ಭಾನುವಾರ, ಆಗಸ್ಟ್ 7, 2016

ನಾಗರ ಪಂಚಮಿ- ನಾಡಿಗೆ ತರಲಿ ನೆಮ್ಮದಿ


ಶ್ರಾವಣ ಬಂತೆಂದರೆ ಹಬ್ಬಗಳ ಮೆರವಣಿಗೆ...ಮಹಿಳೆಯರ ಸಂಭ್ರಮ...,ಮಕ್ಕಳ ಚಿಲಿಪಿಲಿ...ಒಂದೇ ಎರಡೇ..? ಹಬ್ಬಗಳ ಮೆರವಣಿಗೆಯನ್ನು ಮುನ್ನಡೆಸುವವನೇ ನಾಗರಾಜ. ಅಂದರೆ ನಾಗನ ಹಬ್ಬದ ನಂತರವೇ ಉಳಿದೆಲ್ಲಾ ಹಬ್ಬಗಳು ಬರುತ್ತವೆ. ನಾಗ ಪಂಚಮಿಯ ವೈಶಿಷ್ಯತೆ ಏನು?
ಮಹಾಭಾರತದಲ್ಲಿ ಬರುವ ಒಂದು ಕಥೆ ಹೀಗಿದೆ,
ಪರೀಕ್ಷಿತ್ ರಾಜನನ್ನು ಸರ್ಪಗಳ ರಾಜ ತಕ್ಷಕ ಕಡಿದು ಕೊಲ್ಲುತ್ತಾನೆ. ಇದರಿಂದ ವ್ಯಗ್ರನಾದ ಅವನ ಮಗ ಜನಮೇಜಯ ಸೇಡು ತೀರಿಸುವ ಉದ್ದೇಶದಿಂದ ಸರ್ಪ ಸತ್ರ ಎನ್ನುವ ಬಹು ದೊಡ್ಡ ಯಜ್ಞವೊಂದನ್ನು ಮಾಡಲು ನಿಶ್ಚೈಸುತ್ತಾನೆ. ಲೋಕದಲ್ಲಿರುವಂತಹ ಸಕಲ ಹಾವುಗಳನ್ನೂ ಯಜ್ಞಕುಂಡಕ್ಕೆ ಬಲಿ ಕೊಟ್ಟು ಅವುಗಳ ಸಂತತಿಯನ್ನು ನಾಶ ಮಾಡುವದೇ ಅವನ  ಗುರಿಯಾಗಿರುತ್ತದೆ. ಅಸಂಖ್ಯಾತ ಪಂಡಿತರು ಯಜ್ಞವನ್ನು ನೆರವೇರಿಸಲು  ಬರುತ್ತಾರೆ. ಬೃಹದ್ಗಾತ್ರದ ಯಜ್ಞಕುಂಡಕ್ಕೆ ಹಾವುಗಳು ಬಂದು ಬೀಳುವಂತೆ ಮಂತ್ರಗಳನ್ನು ಪಠಿಸಲಾಗುತ್ತದೆ. ಸಾವಿರಾರು ಹಾವುಗಳು ಬಲಿಯಾಗುತ್ತವೆ. ಮುಂದೆ ಆಹುತಿಯಾಗಲು ನಾಗ ದೊರೆ  ತಕ್ಷಕನೊಬ್ಬನೇ ಉಳಿಯುತ್ತಾನೆ. ಭಯಭೀತನಾದ ನಾಗರಾಜ ಇಂದ್ರನ ಮೊರೆ ಹೋಗುತ್ತಾನೆ. ಆತನ ಸೂಚನೆಯಂತೆ ಇಂದ್ರನ ಸಿಂಹಾಸನದ ಕಾಲಿಗೆ ಸುತ್ತು ಹಾಕಿ ಅಡಗಿಕೊಳ್ಳುತ್ತಾನೆ. ತಕ್ಷಕನಿನ್ನೂ ಆಹುತಿಯಾಗದಿರುವುದನ್ನು ಗಮನಿಸಿದ ಜನಮೇಜಯ ಪಂಡಿತರೊಡನೆ ಮಂತ್ರಗಳನ್ನು ಇನ್ನಷ್ಟು ಪ್ರಬಲವಾಗಿ ಪ್ರಯೋಗಿಸಲು ಹೇಳುತ್ತಾನೆ. ಮಂತ್ರಗಳ ಶಕ್ತಿಗೆ ಇಂದ್ರನ ಸಿಂಹಾಸನವೇ ಅಲುಗಾಡತೊಡಗುತ್ತದೆ. ಇಂದ್ರನ ಸಮೇತ ತಕ್ಷಕ ಯಜ್ಷಕುಂಡಕ್ಕೆ ಬೀಳಲೇಬೇಕಾಗುತ್ತದೆ ಎಂಬುದನ್ನು ಗಮನಿಸಿದ ಇಂದ್ರಲೋಕದ ದೇವತೆಗಳು ಬ್ರಹ್ಮನನ್ನು ಮೊರೆ ಹೋಗುತ್ತಾರೆ. ಅವರ ಕೇಳಿಕೆಯ ಮೇರೆಗೆ ಬ್ರಹ್ಮ ಓರ್ವ ದೇವತಾ ಪುರುಷನನ್ನು ಭೂಲೋಕಕ್ಕೆ ಕಳುಹಿಸುತ್ತಾನೆ. ಸನ್ಯಾಸಿಯ ವೇಷದಲ್ಲಿ ಬಂದ ಆತ ತನ್ನ ಪಾಂಡಿತ್ಯದಿಂದ ಜನಮೇಜಯನ ಮನಸ್ಸನ್ನು ಗೆಲ್ಲುತ್ತಾನೆ. ಆಗ ಜನಮೇಜಯ ವರವೊಂದನ್ನು ಕೇಳುವಂತೆ ಆತನೊಡನೆ ಹೇಳುತ್ತಾನೆ. ಸರ್ಪ ಸತ್ರ ಯಜ್ಞವನ್ನು ತಕ್ಷಣ ನಿಲ್ಲಿಸುವಂತೆ ಸನ್ಯಾಸಿ ವರವನ್ನು ಬೇಡುತ್ತಾನೆ. ಮಾತಿಗೆ ತಪ್ಪಲು ಎಷ್ಟು ಮಾತ್ರಕ್ಕೂ ಸಿದ್ಧನಿಲ್ಲದ ಜನಮೇಜಯ ತನ್ನದೇ ಮಾತಿಗೆ ಕಟ್ಟುಬಿದ್ದು ಯಜ್ಞವನ್ನು ನಿಲ್ಲಿಸುತ್ತಾನೆ. ಹಾಗೆ ತಕ್ಷಕ ಉಳಿದುಕೊಳ್ಳುತ್ತಾನೆ. ಸ್ವರ್ಗಲೋಕದಿಂದ ತಂದ ಅಮೃತದ ಪ್ರೋಕ್ಷಣೆಯಿಂದ ಸತ್ತು ಹೋದ ಹಾವುಗಳು ಮರು ಹುಟ್ಟು ಪಡೆಯುತ್ತವೆ. ಎಲ್ಲಾ ಘಟನೆಗಳು ನಡೆದುದು ಶ್ರಾವಣ ಮಾಸದ ಪಂಚಮಿಯಂದು. ಸರ್ಪಗಳು ಮರುಹುಟ್ಟು ಪಡೆದು ಪ್ರಕೃತಿಯ ಸಮತೋಲನವನ್ನು ಕಾಯುವಂತಾಗಿ ಪ್ರಕೃತಿ ಕಂಗೊಳಿಸುವಂತೆ ಮಾಡಿದ ದಿನವನ್ನೇ ನಾಗರ ಪಂಚಮಿ ಎಂದು ಆಚರಿಸುತ್ತಾರೆ.
ಕಥಾಸ್ಸರಿತ್ಸಾಗರದಲ್ಲಿ  ರಾಜಾ ಜೀಮೂತವಾಹನನ ಕಾರಣದಿಂದ ಸರ್ಪಗಳು ಉಳಿದುಕೊಳ್ಳುತ್ತವೆ ಎಂಬ ಕಥೆಯೊಂದಿದೆ. ನಾಗಲೋಕದೊಂದಿಗಿನ ಒಪ್ಪಂದವೊಂದರಂತೆ ಗರುಡನಿಗೆ ನಿಗದಿತ ಸ್ಥಳವೊಂದರಲ್ಲಿ ದಿನ ನಿತ್ಯ ಸರ್ಪದ ಬಲಿಯೊಂದನ್ನು ಕೊಡಬೇಕಾಗುತ್ತದೆ. ಹಾಗೆ ಸಾವಿರಾರು ನಾಗರ ಹಾವುಗಳ ಸಂತತಿ ನಾಶವಾಗುತ್ತದೆ. ಒಂದು ದಿನ ಜೀಮೂತವಾಹನನು ವಿಹಾರಾರ್ಥವಾಗಿ ನಡೆಯುತ್ತಾ ಗರುಡ ಬಲಿ ತಗೆದುಕೊಳ್ಳುವ ಅದೇ ದಾರಿಯಾಗಿ ಹೋಗುತ್ತಿರುವಾಗ ಬದಿಯಲ್ಲಿ ಅಸಂಖ್ಯಾತ ಹಾವುಗಳ ಕಳೇಬರಗಳನ್ನೂ ಅದರ ಪಕ್ಕದಲ್ಲೇ ಅವುಗಳ ರಕ್ತ ಚೆಲ್ಲಿದ ಬಂಡೆಯೊಂದನ್ನೂ ನೋಡುತ್ತಾನೆ. ವಿಷಯವೇನೆಂದು ತಿಳಿದಾಗ ಬಹಳ ಖೇದಕ್ಕೊಳಗಾಗುತ್ತಾನೆ. ದಿನ ಗರುಡನಿಗೆ ಆಹಾರವಾಗಿ ಆತನೇ ಬಂಡೆಯ ಮೇಲೆ ಮಲಗುತ್ತಾನೆ. ಆಶ್ಚರ್ಯಚಕಿತನಾದ ಗರುಡ ಇದನ್ನು ಪ್ರಶ್ನಿಸುತ್ತಾನೆ. ಜೀಮೂತವಾಹನನು ಮುಂದೆಂದೂ ಗರುಡನು ಹಾವುಗಳನ್ನು ಕೊಲ್ಲದಂತೆ ಮನವೊಲಿಸುತ್ತಾನೆ. ಮತ್ತು ಗರುಡನಿಗೆ ದೇವಲೋಕದಿಂದ ಅಮೃತವನ್ನು ತಂದು ಹಾವುಗಳ ಕಳೇಬರದ ಮೇಲೆ ಚಿಮುಕಿಸಿ ಅವುಗಳನ್ನು ಬದುಕಿಸುವಂತೆ ಆದೇಶಿಸುತ್ತಾನೆ.  ಘಟನೆ ನಡೆದ  ಶ್ರಾವಣ ಮಾಸದ ಪಂಚಮಿಯ ದಿನವನ್ನೇ ಇಂದು ನಾವು ನಾಗರ ಪಂಚಮಿಯೆಂದು ಆಚರಿಸುತ್ತಿದ್ದೇವೆ ಎಂಬುದು ಇನ್ನೊಂದು ಕಥೆ.
ಹಿಂದೂ ಧರ್ಮದಲ್ಲಿ ನಾಗನು ಸೃಷ್ಟಿಯ ಪ್ರತೀಕವೆಂಬ ನಂಬಿಕೆಯಿದೆ. ಸೃಷ್ಟಿ, ಸಂತಾನ ಇತ್ಯಾದಿಗಳೇ ಅಲ್ಲವೇ ಮನುಷ್ಯ ಜೀವಿಯ ಮೂಲಬೇರು. ಆದುದರಿಂದಲೇ ನಮ್ಮ ಜೀವನದಲ್ಲಿ ನಾಗಬ್ರಹ್ಮನಿಗೆ ಅಗ್ರ ಪ್ರಾಶಸ್ತ್ಯ. ನಾಗನ ಬನದಲ್ಲಿ ಅಥವಾ ಕಟ್ಟೆಯಲ್ಲಿರುವ ಕಲ್ಲಿನ ಮೂರ್ತಿಯನ್ನು ಸ್ವಚ್ಛಗೊಳಿಸಿ ಮಂತ್ರಪಠಣದೊಂದಿಗೆ ಹಾಲು, ಎಳನೀರು ಇತ್ಯಾದಿಗಳಿಂದ ಅಭಿಷೇಕ ನಡೆಸಿ ಅರಸಿನ ಹುಡಿ, ಪುಷ್ಪ, ಗಂಧ ಇತ್ಯಾದಿಗಳಿಂದ ನಾಗರಾಜನನ್ನು ಅಲಂಕರಿಸಿ ಮಂಗಳಾರತಿ ಬೆಳಗಿ ಪ್ರಾರ್ಥಿಸಿಕೊಳ್ಳುವುದೇ  ನಾಗರ ಪಂಚಮಿ ಆಚರಣೆಯ  ಪ್ರಮುಖ ಭಾಗ. ನಮ್ಮ ದಕ್ಷಿಣ ಕನ್ನಡದಲ್ಲಿ ಎಲ್ಲಾ ಕ್ರಿಯೆಗಳನ್ನು ಪುರೋಹಿತರೇ ನಡೆಸಿಕೊಡುತ್ತಾರೆ. ಉತ್ತರ ಕರ್ನಾಟಕದಲ್ಲಿ   ಹಬ್ಬವನ್ನು ಹೆಂಗಳೆಯರು ತವರು ಮನೆಗೆ ಹೋಗಿ ಆಚರಿಸುವ ಪರಿಪಾಠವಿದೆ. ಸ್ವತಃ ಮಹಿಳೆಯರೇ ನಾಗನಿಗೆ ಅಭಿಷೇಕ ಮಾಡುತ್ತಾರೆ. ನಾಗನನ್ನು ಪ್ರತಿಷ್ಟಾಪಿಸಿದ ಅಶ್ವತ್ಥ ಮರಕ್ಕೆ ಮೂರು ಸುತ್ತು ಬಂದು ತನ್ನ ತವರಿನ ಬಳಗವನ್ನು ಉಳಿಸಿ ಬೆಳಿಸಿ ಮುನ್ನಡೆಸುವಂತೆ ಪ್ರಾರ್ಥಿಸುತ್ತಾರೆ. ಇದನ್ನೇ `ಭಾತೃ ಪಂಚಮಿ' ಎಂದೂ ಕೆಲವು ಕಡೆಗಳಲ್ಲಿ ಕರೆಯುತ್ತಾರೆ. ಸಹೋದರನ ಏಳ್ಗೆಗಾಗಿ ನಾಗನನ್ನು ಬೇಡಿಕೊಳ್ಳುವ  ಹಬ್ಬ ಎಂದೇ ಇದರ ಅರ್ಥ. ಇದನ್ನೇ `ವಿಷಾರಿ ಪೂಜಾ' ಅಥವಾ `ಬಿಷಾರಿ ಪೂಜಾ' ಎಂಬ ಹೆಸರಿನಲ್ಲಿಯೂ ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಕರೆಯುತ್ತಾರೆ. ವಿಷದಿಂದ ತಮ್ಮನ್ನೂ ತಮ್ಮ ಸಂತಾನವನ್ನೂ ರಕ್ಷಿಸು ಎಣ್ಣುವ ಪ್ರಾರ್ಥನೆಯೇ ಪೂಜೆಯ ಮುಖ್ಯಾಂಶ ಎನ್ನುವ ಉದ್ದೇಶಕ್ಕಾಗಿಯೇ ಹೆಸರು ಬಂದಿರಬಹುದು. ಇಲ್ಲಿ ವಿಷ ಎನ್ನುವುದನ್ನು ನಮ್ಮೊಳಗಿನ ಅರಿಷಡ್ವೈರ ಎಂಬುದಾಗಿ ಅರ್ಥೈಸಿದರೆ  ಪೂಜೆಯನ್ನು ಆಚರಿಸುವ ಹಿಂದಿನ ಉದ್ದೇಶ ಎಷ್ಟು ಮಹತ್ವದ್ದು ಎಂಬುದು ನಮಗೆ ಅರಿವಾಗದಿರದು.
ನಾಗರ ಪಂಚಮಿಯ ದಿನ ಮುಖ್ಯವಾಗಿ ಪಠಿಸುವಂತಹ ಮಂತ್ರ ರೀತಿಯಾಗಿದೆ,
`ನಾಗ ಪ್ರೀತಾ ಭವಂತಿ
ಶಾಂತಿಮಾಪ್ನೋತಿ ಬಿಯ
ಸಶಾಂತಿ ಲೋಕ ಮಾ ಸಾಧ್ಯ
ಮೋದತೇ ಸಸ್ಥಿತ ಸಮಃ'
ಇದರ ಭಾವಾರ್ಥವನ್ನು ರೀತಿಯಾಗಿ ಹೇಳಬಹುದೇನೋ?
 ನಾಗ ದೇವತೆಯ ಕೃಪೆಗೆ ಪ್ರತಿಯೊಬ್ಬರೂ ಪಾತ್ರರಾಗಲಿ
 ಪ್ರತಿಯೊಬ್ಬರಿಗೂ ಮನಃಶಾಂತಿ ದೊರೆಯಲಿ
 ಪ್ರತಿಯೊಂದು ಜೀವಿಯೂ ಯಾವುದೇ ಕಷ್ಟಕ್ಕೊಳಗಾಗದೆ ಜೀವಿಸುವಂತಾಗಲಿ.
ಅನ್ಯಾಯ, ಅನಾಚಾರಗಳೇ ತುಂಬಿ ತುಳುಕುವ ಇಂದಿನ ಸಮಾಜಕ್ಕೆ ಇಂತಹ ಪ್ರಾರ್ಥನೆ ಅತೀ ಅಗತ್ಯವೂ ಹೌದು.    

      

2 ಕಾಮೆಂಟ್‌ಗಳು:

  1. I had no idea of the reason behind the celebration of the Nagara Panchami festival. I knew on that day people make sweet dish made of rice,jaggery and coconut with turmeric leaves. I actually thought we perform rituals to please Nagas so that instead of biting us they bless and guard us. It is from your post I came to know this festival is a reminder to protect snakes (all lives) from extinction.

    ಪ್ರತ್ಯುತ್ತರಅಳಿಸಿ
  2. I had no idea of the reason behind the celebration of the Nagara Panchami festival. I knew on that day people make sweet dish made of rice,jaggery and coconut with turmeric leaves. I actually thought we perform rituals to please Nagas so that instead of biting us they bless and guard us. It is from your post I came to know this festival is a reminder to protect snakes (all lives) from extinction.

    ಪ್ರತ್ಯುತ್ತರಅಳಿಸಿ