದು ಮೊಮ್ಮಗ ರವಿ
ಹೇಳಿದಾಗ ನಮ್ಮ ಶಂಕರರಾಯರಿಗೆ ಪೀಕಲಾಟಕ್ಕಿಟ್ಟುಕೊಂಡಿತು.
ಊಟ, ತಿಂಡಿ, ಸಿಹಿ, ಖಾರ,
ತುಪ್ಪ, ಬೆಣ್ಣೆ ಎಂದೆಲ್ಲಾ ಸುಮಾರು
ಎಪ್ಪತ್ತು ವರ್ಷಗಳಿಂದ ಆರಾಮದಲ್ಲಿ ತಿಂದುಂಡು ಮಾಡಿಕೊಂಡಿದ್ದವರಿಗೆ ಇದ್ದಕ್ಕಿದ್ದಂತೆ ಒಣ ಚಪಾತಿ, ಹಸಿ
ತರಕಾರಿ, ನೀರುಮಜ್ಜಿಗೆಯಲ್ಲಿ ದಿನ ಕಳೆ ಎಂದರೆ
ಹೇಗಾಗಬೇಡ ನೀವೇ ಊಹಿಸಿ. ಅದರಲ್ಲೂ
ತಾಜಾ ಮಂಗಬಾಳೇಕಾಯಿಯ ಪೋಡಿ ಎಂದರೆ ಅವರಿಗೆ
ಪಂಚಪ್ರಾಣ. ಅದೂ ಅವರ ಹೆಂಡತಿಯೇ
ಮಾಡಿಕೊಡಬೇಕು. ಏನಿಲ್ಲವೆಂದರೂ ಒಂದು ತಟ್ಟೆ ಪೋಡಿಯೆಲ್ಲ
ಅವರಿಗೆ ಲೆಕ್ಕವೇ ಅಲ್ಲ. ಈಗ
ದುರ್ಭಿಕ್ಷದಲ್ಲಿ ಅಧಿಕ ಮಾಸ ಎನ್ನುವಂತೆ
ಪಥ್ಯದ ಊಟ ತಿನ್ನುವ ಕರ್ಮ, ಸಾಲದುದಕ್ಕೆ ತಮಗೆ ಬೇಕಾದುದನ್ನು ಕದ್ದು ಮುಚ್ಚಿಯಾದರೂ ಮಾಡಿಕೊಡುತ್ತಿದ್ದ
ಹೆಂಡತಿಯೂ ಮನೆಯಲ್ಲಿಲ್ಲ. ಭಾಮೆ ಅಜ್ಜಿ ಮೊಮ್ಮಗಳ
ಮನೆಗೆ ಹೋಗಿ ಆಗಲೇ ಒಂದು ವಾರವಾಗಿತ್ತು.
ಪಾಪ, ರಾಯರ ಪಾಡು ಹೇಳತೀರದು.
ಡಾಕ್ಟರ್ ಮೊಮ್ಮಗ ಅಮೇರಿಕೆಯಿಂದ ರಜೆಗೆಂದು
ಊರಿಗೆ ಬಂದವನಿಗೆ ಮೊದಲು ಕಣ್ಣಿಗೆ ಬಿದ್ದದ್ದೇ
ಅಜ್ಜನ ಬಾತು ಹೋದಂತಿದ್ದ ಮುಖ
ಮತ್ತು ಕಾಲುಗಳು. ಅದುವರೆಗೂ ವೈದ್ಯರ ವಿಳಾಸದ ಕಡೆಗೆ
ಮುಖವನ್ನೇ ಮಾಡಿರದ ರಾಯರನ್ನು ಆಸ್ಪತ್ರೆಗೆ
ಕೊಂಡೊಯ್ಯಬೇಕಾದರೆ ಮೊಮ್ಮಗ ರವಿಗೆ ಬಾಲ್ಯದಲ್ಲಿ
ಕುಡಿದ ಅಮ್ಮನ ಎದೆಹಾಲು ಬಾಯಿಗೆ
ಬಂದಂತಾಗಿತ್ತು.
ಭಾಮೆ ಅಜ್ಜಿಯ ಕೈಯಿಂದ ತಯಾರಾಗುವ
ಅತಿರಸ(ಅಕ್ಕಿ, ಬೆಲ್ಲ ಸೇರಿಸಿ
ಎಣ್ಣೆಯಲ್ಲಿ ಕಾಯಿಸಿದ ಸಿಹಿತಿಂಡಿ)ವೆಂದರೆ ವರ್ಲ್ಡ್ ಫೇಮಸ್. ರವಿ ಅಮೆರಿಕೆಯವರೆಗೂ
ಅದನ್ನೊಯ್ದು ಅಲ್ಲಿಂದಲೂ ಅಜ್ಜಿಗೆ ಶಹಬಾಸ್ಗಿರಿ
ತಂದಿತ್ತಿದ್ದಾನೆ. ಇಂತಿಪ್ಪ ಅತಿರಸವನ್ನು ಅವರ
ಗರ್ಭಿಣಿ ಮೊಮ್ಮಗಳಿಗೆ ತಿನ್ನಬೇಕೇಂದು ಆಸೆಯಾಗಿದೆಯಂತೆ. ಅವಳಿರುವ ಆ ಮಂಗಳೂರೆಂಬ
ಕಾಂಕ್ರೀಟು ಕೊಂಪೆಯಲ್ಲಿ ಅದನ್ನು ಯಾರು ಮಾಡಿಕೊಡಬೇಕು?
ಹಾಗಾಗಿಯೇ ಭಾಮೆ ಅಜ್ಜಿಗೆ ಬುಲಾವ್
ಬಂದದ್ದು. ಮುದ್ದಿನ ಕಣ್ಮಣಿಯ ಬಯಕೆಯನ್ನು
ತೀರಿಸದಿದ್ದರೆ ಅವರೆಂತಹಾ ಅಜ್ಜಿ? ತನ್ನ ಗಂಡನೊಳಗಿರುವ
ಬಿ.ಪಿ., ಶುಗರುಗಳೆಂಬ ಮಾರಿಯನ್ನು ಮೊಮ್ಮಗ ಉತ್ಖನನ ಮಾಡಿ ಅದನ್ನು
ಹೆಡೆ ಮುರಿ ಕಟ್ಟಿ ನಾಶಮಾಡಲು
ಪಣ ತೊಟ್ಟು ಪಥ್ಯದ ಊಟಕ್ಕೆ
ಶಾಸನ ಜಾರಿಗೆ ತರುತ್ತಾನೆ ಎಂದು
ಅವರಿಗೇನು ಕನಸು ಬೀಳುತ್ತದೆಯೇ? ಆದುದರಿಂದ
ಅಜ್ಜಿ ನಿಶ್ಚಿಂತೆಯಿಂದ ಪೇಟೇವಾಸಿಯಾಗಿದ್ದರೆ ಅಜ್ಜ ಕಡುಪಥ್ಯದ ಊಟವೆಂಬ
ಗೊಂಡಾರಣ್ಯದಲ್ಲಿ ಕಳೆದು ಹೋಗಿ ಬಳಲಿ
ಬೆಂಡಾಗಿ ಬಸವಳಿದಿದ್ದಾರೆ. `ಭಾಮೇ.., ನನ್ನ ನಾಲಿಗೆಯ
ಚಪಲಕ್ಕೆ ನಿನಗಿತ್ತ ಕಷ್ಟವೆಷ್ಟು? ಆದರೆ ಒಂದು ದಿನವೂ
ಕಮಕ್ ಕಿಮಕ್ ಎನ್ನದೆ ನನಗೆ
ಬೇಕು ಬೇಕಾದುದನ್ನು ಹೊತ್ತು ಗೊತ್ತಿನ ಪರಿವೆಯೇ
ಇಲ್ಲದೆ ಬೇಯಿಸಿ ಹಾಕಿದೆಯಲ್ಲಾ? ಈಗ
ನನ್ನ ಸ್ಥಿತಿ ನೋಡು..., ಮಗ,
ಸೊಸೆ, ಮೊಮ್ಮಕ್ಕಳನ್ನು ಭಾರೀ ಭಾರೀ ಕೊಂಗಾಟಮಾಡುತ್ತಿದ್ದಿಯಲ್ಲಾ...? ಒಮ್ಮೆ ಬಂದು ನೋಡು.., ನನ್ನನ್ನು
ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂದು..., ಕೊಟ್ಟಿಗೆಯಲ್ಲಿರುವ
ಹಸುವಿಗಿಂತ ಕಡೆಯಾಗಿ ಹೋದೆ ಮಾರಾಯ್ತೀ...ಮುದಿಕೋಣಕ್ಕೆ ಕೊಡುವ ಒಣಹುಲ್ಲಿನಂತಿರುತ್ತದೆ ಆ
ಚಪಾತಿ, ಬೈಪಣೆ(ಗೋಶಾಲೆಯಲ್ಲಿ ಹಸುಗಳಿಗೆ
ಆಹಾರ ಕೊಚ್ಚಿಹಾಕುವ ಜಾಗ)ಗೆ ಹಸಿಹುಲ್ಲು
ಕೊಚ್ಚಿ ಹಾಕುವಂತೆ ಅದೇನೇನೋ ಹಸಿ ತರಕಾರಿಗಳ
ಹೋಳುಗಳನ್ನು ತಂದು ನನ್ನ ಮುಂದೆ ಸುರಿಯುತ್ತಿದ್ದಾರೆ..., ನೀನು ಮಾಡಿ
ಕೊಡುತ್ತಿದ್ದ ಕೆನೆಹಾಲಿನ ಆ ಕಾಫಿಯೆಲ್ಲಿ...,ಇವರು
ನನ್ನ ಗಂಟಲಿಗೆ ಸುರಿಯುತ್ತಿರುವ ಅಕ್ಕಚಿನಂತಿರುವ
ಆ ದ್ರವವೆಲ್ಲಿ...? ನಿನಗಲ್ಲದೆ
ಬೇರಾರಿಗೆ ಅರ್ಥವಾಗಬೇಕು ನನ್ನ ಸಂಕಟ,,,? ಹೂಂ...,
ನಿನಗಿತ್ತ ಕಷ್ಟಕ್ಕೆ ದೇವರು ನನಗಿತ್ತ ಶಾಪವಿರಬೇಕು...?
ಒಮ್ಮೆ ಬಂದು ಬಿಡು..., ಇನ್ನೆಂದೂ
ನಿನಗೆ ಕಷ್ಟ ಕೊಡಲಾರೆ....' ರೋಗ
ಪತ್ತೆಯಾಗುವವರೆಗೂ ಆಳುಕಾಳುಗಳೊಡನೆ, ಮನೆಮಂದಿಯೊಡನೆ ದೊಡ್ಡ ಗಂಟಲಿನಲ್ಲಿ ಮಾತನಾಡುತ್ತಿದ್ದವರು
ಈಗೀಗ ಇಂತಹ ಸ್ವಗತ ಸಂಭಾಷಣೆಗಳ
ಸಂಗಾತಿಯಾಗಿದ್ದಾರೆ. ರಾಯರು ಎಲ್ಲರೊಂದಿಗೆ ಕುಳಿತು
ಉಣ್ಣುವುದನ್ನು ನಿಲ್ಲಿಸಿಬಿಟ್ಟಿದ್ದಾರೆ. ಎಲ್ಲರೂ ಬಗೆ ಬಗೆ
ತಿನಸು, ಸವಿ, ಸವಿ ಊಟ
ಎಂದು ಮೆಲ್ಲುವಾಗ ತಾನು ಮಾತ್ರ ವಧಾ
ಸ್ಥಾನಕ್ಕೊಯ್ಯುಲಿರುವ ಎತ್ತಿನಂತೆ ನಮ್ಕೆ ವಾಸ್ತೇ ಒಂದಿಷ್ಟು
ಆಹಾರವನ್ನು ಒಳಕ್ಕಿಳಿಸಲು ಎಲ್ಲರ ಜೊತೆ ಯಾಕೆ
ಬೇಕು? ಯಾರಿಗೂ ತನ್ನ ಮೇಲೆ
ಕಾಳಜಿಯೇ ಇಲ್ಲ..., ತಾನು ಇದ್ದರೆಷ್ಟು..? ಸತ್ತರೆಷ್ಟು...?
ಹೀಗೆ ವ್ಯಘ್ರಗೊಂಡಿತ್ತು ಅವರ ಮನಸ್ಸು. ಅಂದಿನಿಂದ
ಅವರ ರೂಮು ಕೈಕೇಯಿಯ ಕೋಪಗೃಹವಾಯಿತು.
ಸೊಸೆಗಂತೂ ಅಂತಹ ಗತಿಗೆಟ್ಟ ಊಟವನ್ನು
ಮಾವನಿಗಿತ್ತು ಅವರ ಸಿಟ್ಟನ್ನೆದುರಿಸುವ ಧೈರ್ಯವೇ
ಇರಲಿಲ್ಲ. ಹೊತ್ತೊತ್ತಿಗೆ ಮೊಮ್ಮಗನೇ ಬಂದು ಸವಿ ಸವಿಯಾಗಿ
ಮಾತನಾಡಿ ಸಪ್ಪೆ ಸಪ್ಪೆ ಊಟ,ತಿಂಡಿಗಳನ್ನು ತಿನ್ನಿಸಿ ಹೋಗುತ್ತಿದ್ದ. ಹಾಗೆಯೇ ಇವತ್ತೂ ಬಂದ.
ಅವನ ಕೈಯ್ಯಲ್ಲಿ ಎಣ್ಣೆ, ಬೆಣ್ಣೆ ಕಾಣದ,
ಕೆಂಡದಲ್ಲಿ ಸುಟ್ಟ ಎರಡು ರೊಟ್ಟಿಗಳು,
ಬದಿಯಲ್ಲಿ ಒಂದಷ್ಟು ತಾಜಾ ತರಕಾರಿ
ಹೋಳು, ಮೊಳಕೆ ಕಾಳುಗಳಿಂದ ತುಂಬಿದ
ತಟ್ಟೆ ಹಾಗೂ ಸಕ್ಕರೆ, ಗಟ್ಟಿ
ಹಾಲುಗಳಿಲ್ಲದ ಕಾಫಿಯೆಂಬ ಹೆಸರಿನ ದ್ರವಗಳು ಕಂಗೊಳಿಸುತ್ತಿದ್ದುವು.
ಈಗಾಗಲೇ ಎರಡುಮೂರು ದಿನಗಳಿಂದ ಈ ಪ್ರಯೋಗ ನಡೆಯುತ್ತಾ
ಇದೆ. ದಿನ ನಿತ್ಯ ರವಿ
ಅಜ್ಜನ ಬೆರಳಿನಿಂದ ರಕ್ತವನ್ನು ತೆಗೆದು ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ಪರೀಕ್ಷಿಸುತ್ತಲೂ ಇದ್ದಾನೆ. `ಅಜ್ಜಾ..,
ಇದನ್ನ ತಿಂದು ಬಿಡಿ. ಹಾಗೇ
ತೋಟಕ್ಕೆ ಒಂದು ಸುತ್ತು ಹೋಗಿ
ಬರೋಣ?'
ಶೂನ್ಯದತ್ತ
ದೃಷ್ಟಿನೆಟ್ಟು ಕುಳಿತಿದ್ದ ಅಜ್ಜ ನಿಧಾನಕೆ ರವಿಯೆಡೆಗೆ
ದೃಷ್ಟಿ ಹಾಯಿಸಿದರು.
ಪಷ್ಕಳವಾಗಿ
ಉಂಡು ತಿಂದು ತೋಟ, ಗದ್ದೆ
ಎಂದು ಸುತ್ತಾಡಿಕೊಂಡು ಲವಲವಕೆಯಲ್ಲಿದ್ದ ರಾಯರು ಹೀಗೆ ಮೊಮ್ಮಗನ
ಹಿಡಿತದಲ್ಲಿ ನಲುಗಿಹೋದಾಗ ಮಗ ಸೊಸೆಯಂದಿರಿಗೆ `ಛೆ...ಛೆ..' ಎನಿಸದಿರಲಿಲ್ಲ. ಆದರೇನು
ಮಾಡೋಣ? ಖಾಯಿಲೆಯನ್ನು ಹತೋಟಿಗೆ ತರಬೇಕಲ್ಲವೇ? ಆದರೆ
ಅಜ್ಜನ ತಾಳ್ಮೆಗೂ ಒಂದು ಮಿತಿಯಿಲ್ಲವೇ? ರವಿಯ
ಕೈಯ್ಯಲ್ಲಿದ್ದ ತಿಂಡಿ ತೀರ್ಥಗಳನ್ನು ನೋಡಿದೊಡನೆ ಅವರಿಗೆ ವಾಕರಿಕೆ ಬಂದಂತಾಯ್ತು. ತನ್ನನ್ನು ಡಾಕ್ಟರಲ್ಲಿಗೆ
ಕರೆದೊಯ್ದ ಲಾಗಾಯ್ತಿನಿಂದ ಇಂದಿನವರೆಗೆ ಅಡಗಿಸಿಟ್ಟ ಸಿಟ್ಟು ಸುನಾಮಿಯಂತೆ ಅವರ
ಒಡಲನ್ನು ಬಗೆದು ಹೊರಕ್ಕೆ ಧುಮ್ಮಿಕ್ಕಿತು.
`ಏಯ್...ರವಿ.., ನಿನ್ನತ್ರ ಎಷ್ಟು
ದಿವ್ಸದಿಂದ ಹೇಳ್ತಾ ಇದ್ದೇನೆ... ಅಜ್ಜಿಯನ್ನು
ಕರೆದು ತಾ...ಎಂದು.? ಅಮೇರಿಕಾದಲ್ಲಿದ್ದು
ನಮ್ಮ ದೇಶದ ವೃದ್ಧರನ್ನು ಹೇಗೆ
ಸಾಯ್ಸೋದು ಅಂತ ಕಲಿತು ಬಂದೆಯಾ...?
ದಿನ ನಿತ್ಯ ರಕ್ತ ಪಿಪಾಸುವಿನಂತೆ
ನನ್ನ ಮೈಯಿಂದ ರಕ್ತ ತೆಗೆದದ್ದು
ಸಾಲದೂ ಅಂತ ಈ ಗೊಬ್ಬರದಂತಹಾ
ಊಟ ಬೇರೆ ತಿನ್ನಿಸ್ತಿದ್ದೀಯಾ...? ನನ್ನ ಭಾಮೆಯನ್ನೊಮ್ಮೆ
ಕರೆದು ತಾ ಮಾರಾಯಾ...ಇಲ್ಲವಾದರೆ
ನಾನು ಸಾಯೋದು ಖಂಡಿತಾ...' ಹೇಳುತ್ತಾ
ಹೇಳುತ್ತಾ ಅಜ್ಜನ ಸ್ವರ ಉಡುಗಿಯೇ
ಹೋಯ್ತು. ರವಿ ಅಜ್ಜನ ಹೆಗಲಿನ
ಸುತ್ತ ಕೈಬಳಸಿ ಕೇಳಿದ,
`ಯಾಕೆ ಅಜ್ಜಾ ಇಷ್ಟು ಬೇಸರ...?
ನಿಮ್ಮ ಹೆಲ್ತ್ ಸರಿಯಾಗಬೇಡವೇ..? ನೀವಿನ್ನೂ
ನೂರ್ಕಾಲ ನಮ್ಮೊಂದಿಗಿರಬೇಡವೇ..?'
`ಹೌದು ಮಾರಾಯಾ...ಹಾಗಾದರೆ ಈಗಲೇ ನಿನ್ನಜ್ಜಿಯನ್ನು
ಕರೆದು ತಾ...'
`ಯಾಕೆ..?
ನಾವಿಲ್ಲವೇ..ಅಜ್ಜಾ..?
`ಇಲ್ಲಾ..,
ಅದು ನಿಮ್ಮಿಂದ ಆಗುವಂತಾದ್ದಲ್ಲ...ಅವಳೇ ಬರಬೇಕು...'
`ಹೇಳಿ ಅಜ್ಜಾ...ಅಂತಾ ವಿಷಯ
ಏನಾಗಿದೆ ಈವಾಗ..?'
`ಅಲ್ಲಾ
ಕಣೋ..., ನಿನ್ನ ಈ ದರಿದ್ರದ
ಊಟ ತಿಂದ ದಿನದಿಂದ ನನ್ಗೆ
ಹೊರಗೆ ಆಗಿಲ್ಲ ಕಣೋ...ಹೊಟ್ಟೆನೋವು
ತಡೀಲಾರೆ...ಅಯ್ಯೋ...,ಅಮ್ಮಾ,,,'
`ಅಜ್ಜಾ..,
ಹೊಸ ಆಹಾರಕ್ಕೆ ಶರೀರ ಹೊಂದಿಕೊಂಡಾಗ ಸರಿ
ಹೋಗುತ್ತೆ. ಆದ್ರೆ ನೀವು ತುಂಬಾ
ನೀರು ಕುಡಿಯಬೇಕು. ಕರುಳಲ್ಲಿರುವ ಆಹಾರದ ಅಂಶ ಮಿದುವಾಗಿ ಹೊರಕ್ಕೆ
ಸಲೀಸಾಗಿ ಹೋಗಬೇಕಾದರೆ ತುಂಬಾ ನೀರು ಹೊಟ್ಟೆಯೊಳಕ್ಕೆ
ಹೋಗಬೇಕು ಅಜ್ಜಾ...' ಎನ್ನುತ್ತಲೇ ಒಂದು ದೊಡ್ಡ ಲೋಟ
ತುಂಬಾ ನೀರು ತಂದು ಕೊಟ್ಟ.
`ಥೂ...ಅಕ್ಕಚ್ಚಿನಂತಹ ಕಾಫಿ ಗಂಟಲಿಗೆ ಸುರಿದದ್ದು
ಸಾಲದೆಂದು ಈ ನೀರು ಬೇರೆ
ಬಾಯಿಗೆ ಹಾಕ್ಕೋ ಅಂತೀಯಾ? ನಾನೇನು
ಸಾಯಲು ಬಿದ್ದಿದ್ದೇನೆಯೇ...? ನೀರು ಬಾಯಿಗೆ ಹಾಕಿಕೊಳ್ಳಲು...?'
`ಅಜ್ಜಾ..,
ತುಂಬಾ ನೀರು ಕುಡಿಯದಿದ್ದರೆ ಮತ್ತೆ
ಬೇರೆಲ್ಲಾ ಸಮಸ್ಯೆಗಳು ಶುರುವಾಗಿಬಿಡುತ್ತೆ. ಮಲ ಕರುಳಲ್ಲಿ ಕಟ್ಟಿ
ನಿಂತಿದೆಯೆಂದಾದರೆ ಅದು ಸರಿ ಹೋಗಲು
ಮತ್ತೆ ಬೇರೆ ಚಿಕಿತ್ಸೆ ಮಾಡಬೇಕಾಗುತ್ತೆ...'
`ಬೇರೆ ಚಿಕಿತ್ಸೆ' ಎಂಬ ಶಬ್ಧ ಕಿವಿಗೆ
ಬಿದ್ದದ್ದೇ ತಡ ರಾಯರ ಪಂಚಪ್ರಾಣವೇ
ಹಾರಿಹೋದಂತಾಯ್ತು. ಇನ್ನು ಈತನ ಬಳಿ
ತಮ್ಮ ಜಬರ್ದಸ್ತ್ ನಡೆಯಲಾರದೆಂದು ಅರಿವಾಗಿಹೋಯ್ತು. ಎರಡ್ಮೂರು ದಿನಗಳಿಂದ ವೀರೇಚನವಾಗದ ಹೊಟ್ಟೆಯ ಸಂಕಟ, ಪತ್ನಿ
ಬಳಿಯಲ್ಲಿಲ್ಲದ ಮಾನಸಿಕ ಸಂಕಟ, ಮತ್ತೀಗ
ಹೊಸದಾಗಿ ಬಂದೆರಗಿದ ಚಿಕಿತ್ಸೆಯ ಸಂಕಟ, ಈ ಮೂರೂ
ಅವರ ಜಂಘಾಬಲವನ್ನೇ ಉಡುಗಿಸಿಬಿಟ್ಟುವು. ಕಣ್ಣೀರು ಧಾರೆಯಾಗಿ ಹರಿಯಿತು.
ಎರಡೂ ಕೈಗಳನ್ನು ಜೋಡಿಸಿ ಮೊಮ್ಮಗನೆಡೆಗೆ ನೋಡಿ
ದೀನರಾಗಿ ಬೇಡಿಕೊಂಡರು,
`ಮಾಹಾರಾಯಾ...ಯಾವುದಕ್ಕೂ ಮೊದಲು ನಿನ್ನಜ್ಜಿಯನ್ನು ಕರೆದುತಂದುಬಿಡು....ಅದೇನೋ ನೀವೆಲ್ಲಾ ಹೇಳ್ತೀರಲ್ಲಾ...ಪ್ಲೀ....ಸ್...' ಈಗ
ಮೊಮ್ಮಗನೂ ಕರಗಿಹೋದ. ತನ್ನ ಅಚ್ಚುಮೆಚ್ಚಿನ ಅಜ್ಜ
ತನ್ನೆದುರು ಕೈಮುಗಿದು ಕಣ್ಣೀರು ಹಾಕುವುದೆಂದರೆ...ಛೆ...ಛೆ..
ಸರಿ. ಮೊಮ್ಮಗನ ಸವಾರಿ ಅಜ್ಜಿಯನ್ನು
ಕರೆತರಲು ಮಂಗಳೂರಿಗೆ ಧಾವಿಸಿತು. ಅಜ್ಜನ ಖಾಯಿಲೆಯ
ವಿವರಗಳನ್ನು ಕೇಳಿ ಅಜ್ಜಿ ಕಿಲಕಿಲನೆ
ನಕ್ಕರು.
`ಹೋ...,
ಅದಕ್ಕ್ಯಾಕಂತೆ ನೀವೆಲ್ಲಾ ಅಷ್ಟು ತಲೆಬಿಸಿ ಮಾಡೋದು?
ಇಗೋ ನಾನು ಹೊರಟೇಬಿಟ್ಟೆ..' ಎಂದ
ಭಾಮೆಜ್ಜಿ ಮೊಮ್ಮಗಳಿಗೆ ಟಾ.. ಟಾ...ಹೇಳಿ
ಹೊರಟೇಬಿಟ್ಟರು. ಮನೆಗೆ ಮುಟ್ಟಿದ ತಕ್ಷಣ ತೋಟದಿಂದ ಬಾಳೆಕಾಯಿ ಕೊಯಿದು ತರಲು ಅಪ್ಪಣೆ
ಮಾಡಿದರು.
ತೋಟದಿಂದ
ಆಗತಾನೇ ಕಿತ್ತು ತಂದ ತಾಜಾ
ಮಂಗಬಾಳೇಕಾಯಿಯನ್ನು ಹೆಚ್ಚಿ ಪೋಡಿಯನ್ನು ಕರಿದ
ಭಾಮೆಜ್ಜಿ ತಟ್ಟೆ ತುಂಬಾ ಪೋಡಿಯನ್ನಿಟ್ಟು
ದೊಡ್ಡ ಲೋಟದಲ್ಲಿ ಕೆನೆಹಾಲು, ಸಕ್ಕರೆ ಧಾರಾಳವಾಗಿ ಬಿದ್ದ
ಫಿಲ್ಟರ್ ಕಾಫಿಯೊಂದಿಗೆ ಗಂಡನೆದುರು ಪ್ರತ್ಯಕ್ಷರಾದರು. ಕಣ್ಣೆದುರಿಗೆ ಮನದೆನ್ನೆ, ಆಕೆಯ ಕೈಯ್ಯಲ್ಲಿ ಮನದಿಚ್ಛೆಯ
ತಿಂಡಿ, ಮನವೊಪ್ಪಿದ ಕಾಫಿ....ರಾಯರನ್ನು ಸ್ವರ್ಗಕ್ಕೊಯ್ಯಲು
ಬೇರೇನು ಬೇಕು? ಗಂಡನ ಸಂಭ್ರಮವನ್ನು
ನೋಡಿ ಭಾಮೆಜ್ಜಿಯ ಮಖದಲ್ಲೊಂದು ಹುಸಿನಗು ಸುಳಿದು ಮಾಯವಾಯ್ತು.
ಅವರನ್ನು ಸ್ವಪ್ನಲೋಕದಲ್ಲೇ ಬಿಟ್ಟು ಒಳನಡೆದರು.
ಪೋಡಿಯೂ ಕಾಫಿಯೂ ರಾಯರ
ಅನ್ನಾಂಗವನ್ನು ಪ್ರವೇಶಿಸುತ್ತಲೇ ಅವರ ಕಂಠದ್ವಾರದಿಂದ ಸ್ವರವೊಂದು
ಹೊರಟಿತು,
`ಭಾಮೇ...,
ಪಾಯಿಖಾನೆಯಲ್ಲಿ ನೀರಿದೆಯಾ...?'
`ಓ...,
ಪೋಡಿ ಕರಿಯಲು ಕುಳಿತುಕೊಳ್ಳುವಾಗಲೇ ಟ್ಯಾಂಕಿಯಲ್ಲಿ
ನೀರು ಭರ್ತಿ ಮಾಡಿಯೇ ಬಂದಿದ್ದೆ...ಬೇಗ ಹೋಗಿಬಿಡಿ...'
ಅಜ್ಜ, ಅಜ್ಜಿಯ ಸಲ್ಲಾಪ ಕೇಳಿದ
ಡಾಕ್ಟರ್ ಮೊಮ್ಮಗನ ಬೆರಳು ಅವನಿಗರಿವಿಲ್ಲದೆ ಮೂಗಿನ
ಮೇಲಕ್ಕೆ ಹೋಯ್ತು.
ಸ್ವಾರಸ್ಯಕರವಾಗಿ ಮೂಡಿಬಂದಿದೆ - ಅತಿರಸದ ಬಗ್ಗೆ ಓದುವಾಗಲಂತೂ ಬಾಯಲ್ಲಿ ನೀರೂರಿತು . ಇಂದು ವೈದ್ಯಕೀಯ ಬೆಳವಣಿಗೆಯೋ ಅಥವಾ ಅತಿ ಜ್ಞಾನ ದಿಂದಲೋ - ಹಿರಿಯರಿಗೆ ಪಥ್ಯದ ಹೊರೆಯಾಗಿದೆ. ಇದು ಎಷ್ಟರ ಮಟ್ಟಿಗೆ ಸಮಂಜಸವೋ ತಿಳಿಯುತ್ತಿಲ್ಲ - ಇದ್ದಷ್ಟು ದಿನ ಹಾಯಾಗಿ ರುಚಿಕರ ಆಹಾರ ತಿನ್ನುವುದು ಒಳಿತೋ ಅಥವಾ ರುಚಿಯಿಲ್ಲದ ಆಹಾರ ಸೇವಿಸಿ ನರಕ ಯಾತನೆ ಪಡುವುದೋ - ಯಾರೂ ಶಾಶ್ವತವಲ್ಲ ಅದೂ ಜೀವನದ ಸಂಜೆಯಲ್ಲಿರುವವರಿಗೆ ಕಟ್ಟುನಿಟ್ಟಿನ ಆಹಾರ ಇರಬೇಕೋ ಬೇಡವೋ ಎಂಬದು ಎಲ್ಲರನ್ನೂ ಕಾಡುವ ಪ್ರಶ್ನೆ
ಪ್ರತ್ಯುತ್ತರಅಳಿಸಿ