ಬುಧವಾರ, ಸೆಪ್ಟೆಂಬರ್ 13, 2017

ಸುಖ ತೋಟದ ಬೀಜ ಕಷ್ಟ ಫಲದೊಳುಂಟು

ಬೆಳ್ಳಂ ಬೆಳಗ್ಗೆ ಧೋ... ಎಂದು ಅಷ್ಟೆತ್ತರದಿಂದ ಒಂದೇ ಸಮನೆ ದುಮುಕುತ್ತಿದ್ದ ಆಕೆಗೆ ಸಾಕಾಗಿಹೋಯ್ತೆಂದು ತೋರುತ್ತದೆ. ಬಹುಷಃ ಒದ್ದೆ ಕೂದಲನ್ನು ಒಣಗಿಸಲೆಂದು ಒಂಚೂರು ಕೂತಳೇನೋ? ಅದರಿಂದ ತೊಟ್ಟಿಕ್ಕುತ್ತಿದ್ದ ಅಲ್ಲೊಂದು ಇಲ್ಲೊಂದು ಹನಿಗಳು ನನ್ನಂಗಳವನ್ನು ಸ್ಪರ್ಶಿಸುತ್ತಿತ್ತು. ಪೂಜೆಗೆ ಹೂ ಕೊಯ್ಯಲೆಂದು ಹೊರಕ್ಕಡಿಯಿಟ್ಟೆ. ಇಡೀ ಅಂಗಳದಲ್ಲಿ ಸುತ್ತಿ ಸಿಕ್ಕಿದ್ದು ಕೇವಲ ನಾಕೇ ನಾಕು ಹೂಗಳು! ಆ ಮಹಾತಾಯಿ ಗಿಡಗಳಿಗೆಲ್ಲ ಎಡೆಬಿಡದೆ ಅಮೃತಧಾರೆಯನ್ನೇ ಉಣಿಸಿ ಕೊಬ್ಬಿಸಿಬಿಟ್ಟಿದ್ದಳು. ಅವು ಇಷ್ಟಿಷ್ಟು ದಪ್ಪದ ಕಡು ಹಸಿರು ಎಲೆಗಳನ್ನು ಮೈಪೂರ್ತಿ ಹೊದ್ದುಕೊಂಡು ತಂಪಾದ ಗಾಳಿಗೆ ಹಾಯಾಗಿ ಓಲಾಡುತ್ತಿದ್ದುವು. ಅವುಗಳ ಕುಡಿಗಳಲ್ಲಿ ಮೊಗ್ಗಿನ ಸುಳಿವೇ ಇಲ್ಲ! ಬರೀ ಚಿಗುರೆಲೆಗಳ ಗುಪ್ಪೆ. ಬಿಸಿಲು ಶುರುವಾದ ತಕ್ಷಣ ಎಲ್ಲಾ ಗಿಡಗಳನ್ನು ಸವರಿಬಿಡಬೇಕು ಎಂದುಕೊಂಡೆ. ಆವಾಗ ಹೊಸ  ಚಿಗುರುಗಳು ತಮ್ಮೊಡನೆ  ಮೊಗ್ಗಿನ ಗೊಂಚಲನ್ನೇ  ಹೊತ್ತುಕೊಂಡು ಬಂದು ಬಿಡುತ್ತವೆ. 
ಇದೆಂತಹ ವಿಚಿತ್ರ ಅಲ್ಲವೇ? ಸುಖ ಸುರಿಯುತ್ತಿದ್ದರೆ ಯಾವ ಕ್ರಿಯೇಟಿವಿಟಿಯು ಇಲ್ಲ. ಶರೀರದಲ್ಲಿ ಬರೀ ಕೊಬ್ಬಿನ ಜಮೆಯಾದ್ದಷ್ಟೇ ಲಾಭ (ಕೊಬ್ಬು ಎಂಬುದನ್ನು ವೇಸ್ಟ್ ಎನ್ನುವ ಅರ್ಥದಲ್ಲಿ ತೆಗೆದುಕೊಳ್ಳಿ). ನಮ್ಮ ಬದುಕೂ ಹೀಗೇ ಅಲ್ಲವೇ ಎನಿಸಿತು. ಕಷ್ಟ ಸುಖ, ಬಿಸಿಲು ನೆರಳು  ಎನ್ನುವಾಗ ಬಿಸಿಲನ್ನು ಕಷ್ಟದ ಜೊತೆಗೆ ಸಮೀಕರಿಸುತ್ತೇವೆ ಅಲ್ಲವೇ? ಆದರೆ ನೆರಳಿನ ನಿಜವಾದ ಸುಖ ಅನುಭವಕ್ಕೆ ಬರಬೇಕಿದ್ದರೆ ಬಿಸಿಲಿನಲ್ಲಿ ಹೊಯ್ದಾಡಲೇಬೇಕು. 
'ಸುಖ ಪ್ರಸವ' ಎನ್ನುವ ಶಬ್ದವನ್ನು ಉಪಯೋಗಿಸುತ್ತೇವಲ್ಲದೆ 'ಪ್ರಸವ ಸುಖ' ಅಂತ ಹೇಳ್ತೇವಾ? ಹೆರಿಗೆಯ ಸಮಯದಲ್ಲಿ 'ಸಾಕಪ್ಪಾ... ಸಾಕು...' ಎಂದು ಕೊಳ್ಳುತ್ತೇವೆ. ನಾನೂ ಹಾಗಂದುಕೊಂಡೇ ಮೂರು ಬಾರಿ ಆ ನೋವಿಗೆ ನನ್ನನ್ನು ಒಡ್ಡಿಕೊಂಡೆ. ಯಾಕೆ? ಆ ನೋವಿನ ನಂತರ ಸಿಗುವ ಸುಖ, ಮೃದು ಮಲ್ಲಿಗೆಯ ರಾಶಿಯಂತಹ ಮುದ್ದು ಮಗುವಿನ ಆ ಅಪ್ಪುಗೆ, ಲಾಲನೆ, ಪಾಲನೆ....ಬದುಕಿನ ಸಾರ್ಥಕತೆ, ಇವೆಲ್ಲವೂ ಆ ನೋವಿನ ನಂತರ ಸಿಗುವಂತಹ ಸುಖ. ಆದುದರಿಂದಲೇ ಅದು ಸುಖ ಪ್ರಸವ ಎಂದು ನನ್ನ ಭಾವನೆ. ಬದುಕಿನಲ್ಲಿ ಕಷ್ಟಗಳನ್ನನುಭವಿಸಿದ ಮೇಲೆ ಪ್ರಾಪ್ತಿಯಾಗುವ ಸುಖ ಇದೆಯಲ್ಲಾ ಅದು ಯಾವಾಗಲೂ ಮೈತುಂಬ ಹೂವು ಹೊತ್ತ ಗಿಡ. ಬಿಸಿಲಿಗೆ ಮೈಯೊಡ್ಡಿ ಹದವಾಗಿ ನೀರು ಗೊಬ್ಬರಗಳನುಂಡಾಗಲೇ ಅದರ ರೆಂಬೆ ಕೊಂಬೆಗಳಲ್ಲಿ ಮೊಗ್ಗು, ಹೂ,ಹಣ್ಣುಗಳು ಮೈ ತಳೆದು ನಿಲ್ಲುತ್ತವೆ. ನೋಡುಗರ ಕಣ್ಮನಗಳೂ ತಂಪು. ದೇವರ ಪಾದ ಸ್ಪರ್ಶಿಸಿದ ಅವುಗಳ ಜೀವವೂ ಧನ್ಯ. 
'ದೇವಾ, ಕಷ್ಟ ಕೊಡಬೇಡ ಎನ್ನಲಾರೆ, ಕಷ್ಟ ಸಹಿಸುವ ಶಕ್ತಿಯನ್ನು ಕೊಟ್ಟು ಮುನ್ನಡೆಸಪ್ಪಾ...' ಎನ್ನುವ ಪ್ರಾರ್ಥನೆಯಲ್ಲಿ ಎಷ್ಟು ಅರ್ಥ ಉಂಟಲ್ಲವೇ?  ಕೊಬ್ಬಿದ ದಾಸವಾಳದ ಗಿಡವನ್ನು ಕತ್ತರಿಸಲೇಬೇಕು. ಹೊಸ ಸೃಷ್ಟಿಗೆ ಹಳೆ ಜೀವ ನೋವ ತಿನ್ನಲೇಬೇಕು. 
ಪ್ರಕೃತಿಯನ್ನೇ ಸೂಕ್ಷ್ಮವಾಗಿ ಗಮನಿಸುತ್ತಿದ್ದರೂ ಸಾಕು, ನಮ್ಮ ಜೀವನದ ಪಾಠಕ್ಕೆ. ಕಾಂಕ್ರೀಟು ಕಾಡೊಳಗೆ ಕಳೆದುಹೋದ ನಮ್ಮ ಮಕ್ಕಳು ಜೀವನ ಪಾಠ ಕಲಿಯುವುದೆಲ್ಲಿಂದ? ತಲೆ ಕೊಡವಿ ಸದ್ಯದ ಪೂಜೆಯ ತಯಾರಿಗಾಗಿ ಒಳಗಡಿಯಿಟ್ಟೆ.        
    

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ